ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಹೊಸ ಶಿಕ್ಷಣ ನೀತಿಯಲ್ಲಿ ವಚನ ಸಾಹಿತ್ಯದ ಪ್ರಸ್ತುತತೆ

ಹೊಸ ಶಿಕ್ಷಣ ನೀತಿಯಲ್ಲಿ ವಚನ ಸಾಹಿತ್ಯದ ಪ್ರಸ್ತುತತೆ

ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರ. ಶಿಕ್ಷಣ ಎಂದಿಗೂ ಎಡವಲು ಬಿಡುವದಿಲ್ಲ, ಸಂಸ್ಕಾರ ಕೆಡಲು ಬಿಡುವದಿಲ್ಲ ಈ ಎರಡೂ ಕಾರ್ಯಗಳನ್ನು 12 ನೇ ಶತಮಾನದ ಶರಣರು ನಡೆ ನುಡಿಯಲ್ಲಿ ಪಾಲಿಸಿರುವುದನ್ನು ನಮ್ಮ ವಚನ ಸಾಹಿತ್ಯ ಪುಷ್ಟೀಕರಿಸುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಶಿಕ್ಷಣ ನೀತಿಯ ಆಶಯಗಳ ಒಳನೋಟಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ವಚನ ಸಾಹಿತ್ಯದಲ್ಲಿಯ ಬೇರುಗಳು ಎನ್ನುವದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಶಿಕ್ಷಣ ನೀತಿಯಲ್ಲಿ ವಚನ ಸಾಹಿತ್ಯದ ಪ್ರಸ್ತುತತೆಯ ಬಗ್ಗೆ ಚರ್ಚಿಸಲು ಬಯಸುತ್ತೇನೆ.

ಶಿಕ್ಷಣ ನೀತಿಗಳ ಐತಿಹಾಸಿಕ ಒಳನೋಟಗಳು

ಶಿಕ್ಷಣ ನಡೆದು ಬಂದ ಐತಿಹಾಸಿಕ ಒಳನೋಟಗಳನ್ನು, ಶಿಕ್ಷಣ ಆಯೋಗಗಳು, ಯೋಜನೆಗಳು, ಶಿಕ್ಷಣ ನೀತಿಗಳು ಇತ್ಯಾದಿಗಳನ್ನು ಅವಲೋಕಿಸಿದಾಗ ಈ ಕೆಳಕಂಡ ಅಂಶಗಳು ಐತಿಹಾಸಿಕ ಪುಟದಿಂದ ಕಾಣಸಿಗುವವು.

•          ಗುರುಕುಲ ಪದ್ಧತಿ, ಬೌದ್ಧಕಾಲದ ಶಿಕ್ಷಣ, ಇಸ್ಲಾಂ ಕಾಲದ ಶಿಕ್ಷಣ – ಮದರಸ, ಮುಕ್ತಾಬಗಳ ಮೂಲಕ, ಗಾಂಧೀಜಿಯವರ ಮೂಲ ಶಿಕ್ಷಣ (ನಯಾ ತಾಲೀಮ) ಬ್ರಿಟಿಷ ಕಾಲದ ಶಿಕ್ಷಣ ಪದ್ಧತಿ ಇತ್ಯಾದಿ

•          ಆಯೋಗಗಳು – ಸ್ವತಂತ್ರ್ಯ ಪೂರ್ವದಲ್ಲಿಯ ಬ್ರಿಟಿಷರ ಕಾಲದ ಆಯೋಗಗಳು ಉದಾ: ಮೆಕಾಲೆ ವರದಿ, ವುಡ್ಸ ವರದಿ,ಹಂಟರ್‌ ಹಾಗೂ ಸ್ಯಾಡ್ಲರ್‌ ಆಯೋಗ ಇತ್ಯಾದಿ

•          ಸ್ವತಂತ್ರ್ಯಾ ನಂತರದ ಆಯೋಗಗಳು – ಉದಾ ರಾಧಾಕೃಷ್ಣನ್‌ ಮೊದಲಿಯಾರ್‌, ಕೊಠಾರಿ ಆಯೋಗಗಳು ಇತ್ಯಾದಿ

•          ಜಾಗತಿಕ ಮಟ್ಟದ 1990 Education For All, Millennium Development Goals 2000, The Sustainable Development Goals (SDGs) 2015 to 2030

ಈ ಮೇಲಿನ ಎಲ್ಲ ಶಿಕ್ಷಣದ ಐತಿಹಾಸಿಕ ನೋಟ ಹಾಗೂ 1986 ರ ಶಿಕ್ಷಣ ನೀತಿ, ಹೊಸ ಶಿಕ್ಷಣ ನೀತಿ 2020 ರವರೆಗೆ ಸಾಗಿ ಬಂದ ನಡೆಯನ್ನು ಗಮನಿಸಿದಾಗ ಎಲ್ಲ ಶಿಕ್ಷಣ ಆಯೋಗಗಳು, ವರದಿಗಳು ಹಾಗೂ ಯೋಜನೆಗಳು ಬದುಕು ಕಟ್ಟಿಕೊಳ್ಳುವ, ವೈಜ್ಞಾನಿಕ ಮನೋಭಾವ ಗಟ್ಟಿಗೊಳಿಸುವ, ಉತ್ತಮ ನಡತೆ ಚಾರಿತ್ರ್ಯವನ್ನು ಅಳವಡಿಸಿಕೊಳ್ಳುವ, ಸಹೋದರತ್ವ, ಬಹುತ್ವ ಹಾಗೂ ಸಮಾನತೆಯನ್ನು ಪ್ರತಿಪಾದಿಸು ಶಿಕ್ಷಣದ ನೀತೀಗಳೇ ಆಗಿವೆ. ಈ ಎಲ್ಲವನ್ನು ನಮ್ಮ ವಚನ ಸಾಹಿತ್ಯ ಸಮಗ್ರವಾಗಿ ಹೊಂದಿರುವದನ್ನು ಅದರ ಅಳವಡಿಕೆಯಿಂದ ಈ ಎಲ್ಲ ಆಶಯಗಳನ್ನು ಪೂರೈಸಲು ಸಾಧ್ಯ ಎಂಬುದನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಬಯಸುವೆ

ಹೊಸ ಶಿಕ್ಷಣ ನೀತಿಯಲ್ಲಿ  ವಚನ ಸಾಹಿತ್ಯದ ಪ್ರಸ್ತುತತೆ

ಶಿಕ್ಷಣವು ಮಾನವನ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿಕಸಿಸುವ, ಸಮಾನ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಿಸುವ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಭೂತ ಅಂಶವಾಗಿದೆ. ಗುಣಮಟ್ಟ ಶಿಕ್ಷಣದ ಸಾರ್ವತ್ರಿಕ ಲಭ್ಯತೆಯು ಆರ್ಥಿಕ ವಲಯದಲ್ಲಿ ಜಾಗತಿಕ ವೇದಿಕೆಯಲ್ಲಿ ಭಾರತ ಚಿರಂತನ ಪ್ರಗತಿ ಮತ್ತು ನಾಯಕತ್ವಕ್ಕೆ, ಸಮಾಜಿಕ ನ್ಯಾಯ ಮತ್ತು ಸಮಾನತೆಯ, ವೈಜ್ಞಾನಿಕ ಪ್ರಗತಿ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಳ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಆಧಾರವಾಗಿದೆ. ವ್ಯಕ್ತಿ, ಸಮಾಜ, ದೇಶ ಮತ್ತು ಪ್ರಪಂಚದ ಒಳಿತಿಗಾಗಿ ನಮ್ಮ ದೇಶದ ಶ್ರೀಮಂತ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಗರಿಷ್ಠಗೊಳಿಸಲು ಸಾರ್ವತ್ರಿಕ ಉತ್ತಮ ಗುಣಮಟ್ಟದ ಶಿಕ್ಷಣವು ಉತ್ತಮ ಮಾರ್ಗವಾಗಿದೆ. ಮುಂದಿನ ದಶಕದಲ್ಲಿ ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚು ಯುವಜನರನ್ನು ಹೊಂದಿರುತ್ತದೆ. ಇವರಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವೇ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ.

ಈ ಹಿನ್ನೆಲೆಯಲ್ಲಿ ಭಾರತವು 2015 ಅಂಗೀಕರಿಸಿದ 2030 ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿ ಗುರಿ 4 (SDG – Sustainable Development Goals 4) ರಲ್ಲಿ ಪ್ರತಿಬಿಂಬಿತವಾದ ಜಾಗತಿಕ ಶಿಕ್ಷಣ ಅಭಿವೃದ್ಧಿ ಕಾರ್ಯಸೂಚಿಯು, 2030 ರ ವೇಳೆಗೆ “ ಎಲ್ಲರಿಗೂ ಸಮನ್ವಯಿತ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಅಜೀವ ಕಲಿಕೆ ಅವಕಾಶಗಳನ್ನು ಉತ್ತೇಜಿಸಲು” ಪ್ರಯತ್ನಿಸುತ್ತದೆ. ಅಂತಹ ಉನ್ನತ ಗುರಿಯನ್ನು ಸಾಧಿಸಲು, ಕಲಿಕೆಯ ಬೆಂಬಲಿಸುವ ರೀತಿಯಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಪುನರ್‌ ರಚಿಸುವ ಅಗತ್ಯವಿದೆ. ಹಾಗಾದಾಗ ಮಾತ್ರ ಸುಸ್ಥಿರ ಅಭಿವೃದ್ಧಿಗಾಇ 2030 ಕಾರ್ಯಸೂಚಿಯ ಎಲ್ಲಾ ಮಹತ್ವದ ಉದ್ದೇಶ ಮತ್ತು ಗುರಿಗಳನ್ನು ಸಾಧಿಸಬಹುದಾಗಿದೆ.

ಪ್ರಸ್ತುತ ಹೊಸ ಶಿಕ್ಷಣ ನೀತಿಯ ತತ್ವಗಳು ಹಾಗೂ ವಚನ ಸಾಹಿತ್ಯದ ಪ್ರಸ್ತುತತೆ

ತಾರ್ಕಿಕ ಚಿಂತನೆ ಮತ್ತು ನಿರ್ವಹಣೆಯಲ್ಲಿಯ ಸಮರ್ಥರಾಗಿರುವ, ನೈತಿಕ ಮೌಲ್ಯಗಳು, ಸಹಾನುಭೂತಿ ಮತ್ತು ಅನುಭೂತಿ, ದೈರ್ಯ, ಸೃಜನಶೀಲತೆ, ವೈಜ್ಞಾನಿಕ ಮನೋಭಾವವನ್ನು ಹೊಂದಿರುವ ಉತ್ತಮ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯ ಉದ್ದೇಶವಾಗಿದೆ.

ಈ ಮೇಲೆ ತಿಳಿಸಿದ ಪ್ರಮುಖ ಉದ್ದೇಶವಾದ ನೈತಿಕತೆ ಎಂಬುದು ಮಾನವನ ನಡವಳಿಕೆ, ಒಳ್ಳೆಯದು ಕೆಟ್ಟದ್ದು, ನ್ಯಾಯ, ಅನ್ಯಾಯ, ಸರಿ, ತಪ್ಪು ಕಲ್ಪನೆಗಳ ಅಧ್ಯಯನ ಮಾಡುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ತತ್ವಶಾಸ್ತ್ರದ ಒದು ವಿಭಾಗವಾಗಿದೆ. ಇಂತಹ ನೈತಿಕ ಮೌಲ್ಯಗಳ ಆಗರವೇ ವಚನ ಸಾಹಿತ್ಯ ಆಗಿದೆ

ಉದಾಹರಣೆಯಾಗಿ

       1. ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ

          ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ

          ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ

          ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ

         ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

  – ಕಳ್ಳತನ ಮಾಡಬೇಡ,ಕೊಲ್ಲಬೇಡ,ಸುಳ್ಳು ಹೇಳಬೇಡ, ಸಿಟ್ಟುಮಾಡಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ – ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು, ಇದೇ ಮಾರ್ಗ ದೇವರನೊಲಿಸುಕೊಳ್ಳುವದು. ಆತ್ಮೋದ್ಧಾರಕ್ಕೆ ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂಬಂತೆ ಬಸವಣ್ಣ ತಿಳಿಸಿದ್ದಾರೆ.

2.  ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು

      ಕೋಳಿ ಒಂದಗುಳ ಕಂಡಡೆ ಕೂಗಿ ಕರೆಯದೆ

      ತನ್ನ ಕುಲವನೆಲ್ಲವ,

      ಶಿವಭಕ್ತನಾಗಿ ಭಕ್ತಿಪಕ್ಷ ವಿಲ್ಲದಿದ್ದಡೆ

      ಕಾಗೆ ಕೋಳಿಗಿಂತ ಕರ ಕಷ್ಟ ಕೂಡಲಸಂಗಮದೇವಾ | – ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ಮನುಷ್ಯನ ಸ್ವಾರ್ಥ ಬುದ್ಧಿಯ ಬಗ್ಗೆ ಹೇಳುತ್ತಾ ಕಾಗೆ ಮತ್ತು ಕೋಳಿಯ ನಿದರ್ಶನವನ್ನು ಕೊಟ್ಟು ಅವುಗಳಿಗೆ ಹೋಲಿಸಿ ತೀಕ್ಷ್ಣವಾಗಿ ಭೋದಿಸುತ್ತಾರೆ. ಕಾಗೆ ಒಂದಗುಳ ಕಂಡಾಗ ಇಡಿ ತನ್ನ ಬಳಗವನ್ನು ಕರೆದು ಇದ್ದದ್ದರಲ್ಲೇ ಸಾಧ್ಯವಾದಷ್ಟು ಹಂಚಿ ತಿನ್ನುತ್ತದೆ,ಅದೇ ರೀತಿ ಕೋಳಿ ಕೂಡ ತನ್ನ ಸಂಸಾರವನೆಲ್ಲ ಕರೆದುಕೊಂಡು ಬಂದು ತಿನ್ನುತ್ತದೆ.ಆದರೆ ಶಿವ ಭಕ್ತನಾದ ಮನುಷ್ಯ ತನ್ನ ಕುಲ ಭಾಂದವರ ಜೊತೆ ಹಂಚಿ ತಿನ್ನಲಿಲ್ಲ ಅಂದರೆ ಕಾಗೆ ಕೋಳಿಗಳೇ ಮನುಷ್ಯನಿಗಿಂತ ಲೇಸು ಎಂದು ಹೇಳುತ್ತಾರೆ. ಮಾನವ ಧರ್ಮದಲ್ಲಿ ಸ್ವಾರ್ಥ ಎಂಬ ದುರ್ಗುಣ ಅಂಟಿಕೊಂಡರೆ ಪ್ರಾಣಿಗಳಿಗಿಂತ ಅವನ ಜೀವನ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ. ಇಲ್ಲಿ ಭಕ್ತಿ ಪಕ್ಷ ಅಂದರೆ ಕೇವಲ ಅನ್ನವನ್ನು ಹಂಚಿ ತಿನ್ನುವುದಲ್ಲ,ಅಲ್ಲದೆ ತನ್ನ ಜ್ಞಾನವನ್ನು ಇನ್ನಿತರರ ಜೊತೆ ವಿಚಾರ ವಿನಿಮಯ ಮಾಡುವುದಾಗಿರಬಹುದು.

೧೨ನೆ ಶತಮಾನದಲ್ಲಿ ಅನುಭವ ಮಂಟಪ ಅನ್ನುವ ಸಭೆ ಇದ್ದದ್ದೇ ಈ ರೀತಿ ತಮ್ಮ ಜ್ಞಾನ(ಸಾಮಾಜಿಕ,ಆರ್ಥಿಕ,ಆಧ್ಯಾತ್ಮಿಕ ಎಲ್ಲವೂ)ವನ್ನು ಹಂಚಿಕೊಳ್ಳುವುದಕ್ಕೆ.

•          ಏನು ಬಂದಿರಿ ಹದುಳವಿದ್ದಿರೆ ಎಂದಡೆ

ನಿಮ್ಮೈಸಿರಿ ಹಾರಿ  ಹೊಹುದೇ?

ಕುಳ್ಳಿರೆಂದಡೆ ನೆಲಕುಳಿ ಹೊಹುದೇ?

ಒಡನೆ ನುಡಿದಡೆ ಸಿರ,ಹೊಟ್ಟೆಯೊಡೆವುದೇ?

ಕೊಡಲಿಲ್ಲದಿದ್ದಡೊಂದು, ಗುಣವಿಲ್ಲದಿದ್ದಡೆ

ಮೂಗ ಕೊಯ್ವುದ ಮಾಬನೆ

ಕೂಡಲಸಂಗಮದೇವಯ್ಯಾ -ಬಸವಣ್ಣ

ಏನಿ ಬಂದಿರಿಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ, ಏನ್ರಿ ಬಂದಿರಿ, ಆರಾಮ ಇದ್ದೀರಾ

 ಮತ್ತೇನು ಸಮಾಚಾರ ಮನೆ ಕಡೆ ಎಲ್ಲರೂ ಹೇಗಿದ್ದಾರೆ,  ಎಂದು ಕೇಳಿ ವಿಚಾರಿಸಿದರೇನು ನಿಮ್ಮ ಮನೆಯ ಐಶ್ವರ್ಯ ಸಂಪತ್ತು ಹಾರಿ ಹೋಗುವುದೇ?ಕುಳ್ಳಿರೆಂದಡೆ ನೆಲ ಕುಳಿಹೋಹುದೆ,ಬಂದವರಿಗೆ ಕಳಿತುಕೊಳ್ಳಿ ಎಂದು ಉಪಚರಿಸಿದರೇನು ನೆಲ ತೆಗ್ಗು ಗುಂಡಿ ಬೀಳುವುದೆ? ಒಡನೆ ನುಡಿದಡೆ ಸಿರಹೊಟ್ಟೆಯೊಡೆವುದೆ, ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ .ಶರಣು ಬನ್ನಿ, ಕುಳಿತುಕೊಳ್ಳಿ, ಹೇಗಿತ್ತು ಪ್ರಯಾಣ ಮನೆಯಲ್ಲಿ ಎಲ್ಲರೂ ಸೌಕ್ಯವೇ ಎಂದು ವಿಚಾರಿಸಿದರೇನು ನಿಮ್ಮ ತಲೆ ಒಡೆದು ಹೋಗುತ್ತದೆಯೇ.? ಅಥವಾ ನಿಮ್ಮ ಹೊಟ್ಟೆ ಸೀಳಿ ಕರುಳು ಕಿತ್ತು ಬರುತ್ತದೆಯೇ.?  ಬಂದ ಅತಿಥಿಗಳನ್ನು ಕೂಡಿಸದೇ, ಸರಿಯಾಗಿ ಮಾತಾಡಿಸದೇ, ನಿಮ್ಮ ಒಣ ಪ್ರತಿಷ್ಠೆಯನ್ನು ತೋರಿಸಿದರೆ ಏನು ಫಲ, ಅದು ವ್ಯರ್ಥ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಬಂದ ಅತಿಥಿಗಳಿಗೆ ಏನನ್ನು ಕೊಡಲಾಗದಿದ್ದರೂ ಸರಿ, ಕನಿಷ್ಠ ಗೌರವವನ್ನೂ ಕೊಡದಿದ್ದರೆ, ಮೂಗ ಕ್ವೊಯ್ವುದ ಮಾಬನೆ ಕೂಡಲಸಂಗಮದೇವಯ್ಯ, ಸಮಾಜಕ್ಕೆ ನಿನ್ನ ನಿಜ ಮುಖವನ್ನು ತೋರಿಸಿ ಅವಮಾನಿಸದೇ ಬಿಡಲಾರನು ಭಗವಂತ ಎಂದು ಎಚ್ಚರಿಸುತ್ತಾರೆ ವಿಶ್ವಗುರು_ಬಸವಣ್ಣನವರು,.

ನಮ್ಮ ಸಂವಿಧಾನದಲ್ಲಿ ಅಡಕವಾಗಿರುವಂತೆ ಸರ್ವಸಮಾವೇಶಕ, ಸಮಾನತೆಯುಳ್ಳ ಬಹುತ್ವದಿಂದೊಡಗೂಡಿದ ಸಮಾಜವನ್ನು ನಿರ್ಮಿಸಲು ಬದ್ಧರಾಗಿರುವ, ವಿಸ್ತಾರವಾದ ಬಹುಮುಖ್ಯ ಮತ್ತು ತಮ್ಮದೇ ಆದ ಕೊಡುಗೆ ನೀಡುವ ನಾಗರಿಕರನ್ನು ರೂಪಿಸುವ ಗುರಿಯನ್ನು ಹೊಂದಿದೆ.

 ಈ ಆಶಯವನ್ನು ಶರಣರು 12 ನೇಯ ಶತಮಾನದಲ್ಲಿಯೇ ಮಾಡಿ ತೋರಿಸಿದ್ದನ್ನು ನಮ್ಮ ವಚನಗಳು ಪುಷ್ಠೀಕರಿಸುತ್ತವೆ. ಅನೇಕ ವಚನಗಳು ಜಾತಿ ಮತ್ತು ಲಿಂಗಬೇಧವನ್ನು ಖಂಡಿಸಿದ್ದನ್ನು ಕಾಣಬಹುದು ಹಾಗೂ ಎಲ್ಲರೂ ಮಾನವೀಯತೆಯಿಂದ ಬದುಕುವ ನಡೆನುಡಿಯನ್ನು ಕಾಣಬಹುದು

ಅಮರ್ತ್ಯ ಸೇನ್‌ ಅವರ ಪರಿಕಲ್ಪನೆಯಾದ ಅಂಚಿನಲ್ಲಿರುವವರನ್ನು ಮೇಲೆತ್ತುವ ಕಾರ್ಯವನ್ನು ನಮ್ಮ ಶರಣರು    12 ನೇಯ ಶತಮಾನದಲ್ಲಿಯೇ ಮಾಡುವ ಮೂಲಕ ಒಳಗೊಳ್ಳುವಿಕೆ ಶಿಕ್ಷಣವನ್ನು ಜಾರಿಯಲ್ಲಿ ತಂದಿರುವುದನ್ನು ಹಾಗೂ ಸಮಾಜದಲ್ಲಿ ಪರಿವರ್ತನೆಯ ಯುಗಕ್ಕೆ ಹರಿಕಾರರಾಗಿರುವದನ್ನು ಇತಿಹಾಸದ ಪುಟದಲ್ಲಿ ಹಾಗೂ ವಚನ ಸಾಹಿತ್ಯದಲ್ಲಿ ಕಾಣುತ್ತೇವೆ.

ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ

ಜಲವೊಂದೆ ಶೌಚಾಚಮನಕ್ಕೆ

ಕುಲವೊಂದೆ ತನ್ನ ತಾನರಿದವಂಗೆ

ಫಲವೊಂದೆ ಷಡುದರುಶನ ಮುಕ್ತಿಗೆ

ನಿಲುವೊಂದೆ ಕೂಡಲ ಸಂಗಮದೇವಾ ನಿಮ್ಮನರಿದವಂಗೆ. -ಬಸವಣ್ಣ ಸವಸ-1/879[1]

ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.

ಜಲ-ಬಿಂದುವಿನ ವ್ಯವಹಾರವೊಂದೆ

ಆಶೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ,

ಏನನೋದಿ, ಏನಕೇಳಿ, ಏನುಫಲ ?

ಕುಲಜನೆಂಬುದಕ್ಕಾವುದು ದೃಷ್ಟ ?

ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುಧ್ಬವಂ

ಆತ್ಮ ಜೀವ ಸಮಾಯಕ್ತಂ ವರ್ಣಾನಾಂ ಕಿಂ ಪ್ರಯೋಜನಂ ?

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ

ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ

ಕರ್ಣದಲ್ಲಿ ಜನಿಸಿದವರುಂಟೆ ಜಗದೋಳಗೆ ?

ಇದು ಕಾರಣ ಕೂಡಲ ಸಂಗಮದೇವಾ ಲಿಂಗಸ್ಥಲವನರಿದವನೆ ಕುಲಜನು ! –ಬಸವಣ್ಣ ಸವಸ-1/590

ಹೊಲೆ(ಮೈಲಿಗೆ) ನಿಲ್ಲದೆ ಪಿಂಡ ನಿಲ್ಲುವುದಿಲ್ಲ, ಹಾಗೆ ಮಾನವ ಜನ್ಮ ತಾಳದು. ಅದೇ ರೀತಿ ಈ ಭೂಮಿಯಲ್ಲಿ ಹುಟ್ಟಿದ ಸಕಲರು (ಬ್ರಾಹ್ಮಣ, ಶೂದ್ರವೆಂಬ ಭೇದವಿಲ್ಲದೆ) ಎಲ್ಲ ಜೀವಿಗಳಿಗೂ ನೀರಿನ ಪಾತ್ರ ಒಂದೆ ತೆರನಾದದ್ದು. ಹಾಗೆ ಅಷ್ಟಮದಗಳೂ ಎಲ್ಲರಲ್ಲೂ ಒಂದೆ, ಸಪ್ತಧಾತು ಕೂಡಿ ಯೋನಿ ಮುಖದಿಂದಲೆ ಬರುವ ಸಕಲ ಜೀವಿಗಳು ಬರುವ ಕಾರಣ ಇವನೆ ಶ್ರೇಷ್ಠ ಜಾತಿನೆಂಬುವ ಪ್ರಶ್ನೆಯೆಲ್ಲಿಯದು? ಕಮ್ಮಾರ,ಕುಂಬಾರ, ಸಾಲಿಗ, ಹಡಪದ ಇವರೆಲ್ಲ ಕಾಯಕದಿಂದ ಶ್ರೇಷ್ಠ ರೆ ಹೊರತು, ವೇದ,ಆಗಮ,ಶಾಸ್ತ್ರ ಗಳ ಓದಿ ಅಹಂನಿಂದ ಮೆರೆದ ವಿಪ್ರನೇನು(ಬ್ರಾಹ್ಮಣ) ಕಿವಿ(ಕರ್ಣ)ಯಲ್ಲಿ ಹುಟ್ಟಿಬಂದಿಹನೆ??? ಎಂದು ಮಾರ್ಮಿಕವಾಗಿ ನುಡಿದಿರುವ ಅಣ್ಣ ನವರು, ಹೇ ಕೂಡಲಸಂಗಮ ದೇವ ಅನನ್ಯ ಭಕ್ತಿ, ಶಿವಯೋಗದ ಮೂಲಕ ಲಿಂಗಸ್ಥಲವನರಿದ ಎಂತಹ ಅಂತ್ಯಜ (ಮಾದಾರ ಚನ್ನಯ್ಯ)ನೆ ಶ್ರೇಷ್ಠ ಶರಣನು ಎಂದಿದ್ದಾರೆ.-

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,

ಬೊಪ್ಪನು ನಮ್ಮ ಡೊಹರ ಕಕ್ಕಯ್ಯ,

ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,

ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,

ಎನ್ನನೇತಕ್ಕರಿಯಿರಿ,ಕೂಡಲಸಂಗಯ್ಯ? – ಬಸವಣ್ಣ ಸವಸ-1/349[1]

ಅಪ್ಪ, ಅಣ್ಣ ಚಿಕ್ಕಯ್ಯ ಎನ್ನುವ ಭಾತೃತ್ವ ಭಾವ ಈ ವಚನದಲ್ಲಿದೆ.

ಅಲ್ಲದೇ ಸರ್ವಸಮಾವೇಶಕ, ಸಮಾನತೆಯುಳ್ಳ ಸಮಸಮಾಜದ ಆಶಯದ ಅನೇಕ ವಚನಗಳನ್ನು ಇಲ್ಲಿ ಉದಾಹರಣೆ ನೀಡಬಹುದು

ಉದಾಹರಣೆಗಾಗಿ,

ಸೆಟ್ಟಿಯೆಂಬೆನೆ ಸಿರಿಯಾಳನ?

ಮಡಿವಾಳನೆಂಬೆನೆ ಮಾಚಯ್ಯನ?

ಡೋಹರನೆಂಬೆನೆ ಕಕ್ಕಯ್ಯನ?

ಮಾದಾರನೆಂಬೆನೆ ಚೆನ್ನಯ್ಯನ?

ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ. – ಬಸವಣ್ಣ

ಆವ ಕುಲವಾದಡೇನು? ಶಿವಲಿಂಗವಿದ್ದವನೆ ಕುಲಜನು,

ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ?

ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಜಿತಃ !

ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಮೇವಚ !! ಎಂದುದಾಗಿ,

ಒಕ್ಕುದಕೊಂಬೆನವರಲ್ಲಿ. ಕೂಸ ಕೊಡುವೆ,

ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು – ಬಸವಣ್ಣ

ಜಾತಿವಿಡಿದು ಸೂತಕವನರಸುವೆ

ಜ್ಯೋತಿವಿಡಿದು ಕತ್ತಲೆಯನರಸುವೆ!

ಇದೇಕೊ ಮರುಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ!

ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?

ಭಕ್ತನೆ ಶಿಖಾಮಣಿಎಂದುದು ವಚನ,

ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,

ಕೆಡಬೇಡ ಮಾನವಾ. – ಬಸವಣ್ಣ

ಈ ಮೇಲಿನ ಎಲ್ಲ ವಚನಗಳು ಜಾತಿ ಕುಲ ಹಾಗೂ ಲಿಂಗಬೇಧವನ್ನು ದಿಕ್ಕರಿಸಿ ಸಮಾನತೆಯನ್ನು ಎತ್ತಿಹಿಡಿದ ವಚನಗಳಾಗಿವೆ. ಅಲ್ಲದೇ

•          ಹೊಲೆಯೊಳಗೆ ಹುಟ್ಟಿ ಕುಲವನರಸುವೆ

ಎಲವೋ ಮಾತಂಗಿಯ ಮಗ ನೀನು.

ಸತ್ತುದನೆಳೆವ ಎತ್ತಣ ಹೊಲೆಯ?

ಹೊತ್ತು ತಂದು ನೀವು ಕೊಲುವಿರಿ!

ಶಾಸ್ತ್ರವೆಂಬುದು ಹೋತಿಂಗೆ ಮಾರಿ;

ವೇದವೆಂಬುದು ನಿಮಗೆ ತಿಳಿಯದು;

ನಮ್ಮ ಕೂಡಲಸಂಗನ ಶರಣರು

ಕರ್ಮ ವಿರಹಿತರು ಶರಣ ಸನ್ನಿಹಿತರು ಅನುಮಪ ಚರಿತ್ರರು

ಅವರಿಗೆ ತೋರಲು ಪ್ರತಿ ಇಲ್ಲವೊ! ಬಸವಣ್ಣನವರು

ಬಸವಣ್ಣನವರು ಈ ವಚನದ ಮೂಲಕ ಶರಣರು ವಿರಹಿತರು,ಸನ್ನಿಹಿತರು ಹಾಗೂ ಅನುಪಮ ಚರಿತ್ರರು ಎಂದು ಹೇಳುವ ಮೂಲಕ ಸಮಾನತೆಯ ಹರಿಕಾರರಾಗಿದ್ದಾರೆ.

ಜಾತಿಯಲ್ಲಿನ ಶ್ರೇಷ್ಠ-ಕನಿಷ್ಠವೆಂಬ ತಾರತಮ್ಯವನ್ನು ಮಾದಾರ ಚೆನ್ನಯ್ಯನು ಅತ್ಯಂತ ಸರಳ ರೀತಿಯಲ್ಲಿ ಮಂಡಿಸುತ್ತಾರೆ. ಅವರ ವಚನವು ತುಂಬಾ ಸರಳವಾದುದಾಗಿದೆ. ಅವನ ಪ್ರಕಾರ ‘ಆಚಾರವೇ ಕುಲ : ಅನಾಚಾರವೇ ಹೊಲೆ.’ ಕೇವಲ ಮಾನವ ಜೀವಿಯಷ್ಟೇ ಅಲ್ಲ ಸಕಲ ಪ್ರಾಣಿಗಳಲ್ಲಿ ದಯೆ ಇರುವ ಮೌಲ್ಯವನ್ನು ನಮ್ಮ ವಚನಗಳು ಸಾರಿ ಹೇಳಿವೆ.  ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ

ಒಟ್ಟಿನಲ್ಲಿ ಹೊರಪ್ರಪಂಚವನ್ನು ಸರಿಯಾಗಿ ಗ್ರಹಿಸದೇ ಒಳಪ್ರಪಂಚದ ಹುನ್ನಾರಗಳು ಅರಿಯದೇ ಮನುಷ್ಯ ಕಷ್ಟಗಳ ಸರಮಾಲೆಯನ್ನೇ ಅನುಭವಿಸುತ್ತಿದ್ದಾನೆ. ಕಾಲಾನುಕ್ರಮದಲ್ಲಿ ಈ ದೋಷಪೂರ್ಣಗ್ರಹಿಕೆಯ ಮಾದರಿಗಳು ಸಮುದಾಯದ ಒಪ್ಪಿತ ನಂಬಿಕೆಗಳಾಗಿ ಗಟ್ಟಿಗೊಂಡು ಇಡೀ ಸಮಾಜದ ಮೌಢ್ಯಕ್ಕೆ ಕಾರಣವಾಗುತ್ತದೆ. ಈ ಅಜ್ಞಾನವನ್ನು ಮನುಕುಲದ ಸ್ವಯಂಕೃತ ಅಪರಾಧವೆಂದು ಹೇಳಲಾಗದಿದ್ದರೂ ಅನಿವಾರ್ಯವಲ್ಲ ಎಂದು ಖಂಡಿತ ಹೇಳಬಹುದು ಶರಣರ ಜೀವನದ ಸಂದೇಶವೇ ಈ ಲೋಪವನ್ನು ಸರಿದೂಗಿಸಿ ಒಂದು ಸಮತೋಲನವನ್ನು ಸಾಧಿಸುವುದು ಎಂದು ಹೇಳಬಹುದು. ಶರಣರು ಹೊರ ಜಗತ್ತಿನ ವಾಸ್ತವವನ್ನು ಅಂಗೀಕರಿಸಿದರು. ಒಳಗಿನ ಅಂಧಕಾರವನ್ನು ಹೋಗಲಾಡಿಸಬಲ್ಲ ಜ್ಞಾನ ಜ್ಯೋತಿಯನ್ನು ವಚನಗಳ ರೂಪದಲ್ಲಿ ನೀಡಿದರು ನಮ್ಮ ಇಂದಿನ ಶಿಕ್ಷಣದ ಗುರಿಯೂ ಇದೇ ಆಗಿದೆ. 12 ನೇಯ ಶತಮಾನದ ವಚನಕಾರರು ಏಕಮುಖ ಚಿಂತನಾ ಪರಂಪರೆಗೆ ಭಿನ್ನವಾಗಿ ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲವರು ಇಹದ ಬದುಕನ್ನು ಹಸನ ಮಾಡುವ ಹೊಸ ಸಮೀಕರಣಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದರು ಹಾಗಾಗಿ ವಚನಗಳ ಮೂಲಕ ನಡೆದದ್ದು ಚಳುವಳಿ ಎಂದೆನಿಸಿಕೊಳ್ಳದೇ ಅದೊಂದು ದಿಟ್ಟ ಪ್ರಯೋಗವೂ ಆಗಿತ್ತು.

ಶಿವಶರಣರು ದಿನನಿತ್ಯದ ಬದುಕಿನ ದುಖಃವನ್ನು ಸತ್ಯ ಎಂದು ಗುರುತಿಸಿದರು ಮಾಯೆ ಎಂದು ತಿರಸ್ಕರಿಸಲಿಲ್ಲ. ಹಸಿದ ಹೊಟ್ಟೆಗೆ ಅನ್ನ ಅಥವಾ ಮೈಮುಚ್ಚಲು ಬೇಕಾದ ಬಟ್ಟೆಯ ವಿಚಾರ ಕ್ಷುಲಕವಾದದ್ದು, ವೇದಾಂತ ವಿಚಾರವೇ ಶ್ರೇಷ್ಠವಾದದ್ದು ಎಂಬ ನಿಲುವಿಗೆ ಭಿನ್ನವಾಗಿ ಹಸಿದ ಹೊಟ್ಟೆಗೆ ಅನ್ನ ಹಾಕುವದನ್ನೂ ಲಿಂಗಪೂಜೆಯಷ್ಟೇ ಗಂಭೀರ ವಿಷಯ ಎಂದು ಪರಿಗಣಿಸಿದರು. ಹಾಗಾಗಿ ಅಕ್ಷಯ ಪಾತ್ರೆಯ ಕನಸು ಕಾಣುವ ಬದಲಾಗಿ ಶ್ರಮದ ಮೂಲಕ ಉತ್ಪಾದನೆಯನ್ನು ಎತ್ತಿಹಿಡಿದು ಅದಕ್ಕೆ ಕಾಯಕದ ಸ್ವರೂಪ ಕೊಟ್ಟರು. ಅನ್ನ ಪ್ರಸಾದವಾಯಿತು. ಈ ಪ್ರಸಾದವನ್ನು ಹಂಚಿತಿನ್ನುವ ದಾಸೋಹ ಜೀವಕುಲದ ಏಕತೆಯ ತತ್ವವನ್ನು ಅಮೂರ್ತ ನೆಲೆಯಿಂದ ದಿನನಿತ್ಯದ ಬದುಕಿನ ಪದ್ಧತಿಯನ್ನಾಗಿ ಮಾಡಿದರು. “ಕಾಗೆ ಒಂದಗುಳ ಕಂಡಡೆ ಕರಿಯದೇ ತನ್ನ ಬಳಗವನು, ಕೋಳಿ ಒಂದು ಕುಟುಕು ಕಂಡಡೆ ಕೂಗಿ ಕರೆಯದೇ ತನ್ನ ಕುಲವೆಲ್ಲವ ಎಂಬ ಬಸವಣ್ಣನವರ ವಚನದ ಮೂಲಕ ದಾಸೋಹ ತತ್ವವನ್ನು ಜನಪ್ರೀಯ ಪದ್ಧತಿಯನ್ನಾಗಿ ಮಾಡಿದ್ದನ್ನು ಕಾಣಬಹುದು. ಇಲ್ಲಿ ಯ ಆಶಯ ನೋಡಿದಾಗ ಹೊಸ ಶಿಕ್ಷಣ ನೀತಿಯಲ್ಲಿಯ ಸಹಾನೂಭೂತಿ, ಅನುಭೂತಿ, ಸಹೋದತ್ವ, ಸಮಾನತೆಯ, ಬಹುತ್ವದಿಂದೊಡಗೂಡಿದ ಸಮಾಜ ಹಾಗೂ ದೇಶದ ಆರ್ಥಿಕಾಭಿವೃದ್ಧಿಯ ಎಲ್ಲ ಹೆಜ್ಜೆಗಳನ್ನೂ ಒಳಗೊಂಡಿರುವದನ್ನು ಕಾಣಬಹುದು ಹೀಗೆ ಹೊಸ ಶಿಕ್ಷಣ ನೀತಿ ಆಶಯಗಳನ್ನು ಈಡೇರಿಸಲು ವಚನ ಸಾಹಿತ್ಯವು ಅತ್ಯಂತ ಪ್ರಸ್ತುತವಾಗಿದೆ ಎಂದರೆ ತಪ್ಪಾಗುವುದಿಲ್ಲ ಎಂಬುದನ್ನು ಕಾಣಬಹುದು

ಶರಣರು ಪ್ರತಿಪಾದಿಸಿದ ಸಮಾನತೆಯ ತತ್ವ ಕೇವಲ ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಪಾದಿಸಿದ ತತ್ವ ಅಲ್ಲ. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೂಡಲ ಸಂಗನ ಶರಣರೇ ಕುಲಜರು ಎಂದು ಜಾತಿ ವಿಭಜನೆಯನ್ನು ತಿರಸ್ಕರಿಸುವ ಜೊತೆಗೆ ಈ ಸಮಾನತೆಯ ತತ್ವದ ಹಿಂದೆ ಸಕಲ ಜೀವಿಗಳು ಮೂಲದ್ರವ್ಯವೂ ಒಂದೇ ಎಂದು ಒಪ್ಪಿಕೊಳ್ಳುವ ವಿಶಾಲ ದೃಷ್ಟಿಯಿದೆ. ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನ್ನೂ ಒಂದೇ ಎಂಬೆ ಎನ್ನುವ ನಿಲುವಿನಲ್ಲಿ ಅಸಮಾನತೆ ಎಂಬುದು ಒಂದು ಮನುಷ್ಯ ಸೃಷ್ಠಿ,  ಹಗ್ಗವನ್ನು ಹಾವಾಗಿ ಕಾಣುವ ಭ್ರಮಾತ್ಮಕ ದೃಷ್ಠಿ ದೋಷ .  ಹಾವಿನಹಾಳ ಕಲ್ಲಯ್ಯ ಬ್ರಾಹ್ಮಣ ಮೊದಲು ಶ್ವಪಚ ಕಡೆಯಾಗಿ ಎಲ್ಲರಿಗೂ ಜನನವೊಂದೇ…ಅರಿವೇ ಸತ್ಕುಲ ಮರವೇ ದುಷ್ಕುಲ ಎಂದು ಹೇಳತ್ತ ಆರೋಗ್ಯಕರ ಮನಸ್ಸು ಭೌತಿಕವಾಗಿ ಗುರುತಿಸಬಹುದಾದ ವಾಸ್ತವತೆಯನ್ನು ಎತ್ತಿಹಿಡಿಯುತ್ತಾನೆ. ಹೀಗೆ ಮುಂದುವರೆದು ಹೆಣ್ಣು ಗಂಡಿನ ನಡುವೆ ಇದ್ದ ಅಸಮಾನತೆಯೂ ಒಂದು ಭ್ರಮೆ ಎಂದು ವಚನಕಾರರು ತೋರಿಸಿದ್ದಾರೆ.

 ಲಿಂಗಭೇದ ದ ಹೆಸರಿನಲ್ಲಿ ಇಂದಿಗೂ ಎಷ್ಟೋ ದೇಶಗಳು ಮಹಿಳೆಯರಿಗೆ ನೀಡುವ ಅನೇಕ ಸೌಲಭ್ಯಗಳನ್ನು ನೀಡಲು ನಿರಾಕರಿಸುತ್ತಿರುವ ಈ ಹೊತ್ತಿನಲ್ಲಿಯೂ ಆದ್ಯವಚನಕಾರ ಜೇಡರ ದಾಸಿಮಯ್ಯನವರ ವಚನ ಮಹತ್ವಪೂರ್ಣವಾದ ಒಳನೋಟಗಳನ್ನು ನೀಡುತ್ತದೆ.

ಮೊಲೆ, ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು

ಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ

ಸಮಾಜದಲ್ಲಿ ವಿವಿಧ ಜಾತಿ, ಕಂದಾಚಾರ, ಮೂಢನಂಬಿಕೆಗಳನ್ನು ತಿರಸ್ಕರಿಸಿ  ದಲಿತರನ್ನು, ದಮನಿತರನ್ನು, ಮಹಿಳೆಯರನ್ನು, ಬಡವರನ್ನು ಹೀಗೆ ಹೆಣ್ಣು ಮತ್ತು ಗಂಡಿನ ನಡುವಿನ ವ್ಯತ್ಯಾಸ ಕೇವಲ ಶಾರೀರಿಕವಾದದ್ದೇ ವಿನಃ ಬೌದ್ಧಕವಾಗಿ ಇಬ್ಬರೂ ಸಮಾನ ಸಾಮರ್ಥ್ಯವುಳ್ಳವರು ಎಂಬುದನ್ನು ಸ್ವತಂತ್ರ ಮನೋಧರ್ಮದಿಂದ ಇಡೀ ಜಗತ್ತಿಗೆ ಸಾರಿದ ಮೊದಲ ಉದಾರವಾದಿ ಚಿಂತಕ ಜೇಡರ ದಾಸಿಮಯ್ಯ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಾರದು ಈ ಮೂಲಕ ಲಿಂಗ ತಾರತಮ್ಯದ ಮೂಲಕ ನಡೆಯಬಹುದಾದ ಶೋಷಣೆಗೆ ಪೂರ್ಣವಿರಾಮ ನೀಡಿ, ಸ್ತ್ರೀ ಸ್ವಾತಂತ್ರ್ಯದ ಮಹತ್ವವನ್ನು ಸಾರುವುದರ ಮೂಲಕ ಜಗತ್ತಿನ ಮೊದಲಿಗರಾದವರು ವಚನಕಾರರು.

ಅರ್ಥಪೂರ್ಣ ಕಲಿಕೆ ಹೊಸ ಶಿಕ್ಷಣ ನೀತಿಯ ಆಶಯ

ಆಡುಭಾಷೆಯಲ್ಲದ ಕಲಿಕೆ ಹಾಗೂ ಕಂಠಪಾಠ ಕಲಿಕೆಗೂ ತಮ್ಮದೇ ಭಾಷೆಯಲ್ಲಿ ಶರಣರ ವಚನಗಳು ಉತ್ತರವನ್ನು ನೀಡುತ್ತವೆ. ಅರ್ಥವಾಗದ ಅಮೂರ್ತ ವಿಷಯಗಳನ್ನು ಬಾಯಿಪಾಠಮಾಡುತ್ತಾ ಇದೇ ಶಿಕ್ಷಣ ಎಂದು ಭಾವಿಸುವ ವಿದ್ಯಾರ್ಥಿಯು ಕಲಿತದ್ದಕ್ಕೂ ದಿನನಿತ್ಯದ ಜೀವನಕ್ಕೂ ಏನೇನೂ ಸಂಬಂಧವಿಲ್ಲ ಎಂಬ ನಿರ್ಣಯಕ್ಕೆ ಬರುತ್ತಾರೆ. ಅಮೂರ್ತ ವಿಷಯಗಳೂ, ಭಾಷೆಯೂ ಬದುಕಿಗೆ ದೂರವಾಗಿರುವ ಸಂದರ್ಭದಲ್ಲಿ ನಡೆಗೂ ನುಡಿಗೂ ಸಾವಯವ ಸಂಬಂಧ ಬೇಳೆಯುವುದೇ ಇಲ್ಲ ಕಲಿಯುವುದು ಬೇರೆ ನಡೆದುಕೊಳ್ಳಬೇಕಾದದ್ದು ಬೇರೆ ಎಂಬ ತಿಳವಳಿಕೆ ಗಟ್ಟಿಕೊಳ್ಳುತ್ತದೆ. ಕಲಿಕೆಯ ಪ್ರಕ್ರಿಯೆಯಲ್ಲಿ ಜ್ಞಾನ ನಿರ್ಮಾಣ ಅದು ದಿನನಿತ್ಯದ ಬದುಕಿನಲ್ಲಿ ಅನ್ವಯಿಕ ಜ್ಞಾನವಾಗುವ ಸಾಧ್ಯತೆಯನ್ನು ಈ ಅಸಂಬದ್ಧ ಕಲಿಕೆ ಪ್ರಕ್ರಿಯೆ ಕೆಡಿಸಿಬಿಡುತ್ತದೆ. ಪರಿಚಿತ ಭಾಷೆಯು ಇಚ್ಛಿತ ಫಲ ನೀಡುತ್ತದೆ. ಕಲಿಸುವಾತನಿಗೆ ಭಾಷೆಯನ್ನು ಮೀರಿದ ಒಳಗಿನ ಬೆಳಕೊಂದು (Insight) ಇರಬೇಕು. ಇದು ಆಧ್ಯಾತ್ಮಿಕದಲ್ಲಷ್ಟೇ ಅಲ್ಲ, ವಿಜ್ಞಾನದಲ್ಲಿ ಅನ್ವಯಿಸಬೇಕಾದ ತತ್ವ. ಇದನ್ನು ಮನಗಂಡ ಶರಣರು ಮಾತೃ ಭಾಷೆಯಲ್ಲಿ ವಚನಗಳ ಬರವಣೆಗೆಗೆ ಮುಂದಾದರು ಆದ್ದರಿಂದಲೇ ದೇವರಿಗೆ ಕನ್ನಡ ಕಲಿಸಿದರು ಶರಣರು ಎನ್ನುತ್ತಾರೆ ಹೊಸ ಶಿಕ್ಷಣ ನೀತಿಯೂ ಸಹ ಮಾತೃಭಾಷೆ, ಪ್ರಾದೇಶಿಕ ಭಾಷೆಗೆ ಒತ್ತುಕೊಟ್ಟಿರುವದನ್ನು ಕಾಣಬಹುದಾಗಿದೆ.

ವೈಜ್ಞಾನಿಕ ಮನೋಭಾವ ಬೆಳೆಸುವುದು

ಅನೇಕ ವಚನಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲಕ ಸೆಲೆಯನ್ನು ಹೊಂದಿವೆ. ಚೆನ್ನಬಸವಣ್ಣನವರ ಕರಣ ಹಸಿಗೆ ವೈಧ್ಯಕೀಯ ಪಠ್ಯವಾಗಲು ಯೋಗ್ಯ ಗ್ರಂಥವಾಗಿದೆ. ಇದರಲ್ಲಿ ಮಾನವ ಶರೀರ ರಚನೆ ಮತ್ತು ಕಾರ್ಯ ನಿರ್ವಹಣೆಯ ಬಗ್ಗೆ ವಿವರಿಸಲಾಗಿದೆ ಆದರೆ ಇದನ್ನು ಅರ್ಥೈಸಿಕೊಳ್ಳದೇ ಇರುವುದು ವಿಷಾದದ ಸಂಗತಿ. ಸೃಷ್ಠಿಯ ರಚನೆಯ ಕುರಿತ ಪ್ರಸ್ತಾಪವನ್ನು ಅಲ್ಲಪ್ರಭುಗಳ ವಚನಗಳಲ್ಲಿ ಕಾಣಬಹುದು  ಶರಣರು 12 ನೇಯ ಶತಮಾನದಲ್ಲಿಯೇ ವೈಜ್ಞಾನಿಕ ಮಹತ್ವವನ್ನು ಸಾರಿರುವದು ಅಚ್ಚರಿಯನ್ನುಂಟು ಮಾಡುತ್ತದೆ. ಆದರೆ ಈ ವಿಚಾರದಲ್ಲಿ ಶರಣರೇ ಮೊದಲಿಗರು ಎಂಬುದನ್ನು ಜಗತ್ತಿಗೆ ಮೊದಲು ಪರಿಚಯಿಸಬೇಕಿದೆ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ – ಜಂಗಮ ಚಲನಶೀಲತೆ, ಸ್ಥಾವರ ಚಲನೆ ಇಲ್ಲದ್ದು ಅಂದರೆ Static. ಸ್ಥಾವರವನ್ನು ಸ್ಪರ್ಷಿಸಬಹುದು. ಜಂಗಮ ಸ್ಪರ್ಷಿಸಲು ಅಸಾಧ್ಯವಾದುದು. ಅದೃಶ್ಯವಾದುದು, ಚಲನೆಯಲ್ಲಿರುವಂತಹದು. ಜಂಗಮ ಶಬ್ದಕ್ಕೆ ಚಲನಶೀಲತೆ ಅಂಟಿಕೊಂಡಿರುತ್ತದೆ.   ಇದನ್ನು ಶಕ್ತಿ ಎಂತಲೂ ಕರೆಯಬಹುದು. ಭೌತವಿಜ್ಞಾನಗಳಲ್ಲಿ ಶಕ್ತಿಯ ವಾಖ್ಯಾನ.  ಇದರ ಅರ್ಥ ವಿಶ್ವದಲ್ಲಿಯ ಒಟ್ಟು ಶಕ್ತಿಯ ಮೊತ್ತ ಸ್ಥಿರವಾಗಿರುತ್ತದೆ. ಹೊಸ ಶಕ್ತಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಇದ್ದ ಶಕ್ತಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಿಲ್ಲ ಹೀಗಾಗಿ ಜಂಗಮಕ್ಕಳಿವಿಲ್ಲ ಎಂಬ ಪದ Principal of Conservation of energy ವಾಖ್ಯೆವನ್ನು ಪ್ರತಿಪಾದಿಸುತ್ತದೆ.                      

ಶಿಲೆಯೊಳಗಣ ಪಾವಕನಂತೆ

ಉದಕದೊಳಗಣ ಪ್ರತಿಬಿಂಬದಂತೆ

ಬೀಜದೊಳಗಣ ವೃಕ್ಷದಂತೆ

ಶಬ್ದದೊಳಗಣ ನಿಶ್ಯಬ್ದದಂತೆ

ಗುಹೇಶ್ವರ, ನಿಮ್ಮ ಶರಣಸಂಬಂಧ.   -ಅಲ್ಲಮಪ್ರಭು

ಈ ವಚನದಲ್ಲಿ ಶರಣ ಮತ್ತು ಲಿಂಗದ ನಡುವಿನ ಒಂದು ಅಗೋಚರವಾದ ಸಂಭಂದವನ್ನು ಕೆಲವು ನಿದರ್ಶನಗಳ ಮೂಲಕ ಅಲ್ಲಮಪ್ರಭು ಅವರು ವಿವರಿಸುತ್ತಾರೆ. ಶಿಲೆಯೊಳಗೆ ಬೆಂಕಿ ಅಡಗಿರುವಂತೆ,ಆ ಶಿಲೆಗಳು ಒಂದಕ್ಕೊಂದು ತಾಗಿದಾಗ ಬೆಂಕಿಯ ಕಿಡಿ ಬರುತ್ತದೆ,ಅದೇ ರೀತಿ ನಿಶ್ಚಲ ನೀರಿನೊಳಗೆ ಪ್ರತಿಬಿಂಬ ಗೋಚರಿಸಿದಂತೆ ಅಡಗಿರುವಂತೆ,ಒಂದು ಬೀಜವನ್ನು ಊಳಿದರೆ ಅದು ಬೆಳೆದು ಮರವಾಗುತ್ತದೆ, ಆ ಸಣ್ಣದೊಂದು ಬೀಜದೊಳಗಿನ ದಷ್ಟ ಶಕ್ತಿಯಂತೆ,ಶಬ್ದದೊಳಗೆ ಅಡಕವಾಗಿರುವ ನಿಶ್ಯಬ್ಧದಂತೆ ಲಿಂಗ ಮತ್ತು ಶಿವಶರಣನ ಸಂಭಂದವು ಗೋಚರಿಸದಂತೆ ಅಪ್ರಮಾನ್ಯವಾಗಿದೆ ಎಂದು ಹೇಳುತ್ತಾರೆ… ಇದು ಪರಿಪೂರ್ಣತೆ ಸಂಬಂಧದ ಪಾವಿತ್ರತೆ ಬಗ್ಗೆ ತಿಳಿಸುತ್ತದೆ

ಇದೆ ತರಹ ಗುಹೇಶ್ವರ ಲಿಂಗಕ್ಕೆಯು ಎನಗೆಯು ಎತ್ತಣಿಂದೆತ್ತ ಸಂಭಂದವಯ್ಯಾ ಎಂದು ಇನ್ನೊಂದು ವಚನದಲ್ಲಿ ಕೇಳಿಕೊಳ್ಳುವ ಪ್ರಶ್ನೆಗೆ ಈ ರೀತಿಯ ಅಗಮ್ಯ ಸಂಭಂದವೇ ಉತ್ತರ ಇರಬಹುದು…

ಹೊಸ ಶಿಕ್ಷಣ ನೀತಿಯಲ್ಲಿ ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನ

ಓದುವ ಮತ್ತು ಬರೆಯುವ ಹಾಗೂ ಸಂಖ್ಯೆಗಳೊಂದಿಗೆ ಗಣಿತದ ಮೂಲ ಕ್ತಿಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಬಗ್ಗೆ ಒತ್ತಿ ಹೇಳುತ್ತದೆ. ಇಂದು  ನಮ್ಮ ಸರಕಾರಗಳು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿವೆ. ಆದರೆ “ನಡೆಯ ಕಲಿಸಿದ ಬಸವ,ನುಡಿಯ ಕಲಿಸಿದ ಬಸವ,ಉಡಲು ಕಲಿಸಿಒದ ಬಸವ, ಉಣಲು ಕಲಿಸಿದ ಬಸವ ಎಂದು ಜನಪದ ಕವಿಯೊಬ್ಬ ಸ್ಮರಣೆ ಮಾಡಿಕೊಂಡಿರುವುದನ್ನು ನೋಡಿದರೆ ಜ್ಞಾನ ಸಂಪಾದನೆಗೆ ಹೆಚ್ಚು ಆದ್ಯತೆಯನ್ನು  12 ಶತಮಾನದಲ್ಲಿಯೇ ಬಸವಣ್ಣನವರು ಕಲ್ಪಿಸಿಕೊಟ್ಟಿದ್ದರು. ಸರ್ವಾಂಗೀಣ ಸಂಸ್ಕಾರ, ಕಾಯಕ ಸಹಿತ ವಿದ್ಯೆ ಇಂದಿನ skill development ಕೌಶಲಾಧಾರಿತ ಶಿಕ್ಷಣದ ಕಲ್ಪನೆಯ ಜಾಗೃತಿ ಆ ಕಾಲಕ್ಕೆ ಇತ್ತು ಎಂಬುದನ್ನು ತಿಳಿಯಬಹುದು. “ಸಾಧು ಸಾಧೆಲೆ ಬಸವ, ಓದು ಕಲಿಯಿತು ಜಗವು, ಹೋದ ಹೋದಲ್ಲಿ ಹೊಸ ಮಾತು ಕೇಳಿದೆವು, ಮೇದಿನಿಗೆ ಬಂತು ಹೊಸ ಬೆಳಕು “ ಎಂಬಲ್ಲಿ ಬಸವಣ್ಣ ಓರ್ವ ಶಿಕ್ಷಣ ತಜ್ಞ ಎಂಬುದೂ ವೇದ್ಯವಾಗುತ್ತದೆ.

ಕಸಗೂಡಿಸುವ ಸತ್ಯಕ್ಕನಿಗೂ, ಸೂಳೆ ಸಂಕವ್ವಳಿಗೂ ಅಕ್ಷರ ಕಲಿಸಿ, ವಚನಗಳ ಬರೆಸಿ ವಚನ ಸಾಹತ್ಯ ಕೊಟ್ಟ ಕೀರ್ತಿಯನ್ನು ನಮ್ಮ ವಚನಗಳ ಮೂಲಕ ಕಾಣುತ್ತೇವೆ

ವಿಮರ್ಶಾತ್ಮಕ ಚಿಂತೆನೆ, ಬಹುಭಾಷಾ ಕಲಿಕೆ

12 ನೇಯ ಶತಮಾನದಲ್ಲಿ ಕಾಶ್ಮೀರದಿಂದ, ಅಫಘಾನಿಸ್ತಾದಿಂದ ಹೀಗೆ ಅನೇಕ ಪ್ರದೇಶಗಳಿಂದ ಬಂದ ಶರಣರಿಗೆ ಕನ್ನಡ ಬರೆಯುವದನ್ನು, ಓದುವದನ್ನು ಕಲಿಸಿ, ವಚನ ಸಾಹಿತ್ಯದ ರಚನೆಗೆ ಪ್ರೇರಕರಾದವರು ಶರಣರು. ಹೀಗೆ ಬುಭಾಷಾ ಕಲಿಕೆಗೆ ಪರೋಕ್ಷವಾಗಿ ಸಹಾಯವನ್ನು ಮಾಡುವ ಮೂಲಕ ಹೊಸ ಶಿಕ್ಷಣದ ಆಶಯವನ್ನು ಶರಣರು ಪೂರೈಸಿದ್ದನ್ನು ಗಮನಿಸಬಹುದು.  ಕಾಶ್ಮೀರದಿಂದ ಅಫಘಾನಿಸ್ತಾನದಿಂದ ಬಂದವರಿಗೆ ಕನ್ನಡ ಕಲಿಸುವ ಮೂಲಕ ಬಹುಭಾಷಾ ಕಲಿಕೆಗೆ ಒತ್ತು ನೀಡಿದರು ಎನ್ನಬಹುದು.

ಅನುಭವಾತ್ಮಕ ಕಲಿಕೆ

12 ನೇಯ ಶತಮಾನದಲ್ಲಿ ಶರಣರು  ಕಾಯಕ ದಾಸೋಹ ಪರಿಕಲ್ಪನೆಗಳ ಮೂಲಕ ಅನುಭವಾತ್ಮಕ ಕಲಿಕೆಗೆ ಪ್ರಾಧಾನ್ಯತೆ ನೀಡಿದರು

ಸ್ಥಳೀಯ ಕರಕುಶಲತೆಗೆ ಪ್ರಾಧಾನ್ಯತೆ – ಬಡಗಿತನ, ಕುಂಬಾರ, ಕಮ್ಮಾರ ಇತ್ಯಾದಿಗಳಿಗೆ ಹೊಸ ಶಿಕ್ಷಣ ನೀತಿ ಪ್ರಾಧಾನ್ಯತೆ ನೀಡಿದೆ ಇದನ್ನು ವಚನಗಳಲ್ಲಿ ಕಾಯಕದ ಶ್ರೆಷ್ಠತೆಯನ್ನು ಹೇಳುವುದರ ಮೂಲಕ ಎಲ್ಲ ಕಾಯಕಗಳು ಸಮಾನ ಎಂದು ಪ್ರೋತ್ಸಾಹಿಸಿದ್ದನ್ನು ಕಾಣಬಹುದು. ಕಾಯಕವನ್ನು ಅತ್ಯುನ್ನತ ಹಂತಕ್ಕೇರಿಸಿ, ಸ್ಥಳೀಯ ಕೌಶಲಗಳಿಗೆ, ಉದ್ಯೋಗಗಳಿಗೆ ಪ್ರಾಶ್ಯಸ್ತ ನೀಡಿದರು. ಈ ಮೂಲಕ ಅನುಭವಾತ್ಮಕ ಕಲಿಕೆಯ ಬಗ್ಗೆ ಪ್ರೋತ್ಸಾಹ ನೀಡಿದರು ಎನ್ನಬಹುದು

ರಚನಾವಾದ

ಯಾವುದೇ ವಿಷಯವನ್ನು ವಿಚಾರಿಸದೇ ಒಪ್ಪಿಕೊಳ್ಳಬಾರದು, ಎಲ್ಲವನ್ನು ಒರೆಹಚ್ಚಿ ನೋಡುವದರ ಮೂಲಕ ಹಾಗೂ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ ಹಾಗೂ ವೈಜ್ಞಾನಿಕ ತಳಹದಿಯಲ್ಲಿ ಆಲೋಚಿಸಿ, ಚರ್ಚಿಸಿ ಒಪ್ಪಬೇಕು. ಹೀಗೆ ಜ್ಞಾನವನ್ನು ಕಟ್ಟಿಕೊಳ್ಳಬೇಕು, ಜ್ಞಾನದ ಸಂರಚನೆ ಆಗಬೇಕು ಎಂಬುದು ರಚನಾವಾದದ ಪ್ರಮಖ ಆಶಯ.

ಈ ಆಶಯವನ್ನು ಸಂಪೂರ್ಣವಾಗಿ ಅಕ್ಷರಶಃ ಜಾರಿಯಲ್ಲಿ ತಂದವರು 12 ನೇಯ ಶತಮಾನದ ಶರಣರು. ಶರಣರು ಅನುಭವ ಮಂಟಪದ ಮೂಲಕ  ವಚನಗಳನ್ನು ಒರೆ ಹಚ್ಚುವ, ಚರ್ಚಿಸುವ, ಚಿಂತನ ಮಂಥನ ಮಾಡುವ ಕಾರ್ಯ ಅದ್ಬುತವಾದದ್ದು. ಯಾವುದನ್ನೂ ಹಾಗೆಯೇ ಒಪ್ಪಿಕೊಳ್ಳದೇ, ಎಲ್ಲವನ್ನೂ ಚರ್ಚಿಸಿ, ಚಿಂತಿಸಿ ಮಂಥಿಸಿ ನಿರ್ಧಾರಕ್ಕೆ ಬರುವ ಕ್ರಮ ಇಂದಿನಾ ರಚನಾವಾದದ ಮೂಲ ಎನ್ನಬಹುದು

ಒಟ್ಟಾರೆಯಾಗಿ ಹೊಸ ಶಿಕ್ಷಣ ನೀತಿಯಲ್ಲಿಯ ಎಲ್ಲ ಆಶಯಗಳನ್ನು ಗಮನಿಸಿದಾಗ, ಈ ಎಲ್ಲ ಅಂಶಗಳು ಹಾಗೂ ಅದರ ಬೇರುಗಳು 12 ನೇ ಶತಮಾನದಲ್ಲಿಯ ಸಮಾಜದಲ್ಲಿ ಶರಣರು ಜಾರಿಗೆ ತಂದಿರುವದನ್ನು ಹಾಗೂ ಅದನ್ನು ವಚನ ಸಾಹಿತ್ಯದ ಮೂಲಕ ದೃಢೀಕರಿಸಿರುವದನ್ನು ಕಾಣಬಹುದಾಗಿದೆ. ಆದ್ದರಿಂದ ಹೊಸ ಶಿಕ್ಷಣ ನೀತಿಯಲ್ಲಿಯ ಆಶಯಗಳನ್ನು ಪೂರೈಸಲು ವಚನ ಸಾಹಿತ್ಯ ಅತ್ಯಂತ ಪ್ರಸ್ತುತವಾಗಿದೆ. ಈ ಮೂಲಕ ಮಾನವೀಯ ಮೌಲ್ಯವುಳ್ಳ ಸಮಾನ ಶಿಕ್ಷಣದ ಆಶಯದ,  ಕಾಯಕ ಶ್ರೇಷ್ಠತೆ ತೋರುವ ಶಿಕ್ಷಣಕ್ಕೆ ವಚನ ಸಾಹಿತ್ಯ ಅತ್ಯಂತ ಪೂರಕವಾಗಿವೆ ಎನ್ನಬಹುದು.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

Leave a Reply

Back To Top