ಕಾವ್ಯ ಸಂಗಾತಿ
ಎ. ಹೇಮಗಂಗಾರವರ ತನಗಗಳು
ಹೇಳಬೇಕಾದ ಮಾತು
ನೂರಿವೆ ಮನದಲ್ಲಿ
ನೀ ಎದುರು ಬಂದರೆ
ಮೌನಕ್ಕೆ ಶರಣು ನಾ
ಮಧುಬಟ್ಟಲ ಪೂರ್ಣ
ತುಂಬಿದರೂ ಸಾಲದು
ಕಾಡುವ ಭೂತವನ್ನು
ಮರೆಯಬೇಕು ಸಾಕಿ
ಇರುಳ ಬಾನಿನಲ್ಲಿ
ಚಂದ್ರನನ್ನು ಅರಸಿ
ನಾನೇಕೆ ದಣಿಯಲಿ
ನಲ್ಲೆ ಮೊಗವೇ ಸಾಕು
ನಿಜ, ನಿನ್ನನ್ನು ನಾನು
ಪ್ರೀತಿಸಲು ಆಗದು
ಅಂತೆಯೇ ನಿರ್ಲಕ್ಷ್ಯವ
ತೋರಿಸಲೂ ಆಗದು
ಕುಂದು ಕೊರತೆಗಳು
ನೂರಿದ್ದರೆ ಇರಲಿ
ಸುಖೀ ದಾಂಪತ್ಯದಲ್ಲಿ
ಗಂಜಿಯೂ ಮೃಷ್ಟಾನ್ನವೇ
ಕಂಡ ಕನಸೆಲ್ಲವೂ
ನನಸಾಗುವುದಿಲ್ಲ
ಅದ ಕಾಣುವುದನ್ನೇ
ನಾನು ಮರೆತಿದ್ದೇನೆ
ನಲ್ಲೆ ಅಧರಗಳ
ಮುತ್ತಿನ ಮತ್ತೊಂದಿರೆ
ಮತ್ತೇನೂ ಬೇಕಾಗದು
ಅವಳ ನಲ್ಲನಿಗೆ
ಗಟ್ಟಿ ಗುಂಡಿಗೆಯಿದೆ
ಗಡಿಯ ಯೋಧನಿಗೆ
ಅಂಜಿಕೆಯಿಲ್ಲ ಜೀವ
ಅರ್ಪಿಸಲು ಗುಂಡಿಗೆ