ಗಜಲ್ ಲೋಕ
ರತ್ನರಾಯಮಲ್ಲ ಅವರ ಲೇಖನಿಯಿಂದ
ಬಾದವಾಡಗಿಯವರ
ಗಜಲ್ ಗಳಲ್ಲಿ ತಾತ್ವಿಕ ಚಿಂತನೆ
ಬಾದವಾಡಗಿಯವರ ಗಜಲ್ ಗಳಲ್ಲಿ ತಾತ್ವಿಕ ಚಿಂತನೆ
ಗಜಲ್…
ಗಜಲ್ ಎನ್ನುವ ಶಬ್ದ ಕಿವಿಗೆ ಬೀಳುತ್ತಲೇ ಹೃದಯದ ಬಡಿತ ಜೋರಾಗುತ್ತದೆ. ಅಂಥಹ ಶಕ್ತಿ ಗಜಲ್ ಗೆ ಇದೆ. ಇಂಥಹ ಗಜಲ್ ಮನಸುಗಳಿಗೆ ಪ್ರೀತಿಯಿಂದ ಹಾಯ್…ಪ್ರತಿ ಗುರುವಾರ ಒಬ್ಬೊಬ್ಬ ಸುಖನವರ್ ಅವರ ಹೆಜ್ಜೆ ಗುರುತುಗಳನ್ನು ಅರಸುತ್ತ ತಮ್ಮ ಮುಂದೆ ಬರುತ್ತಿರುವೆ. ಆ ಮಾರ್ಗದಲ್ಲಿಯ ವೈವಿಧ್ಯಮಯ ಛಾಯೆ ನಿಮ್ಮ ಮುಂದೆ…!!
“ಒಂದು ಯುಗದಿಂದ ನನ್ನ ತಾಯಿ ನಿದ್ದೆ ಮಾಡಿಲ್ಲ ‘ತಾಬಿಶ್‘
ನಾನೊಮ್ಮೆ ಹೇಳಿದ್ದೆ ನನಗೆ ಭಯವಾಗುತ್ತದೆ ಎಂದು”
–ಅಬ್ಬಾಸ್ ತಾಬಿಶ್
ಪ್ರೀತಿ… ಪದಗಳಿಗೆ ನಿಲುಕದ ಅನುಪಮ ಭಾವ. ಜನಾಜದಲ್ಲೂ ಲೋರಿ ಹಾಡುವ, ತೊಟ್ಟಿಲಲ್ಲೂ ಕಫನ್ ಹೊದಿಸುವ ಜಾದುಗಾರನ ಮಂತ್ರದಂಡ. ಜಗತ್ತು ಈ ಮಂತ್ರದಂಡದ ನಿರೀಕ್ಷೆಯಲ್ಲೊ, ಕನವರಿಕೆಯಲ್ಲೊ, ಶಪಿಸುತ್ತಲೊ ಇಲ್ಲವೇ ಮುದ್ದಿಸುತ್ತಲೊ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಸತ್ತವನಿಗೆ ಉಸಿರು ಕರುಣಿಸುವ, ಉಸಿರಾಡುತ್ತಿರುವವರ ಉಸಿರನ್ನು ನಿಲ್ಲಿಸುವ ಅದಮ್ಯ ಶಕ್ತಿಯನ್ನು ಹೊಂದಿದೆ. ಪ್ರೀತಿಯ ಸವಿಯುಂಡವರು ಯಾವತ್ತೂ ಸಾಯಲಾರರು, ಕನಸಿನಲ್ಲಿಯೂ ಸಾವನ್ನು ಬಯಸಲಾರರು. ಹಲವು ಬಾರಿ ಉದ್ವೇಗಕ್ಕೊಳಗಾಗಿ ‘ಸಾಯಬೇಕು’ ಎಂದೆಲ್ಲ ಹಲಬುವರು. ಆದರೆ ಸತ್ತರೆ ತಮ್ಮ ‘ಪ್ರೇಮಿ’ಯಿಂದ ದೂರವಾಗಬೇಕಲ್ಲ ಎಂದೂ ಯೋಚಿಸುತ್ತಾರೆ! ಇದುವೇ ಪ್ರೀತಿ. ಬದುಕಲು ಸಾಧ್ಯವಿಲ್ಲ ಎಂದನಿಸಿದಾಗಲೆ ಪ್ರೀತಿ ಫಿನಿಕ್ಸ್ ನಂತೆ ಪುಟಿದೇಳುತ್ತದೆ. ವೈಫಲ್ಯ, ನಿರಾಶೆ, ಹತಾಶೆ, ಬಳಲಿಕೆ… ಈ ಎಲ್ಲಾ ಕಷ್ಟದ ಕ್ಷಣಗಳು ಜೀವನದ ಮೇಲಿನ ನಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಕತ್ತಲೆಯು ಕತ್ತಲೆಯನ್ನು ಓಡಿಸಲಾರದು, ಬೆಳಕು ಮಾತ್ರ ಓಡಿಸಬಲ್ಲದು. ದ್ವೇಷವು ದ್ವೇಷವನ್ನು ಹೊರಹಾಕಲಾರದು, ಪ್ರೀತಿ ಮಾತ್ರ ಅದನ್ನು ಮಾಡಬಲ್ಲದು. “ಯಾರಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಶಕ್ತಿಯನ್ನು ನೀಡುತ್ತದೆ. ಆದರೆ ಯಾರನ್ನಾದರೂ ಆಳವಾಗಿ ಪ್ರೀತಿಸುವುದು ನಿಮಗೆ ಧೈರ್ಯವನ್ನು ನೀಡುತ್ತದೆ” ಎಂಬ ಚೀನಾದ ತತ್ವಜ್ಞಾನಿ ಲಾವೊ ತ್ಸು ರವರ ಮಾತು ಪ್ರೀತಿಯ ಮಾಧುರ್ಯವನ್ನು ಅರಹುತ್ತದೆ. ಪ್ರೀತಿಸುವುದು, ಪ್ರೀತಿಸಲ್ಪಡುವುದು ಎರಡೂ ಜೀವನದ ಮಹತ್ವಪೂರ್ಣ ಕುರುಹುಗಳೆ. ಪ್ರೇಮಿ ತನ್ನ ಪ್ರಿಯತಮ/ಪ್ರಿಯತಮೆಯ ಬಗ್ಗೆ ಯೋಚಿಸಿದ ಪ್ರತಿ ಬಾರಿಯೂ ಅವರ ಬಳಿ ಹೂವು ಇದ್ದರೆ, ಅವರು ತೋಟದಲ್ಲಿಯೆ ಶಾಶ್ವತವಾಗಿ ನಡೆಯಬಹುದು ಎನ್ನುತ್ತದೆ ಪ್ರೀತಿ. ಪ್ರೀತಿಯೆಂದರೆ ತಾಳ್ಮೆ, ಪ್ರೀತಿಯೆಂದರೆ ದಯೆ. ಇದು ಅಸೂಯೆ ಪಡುವುದಿಲ್ಲ, ಇದು ಅಸಭ್ಯವಲ್ಲ, ಸ್ವಾರ್ಥವಲ್ಲ, ಸುಲಭವಾಗಿ ಕೋಪಗೊಳ್ಳುವುದಿಲ್ಲ, ಯಾವುದೇ ತಪ್ಪುಗಳ ದಾಖಲೆಯನ್ನು ಇಡುವುದಿಲ್ಲ. ಕೆಟ್ಟದ್ದನ್ನು ಎಂದಿಗೂ ಆನಂದಿಸುವುದಿಲ್ಲ. ಇಂಥಹ ಪಂಚಮವೇದವನ್ನು ತನ್ನ ಉಸಿರಾಗಿಸಿಕೊಂಡಿರುವ ಕಾವ್ಯ ಪ್ರಕಾರಗಳಲ್ಲಿ ‘ಗಜಲ್’ ಮುಂಚೂಣಿಯಲ್ಲಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಇದಕ್ಕೆ ಭವ್ಯವಾದ ಪರಂಪರೆಯಿಲ್ಲವಾದರೂ ಪರಂಪರೆ ನಿರ್ಮಿಸುವ ನೆಲೆಯಲ್ಲಿ ಅಸಂಖ್ಯಾತ ಗಜಲ್ ಕಾರರು ಗಜಲ್ ದುನಿಯಾದಲ್ಲಿ ಸಕ್ರಿಯವಾಗಿದ್ದಾರೆ. ಅಂತಹ ಗಜಲ್ ಕಾರರಲ್ಲಿ ಶ್ರೀ ಸಂಗಮೇಶ ಬಾದವಾಡಗಿ ಯವರೂ ಒಬ್ಬರು.
ಸಾಹಿತಿ, ಸಂಘಟಕ ಹಾಗೂ ಸಾಂಸ್ಕೃತಿಕ ಲೋಕದ ಸೇತುವೆಯಾದ ಸಂಗಮೇಶ ಬಾದವಾಡಗಿ ಯವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ಗ್ರಾಮದ ಕೃಷಿ ಮನೆತನದಲ್ಲಿ ೧೯೫೧ರ ಫೆಬ್ರವರಿ ೦೨ ರಂದು ಜನಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರಗಿಯಿಂದ ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಇವರು ಶಿಕ್ಷಣ ಇಲಾಖೆ, ಆಹಾರ ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಂಪಾದನೆ, ಚುಟುಕು, ಕಥೆ, ಪ್ರವಾಸ ಕಥನ, ಪ್ರಬಂಧ, ಕಾವ್ಯ, ಜಾನಪದ ಹಾಗೂ ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುತ್ತ ಕನ್ನಡ ವಾಙ್ಮಯ ಲೋಕಕ್ಕೆ ಹಲವಾರು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ‘ತುಂತುರು’, ‘ಹನಿ ಹನಿ’, ಎಂಬ ಚುಟುಕು ಕವನ ಸಂಕಲನಗಳು, ‘ಕಡತ ಕಥೆ ಹೇಳ್ತಾವ ನೋಡಾ’ ಎಂಬ ಕಥಾಸಂಕಲನ, ಮಲೇಷಿಯಾ ಸಿಂಗಾಪೂರ ಪ್ರವಾಸ ಕಥನ, ‘ಗುಂಗಿಹುಳ’ ಎಂಬ ಪ್ರಬಂಧ ಸಂಕಲನ, ‘ಮೂರಂಕಣದ ಮನೆ’ ಎಂಬ ಕವನ ಸಂಕಲನ, ‘ಜರತಾರಿ ಸೀರೆಗೆ ರೇಶಿಮೆ ಸೆರಗ’ ಎಂಬ ಜಾನಪದ ಹಾಡುಗಳ ಸಂಕಲನ, ‘ಚೈತ್ರ’, ‘ಕಲ್ಯಾಣ ಕರ್ನಾಟಕ’, ‘ರೊಟ್ಟಿ ಪಂಚಮಿ’, ‘ವ್ಹಾ! ಮೇರಿ ಕನ್ನಡ ಶಾಯರಿ’ ಎಂಬ ಮುಂತಾದ ಸಂಪಾದನೆ ಹಾಗೂ ‘ಜೀವನ್ಮುಖಿ’ ಎಂಬ ಗಜಲ್ ಸಂಕಲನಗಳನ್ನು ಹೆಸರಿಸಬಹುದು.
ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಆನಂದವನ್ನು ಅರಸುವ ಶ್ರೀ ಸಂಗಮೇಶ ಬಾದವಾಡಗಿ ಯವರು ಸಂಘಟನಾ ಚತುರರೂ ಹೌದು. ಇವರು ಹಲವಾರು ಸಂಘ, ಸಂಸ್ಥೆಗಳ ಪದಾಧಿಕಾರಿಗಳಾಗಿದ್ದು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅವುಗಳಲ್ಲಿ ಸಾಹಿತ್ಯ ಸಮ್ಮೇಳನಗಳು, ವಚನ ಸಾಹಿತ್ಯ ಸಮಾವೇಶ, ಪ್ರಾಚೀನ ಕನ್ನಡ ಸಮಾವೇಶ, ದಾಸ ಸಾಹಿತ್ಯ ಸಮಾವೇಶ, ಅಖಿಲ ಭಾರತ ಬಹುಭಾಷಾ ಸೌಹಾರ್ದ ಸಮಾರಂಭ, ಭಾಷಾ ಭಾವೈಕ್ಯದ ಕವಿಗೋಷ್ಠಿ, ಕೊಪ್ಪಳ ಜಿಲ್ಲಾ ಸಾಂಸ್ಕೃತಿಕ ಉತ್ಸವ, ಗಜಲ್ ಕಮ್ಮಟ.. ಪ್ರಮುಖವಾಗಿವೆ. ಇವುಗಳ ಜೊತೆ ಜೊತೆಗೆ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹಾಗೂ ವಿದೇಶಗಳಲ್ಲಿ ಆಯೋಜಿಸಿದ್ದ ಹಲವಾರು ಗೋಷ್ಠಿಗಳಲ್ಲಿ ವಾಚನ, ವಿಷಯ ಮಂಡನೆ, ಅಧ್ಯಕ್ಷತೆ ವಹಿಸಿ ತಮ್ಮ ಜ್ಞಾನದ ಕ್ಷಿತಿಜವನ್ನು ಪಸರಿಸಿದ್ದಾರೆ. ಇಂಥಹ ಸಾಂಸ್ಕೃತಿಕ ಲೋಕದ ಸವ್ಯಸಾಚಿ ಶ್ರೀ ಸಂಗಮೇಶ ಬಾದವಾಡಗಿ ಯವರಿಗೆ ನಾಡಿನ ಸರಕಾರಿ, ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಗೋರುರು ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗಡಿನಾಡು ಧ್ವನಿ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಸಾಹಿತ್ಯ ಸಂಭ್ರಮ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಕುವೆಂಪು ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ… ಮುಂತಾದ ಪ್ರಶಸ್ತಿಗಳೊಂದಿಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಕ್ಕೆ ಭಾಜನರಾಗಿದ್ದಾರೆ.
ದ್ವೇಷವು ತುಂಬಾ ಭಾರವಾಗಿದ್ದು ಸರಳವಾಗಿ ಹೊರಲಾಗದು. ಅಂತೆಯೇ ನಾವು ಪ್ರೀತಿಗೆ ಅಂಟಿಕೊಳ್ಳುವ ಅಗತ್ಯವಿದೆ. ಪ್ರೀತಿಯಲ್ಲಿರುವ ಇಬ್ಬರು ವ್ಯಕ್ತಿಗಳು ಏಕಾಂಗಿಯಾಗಿ ಪ್ರಪಂಚದಿಂದ ಪ್ರತ್ಯೇಕವಾಗಿದ್ದು ಸುಂದರವಾದ ಜೀವನವನ್ನು ಸಾಗಿಸುತ್ತಿರುತ್ತಾರೆ. ಪ್ರೀತಿಯಲ್ಲಿಯ ಏಕಾಂಗಿತನ, ಪ್ರತ್ಯೇಕತನವನ್ನು ಉಸಿರಾಡುತ್ತಿರುವ ಕಾವ್ಯ ಪ್ರಕಾರವೆ ‘ಗಜಲ್’. ಪ್ರಣಯದ ಮೂಲತತ್ವವಾದ ಅನಿಶ್ಚಿತತೆ ಗಜಲ್ ನ ಜೀವಾಳ. ಹುಚ್ಚುತನವಿಲ್ಲದ್ದು ಯಾವತ್ತೂ ಪ್ರೀತಿಯಾಗಲಾರದು. ಬದುಕಿನ ಬಗ್ಗೆ ಇರುವ ಇಂಥಹ ಹುಚ್ಚುತನ, ಪ್ರೀತಿಸಲು ಸಾಧ್ಯವಾಗದ ಸಂಕಟದಂತಹ ಜಹನ್ನಮ್ ಸಶಕ್ತ ಅಶಅರ್ ರಚನೆಗೆ ಕಾರಣವಾಗುತ್ತದೆ. ಇದೊಂದು ಪವಿತ್ರ ಝಂಝಂ. ಪ್ರೀತಿಸಲು, ಪೂಜಿಸಲು, ನೋವನ್ನು ನುಂಗಲು-ಮರೆಯಲು ಕಲಿಸಿಕೊಡುವ ಉಸ್ತಾದ್. ಈ ನೆಲೆಯಲ್ಲಿ ಗಜಲ್ ಗೋ ಶ್ರೀ ಸಂಗಮೇಶ ಬಾದವಾಡಗಿ ಯವರ ಗಜಲ್ ಗಳನ್ನು ಗಮನಿಸಿದಾಗ ನವಿರಾದ ಪ್ರೀತಿಯ ಆಯಾಮಗಳೊಂದಿಗೆ ಸಾಮಾಜಿಕ ವ್ಯವಸ್ಥೆಯ ಕುರುಹು, ವಿಡಂಬನೆ, ಪ್ರಗತಿಪರ ಚಿಂತನೆ, ಹಾಸ್ಯ ಪ್ರಜ್ಞೆ, ಸ್ತ್ರೀ ಸಂವೇದನೆ, ಬದುಕಿನ ಕ್ಷಣಭಂಗುರತೆ, ತಾತ್ವಿಕ ಚಿಂತನೆ, ಮೌಢ್ಯತೆಯ ಖಂಡನೆ, ರಾಜಕೀಯ ವ್ಯವಸ್ಥೆಯ ಅರಾಜಕತೆ.. ಮುಂತಾದ ವೈವಿಧ್ಯಮಯ ವಿಷಯಗಳ ಹೂರಣವನ್ನು ಆಸ್ವಾದಿಸಬಹುದು.
ಬಯಲಲ್ಲಿ ಬೆತ್ತಲಾಗುವ ಪರಿ ಮನುಷ್ಯನ ಜೀವನವನ್ನು ರೂಪಿಸುತ್ತದೆ. ಹಾಗಂತ ಇದು ಸಾರ್ವತ್ರಿಕವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ. ಇಂಥಹ ವಿವಿಧ ಮಗ್ಗುಲಗಳನ್ನು ಗಜಲ್ ತನ್ನ ಅಶಅರ್ ನಲ್ಲಿ ಪೋಷಿಸುತ್ತ ಬಂದಿದೆ. ಈ ದಿಸೆಯಲ್ಲಿ ಗಜಲ್ ಅಧ್ಯಾತ್ಮ ಮತ್ತು ಫಿಲಾಸಫಿಯನ್ನು ತುಂಬಾ ನವೀರಾಗಿ ಪ್ರಚುರಪಡಿಸುತ್ತದೆ. ಗಜಲ್ ನಷ್ಟು ಆಳವಾದ ತತ್ವಶಾಸ್ತ್ರವನ್ನು ಹೇಳುವ ಕಾವ್ಯದ ಮತ್ತೊಂದು ಪ್ರಕಾರ ಇಲ್ಲ ಎಂಬುದಕ್ಕೆ ಇದರ ಪರಂಪರೆಯೇ ಸಾಕ್ಷಿ. ಇಲ್ಲಿ ಸುಖನವರ್ ಅವರು ತಮ್ಮ ಅಗಾಧವಾದ ಅನುಭವದಿಂದ ಬದುಕಿನ ನಶ್ವರತೆಯನ್ನು ಗಜಲ್ ಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಈ ಕೆಳಗಿನ ಷೇರ್.
“ನಾದಬೇಕು, ನಾದಬೇಕು, ದೇಹ ನಾದಬೇಕು
ಮೋಹ ಬಿಟ್ಟು ಪರೋಪಕಾರದ ಬುದ್ಧಿ ಬರಲು ನಾದಬೇಕು”
ಬಾಳು ಅನಿಶ್ಚಿತತೆಯ ಕಡಲು. ಇಲ್ಲಿ ಯಾವುದಕ್ಕೂ ಬ್ಲ್ಯೂಪ್ರಿಂಟ್ ಇಲ್ಲ. ಹಾಗೆ ಎಲ್ಲವೂ ಆ ಕ್ಷಣದ ಪ್ರತಿಫಲವೆಂಬಂತೆ ರೂಪುಗೊಳ್ಳುತ್ತಿರುತ್ತದೆ. ಈ ಷೇರ್ ನಲ್ಲಿಯ ‘ನಾದಬೇಕು’ ಎಂಬ ಪದ ಬಹುರೂಪಿ ಅರ್ಥ ಬಾಹುಳ್ಯ ಹೊಂದಿದೆ. ಇದರೊಂದಿಗೆ ಅರಿಷಡ್ವರ್ಗಗಳನ್ನು ದಾಟಿಕೊಂಡು ಮಾನವೀಯ ಮೌಲ್ಯಗಳ ಅಡಿಯಲ್ಲಿ ಜೀವನವನ್ನು ಸಾಗಿಸುವ ರಿವಾಜು ಪ್ರತಿಫಲಿತವಾಗಿದೆ.
ಸಾಮರಸ್ಯ ಶುದ್ಧ ಪ್ರೀತಿಯ ಸಂಕೇತ. ಇದರಿಂದ ಹುಟ್ಟುವ ಎಲ್ಲವೂ ಸೌಂದರ್ಯದ ಕಾಂತಿಯಿಂದ ಬೆಳಗುತ್ತದೆ. ಪ್ರೀತಿಗೆ ಯಾವುದೇ ಸಂಸ್ಕೃತಿ, ಗಡಿ, ಜನಾಂಗ ಮತ್ತು ಧರ್ಮವಿಲ್ಲ. ಧನದ ಎಲ್ಲೆ ಇಲ್ಲ. ಇದು ಸರೋವರದಲ್ಲಿ ಬೀಳುವ ಸೂರ್ಯೋದಯದಂತೆ ಶುದ್ಧ ಮತ್ತು ಸುಂದರವಾಗಿರುತ್ತದೆ. ಧೈರ್ಯವಾಗಿ, ನೆಮ್ಮದಿಯಿಂದ ಬದುಕುವುದು ಎಂದರೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಬೇಷರತ್ತಾಗಿ ಪ್ರೀತಿಸುವುದು. ಅಂತೆಯೇ ಪ್ರೀತಿ ಎನ್ನುವಂತದ್ದು ಸಂಪೂರ್ಣ ಒಪ್ಪಂದದ ಶಿಶು. ಇಂಥಹ ಪ್ರೀತಿಯ ಹೆಜ್ಜೆ ಗುರುತುಗಳನ್ನು ಈ ಕೆಳಗಿನ ಷೇರ್ ನಲ್ಲಿ ಗುರುತಿಸಬಹುದು. ಇಲ್ಲಿ ‘ಒರತೆ’ ಮತ್ತು ‘ಕಡಲು’ ಒಂದಕ್ಕೊಂದು ಸಾದೃಶ್ಯವಾಗಿ ಮೂಡಿಬಂದಿವೆ. ಪ್ರೀತಿಯಿದ್ದರೆ ಎಲ್ಲವೂ ಅನುಪಮವಾಗಿ ಕಂಗೊಳಿಸುತ್ತದೆ ಎಂಬುದನ್ನು ಹೇಳುತ್ತಲೇ ಶಾಯರ್ ಸಂಗಮೇಶ ಬಾದವಾಡಗಿ ಯವರು ಪ್ರೀತಿಯ ಪಂಚಮವೇದವನ್ನು ಸಹೃದಯ ಓದುಗರ ಎದೆಗೆ ಇಳಿಸಿದ್ದಾರೆ.
“ಒರತೆಯಲಿ ಜಿನುಗುವ ನೀರನ್ನೇ ಕಡಲಾಗಿ ಕುಡಿದೆವು
ಪಿರೂತಿಯಿಂದ ಅಂಗೈಯಲಿ ಆಕಾಶವನೇ ಅಳೆದೆವು”
ನಮ್ಮ ಬದುಕಿನ ಮೂಲ ಪಿಲ್ಲರ್ ಗಳೆಂದರೆ ನಂಬಿಕೆ, ಭರವಸೆ ಮತ್ತು ಪ್ರೀತಿ. ಇವುಗಳಲ್ಲಿ ಶ್ರೇಷ್ಠವಾದದ್ದು ಮಾತ್ರ ಚಿರನೂತನ ಪ್ರೀತಿ. “ಎಲ್ಲಿ ಪ್ರೀತಿ ಇದೆಯೋ ಅಲ್ಲಿದೆ ಜೀವನ” ಎಂಬ ಮಹಾತ್ಮ ಗಾಂಧೀಜಿಯವರ ಹೇಳಿಕೆ ಪ್ರೀತಿಯ ವ್ಯಾಪಕತೆಯನ್ನು ಸಾರುತ್ತದೆ. ಇಂಥಹ ಪ್ರೀತಿಯ ಅನ್ವರ್ಥಕವಾದ ‘ಗಜಲ್’ ಕಾವ್ಯ ಪ್ರಕಾರವು ಸುಖನವರ್ ಶ್ರೀ ಸಂಗಮೇಶ ಬಾದವಾಡಗಿ ಯವರಿಂದ ಮತ್ತಷ್ಟು ಸಮೃದ್ಧವಾಗಿ ಬೆಳೆಯಲಿ ಎಂದು ಶುಭ ಕೋರುತ್ತೇನೆ.
“ಜಗತ್ತಿನಲ್ಲಿ ಯಾರೂ ನನ್ನಂತೆ ಮುಗ್ಧರು ಇರಬಾರದು
ಪ್ರೀತಿಸಿಯೂ ಹೇಳುತ್ತಾನೆ ನಷ್ಟ ಆಗಬಾರದು”
–ಸಾದುಲ್ಲಾಹ ಶಹಾ
ಮನುಷ್ಯನ ಮನಸು ಹಲವು ಏರಿಳಿತಗಳ ಝರಿ. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ಅ ನಾಕದಲ್ಲಿ ಅಲೆದಾಡುತ್ತಿರಬೇಕಾದರೆ ದಿನದ ೨೪ ಗಂಟೆಗಳೂ ಕಡಿಮೆ ಅನಿಸುತ್ತವೆ. ಒಲ್ಲದ ಮನಸ್ಸಿನಿಂದಲೇ ಕಾಲದ ಮುಂದೆ ಮಂಡಿಯೂರಿರುವೆ.. ಅನಿವಾರ್ಯವಾಗಿ ಇಂದು ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮುಂದಿನ ಗುರುವಾರ ಮತ್ತೇ ಬರುವೆ..ಹೋಗಿ ಬರಲೆ….!!
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ