ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಕಾರ್ಯಕರ್ತರ ಬೆವರಹನಿಗಳು-

ಅಧಿಕಾರದಲ್ಲಿರುವವರ ಸಡಗರವೂ

ಕಾರ್ಯಕರ್ತರ ಬೆವರಿನ ಹನಿಗಳ ಒಲವಿನಲ್ಲಿ ಅಧಿಕಾರವೆರುವವರ ಸಡಗರ ಅಡಗಿದೆ…

ಅವನು,  ಆ ಪಕ್ಷಕ್ಕಾಗಿ, ಸಂಸ್ಥೆಗಾಗಿ ಮನೆಯನ್ನೇ ತೊರೆದು, ಹಗಲು – ರಾತ್ರಿ ಎನ್ನದೆ ಊರಿಂದ ಊರಿಗೆ ಅಲೆದು ಪಕ್ಷದ ಅಥವಾ ಸಂಸ್ಥೆಯ ಧ್ವಜವನ್ನು ಬೀಸುತ್ತಾ, “ಸಂಸ್ಥೆಗೆ ಜಯವಾಗಲಿ” ನಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಸದಾ ಹಂಬಲಿಸುತ್ತಾನೆ. ಈ ರೀತಿಯಲ್ಲಿ ಪ್ರಚಾರ ಮಾಡುವ ವೈಖರಿ ಎಲ್ಲರನ್ನೂ ನಿಬ್ಬೆರಗಾಗಿಸುತ್ತದೆ.

ಇರ್ನೋವ ವ್ಯಕ್ತಿಯು ಟಿವಿ ಚಾನಲ್ಲಿನಲ್ಲಿ ತನ್ನ ಪಕ್ಷವನ್ನು ಪ್ರತಿನಿಧಿಸಿ, ತನ್ನ ಪಕ್ಷದ ತತ್ವ – ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾನೆ.  ಪಕ್ಷದ ಅಧಿಕಾರಸ್ಥರು ತಪ್ಪು ಮಾಡಿದ್ದರೂ ಅದನ್ನು ಸಮರ್ಥಿಸಿಕೊಳ್ಳುತ್ತಲೇ ಸದಾ ಪಕ್ಷಕ್ಕಾಗಿ ಹಗಲಿರಳು ಶ್ರಮವಹಿಸಿ ದುಡಿಯುವುದನ್ನು ಕಂಡಾಗ ನಿಜವಾಗಿಯೂ ಇಂತಹ ಕಾರ್ಯಕರ್ತರ ಪಡೆಯು  ಆ ಸಂಸ್ಥೆ ಅಥವಾ ಪಕ್ಷಕ್ಕೆ ಇರುವುದು ಹೆಮ್ಮೆಯ ವಿಷಯವೆನಿಸುತ್ತದೆ…

 ಈ ಮೇಲಿನ ಎರಡು ಪ್ರಕರಣಗಳನ್ನು ನಾವು ಗಮನಿಸಿದಾಗ

ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಲು, ಕಾರ್ಯಕ್ರಮದಲ್ಲಿರುವ ಮುಖ್ಯ ಅತಿಥಿಗಳಾಗಲಿ, ಅತಿಥಿಗಳಾಗಲಿ ಮುಖ್ಯವೆನಿಸುವುದಿಲ್ಲ. ಹಾಗಾದರೆ ಕಾರ್ಯಕ್ರಮದ ಯಶಸ್ವಿಗೆ ಕಾರಣರು ಯಾರು..?  ಎಂದು ನಾವು ಅವಲೋಕನ ಮಾಡಿದಾಗ ಆ ಕಾರ್ಯಕ್ರಮಕ್ಕಾಗಿ ತಮ್ಮ ಕುಟುಂಬವನ್ನು ಮರೆತು ಹಗಲಿರಲು ಶ್ರಮಿಸುತ್ತಿರುವ ಸೇವಾ ಕಾರ್ಯಕರ್ತರನ್ನಬಹುದು.  ಒಂದು ಪಕ್ಷ ಇರಲಿ, ಒಂದು ಸಂಘಟನೆ ಇರಲಿ, ಯುವಕ ಸಂಘಗಳಲ್ಲಿ ಅಥವಾ ಒಂದು ಸಂಸ್ಥೆಯಿರಲಿ, ಆ ಒಂದು ಸಂಸ್ಥೆಯ ಅಭಿವೃದ್ಧಿಯ ಬುನಾದಿ ಎಂದರೆ ನಿರಂತರವಾಗಿ ಬೆವರು ಹರಿಸಿ ದುಡಿಯುತ್ತಿರುವ ಕಾರ್ಯಕರ್ತರು ಅಥವಾ ಸೇವಾ ಕಾರ್ಯಕರ್ತರು ಎಂದು ಕರೆಯಬಹುದು. ಒಂದು ಕಾರ್ಯಕ್ರಮ ಯಶಸ್ವಿಗೆ ಒಂದು ಸಂಸ್ಥೆಯ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವುದಕ್ಕೆ ಮುಖ್ಯ ಕಾರಣವೆಂದರೆ ಆ ಸಂಸ್ಥೆಯಲ್ಲಿ ದುಡಿಯುವ ಕಾರ್ಯಕರ್ತರು ಅಥವಾ ಸೇವಾ ನಿರತರು ಎಂದು ನಿರ್ಧರಿಸಬಹುದು.

ಒಂದು ಸಂಸ್ಥೆಯ  ಸ್ವಚ್ಛತೆ, ಸುಂದರತೆ, ಹೆಸರು ಗಳಿಸುವಿಕೆ ಎಲ್ಲದರಲ್ಲಿಯೂ ಅಚ್ಚುಕಟ್ಟುತನದ ಶಿಸ್ತನ್ನು ರೂಡಿಸಿಕೊಳ್ಳುವುದರ ಜೊತೆಗೆ ಅದನ್ನು ಕಾರ್ಯಗತ ಮಾಡುವ ಹೊಣೆಗಾರಿಕೆಯನ್ನು ಅಲ್ಲಿಯ ನಿಸ್ವಾರ್ಥ ಸೇವಾ ಕಾರ್ಯ ಅಗಾಧವಾದದ್ದು.

ಒಂದು ಪಕ್ಷದ ಸದಸ್ಯರಾಗಿ ಇಲ್ಲವೇ ಒಂದು ಸಂಸ್ಥೆಯ ಸದಸ್ಯತ್ವದ  ಮೂಲಕ ಪ್ರವೇಶ ಪಡೆದವರು, ಗುರುತರವಾದ ಜವಬ್ದಾರಿಯ ಹಾಗೂ ದೊಡ್ಡ ಪ್ರಮಾಣದಲ್ಲಿ ಕನಸನ್ನು ಕಾಣುತ್ತಾರೆ.

“ಮುಂದೆ ನಾನು ಈ ಸಂಸ್ಥೆಯ ಇಲ್ಲವೆ ಪಕ್ಷದ ಪ್ರಮುಖ ನಾಯಕನಾಗುತ್ತೇನೆ”.

ನಾನು ಪಕ್ಷಕ್ಕಾಗಿ, ಸಂಸ್ಥೆಗಾಗಿ ತನು ಮನ ಧನದಿಂದ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ” ಎಂದು ಪ್ರತಿಜ್ಞೆಗೆಯುತ್ತಾನೆ. ಆ ಸಂಸ್ಥೆಯ ಕಚೇರಿಯ ಕಸವನ್ನು ಗೂಡಿಸಿ ಅಂದ ಚಂದಗೊಳಿಸುತ್ತಾನೆ. ತನ್ನ ಪಕ್ಷದ ಇಲ್ಲವೇ ಸಂಸ್ಥೆಯ ಗುರಿ ದಯೋದ್ದೇಶಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪ್ರಚುರ ಪಡಿಸುತ್ತಾನೆ. ಸದಾ ಆ ಸಂಸ್ಥೆಯ ಏಳಿಗೆಗಾಗಿ ಹಗಲಿರಲು ದುಡಿದಯುತ್ತಾರೆ.  ಆ ಸಂಸ್ಥೆಯ ಮುಖ್ಯಸ್ಥರು ಸೂಚಿಸುವ ಎಲ್ಲ ರೀತಿಯ ಕೆಲಸಗಳನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ಹಂತ ಹಂತವಾಗಿ ಸಂಸ್ಥೆಯ ಪದಾಧಿಕಾರಿ ಆಗುತ್ತೇನೆ ಎನ್ನುವ ಭರವಸೆಯೂ ಕೆಲವು ಸಲ ಕೆಲವು ವ್ಯಕ್ತಿಗಳಿಗೆ ಮರಿಚಿಕೆಯಾದಾಗ ತುಂಬಾ ನೊಂದುಕೊಳ್ಳುತ್ತಾರೆ.

 ಹಾಗಾಗಬಾರದು..

 ಒಬ್ಬ ವ್ಯಕ್ತಿಯ ಶ್ರಮವನ್ನು, ದುಡಿಮೆಯನ್ನು ಆ ಸಂಸ್ಥೆಯ ಮುಖ್ಯಸ್ಥರಾದವರು ಅವಲೋಕಿಸುತ್ತಿರಬೇಕು.  ಸಂದರ್ಭ ಬಂದಾಗ ಅವರ ಸೇವೆಯನ್ನು ಗುರುತಿಸಿ ತಕ್ಕುದಾದ ಹುದ್ದೆಯನ್ನು ಪದಾಧಿಕಾರಿಗಳ ಪಟ್ಟಿಯಲ್ಲಿ ಅವರಿಗೆ ನೀಡಿ, ನ್ಯಾಯ ಒದಗಿಸಿದರೇ ಮಾತ್ರ ಅವರಿಗೆ ಸಾರ್ಥಕ ಭಾವ ಬರುತ್ತದೆ.  ಇಲ್ಲದೆ ಹೋದರೆ ಅವರು ನೊಂದುಕೊಂಡು, “ಇಷ್ಟು ದಿನ ಮಾಡಿದ ಕೆಲಸ ವ್ಯರ್ಥವಾಯಿತಲ್ಲ..” ಎಂದು ಕೈ ಚೆಲ್ಲುವುದಿಲ್ಲ

ಅಧಿಕಾರ ಬರುತ್ತದೆ ಅಥವಾ ಹೋಗುತ್ತದೆ. ಆದರೆ ಅಧಿಕಾರ ಬಂದಾಗ ತಾನು ಅಧಿಕಾರ ಬರಲು ಕಾರಣರಾದವರ ಪರಿಶ್ರಮವನ್ನು ಮರೆಯದೆ ಇರಬೇಕಾದದ್ದು, ಅಧಿಕಾರ ನಡೆಸುವ ಅಧಿಕಾರಸ್ತರ ಜವಾಬ್ದಾರಿಯುತ  ನೈತಿಕ ಹೊಣೆಗಾರಿಕೆ. ಅಂತಹ ನೈತಿಕ ಹೊಣೆ ಹೊತ್ತವರು ಯಾವತ್ತಿಗೂ ಕಾರ್ಯಕರ್ತರಿಗೆ ಸೇವಾ ಮನೋಭಾವದ ಕ್ರಿಯಾಶೀಲ ಸೇವಕರಿಗೆ ಮೋಸ ಮಾಡುವುದಿಲ್ಲ. 

ಚುನಾವಣೆ ಬಂದಾಗ ಮಾತ್ರ ನೆನಪಾಗುವ ಜನಗಳು, ಮತ್ತು ನೆನಪಾಗುವ ಕಾರ್ಯಕರ್ತರು ಮತ್ತೆ ಅಧಿಕಾರ ಹಿಡಿದ ಮೇಲೆ ಕಣ್ಣೆತ್ತಿ ನೋಡದ ಅಧಿಕಾರಸ್ತ ರಾಜಕಾರಣಿಗಳ ಗತ್ತು ಗೈರತ್ತು ಸ್ವಾರ್ಥ ಇರುವ ರಾಜಕೀಯ ಮುಖಂಡರು ಇಂದು ಸರ್ವೇ ಸಾಮಾನ್ಯವಾಗಿದ್ದಾರೆ. ಅದು ಪ್ರಜಾಸತ್ತಾತ್ಮಕ  ಮೌಲ್ಯವುಳ್ಳ ಸಂಸ್ಥೆಯ ಅಥವಾ ಪಕ್ಷದ ಒಳ್ಳೆಯ ಬೆಳವಣಿಗೆಯಲ್ಲ. ಜನರ ನೋವು ನಲಿವುಗಳಿಗೆ ಸದಾ ಸ್ಪಂದಿಸಿದರೇ ಮಾತ್ರ ಪಕ್ಷದ ಕಾರ್ಯಕರ್ತರು ಜನರ ಬಳಿಗೆ ಹೋಗಲು ಸಾಧ್ಯ.

ಅದೇನೆ ಇರಲಿ…

ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಪಕ್ಷದ ಅಥವಾ ಸಂಸ್ಥೆಯ ನಿಜವಾದ ಬಂಡವಾಳ ಎಂದರೆ ದುಡ್ಡಲ್ಲ. ನಿಜವಾದ ಬಂಡವಾಳವೆಂದರೇ ಕಾರ್ಯಕರ್ತರು..!! ಜನರ ಮನಸ್ಸನ್ನು ಗೆದ್ದು, ಕಾರ್ಯಕರ್ತರಿಗೆ ಸ್ಥಾನಮಾನ ನೀಡಿ ಗೌರವಿಸಿದರೇ ಅವರ ಒಲವನ್ನು ಗಳಿಸಬಹುದು. ಅಂತಹ ಒಲವಧಾರೆಯು ಪ್ರಜಾಪ್ರಭುತ್ವದ ಪ್ರಗತಿ ಪೂರಕವಾಗಬಲ್ಲದು. “ಪ್ರಜೆಗಳ ಪ್ರಗತಿಯೇ” ಪ್ರಜಾಪ್ರಭುತ್ವದ ನೈತಿಕತೆಯ ಅಂತಿಮ ಸತ್ಯ. ಅಂತಹ ಸತ್ಯವು ಕಾರ್ಯಕರ್ತರ ಶ್ರಮವು ಒಲವನ್ನು ಹೊಂದಲೆಂದು ಆಶಿಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

One thought on “

Leave a Reply

Back To Top