ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
:ರಂಗಭೂಮಿಗಾಗಿ ಬದುಕನ್ನೇ ತೇಯ್ದ
ರಂಗಜಂಗಮರ ನೋವಿನ ಯಾತನೆಗಳು
:ರಂಗಭೂಮಿಗಾಗಿ ಬದುಕನ್ನೇ ತೇಯ್ದ ರಂಗಜಂಗಮರ ನೋವಿನ ಯಾತನೆಗಳು..
ಬಣ್ಣದ ಬದುಕಿನ ಹಿಂದೆ ಬವಣೆಯ ಬದುಕೂ ಇದೆ
ಆಧುನಿಕ ಕಾಲಘಟ್ಟದಲ್ಲಿ ಯೂಟ್ಯೂಬ್, ಆಂಡ್ರಾಯ್ಡ್ ಮೊಬೈಲ್, ಸಿನಿಮಾ, ಟಿವಿ ಮುಂತಾದ ಸಮೂಹ ಮಾಧ್ಯಮಗಳು ಜನರ ಬದುಕಿನಲ್ಲಿ ಹಾಸುಕ್ಕಾಗಿರುವುದರಿಂದ ಇಂದು ಮನೋರಂಜನೆಗೆ ಕೊರತೆಯೇ ಇಲ್ಲ. ಅತ್ಯಂತ ಅಗ್ಗದಲ್ಲಿ ಎಲ್ಲರ ಕೈಯಲ್ಲಿಯೂ ಹಾಸ್ಯದ ವಿಡಿಯೋಗಳು, ಸಂಶೋಧನಾ ವಿಡಿಯೋಗಳು, ಸುದ್ದಿ ಜಗತ್ತನ್ನು ಕೂತೂಹಲದಿಂದ ಕುಳಿತಲ್ಲಿಯೇ ಕೇಳಬಹುದು ಮತ್ತು ನೋಡಬಹುದಾಗಿದೆ.
ಇಂದಿನ ಟಿವಿ ಪ್ರಪಂಚದಲ್ಲಿ ಸ್ಪರ್ಧಾತ್ಮಕ ವೇಗದಲ್ಲಿ ಟಿ ಆರ್ ಪಿಗೋಸ್ಕರ ತಾ ಮುಂದು ನಾ ಮುಂದು ಎಂದು ವಿಷಯಗಳನ್ನು ಬಿತ್ತರಿಸುತ್ತಾ, ಜನರಿಗೆ ವಾಕರಿಕೆ ಬರುವಷ್ಟು ಚಾನೆಲ್ ಗಳು ಬಂದಿರುವುದು ಆಧುನಿಕ ಜೀವನದ ವಾಸ್ತವಿಕ ಸತ್ಯ.
ಆದರೆ…
ಹಿಂದೆ ಗ್ರಾಮೀಣ ಜನರಿಗಾಗಲಿ, ನಗರದ ಜನರಿಗಾಗಿ ಮನರಂಜನೆ ಎನ್ನುವುದು ಕೇವಲ ನಾಟಕ, ಬಯಲಾಟ, ಯಕ್ಷಗಾನ, ಸರ್ಕಸ್, ದೊಂಬರಾಟಗಳಂತಹ ಚಿಕ್ಕ ಚಿಕ್ಕ ಮನೋರಂಜನ ಸಂಸ್ಥೆಗಳು ಪೂರೈಸುತ್ತಿದ್ದವು. ಅವುಗಳು ಪ್ರತಿ ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಕಲಾವಿದರು, ಕಂಪನಿ ಸಹಿತ ಹೋಗಿ ತಮ್ಮ ಕಲೆಯನ್ನು ಪ್ರದರ್ಶಿಸಿ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದರು. ಅತ್ಯಂತ ಕಡಿಮೆ ಬೆಲೆಯ ಟಿಕೆಟ್ ಗಳನ್ನಾಗಲಿ ಅಥವಾ ಗ್ರಾಮದ ಜನರು ಕೊಡುವ ದವಸ ಧಾನ್ಯಗಳನ್ನು ಸ್ವೀಕರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ‘ಜೀವನವೇ ಕಲೆಯಾಗಿತ್ತು ; ಕಲೆಯೇ ಜೀವನವಾಗಿತ್ತು.
ಅಂದಿನ ಪ್ರತಿಭೆಗಳಿಗೆ ರಂಗಭೂಮಿಯ ಬಣ್ಣವು ಆಕರ್ಷಣೀಯ ಕೇಂದ್ರವಾಗಿತ್ತು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತಂದೆ ತಾಯಿಗಳನ್ನು ವಿರೋಧಿಸಿಕೊಂಡು ಮನೆಯನ್ನು ತೊರೆದು ನಾಟಕ ಕಂಪನಿಗಳನ್ನು ಸೇರಿಕೊಂಡು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಪಾತ್ರ ಮಾಡುವಾಗ ಯಾವುದೇ ಷರತ್ತು ಇಲ್ಲದೆ ಅವರು ಕೊಡುವ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಲೇ ಜೀವನ ನಿರ್ವಹಣೆ ಮಾಡುತ್ತಿದ್ದರು.
“ನಾನು ನಿರ್ವಹಿಸುವ ಪಾತ್ರ ಜನಮನದಲ್ಲಿ ಉಳಿಯಬೇಕು. ನನ್ನ ಕಲೆಯನ್ನು ಮೆಚ್ಚಿ ಜನರು ಕೇ ಕೇಹಾಕಿ ಬೆನ್ನು ತಟ್ಟಬೇಕು”. ಎನ್ನುವ ಮಹಾದಾಸೆ ಪ್ರತಿಯೊಬ್ಬ ಪಾತ್ರಧಾರಿಯಲ್ಲಿ ಇರುತ್ತಿತ್ತು. ಮನೆಯನ್ನು ತೊರೆದು ಬಂದು ತಿಂಗಳು, ಎರಡು ತಿಂಗಳು, ವರ್ಷವಾದರೂ ನಾಟಕ ಕಂಪನಿಯನ್ನು ಬಿಟ್ಟು ಹೋಗುತ್ತಿರಲಿಲ್ಲ.
ಅಂದಿನ ನಾಟಕಗಳು ಕೂಡ ಅಷ್ಟೇ ಜನರ ಬದುಕನ್ನು ಕಟ್ಟಿಕೊಡುತ್ತಿದ್ದವು. ನೈತಿಕ ಮೌಲ್ಯಗಳು, ಸಂಸಾರಿಕ ಸಂಬಂಧಗಳು, ಸ್ನೇಹ ಸಂಬಂಧ, ಬಾಂಧವ್ಯ ಅವೆಲ್ಲವನ್ನೂ ಕಟ್ಟಿಕೊಡುವಲ್ಲಿ ಯಶಸ್ವಿಯಾಗುವದರ ಜೊತೆ ಜೊತೆಗೆ ಮನೋರಂಜನೆಯನ್ನು ಒದಗಿಸಿ, ಬದುಕಿನ ಪಾಠವನ್ನು ಹೇಳಿಕೊಡುವ ಕಥೆಗಳನ್ನು ಹೆಣೆಯುತ್ತಿದ್ದರು.
ನಾಟಕ ಕಂಪನಿಯನ್ನು ನಡೆಸುತ್ತಿದ್ದ ನಾಟಕ ಕಂಪನಿಯ ಮಾಲೀಕರು ತುಂಬಾ ಪರಿಶ್ರಮದಿಂದ ಬಣ್ಣದ ಬದುಕನ್ನು ಕಟ್ಟುತ್ತಿದ್ದರು. ನಾಟಕದ ಕಂಪನಿಯಲ್ಲಿ ಬಣ್ಣ ಹಚ್ಚುವವರಿಂದ, ಟೆಂಟ್ ಕಟ್ಟುವವರು, ವಾದ್ಯ ಮೇಳ, ಹೆಣ್ಣು ಪಾತ್ರಗಳಿಗೆ, ಪುರುಷ ಪಾತ್ರಗಳಿಗೆ, ವ್ಯವಸ್ಥಾಪಕರಿಗೆ, ಬಾಡಿಗೆ ಜಾಗದ ಮಾಲಿಕರಿಗೆ ವೇತನವನ್ನೋ ,ಬಾಡಿಗೆಯನ್ನೋ ಹೊಂದಿಸುವಲ್ಲಿ ಹೈರಾಣಾಗುತ್ತಿದ್ದರು.
ಟೆಂಟ್ ಹಾಕಲು ಬೇಕಾಗುವ ಸಾಮಗ್ರಿಗಳನ್ನು, ನಾಟಕ ಕಂಪನಿಯ ಪಾತ್ರಗಳಿಗೆ ಬೇಕಾಗುವ ಸಾಮಾಗ್ರಿಗಳನ್ನು ಜೋಡಿಸುವ ಧಾವಂತ. ಪಾತ್ರಧಾರಿಗಳು ನಾಟಕದ ಮಧ್ಯ ಬಿಟ್ಟು ಹೋದರೆ ಆ ಪಾತ್ರಕ್ಕೆ ಸರಿ ಹೊಂದುವ ವ್ಯಕ್ತಿಗಳನ್ನು ಹೊಂದಿಸುವ ಕೆಲಸದಲ್ಲಿಯ ಒತ್ತಡಕ್ಕೆ ಒಳಗಾಗುತ್ತಿದ್ದರು. ಇಂತಹ ನೂರಾರು ನೋವುಗಳ ಮಧ್ಯ ನಗಬೇಕು…ಪ್ರೇಕ್ಷಕರನ್ನು ನಗಿಸುತ್ತಲೇ ಇರಬೇಕು.
ಬರುವ ಅಲ್ಪ ಸ್ವಲ್ಪ ಕಾಸನ್ನು ನಾಟಕ ಕಂಪನಿಯ ಪ್ರತಿಯೊಬ್ಬರಿಗೂ ಹಂಚುತ್ತಿದ್ದರು. ನಂತರ ಉಳಿದ ಲಾಭವನ್ನು ಕಂಪನಿಗೆ ಇರಿಸಿಕೊಂಡು ಮುಂದಿನ ನಾಟಕಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಅಂತಹ ಆಕರ್ಷಣೀಯ ಸ್ಥಳ ರಂಗಭೂಮಿ..!! ಆದರೆ ಬಣ್ಣದ ಬದುಕು ಸುಂದರವಾಗಿ ಕಂಡರೂ, ಬವಣೆ ಬದುಕು ಇರೋದು ದುರಂತ. ನಾನು ಪ್ರೌಢಶಾಲಾ ಹಂತದಲ್ಲಿ ಓದುವಾಗ ನಮ್ಮ ಪ್ರೀತಿಯ ಗುರುಗಳಾದ ಟಿವಿ ಮಾಗಳ ಸರ್ ಅವರು “ಬಣ್ಣದ ಬದುಕಿನ ಹಿಂದೆ ಭವಣೆಯ ಬದುಕು ಇದೆ” ಎಂದು ನಮ್ಮನ್ನು ಆಗಾಗ ರಂಗಭೂಮಿಯ ಬಗ್ಗೆ ಹೇಳುತ್ತಿದ್ದರು. ನಿಜವಾಗಿಯೂ ಮನರಂಜನೆ ಸಿಗದಿದ್ದ ಕಾಲಘಟ್ಟದಲ್ಲಿ ರಂಗಭೂಮಿಯ ವಿವಿಧ ಆಯಾಮುಗಳಾದ ಉತ್ತರ ಕರ್ನಾಟಕದಲ್ಲಿ ಬಯಲಾಟ, ದಪ್ಪಿನಾಟ, ದೊಂಬರಾಟ, ಸರ್ಕಸ್, ಆಡಿದರೆ. ದಕ್ಷಿಣ ಕರ್ನಾಟಕದಲ್ಲಿ ಯಕ್ಷಗಾನ ಪ್ರಸಂಗ, ಭೂತದ ಕೋಲು ಕುಣಿತ, ನೃತ್ಯ, ಸುಗ್ಗಿ, ಕೊರವಂಜಿ.. ಹಾಡುಗಳು ಮುಂತಾದವುಗಳೇ ಪ್ರಮುಖ ಮನೋರಂಜನೆಯ ಅಂಶಗಳಾಗಿದ್ದವು.
ಬರ ಬರುತ್ತಾ ನಾಗರೀಕತೆಯ ಬದಲಾವಣೆಯ ಗಾಳಿ ಬೀಸಿದಾಗ ರಂಗಭೂಮಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾದವು. ಜನರ ಆಕರ್ಷಣೆಯು ಕಡಿಮೆಯಾದರೂ ಇವತ್ತಿಗೂ ತಮ್ಮ ಗಟ್ಟಿತನವನ್ನು ರಂಗಭೂಮಿ ಉಳಿಸಿಕೊಂಡಿದೆ. ಈ ನಾಡಿನ ಪ್ರಮುಖ ಮಹತ್ವದ ನಾಟಕ ಕಂಪನಿಗಳು ಇಂದಿಗೂ ಪ್ರದರ್ಶನಗಳನ್ನು ಏರ್ಪಡಿಸುತ್ತಿರುವುದನ್ನು ಕಂಡರೆ ನಾಟಕದ ರಂಗಭೂಮಿಗೆ ತನ್ನದೇ ಆದ ಮಹತ್ವವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಡಾ. ರಾಜಕುಮಾರವರು, ಉಮಾಶ್ರೀಯವರು, ಶಿವರಾಮರವರು…ಮುಂತಾದ ಕಲಾವಿದರು ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ನಮ್ಮ ತಂದೆ ಚನ್ನಬಸಪ್ಪ ಬನ್ನಿಕೊಪ್ಪ ಅವರು ರಂಗಭೂಮಿಯ ಕಲಾವಿದರು, ಸಂಗೀತಗಾರರಾಗಿದ್ದರಿಂದ ಅವರ ಓಡಾಟ, ಕುಟುಂಬದ ಜೊತೆಗಿನ ಸಂಬಂಧ ಇವತ್ತಿಗೂ ಕಣ್ಣಿಗೆ ಕಾಣುವಂತೆ ಇದೆ.
ಏನೇ…ಇರಲಿ
ಈ ಸಮಾಜದ ಪ್ರಗತಿಯಲ್ಲಿ ರಂಗಭೂಮಿ ಕಲಾವಿದರ, ರಂಗಕರ್ಮಿಗಳ ಶ್ರಮ ಅಮೂಲ್ಯವಾದುದು…ಅವರ ಒಲವು ಇಂದಿಗೂ ಸ್ಮರಣೀಯ. ಇಂತಹವರನ್ನು ಒಲವಧಾರೆಯೊಳಗೆ ನೆನೆದು ಅವರಿಗೆ ಶುಭ ಹಾರೈಸೋಣ…
ರಮೇಶ ಸಿ ಬನ್ನಿಕೊಪ್ಪ ಹಲಗೇರಿ