ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಮಮ್ಮಲ ಮರಗುವ ಮನಸಿದ್ದರೆ….

ಮಿಡಿಯುವ ಮನಸಿದ್ದರೆ..ನೂರಾರು ಯೋಜನೆಗಳು ಜಾರಿಗೆ ಬಂದು ಕಾರ್ಯಗತಗೊಳ್ಳಬಲ್ಲವು..

 ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಜಾರಿಗೆ ಬಂದಾಗಿನಿಂದಲೂ ನಮ್ಮ ಪ್ರತಿನಿಧಿಗಳನ್ನು ನಾವೇ ಆರಿಸಿ ಕಳಿಸುತ್ತೇವೆ. ನಮ್ಮ ಪ್ರತಿನಿಧಿಗಳಾದವರು ಸರ್ಕಾರದ ಹಂತದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಬೇಕು.

“ಜೀವಪರ ಮತ್ತು ಜನಪರ”ವಿದ್ದಾಗ ಮಾತ್ರ ಸಮರ್ಪಕವಾದ ಮತ್ತು ಮಾನವೀಯವುಳ್ಳ ಹಲವಾರು ಯೋಜನೆಗಳು ಜಾರಿಗೆ ಬರಬಲ್ಲವು.

 ಜನಪ್ರತಿನಿಧಿಯಾದವರಿಗೆ ಕಷ್ಟಕ್ಕೆ ಮಿಡಿಯುವ ಮನಸ್ಸಿರಬೇಕು.  ಜನರ ಕಷ್ಟ ನೋವು ಸಂಕಟಗಳ ಅರಿವಿರಬೇಕು. ಮಕ್ಕಳು, ಮಹಿಳೆಯರು, ವೃದ್ಧರು, ಅಬಲರು ಮುಂತಾದವರ ಸಂಕಟಗಳು ಗೊತ್ತಿದ್ದಾಗ ಮಾತ್ರ ಮಾನವೀಯ ಮುಖಹೊತ್ತ ಹಲವಾರು ಯೋಜನೆಗಳು ಜಾರಿಗೆ ಬಂದಿರುವುದನ್ನು ನಾವು ಇತಿಹಾಸದಲ್ಲಿ ಕಾಣುತ್ತೇವೆ.

 ಕುಗ್ರಾಮದಿಂದ ಹೈಸ್ಕೂಲಿಗೆ ನಡೆದುಕೊಂಡೆ ಹೋಗುತ್ತಿದ್ದ ಹಲವಾರು ಬಾಲಕ ಬಾಲಕಿಯರನ್ನು ಕಂಡ ಮತ್ತು ತಾವು ಬಾಲ್ಯದಲ್ಲಿಯೇ ಹೈಸ್ಕೂಲಿನ ನೆನಪುಗಳನ್ನು ಮಾಡಿಕೊಂಡು ‘ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ‘ ವ್ಯವಸ್ಥೆ ಮಾಡಿದ್ದು..ನಾಡಿನ ಧೀಮಂತ ಮುಖ್ಯಮಂತ್ರಿಗಳಾಗಿದ್ದ  ಮಾನ್ಯ ರಾಮಕೃಷ್ಣ ಹೆಗಡೆಯವರ ಹೆಗ್ಗಳಿಕೆ. ಇದು ಅವರ ಹೃದಯ ಶ್ರೀಮಂತಿಕೆ…

 ಗ್ರಾಮೀಣ ಜನರು ನೀರು ತರಲು ಎರಡರಿಂದ ಮೂರು ಕಿಲೋಮೀಟರ್ ನಡೆದುಕೊಂಡೆ ಹೋಗಿ ಕೆರೆಯ ನೀರನ್ನು ತುಂಬಿಕೊಂಡು ಅದರಲ್ಲೂ ಗರ್ಭಿಣಿ ಮಹಿಳೆಯರು ಕೂಡ ತುಂಬಿದ ಕೊಡವನ್ನು ಹೊತ್ತುಕೊಂಡು ಮನೆಗೆ ಮರಳುತ್ತಿದ್ದ  ದೃಶ್ಯವನ್ನು  ನೋಡಿದ ಅಂದಿನ ಗ್ರಾಮೀಣಾಭಿವೃದ್ಧಿ ಹಾಗೂ ನೈರ್ಮಲ್ಯದ ಮಂತ್ರಿಗಳಾಗಿದ್ದ  ನಜೀರ್ ಸಾಬರು ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರಿನ ಕೊಳವೆಬಾವಿ ವ್ಯವಸ್ಥೆಯನ್ನು ಮಾಡಿದ್ದು ಅವರ ಅಂತಕರುಣದ ಕಾರುಣ್ಯದ ಯೋಜನೆ ಎಂದೆ ಹೇಳಬಹುದು..!! ಇಂತಹ ಯೋಜನೆಗಳು ಜನರ ನೋವಿಗೆ ಮಿಡಿತಕ್ಕೆ ತಂದ  ಸಾಕ್ಷಿ..!!

 ಬಾಲ್ಯದಲ್ಲಿಯೇ ಮಕ್ಕಳು ಚಾಲನಾ ಕೌಶಲ್ಯವ ಬೆಳೆಸಿಕೊಳ್ಳಬೇಕು. ಮತ್ತು ಬರಿಗಾಲಿನಲ್ಲಿ ನಡೆದುಕೊಂಡು ಹೋಗದೆ, ಶಾಲೆಗಳಿಗೆ ಸೈಕಲ್ ಮೂಲಕ ಎಲ್ಲರ ಮಕ್ಕಳಂತೆ ಸರ್ಕಾರಿ ಶಾಲಾ ಮಕ್ಕಳು  ಹೋಗಬೇಕು ಎನ್ನುವ ದೃಷ್ಟಿಯನ್ನು ಇಟ್ಟುಕೊಂಡು

“ಶಾಲಾಮಕ್ಕಳಿಗೆ ಉಚಿತ ಬೈಸ್ಕಲ್ ಭಾಗ್ಯವನ್ನು ಕರುಣಿಸಿದವರು ರೈತಪರ ಹೋರಾಟಗಾರ ಯಡಿಯೂರಪ್ಪನವರುಇದು ಅವರ ತಾಯಿ ಹೃದಯದ ಪ್ರೀತಿಗೆ ಸಾಕ್ಷಿ ಆಗಬಲ್ಲದು..!!

 ಹಸಿವಿನಿಂದ ಯಾರೂ ಮಲಗಬಾರದು.  ಒಪ್ಪತ್ತಿಗಾದರೂ  ತುತ್ತನ್ನ ಸಿಗಬೇಕು. ಎಲ್ಲರೂ ಅನ್ನವನ್ನು ಊಟ ಮಾಡಬೇಕು. ಎನ್ನುವ ಮಹತ್ವದ ಯೋಜನೆಯನ್ನು ‘ಅನ್ನ ಭಾಗ್ಯ’ದ ಮೂಲಕ ಜಾರಿಗೆ ತಂದವರು ಈ ನಾಡಿನ ಜನಪರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು. ಇದು ಹೃದಯ ಮಿಡಿತದ ಜೀವಪರ ಮತ್ತು ಜನಪರ ಯೋಜನೆಯಾಗಿದೆ..!!

 ಶಾಲಾ ಮಕ್ಕಳು ಕೂಡ ಹಸಿವಿನಿಂದ ಬಳಲಬಾರದು. ಗ್ರಾಮೀಣ ಮಟ್ಟದಲ್ಲಿ ಪಾಲಕರು ಹೊಲಗದ್ದೆಗಳ ಕೆಲಸಕ್ಕೆ ಹೋಗುತ್ತಾರೆ. ಮಕ್ಕಳಿಗೆ ಸರಿಯಾದ ಆಹಾರ ಸಿಗುವುದಿಲ್ಲ ಎನ್ನುವ ದೂರ ದೃಷ್ಟಿಯನ್ನು ಇಟ್ಟುಕೊಂಡು ಶಾಲಾ ಮಕ್ಕಳಿಗೆ ‘ಮಧ್ಯಾಹ್ನದ ಬಿಸಿಯೂಟ’ದ ಯೋಜನೆಯನ್ನು ಜಾರಿಗೆ ತಂದವರು ಅಂದಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಂತ್ರಿಗಳಾಗಿದ್ದ ಎಚ್ ವಿಶ್ವನಾಥರವರು ಮುಖ್ಯಮಂತ್ರಿಗಳಾಗಿದ್ದ ಎಸ್ ಎಂ ಕೃಷ್ಣರವರ ಮನವೊಲಿಸಿ ಈ ಯೋಜನೆಯನ್ನು ಜಾರಿಗೆ ತಂದರು.

ಇಂದಿಗೂ ಕೂಡ ಆ ಯೋಜನೆ ಎಲ್ಲಾ ಮಕ್ಕಳ ಹೊಟ್ಟೆಯನ್ನು ತಣಿಸುತ್ತದೆ. ಇಂತಹ ಯೋಜನೆ ಮನುಷ್ಯ ಪ್ರೀತಿಯ ಸಂಕೇತವಾಗಿದೆ..!!

 ಈ ಎಲ್ಲಾ ಯೋಜನೆಗಳು ದೀರ್ಘಾವಧಿ ಯೋಜನೆಗಳಲ್ಲ ನಿಜ. ಸತತವಾಗಿ ಆದಾಯ ತಂದುಕೊಡುವ ಯೋಜನೆಗಳೂ ಅಲ್ಲ ಅದು ಕೂಡ ಸತ್ಯ.

 ಆದರೆ….

ಜೀವಪರ ಕಾಳಜಿ ಮತ್ತು ಮನುಷ್ಯ ಪ್ರೀತಿ ಇದ್ದರೆ ಮಾತ್ರ ಇಂತಹ ಹಲವಾರು ಮಾನವೀಯ ಯೋಜನೆಗಳು ಜಾರಿಗೆ ಬರಬಲ್ಲವು. ಸರ್ಕಾರದ ಯೋಜನೆಗಳೆಂದರೆ ಬರೀ ಆದಾಯವನ್ನು ತಂದುಕೊಡುವ ಯೋಜನೆಗಳಾಗಬಾರದು. ಒಬ್ಬ ನಿಜವಾದ ಪ್ರಜಾಸತ್ತಾತ್ಮಕ ರಾಜಕಾರಣಿಯು ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸುವ ಆಲೋಚನೆಗಳು ಯೋಜನೆಗಳಾಗಿರೂಪಗೊಂಡು ಕಾರ್ಯಗತವಾದಾಗ ಮಾತ್ರ ಕಲ್ಯಾಣ ರಾಜ್ಯದ ಉದಯವಾದಿತು.

ಬಡವರು, ಬಲ್ಲಿದರು, ಅಬಲೆಯರೂ ಮಹಿಳೆಯರು, ಮಕ್ಕಳು, ವಿಕಲಚೇತನರು ಶೋಷಣೆಗೆ ಒಳಗಾದವರ ಹಲವಾರು ಜನಾಂಗಗಳ ಕಣ್ಣೀರು ಒರೆಸುವ ದುಃಖದ ಸಂಕಟಗಳು  ಒಬ್ಬ ರಾಜಕಾರಣಿಗೆ ಗೊತ್ತಿರಬೇಕು.

ಇಂದಿನ ರಾಜಕಾರಣದ ಹಲವಾರು ಮಗ್ಗಲುಗಳು ಭ್ರಷ್ಠತೆಯ ಕೂಪಗಳನ್ನು ನಾವು  ಕೇಳುತ್ತೇವೆ. ಆದರೆ ಅವೆಲ್ಲವನ್ನೂ ಮೀರಿದ ಹಲವಾರು ರಾಜಕಾರಣಿಗಳು ನಮ್ಮ ಕಣ್ಣು ಮುಂದೆ ಇಂದಿಗೂ ಕೂಡ ಜೀವಪರ ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದೇ ಅಂತಃಕರಣದ ಮಾನವೀಯ ನೆಲಗಟ್ಟಿಗೆ ಸಾಕ್ಷಿಯಾಗಿ ನಿಂತಿದೆ.

ಭಾರತದ ‘ಸಂವಿಧಾನ ಶಿಲ್ಪಿ’ ಡಾ. ಬಿ ಆರ್ ಅಂಬೇಡ್ಕರ್ ಅವರು,

 “ಈ ದೇಶದ ಪ್ರತಿಯೊಬ್ಬ ನಾಗರಿಕರು ವೈಯಕ್ತಿಕ ಗೌರವದೊಂದಿಗೆ ಸ್ವಾತಂತ್ರ್ಯ ಸಮಾನತೆಯೊಂದಿಗೆ ಬದುಕುವ ಹಕ್ಕನ್ನು ಪಡೆದುಕೊಂಡಿರುತ್ತಾರೆ. ಯಾವುದೇ ವ್ಯಕ್ತಿಗೆ ಆ ಹಕ್ಕು ದಕ್ಕದೆ ಹೋದಾಗ ಸಂವಿಧಾನಕ್ಕೆ ಅಪಚಾರವಾದೀತು” ಎಂದು ಪರಿಭಾವಿಸಿದ್ದಾರೆ.

ಯಾಕೆಂದರೆ ಡಾ. ಬಿ. ಆರ್ ಅಂಬೇಡ್ಕರ್ ಅವರು  ಶೋಷಣೆಯ ವರ್ಗದಿಂದ ಬಂದವರು. ನೋವುಗಳನ್ನು ಉಂಡವರು. ಸಂವಿಧಾನದ ಆಶಯೇ “ಪ್ರತಿಯೊಬ್ಬರ ಕಲ್ಯಾಣ” ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಮಿಡಿಯುವ ಜೀವಪರ –  ಜನಪರ ರಾಜಕಾರಣದ ವ್ಯಕ್ತಿಗಳು ನಮ್ಮ ಪ್ರತಿನಿಧಿಗಳಾಗುವುದು ಇಂದಿನ ಅಗತ್ಯವಿದೆ.

 ಕಲ್ಯಾಣ ರಾಜ್ಯದಲ್ಲಿ ಕೇವಲ ಶ್ರೀಮಂತರು, ಉದ್ಯಮಿಗಳ ಪರವಾಗಿ ಇರುವ ಯೋಜನೆಗಳು ಯಾವತ್ತಿಗೂ ಕೂಡ ದೇಶದ ಐಕ್ಯತೆ ಮತ್ತು ಜನರ ಅಭಿವೃದ್ಧಿಯನ್ನು ಸಾಧಿಸಲಾರವು.

‘ಒಂದು ದೇಶದ ಅಭಿವೃದ್ಧಿ ಐಕ್ಯತೆ ಎಂದರೆ ಪ್ರತಿಯೊಬ್ಬರ ಪ್ರಗತಿ ಮತ್ತು ವಿಕಾಸವೇ ಆಗಿದೆ’.

ಅಂತಹ ವಿಕಾಸದ ಹಲವಾರು ಯೋಜನೆಗಳು ಈ ದೇಶಕ್ಕೆ ಅರ್ಪಿತವಾಗಿರುವುದು ಜಗತ್ತಿನ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶ ದಾಪುಗಾಲು ಹಾಕುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ.

ಕೃಷಿ, ಕೈಗಾರಿಕೆ, ರಕ್ಷಣಾ ಹಾಗೂ ವೈದ್ಯಕೀಯ ಮುಂತಾದ ಹಲವಾರು ರಂಗಗಳಲ್ಲಿ ಅನೇಕ ಜೀವಪರ ಯೋಜನೆಗಳು, ಸಂಶೋಧನೆಗಳು ಜಾರಿಗೆ ಬಂದು ಜನರ ಕಲ್ಯಾಣವನ್ನು ಮೇಲೆತ್ತುವ ಗುರುತರವಾದ ಜವಾಬ್ದಾರಿ ಇಂದಿನ ರಾಜಕಾರಣಿಗಳಿಗೆ ಮೂಲ ಗುರಿಯಾಗಿರಬೇಕು. ಹಿಂದಿನ ಹಲವಾರು ಆದರ್ಶ ರಾಜಕಾರಣಿಗಳ ಮಾರ್ಗದರ್ಶನದ ಯೋಜನೆಗಳು, ದೂರ ದೃಷ್ಟಿಯುಳ್ಳ ಹಲವಾರು ಕಾರ್ಯಗಳು ಇವರಿಗೆ ಪ್ರೇರಕವಾಗಬೇಕು.

 ಒಬ್ಬ ರಾಜಕಾರಣಿಗೆ ಜನರ ಬಗ್ಗೆ ಒಲವಿರಬೇಕು. ಅಂತಹ ರಾಜಕಾರಣಿಗಳು ಜನರ ಒಲವನ್ನೇ ಬಯಸುತ್ತಾರೆ. ಅವರ ಒಳಿತಿಗಾಗಿ ಶ್ರಮಿಸುತ್ತಾನೆ. ಇಲ್ಲದೆ ಹೋದರೆ ತನಗೆ ಸಿಕ್ಕ ಅವಕಾಶವನ್ನು ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡು ತನ್ನ ಸ್ವಂತ ಅಭಿವೃದ್ದಿಗೆ ಕಾರಣವಾಗುತ್ತಾನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯಾಗಬಾರದು ಎನ್ನುವುದೇ ಪ್ರತಿಯೊಬ್ಬರ ಆಶಯ.

ಜನರಿಗೆ ಉದ್ಯೋಗ ಒದಗಿಸುವ, ನಾಡಿಗೆ, ದೇಶಕ್ಕೆ ದೂರ ದೃಷ್ಟಿಯುಳ್ಳ ಯೋಜನೆಗಳು ಜಾರಿಗೆ ತರಬೇಕು. ಪ್ರತಿಯೊಬ್ಬರ ಒಳಿತನ್ನ ಬಯಸುವ ಹಲವಾರು ಯೋಜನೆಗಳನ್ನು ಜಾರಿಗೆ ತರಬಯಸುವ ರಾಜಕಾರಣದ ಅಗತ್ಯತೆ ಎಂದು ಇದೆ.

“ಪ್ರಜಾಪ್ರಭುತ್ವದ ಅಂತಿಮ ಗುರಿಯೇ ಪ್ರತಿಯೊಬ್ಬರ ಕಲ್ಯಾಣವೆಂದು ಹೇಳಿದಾಗ” ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಶ್ರಮಿಸುವ ರಾಜಕಾರಣಿಗಳನ್ನು ನಾವು ಬೆಂಬಲಿಸಿ, ದೇಶದ ಅಭಿವೃದ್ಧಿಗೆ ಹೆಜ್ಜೆ ಹಾಕಿದಾಗ ಮಾತ್ರ ಜನರ ಕಲ್ಯಾಣವಾಗಲು ಸಾಧ್ಯ.  ‘ಜನರ ಕಲ್ಯಾಣವೇ ದೇಶದ ಕಲ್ಯಾಣ’ ಅಂತಹ ಜನ ನಾಯಕರು ಜನರ ಒಲವನ್ನು ಬಯಸುತ್ತಲೇ ಒಲವಧಾರೆಯನ್ನು ಹರಿಸಬೇಕಾಗಿದೆ.

 ಅಂತಹ ರಾಜಕಾರಣಿಗಳ ಭಾಗವಹಿಸುವಿಕೆಯು ಸದಾ ಕ್ರಿಯಾಶೀಲವಾಗಿರಬೇಕು. ಅಂತವರನ್ನು ಆರಿಸುವ ಗುರುತರ ಜವಾಬ್ದಾರಿ ಪ್ರಜಾಪ್ರಭುತ್ವದ ಜನರಾದ ನಮ್ಮಗಳ ಮೇಲಿದೆ. ನಮ್ಮ ದೇಶದ ಅಭಿವೃದ್ಧಿಯ ಪತಾಕೆಯನ್ನು ಹಾರಿಸುವ, ಬಹುತ್ವ ಭಾರತದ ಏಕತೆಯನ್ನು ಸಾರುವ, ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ, “ಸಮ ಸಮಾಜ”ದ ನಿರ್ಮಾಣ ಮಾಡುವ ದೂರ ದೃಷ್ಟಿಯುಳ್ಳ ನಾಯಕನ ಅಗತ್ಯತೆಯನ್ನು ಮನಗಂಡು ಅಂತಹ ನಾಯಕನನ್ನು ಆರಿಸಿ, ಜನರ ಒಳಿತಿಗೆ ನಾವೆಲ್ಲರೂ ಕಾರಣರಾಗೋಣವೆಂದು ಬಯಸೋಣ.

 

 ಣರಾಗೋಣವೆಂದು ಬಯಸೋಣ.


 ರಮೇಶ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

Leave a Reply

Back To Top