ಕಾವ್ಯ ಸಂಗಾತಿ
ಕನಸಿಲ್ಲದ ಕವನ
ಗಿರಿಜಾ ಇಟಗಿ
ಭಾವಗಳ ಬೆನ್ನೇರಿ,ಮನದೊಳಗೆ ಮನೆ ಮಾಡಿ
ಸಮಾಜದ ದರ್ಪಣದೊಡನೆ ಮಾತನಾಡುತ,
ತೆರೆದಿಡುವೆನು ನನ್ನ ಕವನ
ಯುಗಯುಗಕೂ ಅಂತ್ಯವಿಲ್ಲದ ದಿನಕರನ
ದಣಿವಿರದ ಕಾಯಕಕೆ ನಮಿಸುತಾ
ಹಾಲುಚೆಲ್ಲಿದ ಬೆಳದಿಂಗಳ ಸಂಭ್ರಮಿಸುತಾ
ಪ್ರಕೃತಿ ವಿಸ್ಮಯಗಳ ಜೊತೆಗೂಡಿ
ತೆರೆದಿಡುವೆನು ನನ್ನ ಕವನ
ತುತ್ತಿಗಾಗಿ ಹಂಬಲಿಸಿ ಹಗಲಿರುಳು ನೋವ ಪಡೆವ
ಒಳಗೊಳಗೆ ಕುದಿಕುದಿವ ಹೆಣ್ಣಿನಂತರಂಗವನು
ಭ್ರಷ್ಟತೆಯ ವಿಷಗಾಳಿ ತೇಲಿಬಿಟ್ಟು
ಕಂಗಾಲಾದವರ ನೋವಿಗೆ ದನಿಯಾಗಿ
ತೆರೆದಿಡುವೆನು ನನ್ನ ಕವನ
ಧರ್ಮದ ಅಪೀಮನು ಉಣಬಡಿಸಿ
ಯುವಜನರ ನಿದ್ದೆಗೆಡಿಸುವಾ
ಬುದ್ದಿವಂತರ ದಡ್ಡತನದ ಪುಕಟ್ಟೆ ಸಲಹೆಗಳಿಂದ
ಹಾಳುಗೆಡೆಸುತಿಹ ಹುಂಬರನು
ವಿರೋಧಿಸಲು
ತೆರೆದಿಡುವೆನು ನನ್ನ ಕವನ
ತನ್ನತನದಿಂದರಳಿದ ಭಾವಗಳ ಸ್ಪಂದನ ನನ್ನ ಕವನ
ನನ್ನದು ಕನಸಲ್ಲದ ಕವನ ಹೌದಾದರು
ಜನತೆಯ ಕನಸಿಗೆ ದನಿಯಾಗುವ ಕವನ
ಸುಡುಬಿಸಿಲಿನಲಿ ಮಂಜುಗಡ್ಡೆ ನನ್ನ ಕವನ