ಕಾವ್ಯ ಸಂಗಾತಿ
ಗಜಲ್
ಅರ್ಚನಾ ಯಳಬೇರು
ಅಧರದ ಸವಿನುಡಿಯು ಆಲಿಸುವವರಿಗೆ ಹಿತವಾಗಿರಲಿ ಕೇಳು
ಮುಳ್ಳಿನಂತಹ ಮಾತುಗಳೆಂದೂ ಮನವ ಚುಚ್ಚದಿರಲಿ ಕೇಳು
ಬುದ್ದಿಯು ಲದ್ದಿಯಂತೆ ಎಂಬ ಮಾತು ಉತ್ಪ್ರೇಕ್ಷೆಯಲ್ಲ ಮನುಜ
ನೇರ ನಡೆನುಡಿಯು ಸದಾ ಜನಹಿತವೇ ಬಯಸುತಿರಲಿ ಕೇಳು
ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದು ಒಳಿತಲ್ಲ ನಿನಗೆ
ಬಣ್ಣಬಣ್ಣದ ಮುಖವಾಡದೊಳಗೆ ಬದುಕು ಕಳೆಯದಿರಲಿ ಕೇಳು
ಹಾಲಿನಂತ ಶುಭ್ರ ಮನವು ನಿನ್ನ ಜೊತೆಯಲ್ಲಿರಲಿ ಎಂದೆಂದಿಗೂ
ಗರ್ವ ಅಹಂಕಾರಗಳು ಚಿತ್ತವನು ಚಂಚಲ ಗೊಳಿಸದಿರಲಿ ಕೇಳು
ಸದ್ವಿಚಾರ ಸದ್ಗುಣಗಳೇ ಜೀವನ ಮೌಲ್ಯಗಳು ಅರಿತುಕೊ ಅರ್ಚನಾ
ಸರಿ ತಪ್ಪುಗಳ ನಡುವೆ ತಪ್ಪನು ಒಪ್ಪಿ ಮುನ್ನೆಡೆವ ಮನವಿರಲಿ ಕೇಳು
ತುಂಬು ಹೃದಯದ ಧನ್ಯವಾದಗಳು ಸಂಗಾತಿ ಪತ್ರಿಕೆಯ ಸರ್ವರಿಗೂ