ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಕವಿಗೆ ಸಮಾಜದ ನೋವುಗಳಿಗೆ ಮಿಡಿಯುವ ಒಲವಿನ  ಮನಸ್ಸಿರಲಿ

ಕವಿಗೆ ಸಮಾಜದ ನೋವುಗಳಿಗೆ ಮಿಡಿಯುವ ಒಲವಿನ  ಮನಸ್ಸಿರಲಿ..

“ಪರೋಕ್ಷವಾಗಿ ಕವಿ ಯಾವಾಗಲೂ ವಿರೋಧ ಪಕ್ಷದ ವಕ್ತಾರ..”

ಸಮಾಜದಲ್ಲಿ ಕವಿ, ಸಾಹಿತಿಗೆ, ಬರಹಗಾರನಿಗೆ ಜವಾಬ್ದಾರಿಯಿದೆ. ಕವಿಯಾದವನು ಯಾವತ್ತೂ ತನ್ನ ಸುತ್ತಲಿರುವ ನೋವು ನಲಿವುಗಳಿಗೆ ಮಿಡಿಯುವಂತಿರಬೇಕು. ಸಾಹಿತಿಯಾದವನು ಸಮಾಜದ ಸಂಭ್ರಮದ, ಸಂತೋಷದ, ಆರೋಗ್ಯಕರ ಅಂಶಗಳನ್ನು ಮಾತ್ರ ತನ್ನ ಬರಹದಲ್ಲಿ ಉಲ್ಲೇಖಿಸಿ,  ‘ಸಂತೋಷ ಮತ್ತು ಸಂಭ್ರಮ’ ವನ್ನು ಪಟ್ಟುಕೊಂಡು ಖುಷಿಯಿಂದ ಇರುವುದು ಆತನ ಕರ್ತವ್ಯವಲ್ಲ..!!

 ಅದಕ್ಕಿಂತಲೂ ಮುಖ್ಯವಾದದ್ದು ಆತನ ಸಮಾಜಿಕ ಜವಾಬ್ದಾರಿ, ಸಮಾಜಿಕ ಹೊಣೆಗಾರಿಕೆ ಮತ್ತು ಜನರ ನೋವುಗಳಿಗೆ, ಸಾಮಾಜಿಕ ವೈರುಧ್ಯಗಳಿಗೆ,  ಅನಾರೋಗ್ಯಕರ ಆಚರಣೆಗಳಿಗೆ ಸದಾ ಮದ್ದನ್ನು ಕೊಡುವ ಸಾಹಿತ್ಯ ಅವರದ್ದಾಗಿರಬೇಕು. ನೋವುಗಳಿಗೆ ಪ್ರೀತಿಯ ಮಲಾಮಾಗುವ ಅಲ್ಲದೆ ಅಂತ:ಕರಣದ ಹೃದಯ ಮಿಡಿತವನ್ನು ಹಂಚುವ, ಧ್ವನಿ ಇಲ್ಲದವರಿಗೆ ಸಾಹಿತ್ಯದ ಮೂಲಕ ಧ್ವನಿಯಾಗುವ ಸಮಸ್ಯೆಗಳಿಗೆ ಬೆಳಕನ್ನು ಚೆಲ್ಲುವ  ಬರಹ ಮತ್ತು ಬದಕು ಒಂದಾಗಿರಬೇಕು.

ತನ್ನ ಸುತ್ತಮುತ್ತಲಿನ ಕೊರತೆಗಳಿಗೆ ಬೆಳಕು ಚೆಲ್ಲುವ ಬರಹಗಳನ್ನು ಬರೆದು ಆಡಳಿತ ಪಕ್ಷಕ್ಕೆ ಎಚ್ಚರಿಕೆಯ ಸೂಚನೆಗಳನ್ನು ರವಾನಿಸುವ ಹೃದಯವಂತಿಕೆ ಇರುವ ಅಗತ್ಯ ಬೇಕೇ ಬೇಕು. ಒಂದು ವೇಳೆ ಅಂತಹ ಅಂತಃಕರಣ ಇಲ್ಲದ ಬರಹಗಳು ಎಂದಿಗೂ ಮಹತ್ವ ಎನಿಸಿಕೊಳ್ಳುವುದಿಲ್ಲ.

ಹಿಂದೆ ಸಾಹಿತಿಗಳು, ಕವಿಗಳು ಸಾಮಾಜಿಕ ಪರಿಸರದ ಜೊತೆ ಜೊತೆಗೆ ತಮ್ಮ ಸೂತ್ತಲಿನ ಪರಿಸರವನ್ನು , ಪ್ರಕೃತಿ ಸೌಂದರ್ಯವನ್ನು, ದೇವರನ್ನು, ಧರ್ಮವನ್ನು ಕುರಿತು ಆರಾಧನೆ ರೂಪದಲ್ಲಿ ಪದ್ಯಗಳನ್ನು, ಲೇಖನಗಳನ್ನು ಬರೆಯುತ್ತಿದ್ದರು.

 ಹಾಗೆಯೇ ಅದರ ಜೊತೆ ಜೊತೆಗೆ ಸಮಾಜದಲ್ಲಿ ನಡೆಯುತ್ತಿದ್ದ ಕ್ರೌರ್ಯಗಳನ್ನು ನೇರವಾಗಿ ಬರೆಯದೆ ಕಾದಂಬರಿಯ ರೂಪದಲ್ಲಿಯೋ,  ಪದ್ಯದ ರೂಪದಲ್ಲಿಯೋ, ಕತೆಯ ರೂಪದಲ್ಲಿಯೋ, ಬರೆದು ನಿಜ ಜೀವನದ ಮನುಷ್ಯನ ಸಂಕಟಗಳನ್ನು ಸಾಹಿತ್ಯದ ಪಾತ್ರಗಳ ಮೂಲಕ ಅನಾವರಣಗೊಳಿಸುತ್ತಿದ್ದರು. ಕೆಲವು ಕಾದಂಬರಿಗಳು, ಕಥೆಗಳು, ಸಿನಿಮಾಗಳಾಗಿ ಹಿರಿಯ ತೆರೆಯಲಿ ಸಮಾಜದ ಪರಿವರ್ತನೆಗೆ ಕಾರಣವಾಗಿರುವುದನ್ನು ನಾವು ಮರೆಯುವಂತಿಲ್ಲ.

ಕವಿಯಾದವನಿಗೆ ಸಮಾಜದ ಒಳಿತನ್ನು ಬಯಸುವ ಗುರುತುರ ಜವಾಬ್ದಾರಿ ಇರುತ್ತದೆ. ಹಾಗೆಯೇ ಸಮಾಜದಲ್ಲಿ ನಡೆಯುವ ದೌರ್ಜನ್ಯ, ದರ್ಪ – ಶೋಷಣೆಗಳನ್ನು ವಿರೋಧಿಸಿ ಧ್ವನಿ ಇಲ್ಲದವರಿಗೆ ‘ನಾವಿದ್ದೇವೆ’ ಎನ್ನುವ ಭರವಸೆಯನ್ನು ನೀಡುವ ಕೆಲಸವನ್ನು ಸಾಹಿತಿಯಾದವರು ಮಾಡಬೇಕು.  ತಮ್ಮ ಸಾಹಿತ್ಯದ ಮೂಲಕ ಬದುಕಿನ ಮೂಲಕ ಅದನ್ನು ಮಾಡಬೇಕು. ಸಾಹಿತಿಯಾದವನು ಆಡಳಿತದ ಪರವಾಗಿ ಆಡಳಿತದಲ್ಲಿರುವ ಮುಖ್ಯಸ್ಥರ ಪರವಾಗಿ ಓಲೈಸಿ ಅವರನ್ನು ವರ್ಣಿಸುವ, ಅವರನ್ನು ಹೊಗಳುವ ಭರದಲ್ಲಿ ತಮ್ಮ ತಾತ್ವಿಕ ಚಿಂತನೆಗಳನ್ನು ಮತ್ತು ತಮ್ಮ ಸಾಹಿತ್ಯದ ಜವಾಬ್ದಾರಿಯನ್ನು ಮರೆತರಾದರೆ ಅವರು ಯಾವತ್ತೂ ಸಮಾಜದ ಮುಖ್ಯವಾಹಿನಿಯಲ್ಲಿ ಮಹತ್ವದ ಕವಿಯಾಗಲು ಸಾಧ್ಯವಾಗುವುದಿಲ್ಲ. ಅವರು ಕೇವಲ ಹೊಗಳು ಭಟ್ಟರಾಗಿ ಉಳಿದುಕೊಂಡು ಬಿಡುತ್ತಾರೆ. ಸಾಹಿತಿಯಾದವನು ಪರೋಕ್ಷ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು ಅಂದಾಗ ಮಾತ್ರ ಆಡಳಿತ ವ್ಯವಸ್ಥೆ ಸದಾ ಜಾಗೃತವಾಗಿ ಕೆಲಸ ಮಾಡುತ್ತದೆ.

ಸರ್ಕಾರಗಳು ತಪ್ಪು ಮಾಡಿದಾಗ, ತಪ್ಪು ಹೆಜ್ಜೆಯನ್ನು ಆಡಳಿತದಲ್ಲಿಟ್ಟಾಗ ಅದನ್ನು ಪ್ರಶ್ನಿಸುವ, ವಿರೋಧಿಸುವ ವ್ಯವಸ್ಥೆಯನ್ನು ಸರಿಪಡಿಸಲು ಮಾಡುವ ‘ವಿರೋಧ ಪಕ್ಷದ’ ಸ್ಥಾನ ಬಹಳ ಮುಖ್ಯ. ಅಂತಹ ಮಹತ್ವದ ಸ್ಥಾನವನ್ನು ಹೊಂದಿದ ವಿರೋಧ ಪಕ್ಷವು ಕೆಲವು ಸಲ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ಜನಸಾಮಾನ್ಯರ ನೋವುಗಳಿಗೆ ಕಾರಣವಾಗಿ ಬಿಡುತ್ತದೆ. ಆಗ ಸಾಹಿತಿಯಾದವನು ಕವಿಯಾದವನು, ಬರಹಗಾರನು ಅತ್ಯಂತ ಜಾಗೃತದಿಂದ ಆಡಳಿತ ಪಕ್ಷವನ್ನು ಎಚ್ಚರಿಸಬೇಕಾಗಿದ್ದು ಅಗತ್ಯವಾದ ಕರ್ತವ್ಯವಾಗಿದೆ.

ಸಾಹಿತ್ಯವೆಂದರೆ ಕಾಲ್ಪನಿಕ ಲೋಕದಲ್ಲಿ ವಿಹರಿಸುವ ಮನೋರಂಜನಾತ್ಮಕ ಸರಕು ಎಂದು ಹಿಂದೆ ಇದ್ದರೂ ಅಂತಹ ಕಾಲಘಟ್ಟದಲ್ಲಿಯೇ ತಮ್ಮ ತಮ್ಮ ಬದುಕಿನ ನೋವುಗಳನ್ನು ತಮ್ಮ ಕಾವ್ಯದ ಮೂಲಕ ವ್ಯಕ್ತಪಡಿಸುವ ಹಲವು ಜಾನಪದಗಳು ಹಿಂದಿನಿಂದಲೂ ಪರಂಪರಾಗತವಾಗಿ ಬಂದಿರುವುದನ್ನು ನಾವು ಕಾಣುತ್ತೇವೆ. ವಚನ ಚಳುವಳಿ, ದಾಸ ಸಾಹಿತ್ಯ, ಆಧುನಿಕ ಸಾಹಿತ್ಯದಲ್ಲಿ ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ ಇವೆಲ್ಲವೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಜೊತೆ ಜೊತೆಗೆ ಸಮ ಸಮಾಜವನ್ನು ಕಟ್ಟಲು ಸದಾ ಶ್ರಮಿಸಿರುವುದು ಸಾಹಿತ್ಯಕ್ಕಿರುವ ಹೆಗ್ಗಳಿಕೆಯನ್ನು ಗುರುತಿಸಬಹುದಾಗಿದೆ.

ಆಧುನಿಕ ಸಾಹಿತ್ಯ ಕಾಲಘಟ್ಟದಲ್ಲಿ ಕನ್ನಡ, ಮರಾಠಿ, ಬಂಗಾಳಿ, ತಮಿಳು, ಮಲೆಯಾಳಿ, ಇಂಗ್ಲಿಷ್ ,ಫ್ರೆಂಚ್  ಮುಂತಾದ ಭಾಷೆಗಳಲ್ಲಿಯೂ ಬಂಡಾಯದ ಬಿಸಿಯನ್ನು ವ್ಯಕ್ತಪಡಿಸುವ ಹಲವಾರು ಕೃತಿಗಳು ಬಂದಿರುವುದನ್ನು ನಾವು ಗುರುತಿಸಬಹುದಾಗಿದೆ.

 ಕನ್ನಡ ಸಾಹಿತ್ಯದ ಮಟ್ಟಿಗೆ ದಲಿತರ ಅಸ್ಪೃಶ್ಯತೆಯ ಚಾಟಿ ಏಟು, ಜೀತದ ನೋವಿನ ಎಳೆಗಳ ಬರೆಯ ಏಟುಗಳು,  ಕೂಲಿ ಕಾರ್ಮಿಕರ ಬದುಕಿನ ಸಂಕಟದ ಎಳೆಗಳನ್ನು, ಮಹಿಳೆಯರ ಹಕ್ಕುಗಳ ಅಧಿಪತನಗಳನ್ನು… ಕನ್ನಡ ಸಾಹಿತ್ಯದಲ್ಲಿ ಹಲವಾರು ಸಾಹಿತಿಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 ಹಾಗಾಗಿ ಸಾಹಿತಿಗಳು ಸಮಾಜದ ಅನೇಕ ರೋಗಗಳಿಗೆ ಔಷಧಿಗಳಾಗಬಲ್ಲರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಜಾತಿ,ಧರ್ಮ, ವರ್ಣ, ಲಿಂಗ ತಾರತಮ್ಯದ ವಿರುದ್ಧ ಸದಾ ಸಾಹಿತ್ಯ ಹಾಗೂ ಸಾಹಿತಿ ಪ್ರತಿಸ್ಪಂದನವಾಗಬೇಕು. ಆಗ ಮಾತ್ರ ಮಾನವೀಯತೆಯ ಮೌಲ್ಯವನ್ನು ಸಮಾಜದಲ್ಲಿ ಕಟ್ಟಲು ಸಾಧ್ಯ.

“ಎಲ್ಲರೂ ನನ್ನಂತೆ : ನನ್ನಂತೆ ಎಲ್ಲರೂ” ಎನ್ನುವ ಮನುಷ್ಯ ಪ್ರೀತಿಯನ್ನು ಹಂಚಿದಾಗಲೇ ಮಾತ್ರ ಒಲವಧಾರೆಯು ತೊರೆ ತೊರೆಯಾಗಿ ಹರಿಯಬಲ್ಲದು. ಬುದ್ಧ- ಬಸವ – ಗಾಂಧೀಜಿ- ಅಂಬೇಡ್ಕರ್ ಅವರ ಕನಸಿನ ಸಮಾಜ ವಿಕಾಸವಾಗಲೆಂದು ಸದಾಶಯ ಬಯಸೋಣ…


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

ಕವಿಗೆ ಸಮಾಜದ ನೋವುಗಳಿಗೆ ಮಿಡಿಯುವ ಒಲವಿನ  ಮನಸ್ಸಿರಲಿ

2 thoughts on “

  1. ವಿಭಿನ್ನ ಬರಹದ ಪ್ರಯತ್ನ…. ಅಂತೆಯೇ ಸಾಹಿತಿ ಸಮಾಜದ ಅಂಕುಡೊಂಕುಗಳನ್ನು ನೋಡಿ ಸುಮ್ಮನೆ ಇರಬಾರದು ಎನ್ನುವ ಆಶಯ ಉತ್ತಮವೇ…ಅಭಿನಂದನೆಗಳು ಸಾರ್

Leave a Reply

Back To Top