ಮಮತಾ ಶಂಕರ್ ಪ್ರಬಂಧ-ಸಲಹುವ ಕಾಯಿಲೆಗಳು……!

ಪ್ರಬಂಧ ಸಂಗಾತಿ

ಸಲಹುವ ಕಾಯಿಲೆಗಳು……!

ಮಮತಾ ಶಂಕರ್

ಮುಚ್ಹುಮರೆಯಿಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ…ಅಂತಾ ನನ್ನ ಇಷ್ಟದ ಹಾಡನ್ನು ನನ್ನ ಇಷ್ಟದಂತೆ ಹಾಡಿಕೊಳ್ಳುತ್ತಿರುವಾಗ ತಟ್ಟನೆ ನನಗೆ ಈ ವಿಷಯವನ್ನು ನನ್ನ ಸ್ನೇಹವೃಂದದ ಮುಂದೆ ಹಂಚಿಕೊಳ್ಳಬೇಕು ಅಂತಾ ಯಾಕನಿಸಿತೊ ಏನೋ ಗೊತ್ತಿಲ್ಲಾ ಹೇಳ್ಬಿಡ್ತೀನಿ ಕೇಳಿ…
ಆಗಾಗ್ಗೆ ಯಾಕೋ ನನಗೆ ತಲೆ ’ಗಿರಾ ಗಿರಾ ಗಿರ” ಅನಿಸ್ತಿತ್ತು…ಹಿಂದೆಯೂ ಒಂದೆರಡು ಬಾರಿ ಹೀಗೇ ಆಗಿದ್ದರಿಂದ ಏನಾದ್ರೂ ಬಿಪಿ ಶುರು ಆಗಿದೆಯ ಅಂತಾ ಅನುಮಾನವಾಯ್ತು. ಒಂದಿನ ಎದ್ದೇಳಕ್ಕಾಗದೆ ಇರುವಷ್ಟು ತಲೆ ಚಕ್ಕರ್ ಬಂದಾಗ ಗಾಭರಿ ಆಗ್ಬಿಡ್ತು.. ಹಿಂದೆ ಅಮ್ಮನಿಗೂ,ನಮ್ಮಜ್ಜಿಗೂ,ಅವರಮ್ಮನಿಗೂ ಬಿ ಪಿ ಹತ್ತಿರದ ಬಂಧುವೇ ಅಗಿದ್ದರಿಂದ ನನಗೂ ಅದು ಅತಿಥಿ ಯಾಗುವುದರಲ್ಲಿ ಅನುಮಾನವಿರಲಿಲ್ಲ ಬಿಡಿ… ಏನೋ ಕೊಂಚ ಉಣ್ಣುವುದು, ತಿನ್ನುವುದರಲ್ಲಿ ನಾನು ಅಂತಹ ಬಾಯಿ ಚಪಲದವಳಲ್ಲದ್ದರಿಂದ ಹಾಗೂ ಹೊರಗಡೆ ಹೆಚ್ಚ್ಹು ತಿನ್ನದೇ ನಾನೆ ನನ್ನ ಕೈಯಾರೆ ಮನೆಯಲ್ಲಿ ಮಾಡಿಕೊಂಡು ತಿನ್ನುವುದರಿಂದ , ಸ್ವಲ್ಪ ಡಯಟ್ ಫುಡ್, ಹಣ್ಣು-ತರಕಾರಿಗಳ ಸೇವನೆ ಮೊಸರುಬಿಟ್ಟು ಬರೀ ಮಜ್ಜಿಗೆ ಮತ್ತೆ ಅಲ್ಪ ಆಹಾರ ಸೇವನೆಯ ಶ್ರಮದಿಂದ ನನಗೆ ಬಿ ಪಿ ಬಂದಿರಲಾರದು ಅನ್ನುವ ದೂರದ ಆಸೆಯೂ ಇತ್ತೆನ್ನಿ….ಆದರೆ ಹಾಗಿರಬೇಕಲ್ಲಾ….? ವರುಷದ ಹಿಂದೆ ಮಧು ದೇಹಿಯಾದ ನನಗೆ ಬಿಪಿ ಯ ಬೆಂಕಿ ತಗುಲುವ ಭಯವೂ ಇತ್ತು…ಯಾಕೆಂದರೆ ಅಪ್ಪ ಅಮ್ಮನ ಅಲಿಖಿತ ಉಯಿಲು ಬಿಪಿ ಶುಗರ್ ….ನನ್ನ ಪಾಲಿಗೆ ಬಂದಿತ್ತು… ನನಗೆ ಶುಗರ್ ಅಂತಾ ಗೊತ್ತಾದಾಗ ಅಪ್ಪನ ಕಣ್ಣಂಚಲ್ಲಿ ನೀರು ಕಂಡಿದ್ದೆ,..ಸಿಹಿ ಆಸೆ ಪಡದ ನನಗೇ ಏನೂ ಅನಿಸಿರಲಿಲ್ಲ…ನಾನೇ ಸಮಾಧಾನಿಸಿದ್ದೆ,
ಆಸ್ಪತ್ರೆಯಲ್ಲಿ ಆಪ್ತಸಮಾಲೋಚಕಿಯಾಗಿ ಕೆಲಸ ಮಾಡುವ ನಾನು ಅಲ್ಲೇ ಬಿಪಿ ಚೆಕ್ ಮಾಡಿಸಿದ್ದೂ ಆಯ್ತು,,ಹೊಸ ಅತಿಥಿಯಂತೆ ಅದು ನನ್ನ ಮೈಯೊಳಗೆ ಹೊಕ್ಕಿದ್ದೂ ಆಯ್ತು…ನನ್ನ ತಲೆತಿರುಗುವಿಕೆ ನನಗೆ ಹೊಸ ಅನುಭವ ಆದ್ದರಿಂದ ನನ್ನ ಈ ಅನುಭವವನ್ನು ನನ್ನ ಭಯವನ್ನೂ ದೂರದೂರಿನಲ್ಲಿದ್ದ ನನ್ನ ತಂದೆ ನನ್ನ ತಂಗಿ ತಮ್ಮಂದಿರೊಂದಿಗೆ ಹಂಚಿಕೊಂಡಿದ್ದೆನಷ್ಟೇ…ಸರಿ ಶುರುವಾಯ್ತು ಎಲ್ಲರ ಹೊಸ ಆಪ್ತಸಮಾಲೋಚನೆ ನನಗೆ…’ಏನೂ ಉಪ್ಪು ಎಣ್ಣೆ ಎಲ್ಲಾ ಕಡಿಮೆ ಮಾಡ್ಬಿಡು ಹೆಚ್ಚು ತಿನ್ನಬೇಡ…’ ಅಂತಾ ಹೇಳಿ ಎಲ್ಲಿ ನನ್ನ ಸನ್ಯಾಸಿ ಆಹಾರ ತಿನ್ನೋ ಹಾಗೆ ಮಾಡ್ಬಿಡ್ತಾರೋ ಅಂತಾ ದಿಗಿಲು ಬಿದ್ದಿದ್ದೆ….ಪುಣ್ಯಕ್ಕೆ ಅರ್ಥ ಮಾಡ್ಕೊಂಡವರಂತೆ ’ನಿಂದೇನೂ ಪ್ರಾಬ್ಲೆಮ್ ಇಲ್ಲ ಬಿಡು,,ಯಾಕಂದ್ರೆ ನಿಮ್ಮನೆಲಿ ಸ್ವಲ್ಪ ಎಣ್ಣೆ ಉಪ್ಪು ಎಲ್ಲಾ ಕಡಿಮೆಯೇ…ಆದರೂ ಸ್ವಲ್ಪ ಕೇರ್ ತಗೋ ನಿಂದು ಮೊದ್ಲೇ ಹುಡುಗಾಟ … ’ ಅಂತಾ ಎಚ್ಚರಿಕೆ ಕೊಟ್ರೋ,ಶಹಬ್ಬಾಸ್ಗಿರಿ ಕೊಟ್ರೋ ಸಲಹೆ ಕೊಟ್ರೋ ಗೊತ್ತಾಗ್ಲಿಲ್ಲ…ಅನ್ನಿ,


ಅಪ್ಪ ಪಾಪ ಬೇಸರಗೊಂಡು ’ಮನೆಯ ವಿಷಯ ಎಲ್ಲಾ ಅವಳಿಗೆ ಜಾಸ್ತಿ ಏನೂ ಹೇಳೋದು ಬೇಡಾ ಎಲ್ಲ ತಲೆಗೆ ಹಚ್ಕೊಂಡ್ರೆ ಕಷ್ಟ ಅಂತಾಯ್ತು…ಇನ್ಮುಂದೆ ನಾನೂ ಸ್ವಲ್ಪ ಅವಾಯ್ಡ್ ಮಾಡ್ತೀನಿ. ಹೆಚ್ಚಿಗೆ ಏನೂ ಹೇಳಲ್ಲ” ಅಂತಾ ನನ್ನ ಇನ್ನೊಬ್ಬ ತಂಗಿಯ ಹತ್ರ ತಮ್ಮ ಹೊಸ ಅಮೆಂಡ್ಮೆಂಟ್ ಬಗ್ಗೆ ಹೇಳ್ಕೊಂಡು ಸಮಾಧಾನ ಮಾಡ್ಕೊಂಡಿದ್ರಂತೆ.
ಇನ್ನು ನನ್ನ ಗೆಳತಿಯರ (ಬಿಟ್ಟಿ….?) ಉಪದೇಶ ಕೇಳಿ ಹೇಗಿದೆ ಅಂತಾ…. “ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಸಳು ಕರಿಬೇವು ತಗೊಂಡ್ರೆ ಬಿಪಿ ಶುಗರ್ ಕಂಟ್ರೋಲಲ್ಲಿ ಇರುತ್ತಂತೆ “ ಅಂತಾ ಒಬ್ಬಳು ಅಂದ್ರೆ ಮತ್ತೊಬ್ಬಳು “ದಿನಾ ರಾತ್ರಿ ಊಟದೊಂದಿಗೆ ನಾಲ್ಕು ಎಸಳು ಬೆಳ್ಲುಳ್ಳಿ ತಿನ್ನು ಬಿಪಿ ಇದ್ರೆ ಕೇಳು..”.ಅಂತ ಈಗ ತಾನೆ ಬಿಪಿ ಓಡಿಸಿ ಬಂದ ಆಯುರ್ವೇದ ಪಂಡಿತಳಂತೆ ಹೇಳಿದಳು. “ ನಮ್ಮಮ್ಮ ಬೆಳಿಗ್ಗೆ ಎದ್ದು ಕರಿಬೇವು, ಜೀರಿಗೆ,ಮೆಂತ್ಯ ಪುಡಿ ಮಾಡಿದ ಮಿಶ್ರಣ ತಗೋತಿದಾರೆ. ಬಿಪಿ ಶುಗರ್ ಎಲ್ಲಾ ಫುಲ್ ಕಂಟ್ರೋಲಲ್ಲಿದೆ ಕಣೇಮ್ಮ….ಅವರೀಗ ಏನೂ ಡಯಟ್ ಮಾಡ್ತಿಲ್ಲ….ಗುಳಿಗೆನೂ ತಗೋತಿಲ್ಲ…ನಾರ್ಮಲ್ಲಾಗೆ ಎಲ್ಲಾ ಊಟ ಮಾಡ್ತಿದ್ದಾರೆ…ನೀನೂ ಟ್ರೈ ಮಾಡಿ ನೋಡು” ಅಂತಾ ನನ್ನ ಆಸೆಗಣ್ಣರಳುವಂತೆ ಮಾಡಿದವಳು ಮತ್ತೊಬ್ಬಳು ಪಾಪಿ ಗೆಳತಿ…. ’ಅಯ್ಯೋ ಮಾತ್ರೆ ತಾನೇ ಸ್ವಲ್ಪ ತಗೊಳ್ರೀ ಅದಕ್ಯಾಕೆ ಚಿಂತೆ ಮಾಡ್ತೀರಾ ಚೆನ್ನಗಿ ವಾಕ್ ಮಾಡಿ,ಊಟ ತಿಂಡಿ ಆರಾಮ ಮಾಡ್ರಿ ಎಂತದ್ದೂ ಆಗಲ್ಲ” ಅಂತಾ ಅನ್ನುವ ಪ್ರಖಾಂಡ ಪಂಡಿತೆ ಒಬ್ಬಳು…ಯಾರ ಮಾತು ಕೇಳಲಿ ಯಾರದು ಬಿಡಲಿ…
ಒಮ್ಮೆ ನನ್ನ ಇನ್ನೊಬ್ಬ ಗೆಳತಿಯಂತೂ ಬಿಪಿ ಏರಿಸುವಂತಾ ಘಟನೆಗಳನ್ನೇ ಹೆಳಿ ಗಾಭರಿ ಹುಟ್ಟಿಸಿಬಿಟ್ಟಿದ್ದಳು. “ ಮೊನ್ನೆ ನಮ್ಮತ್ತೆ ಪರಿಚಯದವರೊಬ್ಬರು ಪೇಟೆಗೋಗಿದ್ರಿ ಸೊಸೆ ಜೋಡಿ ಎಲ್ಲಾ ಕಾಯಿಪಲ್ಲೆ ಎಲ್ಲ ತಗೊಂಡಾರಂತ್ರಿ ಎರಡೂ ಕೈಯಾಗ ಬ್ಯಾಗ ಹಿಡಕೊಂಡು ಸೊಸೆ ಜೋಡೀನೇ ಮನಿಗೂ ಬಂದಾರ್ರಿ…ಮೆಟ್ಲಾ ಹತ್ತಿ ಬ್ಯಾಗ್ ಕೆಳಗಿಟ್ಟು ಯವ್ವಾ ಯಾಕೋ ಸುಸ್ತಾಗಕ್ಕತ್ತೈತಿ ಸ್ವಲ್ಪ್ ನೀರು ಕೊಡೆ ಯವ್ವಾ ಅಂತಾ ಸೊಸಿಗೆಳಿದ್ದಷ್ಟೇ ಅಂತ ನೋಡ್ರಿ..ಸೊಸಿ ಕೈಯಾಗಿನ್ ಬ್ಯಾಗ್ ಕೆಳಗಿಟ್ಟು ನೀರಿನ ಚೆರಿಗೆ ತರೋಷ್ಟ್ರಲ್ಲಿ ಖಲ್ಲ್ಲಾಸ್ ಅಂತ್ ನೋಡ್ರಿ….” ಅಂತ ಹೇಳಿದಾಗ ಇನ್ನೊಬ್ಬಳು ಇನ್ನೊಂದು ಕಥೆ ಹೇಳ್ತಿದ್ಲು… ಅರೇ ಬಿಪಿ ಶುಗರ್ರು ಇದ್ರೆ ನಾನೇನು ಓಡಾಡ್ಲೋ ಬೇಡ್ವೋ, ವಾಕ್ ಹೋಗಿಬರ್ಲೋ ಬೇಡ್ವೊ, ಅತ್ತಿತ್ತ ಹೊರಳಾಡ್ಲೋ ಬೆಡ್ವೊ,ಏನಾದ್ರ್ ಸಾಮಾನು ಚೀಲ ಹಿಡಿದು ಮೆಟ್ಟಿಲು ಹತ್ತಲೋ ಬೇಡ್ವೋ ಎಂಬೆಲ್ಲಾ ಗೊಂದಲಗಳು ನನ್ನಲ್ಲಿ ಹುಟ್ಟಿಸಿಬಿಟ್ಟರು…! ಇವರು ಹೆಳಿದ ಘಟನೆಗಳು ಸುಮ್ಮನೆಯೊ ಅಥವಾ ಹೆದರಿಕೆ ಹುಟ್ಟಿಸಲೋ,ಅಥವಾ ಏನಾದ್ರೂ ಸಂದೆಶವೋ ಮುನ್ನೆಚ್ಚರಿಕೆ ಕ್ರಮಕ್ಕೊ ತಿಳಿಯದಾಗಿ ಕಣ್ ಕಣ್ ಬಿಟ್ತಿದ್ದಾಯ್ತು…


ಹಾಗೆ ನೋಡಿದ್ರೆ ನಮ್ಮಮ್ಮನೂ ಬಿಪಿ ಒಡತಿಯೇ…ಚೆನ್ನಾಗಿ ತಿಂದುಂಡು ಬೆಳೆದ ಶರೀರ , ಅವರಮ್ಮನ, ಅಜ್ಜಿಯ ಬಳುವಳಿಯೂ ಅಮ್ಮನಿಗೆ ಇದೇ ಆಗಿತ್ತೆನ್ನಿ. ಆದರೂ ಅತ್ತೆ ಮನೆಯಲ್ಲಿ ಚೆನ್ನಾಗಿ ಮೈ ಬಗ್ಗಿಸಿ ದುಡಿದದ್ದಕ್ಕೆ ಈ ಬಿಪಿ ಅಡ್ದಾಡಿಕೊಂಡು ಬಂದು ನಲವತ್ತಕ್ಕೆ ಅಮ್ಮನಿಗೆ ತಗಲಾಕ್ಕೊಂಡಿತ್ತು. ಊಟ ತಿಂಡಿ ಎಲ್ಲಾ ಯಾವತ್ತೂ ನಾರ್ಮಲ್,…ನೋ ರಿಸ್ಟ್ರಿಕ್ಷನ್…ಅಮ್ಮಂದು, ’ಮಾತ್ರೆ ತಗೊಳಲ್ವಾ.. ಏನು ಮಹಾ ಹೆಚ್ಚಿಗೆ ಎಣ್ಣೆದು,ಹೊರಗಿಂದು ಕರ್ದಿದ್ದು ತಿನ್ನಲ್ಲ ಏನಿಲ್ಲಾ…ತುಪ್ಪ ಮೊಸರು ಮುಟ್ಟಲ್ಲಾ ಇನ್ನೇನೂ…” ಅನ್ನುವ ಉಡಾಫೆ ಧೋರಣೆ. ಅವರೊಂದಿಗೆ ಊಟದ ಮಧ್ಯೆ ಎಂದಾದರೂ ಒಂದು ಹೋಳು ಉಪ್ಪಿನಕಾಯಿ ಹಾಕ್ಕೊಂಡ್ರೆ ನಾವೆಲ್ಲ ಆಗಬಾರದ ಅನಾಹುತ ಆಗೇ ಹೋಗುತ್ತೆ ಅಂತಾ ಗಾಭರಿಬಿದ್ದವರಂತೆ ಆಡಿದ್ರೆ ಅಮ್ಮ ಮಾತ್ರ ಕೂಲಾಗಿ ಇಷ್ಟೆಲ್ಲಾ ಕೆಲ್ಸ ಮಾಡ್ತೀನಿ ಒಂದು ತುತ್ತು ಊಟ ಚೆನ್ನಾಗಿ ಮಾಡಬಾರದೇನ್ರೇ ನಾನು…. ನಿಮ್ದೊಳ್ಳೇ ಕಥೆ ಆಯ್ತು …ಇರೋವರ್ಗೂ ಚೆನ್ನಗಿ ತಿಂದಾ,…ದುಡಿದಾ….ಜಾಮ್ ಜಾಮ್ ಅಂತಾ ನಡದ….ಹೋಗ್ರೇ…” ಅಂತಾ ರೇಗಿಕೊಂಡು ತನ್ನದೇ ಶೈಲಿಯಲ್ಲಿ ತತ್ವ ಹೇಳೋಳು…ಪಾಪ ಅಷ್ಟೆಲ್ಲಾ ಕಟ್ಟುನಿಟ್ಟುಗಳು ಆಕೆಯ ಶರೀರಕ್ಕೆ ಏನು ಕೊಡ್ತೋ ಇಲ್ವೋ…ಗೊತ್ತಿಲ್ಲಾ…ಎಂದೂ ಅತಿ ಆಸೆ ಪಟ್ಟು ತಿನ್ನದೆ ಇದ್ದಿದ್ದನ್ನೇ ರುಚಿ ಮಾಡಿಕೊಂಡು ತಿಂದ ಅಮ್ಮ ಒಂದು ದಿನ ಇದೇ ಬಿಪಿ ಹೃದಯಾಘಾತಕ್ಕೆ ಕಾರಣವಾಗಿ ನಮ್ಮನ್ನೆಲ್ಲಾ ತಟ್ಟಂತ ಅಗಲಿಬಿಟ್ಟಳು. ನಮ್ಮಮ್ಮನ ಅಮ್ಮ,ಅಜ್ಜಿ ಎಲ್ಲಾ ಪಾರ್ಶ್ವವಾಯುವಿಗೆ ತುತ್ತಾಗಿ ಸತ್ತದ್ದರಿಂದ ಆ ಭಯ ಅಮ್ಮನಿಗೂ ನಮಗೂ ಇತ್ತು. ಆದರೆ ಹಾಗಾಗದೆ ದಿಡೀರ್ ಹೊಗಿಬಿಟ್ಟಳು. ಬಿಪಿ ಇಂಥದ್ದೊಂದು ಅವ್ಯಕ್ತ ಅಳುಕನ್ನು ಸದಾ ನನ್ನಲ್ಲಿಟ್ಟಿರುತ್ತದೆ… ಹುಡುಗಾಟ ಆಡಲು ಬಿಡದೆ ಕಾಯುತ್ತಿರುತ್ತದೆ…ಒಂದು ರೀತಿ ನೋಡಿದರೆ ಅದೇ ನನ್ನನ್ನು ಸಲಹುತ್ತಿದೆಯೆನೋ ಅನ್ಸುತ್ತೆ..ಏನೂ ಇಲ್ದೆ ಇರೊರಿಗಿಂತಾ ಏನಾದ್ರು ಕಾಯಿಲೆ ಇರೋರೇ ಸರಿಯಾದ ಜೀವನಶೈಲಿ ಅಳವಡಿಸ್ಕೊಂಡಿರ್ತಾರೇನೋ….

ಇನ್ನು ಅಪ್ಪನ ಖಾಂದಾನ್ ಕಡೆಯವರೋ ಮಧುರ ದೇಹಿಗಳು…ಎನ್ನಬೇಕು.ಅಪ್ಪ ಅಂತೂ ಸ್ವತ ವೈಧ್ಯರಾಗಿ ಈ ಖಾಯಿಲೆಗೆ ಒಳಗಾದ ದಿನ ಬಹಳ ಬೇಸರ ಮಾಡಿಕೊಂಡು ಇನ್ನು ಕಥೆ ಮುಗಿದೇ ಹೋಯಿತೆಂಬಂತೆ ಮುಗ್ಧವಾಗಿ ಅತ್ತಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಈಗ ನಲವತ್ತು ವರ್ಷಕ್ಕೂ ಹಿಂದೆ ಸಕ್ಕರೆ ಕಾಯಿಲೆ ಎಂದರೆ ಮಾರಣಾಂತಿಕವೇನೊ ಎಂಬ ಆತಂಕ ದುಖವನ್ನೇ ತರುತ್ತಿತ್ತೆನ್ನಿ. ಅಂದಿನಿಂದ ಮೊನ್ನೆ ಮೊನ್ನೆ ಸಾಯುವ ತನಕ ಅಪ್ಪ ಆಹಾರ ಪದ್ಧತಿ ಬದಲಿಸಿಕೊಳ್ಳದಿದ್ದರು ಡಯಟ್ಟು ಮೆಡಿಕೇಶನ್, ವಾಕಿಂಗು, ವ್ಯಾಯಾಮ ಇವುಗಳಿಂದ ತುಂಬಾನೆ ಚೆನ್ನಾಗಿ ಆರೋಗ್ಯ ಕಾಪಾಡಿಕೊಂಡಿದ್ದ್ದರೆನ್ನಬೇಕು.

ಇದೆಲ್ಲಾ ಇರಲಿ ಇದನ್ನೆಲ್ಲಾ ಓದಿ ಯಾರೂ ಗಾಭರಿಯಾಗಬೇಕಿಲ್ಲಾ ಬಿಡಿ.. ನಾನಂತೂ ಸೆಲ್ಫ್ ಕೌನ್ಸೆಲಿಂಗ್ ಮಾಡಿಕೊಳ್ಳುವ ಪ್ರಭುದ್ಧೆ…. ನನಗೇನೆಂದರೆ ಯಾರು ಏನೇ ಹೇಳೀದರೂ ಕೇಳುತ್ತೇನೆ…ಆದರೆ ಕೊನೆಗೆ ನನ್ನದೇ ರೀತಿಯಲ್ಲಿ ಜೀವನ ಶೈಲಿ… ಊಟ ತಿಂಡಿ ಲಿಮಿಟೇಶನ್ನು, ಯೋಗ ನಡಿಗೆ ತಪ್ಪಿಸೊಲ್ಲ,…. ಈ ಕಾಯಿಲೆಗೆ ಮದ್ದಿದೆಯಲ್ಲ ತೆಗೆದುಕೊಂಡರೆ ಕಂಟ್ರೋಲಲ್ಲಿ ಇರುತ್ತದೆಂದಾದರೆ ತಗೋಳ್ಳೋದು ತಪ್ಪೇನು? ಅದೂ ಅಲ್ಲದೆ ಪಥ್ಯ ಮಾಡಿ ಎಲ್ಲಾ ಬಿಡುವ ಸಣ್ಣ ವಯಸ್ಸೇನೂ ಅಲ್ಲಾ. ಸಣ್ಣ ಮಕ್ಕಳಿಗೂ ಕಾಡಿಸುವ ಕಾಯಿಲೆ ಇದು. ಅಂಥದ್ದರಲ್ಲಿ ಒಂದು ವಯಸ್ಸಿನವರೆಗೂ ಸುದೈವದಿಂದ ಎಲ್ಲಾ ಚೆನ್ನಾಗಿ ತಿಂದುಂಡು ಏನಕ್ಕೂ ಕೊರತೆಯಿಲ್ಲದೆ ಬೆಳೆದಿದ್ದೇನೆಂದರೆ ಈಗ ಕೊಂಚ ಆರೋಗ್ಯದ ಧೃಷ್ಟಿಯಿಂದ ಕೆಲವು ಸಣ್ಣ ಪುಟ್ಟ ಮಾರ್ಪಾಟುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ್ರೆ ಆರೋಗ್ಯಪೂರ್ಣವಾಗಿ ಬದುಕಬಹುದೆಂದಾದರೆ ಅದಕ್ಕೆ ನಾನು ತಯಾರಿಯೆ ಇರುತ್ತೇನೆ… ನೋ ರಿಗ್ರೆಟ್ಸ್…ನಮ್ಮ ದೇಹಕ್ಕೆ ನಾವೆ ಮೊದಲು ವೈದ್ಯರು….ಏನಂತಿರೀ…?

—————————————

ಮಮತಾ ಶಂಕರ್

4 thoughts on “ಮಮತಾ ಶಂಕರ್ ಪ್ರಬಂಧ-ಸಲಹುವ ಕಾಯಿಲೆಗಳು……!

Leave a Reply

Back To Top