ನಮ್ಮ ಬಾಲ್ಯದಲ್ಲಿಯೇ ಅನೇಕ ಕೌಶಲ್ಯಗಳನ್ನು  ರೂಢಿ ಮಾಡಿಕೊಂಡು, ಗೆಳೆಯರ ಜೊತೆಗೆ ಮೈಗೂಡಿಸಿಕೊಂಡಿರುತ್ತೇವೆ. ಮುಂದೆ  ನಮ್ಮ ಪ್ರತಿಭೆ ನಮ್ಮನ್ನು ಬೇರೆ ಬೇರೆ ಎತ್ತರದಲ್ಲಿ ಬೆಳೆಸುತ್ತದೆ. ಆದರೆ ಕೆಲವು ಸಲ ಕೆಲವರು ನಮಗೆ ಕೊಂಕು ಮಾತನಾಡುವುದರಿಂದ ನಮ್ಮಲ್ಲಿರುವ ಪ್ರತಿಭೆಗೆ ಪೆಟ್ಟು ಕೊಟ್ಟು ಅಪಹಾಸ್ಯ ಮಾಡುತ್ತಾರೆ.  ಅದು ಹಾಡುಗಾರಿಕೆ, ಸಾಹಿತ್ಯ ಬರೆಯುವ, ನೃತ್ಯ ಮಾಡುವ, ಕಥೆ ಹೇಳುವ, ಚಿತ್ರ ಬಿಡಿಸುವ, ಸಾಹಸದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ… ಹೀಗೆ ಬೇರೆ ಬೇರೆ ಚೈತನ್ಯಪೂರ್ಣವಾದ ಪ್ರತಿಭೆಗಳು ನಮ್ಮಲ್ಲಿದ್ದಾಗಿಯೂ ನಮ್ಮೊಳಗಿನ ಪ್ರತಿಭೆಗೆ ಮೋಸ ಮಾಡುವವರು ಹಲವರು.

 ಪ್ರತಿಭೆಗೆ ನೀರೆರೆದು ಪೋಷಿಸುವರು, ಮಾರ್ಗದರ್ಶನ ಮಾಡುವವರು ಅಷ್ಟೇ ಪ್ರಮುಖರಾಗುತ್ತಾರೆ. ನಮ್ಮಲ್ಲಿರುವ ಕೌಶಲ್ಯದ ಎಳೆಯನ್ನು ಹೊರ ತೆಗೆದು ಅದಕ್ಕೊಂದು ವೇದಿಕೆಯನ್ನು ನೀಡಿ,  ಸರಿಯಾದ ಮಾರ್ಗದರ್ಶನ ಮಾಡಿದರೆ, ಆ ಪ್ರತಿಭೆ  ಅರ್ಥಪೂರ್ಣವಾಗಿ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಅದು ಸಣ್ಣ ಸಸಿಯಿದ್ದಾಗಲೇ ಕಮರುತ್ತದೆ.

 ಹೀಗೆ ಪ್ರತಿಭೆಗಳನ್ನು ಗುರುತಿಸುವ, ಪ್ರೋತ್ಸಾಹಿಸುವ, ಬೆಳೆಸುವ ಗುರುತರ ಜವಾಬ್ದಾರಿ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆಯಲ್ಲಿರುವ ತಂದೆ ತಾಯಿಗಳು ತಮ್ಮ ಮಕ್ಕಳಲ್ಲಿರುವ ಪಠ್ಯೇತರ ಚಟುವಟಿಕೆಗಳನ್ನು, ಕೌಶಲ್ಯಗಳನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹಿಸಬೇಕು. ಮುಂದೆ ಆ ಮಗು ಶಾಲೆಗೆ ದಾಖಲಾದ ನಂತರ ಶಿಕ್ಷಕರಾದವರು ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರುತಿಸಿ, ವೇದಿಕೆಯನ್ನು ಒದಗಿಸಿಕೊಡಬೇಕು.  ಸರಿಯಾದ ಮಾರ್ಗದರ್ಶನವನ್ನು ಮಾಡಿದರೆ ಮಕ್ಕಳು ಮುಂದೆ ಆಯಾ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ.

ಕೆಲವು ಸಲ ಹೀಗಾಗುತ್ತದೆ… ಮಗು ಏನೋ ಹೇಳಲು ಬರುತ್ತದೆ. “ಸಾರ್ ನಾನು ಈ ರೀತಿಯ ಚಿತ್ರವನ್ನು ಬರೆದಿದ್ದೇನೆ, ನಾನು ಈ ರೀತಿ ಹಾಡುತ್ತೇನೆ, ನಾನು ಹೀಗೆ ಆಟವನ್ನು ಆಡುತ್ತೇನೆ ಸರ್, ನಾನು ಕತೆ ಹೇಳ್ಳಾ…” ಎನ್ನುವ ಮಾತುಗಳೊಂದಿಗೆ ಪ್ರಾರಂಭವಾಗುವ ಮಕ್ಕಳ ಕುತೂಹಲಕ್ಕೆ ಶಿಕ್ಷಕರಾದವರು, ಪಾಲಕರಾದವರು,  ಆ ಮಗು  ಕಥೆ ಹೇಗೆಯಾದರೂ ಹೇಳಲಿ, ಹಾಡು ಹೇಗಾದರೂ ಹಾಡಲಿ, ನೃತ್ಯ ಹೇಗೋ ಮಾಡಲಿ, ಅದಕ್ಕೆ ಮೊದಲು ನಾವು ಪ್ರೋತ್ಸಾಹಿಸಬೇಕು.

“ಶಹಬ್ಬಾಸ್  ಬಹಳ ಚೆನ್ನಾಗಿದೆ,  ಗುಡ್ ವೆರಿ ಗುಡ್, ನೀನು ಈ ರೀತಿ ಇನ್ನೊಂದ್ ಸ್ವಲ್ಪ ಕಲರ್ ಕೊಟ್ಟರೆ ಇನ್ನೂ ತುಂಬಾ ಚೆನ್ನಾಗಿ ಆಗುತ್ತೆ,  ನೀನು ಧ್ವನಿಯನ್ನು ಸ್ವಲ್ಪ ಎತ್ತರಿಸಿ ಹಾಡು ತುಂಬಾ ಇಂಪಾಗಿ ಬರುತ್ತದೆ,  ವ್ಹಾ… ಅದ್ಭುತ ಹಾಡು ಎಷ್ಟು ಚೆನ್ನಾಗಿದೆ….” ಎನ್ನುವ ಇಂತಹ ಪ್ರೋತ್ಸಾದಾಯಕ ಮಾತುಗಳು ಮಕ್ಕಳಲ್ಲಿರುವ ಉತ್ಸಾಹವನ್ನು ಹೆಚ್ಚಿಸಿದಂತಾಗುತ್ತದೆ.

 ಕೆಲವು ಸಲ ನಾವು ಯಾವುದೋ ಕೋಪದಲ್ಲಿದ್ದಾಗ ಮಗು ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಬಂದರೆ ಅದನ್ನು ಹೀಯಾಳಿಸಿ, “ಅಯ್ಯೋ ಇದೊಂದು ಚಿತ್ರಾನಾ..?  ನೀನು ಹಾಡಿದರೆ  ಕತ್ತೆ ಬರ್ತಾವೆ ಕಣೋ….ಹ್ಹ ಹ್ಹಾ…,  ನಿನಗೆ ಆಟ ಆಡೋಕೆ  ಬರೋದಿಲ್ಲ ನೀನು ಶತ ಮೂರ್ಖ…”  ಎನ್ನುವ ಋಣಾತ್ಮಕ ಸಲಹೆಗಳು, ಬೈಗುಳಗಳು, ನಿಂದಿಸುವಿಕೆ, ಮೂದಲಿಕೆಗಳು, ಅಪಹಾಸ್ಯದ ಮಾತುಗಳು  ಮಕ್ಕಳಲ್ಲಿರುವ ಕೌಶಲ್ಯವನ್ನು ಕೊಂದು ಹಾಕಿಬಿಡುತ್ತವೆ.  

 ಆಗ ಮಕ್ಕಳಲ್ಲಿ ಮಾನಸಿಕ ವೈಯ್ದಾಟ ಪ್ರಾರಂಭವಾಗಿ “ನಾನು ಇದನ್ನು ಬರೆಯಲಾಗುವುದಿಲ್ಲ, ಹಾಡಲಾಗುವುದಿಲ್ಲ, ಓದಲಾಗುವುದಿಲ್ಲ, ಕಥೆ ಹೇಳಲಾಗುವುದಿಲ್ಲ …ಹೀಗೆ ತಮ್ಮ ತಮ್ಮಲ್ಲಿಯೇ ಮನಸ್ಸಿನೊಳಗೆ ನನ್ನಿಂದ ಆಗುವುದಿಲ್ಲ ಎನ್ನುವ ಋಣಾತ್ಮಕ ಆಲೋಚನೆಗಳು ಬೆಳೆಯುತ್ತಾ ಬೆಳೆಯುತ್ತಾ ಬಹು ದೊಡ್ಡದಾಗಿ ನನ್ನಿಂದ ಏನೂ ಆಗುವುದಿಲ್ಲ ಎನ್ನುವ ಹಿಂಜರಿಕೆ ಪ್ರಾರಂಭವಾಗಿ ಬಿಡುತ್ತದೆ.

 ಹೀಗೆ ಹಿಂಜರಿಕೆಯಿಂದ ಪ್ರಾರಂಭವಾದ ಅವರ ಕಲಿಕೆ ಪಠ್ಯತೇರ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗುತ್ತವೆ. “ನಿನ್ನಿಂದ ಅದಾಗುವುದಿಲ್ಲ” ಎನ್ನುವ ಒಂದೇ ಒಂದು ಮಾತಿನಿಂದ ಅವು ಕುಗ್ಗಿ ಹೋಗುತ್ತವೆ. ಮುಂದೆಂದೂ ಆ ಮಗು ಆಯಾ ಕ್ಷೇತ್ರಗಳ ಕಡೆ ಸುಳಿಯುವುದಿಲ್ಲ. ಯಾರಾದರೂ ಚೆನ್ನಾಗಿ ಹಾಡಿದರೆ, ಚಿತ್ರ ಬರೆದರೆ, ಆಟ ಆಡಿದರೆ, ಕಥೆ ಹೇಳಿದರೆ ಅದನ್ನು ನೋಡಿ ಆ ಮಗು ತನ್ನೊಳಗೆ ತಾನು ಜುಗುಪ್ಸೆಗೊಳ್ಳುತ್ತದೆ. ಕೆಲವು ಸಲ “ನಾನು ಆ ರೀತಿ ಆಗಲಿಲ್ಲವಲ್ಲ” ಎನ್ನುವ ಕೊರಗಿನಲ್ಲಿ ಮಗು ಮಾನಸಿಕ ಖಿನ್ನತೆಗೆ ಒಳಗಾಗುತ್ತದೆ.

ಈ ರೀತಿಯಲ್ಲಿ ಪ್ರಾರಂಭವಾದ ಹಿಂಜರಿಕೆಯು ನಾಳೆ ಮಾಡಿದರಾಯಿತು, ಮುಂದೆ ಮಾಡಿದರಾಯಿತು, ನಾನು ಚಿತ್ರ ಬಿಡಿಸಿದರೆ, ಯಾರು ಏನಾದರೂ ಅಂದರೆ..? ಅಯ್ಯೋ ಹಾಡಿದ ಹಾಡಿಗೆ, ಧ್ವನಿಗೆ ಯಾರಾದರೂ ಬೈದರೆ, ಅಂದುಕೊಂಡು, ಮಾಡಬೇಕಾದ ಕೆಲಸ, ಪ್ರತಿಭೆಯ ಅನಾವರಣ, ವ್ಯಾಪಾರ, ವೃತ್ತಿ….ಎಲ್ಲವನ್ನೂ ಮುಂದೂಡಿ ಬಿಡುತ್ತೇವೆ. ಅಂಜಿಕೆಯ ಬಲೆಯೊಳಗೆ, ಹಿಂಜರಿಕೆಯ ನಡೆಯನ್ನು ಮುಂದುವರಿಸಿ, ಬದುಕನ್ನು ಸಾರ್ಥಕವಿಲ್ಲದಂತೆ ಮಾಡಿಕೊಳ್ಳತ್ತೇವೆ.

ಪಾಲಕರಾದ ನಾವು ಮಕ್ಕಳನ್ನು ಧನಾತ್ಮಕ ಆಲೋಚನೆಯೊಳಗೆ ಬೆಳೆಸಬೇಕೆ ವಿನ: ಋಣಾತ್ಮಕ ಆಲೋಚನೆಯೊಳಿಂದಲ್ಲ.‌‌..!!  ಮಕ್ಕಳಲ್ಲಿರುವ ವಿವಿಧ ಕೌಶಲ್ಯಗಳನ್ನು, ಯಾವುದೇ ಮುಲಾಜಿಲ್ಲದೆ ಅವರಿಗೆ ಮಾರ್ಗದರ್ಶನ ಮಾಡಿ, ಆಯಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಸಾಧ್ಯವಾದರೆ ಅವರಿಗೆ ವೇದಿಕೆ ಒದಗಿಸುವ ಅವಕಾಶವನ್ನು ಕಲ್ಪಿಸಬೇಕು. ಮಾಡಬೇಕಾದ ಕೆಲಸವನ್ನು ಅಂದೆ ಮಾಡಲು ತಿಳಿ ಹೇಳಬೇಕು. ಅದರಂತೆ ನಾವು ಪ್ರಯತ್ನಪಡಬೇಕು. ಮಾನಸಿಕವಾಗಿ ಗಟ್ಟಿಗೊಳಿಸುವ, ಸೋತಾಗ ಅವರನ್ನು ಸಂತೈಸುವ, ಗೆದ್ದ ಸಂಭ್ರಮದಲ್ಲಿರುವಾಗ ಅವರನ್ನು ಹಾರೈಸುವ, ಹಾಗೆಯೇ ಇನ್ನೂ ಎತ್ತರದ ಸಾಧನೆ ಮಾಡಲು ಅವರನ್ನು  ಸಿದ್ದಗೊಳಿಸುವ ಗುರುತುರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

 ಒಂದು ಸಲ ಮಗುವಿನ, ವ್ಯಕ್ತಿಯ  ಮನದೊಳಗೆ ‘ಅಂಜಿಕೆ’ ಎಂಬ ‘ಹಿಂಜರಿಕೆಯ’ ಬಲೆಯೊಳಗೆ ಬಿದ್ದರೆ ಅದು ವಿಲವಿಲನೆ ಒದ್ದಾಡಿ ಅಲ್ಲಿಯೇ ತನ್ನ ಪ್ರತಿಭೆಯನ್ನು ಕೊಂದು ಹಾಕಿಬಿಡುತ್ತದೆ.  ಅಸಡ್ಡೆ ಮಾಡುವವರಿಗೆ ಯಾವತ್ತೂ ನಾವು ತಲೆಕೆಡಿಸಿಕೊಳ್ಳದೆ, ನಮ್ಮ ಮಕ್ಕಳ ಹಾಗೂ ನಮ್ಮ ಪ್ರತಿಭೆಗಳ ಬಗ್ಗೆ ನಮಗೆ ನಂಬಿಕೆಯಿರಬೇಕು. ಆ ಪ್ರತಿಭೆಯನ್ನು ಬೆಳೆಸುತ್ತಾ ಅವರನ್ನು ಪ್ರೋತ್ಸಾಹಿಸುವುದರ ಜೊತೆಗೆ ನಾವು ಬೆಳೆಯುತ್ತಾ ಹೋದಾಗ ಅಂಜಿಕೆ ಇಲ್ಲವಾಗಿ ಬಿಡುತ್ತದೆ. ಹಿಂಜರಿಕೆಯನ್ನು ದೂರ ತಳ್ಳಿ, ಪ್ರತಿಭೆಗಳನ್ನು ಬೆಳೆಸುವ ಹಾಗೇ ಶುಭ ಹಾರೈಸೋಣ.


Leave a Reply

Back To Top