ಅವನು ನಾಲ್ಕು ಗೋಡೆಗಳ ಮಧ್ಯೆ ಇಷ್ಟವಿಲ್ಲದಿದ್ದರೂ ನಾನು ಗೆಲ್ಲಬೇಕು, ಎಲ್ಲರನ್ನೂ ಮೆಚ್ಚಿಸಬೇಕು, ಇದರಿಂದಾಗಿ ಮುಂದೆ ನನ್ನ ಜೀವನ ಪ್ರಸಿದ್ದಿಗೆ ಬರುತ್ತದೆ ಎಂದು ಹಾಗೆ ನಟಿಸುತ್ತಲೇ ಇರುತ್ತಾನೆ.

ಇಲ್ಲಿ ಇನ್ನೊಬ್ಬಳು ತನ್ನ ನೈಜ ಬದುಕಿನ ಸ್ಥಿತಿಗತಿಗಳನ್ನು ತೆರೆಯ ಮೇಲೆ ತೋರಿಸಲು ಯಾರ್ಯಾರಿಗೋ ಒಪ್ಪಂದಕ್ಕೆ ಒಳಗಾಗಿ ನಂತರ ಅದರಿಂದ ಹೊರಬರಲಾಗದೆ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಳು.

ಈ ಮೇಲಿನ ಎರಡು ಸನ್ನಿವೇಶಗಳು ಇಂದಿನ ಕಿರುತೆರೆಗಳ ಚಾನಲ್ ಗಳು ನಡೆಸಿಕೊಡುವ ವಿವಿಧ ರಿಯಾಲಿಟಿ ಶೋಗಳ ಒಟ್ಟಾರೆ ಸಮೀಕ್ಷೆಯನ್ನು ಆವಲೋಕನ ಮಾಡಿದಾಗ ನಮಗೆ ಸಿಕ್ಕ ಅಭಿಪ್ರಾಯಗಳಿವು. ಎಷ್ಟೊಂದು ಚಾನೆಲ್ ಗಳು, ಎಷ್ಟೊಂದು ರಿಯಾಲಿಟಿ ಕಾರ್ಯಕ್ರಮಗಳು….ವಿಕ್ಷಕರು ತನ್ನದೆ ಚಾನಲ್ ನೋಡಬೇಕು, ಟಿಆರ್‌ಪಿ ಹೆಚ್ಚಿಸಬೇಕು ಎನ್ನುವ ದಾವಂತದಲ್ಲಿ ಜನರ ಅಭಿರುಚಿಗಳನ್ನು, ಆಸಕ್ತಿಗಳನ್ನು ತಾವೇ ನಿರ್ಧಾರಿಸುತ್ತಲೇ, ಅವರ ಅಭಿಪ್ರಾಯಗಳನ್ನು ಧನಾತ್ಮಕಗೊಳಿಸದೆ, ಋಣಾತ್ಮಕಗೊಳಿಸುವ ಒಂದು ಮಾರುಕಟ್ಟೆ ವ್ಯವಸ್ಥೆ ನಡೆದಿರುವುದು ದುರಂತ ಎನ್ನಬಹುದು.

ರಿಯಾಲಿಟಿ ಶೋಗಳು ಹಳ್ಳಿ ಹುಡುಗಿ ಪ್ಯಾಟಿಗೆ ಬಂದಳು…ಪ್ಯಾಟೆ ಹುಡ್ಗೀರ್ ಹಳ್ಳಿಗೆ ಬಂದರು, ಬಿಗ್ ಬಾಸ್ , ಹಾಡಿನ ಸ್ಪರ್ಧೆಗಳು, ಡ್ಯಾನ್ಸ ಕರ್ನಾಟಕ ಡ್ಯಾನ್ , ಹಾಡು ಕರ್ನಾಟಕ ಹಾಡು, ಗಿಲಿ ಗಿಲಿ ಗಿಚ್ಚ ಹಾಸ್ಯ ಶೋಗಳು….ಹೀಗೆ ಹಲವಾರು ರಿಯಾಲಿಟಿ ಶೋಗಳು ನಡೆಯುತ್ತಿರುವುದು ಅಲ್ಲಿಯ ಸ್ಪರ್ದಾಳುಗಳು ಬಹುತೇಕ ಆಯ್ಕೆಯಾಗಬೇಕೆಂದರೆ ಸಮಾಜದಲ್ಲಿ ಅವರು ಧನಾತ್ಮಕವಾಗಿರಲಿ, ಋಣಾತ್ಮಕವಾಗಿರಲಿ ಒಟ್ಟಾರೆ ಹೆಸರು ಮಾಡಿದವರು ಮಾತ್ರ ಆಯ್ಕೆಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಸಲ ಶಿಫಾರಸ್ಸಿನಿಂದ ಬಂದ, ತಮಗೆ ಬೇಕಾದ ಸ್ಪರ್ಧಾಳುಗಳನ್ನು ಆಯ್ಕೆ ಮಾಡುತ್ತಾರೆ.

ಇಡೀ ಕಾರ್ಯಕ್ರಮ ಮುಗಿಯುವವರೆಗೂ ಟಿವಿಯನ್ನು ನೋಡಲು ಜನರನ್ನು ಹಿಡಿದಿಡುವ, ಟಿಆರ್‌ಪಿಯನ್ನು ಹೆಚ್ಚಿಸುವ ಮಾರುಕಟ್ಟೆಯ ವ್ಯವಸ್ಥೆಗೆ ಸಿದ್ಧಗೊಳಿಸುತ್ತಾರೆ. ಇದರಿಂದ ಕೆಲಸ ಮಾಡುವ ಮಹಿಳೆಯರು, ವಿದ್ಯಾರ್ಥಿಗಳು, ಯುವಕರು,ವೃತ್ತಿಪರರು ತಮ್ಮ ನಿತ್ಯದ ಕಾರ್ಯಕ್ರಮವನ್ನು ಬಿಟ್ಟು ರಿಯಾಲಿಟಿ ಶೋ ಗಳನ್ನು ನೋಡುವ ಒಂದು ಹುಚ್ಚು ಸೋಕಿಗೆ ಒಳಗಾಗಿರುವುದು ದುರಂತವೆಲ್ಲವೇ..?
ಇಂತಹ ರಿಯಾಲಿಟಿ ಶೋಗಳು ಧನಾತ್ಮಕವಾಗಿ ಬಳಕೆಯಾಗದಿರುವುದು ಸತ್ಯ. ವಿದ್ಯಾರ್ಥಿಗಳಲ್ಲಿ ರಸಪ್ರಶ್ನೆ ಸ್ಪರ್ಧೆ, ಪ್ರಯೋಗಗಳು, ಓದಿನ ಬಗ್ಗೆ ಆಸಕ್ತಿದಾಯಕವಾಗಿರತಕ್ಕಂಥ ವಸ್ತು ಪ್ರದರ್ಶನಗಳು…ಪಾಠಗಳ ಬೋಧನೆ… ಇಂತಹ ಪ್ರಮುಖ ಕಾರ್ಯಕ್ರಮಗಳನ್ನು ಬಿಟ್ಟು, ಇನ್ನೂ ಅನೇಕ ಸಮಾಜಮುಖಿಯಲ್ಲದ ರಿಯಾಲಿಟಿ ಶೋಗಳು ಕೆಲವು ಸಲ ಕ್ರೂರತೆಯನ್ನು, ಜಗಳವನ್ನು, ಅಸಹ್ಯಕರವಾದ ಅಶ್ಲೀಲ ದೃಶ್ಯಗಳನ್ನು ಮನೆ ಮಂದಿಗೆಲ್ಲ ತೋರಿಸುತ್ತವೆ. ಹೀಗೇ ಒಂದು ಸಾಂಸ್ಕೃತಿಕ ಪರಂಪರೆಯನ್ನು ಹಾಳು ಮಾಡುತ್ತಿರುವುದು ವಿಷಾದವೆನ್ನಬಹುದು.

ಇಂತಹ ರಿಯಾಲಿಟಿ ಶೋಗಳಿಂದ ಮಕ್ಕಳು ಹೊರಬರಲಾರದೆ ಅದನ್ನು ದಿನಾಲು ನೋಡಿ ತಮ್ಮ ನೈಜ ಕಾರ್ಯಕ್ರಮಗಳನ್ನು ಮರೆತುಬಿಡುತ್ತಾರೆ.

ಭಾಗವಹಿಸುವ ರಿಯಾಲಿಟಿ ಶೋ ಗಳಲ್ಲಿ ಪೈಪೋಟಿಗೆ ಬಿದ್ದವರಂತೆ ಒಬ್ಬರ ಮೇಲೊಬ್ಬರು ದ್ವೇಷ ಕಾರುತ್ತಲೇ ಋಣಾತ್ಮಕ ಅಂಶಗಳನ್ನು ಬಿತ್ತುತ್ತಾರೆ. ಸ್ನೇಹ ಸಹಕಾರದಿಂದ ಇರಬೇಕಾದ ಸಾಂಸ್ಕೃತಿಕ ವಾತಾವರಣವನ್ನು ಹದಗೆಡಿಸುತ್ತಾರೆ. ಮಕ್ಕಳಲ್ಲಿಯೂ ಕೂಡ ಋಣಾತ್ಮಕ ಅಂಶಗಳನ್ನು ಬಿತ್ತಿ ಹೋಗವ ರಿಯಾಲಿಟಿ ಶೋಗಳು ಟಿಆರ್‌ಪಿ ಯಿಂದ ಮಾರುಕಟ್ಟೆ ವ್ಯವಸ್ಥೆಗೆ ಲಾಭ ಬಂದರೆ ಸಾಕು ಎನ್ನುತ್ತಾರೆ ಅದರ ಪ್ರಾಯೋಜಕರು.

ನೋಡುವ ವೀಕ್ಷಕರು ಸಮಯ, ಹಣ, ದುಡಿಮೆ ಅಲ್ಲದೆ ಅವರ ಮಾನಸಿಕ ಮನೋವಿಕಾಸಕ್ಕೆ ಅಡ್ಡಿಯಾಗಿ ಅನೇಕ ವೈರುಧ್ಯಗಳನ್ನು ಎದುರಿಸುತ್ತಿರುವುದು ಇಂದಿನ ಸಂಸ್ಕೃತಿಕ ಪರಂಪರೆಗೆ ಬಿದ್ದ ಬಹುದೊಡ್ಡ ಪೆಟ್ಟು.

ಒಂದು ಕಾಲದಲ್ಲಿ ಗ್ರಾಮೀಣ ಜಾನಪದ ಕಲೆಗಳಾದ ಡೊಳ್ಳು, ಕುಣಿತ, ಭಜನೆ, ಬಯಲಾಟಗಳು, ಯಕ್ಷಗಾನ, ನಾಟಕಗಳು, ಸೋಬಾನ ಪದಗಳು, ಲಾವಣಿ, ಹಂತಿ ಪದಗಳು, ಬೀಸೋ ಪದಗಳು, ಕರಡಿ ಮಜಲು, ಹಲಗೆ ವಾದನ… ಇವೆಲ್ಲವೂ ಕೂಡ ರೇಡಿಯೋ ಮೂಲಕ ಕೇಳಿ ಆನಂದಿಸುತ್ತಿದ್ದ ಕಾಲವೊಂದಿತ್ತು. ನೈಜ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅವಕಾಶ ಮಾಡಿಕೊಟ್ಟು ಅವರನ್ನು ಪ್ರೋತ್ಸಾಹಿಸುತ್ತಿದ್ದರು.

ಕಾಲ ನಂತರ ಟಿವಿ ಎಂಬ ಮಾಯಾಜಾಲ ಮುರ್ಖರ ಪೆಟ್ಟಿಗೆ ಅನೇಕ ಚಾನೆಲ್ ಗಳನ್ನು ಇಟ್ಟುಕೊಂಡು ಸದಾಭಿವೃದ್ಧಿಯುಳ್ಳ, ಸದಾಭಿರುಚಿ, ಕಾರ್ಯಕ್ರಮಗಳನ್ನು ರೂಪಿಸಬೇಕಾದ ಚಾನೆಲ್ ಗಳು ‘ರಿಯಾಲಿಟಿ ಶೋ’ ಗಳೆಂಬ ವಾಣಿಜ್ಯೀಕರಣದ ಕಾರ್ಯಕ್ರಮಗಳನ್ನು ರೂಪಿಸಿ ನೈಜವಾದ ಸಾಂಸ್ಕೃತಿಕ ಪರಂಪರೆಯ ಕಣ್ಮರೆಗೆ ಕಾರಣವಾಗಿರುವುದು ಇಂದಿನ ನೋವಿನ ಸಂಗತಿ. ವಿಶೇಷವಾಗಿ, ಚಂದನಂತಹ ಕಿರುತೆರೆಗಳು ಮೊದಲಿನ ಸದಾಭಿರುಚಿಯುಳ್ಳ ರಸಪ್ರಶ್ನೆ, ಬಯಲಾಟ, ಜಾನಪದ, ಡೊಳ್ಳು ಕುಣಿತ, ಸಾಹಿತ್ಯಿಕ,ಕಾವ್ಯಾಲೋಚನೆ, ಸಾಧಕರ ಪರಿಚಯ… ಅವುಗಳನ್ನು ರೂಪಿಸುವಾಗ ಇರುವಂತೆಯೇ ತೋರಿಸುತ್ತಾರೆ. ಅಬ್ಬರದ ಯಾವುದೇ ಪ್ರಚಾರವಿಲ್ಲದೆ, ವೀಕ್ಷಕರು ಮನದಾಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಕೆಲವು ಖಾಸಗಿ ಚಾನೆಲ್ ಗಳು ಕಾರ್ಯಕ್ರಮಗಳ ಗುಣಮಟ್ಟವನ್ನು ಸರಿಯಾಗಿರದಿದ್ದರೂ ಅತ್ಯಂತ ಅಬ್ಬರದ ಪ್ರಚಾರಕ್ಕೆ ವೀಕ್ಷಕರನ್ನು ಹಿಡಿದಿಡಲು ಪ್ರಯತ್ನಪಡುತ್ತಾರೆ.

ಅದರಲ್ಲೂ ‘ರಿಯಾಲಿಟಿ ಶೋ’ ಗಳೆಂಬ ಕಾರ್ಯಕ್ರಮಗಳು ಸಮಾಜಮುಖಿ ಚಿಂತನೆಗೆ ಒತ್ತುಕೊಡುತ್ತಿಲ್ಲ ಎನ್ನುವುದು ನಿರ್ವಿವಾದ.

ಈ ರೀತಿಯಲ್ಲಿ ರೂಪಗೊಂಡ ‘ರಿಯಾಲಿಟಿ ಶೋ’ ಗಳು ತೆರೆಯ ಹಿಂದೆ ಅನೇಕ ಗುಪ್ತ ಸಂಗತಿಗಳು, ಪಿಸುಮಾತುಗಳು, ಒಪ್ಪಂದಗಳು, ಮುಖವಾಡಗಳು ತುಂಬಿಕೊಂಡು ಕಿರುತೆರೆಯ ಮೇಲೆ ಮತ್ತೊಂದು ರೀತಿಯ ಮುಖವಾಡವನ್ನು ತೋರಿಸುತ್ತವೆ. ವೀಕ್ಷಕರು ಯಾವುದನ್ನು ನಂಬಬೇಕು..? ಯಾವುದನ್ನು ಧನಾತ್ಮಕವಾಗಿ ಸ್ವೀಕರಿಸಬೇಕು..? ‘ವೋಟು’ ಎನ್ನುವ ಪ್ರಜಾಸತ್ತಾತ್ಮಕ ಸ್ಪರ್ಧೆಯೊಡ್ಡಿದ್ದೇವೆ ಎನ್ನುವುದನ್ನು ಹೇಳುತ್ತಲೇ ಯಾವುದನ್ನೂ ಮುಕ್ತವಾಗಿ ತೋರಿಸದೆ, ರಿಯಾಲಿಟಿ ಶೋಗಳನ್ನು ಗುಪ್ತವಾಗಿಟ್ಟು ತಮ್ಮ ಟಿ ಆರ್ ಪಿ ಗಳನ್ನು ಹೆಚ್ಚಿಸುವಲ್ಲಿ ಮುಗ್ನನಾಗಿರುತ್ತಾರೆ.

ಹೀಗೆ ಒಂದು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಬೇಕಾದ ಗುರುತರವಾದ ಜವಾಬ್ದಾರಿಯುಳ್ಳ ಕಿರುತೆರೆಗಳು ಇವತ್ತು ವ್ಯಾಪಾರ ಕೇಂದ್ರಗಳ ಲೋಕದೊಳಗೆ ಬಿದ್ದು, ಪ್ರತಿಭೆಗಳನ್ನು ಬೆಳೆಸುವ ನೆಪದೊಳಗೆ ತಮ್ಮ ಜವಾಬ್ದಾರಿಯನ್ನು ಮರೆತಿರುವುದು ವಿಷಾದನೀಯ.

‘ರಿಯಾಲಿಟಿ ಶೋ’ಗಳು ಸಮಾಜಮುಖಿ ಚಿಂತನೆಗೆ ಒಳಪಡಲಿ, ಅವುಗಳಲ್ಲಿ ಧನಾತ್ಮಕ ಆಲೋಚನೆಗಳಿರಲಿ, ಒಳ್ಳೆಯ ಅಂಶಗಳನ್ನು ಬಿತ್ತರಿಸುತ್ತಿರಲಿ, ವೀಕ್ಷಕರಿಗೆ ಅವು ಹೊಸತನವನ್ನು, ಚೈತನ್ಯವನ್ನು, ಸ್ಪೂರ್ತಿಯನ್ನು ನೀಡುವ ಆ ರೀತಿಯಾದ ರಿಯಾಲಿಟಿ ಶೋಗಳು ರೂಪಗೊಂಡಾಗ ಮಾತ್ರ ಅದಕ್ಕೆ ಒಂದು ಅರ್ಥ ಬಂದೀತು. ಇಲ್ಲವೆಂದರೆ ಮೋಸ, ವಂಚನೆ, ಕಾಲೆಳೆಯುವದರೊಳಗೆ ‘ರಿಯಾಲಿಟಿ ಶೋ’ಗಳು ಕಳೆದು ಹೋಗುತ್ತಿರುವುದು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ದುರಂತ ಎನ್ನಬಹುದು. ಹಾಗಾಗದಿರಲಿ ಎನ್ನುವುದೇ ಒಲವಿನ ಹಾರೈಕೆ.

—————————

Leave a Reply

Back To Top