ನಸುಕಿನಲ್ಲಿ ಎದ್ದ ಯಜಮಾನರೊಬ್ಬರು  ‘ಗೊರ್’ ಎಂಬ ಉಸಿರಾಟ ತೊಂದರೆಯ  ಶಬ್ದದೊಂದಿಗೆ ತಟ್ಟಿ  ಚಪ್ಪರದ ಹೋಟೆಲ್ ಒಂದರಲ್ಲಿ ‘ಚಹಾ’ ಕೊಡಲು ಸನ್ನೆ ಮಾಡಿ, ಚಹಾ ಹೀರಿತ್ತಾ, ಹಗುರಾಗುತ್ತಿದ್ದರು.

 ದೊಡ್ಡ ನಗರದಲ್ಲಿ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಚಹಾ ಕುಡಿಯಲು ಗೆಳೆಯರು ರೌಂಡ್ ಟೇಬಲ್ ಮುಂದೆ ಕುಳಿತು ಹರಟೆ ಹೊಡೆಯುತ್ತಿದ್ದರು.

 ಈ ಮೇಲಿನ ಎರಡು ಸನ್ನಿವೇಶಗಳು ಮೊದಲು ನಮ್ಮ ಬದುಕಿನಲ್ಲಿ ಸಮಯ ಕಳೆಯಲು, ಯಾರನ್ನಾದರೂ ಕಾಯಲು, ಆಪ್ತವಾಗಿ ಗೆಳೆಯರೊಂದಿಗೆ ಮಾತನಾಡಲು, ಚಹಾದ ಅಡ್ಡಗಳೇ ಕೇಂದ್ರವಾಗಿದ್ದವು.  ಊರಿನ, ನಗರದ, ತಾಲೂಕಿನ, ಜಿಲ್ಲೆಯಲ್ಲಷ್ಟೇ ಯಾಕೆ..? ರಾಜ್ಯ, ದೇಶ, ವಿಶ್ವದ ಎಲ್ಲ ರಾಜಕೀಯ ಆಗುಹೋಗುಗಳು ಬಗ್ಗೆ  ಅವತ್ತು ಚರ್ಚೆಗೆ ಬಂದು ಹೋಗುತ್ತಿದ್ದವು. ಊರಿನಲ್ಲಿರುವ ವಿವಿಧ ಸುದ್ದಿಗಳ ಮಜಲುಗಳಿಗೆ ಬಣ್ಣ ತುಂಬಿ, ‘ಸುದ್ದಿ’ ಎಂಬ ಹಕ್ಕಿಯನ್ನು ಹಾರಿ ಬಿಡುವ ಉತ್ಸಾಹಕತೆ ‘ಚಾದಂಗಡಿ’ ಎಂಬ ಅಡ್ಡಾದಲ್ಲಿ ನಿರಂತರವಾಗಿತ್ತು.

‘ಚಹಾ’ ಎಂದರೆ ಹಾಗೇ ಆಪ್ತ ಸಮಾಧಾನದ ಮಾಧ್ಯಮ. ಚಹಾ ಕುಡಿಯುತ್ತಾ, ಕುಡಿಯುತ್ತಾ ಒಂದು ರೀತಿಯ ನಶೆಯ ಮುತ್ತಿನಲ್ಲಿ ಎಲ್ಲರ ಬಗ್ಗೆ ಮಾತನಾಡಿ, ಹೃದಯ ಹಗುರವಾಗುವಂತೆ ಮಾತನಾಡುತ್ತಾ ತನ್ನಲಿರುವ ಸಂಶಯ, ಆಪ್ತತೆ, ನೋವು, ನಲಿವು, ಹತಾಶೆ ಎಲ್ಲವನ್ನು ಕಳೆದುಕೊಂಡು ಹೃದಯ ಹಗುರಾಗುವ ಬದುಕಿನ ಬಹುದೊಡ್ಡ ಮಜಲು.

ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ನೆಂಟರು, ಬೀಗರು, ಸಂಬಂಧಿಕರು, ಸ್ನೇಹಿತರು, ಅತಿಥಿಗಳು ಬಂದರೆ ಮೊದಲು ನೀರು ಕೊಟ್ಟು ನಂತರ ಚಹಾ ಕೊಡುವುದು ವಾಡಿಕೆ.  ಆ ಸಂಪ್ರದಾಯ ಇವತ್ತಿಗೂ ಮುಂದುವರಿದು ಸಮಾಧಾನದ ವಿಷಯ. ಹಿಂದೆ ಕೆಮ್ಮು, ನೆಗಡಿ, ಜ್ವರ.. ಹಾಗೆಯೇ ಕಫ ಪ್ರಕೃತಿಯ ರೋಗಿಗಳು ಮಾಡಿಕೊಂಡು ಕುಡಿದಾಗ ಕಫ ಕರಗಿ ಅವರ ಉಸಿರಾಟದ ಆರೋಗ್ಯ ಸುಧಾರಿಸುತ್ತಿತ್ತು. ಸಾಂಪ್ರದಾಯಿಕ ಆಯುರ್ವೇದಿಕ ಔಷಧಿಯಾಗಿಯೂ ಚಹಾ ತನ್ನ ಘಮಘಮ ಪರಿಮಳವನ್ನು ಇವತ್ತಿಗೂ ಬೀರುತ್ತಿದೆ. ‘ಕೊರೋನಾ’ದಂತಹ ಕಾಲಘಟ್ಟದಲ್ಲಿ ‘ಡಿಕಾಶನ್’ ಗೆ ಎಲ್ಲಿಲ್ಲದ ಬೆಲೆ ಅದನ್ನು ಮನೆಯವರೆಲ್ಲರೂ ಕುಡಿದು, ಕೆಮ್ಮು ನೆಗಡಿ ಬರದಂತೆ ತಡೆ ಹಿಡಿದುಕೊಂಡಿದ್ದು ನನ್ನ ಆಪ್ತ ಸ್ನೇಹಿತ ಚಹಾದ ಹಿರಿಮೆಯನ್ನು ತೋರಿಸುತ್ತದೆ.

‘ಚಹಾ’ ಬೆಳೆಯುವುದು ದೇಶದಲ್ಲಿಯೇ  ನಮ್ಮ ರಾಜ್ಯಕ್ಕೆ ವಿಶೇಷವಾಸ್ಥಾನಮಾನವಿದೆ.  ಚಹಾ, ಕಾಫಿ ಎಲೆಗಳು ಸಹ್ಯಾದ್ರಿ ಮಲೆನಾಡಿನ ಘಟ್ಟದ ಪ್ರಮುಖ ಬೆಳೆಯಾಗಿದೆ. ನಮ್ಮ ರೈತರು ಬೆಳೆದ ಬೆಳೆಯನ್ನು ಹಸನಾಗಿ ಬಳಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ‌.  ಹಾಗೆಯೇ ‘ಚಹಾ’ ಎನ್ನುವುದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಹಿಂದೆ ‘ಚಹಾ’ ಸಾಂಪ್ರದಾಯಿಕ ಹೋಟೆಲ್ ಗಳಲ್ಲಿ, ಮನೆಗಳಲ್ಲಿ ಬಳಸುವುದನ್ನು ನೋಡಿದ್ದೆವು. ಆದರೆ ಇವತ್ತು ಚಹಾ, ಕಾಫಿಯನ್ನು ವಾಣಿಜ್ಯೀಕರಣಗೊಳಿಸಿ ಅದಕ್ಕೊಂದು ಸೂಕ್ತವಾದ ಮಾರುಕಟ್ಟೆ ನಿರ್ಮಿಸಿರುವುದು ನಮ್ಮ ರೈತರ ಪಾಲಿಗೆ ಅದೊಂದು ಸಂಜೀವಿನಿ ಎಂದು ಗುರುತಿಸಬಹುದು.

 “ಬಾರೋ ಚಾ ಕುಡಿಯೋಣ.., ಬಾ ಕಾಫಿ ಹೀರೋಣ…, ಚಹಾ ಕುಡಿಸಲ್ವಾ ಮಾವ…? ಇವತ್ತು ಚಹಾ ಬಿಲ್ ನಿಂದೆ…” ಹ್ಹ ಹ್ಹಾ…ಎನ್ನುವ ಆಪ್ತ ಮಾತುಗಳೊಂದಿಗೆ, ಸುಂದರವಾದ ತಂಪು ವಾತಾವರಣದಲ್ಲಿ ಚಹಾ,  ಕಾಫಿ ಹೀರುವುದೇ ಒಂದು ದೊಡ್ಡ ಸಂಭ್ರಮ. ಸ್ನೇಹಿತನದ ಮಾತುಗಳಲ್ಲಿ ಕಾಫಿ ಚಹಾ ನಮಗೆ ಆಪ್ತವಾಗಿದೆ.

 ಇಂದು ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮಹಲ್ ಗಳಷ್ಟೇ ಅಲ್ಲದೆ ವಿವಿಧ ಬಗೆಯ ಚಹಾದ ಹೆಸರುಗಳೊಂದಿಗೆ ಮಾರುಕಟ್ಟೆಗೆ ದಾಪುಗಾಲಿಟ್ಟಿದೆ. ಸಾಹುಕಾರ ಚಹಾ,  ಪಾಟೀಲ್ ಖಡಕ್ ಚಹಾ, ತಲಾಬ್ ಚಹಾ,  ಬಾಸುಂದಿ ಚಹಾ… ಹೀಗೆ ಮಾರುಕಟ್ಟೆಯನ್ನು ಪ್ರವೇಶಿಸಿದ ಚಹಾಗಳು ವಿವಿಧ ಸ್ವಾದಗಳಿಂದ ಗಿರಾಕಿಗಳನ್ನು ಕೈಬೀಸಿ ಕರೆಯುತ್ತವೆ. ಒಂದು ಕಾಲದಲ್ಲಿ ಬಡವರು ಮಾತ್ರ ಬೆಲ್ಲದ ಚಹಾ ಕುಡಿಯುತ್ತಾರೆ ಎನ್ನುವ ವಾಡಿಕೆಯಿತ್ತು.  ಇವತ್ತು ಶ್ರೀಮಂತರು ಬೆಲ್ಲದ ಚಹಾ ಅನ್ನು ಕುಡಿಯುತ್ತಾರೆ ಮತ್ತು ಸಾವಯವ ಬೆಲ್ಲದಿಂದ ಮಾಡಿದ ಚಹಾ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಇಂದಿನ ಜನರಿಗೆ ಅರಿವಿಗೆ ಬಂದಿರುವುದರಿಂದ ನಮ್ಮ ಹಿರಿಯರ ಸದಾಶಯದ ವಿಶಿಷ್ಟವಾಗಿರತಕ್ಕಂತಹ ಬೆಲ್ಲದ ಚಹಾದ ರುಚಿ ಇನ್ನಷ್ಟು ಹೆಚ್ಚಾಗಿದೆ.

‘ಚಹಾ’ ನಮ್ಮನ್ನು ಇನ್ನಷ್ಟು ಹತ್ತಿರ ಮಾಡುತ್ತಿದೆ.  “ನಮ್ಮ ಮನೆಗೆ ಅತಿಥಿಗಳು ಬಂದಾಗ ಕಪ್ಪು ಚಹಾನಾದರೂ ಕೊಟ್ಟು ಆತಿಥ್ಯವನ್ನು ಮಾಡಬೇಕೆನ್ನುವ” ಹಿರಿಯರ ಸದಾಶಯದೊಂದಿಗೆ ಈ ಸಂಪ್ರದಾಯ ಬೆಳೆದು ಬಂದಿದೆ.  ಎಷ್ಟೋ ಜನರು ಟೀ ಸ್ಟಾಲ್ ಗಳನ್ನು, ಡಬ್ಬಿ ಹೋಟೆಲ್ ಗಳು, ಹೋಟೆಲ್ ಗಳನ್ನು ಉದ್ಯೋಗವಾಗಿ ಆರಿಸಿರುವುದರಿಂದ ಅವರಿಗೂ ಉದ್ಯೋಗ ಲಭಿಸಿರುವುದು ವಾಸ್ತವಿಕ ಸಂಗತಿ.
 ಚಹಾ ಒಂದು ಸುಂದರವಾದ ಅನುಭೂತಿಯನ್ನು ನೀಡುತ್ತದೆ. ಸಂಜೆಯಾಗುತ್ತಿದ್ದಂತೆ ಇಂದಿನ ಯುವಕರು, ಕೂಲಿ ಕಾರ್ಮಿಕರು ಹಾಗೂ ಶ್ರಮಿಕ ವರ್ಗದವರು ಮದ್ಯದ ನಶೆಯಲ್ಲಿ ತೇಲುವುದಕ್ಕಿಂತ ‘ಚಹಾ’ವೆಂಬ ಆಪ್ತ ಸ್ನೇಹಿತನೊಡನೆ ಸ್ನೇಹ ಮಾಡುವುದು ಸೂಕ್ತವಾದೀತು.  ನನಗೆ ಈಗಲೂ ‘ಚಹಾ’ ಅಂದರೆ ತುಂಬಾ ಇಷ್ಟ.  ಚಹಾ ಕುಡಿಯುವುದು ಒಂದು ಸಂಭ್ರಮ.  ವೈದ್ಯರು ಚಹಾ ಅತಿ ಕುಡಿಯಬಾರದು ಎಂದು ಹೇಳಿದರೂ ಚಹಾದೊಂದಿಗೆ ಮರೆಯಲಾಗದು.  ಚಹಾ ಒಲವಿನ ಸಂಗೀತ. ಪ್ರೀತಿಯ ಸಂಕೇತ. ಆಪ್ತ ಸ್ನೇಹಿತನಿಗೆ ಬೈಟು ಚಹಾದೊಂದಿಗೆ ಸಮಾಧಾನಪಡಿಸುವ, ಸಾಂತ್ವಾನ ಹೇಳುವ ಚಹಾ ನನಗೆ ಆಪ್ತ ಸ್ನೇಹಿತನದಂತೆ. ನಾವು  –  ನೀವು ಒಲವನ್ನು ಬೆಸೆಯೋಣ  ಹಾಗೂ ತಂಪಾದ ವಾತಾವರಣದಲ್ಲಿ  ಕುಳಿತುಕೊಂಡು ಸಿಪ್ ಬೈ ಸಿಪ್ ಚಹಾ ಹೀರುವ ಸಂಭ್ರಮದ ಒಲವಿನಲ್ಲಿ ಸೇರೋಣ ಬನ್ನಿ ನಾವೆಲ್ಲರೂ.


3 thoughts on “

  1. ನಾವೂ ನೀವೂ ಚಹಾ ಕುಡಿಯುತ್ತಾ ಕಳೆದ ದಿನಗಳು ಜೀವನದ ಮಧುರವಾದ ಕ್ಷಣಗಳು ಬ್ರದರ್……….

    1. ಹೌದು ಬ್ರದರ್…ಆ ನೆನಪುಗಳು ಸದಾ ಮಧುರ. ಧನ್ಯವಾದಗಳು

  2. ಚಹ ಘಮಘಮಿಸುತ್ತಿದೆ. ನನಗೂ ರಾತ್ರಿ ದಮ್ಮಿನಿಂದ ಉಸಿರಾಟದ ತೊಂದರೆಯಾದಾಗ ನನ್ನ ಶ್ರೀಮತಿ ಚಹ ಮಾಡಿಕೊಡುವೆ ಎನ್ನುತ್ತಾಳೆ. ಸುಮಾರು ಐವತ್ತು ವರ್ಷಗಳಿಂದ ನಾನು ಅಲರ್ಜಿ, ಅಸ್ಥಮಾದಿಂದ ನರಳುತ್ತಿದ್ದೇನೆ. ಚಹ ಕುಡಿದಾಗ ಏನೋ ಒಂಥರ ತುಸು ಮಟ್ಟಿಗೆ ಪುಪ್ಪುಸಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ.
    ಸಮಯೋಚಿತ ಒಳ್ಳೆಯ ಲೇಖನ. ಅಭಿನಂದನೆಗಳು.

Leave a Reply

Back To Top