ಶಿ ಕಾ ಬಡಿಗೇರ-ನಾನು ಬುದ್ಧನಲ್ಲ…

ಕಾವ್ಯ ಸಂಗಾತಿ

ನಾನು ಬುದ್ಧನಲ್ಲ

ಶಿ ಕಾ ಬಡಿಗೇರ

ಈಗೀಗ ಮನೆಯ ಎದುರಿನ ಮರದೊಳಗೆ
ಹಕ್ಕಿಗಳು ಗೂಡು ಕಟ್ಟುತ್ತಿಲ್ಲ; ಬಂದು ಕೂಡುವುದಷ್ಟೇ ಅಲ್ಲ ಹಾರುತ್ತಲೂ ಇಲ್ಲ…

ಊರ ಹನುಮ ದೇವರ ಗುಡಿಯ ಗೋಡೆಯ ಸಂದುಗಳಲಿ ಹಲ್ಲಿ, ಹಾವುರಾಣಿ,
ಹುಳ ಹುಪ್ಪಡಿಗಳ ಸುಳಿವೂ ಇಲ್ಲ…

ಮಸೀದಿ, ಚರ್ಚುಗಳ ಎದುರಿನ ಹಾದಿಗಳ ಮಗ್ಗುಲಲ್ಲಿ ಇರುವ ಬಳ್ಳಿಗಳಲಿ
ಹೂಗಳು ಅರಳುತ್ತಿಲ್ಲ; ಮೊಗ್ಗಾದರೂ ಹೂಂ…ಹೂಂ..

ಊರೊಳಗಿನ ಯಾವ ನಾಯಿಗಳೂ ಬೊಗಳುತ್ತಿಲ್ಲ; ಹಸುಗಳು ಹಾಲು ಕೊಡುತ್ತಿಲ್ಲ; ಕುರಿ, ಮೇಕೆಗಳು ಹಟ್ಟಿ ಬಿಟ್ಟು ಓಟ ಕಿತ್ತಿವೆ…

ತುಂಬಿ ತುಳುಕುತ್ತಿದ್ದ ಹಳ್ಳಗಳೀಗ ಬತ್ತಿ
ಕಾದ ಗಟ್ಟಿ ನೆಲದಂತಾಗಿವೆ; ಕೆರೆಗಳೋ
ಬಾಯಾರಿಸಿಕೊಂಡು ತುಟಿ ಸವರಿಕೊಳ್ಳುತ್ತಿವೆ…

ಕಳ್ಳಿ ಸಾಲುಗಳಲಿ ಹಬ್ಬಿಕೊಂಡ ತೊಂಡೆ ಬಳ್ಳಿ ಕಾಯಿ ಬಿಡುತ್ತಿಲ್ಲ, ಕಲ್ಲು ಬೀಸಿದರೆ ಕಳ್ಳಿಯಲ್ಲೂ ಹಾಲಿಲ್ಲ; ಹೊಲದೊಳಗೆ
ಕಾಕುಳ್ಳು ಒಂದೂ ಇಲ್ಲ…

ಈಗಾಗಲು ಕಾರಣವಾದರೂ ಏನು? ಗುಡಿ, ಚರ್ಚು, ಮಸೀದಿ ಕಟ್ಟಿದವರ ಕೇಳಬೇಕೆಂದರೆ
ಅವರ್ಯಾರೂ ಮುಖಾಮುಖಿಯಾಗುತ್ತಿಲ್ಲ..

ನನಗೂ ನನ್ನೂರು ದೂರ ಸರಿದಂತೆ ಅನಿಸಿತು, ಬಯಲೊಳಗೆ ಬೆತ್ತಲಾಗಿ ಅಲ್ಲಮನಂತೆ ಮದ್ದಳೆ ನುಡಿಸಬೇಕೆನಿಸಿತು…

ಎಷ್ಟು ಬಡಿದರೂ ಮದ್ದಳೆಯಿಂದ ನಾದ ಹೊರಡಲಿಲ್ಲ; ಕತ್ತಿಗೆ ನೇತಾಕಿಕೊಂಡು
ಊರು ತೊರೆದೆ; ಬಲುದೂರ…

ಧರ್ಮ, ಜಾತಿ, ಅಂತಸ್ತು , ಮೇಲು-ಕೀಳು ಇರದ ಅಗಾಧ ಬಯಲೊಳಗೆ ಬೆತ್ತಲಾಗಿ ಮದ್ದಳೆಗೆ ಕೈ ಹಾಕಿದೆ ಅಬ್ಬಾ! ಎಂಥ ನಾದ!
ನಾನು ಊರು ಸೇರುವ ಆಸೆ ತೊರೆದೆ;
ಬುದ್ಧನಲ್ಲದಿದ್ದರೂ ಅವನ ಹಾದಿ ಹಿಡಿದೆ…


Leave a Reply

Back To Top