ಕಾವ್ಯ ಸಂಗಾತಿ
ಅಬಾಬಿಗಳು..
ಹಮೀದಾ ಬೇಗಂ ದೇಸಾಯಿ
ಭೂತಾಯಿಯ ಮಡಿಲಲ್ಲಿ
ಕುಕೃತ್ಯಗಳ ರಾಶಿ
ಪಾಪಗಳ ಕೊಳಚೆ ಹರಿಯುತಿದೆ
ಹಮೀದಾ..
ತೊಳೆಯುವ ಕರಗಳೆಲ್ಲಿ…?
ಬೀದಿ ಬೀದಿಗಳಲ್ಲಿ ಹಾರುತಿವೆ
ಮತ-ಪಂಥಗಳ ಪತಾಕೆಗಳು
ನಾ ಮುಂದು ತಾ ಮುಂದೆಂದು
ಹಮೀದಾ..
ಶ್ವೇತ ಪತಾಕೆ ಹಾರುವುದು ಯಾವಾಗ..?
ಕ್ರೌರ್ಯ ಮೆರೆದರೂ ಗಡಿಯಾಚೆ
ಶೌರ್ಯ ಉಕ್ಕಿದೆ ಗಡಿಯಲಿ
ತಲೆಯೆತ್ತಿ ನಿಂತ ಹಿಮವಂತ
ಹಮೀದಾ..
ಬೆಚ್ಚಿದೆ ಯೋಧನ ಬಿಸಿರಕ್ತಕೆ..!
ಮರೆಮಾಡುತಿದೆ ಕಾಳಮಂಜು
ಸೂರ್ಯ ಉದಯಿಸಲು
ಹಗಲೂ ಇರುಳಾಗುತಿದೆ
ಹಮೀದಾ..
ಹಗಲು ವೇಷಧಾರಿಗಳ ಅಟ್ಟಹಾಸಕೆ..
ವಿಷವಾಗುತಿಹುದು
ತಾಯ ಎದೆಹಾಲು
ವ್ಯಸನಗಳ ಮೋಜಿನಲಿ
ಹಮೀದಾ..
ಇಂಚಿಂಚು ಕೊಲ್ಲುತಿದೆ ಹಸುಳೆಗಳನು..
ಕಾನೂನು ಕಾಯ್ದೆ
ನ್ಯಾಯಗಳೆಲ್ಲ
ಕುರುಡಾಗಿವೆ
ಹಮೀದಾ..
ನ್ಯಾಯದೇವತೆಯ ಜೊತೆಗೆ..
ಹಬ್ಬದ ಕುರಿ,
ದನಿ ಹೂತ ಹೆಂಡತಿ
ಬಲಿಪಶುಗಳೇ.
ಹಮೀದಾ..
ಕಟುಕ ಮತ್ತು ಗಂಡನ ಕೈಯಲಿ..
ಜಪಮಾಲೆ, ತಸ್ಬೀ
ತಿರುಗುತಿದೆ ಬೆರಳಲಿ
ಬಾಯಲಿ ಮಂತ್ರ
ಹಮೀದಾ..
ಮನದಿ ಬರೀ ಮಸಲತ್ತು..!
ನೆರೆಯವರು
ಹೊರೆಯಾದರೆ
ದೂರ ಹೋಗುವೆ
ಹಮೀದಾ..
ನೀನೇ ಹೊರೆಯಾದರೆ ಗತಿ ಎಲ್ಲಿ..?
ಬತ್ತಿ ಹೋಗಿವೆ
ಕಣ್ಣ ನೀರು ,
ಬಿರಿದಿದೆ ಹೃದಯ
ಹಮೀದಾ..
ಶೋಷಿತರ ನಿಟ್ಟುಸಿರಿಗೆ…
ಇರುಳೂ ಸುಡುತಿದೆ
ಅನೀತಿಯ ಬೆಂಕಿಯಲಿ
ಬೆಂದು ಕರಕಾಗಿ
ಹಮೀದಾ..
ಹಗಲಿನದೇನು ಖಾತ್ರಿ..?
ಹಸಿರು ಉಸಿರೆಲ್ಲ
ಬಸಿದು ಕುಡಿದೆ
ರಕ್ಕಸನ ದಾಹದಂತೆ..
ಹಮೀದಾ..
ಬಾಯ್ಬಿಡು ಈಗ ಹಕ್ಕಿ ಮರಿಯಂತೆ..!
ಬೆವರುತಿವೆ
ಗೋರಿಯೊಳಗಿನ
ಹೆಣಗಳೂ ಭಯದಿ
ಹಮೀದಾ..
ರಾಜಕಾರಣಿಗಳ ರಾಸಲೀಲೆಗೆ..
ಕತ್ತಲಾವರಿಸಿದೆ
ಮಾನವೀಯತೆಗೆ
ಭ್ರಷ್ಟರ ಭಯಕೆ..
ಹಮೀದಾ..
ಬೆಳಗಾಗುವುದೆಂದೋ..?
ಸೆರಗು ಮರೆಮಾಡಿ
ಹಾಲೂಡಿಸಿದ ಹೆಣ್ಣಿನ
ಸೆರಗಿಗೇ ಕೈ ಹಾಕಿದವನ
ಹಮೀದಾ..
ಸುಡಬೇಕವನ ಜಿಂದಾ..
ಕಷ್ಟದಲ್ಲಿರುವವರ
ಭಕ್ತರ ಮೊರೆಯ
ಕೇಳುವನಂತೆ ದೇವ.
ಹಮೀದಾ..
ಹೆಣ್ಣಿನ ಮೊರೆಗೇಕೆ ಜಾಣ ಕಿವುಡ..?
Boht khoob
ಶುಕ್ರಿಯಾ.