ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಲೂ ನಾನ- ದ ಯಾಕ್ ಇನ್ ದಿ ಕ್ಲಾಸ್-ರೂಮ್ (ಭೂತಾನಿ)

[1:06 pm, 15/11/2022] KUSUMA MANJUNATH: ಹಿಮಾಲಯದ ತಪ್ಪಲಿನ ಒಂದು ಪುಟ್ಟ ಹಳ್ಳಿ ಆ ಹಳ್ಳಿಯ ಅಂಚಿನಲ್ಲಿರುವ ಹಸಿರಿನಿಂದ ಆವರಿಸಿದ ಬೆಟ್ಟದ ತುದಿಯಲ್ಲಿ ಒಬ್ಬ ಹುಡುಗ ಹುಡುಗಿ ಕುಳಿತಿದ್ದಾರೆ .ಹುಡುಗಿ (ಸಲ್ಡೋನ್) ಮೈ ಮರೆತು ಹಾಡುತ್ತಾಳೆ ತಮ್ಮ ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಯಾಕ್( ಚಮರೀ ಮೃಗ )ನ ಗುಣಗಾನ ಮಾಡುವ ಭೂತಾನಿನ ಪರಂಪರೆಯ ಗೀತೆ ಅದಾಗಿರುತ್ತದೆ .ತನ್ನ ಸುಂದರ ಹಾಡುಗಳನ್ನು ಅವಳು ಪ್ರಕೃತಿಗೆ ಅರ್ಪಿಸುತ್ತಾಳೆ ,ಹುಡುಗ (ಉಗ್ಗೇನ್ )ತನ್ಮಯನಾಗಿ ಹಾಡು ಕೇಳುತ್ತಾನೆ ,ಆ ಹಾಡುಗಳನ್ನು ಕಲಿಯುವ ಆಸಕ್ತಿ ತೋರಿಸುತ್ತಾನೆ. ಶುದ್ಧ ಪರಿಸರ ಶುದ್ಧ ಗಾಳಿ ಇಂಪಾದ ಗಾನ ಸ್ವರ್ಗದಂತಹ ಭೂತಾನ್ ನ ಅನಾವರಣ ನಮಗೆ ಕಾಣುವುದು. ಇದು ಮತ್ತೆಲ್ಲೂ ಅಲ್ಲ ‘ಲೂನಾನ ದ ಯಾಕ್ ಇನ್ ದಿ ಕ್ಲಾಸ್-ರೂಮ್”ಸಿನಿಮಾದಲ್ಲಿ .ಇದೊಂದು ಸುಂದರ ಮರೆಯದ ಅನುಭೂತಿ ಪ್ರಕೃತಿಯೊಂದಿಗಿನ ಸಮೀಕರಣ.
2022ನೇ ಇಸ್ವಿಯ ಆಸ್ಕರ್ ಪುರಸ್ಕಾರಕ್ಕೆ ನಾಮ
ನಿರ್ದೇಶನಗೊಂಡ ವಿಶೇಷ ಭೂತಾನಿ ಭಾಷೆಯ ಚಿತ್ರ “ಲುನಾನ -ದ ಯಾಕ್ ಇನ್ ದ ಕ್ಲಾಸ್-ರೂಮ್.”
ಭೂತಾನಿನ ರಾಜಧಾನಿ (ತಿಂಫು )ಅಲ್ಲಿನ ಒಬ್ಬ ಹುಡುಗ ಉಗೇನ್, ಐದು ವರ್ಷದಿಂದ ಸರ್ಕಾರ ನಡೆಸುವ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರೂ ವೃತ್ತಿಯಲ್ಲಿ ಅವನಿಗೆ ಆಸಕ್ತಿ ಇಲ್ಲ ,ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವನು ದೂರದ ವಿದೇಶದಲ್ಲಿ (ಆಸ್ಟ್ರೇಲಿಯಾ )ಸಂಗೀತಗಾರನಾಗಿ ವೃತ್ತಿ ಆರಂಭಿಸಲು ಸಿದ್ಧತೆ ನಡೆಸಿರುತ್ತಾನೆ. ಈ ಸಮಯದಲ್ಲಿ ಭೂತಾನಿನ ಅತ್ಯಂತ ಎತ್ತರದ ನಿರ್ಜನ ಪ್ರದೇಶದ ಶಾಲೆಯಲ್ಲಿ ಶಿಕ್ಷಕನಾಗಿ ವರ್ಗಾವಣೆಗೊಂಡು ಕೆಲಸ ಮಾಡಲೇಬೇಕಾದ ಅನಿವಾರ್ಯತೆಗೆ ಅವನು ಸಿಲುಕುತ್ತಾನೆ .ತನ್ನ ಏಕೈಕ ಪೋಷಕಿ ಅಜ್ಜಿಯಿಂದ ಬೀಳ್ಕೋಂಡು ಲುನಾನದ ಕಡೆಗೆ ಅವನ ಪಯಣ ಸಾಗುತ್ತದೆ. ವರ್ಷವಿಡೀ ಹಿಮಾವೃತಗೊಂಡು ಮೂರು ತಿಂಗಳ ಮಟ್ಟಿಗೆ ಮಾತ್ರ ತೆರೆದಿರುವ ಶಾಲೆಗೆ, 59 ಜನ ವಾಸಿಸುವ ಪುಟ್ಟ ಹಳ್ಳಿಗೆ ನಾಗರಿಕರ ಸಂಪರ್ಕವಿಲ್ಲದ ಆಧುನಿಕ ಸೌಲಭ್ಯಗಳಿಲ್ಲದ ಆ ಹಳ್ಳಿಗೆ ತಲುಪುವುದೇ ಪ್ರಯಾಸದ ಪಯಣ .ತನ್ನ ಎಂಟು ದಿನಗಳ ಕಾಲ್ನಡಿಗೆಯ ಪ್ರಯಾಣದ ನಂತರ ಅವನಲ್ಲಿ ಉಳಿಯುವುದು ಹತಾಶೆ, ಕೋಪ ನಿರಾಸೆ.
ಬಂದಂತೆ ಹಿಂದಿರುಗಿ ಹೋಗಬೇಕೆಂಬ ಕಾತುರದಲ್ಲಿದ್ದ ಹುಡುಗನ ಮನಸ್ಸಿನಲ್ಲಿ ಆಗುವ ಪರಿವರ್ತನೆಯೇ ಚಿತ್ರದ ಥೀಮ್ ,ಅವನ ನಿರಾಶೆಯನ್ನು ದೂರ ಮಾಡುವುದು ಊರ ಜನರ ಹೃದಯ ತುಂಬಿದ ಸ್ವಾಗತ , ಆತಿಥ್ಯ!!


ಶಾಲೆಯೋ ಮುರುಕು ಹಲಗೆಯ ಮನೆ , ಧೂಳು ಹಿಡಿದ ಬೆಂಚುಗಳು ,ಪಾಠ ಮಾಡಲು ಕಪ್ಪು ಹಲಗೆಯೂ ಇಲ್ಲ, ಇರುವವರು ಎಂಟು ವಿದ್ಯಾರ್ಥಿಗಳು ಇಂಥ ನಿರಾಶಾದಾಯಕ ಪರಿಸ್ಥಿತಿಯಿಂದ ಆರಂಭವಾಗುವ ಅವನ ಪಯಣ ಮುಂದೊಂದು ದಿನ ಹಿಮ ಆವೃತಗೊಂಡು ಶಾಲೆ ಮುಚ್ಚುವ ದಿನಗಳು ಬಂದರೂ ಅಲ್ಲಿಂದ ಹೊರಡಲಿಚ್ಛಿಸದೆ ಅನಿವಾರ್ಯವಾಗಿ ಬಲವಂತವಾಗಿ ಹೊರಡಬೇಕಾದ ಮನಸ್ಥಿತಿಗೆ ಅವನು ತಲುಪುವುದು ಅವನಲ್ಲಾಗುವ ಪರಿವರ್ತನೆ. ಈ ಪರಿವರ್ತನೆಗೆ ಕಾರಣಗಳು ಹಲವಾರು.
ಶಿಕ್ಷಕರೆಂದರೆ ಮಕ್ಕಳ ‘ಭವಿಷ್ಯಕ್ಕೆ ಬೆಳಕು ನೀಡುವವರು’ ಎಂಬ ಬಾಲಕನ ನುಡಿ ಉಗೇನನಲ್ಲಿ ಹೊಸ ಹೊಳಹು ಆಗುತ್ತದೆ .ಶಾಲೆಯ ಲೀಡರ್ ಪುಟ್ಟ ಹುಡುಗಿ, ಪಂಜಾಂ ಳ ಹೊಳಪಿನ ಕಣ್ಣುಗಳು, ಅವಳ ಲವಲವಿಕೆ ಅವಳ ಬದುಕಿನ ಕಷ್ಟ ದುಮ್ಮಾನಗಳು ಉಗ್ಗೇನ್ ಮನಸ್ಸನ್ನು ಮೃದುವಾಗಿಸುತ್ತದೆ .ಕಪಟವೇ ಅರಿಯದ ಊರಿನ ಮಕ್ಕಳ ಒಡನಾಟ ಆ ಊರಿನ ಜನರು ಹಾಗೂ ಅವರ ಮುಖಂಡ ಆಶಾ ತೋರಿಸುವ ನಿಷ್ಕಲ್ಮಶ ಪ್ರೀತಿ, ಶಿಕ್ಷಕನೆಂಬ ವಿಶೇಷ ಆದರ ,ಗೌರವ ಉಗೇನ್ ಬದುಕನ್ನು ನೋಡುವ ಪರಿಯನ್ನು ಬದಲಾಯಿಸಿಬಿಡುತ್ತದೆ…!
ಅವನ ಸಂಗೀತದ ಅಭಿರುಚಿಗೆ ಪೂರಕವಾಗಿ ಪರಿಚಯವಾಗುವ ಯುವತಿ ಸಲ್ದಾನ ,ಬೆಟ್ಟದ ತುದಿಯಲ್ಲಿ ಕುಳಿತು ತನ್ನಷ್ಟಕ್ಕೆ ತಾನೇ ಹಾಡುವ ಯುವತಿ ಅವನಲ್ಲಿ ಹೊಸ ಉತ್ಸಾಹವನ್ನು ತರಿಸುತ್ತಾಳೆ ಭೂತಾನಿಗಳ ಸಾಂಪ್ರಾಯದಾಯಕ ಗೀತೆ yak lebi lhardar- ಯಾಕ್ ನ ಗುಣಗಾನ ಮಾಡುವ ಈಹಾಡನ್ನು ಕಲಿಸುತ್ತಾಳೆ ಮತ್ತು ‘ನೋರ್ಬು’ಎಂಬ ಯಾಕ್ ಅನ್ನು ಅವನ ಉಪಯೋಗಕ್ಕಾಗಿ ನೀಡುತ್ತಾಳೆ.ಅವನು ಚಳಿಯಿಂದ ಅದನ್ನು (ಯಾಕ್ )ರಕ್ಷಿಸಲು ಶಾಲೆಯ ತರಗತಿಯ ಒಳಗೆ ಅದನ್ನು ಕಟ್ಟುತ್ತಾನೆ….!!!!
ಹೀಗೆ ಒಂದು ನಿಲ್ಲದ ಸುಂದರ ಕಾವ್ಯದಂತೆ ಗೀತೆಯಂತೆ ರಸಾನುಭವ ಈ ಸಿನಿಮಾ. ಆಧುನಿಕ ಸೌಲಭ್ಯಗಳು, ಸವಲತ್ತುಗಳು ಮನುಷ್ಯ ಜೀವನವನ್ನು ಸಂಕೀರ್ಣಗೊಳಿಸುತ್ತಿರುವ ಈ ಕಾಲದಲ್ಲಿ, ಪ್ರಕೃತಿಗೆ ಹತ್ತಿರವಾಗಿ ,ಸಹಜವಾಗಿ ,ಕನಿಷ್ಠ ಸೌಲಭ್ಯಗಳ ನಡುವೆ ಪ್ರಕೃತಿಯೊಂದಿಗೆ ಮಿಳಿತಗೊಳ್ಳುವ ಬದುಕಿನ ಪರಿ ಏನೆಂಬುದನ್ನು ಅರ್ಥೈಸಿಕೊಳ್ಳಲು ಈ ಸಿನಿಮಾವನ್ನು ನೋಡಬೇಕು.
ಸುಂದರ ಪ್ರಕೃತಿ ಸಹಜ ಪ್ರೀತಿ ಮನುಷ್ಯನ ಆದ್ಯತೆಗಳನ್ನು ಹೇಗೆ ಪಲ್ಲಟಗೊಳಿಸಬಲ್ಲದು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.
ಕಪಟವರಿಯದ ಸಹಜ ನಡುವಳಿಕೆಯ ಪಾತ್ರಗಳು ಚಿತ್ರವನ್ನು ಮತ್ತಷ್ಟು ನಮಗೆ ಹತ್ತಿರವಾಗಿಸುತ್ತದೆ .ವಿಶ್ವದಲ್ಲೇ ಹೆಚ್ಚು ನೆಮ್ಮದಿಯ ತಾಣವೆನಿಸಿರುವ ಭೂತಾನಿನ ನೈಜ ಚಿತ್ರಣ ಇಲ್ಲಿದೆ .ಗ್ಲೋಬಲ್ ವಾರ್ಮಿಂಗ್ ಬಗ್ಗೆಯೂ ಚಿತ್ರದ ಪಾತ್ರ ಮಾತನಾಡುತ್ತದೆ . ನಗರಗಳ ಕಡೆಗಿನ ವಲಸೆ ಕುರಿತಾಗಿಯೂ ಪ್ರಸ್ತಾಪವಿದೆ.


ನಮ್ಮ ಗೋವಿನ ಹಾಡಿನಂತೆ ಭಾಸವಾಗುವ ಅವರ ಗೀತೆ ,ಗೋವಿನಂತೆ ಅವರಿಂದ ಪೂಜಿಸಲ್ಪಡುವ ಯಾಕ್ ಅವರ ಆಚರಣೆಗಳು ,ರೀತಿ ನೀತಿಗಳು, ಉಡುಗೆ ತೊಡುಗೆ ಗಳು ಆಹಾರ ಇವೆಲ್ಲದರ ಪರಿಚಯ ಮಾಡಿಸುತ್ತದೆ ಈ ಸಿನಿಮಾ.
ಮಕ್ಕಳ ದಿನಾಚರಣೆಯ ಶುಭ ಸಂದರ್ಭದಲ್ಲಿ ಬೆಟ್ಟದ ತಪ್ಪಲಿಗೆ ತೆರಳುವ ಒಬ್ಬ ಶಿಕ್ಷಕ ಅಲ್ಲಿನ ಹೊಳಪು ಕಂಗಡ ಮುಗ್ಧ ಮಕ್ಕಳೊಂದಿಗಿನ ಅವನ ಒಡನಾಟದ ಸುಂದರ ಚಿತ್ರದ ವೀಕ್ಷಣೆ ನಮ್ಮ ಮಕ್ಕಳಿಗೂ ನಮಗೂ ಅಪ್ಯಾಯಮಾನವಾಗಬಲ್ಲದು.
ಹಿಂದಿ ಅವತರಣಿಕೆಯ ಈ ಭೂತಾನಿ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದ್ದು ಒಂದು ಗಂಟೆ 49 ನಿಮಿಷದ ಕಾಲಾವಧಿಯದ್ದಾಗಿದೆ.

ಮೂಲ ಭಾಷೆ _ dzongkha(ಧೋಂಗ್ಖ) ಭೂತಾನಿನ ಒಂದು ಭಾಷೆ.
ನಿರ್ದೇಶನ -ಪಾವೋ ಚುಯಿಂಗ್ ದೋರ್ಜಿ.
ನಿರ್ಮಾಣ-ಪಾವೋ ಚುಯಿಂಗ್ ದೋರ್ಜಿ, ಜಿಯಾ ಹೊಂಗ್ಲಿನ್, ಸ್ಟೇ ಫಾನಿ ಲಾಯ್,ಷೋಕೂನ್ ಕ್ಝೇಯಾಂಗ್.
ಚಿತ್ರ ಸಾಹಿತ್ಯ-ಪಾವೋ ಚುಯಿಂಗ್ ದೋರ್ಜಿ.
ಬಿಡುಗಡೆ -ಜನವರಿ 21 ,೨೦೨೨
ತಾರಾಗಣ -ಶೇರಬ್ ದೋರ್ಜಿ ಉಗೇನ್
ಉಗೇನ್ ನೋರ್ಬು ಲೆಹೆನ್ ಡಪ್,ಕೆಲ್ಡೆನ್ ಲಾಹಾಮೋ ಗುರುಂಗ್, ಸಂಜಯ್ ಲಹಮ್.


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top