ಯಮುನಾ.ಕಂಬಾರರವರ ಕಥೆ- ಯಾತ್ರಿಕ

ಕಥಾ ಸಂಗಾತಿ

ಯಾತ್ರಿಕ

ಯಮುನಾ.ಕಂಬಾರ

“ ಅಕ್ಕಾರ…….ಅಕ್ಕಾರ….” ಎಂಬ ಕೂಗಿಗೆ ವಿಶಾಲಾಕ್ಷಿ ಎಚ್ಚತ್ತುಕೊಂಡಳು. ಮನೆಯಲ್ಲಿ ಬೆಳಗಿನ ಕೆಲಸಗಳಲ್ಲಿ ನಿರತಳಾಗಿದ್ದ ವಿಶಾಲಾಕ್ಷಿ ಅದೇ ಆಗ ಸ್ನಾನ ಮಾಡಿ ಇನ್ನೇನು ದೇವರ ಪೂಜೆಗೆ ಕೂಡ್ರಬೇಕು ಎನ್ನುವಷ್ಟರಲ್ಲಿ ಹೊರಗಿನಿಂದ ಈ ಕೂಗು ಕೇಳಿದ ಅವಳು ಕೈಯಲ್ಲಿಯ ತಾಮ್ರದ ತಂಬಿಗೆ ಅಲ್ಲೇ ಜಗುಲಿಯ ಮೇಲೆ ಇಟ್ಟು ಹೊರ ಪಡ ಸಾಲೆಗೆ ಬಂದಳು ಗೋಡೆಯ ಮೇಲೆ ಗಡಿಯಾರ ಬೆಳಿಗ್ಗೆ ಹನ್ನೊಂದು ಗಂಟೆ ತೋರಿಸುತ್ತಿತ್ತು. ಕೂಡಲೇ ನೆನಪಾಯಿತವಳಿಗೆ ಪೊಷ್ಟ ಮನ್ ಬಂದಿರಬಹುದು. ತನಗೆ ಏನಾದರೂ ಮಾಹಿತಿ ಪುಸ್ತಕ ತಂದಿರಬಹುದು.. ಯಾವದಾದರೂ ಪತ್ರಿಕೆಯಲ್ಲಿ ತನ್ನ ಕತೆಗಳು ಪ್ರಕಟವಾಗಿರಬಹುದು….ಎಂಬ ಕುತುಹಲದಿಂದ ಉಲ್ಲಸಿತಳಾದ ಅವಳು ಕೂಡಲೆ ಬಾಗಿಲನ್ನು ತೆರೆದಳು.
ಬಾಗಿಲ ಮುಂದೆ ನಿಂತವನು ಬಿಳಿ ಕೂದಲಿನ ಬಿಳಿ ಅಂಗಿಯ ಎದುರು ಮನೆಯ ಶೀಲವಂತಯ್ಯ. ಅವನನ್ನು ನೋಡಿ ಭಯ ಮತ್ತು ಆಶ್ಚರ್ಯಕ್ಕೊಳಗಾದಳು. ” ಈತನೇಕೆ ಇಲ್ಲಿ ಈ ಹೊತ್ತಿನಲ್ಲಿ ಬಂದು ನಿಂತಿದ್ದಾನೆ. ತನ್ನನ್ನೇಕೆ ಕೂಗಿದನು…..! ?” ಎಂದು ಬಿಟ್ಟಗಣ್ಣು ಬಿಟ್ಟಂತೆಯೇ ಅತನನ್ನು ನೋಡಿದಳು ವಿಶಾಲಾಕ್ಷಿ.
“ಇದನ ಸೆಂಡ ಮಾಡ್ರಿ…ಮೈತ್ರಾ… ಇಕಿ ದವಾಖಾನಿಗೆ ಹೋಗ್ಯಾರ” ಎಂದು ಶೀಲವಂತ ತನ್ನ ಕೈಯಲ್ಲಿಯ ಒಂದು ಹಾಳೆಯನ್ನು ವಿಶಾಲಾಕ್ಷಿಗೆ ಎದುರಿಗೆ ಚಾಚಿದನು. ತನ್ನ ಕೆಲಸದ ಗುಂಗಿನಲ್ಲಿದ್ದ ವಿಶಾಲಾಕ್ಷಿ ಕಣ್ಣುಗಳನ್ನು ಒಮ್ಮೆ ಚಿಕ್ಕದು ಮಾಡಿ ಒಮ್ಮೆ ಅಗಲು ಮಾಡಿ ನೋಡುತ್ತಾ ಅದನ್ನು ಪಡೆದುಕೊಂಡು ಅದೇನೆಂದು ನೋಡುತ್ತಿದ್ದಂತೆ ಶೀಲವಂತ ಮತ್ತೆ …
“ ಅದು ದವಾಖಾನಿ ಚೀಟಿರಿ ಇದನ್ನ ಬಿಟ್ಟ ಹೋಗ್ಯಾರ ದವಾಖಾನಿಗೆ . ಡಾಕ್ಟರಿಗೆ ಹಿಂದಿನ ಇನಫಾರಮೇಷನ್ನ ಇದ್ದರ ರೋಗಿಯ ಎಲ್ಲ ವಿಷಯಗಳು ಜ್ನಾಪಕ್ಕ ಬಂದು ರೋಗ ತಪಾಸನೆಗೆ ಒಳ್ಳೆಯ ಅನುಕೂಲ ಆಕ್ಕೈತಿ ” ಎಂದು ಶೀಲವಂತಯ್ಯ ಹಿಂದನಿಂದ ವಿವರಣೆ ಕೊಡತೊಡಗಿದ. ಜಲಜಾ ಶೀಲವಂತನ ಹೆಂಡತಿ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಅಂದು ಬೆಳಿಗ್ಗೆಯೇ ದವಾಖಾನೆಗೆ ತನ್ನ ಕಿವಿಗಳ ತಪಾಸನೆಗೆ ಹೋಗಿದ್ದಳು. ಜಲಜಾಗೆ ಕಿವಿಯ ಸಮಸ್ಯ ಅವಳ ಕಿವಿ ಸೋರಿ ಸೋರಿ ಅವಳಿಗೆ ಕಿವುಡುತನ ಬಂದಿತ್ತು. ಪಕ್ಕದ ಮನೆಯವರು ಎಷ್ಟು ಕೂಗಿದರೂ ‘ಆಂ,.. ಇಲ್ಲ, ಹೂಂ….ನೂ ಇಲ್ಲ’. ಅಯ್ಯ ಎಂತಾ ಹೆಣ್ಣ ಮಗಳ ಎನ್ನುವ ಮಟ್ಟಕ್ಕ ಬಂದು ನಿಂತಿತ್ತು ಅವಳ ಕಿವಿಗಳ ಸ್ಥಿತಿ. ಬೆಂಗಳೂರಿನಿಂದ ಬಂದ ಮಕ್ಕಳು ಅವಳನ್ನು ಕಾರಿನಲ್ಲಿ ಕೂಡ್ರಿಸಿಕೊಂಡು ಬೆಳ್ಳಂಬೆಳಿಗ್ಗೆಯೇ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ಹೋಗಿದ್ದರು. ಬೆಳೆದು ನಿಂತ ಮಕ್ಕಳು ಅವರ ಓಡಾಟ ಆ ಸಂತೊಷದಲ್ಲಿ ಜಲಜಾಳಿಗೆ ತನ್ನ ಹಿಂದಿನ ಚೀಟಿಯ (ರಸೀದಿಯ) ನೆನಪೇ ಆಗಿರಲಿಲ್ಲ.
ಅವರು ಹೋಗಿ ಆಗಲೇ ನಾಲ್ಕು ತಾಸುಗಳಾಗಿದ್ದವು. ಮನೆಯಲ್ಲಿ ಒಬ್ಬನೇ ಕುಳಿತ ಶೀಲವಂತನಿಗೆ ದವಾಖಾನೆ ಹೆಂಡತಿ ಮಕ್ಕಳ ಚಿತ್ರಣ ಕಣ್ಮುಂದೆ ಬಂದಂತಾಗಿ : ‘ಅಲಾ….ಇವ್ನ ….ಚೀಟೀನ ಬಿಟ್ಟ ಹೋಗ್ಯಾರಲ್ಲ ಇವ್ರು. ಮದುಮಗಳ ಬಿಟ್ಟು ಮದುವಿಗೆ ಹೋದಂಗ ಆತು. ಇಕಿಗೆ ಯಾವತ್ತಿದ್ದರೂ ಅವಸರಾನ ಅವಸರ, ನಿಧಾನ ಅನ್ನುದು ಇಲ್ಲ. ಸಮಾಧಾನ ಅನ್ನುದು ಇಲ್ಲ. ಹೋಗ್ಲಿ ಇದರ ಸುಡ್ಲಿ ನನಗರ ಪಟ್ಟನ ನೆನಪ ಆಗಲಿಲ್ಲ ನೋಡ .. ಥೂ ಇದರ…..ಎನ್ನುತ್ತ” ಮನೆಯ ಹೊರಛಾವಣೆಯಲ್ಲಿ ಕುಳಿತ ಶೀಲವಂತ ಕುರ್ಚಿಯಿಂದ ಎದ್ದವನೇ ಒಳ ಓಡಿ ಹೋಗಿ ಟ್ರೆಂಕಿನಲ್ಲಿಯ ಹಿಂದಿನ ಸಾರೆ ತೋರಿಸಿದ ದವಾಖಾನೆ ಚೀಟಿ ತೆಗೆದುಕೊಂಡು ಮನೆಯ ಹೊರಗೆ ಬಂದ. “ ಅದನ್ನು ಕೊಡುವುದು ಎಲ್ಲಿ….? ಅವರೇನು ಇದ್ದೂರಾಗಿನ ದವಾಖಾನಿಗೆ ಹೋಗ್ಯಾರೇನ…? ಇಲ್ಲಲ್ಲ…….., ಬೆಳಗಾವಿಗೆ….!! ಕೆ.ಎಲ್.ಇ..ದೂರದ ದಾರಿ ಸುಮಾರು ನಾಲ್ಕು ತಾಸಿನ ದಾರಿ. ಅಯ್ಯ….ಯ್ಯೋ……ಹೆಂಗ ಮಾಡೂದಪ…….” ಮಿಡುಕಾಡತೊಡಗಿದ.
ಅವನು ಕೈಯಲ್ಲಿ ಚೀಟೆ ಹಿಡಿದು ಹಾಗೇ ನಿಂತನು. ಮಗ್ಗಲು ಮನೆಯ ಕಂಪೌಡಿನಲ್ಲಿಯ ಹಸಿರು ಗಿಡಗಳನ್ನು ನೋಡುತ್ತಿದ್ದ ಅವನಿಗೆ ಅದೇನೋ ನೆನಪಾದಂತಾಗಿ ತೊಟ್ಟ ಬರ್ಮುಡಾದ ಮೇಲೆಯೇ ಓಣಿಯ ವಿಶಾಲಾಕ್ಷಿಯ ಮನೆ ಬಾಗಿಲಿಗೆ ಬಂದಿದ್ದ. ಬ್ಯಾರೆಯವರ ಮನಿಗೆ ಹೊಕ್ಕೇನಿ ಚೆಂದಗ ಡ್ರೆಸ್ಸ ಮಾಡ್ಕೊಂಡು ಹೋಗಬೇಕು. ಚಂದಗ ಅಲ್ಲದ ಇದ್ದರೂ ಮೈತುಂಬ ಬಟ್ಟೆ ಹಾಕ್ಕೊಂಡು ಹೋಗಬೇಕು ಅನ್ನುವಂತ ಜ್ನಾನವೇ ಇಲ್ಲವೇನೋ..? ಪುಣ್ಯಕ್ಕೆ ಮೇಲೆ ಬಿಳಿಯಂಗಿ ಇತ್ತು. ಅದು ಇಲ್ಲದೇ ಇದ್ದಿದ್ದರೆ…..!!…?? ಇಲ್ಲದೇಇದ್ರೂ ಅದೇ ಬರ್ಮುಡಾದ ಮೇಲೆಯೇ ಓಣಿಯಲ್ಲಿ ಆತ ತಿರುಗಿಲ್ಲವೇ……? ಸಮೀಪದ ಪೋಷ್ಟಿಗೆ , ಅದನ್ನು ದಾಟಿ ರೋಡು…….., ರೋಡಿನ ಪಕ್ಕ ಇರುವ ಭಟ್ಟರ ಚಹಾದ ಅಂಗಡಿವರೆಗೂ ಈತ ಹೋಗಿಲ್ಲವೆ….?ಆಗ ಅವನಿಗೆ ಮೈಯಲ್ಲಿ ಅಳುಕೇನಾದರು ಕಾಡಿತ್ತೇ…..?ಎಲ್ಲಿಯಾದರೂ ಅಯ್ಯೋ…..!, ಅಯ್ಯಯಪ್ಪಾ ನಾ ಮ್ಯಾಲ ಅಂಗಿನ ಹಕ್ಕೊಂಡಿಲ್ಲ…. ಹೊರಗ ಬಂದೇನಿ ಹಂಗ ಅಡ್ಡಾಡಾಕ ಹತ್ತೇನಿ….ಎಂದು ಎಂದಾದರೂ ಪರಿತಪಿಸಿದ್ದನೇ…….!! ಆರಾಮ ಆಗಿ ಚಹಾದ ಅಂಗಡಿ ಕಟ್ಟಿಮ್ಯಾಲ ಕುಳಿತು ರಾಜಾ ರೋಷವಾಗಿ ಚಹಾ ಕುಡಿದು ಬಂದಿದ್ದಾನೆ ಯ್ಯಾವದ ಹೆದರಿಕೆ ಇಲ್ಲದ. ಮುಂಜ ಮುಂಜಾನೆ ತಂಬಾಕ ಹಾಕಿಕೊಂಡು ಸ್ವರ್ಗದಲ್ಲಿ ತೇಲಾಡಿ ಇನ್ನು ಇದನ್ನ ಉಗಳದ ಇದ್ದರ ನನಗ ಉಳಿಗಾಲ ಇಲ್ಲ ಎಂದು ಚಿಟಬರಿಸಿ ಒಂದ ದೊಡ್ಡ ತಂಬಿಗಿಯಲ್ಲಿ ನೀರು ತುಂಬಿಕೊಂಡು ಬಾಯ್ಯಾಗ ನೀರ ಹಾಕ್ಕೊಂಡು ಕುಲು ಕುಲು ಮಾಡಿ ತಂಬಾಕ ನೀರ ಉಗುಳುತ್ತಿದ್ದ ಭಟ್ಟನನ್ನು ನೋಡಿ ಭಟ್ರ ಚಾ ಆತೇನ್ರೀ….ಅನಕೋತ ಮನಿಗೆ ಬರುತ್ತಿದ್ದ ಶೀಲವಂತನಿಗೆ ಎಂದಾದೂ ಅಳುಕು ಕಾಡಿತ್ತಾ….!!..??
ಇಲ್ಲ…..ಇಲ್ಲವೇ ಇಲ್ಲ……!! ಎಂದು ಯೋಚಿಸುತ್ತಿದ್ದವಳಿಗೆ
“ನಮ್ಮಾಕಿ ….ಹೇಳತ್ತಿದ್ದಳ್ರಿ…..ಮೊನ್ನೆ ನೀವ…..ನಮ್ಮ ಮೈತ್ರಾನ ಬಯೋಡಾಟ ಬೆಳಗಾಂವಕ ಸೆಂಡ ಮಾಡಿದ್ರೆಂತ ಇದನಟು ಸೆಂಡ ಮಾಡ್ರಿ ..” ಎಂದು ಹೇಳುತ್ತಲಿದ್ದ.
ಅದನ್ನು ಕೇಳುತ್ತಲಿದ್ದ ವಿಶಾಲಳಿಗೆ ಮನದಲ್ಲಿ ಸಣ್ಣಗೆ ನೋವೊಂದು ಹರಿದು ಹೋಯಿತು. ಶೀಲವಂತಯ್ಯ ಸಣ್ಣ ಮಗುವೇನಲ್ಲ ವೃದ್ದಯಾಪ್ಯದ ದಾರಿಯಲ್ಲಿದ್ದವ. ಆತನ ತಲೆ ಕೂದಲುಗಳು ಪೂರ್ಣ ಎಲ್ಲ ಬೆಳ್ಳಗಾಗಿ ಆತನ ಬಿಳಿಯಂಗಿ ಜೊತೆ ಮ್ಯಾಚಿಂಗ ಆಗಿದೆ. ಮೇಲಾಗಿ ತನ್ನಮನೆ ಬಾಗಿಲಿಗೆ ಬಂದಿರುವವ.ಅಲ್ಲದೇ ಓಣಿಯ ಗನಮಗ. ಆಂ ತಾನು ಇನ್ನೂ ಸುಮ್ಮನೇ ನಿಂತಿದ್ದೇನಲ್ಲ. ಇದು ತಾನು ನಡೆದು ಕೊಳ್ಳುವ ರೀತಿ ಸರಿ ಏನು…? ಅವ್ವ ಏನು ಹೇಳ್ಯಾಳ ಮನಿ ಬಾಗಿಲಿಗೆ ಬಂದವರಿಗೆ ಬರ್ರೀ……, ಅನಬೇಕು. ಕುಂದರೀ ಅನಬೇಕು. ನಮ್ಮ ಮನಿಯ್ಯಾಗ ನುಚ್ಚ… ಇರ್ರ್ಲೀ ನೀರ…. ಇರ್ರ್ಲೀ….. ತಗೋರೀ ಅನಬೇಕು” ಅಂತ ಕಲಿಸ್ಯಾಳ. ಅಷ್ಟ ಅಲ್ಲದ ತಾನೂ ಮನಿಗೆ ಯ್ಯಾರರೆ ಬಂದ್ರ ಬರ್ರೀ…. ಅನತಿದ್ದಳು. ಮ್ಯಾಲೆ ಪಡಶಾಲಿ ಮ್ಯಾಲೆ ಕೈ ಹಿಡಿದು ಕರೆ ತಂದು ಕೂಡ್ರಿಸುತ್ತಿದ್ದಳು. ಅಲ್ಲದೆ…ಮನೆಯಲ್ಲಿ ಎನ ಇದ್ದಿದ್ದರ್ರ್ಲೇ…. ಸತ್ಕಾರ ಮಾಡತಿದ್ದಳು. ಈಗ ನನ್ನ ಮನಿ ಬಾಗಲಿಗೆ ಓಣಿಯ ಹಿರಿ ಮನುಷ್ಯಾ ಬಂದ ನಿಂತಾನ. ತಾನು ಸುಮ್ಮನ ನಿಂತೇನಲ್ಲ ಇದು ಸರೀನ ? ಎಂದು ತನ್ನನು ತಾನು ಒಮ್ಮೆ ವಿಚಾರಿಸಿಕೊಂಡಳು. ಇಲ್ಲ ನಾನು ಶೀಲವಂತಯ್ಯನನ್ನು ಕರೀಲಿಲ್ಲ.ಇದು ತಪ್ಪು ಶುದ್ದ ತಪ್ಪು….ಎಂದು ವಿಚಾರಿಸುತ್ತಿದ್ದವಳಿಗೆ ‘ಅದನ್ನು ಕಳಿಸಿರಿ’ ಎಂದು ಶೀಲವಂತನಿಂದ ಒತ್ತಾಯವು ಅವಳನ್ನು ವಿಚಾರದಿಂದ ತಡವಿತು. ಅವಳು ತಟ್ಟನೇ ವಾಸ್ತವಕ್ಕೆ ಬಂದು ಕೈಯಲ್ಲಿಯ ಮೊಬೈಲನ್ನು ನೋಡತೊಡಗಿದಳು.
ವಿಶಾಲ ಅವಳೂ ಶೀಲವಂತನ ಓರಿಗೆಯವಳೇ. ಅವಳ ಓದು ಬರಹ ಮಕ್ಕಳು ಮರಿಗಳ ಒಡನಾಟದಲ್ಲಿ ಮೊಬೈಲ ಸ್ವಲ್ಪು….. ಸಲ್ಪು….
ಕಲಿತ್ತಿದ್ದಳೆ ಅಷ್ಟೇ . ಮೊಬೈಲಿಗೆ ಸಂಬಂಧ ಪಟ್ಟ ಯಾವುದೇ ಒಂದು ವಿಷಯವನ್ನು ಮಗನಿಂದ ಹೇಳಿಸಿಕೊಂಡು ತನ್ನ ಮೊಬೈಲ ಕೆಲಸವನ್ನು ಮಾಡುತಲಿದ್ದಳು ಅಲ್ಲದೇ ಮತ್ತೆ ಆ ಮೊಬೈಲ ಪ್ರೋಸೆಸ್ಸ ಅವಳ ಮನೆಯ- ‘ತಲೆ – ಹೊಟ್ಟೆ’ ತಿನ್ನುವ ಜವಾಬ್ದಾರಿಗಳಲ್ಲಿ ಕಾಣದಂತೆ ಮಾಯವಾಗಿ ಬಿಡುತ್ತಿತ್ತು. ಒಮ್ಮೆ ಜಲಜಾಳ ತನ್ನ ಮಗಳು ‘ಮೈತ್ರಾಳ ’ ವರದ ಬಯೋಡಾಟಾವನ್ನು ತಂದು ವಿಶಾಲಳ ಕೈಗೆ ಕೊಟ್ಟಿದ್ದಳು. ವಿಶಾಲಾ ಅದನ್ನು ಹೇಗೋ ಮಾಡಿ ಅದನ್ನು ಮೈತ್ರಾಳ ಮೊಬೈಲಿಗೆ ಸೆಂಡ ಮಾಡುವಲ್ಲಿ ಯಶಸ್ವಿಯೂ ಆಗಿದ್ದಳು.
ಅದೇ ಮಾದರಿಯಲ್ಲಿ ಡಾಕ್ಟರ ರೋಗಿಗೆ ಬರೆದ ಗುಳಿಗೆ ಚೀಟೆಯನ್ನು ಜಲಜಾಳಿಗೆ ಮೈತ್ರಾನ ಮೊಬೈಲಿಗೆ ಕಳುಹಿಸ ಬೇಕಾಗಿತ್ತು.
ವಿಶಾಲಳು ಮೊಬೈಲ ಓಪನ ಮಾಡಿದಳು. ಮೊಬೈಲ ತೆರೆಯಿತು ಅಷ್ಟೇ.ಕೈಯಲ್ಲಿ ರಸೀದಿ ಹಾಗೇ ಇತ್ತು. ಅದೇನೋ ಪುಣ್ಯಕ್ಕೆ ನೆನಪಾಯಿತು. ಈ ಚೀಟಿನ ಮೊದಲು ಫೋಟೋ ಮಾಡಬೇಕು ಎಂದು. ಕೂಡಲೇ ವಿಶಾಲ ತನ್ನ ಎಡ ಗೈಲಿ ಇದ್ದ ಚೀಟಿಯನ್ನು ನೆಲದ ಮೇಲೆ ಇಟ್ಟಳು. ಅದೇನು ಮಣ್ಣಿನ ನೆಲವಲ್ಲ. ಸಂಗಮೇಕ ಕಲ್ಲು ನುಣುಪಾದ ಕಲ್ಲಿನ ಮೇಲೆ ಇಟ್ಟು ಪೋಟೊ ಮಾಡಿದಳು. ಇನ್ನು ಮುಂದಿನ ಹಂತ. ಅದನ್ನು ಮೈತ್ರಾಳ ಮೊಬೈಲಿಗೆ ಸೆಂಡ ಮಾಡುವುದು. ವಿಶಾಲಳು ಮೋಬೈಲ ನೋಡುವುದೇ ಆಯಿತು. ಕಳುಹಿಸುವುದು ಹೊಳೆಯುತ್ತಿಲ್ಲ. ಆಂ…….! ಆಂ …….! ಎನ್ನುತ ಕುಳಿತುಕೊಂಡಳು. ಸಮಯ ಬೆಳಗಿನ ಹನ್ನೊಂದನ್ನು ದಾಟುತಲಿತ್ತು. ವಿಶಾಲಳ ಮನೆಯ ಮುಂದಿನ ಗಿಡದಲ್ಲಿ ಹಸಿರು ಎಲೆಗಳ ಮೇಲೆ, ಟೊಂಗೆಗಳ ಸಂದುಗಳ ನಡುವೆ ಸೂರ್ಯನ ಕೆಂಪು ಕಿರಣಗಳು ಹಾಯ್ದು ಗಿಡ ವರ್ಣಮಯವಾಗಿ ಮೋಹಕವಾಗಿ ಕಂಗೊಳಿಸುತಲಿತ್ತು. ಗಿಡವು ಹಕ್ಕಿ ಪಕ್ಕಿಗಳ ಆಗಮನಕ್ಕೆ ಅವುಗಳ ಚಿಲಿಪಿಲಿ ಸಂಗೀತಕ್ಕೆ, ಅವುಗಳ ಕಿಲಿಪಿಲಿ ಮಾತುಗಳಿಗೆ ಬಾಯ್ದೆರೆದಿದೆಯೋ ಏನೋ…ಎಂಬಂತೆ ಅದರ ಎಲೆಗಳು ಮಿಂಚಿದರೆ ; ಟೊಂಗೆಗಳು ಸೂಸುವ ಗಾಳಿಗೆ ಬಳುಕುತ್ತಿದ್ದವು. ಆದರೆ ಹಕ್ಕಿಗಳ ಸದ್ದುವಿಲ್ಲದ ಮರ…….ಗಾಳಿ ಬಿಟ್ಟಾಗಲೊಮ್ಮೆ ಬಾಗಿದಾಗ ಆಗುವ ‘ಟರ್’ ‘ಟರ್’ಎಂಬ ಸದ್ದು ಮರ ನರಳಿದಂತೆ……..ಭಾಸವಾಗುತ್ತಿತ್ತು.
ವಿಶಾಲಳು ಮೈತ್ರಾಳ ‘ವ್ಯಾಟ್ಸಾಫ ಕ್ರಿಯೇಟ’ ಮಾಡಿ ಅದೇ ಟೆಕ್ಸಿನಲ್ಲಿರುವ ಕ್ಯಾಮರಾ ಓಪನ ಮಾಡಿ ಅಲ್ಲಿಂದ ಮೆಡಿಕಲ್ ರಸೀತಿಯನ್ನು ತೆಗೆದು ಸೆಂಡ ಮಾಡಿದಳು.
ವಿಶಾಲಳು ತನ್ನ ಜಾಣತನಕ್ಕೊಂದು ಹೆಮ್ಮೆಪಡುತ್ತಾ ಬೀಗಿ ನಿಂತಳು. ತಾನು ಇವತ್ತಿನ ತಂತ್ರಜ್ನಾನದಲ್ಲೂ ಶ್ಯಾನ್ಯಾಳದೇನಿ ತನಗೂ ಮೊಬೈಲ ಎಲ್ಲಾ ಬರತೈತಿ. ತಾನೇನೂ ಹಳ್ಳಿ ಗುಗ್ಗು ಅಲ್ಲ ಎಂಬ ಅಭಿಮಾನ ಉಕ್ಕುವ ಕಣ್ಣುಗಳಿಂದ ಬಯಲನೊಮ್ಮೆ ನೋಡತೊಡಗಿದಳು.
ಮರುಕ್ಷಣದಲ್ಲಿ ” ಅಯ್ಯೋ …..ನಾನು ಶೀಲವಂತಯ್ಯನನ್ನು ಮನೆಯೊಳಗಡೆ ಕರೆಯಲಿಲ್ಲವಲ್ಲಾ…..!! ” ಇದು ನಿಜವಾಗಿಯೂ ತನ್ನದು ತಪ್ಪು. ತಾನು ಎಂತಹ ಕೆಟ್ಟವಳೆಂದು ಆತನು ತಿಳಿದುಕೊಂಡನೋ….
ಮನೆಯ ಬಾಗಿಲಿಗೆ ಬಂದವರನ್ನು ಒಳಗೆ ಕರೆವ ಪದ್ದತಿ ನನಗೆ ಗೊತ್ತಿಲ್ಲ ಎಂದು ತಿಳಿದನೋ……?
ನನ್ನದು ಸಂಸ್ಕಾರವಿಲ್ಲದ ಮನೆಯಂದು ಅರ್ಥೈಸಿದನೋ….?
ಮನೆಯ ಬಾಗಿಲಿಗೆ ಬಂದವರಿಗೆ ಹನಿ ನೀರು ಗುಟುಕು ಚಾ ಕೊಡದ ಜಿಪುಣರೆಂದು ಭಾವಿಸಿದನೋ……? ಎಂದೆಲ್ಲ ವಿಚಾರಿಸತೊಡಗಿದಳು.
ಇಂದಿನ ಕಾಲದಾಗ ಓಣಿಯವರೇ ಅಣ್ಣ ತಮ್ಮಂದಿರು…!!
ಮನೆಯೊಳಗ ಏನಾದರೂ ತಾಪತ್ರಯ ಇಲ್ಲವೇ ಅವಗಢ ಸಂಭವಿಸಿದರೆ ಮೊದಲು ಆಗುವವರು ಓಣಿಯವರೇ ಅಲ್ಲವೇನು…?
ನನಗೆ ದೂರದಲ್ಲಿರುವ ಇರುವ ಅಕ್ಕ ಮಾವ ಯಾವ ಲೆಕ್ಕದವರು……?? ಸಾಯೋವಾಗ ಮೊದಲು ಓಡಿ ಬಂದು ಹನಿ ನೀರು ಬಿಡವವರು ಅಂದರ ಓಣಿಯ ಅಕ್ಕ ಪಕ್ಕದವರು ಅಂತಾದ್ದರೊಳಗ ಮನಿ ಬಾಗಿಲಿಗೆ ಬಂದ ಶೀಲವಂತನನ್ನು ನಾನು ಮನೆಯೊಳಗ ಕರಿಯದೇ ಇದ್ದರ ತಪ್ಪು ಆಗುತ್ತದೆ…? ಉಪ್ಪಿಟ್ಟು ಬ್ಯಾಡ….. ಸ್ವಲ್ಪ ಚಾ ಕೊಟ್ಟರೂ ಆತು ಅತಿಥಿ ಸತ್ಕಾರ. ನಾನು ಈ ಕ್ಷಣ ತಪ್ಪಿಸಿಕೊಂಡರೆ ಮತ್ತೆ ಈ ಕ್ಷಣ ಎಂದಿಗೂ ಬಾರದು “
ಎಂದು ವಿಶಾಲ “ ಅಣ್ಣಾರ ಒಳಗ ಬರ್ರೀ…… ಚಾ ತಗೊಂಡು ಹೋಗಿರಂತ” ಎಂದಳು.
ವಿಶಾಲಳ ಮಾತುಗಳು ಇನ್ನೂ ಮುಗಿವ ಪೂರ್ವದಲ್ಲಯೇ……ಶೀಲವಂತ “ಅಲ್ಲೇನೈತಿ ಈಗ…….! ಒಳಗ ಬರಾಕ….!! ಏನ ಉಳದೈತಿ…..? ” ಎಂದನು.
ಮತ್ತೆ ಅಲ್ಲಿ ನಿಲ್ಲದೇ ಹೊರಟು ಹೋದನು.
“ ಆಂ …ಆತ ಏನು ಅಂದ” ವಿಶಾಲಳು ಆತ ನುಡಿದದ್ದನ್ನು ಮತ್ತೊಮ್ಮೆ ನೆನಪಿಸಿಕೊಂಡಳು. ಅವಳಿಗೆ ಏನೂ ತಿಳಿಯದಂತಾಯಿತು.
‘ವಿಶಾಲಳಿಗೆ ತಾನೆಲ್ಲಿದ್ದೇನಿ’…..ಎಂದು ತನ್ನನ್ನು ತಾನು ಒಮ್ಮೆ ಅಡಿಯಿಂದ ಮುಡಿವರೆಗೆ ನೋಡಿಕೊಂಡಳು. ಹಾಂ….ನಾನು,……ನಾನು ವಿಶಾಲ.ನಾನು ನನ್ನ ಮನಿ ಬಾಗಿಲದಾಗ ನಿಂತೇನಿ ಬ್ಯಾರೆ ಎಲ್ಲಿ ಇಲ್ಲ. ಹಗಲಹೊತ್ತಿನಾಗ ಅದೇನಿ. ಕನಸಿನ್ಯಾಗ ಇಲ್ಲ. ಇಷ್ಟೋತನ ಆದದ್ದು ಕನಸು ಅಲ್ಲ. ಮನೆ ಪಕ್ಕದ ಶೀಲವಂತ ಮಾತಾಡಿದ್ದು. ನಾ ಅವನ ಮಗಳಿಗೆ ದವಾಖಾನಿ ಚೀಟಿ ಸೆಂಡ ಮಾಡೇನಿ.
‘ಅಲ್ಲೇನ ಉಳದೈತಿ ಬರಾಕ’ ಅಂದನಲ್ಲ ಏನು ಹಂಗ ಅಂದರ …? ಶಬ್ದ ನುಡಿದ ರೀತಿಯನ್ನು ಹಾಗೂ ಅದರ ಬೇರುಗಳನ್ನು ವಿಶಾಲ ಅಗೆಯತೊಡಗಿದಳು…..!!!!

“ಏನರ…. ಉಳಿದಿದ್ದರೆ ಬರತ್ತಿದ್ದನೇನು…ಈತ…..?” ವಿಶಾಲ ದಿಗ್ಬ್ರಮೆಗೊಂಡಳು.
ನಾನು ಓಣಿ ಮನುಷ್ಯ ಅಂತ ಎಂತ ಚೆಂದ ಗೌರವ ಕೊಟ್ರ ಈತನ ಮರು ಉತ್ತರ…..ಅಲ್ಲೇನ ಉಳದೈತಿ….”
ಈತ ತಾನು ಬಂದ ಹಾದಿಗುಂಟ ಉಳದದ್ದನ್ನು ಉಳದವರೊಂದಿಗೆ ಹಂಚಿಕೊಂಡೇ ಬಂದಿರುವ ಯಾತ್ರಿಕನೇನು……!!??
ನನ್ನ ಪ್ರಶ್ನೆ ಏನು..? ಆತ ಕೊಟ್ಟ ಉತ್ತರ ಏನು..?
‘ಮನೆ ಒಳಗಡೆ ಬರ‍್ರಿ ; ಚಹಾ ತಗೊಂಡು ಹೋಗ್ರಿ’ ಎಂದು ನನ್ನ ಮಾತು ಸ್ಪಷ್ಟವಾಗಿದೆ. ಮನೆಯೊಳಗೆ ಬರುವುದು ಚಹಾ ತೆಗೆದುಕೊಳ್ಳಲು.
‘ಚಹಾ ತಗೊಂಡು ಹೋಗ್ರಿ’ ಈ ವಾಕ್ಯ ಆತನ ಎದೆಯಲ್ಲಿ ಸಮ್ಮಿಳಿತವೇ ಆಗಲಿಲ್ಲೇನು.? ಅದೆಷ್ಟು ವೇಗವಾಗಿ ಆತ ಆ ಮಾತನ್ನು ಆಡಿದನಲ್ಲ. ನನ್ನ ವಾಕ್ಯಗಳನ್ನು ಪಲ್ಲಟಗೊಳಿಸಿ ಅದೇ ವೇಗದಲ್ಲಿ ಮತ್ತೊಂದು ವಾಕ್ಯವನ್ನು ನೇಯ್ದು ಒಗೆದನಲ್ಲ. ಮುಖ ಮನಸ್ಸಿನ ಕನ್ನಡಿ ; ಮಾತು ಜೀವನದ ಕನ್ನಡಿ. ಈ ಮಾತುಗಳು ಒಂದೇ ಕ್ಷಣದಲ್ಲಿ ಮೂಡುವ ಪ್ರಕ್ರಿಯೆಗಳು ಅಲ್ಲ. ಇದ್ದ ವಾಕ್ಯವನ್ನು ತೆಗೆದು ಇಲ್ಲದ ವಾಕ್ಯವನ್ನು ಹುಟ್ಟಿಸಿ ಅದೇ ವೇಗದಲ್ಲಿಉತ್ತರ ಕೊಡಬೇಕಾದರೆ ಇದರ ಹಿಂದೆ ವ್ಯವಸ್ತಿತ ವ್ಯವಸಾಯವೇ ಇರಬೇಕು ಹಾಗೂ ಇದೆ.” ಎಂದು ವಿಚಾರಿಸುತಲಿದ್ದ ವಿಶಾಲಳು ಗಾಯಗೊಂಡವಳಂತಾಗಿ
ಎದುರಿನ ಗಿಡ ಮರ ನೋಡತೊಡಗಿದಳು. ಸೀತಾ ಫಲ ಮರ, ತೆಂಗು, ನೆಲ್ಲಿ, ಜಿಲಮಿಗಿಡ……..ಗಳೆಲ್ಲಾ……ತಮ್ಮ ನ್ನೇ ಹೋಲುವ ಬೀಜಗಳನ್ನು ಮರಗಳಲ್ಲಿ ಬಿಟ್ಟಿವೆ…..ಮತ್ತೆ ಪ್ರತಿ ಉತ್ಪನ್ನ ಮರ ಬೆಳೆದ ಮೂಲ ಬೀಜವನ್ನೇ ಕೊಡುತ್ತವೆ. ಸ್ವಲ್ಪವೂ ತಪ್ಪಿಲ್ಲದೇ….. ನಿಯಮವನ್ನೇ ಪಾಲಿಸುತ್ತವೆಯಲ್ಲ…..?
ಶೀಲವಂತನೇನೂ ಈ ನೆಲದ ಮೇಲಿನ ಮನುಷ್ಯ. ಮರಗಳು ತಮ್ಮನ್ನೇ ಹೋಲುವ ಬೀಜಗಳನ್ನು ಕೊಟ್ಟಂತೆ. ಶೀಲವಂತನೂ ಸಹ ಆಡಿದ ಮಾತುಗಳು ಶೀಲವಂತನನ್ನೇ ಹೋಲುವ ಬೀಜವೆಂದಾಯಿತು. ‘ ಅಲ್ಲೇನ ಉಳದೈತಿ ಬರಾಕ’ ಇದು ಆತನ ಉತ್ಪನ್ನ. ಇಷ್ಟು ದಿನ ದುಡಿದ ಪ್ರತಿ ಫಲ.. ಇದು ಹೆಣ್ಣು ಮಕ್ಕಳನ್ನು ನೋಡುವ ಪರಿ ಏನು…? ಅಯ್ಯೋ….ದೇವರೆ ನಾನು ಯ್ಯಾಕೆ ಹೆಣ್ಣಾದೆ….’ಎನ್ನುವ ಪ್ರತಿ ಶಬ್ದದ ಉಸಿರಿನಲ್ಲಿ ಅವಳ ನರಳಿಕೆ ಇತ್ತು.
ಮನುಷ್ಯನಾದವನಿಗೆ ದೇವರು ಯೋಚಿಸುವ ಶಕ್ತಿ ಕೊಟ್ಟಿದ್ದಾನೆ. ಶೀಲವಂತನಿಗೆ ನನ್ನ ಅಣ್ಣನಾಗುವ ಇಲ್ಲವೆ ತಮ್ಮನಾಗುವ ಸಾಧ್ಯತೆಗಳೇ ಇದ್ದಿರಲಿಲ್ಲವೇ…?
ನಾ…..ಈ ಮೊದಲು ಅಂದರೆ ನನ್ನ ಮನೆ ಬಾಗಿಲಿಗೆ ಬಂದ ಅವನ ಜೊತೆ ತಂಗಿಯಂತೆ ವರ್ತಿಸಿದ್ದೇನೆ. ಅಣ್ಣ ಎಂಬ ಶಬ್ದವನ್ನು ಬಾಯಿಂದ ಹೊರ ಹಾಕಿದ್ದೇನೆ. ನನ್ನ ಫೋನಿನಿಂದಲೇ ಅವನ ಮಗಳು ಮೈತ್ರಾಗೆ ಫೋನಾಯಿಸಿ ಸಹಕಾರ ತೋರಿಸಿದ್ದೇನೆ. “ಮೈತ್ರಾ ನಿಮ್ಮ ಅಪ್ಪಾಜಿ ಮಾತಾಡ್ತಾರೆ ಮಾತಾಡು” ಎಂದು ಗೌರವ ತೋರಿಸಿದ್ದೇನೆ. ಮಗಳ ಜೊತೆ ಮಾತನಾಡಲು ಆತನಿಗೆ ಫೋನು ಕೊಟ್ಟಿರುವೆ.
ಇವೆಲ್ಲ ನನ್ನ ಆದರ್ಶದ ಪ್ರದರ್ಶನಳಗಳು ಯಾವವೂ ಒಂದೂ ಫಲವನ್ನು ಅವನಿಂದ ಕೊಡಲಿಲ್ಲ. ಇಂತಹ ನೀತಿಯುಕ್ತ ನಡತೆಗಳು ಈ ಪುರುಷನ ತನು ಮನದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲಿಲ್ಲ. ಇಂತಹ ನಡತೆಗಳಿಗೆ ಆತನ ದೇಹ ಮನಸ್ಸುಗಳು ತೆರೆದುಕೊಳ್ಲುವುದೇ ಇಲ್ಲವೆಂದು ಬರೆದಂತಾಯಿತು. ಶೀಲವಂತ… ಬಂಜರನಾಗಿದ್ದಾನೆಯೇ..?
ಶೀಲವಂತನೆಂದರೆ ಇಷ್ಟೇನಾ…….ತನ್ನ ಮಿತಿಯಾಚೆ ಬದುಕುವ ಸಾದ್ಯತೆ ಇದ್ದೂ ಆತ ಕುಬ್ಜನಾದದ್ದು ಹೇಗೆ..?
ಬೀದಿಯಲ್ಲಿಯ ಮಹಿಳೆಯರನ್ನು ನೋಡುವ ಈತನಿಗೆ ಅವರು ಕಾಣುವುದು ಹೇಗೆ…? ಕುಬ್ಜರಾಗಿಯೇ….! ? ಇಲ್ಲದಿದ್ದರೆ…?
ಅವರೂ ತನ್ನ ಹಾಗೆ ಮನುಷ್ಯರು. ಅವರೂ ತನ್ನಂತೆಯೇ ಊಟ ಮಾಡುತ್ತಾರೆ ಅವರಿಗೂ ತನ್ನಂತೆ ವಿಚಾರ ಮಾಡುವ ಶಕ್ತಿ ಇದೆ. ಅವರಿಗೂ ದುಡಿಯುವ ಶಕ್ತಿ ಇದೆ. ದೈಹಿಕ ರಚನೆಯಲ್ಲಿ ಮಾತ್ರ ವ್ಯತ್ಯಾಸವಿದೆ ಅಷ್ಟೇ.ಆದರೂ ಅವಳನ್ನು ತಾನು ತುಚ್ಚ ದೃಷ್ಟಿಯಲ್ಲಿ ನೋಡುತ್ತಿರುವುದು ಸ್ಪಷ್ಟ. ಯ್ಯಾಕೆ….? ಅವಳು ಶೀರಿ ಉಟ್ಟಾಳಂತವೇ…..!! ಹೌದು .. ಶೀರೆ ಉಟ್ಟರ ತಪ್ಪೇ…? ಮನೆಯಲ್ಲಿ ನಿನ್ನ ತಾಯಿ ಶೀರೆ ಉಟ್ಟಿಲ್ಲವೇ..ತಂಗಿ ಹೆಣ್ಣು ಬಟ್ಟೆ ತೊಟ್ಟಿಲ್ಲವೆ…..? ಹೌದು ಹೌದು ಅದು ಒಂದು ಭಾಗ ಬೇರೆ. ಅದು ಒಳಗಿಂದು ತನ್ನ ಮನೇದ್ದು.ಅದನ್ನು ಹೊರಗೆ ತಂದು ಇಂತಹ ಹೊರಗಿನ ಸಂಗತಿಗೆ ಜೋಡಿಸಲಾಗದು.
ಭೀಮ ತನ್ನ ಗೆಳೆಯ ಅವನೇನು ಹಾದಿಗೆ ಹೋಗುವ ಹೆಣ್ಣ ಮಗಳಿಗೆ ಗೌರವ ಕೊಡತ್ತಾನೇನು…..??
ಶಂಕರ ಮೊನ್ನೆ ಮೊನ್ನೆ…ದವಾಖಾನೆಯಲ್ಲಿ ಅಟೆಂಡರ ಮಲ್ಲವ್ವನಿಗೆ ಹೆಣ್ಣಿನ ಶೀರೆ ಮೊಳಕಾಲ ಕೆಳಗ ಅಂದನಲ್ಲ.
ಆ ಶಿವ್ವ್ಯಾ….ಬಸ್ಸಿನ್ಯಾಗ ಕುಳಿತ ಹೆಣ್ಣು ಮಗಳಿಗೆ ಯ್ಯಾವ ಊರಿಗೆ ಹೋಗತಿ ….? ಎಂದು ಕೇಳಿದನಲ್ಲ. ಇವನೇನು ಕಂಡಕ್ಟರ ಆಗಿದ್ದನೇನು…? ಅವಳಿಗೆ ತಾನು ಯಾವ ಊರಿಗೆ ಹೋಗಬೇಕು ಎಂಬುದು ಗೊತ್ತಿಲ್ಲೇನು….ಹೆಣ್ಣಿಗೆ ಏನು ಗೊತ್ತಿಲ್ಲದಂತೆ ಮಾತನಾಡಿದನಲ್ಲ.ಇವು ಕುಹಕದಮಾತುಗಳೋ…..ಇಲ್ಲವೆ ಹೆಣ್ಣಿಗೆ ಕೊಡುವ ಗೌರವದ ನಡತೆಗಳೋ…? ಇವರೆಲ್ಲರ ಸಂಗದಲ್ಲಿರುವ ಈ ಶೀಲವಂತನ ವ್ಯಕ್ತಿತ್ವ ವಿಕಸನದ ರೀತಿಗಳು ಯಾವವು ??. ಈತನ ಮನಸ್ಸು ತುಡಿಯುವುದು ‘ತಮ್ಮತನವನ್ನು ‘ತನ್ನತನವನ್ನು’… ಮಾತ್ರ…. ಇನ್ನೂ ಏನೇನೋ ಅವಳ ತಲೆಯಲ್ಲಿ..ಗದ್ದಲಹಿಡಿಸಿದ್ದವು. ಅದೊಂದು ಸಂತೆಯಾಯಿತು.ಅದನ್ನೆಲ್ಲಾ ಅದುವಿಕ್ಕೊಳ್ಳುತ್ತಾ……ಒಳ ಬಂದಳು.ಶೀಲವಂತನ ಮಾತುಗಳನ್ನು ಕೇಳಿ ನೋವಿನಿಂದ ತತ್ತರಿಸಿದಂತಾದ ಅವಳ ಉಸಿರಾಟ ಏರು ಪೇರಾಗಿತ್ತು. ಅವಳು ಏದುಸಿರು ಬಿಡುತ್ತಲೇ…..ಸಮಾಧಾನಕ್ಕಾಗಿ ಅತ್ತ ಇತ್ತ ತಡಕಾಡಿದಳು. ಎದುರಿಗೆ ಕಂಡದ್ದು ಟಿ.ವಿ. ಬಟನ ಆನ ಮಾಡಿ ಟಿವಿ ಹಚ್ಚಿದಳು ವಿಶಾಲಳು. ಅದರಲ್ಲಿ ವ್ಯಕ್ತಿಯೊಬ್ಬನ ಡಾಕ್ಯುಮೆಂಟರಿ ಕೇಳಿ ಬರುತ್ತಿತ್ತು. “ ಸತ್ಯಪ್ಪನೆಂದು ಹೇಳಿಕೊಳ್ಳುವ ಈತನು ಪಟ್ಟಣದ… ಎಲ್ಲೆಲ್ಲಾ ಕಾಣ ಸಿಗುತ್ತಾನೆ.ಪಟ್ಟಣದ ಬೀದಿ ಬೀದಿಗಳಲ್ಲಿ ಅಲೆಯುತ್ತಾನೆ ಬಸ್ಟ್ಯಾಂಡಗಳಲ್ಲಿ ನಿಂತಿರುತ್ತಾನೆ.ಕೆಲವುದಿನ ಹೊಟ್ಟೆಗೆ ಭಿಕ್ಷೆ ಬೇಡುತ್ತಾನೆ. ಮತ್ತೆ ಕೆಲವು ದಿನ ಹೊಸಬಟ್ಟೆ ಅಂಗಡಿಗೆ ಹಾಕುವುದು ಕಂಡುಬರುತ್ತದೆ.” ಎಂದು ಪೋಲಿಸ ಮೂಲಗಳು ತಿಳಿಸಿವೆ. ಸಾರ್ವಜನಿಕರ ಸಂಶಯಾಸ್ಪದ ಅಭಿಪ್ರಾಯದ ಮೇರೆಗೆ ಈತನ ಹೆಜ್ಜೆಗಳನ್ನು ಬೆನ್ನಟ್ಟಿದ ಪೋಲೀಸರು ಈತನನ್ನು ರುದ್ರಭೂಮಿಯಲ್ಲಿ ಮಧ್ಯರಾತ್ರಿಯಲ್ಲಿ ಹೆಣ್ಣು ಶವದೊಂದಿಗೆ ರಾತ್ರಿ ಹಂಚಿಕೊಳ್ಳುತ್ತಲಿದ್ದವನನ್ನು ಪೋಲಿಸರು ಆ ಕುಣಿಯಿಂದಲೇ ಅಂದರೆ ರೆಡ ಹ್ಯಾಂಡಾಗಿ ಬಂಧಿಸಿ ತಂದಿದ್ದಾರೆ. ಶವದ ಮೇಲಿನ ಬಟ್ಟೆಗಳನ್ನು ಬಿಡಿಸಿ ಮಾರುತ್ತಿದ್ದ ಅಫರಾಧವೂ ಆತನ ಮೇಲೆಯೇ ಇದೆ ಎಂದು ವರದಿಯಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ತನಿಖೆಯಿಂದ ಗೊತ್ತಾಗಬೇಕು….” ಎಂದು ಓದುವವಳು ಹೇಳುತ್ತಲಿದ್ದಳು.
ಅದನ್ನು ಕೇಳುತ್ತಲಿದ್ದ ವಿಶಾಲಳಿಗೆ ದಿಗ್ಬ್ರಮೆಯಾದರೂ…. ಶೀಲವಂತನ ಜೊತೆಗೆ ಈ ವ್ಯಕ್ತಿಯ ಸಮೀಕರಣವಾದಂತೆ “ಓ….ಹೋ……….ದೇವರೇ…..ಮನುಷ್ಯ ಅಂದರೆ ಹೀಗುನೂ…ಇರುತ್ತಾರೆಯೇ…!! ??” ಎಂದು ಉದ್ಘರಿಸುತ್ತಿದ್ದ ಅವಳಲ್ಲಿ ಉಸಿರಾಟ ಸಹಜ ಸ್ಥಿತಿಗೆ ನಿಧಾನವಾಗಿ ಮರಳತೊಡಗಿತ್ತು……….


Leave a Reply

Back To Top