ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಅಮೃತ ಗಳಿಗೆ
ಸಣ್ಣ ಕಥೆಗಳ ಸಂಕಲನ ಲೇಖಕಿ : ಡಿ ಎನ್ ಗೀತಾ
ಅಮೃತ ಗಳಿಗೆ : ಸಣ್ಣ ಕಥೆಗಳ ಸಂಕಲನ ಲೇಖಕಿ : ಡಿ ಎನ್ ಗೀತಾ
ಪ್ರಥಮ ಮುದ್ರಣ : ೨೦೧೯
ಪ್ರಕಾಶಕರು : ಶ್ರೀ ವಿಜಯನಾಗ ಪಬ್ಲಿಕೇಷನ್ಸ್ ಬೆಂಗಳೂರು
ಬೆಲೆ ; ರೂ. ೧೨೦/_
ಶ್ರೀಮತಿ ಡಿ ಎನ್ ಗೀತಾ ಅವರ ಜನನ ಮಲೆನಾಡಿನ ಮಡಿಲಿನ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ. ಪ್ರೌಡಶಾಲೆಯಲ್ಲಿರುವಾಗಲೇ ಶಾಲೆಯ ವಾರ್ಷಿಕ ಪತ್ರಿಕೆಗಳಿಗೆ ಕವನಗಳನ್ನು ಬರೆಯುವ ಮೂಲಕ ಬರವಣಿಗೆ ಆರಂಭಿಸಿದವರು . ಇವರ ಕಾದಂಬರಿಗಳು ಮಂಗಳ, ಕರ್ಮವೀರ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಇದುವರೆಗೆ ಸುಮಾರು ಇನ್ನೂರು ಕಥೆಗಳು ಮತ್ತು 3 ಕಾದಂಬರಿಗಳು ಪ್ರಕಟಗೊಂಡಿವೆ. ಕವನ ಸಂಕಲನವೂ ಸೇರಿದಂತೆ ಇದುವರೆಗೆ 9 ಕೃತಿಗಳು ಪ್ರಕಟವಾಗಿವೆ . ಅವರ ಮೊದಲ ಕಾದಂಬರಿಗೆ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ ಹಾಗೂ ಇವರ ಸಾಹಿತ್ಯ ಸೇವೆಗೆ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾರತ್ನ ಪ್ರಶಸ್ತಿ ಲಭಿಸಿರುತ್ತದೆ .
While there may not be a book in every one of us there is so often a damned good story
_ jeffrey archer
ಸುಪ್ರಸಿದ್ಧ ಆಂಗ್ಲ ಬರಹಗಾರ ಜೆಫ್ರಿ ಆರ್ಚರ್ ಅವರೇ ಹೇಳಿದಂತೆ ಪ್ರತಿಯೊಬ್ಬರಲ್ಲೂ ಒಂದು ಪುಸ್ತಕ ಅಡಗಿರುವುದು ಸಾಧ್ಯವಿಲ್ಲದಿದ್ದರೂ ಒಂದು ಸಣ್ಣ ಕಥೆ ಯಂತೂ ಇದ್ದೇ ಇರುತ್ತದೆ . ಹಾಗಾಗಿಯೇ ಸಣ್ಣಕಥೆಗಳು ಓದುಗನ ಆಸಕ್ತಿ ಕುತೂಹಲ ಗಳಿಸುವಲ್ಲಿ ಜನಪ್ರಿಯವಾಗುವುದರಲ್ಲಿ ಸಫಲವಾಗಿವೆ .
ಪ್ರಸಕ್ತ ಸಂಕಲನದಲ್ಲಿ ಒಟ್ಟು ಹದಿನಾರು ಕಥೆಗಳಿದ್ದು ಮಹಿಳೆಯರ ಭಾವನೆಗಳ ವಿವಿಧ ಆಯಾಮಗಳ ಅನಾವರಣ ಇಲ್ಲಾಗಿದೆ.ಸ್ತ್ರೀಪರ ಧೋರಣೆಗಳು ಮಹಿಳಾ ಕಾಳಜಿಗಳು ಇವರ ಕಥೆಗಳಲ್ಲಿ ಇದ್ದು ಅಸಮಾನತೆ ಅನ್ಯಾಯಗಳ ವಿರುದ್ಧ ಗಟ್ಟಿದನಿಯಲ್ಲಿ ಹೊರಳದಿದ್ದರೂ ಅಸಹಾಯಕತೆಯ ರೋಷವನ್ನು ಕೊರಳು ಗಟ್ಟಿಸುವಂತಹ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಿಗೆ ನಾಟುವಂತೆ ಬರೆಯುವ ಪರಿ ಅಸದೃಶ.
ಇತ್ತೀಚಿನ ದಿನಗಳಲ್ಲಿನ ಅಂತರ್ಜಾಲ ಬಳಕೆಯ ಬಗೆಗಿನ ಕಥೆಗಳು ಮುಖಪುಸ್ತಕದ ಚಿತ್ರಗಳು ಮತ್ತು ಆಟ ಹುಡುಗಾಟ . ಮುಖ ಪುಸ್ತಕದ ಗೆಳೆತನ ಬಗೆಗಿನ ಕಥೆ ಒಂದಾದರೆ ಆಟ ಹುಡುಗಾಟದಲ್ಲಿ ಆಗ ಆತಂಕಕ್ಕೆ ಕಾರಣವಾಗಿದ್ದ ಬ್ಲೂವೇಲ್ ಸುಳಿಗೆ ಸಿಕ್ಕಿ ಬಿದ್ದ ಮಗನ ತಾಯಿಯ ಪಾಡು ಇನ್ನೊಂದರಲ್ಲಿ . ಪುಸ್ತಕ ಸ್ನೇಹದಲ್ಲಿ ವಂಚಿತನಾದ ಪತಿ ಹೆಂಡತಿಗೆ ಯಾವ ಯಾರೊಂದಿಗೂ ಮುಖ ಪುಸ್ತಕದಲ್ಲಿ ಸ್ನೇಹ ಬೆಳೆಸಬಾರದು ಎಂದಿರುತ್ತಾನೆ . ಬಾಲ್ಯದ ಸೋದರ ಸಮಾನ ಗೆಳೆಯನೊಬ್ಬನೊಂದಿಗೆ ಸ್ನೇಹ ಬೆಳೆಸಿ ತನ್ನ ಹೇಳದಿದ್ದಾಗ ವಿವಾಹದಮೊದಲನೆಯ ವಾರ್ಷಿಕೋತ್ಸವದ ಸಮಯಕ್ಕೆ ದಂಪತಿಗಳು ವಿಚ್ಚೇದನ ತೆಗೆದುಕೊಳ್ಳುತ್ತಾರೆ ಆದರೆ ನಂತರ ನಿಜ ವಿಷಯ ತಿಳಿಯಿತು ಎರಡನೆಯ ವಾರ್ಷಿಕೋತ್ಸವದ ವೇಳೆಗೆ ಒಂದಾಗಿ ಸುಖಾಂತ.
ಗಂಡಿನ ಅಪನಂಬಿಕೆ ಸೀತಾಮಾತೆಯನ್ನು ಬಿಡಲಿಲ್ಲ ಎಂದಮೇಲೆ ಇಂದಿನ ಕಾಲದಲ್ಲಿ ಬಿಟ್ಟೀತೆ ಎನ್ನುವ ಲೇಖಕಿ ಮತ್ತೆ ಮುಖಪುಸ್ತಕದ ಚಿತ್ರಗಳು ಹಾಗೂ ಸೇತುವೆ ಕಥೆಯಲ್ಲಿ ಈ ಅಂಶಗಳನ್ನು ತಂದರೂ ವಿಭಿನ್ನ ರೀತಿಯ ಮುಕ್ತಾಯ ಹೆಣ್ಣಿನ ಪರಿಸ್ಥಿತಿ ಹಾಗೂ ಮತ್ತು ಮನಸ್ಥಿತಿಗಳ ಮೇಲೆ ಆಧರಿಸಿದಂತೆ ಬೇರೆಯದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಂಶವನ್ನು ಇಲ್ಲಿ ಚಿತ್ರಿಸಿದ್ದಾರೆ . ಸೇತುವೆ ಕಥೆಯಲ್ಲಿ ಬಾಲ್ಯದ ಸಂಬಂಧಿ ಗೆಳೆಯ ನನ್ನ ಮತ್ತು ಪತ್ನಿಯ ನಡುವೆ ಇಲ್ಲದ ಸಂಬಂಧವನ್ನು ಕಲ್ಪಿಸಿ ದೂರಾಗುವ ಪತಿ ನಂತರ ನಿಜ ತಿಳಿದು ಕ್ಷಮೆ ಕೇಳುತ್ತಾನೆ . ಆದರೆ ಆ ವೇಳೆಗೆ ಸಂಬಂಧ ಗಳೆಲ್ಲರ ಮುಖವಾಡ ಕಳಚಿಬಿದ್ದು ಜೀವನದ ನಿಜವಾದ ಅರ್ಥವನ್ನು ತಿಳಿದ ನಾಯಕಿ ಒಂಟಿಯಾಗಿ ಮುಂದುವರೆಯಲು ನಿರ್ಧರಿಸುತ್ತಾಳೆ . ವಿಭಿನ್ನ ಮನೋಭಾವದ ಈ ನಾಯಕಿಯರು ಅವರವರ ಸಂಧರ್ಭಗಳು ಬೀರುವ ಪರಿಣಾಮದಂತೆ ವರ್ತಿಸುವುದು ಸಹಜವೇ ಎನಿಸುತ್ತದೆ .
ಆಡಿ ಬಾ ನನ ಕಂದ ಶಾಲೆಯಿಂದ ಮಾಮೂಲಿ ಸಮಯಕ್ಕೆ ಹಿಂದಿರುಗದ ಮಗುವಿನ ಬಗೆಗಿನ ಆತಂಕದ ಕ್ಷಣಗಳು ಕಥೆಯಾಗಿ ಮೂಡಿಬಂದಿವೆ .
ಸಾಮಾಜಿಕ ಕಳಕಳಿ ಜನಪರ ಧೋರಣೆಗಳು ಪ್ರಸ್ತುತದ ಪರಿಸ್ಥಿತಿ ಅನ್ನದಾತ ಹಾಗೂ ಕ್ಷಮಯಾಧರಿತ್ರಿ ಯಲ್ಲಿ ಚರ್ಚಿತವಾಗಿದೆ . ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ರೈತ, ಸಕಾಲದಲ್ಲಿ ತನ್ನ ಗೆಳೆಯನಿಂದ ಒದಗಿದ ಆರ್ಥಿಕ ನೆರವಿನಿಂದ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುತ್ತಾನೆ. ನಿವೇಶನಗಳಿಗಾಗಿ ಹೊಲಗದ್ದೆಗಳು ಮಾಯವಾಗುತ್ತಿರುವ ಬಗೆಗಿನ ತಲ್ಲಣವನ್ನು ಸೂಚಿಸುವ ಕಥೆ ಕ್ಷಮಯಾಧರಿತ್ರಿಯದು.ನಿವೇಶನ ಕೊಳ್ಳಲು ಹೊರಟ ಸಾಫ್ಟ್ ವೇರ್ ದಂಪತಿಗಳು ಕಡೆಗೆ ಆ ನಿರ್ಧಾರ ಕೈಬಿಟ್ಟು ಕೃಷಿ ಯೋಗ್ಯ ಜಮೀನು ತೆಗೆದುಕೊಂಡು ವ್ಯವಸಾಯದ ಕಡೆಗೆ ಆಸಕ್ತಿ ತೋರಿಸುವುದು ನಿಜಕ್ಕೂ ಸಕಾರಾತ್ಮಕ ಅಂಶ .
ಇಂದಿನ ಮತ್ತೊಂದು ಸಾಮಾಜಿಕ ಪಿಡುಗೆಂದರೆ ಪ್ರತಿಭಾಪಲಾಯನ. ಮಕ್ಕಳೆಲ್ಲ ವಿದೇಶದಲ್ಲಿ ನೆಲೆಸಿದಾಗ ಹೆತ್ತವರ ಇಲ್ಲಿನ ದುಃಖದ ಬಗ್ಗೆ “ನೆರಳಾದವರು” ಕಥೆ ಬೆಳಕು ಚೆಲ್ಲುತ್ತದೆ. ಹಾಗೆಯೇ ಮಳೆ ಎಂಬ ಮಾಯೆ ವಿದೇಶದಲ್ಲಿ ಕಾಡುವ ಒಂಟಿತನ ಅಸಹಾಯಕತನದ ಎಳೆಯ ಮೇಲೆ ಹೊಸೆಯಲ್ಪಟ್ಟಿವೆ .
ಪುಸ್ತಕದ ಶೀರ್ಷಿಕೆಯ ಕಥೆಯಾದ ಅಮೃತಗಳಿಗೆಯಲ್ಲಿ ಸ್ತ್ರೀಭ್ರೂಣ ಹತ್ಯೆಯ ಅಂಶ ವಿವರವಾಗಿ ಚರ್ಚಿತವಾಗಿದೆ. ಅತ್ತೆಯ ಮನೆಯ ಮೊದಲನೆಯ ಮಗು ಹೆಣ್ಣು ಎಂಬ ಕಾರಣಕ್ಕೆ ಕೊಲೆಗೋ ಏರ್ಪಡುತ್ತದೆ ಎರಡನೆಯದು ಹೆಣ್ಣಾದರೆ ಕೊಲ್ಲುತ್ತಾರೆಂದು ಮನೆಯನ್ನೇ ಬಿಟ್ಟು ಬರುವ ತಾಯಿ ಧೈರ್ಯವಾಗಿ ಕೆಲಸ ಮಾಡಿ ಮಗಳನ್ನು ವೈದ್ಯಳನ್ನಾಗಿ ಮಾಡುತ್ತಾಳೆ. ಅಷ್ಟೆ ಅಲ್ಲದೆ ಮುಂದೊಮ್ಮೆ ಆ ಮಗಳ ತಂದೆ ಎದುರಾಗಿ ತನ್ನ ತಪ್ಪಿಗೆ ಕ್ಷಮೆ ಯಾಚಿಸುತ್ತಾನೆ.
“ಕಳೆದುಹೋದ ಕವಿತೆ” ತಂದೆಯ ಅಕಾಲಿಕ ಸಾವು ಹಾಗೂ ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಪ್ರೀತಿಯನ್ನು ತಿರಸ್ಕರಿಸಿ ಒಂಟಿಯಾಗಿ ಬಾಳುವ ಹುಡುಗಿಯ ಪ್ರೇಮದ ಕಥೆ . ತುಂಬಾ ಭಾವಪೂರ್ಣವಾಗಿ ಹೆಣೆಯಲ್ಪಟ್ಟಿದೆ. ಮನೆಯವರ ಆಸೆಗೆ ವಿರುದ್ಧವಾಗಿ ಬಣ್ಣದ ಬದುಕಿಗೆ ಆಕರ್ಷಿತಳಾಗಿ ಹೋದ ಕಲಾವಿದೆಯೊಬ್ಬಳ ಚಿತ್ರಣ ಬಣ್ಣದ ಪರದೆಯಲ್ಲಿ .
ನೀಲಿ ಮಾತ್ರೆ ಕಥೆಯಲ್ಲಿ ತನ್ನದೇ ತದ್ರೂಪವಾದ ರೋಬೋಟ್ ತನ್ನ ಸಂಸಾರದಲ್ಲಿ ತನ್ನ ಸ್ಥಾನವನ್ನೇ ಕದಿಯುತ್ತಿರುವ ಬಗ್ಗೆ ಆತಂಕಗೊಂಡ ಕಥಾನಾಯಕಿ ಅದನ್ನು ನಾಶ ಮಾಡುವ ನಿರ್ಧಾರ ತೆಗೆದುಕೊಳ್ಳುವುದನ್ನು ತುಂಬಾ ಚೆನ್ನಾಗಿ ವರ್ಣಿಸುತ್ತದೆ . ಮುಂದೆ ಏನಾದರೂ ನಿಜವಾಗಿ ಹೀಗಾದರೆ ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತದೆ .
ದೇಶಭಕ್ತ ಸೈನಿಕನೊಬ್ಬ ತನ್ನ ಮೊಮ್ಮಗ ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ದೇಶದ್ರೋಹ ಕೆಲಸದಲ್ಲಿ ತೊಡಗಿರುವುದನ್ನು ಕಂಡು ತಾನೇ ಪೊಲೀಸರಿಗೆ ಹಿಡಿದು ಕೊಡುವ ಹೃದಯ ವಿದ್ರಾವಕ ಕಥೆ ವಂದೇ ಮಾತರಂ .
ಗೊತ್ತಿಲ್ಲದ ವಿಷಯಗಳ ಸಂಧರ್ಭಗಳ ಸನ್ನಿವೇಶಗಳ ವರ್ಣನೆಗಳ ಕುತೂಹಲ ಕೌತುಕವನ್ನು ಮೂಡಿಸಿ ಹೊಸ ಪ್ರಪಂಚದ ಅರಿವು ಮೂಡಿಸಿದರೆ ಗೊತ್ತಿರುವ ಇದೇ ವಿಷಯಗಳು ನಮ್ಮನ್ನು ನಾವು ಅಲ್ಲಿ ಪ್ರತಿಬಿಂಬವಾಗಿ ಕಾಣುವಂತೆ ಮಾಡುತ್ತದೆ ಇದು ಕಥೆಗಳ ವಿಶೇಷವೇ ಸರಿ .
ಪ್ರಸಿದ್ಧ ಅಮೆರಿಕನ್ ಬರಹಗಾರ ಲಿನ್ ಅಬೇ ಒಂದೆಡೆ ಹೇಳುತ್ತಾರೆ ಕಾದಂಬರಿಗಳನ್ನು ಬರೆಯುವುದು ಕಾದಂಬರಿಗಳನ್ನು ಬರೆಯುವುದಕ್ಕಿಂತ ಸಣ್ಣ ಕತೆಗಳನ್ನು ಬರೆಯುವುದು ಕಷ್ಟ ಎಂದು . ನಿಜ ಇದು ಬಿಂದುವಿನಲ್ಲಿ ಸಿಂಧುವನ್ನು ಹಿಡಿದಿಡುವಂತಹ ಸೂಕ್ಷ್ಮ ಕೆಲಸ ನಯಗಾರಿಕೆ ನಿಪುಣತೆ ಕುಸುರಿ ಬೇಡುವ ಕೆಲಸ . ಕಾದಂಬರಿಗಳು ಒಂದು ದೀರ್ಘ ಪ್ರವಾಸದ ಅನುಭವ ಕೊಟ್ಟು ಪ್ರತಿಯೊಂದು ಸ್ಥಳದ ರೋಚಕತೆಯನ್ನು ಬಿಂಬಿಸಿದರೆ ಪ್ರವಾಸಗಳು ಅಲ್ಲಲ್ಲಿ ಹೋಗಿ ಬರುವ ಸಣ್ಣಪುಟ್ಟ ಪಿಕ್ನಿಕ್ ಅಥವಾ ದೇವಾಲಯಗಳ ಭೇಟಿಯಂತೆ ಮನಸ್ಸಿಗೆ ತುಂತುರು ಹನಿಯ ಪುಳಕದಂತೆ ಹಿತ ತರುವ ಸಣ್ಣ ಕಥೆಗಳು
ಸಾಹಿತ್ಯದಲ್ಲಿ ಸದಾಕಾಲ ಜನಪ್ರಿಯತೆಯ ಮಂಚೂಣಿಯಲ್ಲಿರುವ ಪ್ರಕಾರ .
ಲೇಖಕಿಯವರು ಮುನ್ನುಡಿಯಲ್ಲಿ ಬರೆದಂತೆ “ಇಲ್ಲಿನ ಕಥೆಗಳು ಸಮಾಜವನ್ನೇ ಬದಲಿಸಬಲ್ಲವು ಎಂಬ ಮಹದಾಸೆ ಇಲ್ಲದಿದ್ದರೂ ಇವು ಓದುಗರನ್ನು ಕ್ಷಣಕಾಲವಾದರೂ ಚಿಂತನೆಗೆ ಹಚ್ಚುತ್ತವೆ ಎಂಬ ವಿಶ್ವಾಸ ನನಗಿದೆ ” ಈ ಸಂಕಲನದ ಕಥೆಗಳೆಲ್ಲಾ ಯಶಸ್ವಿಯಾಗಿ ಈ ಕೆಲಸವನ್ನು ಮಾಡುತ್ತದೆ ಎಂದು ಖಂಡಿತವಾಗಿ ಹೇಳಬಹುದು .
ಇವರಿಂದ ಮತ್ತಷ್ಟು ಮಗದಷ್ಟು ಸಾಹಿತ್ಯಕೃಷಿ ನಡೆಯಲೆಂದೂ, ಇನ್ನಷ್ಟು ಯಶಸ್ಸು ಕಾಣಲೆಂಬ ಹಾರೈಕೆಯೊಂದಿಗೆ
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು