ವಿಶೇಷ ಲೇಖನ
ಜಯಶ್ರೀ.ಜೆ. ಅಬ್ಬಿಗೇರಿ.
ಅಳುತ್ತ ಬದುಕುವುದಕ್ಕಿಂತ ಅರಳುತ್ತ ಬದುಕೋಣ
ಬದಲಾದ ನಮ್ಮ ಜೀವನಶೈಲಿಯಲ್ಲಿ ಮೊದಲೆಲ್ಲ ಸಾಮಾನ್ಯವಾಗಿದ್ದ ಸಂಸ್ಕೃತಿ ಸಂಸ್ಕಾರಗಳು ಅಪರೂಪವೆನಿಸುತ್ತಿವೆ. ಯಾವುದೇ ಒಂದು ವಸ್ತು, ವ್ಯಕ್ತಿ, ನಿತ್ಯ ಜೀವನದಲ್ಲಿ ಬಳಕೆಯಲ್ಲಿದ್ದರೆ ಮಾತ್ರ ಅವು ಜೀವಂತಿಕೆಯನ್ನು ಉಳಿಸಿಕೊಳ್ಳುತ್ತವೆ. ಇಲ್ಲದಿದ್ದರೆ, ಅವು ತಮ್ಮ ನೈಜತೆಯನ್ನು ಕಳೆದುಕೊಳ್ಳುತ್ತವೆ. ಬರಬರುತ್ತ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಚರಿತ್ರೆಯ ಪುಟಗಳನ್ನು ಸೇರಿಕೊಳ್ಳುತ್ತವೆ. ಕೆಲವೊಮ್ಮೆಯಂತೂ ಹೇಳ ಹೆಸರಿಲ್ಲದಂತೆ ಕಾಲಗರ್ಭದಲ್ಲಿ ಅಡಗಿ ಹೋಗುತ್ತವೆ. ಹಾಗೆಯೇ ಚೆಂದದ, ಗೆಲುವಿನ, ಸರಳ ಜೀವನವೆನ್ನುವುದು ಕೂಡ ತನ್ನ ಅರ್ಥವನ್ನು ಕಳೆದುಕೊಂಡು ಕೇವಲ ದಂತ ಕಥೆಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಬರುವ ಕಥೆಗಳಿಗೆ ಮಾತ್ರ ಸೀಮಿತವಾಗಿವೆ ಎಂಬುದು ನಮ್ಮ ಹಿರಿಯರ ಅಂಬೋಣ. ಇತ್ತೀಚಿಗಂತೂ ಗೊಣುಗುವುದೇ ಜೀವನದ ಪಾಡಾಗಿದೆ. ನಮ್ಮ ಬದುಕಿನಲ್ಲಿ ಅದು ಇಲ್ಲ ಇದು ಇಲ್ಲ. ಇದ್ದರೆ ಸಾಲುವುದಿಲ್ಲ. ಇಲ್ಲದ್ದು ಬೇಕಾಗುತ್ತದೆ. ಇದ್ದದ್ದು ಬೇಡವೆಂದು ಎಸೆಯಬೇಕೆನಿಸುತ್ತದೆ. ಒಟ್ಟಿನಲ್ಲಿ ಯಾವುದಕ್ಕೂ ಸಂತಸವಿಲ್ಲ. ಬೇಕು ಬೇಡಗಳ ಸಂತೆಯಲ್ಲಿ ದಿನವೂ ಅಳುವುದೇ ಬಾಳು ಎನಿಸಿದೆ. ನಮ್ಮ ಹಿರಿಯರೆಲ್ಲ ಇದ್ದುದಲ್ಲೇ ಆನಂದದ ಸುದೀರ್ಘ ಸಂತೃಪ್ತ ಜೀವನ ಕಳೆದಿರುವರು. ನಾವೇಕೆ ಹೀಗಾಗಿದ್ದೇವೆ? ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಒಂದು ಸಣ್ಣ ಪ್ರಯತ್ನವಿಲ್ಲಿದೆ.
ಜೀವನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ನಾಲ್ವರು ಸೈನಿಕರು: ಮಾತು, ಪ್ರೀತಿ, ಸ್ನೇಹ ಮತ್ತು ತಾಳ್ಮೆ. ಇವೆಲ್ಲ ಅದ್ಭುತ ಚೈತನ್ಯದಂತೆ. ಆದರೆ ಇವು ಈಗ ಕೃತ್ರಿಮತೆಯ ಬೆಳಕಿನಲ್ಲಿ ಬೆಳಗಲು ಹವಣಿಸುತ್ತಿವೆ. ಹೀಗಾಗಿ ನೆಮ್ಮದಿಯು ಹುಡುಕಾಟದ ಸರಕಾಗಿ ರೂಪ ತಾಳಿದೆ. ವಿಲಾಸಿ ಜೀವನದ ಕನಸು ಕಾಣುವ ಕಂಗಳು ಸಂಕಷ್ಟಗಳು ಪಾಲಿಗೆ ಬಂದಾಗ ಕಣ್ಣೀರನ್ನು ಹರಿಸುತ್ತವೆ. ಅಷ್ಠೇ ಅಲ್ಲ ಧನ-ಕನಕ, ವಸ್ತು-ಒಡವೆ, ಮನೆ-ಮಠ,ಬಯಸುವ ಮನಸ್ಸು ಕೈ ಕೆಸರಾಗಿಸಲಿಕೊಳ್ಳಲು ಮನಸ್ಸು ಮಾಡುವುದಿಲ್ಲ. ಬಯಸಿದ್ದೆಲ್ಲ ಸಿಗಬೇಕೆಂದರೆ ನಮ್ಮ ನಡೆ-ನುಡಿ, ನೋಟ-ಮಾಟ, ಶುದ್ಧವಾಗಿರಬೇಕು. ಶ್ರಮ ಬೇಡ ಉತ್ತಮ ಫಲ ಬೇಕೆನ್ನುವ ನಮ್ಮ ಮನಸ್ಥಿತಿಯನ್ನು ಕಂಡು ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರು ಅತ್ಯಂತ ಸೂಕ್ತವಾದ ಮಾತೊಂದನ್ನು ಹೇಳಿದ್ದಾರೆ. ‘ಮನುಷ್ಯನಿಗೆ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ. ಏಕೆಂದರೆ ಯಶಸ್ಸನ್ನು ಸಂಭ್ರಮಿಸಲು ಬೇಕಾಗುತ್ತವೆ.’
ಒಂದು ಕಾಲದಲ್ಲಿ ೩೫ ರೂಪಾಯಿಗಾಗಿ ಕೂಲಿ ಮಾಡುತ್ತಿದ್ದ ಎಲೆ ಮರೆಕಾಯಿಯಾಗಿ ಮಿಂಚಿದ ಆಟಗಾರ ಮುನಾಫ್ ಪಟೇಲ ಬೌಲಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರಿಂದ ಭಾರತಕ್ಕೆ ೨೦೧೧ರ ವಿಶ್ವಕಪ್ ಒಲಿದಿತ್ತು. ಇದರಿಂದ ಆತ ಪಟ್ಟ ಕಷ್ಟ ಅದೆಷ್ಟು ಎಂಬುದು ಅರಿವಿಗೆ ಬಾರದೇ ಇರದು. ಕಷ್ಟದ ಬೆಟ್ಟವನ್ನು ಕರಗಿಸಿ ನಗೆ ಬೀರಿದ ಇಂಥ ಸಾಧಕರು ಸಾವಿರ ಸಾವಿರ ಸಿಗುತ್ತಾರೆ. ಜೀವನದ ಹಾದಿಯಲ್ಲಿ ಬರುವ ಸಮಸ್ಯೆಗಳನ್ನು ಸವಾಲುಗಳನ್ನು ಸಂಕಷ್ಟಗಳನ್ನು ಎದುರಿಸುವ ಎದೆಗಾರಿಕೆ ನಮ್ಮಲ್ಲಿ ಉಳಿದಿದೆಯೇ…? ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಚೆಂದದ, ಗೆಲುವಿನ, ಸರಳ ಜೀವನವೆನ್ನುವುದು ಕೇವಲ ಒಂದು ಭ್ರಮೆ. ಅದು ಕಥೆ ಕಾದಂಬರಿ ಸಿನಿಮಾಗಳಿಗೆ ಮಾತ್ರ ಸೀಮಿತ ಎನ್ನುವ ಮಾತುಗಳು ಪ್ರಸ್ತುತ ಸಮಾಜದಲ್ಲಿ ಬಹಳಷ್ಟು ಸಲ ಕಿವಿಗೂ ಬೀಳುತ್ತದೆ. ಒಂದು ಕ್ಷಣ ಈ ವಿಚಾರವಾಗಿ ವಿಚಾರ ಮಾಡಬೇಕೆಂದರೂ ಒತ್ತಡ, ಆತಂಕದ ಸ್ಥಿತಿಯಲ್ಲಿರುವ ಮನಸ್ಸು ದಾವಂತದ ನಡೆಗಳು ಅದಕ್ಕೆ ತಡೆಹಾಕುತ್ತವೆ. ಇಂಥ ಸಂದರ್ಭದಲ್ಲಿ ನನಗೆ ಅಂಬೇಡ್ಕರ್ ಅವರು ಹೇಳಿದ ಮಾತು ನೆನಪಿಗೆ ಬರುತ್ತದೆ. ‘ಜೀವನ ಸುದೀರ್ಘ ಅನಿಸಿಕೊಳ್ಳುವುದಕ್ಕಿಂತ ಶ್ರೇಷ್ಠ ಅನ್ನಿಸಿಕೊಳ್ಳಬೇಕು.’
ಏನು ಜೀವನದರ್ಥ?ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೆಂ?- ಮಂಕುತಿಮ್ಮ
ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದ ಫಲವೇ ನಮ್ಮ ಹೆಮ್ಮೆಯ ವೇದ ಶಾಸ್ತಂಗಳು ಉಪನಿಷತ್ತುಗಳು. ಹೀಗೆ ನಮ್ಮೆಲ್ಲರಲ್ಲಿ ಉದ್ಭವವಾಗುವ ಪ್ರಶ್ನೆಗಳ ಸ್ವರೂಪವನ್ನು ಡಿವಿಜಿಯವರು ಈ ಕಗ್ಗದಲ್ಲಿ ಹಿಡಿದಿಟ್ಟಿದ್ದಾರೆ.
‘ಮನೆ ನೋಡಾ ಬಡವರು ಮನ ನೋಡಾ ಘನ ಸಂಪನ್ನರು.’ ಎಂಬ ವಚನದಲ್ಲಿ ಬಸವಣ್ಣನವರು ನಿಜಸಿರಿಯನ್ನು ವಿವರಿಸಿರುವರು. ಸೋಗಲಾಡಿ ವ್ಯಕ್ತಿತ್ವಕ್ಕೆ ಜೋತು ಬಿದ್ದು ಸಹಜತೆಯನ್ನು ಮರೆಯುತ್ತಿದ್ದೇವೆ. ಪ್ರಯತ್ನದ ಕೊರತೆಯ ಕಾರಣಕ್ಕೆ ಸಿಕ್ಕು, ಗೆಲುವಿನ ಜೀವನ ಪಡೆಯುವುದಕ್ಕಾಗಿ ಸಿಕ್ಕ ಸಿಕ್ಕವರ ಮಾತು ಕೇಳಿ ಹರಸಾಹಸ ಪಡಬೇಕಾಗುತ್ತಿದೆ. ಎಷ್ಟು ಪ್ರಯತ್ನಿಸಬೇಕೆಂದರೆ, ಶ್ರಮವಿಲ್ಲದೇ ಲೀಲಾಜಾಲವಾಗಿ ಕೆಲಸ ಮಾಡುವಂತಾಗಬೇಕು. ನಾವಿರುವುದೇ ಹೀಗೆ ಎಂದು ಆದರ್ಶದ ಛಾಪು ಮೂಡಿಸುವಂತಾಗಬೇಕು. ಮಾರ್ಗದರ್ಶಕರ ಅನುಭಾವಿಗಳ ಜೀವನದರ್ಶನ ಪಡೆಯದೇ ನಮ್ಮದೇ ಸುರಕ್ಷತಾ ದ್ವೀಪದಲ್ಲಿ ಇರುವುದೇ ನಮ್ಮ ಅಳುವಿಗೆ ಕಾರಣ. ಘಟಾನುಘಟಿ ನಾಯಕರ ಭೇಟಿ ಮಾಡಿದರೆ ಜೀವ ಸಂಚಾರ ಉಂಟಾಗುತ್ತದೆ ಎಂಬುದು ನಿಸ್ಸಂಶಯ.
ಅಕ್ಕ ಪಕ್ಕ ಇತರರು ಇಲ್ಲದಿದ್ದರೆ ನಮ್ಮ ಜೀವನವೇ ಇಲ್ಲ. ಜೀವನದುದ್ದಕ್ಕೂ ಒಂದಲ್ಲ ಒಂದು ಸಂಬಂಧಗಳ ನಡುವೆ ಬದುಕುತ್ತೇವೆ. ಸಂಬಂಧಗಳಿಲ್ಲದ ಜೀವನ ಊಹಿಸಿಕೊಳ್ಳುವುದು ಅಸಾಧ್ಯ. ಹಾಗಂತ ಮೂರು ಹೊತ್ತು ಪ್ರೀತಿ ಪ್ರೇಮ ಒಡನಾಟದಲ್ಲಿ ಮುಳುಗಿರೋದು ಅಂತಲ್ಲ. ಆದರೆ ಸಂಬಂಧಗಳ ಮಹತ್ಮ ಅರಿತವರು ಯಾವುದೇ ಕ್ಷೇತ್ರದಲ್ಲಿ ಜಯ ಗಳಿಸುವುದು ಸ್ವಲ್ಪ ಸುಲಭ. ಸಂಬಂಧಗಳು ಹದಗೆಟ್ಟಾಗ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡ ಬದುಕು ಬಿಡಿಸಲಾಗದ ಕಗ್ಗಂಟಾದ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಬಯಕೆಗಳು ಈಡೇರದಿದ್ದಾಗ ನಿರಾಸೆ ಕಾಡುವುದು ಸಾಮಾನ್ಯ. ನಿರಾಸೆಯನ್ನು ಬಹಳಷ್ಟು ಮನಸ್ಸಿಗೆ ಹಚ್ಚಿಕೊಂಡು ಮನದ ಆರೋಗ್ಯ ಹದಗೆಡಿಸಿಕೊಳ್ಳಬಾರದು. ಮಾನಸಿಕವಾಗಿ ಗಟ್ಟಿಯಾಗಬೇಕು. ಮನದೊಳಗಿರುವ ಭಯಗಳನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಗೆಲ್ಲಬೇಕು. ದೂರ ಸಾಗಬೇಕಾದರೆ ಏಕಾಂಗಿ ಸಾಗಬೇಕು. ದಾರಿಯಲ್ಲಿ ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು.
ಬಳ್ಳಿಯ ನೆತ್ತಿಯ ಮೇಲೆ ಅರಳಿದ ಹೂವು ಯಾರನ್ನು ಕೇಳಿ ಅರಳುವುದಿಲ್ಲ. ಜುಳು ಜುಳು ಸದ್ದು ಮಾಡುತ್ತ ಹರಿಯುವ ನದಿ ಯಾರನ್ನೂ ಕೇಳಿ ನುಗ್ಗುವುದಿಲ್ಲ. ರೆಕ್ಕೆ ಬಿಚ್ಚಿ ಬಾನಲ್ಲಿ ನಲಿಯುವ ಬಾನಾಡಿಗಳು ಯಾರನ್ನೂ ಕೇಳಿ ಹಾರುವುದಿಲ್ಲ. ಹಾಗಿದ್ದಾಗ ಅಮೃತದಂತಿರುವ ಜೀವನವನ್ನು ಅಮೃತದಂತೆ ಸವಿಯಲು ನಮಗೇಕೆ ಹಿಂಜರಿಕೆ? ಒಳಗೊಳಗೆ ಅಳುತ್ತ ನಲಗುತ್ತ ಬದುಕುವುದಕ್ಕಿಂತ, ಚೆಂದದ ಗೆಲುವಿನ ಜೀವನವನ್ನು ಅರಳುತ್ತ ಬದುಕೋಣವಲ್ಲವೇ?
=============================================================
ಜಯಶ್ರೀ.ಜೆ. ಅಬ್ಬಿಗೇರಿ.
ಚೆನ್ನಾಗಿದೆ ಮೇಡಂ