ಸಾಹಿತಿಗಳ ರಾಜಕೀಯ ಜೋರಾದ ಕಾಲದಲ್ಲಿ ……

ಸಂಗಾತಿ ಸಾಹಿತ್ಯ ಬಳಗದಿಂದ

ಸಾಹಿತಿಗಳ ರಾಜಕೀಯ ಜೋರಾದ ಕಾಲದಲ್ಲಿ ..….

ಸಂಗಾತಿ ಸಾಹಿತ್ಯ ಕನ್ನಡ ವೆಬ್ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದೆ. ಈ ವಿಶೇಷ ಸಂದರ್ಭದ ಸಂಚಿಕೆಯಲ್ಲಿ 48 ಜನ ಲೇಖಕರು ಸಂಗಾತಿಗೆ ಬರೆದರು. ಸಾಹಿತ್ಯದ ವಿವಿಧ ಪ್ರಕಾರಗಳ ಬರಹಗಳು ಪ್ರಕಟವಾದವು. ಕವಿತೆ, ಕತೆ, ಪ್ರಬಂಧ, ಗಜಲ್ , ಅನುವಾದ ಸಾಹಿತ್ಯ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಪ್ರಕಟವಾದವು.
ಸಂಗಾತಿಗೆ ಬರೆಯುವ ಎಲ್ಲಾ ಲೇಖಕರು ಹಾಗೂ ಕವಯಿತ್ರಿಯರಿಗೆ ಧನ್ಯವಾದಗಳು.
ಕಳೆದ ಮೂರು ವರ್ಷಗಳಿಂದ ೫೦೦ ಜನ ಲೇಖಕರು ಇಲ್ಲಿ ಬರೆದಿದ್ದಾರೆ. ಆರೂವರೆ ಸಾವಿರ ಪೋಸ್ಟ್ ಗಳು ಪ್ರಕಟವಾಗಿವೆ. ಇಪ್ಪತ್ತೈದು ಅಂಕಣಗಳು ಪ್ರಕಟವಾಗಿವೆ. ಕೆಲವು ಈಗಲೂ ಪ್ರಕಟವಾಗುತ್ತಿವೆ.

ಸಾಹಿತಿಗಳ ರಾಜಕೀಯ ಹಾಗೂ ರಾಜಕಾರಣ ಉತ್ಕರ್ಷ ಸ್ಥಿತಿಯಲ್ಲಿ ಇರುವ ಕಾಲವಿದು. ಬಹಳಷ್ಟು ಜನ ಹಿರಿಯರು ವ್ಯವಸ್ಥೆಗೆ ಬೆನ್ನು ಮಾಡಿ ,ನಿದ್ದೆ ಮಾಡುತ್ತಿರು ಈ ದುರಿತ ಕಾಲದಲ್ಲಿ ಪುರುಷೋತ್ತಮ ಬಿಳಿಮಲೈ , ಕುಂಬಾರ ವೀರಭದ್ರಪ್ಪ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ , ಬಿ.ಎಂ. ಹನೀಫ್, ಬಸವರಾಜ ಸೂಳಿಬಾವಿ ಹಾಗೂ ಮೇ ಸಾಹಿತ್ಯ ಮೇಳದ ಭಾಗವಾದ ಕೆಲವರು ಮಾತ್ರ ಸ್ಥಗಿತ ಮತ್ತು ಸಂಪ್ರದಾಯಿಕ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ ತಮ್ಮ ನಿಲುವು ಪ್ರಕಟಿಸಿದ್ದು ಇದೆ.
ಕನ್ನಡ ಸಾಹಿತ್ಯ ಪಂಪನ ಕಾಲದಿಂದ ರಾಜಕೀಯ ದೊಂದಿಗೆ ಮುಖಾಮುಖಿಯಾಗುತ್ತಾ ಬಂದಿದೆ. ಆದರೆ ಜನಪರವಾಗಿ ನಿಂತು, ರಾಜಕೀಯ ದೊಂದಿಗೆ ಸಂರ್ಘಕ್ಕೆ ಇಳಿದದ್ದು ಮಾತ್ರ ವಚನ ಚಳುವಳಿಯ ಕಾಲದಲ್ಲಿ. ೧೨ ನೇ ಶತಮಾನದಲ್ಲಿ. ಬಸವಣ್ಣ ಹಾಗೂ ಅವರ ಸಮಕಾಲೀನ ವಚನಕಾರರು,‌ಮಹಿಳಾ ಲೇಖಕರು ಅಸಮಾನತೆಯ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರು. ಬಸವಣ್ಣ ಕವಿ ಹಾಗೂ ಪ್ರಧಾನಿ ಯಾಗಿದ್ದ ಕಾರಣ ಅಕ್ಷರದ ಮೂಲಕ ಸಮಾಜ, ಜನತೆಯನ್ನು ತಿದ್ದುತ್ತಾ, ರಾಜಕೀಯವಾಗಿ ಬಿಜ್ಜಳನನ್ನು ಪ್ರಶ್ನಿಸಿದ. ಬಿಜ್ಜಳ ವ್ಯವಸ್ಥೆ ಪರ‌ ನಿಂತಾಗ, ಅಧಿಕಾರ ಅರಮನೆ ತ್ಯಜಿಸಿ ನಡೆದ. ಈ ಗುಣ ನಮ್ಮ ಸಾಹಿತಿಗಳಿಗೆ ಬರಬೇಕಿದೆ. ಈ ಪರಂಪರೆಯನ್ನು ಕುವೆಂಪು, ಲಂಕೇಶ್, ಅನಂತಮೂರ್ತಿ, ಚಂದ್ರಶೇಖರ ಪಾಟೀಲ, ಬರಗೂರು, ಪೂರ್ಣಚಂದ್ರ , ತೇಜಸ್ವಿ ,ದೇವನೂರು ಮುಂದುವರಿಸಿದರು. ಹಾಗೂ ಇದೇ
ಪರಂಪರೆಯನ್ನು ಸಿದ್ಧಲಿಂಗಯ್ಯ, ಚಂದ್ರಶೇಖರ ಕಂಬಾರ, ಎಸ್.ಎಲ್.ಭೈರಪ್ಪ ಮುರಿದರು.
ಸಿದ್ದಲಿಂಗಯ್ಯ ಬರಹದಲ್ಲಿ ಪರಂಪರೆಯ ಉಳಿದಿದರೂ, ಬದುಕಿನಲ್ಲಿ ಹಾಗೂ ಅಧಿಕಾರ ಸ್ಥಾನ ಪಡೆಯುವಲ್ಲಿ ಅಧಿಕಾರಸ್ಥ ಸರ್ಕಾರಗಳ ಜೊತೆ ರಾಜಿ ಮಾಡಿಕೊಂಡರು.

ಇವತ್ತು ಬಳ್ಳಾರಿಯಲ್ಲಿ ಮುಕ್ತಾಯವಾದ ವಿಶ್ವಕವಿ ಸಮ್ಮೇಳನ ಮಾಡಿದ ‘ಅರಿವು’ ಮತ್ತು “ಸಂಗಂ ಸಂಸ್ಥೆಗಳು” ಟೀಕೆಗೆ ಗುರಿಯಾಗಿವೆ. ಕಸಾಪ ಟೀಕೆಗೆ ಗುರಿಯಾಗುತ್ತಲೇ ಇದೆ.‌ ಟೀಕೆ ಬೇಕು. ಅದೇ ಪ್ರಜಾಪ್ರಭುತ್ವ. ‌ ಸಂಗಂನ ಶಕ್ತಿಯೇ ಆಗಿರುವ ಹಿರಿಯಣ್ಣ ಎಚ್.ಎಸ್.ಶಿವಪ್ರಕಾಶ್ ಮಹಾಚೈತ್ರ ನಾಟಕ ಬರೆದವರು. ಅವರು ಸಂಗಂ ಸಾಹಿತ್ಯ ಮೇಳದ ಹಿಂದಿನ ಆರ್ಥಿಕ ಶಕ್ತಿ ಯಾವುದು ಎಂದು ಪ್ರಶ್ನಿಸಿದ್ದಕ್ಕೆ ಸಿಡಿಮಿಡಿ ಗೊಂಡಿದ್ದಾರೆ. ಯಾಕೆ ಸಿಡಿಮಿಡಿಗೊಳ್ಳಬೇಕು. ಯಾಕೆ ಮಾನನಷ್ಟ ದಾವೆ ಎಂಥ ಎಚ್ಚರಿಕೆ ನೀಡಬೇಕು? . ಸಾಹಿತಿಗೆ ದರ್ಪದ ಭಾಷೆಯ ಅವಶ್ಯಕತೆ ಇದೆಯಾ? ಶಿವಪ್ರಕಾಶ್ ಬಹುದೊಡ್ಡ ಅರಿವು ಇರುವ ಕವಿ. ಅವರು ಬಲಪಂಥೀಯ ಮನಸ್ಥಿತಿಯ ಜೊತೆಗೆ ವೇದಿಕೆ ಹಂಚಿಕೊಂಡರಲ್ಲಾ ಎಂಬ ಆತಂಕ ಸೂಕ್ಷ್ಮಮನಸ್ಸಿನವರಲ್ಲಿತ್ತು. ( ಆಮಂತ್ರಣ ಪತ್ರಿಕೆಯಲ್ಲಿ ಇದ್ದ ರಾಜಕಾರಣಿಗಳು ವೇದಿಕೆ ಹತ್ತಿದ್ದರೆ, ಉಪಸ್ಥಿತರಿದ್ದರೆ ಎಂಬ ಮಾಹಿತಿ ಲಭ್ಯವಿಲ್ಲ. ಸಂಗಂ ಸಾಹಿತ್ಯ ಮೇಳದ ಸುದ್ದಿ ರಾಜ್ಯಮಟ್ಟದ ಸುದ್ದಿಯಾಗಿ ಪ್ರಕಟವಾದಂತಿಲ್ಲ ‌ .ಸಂಗಂ ಸಾಹಿತ್ಯ ಪುರಸ್ಕಾರದ ಸುದ್ದಿ ಮಾತ್ರ ರಾಜ್ಯ ಪುಟದಲ್ಲಿ ಪ್ರಜಾವಾಣಿ ಪ್ರಕಟಿಸಿದೆ. )
ಇದೆಲ್ಲಾ ಯಾಕೆ ಪ್ರಸ್ತಾಪಿಸಿದ್ದು ಎಂದರೆ ಸಾಹಿತಿಗೆ ರಾಜ್ಯದ ಆಗು ಹೋಗು ಹಾಗೂ ರಾಜಕಾರಣದ ನಂಟಿದೆ.‌ನಂಟು ಇರಬೇಕು. ಎಚ್ಚರದ ನಂಟು ಇರಬೇಕು.‌ ಅಡುಗೆ ಮನೆಯ ಬೆಳ್ಳುಳ್ಳಿ ಯಿಂದ ಹಿಡಿದು ಮಸಣದ ವರೆಗೆ ಮನುಷ್ಯರಿಗೆ ರಾಜಕೀಯದ ಪ್ರಭಾವ , ಪರಿಣಾಮದ ನಂಟಿದೆ.‌ ಅಕ್ಷರಸ್ಥರಿಗೆ ಹೆಚ್ಚು ರಾಜಕೀಯ ಪ್ರಜ್ಞೆ ಇರಬೇಕು. ಆಗಲೇ ಉತ್ತಮ ಸಾಹಿತ್ಯದ ರಚನೆ ಸಾಧ್ಯ. ರಾಜಕೀಯ ಪ್ರಜ್ಞೆ ಅಂದರೆ ಆಳುವ ಸರಕಾರದ ವಿರೋಧ ಪಕ್ಷವಾಗಿ ಸಾಹಿತಿ, ಕವಯಿತ್ರಿಯರು ಕೆಲಸ ಮಾಡಬೇಕು. ಅಂದರೆ ಬರೆಯಬೇಕು .ಸಾಧ್ಯವಾದರೆ ಚಳುವಳಿಗೂ ಧುಮುಕಬೇಕು. ಈ ಕಾರಣದಿಂದಲೇ ಮೇಲಿನ‌ ಸಂಗತಿಗಳನ್ನು ಪ್ರಸ್ತಾಪಿಸಿದೆ. ಅದು ನಮ್ಮ ಸಂಗಾತಿ ಬರಹಗಾರರಿಗೆ ಹಾಗೂ ಓದುಗರಿಗಾಗಿ.
ಆಗಾಗ ಉತ್ತಮ ಕೃತಿಗಳನ್ನು ಓದುತ್ತಿರಿ. ಈಚೆಗೆ ತೇಜಸ್ವಿ ಅವರ ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನ ಓದುತ್ತಿದ್ದೆ. ಅಲ್ಲಿ ಬರುವ ‘ ಡೇರ್ ಡೆವಿಲ್ ಮುಸ್ತಾಪಾ’ ಕತೆ 1973 ರಲ್ಲಿ ಪ್ರಕಟವಾದುದು. ಆಗಲೇ ಕರ್ನಾಟಕದಲ್ಲಿ ಗಣೇಶ ಉತ್ಸವಗಳ ಹಾಗೂ ಈದಮೀಲಾದ್ ಸಂದರ್ಭಗಳಲ್ಲಿ ಕೋಮುವಾದದ ಚಹರೆಗಳು ಹೇಗೆ ಬೆಳೆಯುತ್ತಿದ್ದವು, ಹರಡುತ್ತಿದ್ದವು ಎಂಬ ಸೂಕ್ಷ್ಮ ಆ ಕತೆಯಲ್ಲಿ ಇದೆ. ತಬರನ ಕತೆ ಈಗಲೂ ಪ್ರಸ್ತುತ ‌.‌ಈಗಲೂ ನಿವೃತ್ತಿಯ ನಂತರ ಪೆನ್ಶನ್ ಸೆಟಲ್ಮೆಂಟ್ ಗೆ ಅಲೆಯುವ ವೃದ್ಧರಿದ್ದಾರೆ.’ ಕುಬಿ ಮತ್ತು ಇಯಾಲ’ ದಲ್ಲಿನ ಸ್ಥಿತಿ ಸನ್ನಿವೇಶ ಕರ್ನಾಟಕದಲ್ಲಿ ಅಗಾಗ ಮರುಕಳಿಸುತ್ತಿವೆ. ಹೀಗೆ ಬರಹಗಾರ ಸೂಕ್ಷ್ಮವಾಗಿ ,ಎಲ್ಲ ಕಾಲಕ್ಕೂ ಪ್ರಸ್ತುತ ಎನಿಸುವಂತೆ ಬರೆಯಬೇಕು. ಬರಹಗಾರರು ಕನ್ನಡದ ಶ್ರೇಷ್ಠ ಎಂಬ ಕತೆ ಕಾದಂಬರಗಳನ್ನು ಓದಬೇಕು. ಆಗ ಬರೆಯುವ ಸೂಕ್ಷ್ಮತೆ ದಕ್ಕುತ್ತದೆ …
ನೀವು ಸಹ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ವ್ಯವಸ್ಥೆಯ ಜೊತೆ ಹೋರಾಡಬೇಕು. ನೀವು‌ ಮನಸ್ಸಿನೊಳಗೆ ವ್ಯವಸ್ಥೆ‌ ಜೊತೆ ಗುದ್ದಾಟಕ್ಕೆ ಇಳಿದರೆ ನಿಮ್ಮ ಬರಹ ಗೆಲ್ಲುತ್ತದೆ. ನಿಮ್ಮ ವಿರುದ್ಧ ನೀವೇ ಬಂಡಾಯ ಏಳಬೇಕು. ಆಗ ಸಾಹಿತಿ ಜನ್ಮತಾಳುತ್ತಾನೆ. ಈಗ ನೆಲಕ್ಕೆ ಅವಶ್ಯ ಇರುವುದು ಅಂತಹ ಬಂಡೇಳುವಿಕೆ.

——————————————-

ನಾಗರಾಜ್ ಹರಪನಹಳ್ಳಿ

One thought on “ಸಾಹಿತಿಗಳ ರಾಜಕೀಯ ಜೋರಾದ ಕಾಲದಲ್ಲಿ ……

  1. ಬರವಣಿಗೆಯಲ್ಲಿ ಅಭಿವ್ಯಕ್ತಗೊಂಡಿರುವ ವಿಚಾರ ಎಲ್ಲರಲ್ಲಿ ಇದ್ದರೂ ಅಭಿವ್ಯಕ್ತಿಸುವುದಕ್ಕೂ ಹಿಂದೆ ಮುಂದೆ ನೋಡುವವರು ನಾವು! ಕೆಲವೊಮ್ಮೆ ನಾವು ಏಕೆ ಬರೆಯುತ್ತಿದ್ದೇವೆ ಎಂಬುದನ್ನೇ ಮರೆಸಿಬಿಡುತ್ತವೆ ನಮ್ಮಲ್ಲಿನ ಪರ ವಿರೋಧಗಳು.ತಮ್ಮ ಬರವಣಿಗೆ ಬದಲಾವಣೆ ತಂದೀತು. ನಮಸ್ಕಾರಗಳು.

Leave a Reply

Back To Top