ಕಾವ್ಯ ಸಂಗಾತಿ
ಜಯಶ್ರೀ ಭ ಭಂಡಾರಿ-ಗಜಲ್
ಹಬ್ಬದ ಸಡಗರದಲ್ಲಿ ಹಣತೆಗೆ ಸೌಹಾರ್ದದ ತೈಲವ ಸುರಿಸಿದೆಯಲ್ಲ ನೀನು.
ಉಬ್ಬಿದ ಕರಿಗಡಬುಗಳ ನೈವೇದ್ಯ ಮಾಡುತ ಒಲವ ಹರಿಸಿದೆಯಲ್ಲ ನೀನು.
ಮನಸ್ಸಿನ ಕಪ್ಪು ಕೊಳೆಯನು ತೊಳೆಯಲು ಜ್ಯೋತಿ ಸಾಲದೇನು
ಹುಮ್ಮಸಿನಲ್ಲಿ ಬೆಪ್ಪು ಹೊಳೆಯ ಹರಿಸಿ ಜಾತಿ ತೂರಿಸಿದೆಯಲ್ಲ ನೀನು.
ಬೆಳಕು ಬಾಳಿನ ಚುಳುಕು ಅಡಿ ಅಡಿಗೂ ನೆನಪಿಸಿಕೊಂಡು ಸಾಗಬೇಕಿದೆ
ಥಳಕು ಬದುಕು ಹುಳುಕು ಹಿಡಿದು ಜೀವ ಹಿಂಡಿ ಕೂರಿಸಿದೆಯಲ್ಲ ನೀನು
ವರುಷದುದ್ದಕೂ ಪರ್ವಗಳ ಮಹಾಪೂರ ಸುರಿದರೂ ಒಂದಾಗದೆ ಬೆಂದೆಯಲ್ಲ
ನಿಮಿಷದ ಸಂತೆಯಲಿ ನಿಂತು ಸಮರದ ಕಿಡಿ ಹಚ್ಚಿ ದೂರ ಇರಿಸಿದೆಯಲ್ಲ ನೀನು.
ಜೀವನ ಬಿಕ್ಷೆ ಪಡೆದವರನ್ನು ಮರೆಯಬಾರದು ಶ್ರೀ ಎಚ್ಚರಿಕೆ ನೀಡುತಿಹಳು.
ಪಾವನ ರಕ್ಷೆಯ ತೋರುತ ಬರುವ ಸಂಸ್ಕೃತಿ ನೀತಿ ಊರಿಸಿದಿಯಲ್ಲ ನೀನು