ಅವನು ಕನಸೂರಿನ ಸಾಹುಕಾರ..ಶಾಂತಾರಾಮ ಶಿರಸಿ,

ಕಾವ್ಯ ಸಂಗಾತಿ

ಅವನು ಕನಸೂರಿನ ಸಾಹುಕಾರ

ಶಾಂತಾರಾಮ ಶಿರಸಿ

ಬಯಸಿದೆ ಕನಸಿನಲ್ಲಿ ನನ್ನರಸನಿರುವ ಆಗಸದ ಕಡೆಗಿನ ಪಯಣ,
ನನ್ನ ಇನಿಯ ಚಂದಿರನಿರುವ ನಕ್ಷತ್ರಲೋಕಕ್ಕೆ ಏರಲು ಕನಸಿನ ಏಣಿಯ ಹಾಕೋಣ….

ನನ್ನ ಹೃದಯದರಮನೆಯ ಅರಸ,
ಕಂಡೆನು ಅರಸನ ಆಲಿಂಗನದ ಕನಸ,
ನನ್ನವನು ಕನಸೂರಿನ ಸಾಹುಕಾರ,
ಹೊಳೆಯುವ ನಕ್ಷತ್ರಲೋಕದ ತುಂಬು ಬೆಳದಿಂಗಳ ಚಂದಿರ,
ಆ ಕ್ಷಣದ ಕನಸಿನ ಲೋಕ ಕೊಡುವ ಖುಷಿಯು ಪಾರವೇ ಇಲ್ಲದಂತ ಅಪಾರ…
ಕನಸಲ್ಲಿ ಬಂದು ಕಾಡುವ,
ನನ್ನ ಲೋಕಕೆ ಬಾ ಎಂದು ಕರೆಯುವ…

ನಾ ಸಡಗರದ ಸಾಗರದಲೆಯಾಗಿದ್ದೆ,
ನೀ ತುಂಬು ಬೆಳದಿಂಗಳ ಚಂದಿರನಾಗಿದ್ದೆ,
ನಿನ್ನ ಹಾಲ್ಗೆನ್ನೆಯ ತುಂಬು ಮೊಗಕೆ-
ನಾ ಬಂದು ಅಪ್ಪಳಿಸಿ ಮುತ್ತಿಕ್ಕಿ-ಆಲಂಗಿಸಬೇಕೆಂಬ ನನ್ನೊಡಲ ಕಾತರಕೆ,
ಸಾಗಿದೆ ಕನಸಿನ ಲೋಕಕ್ಕೆ…

ನಿನ್ನ ಎದುರಿಗೆ ಬಂದು ನಿಂತು ನಾಚಿ-ಕಣ್ಗಳ ದೃಷ್ಟಿ ತಗ್ಗಿಸಿ,
ಎದೆಯ ಮೇಲ್ ತಲೆಯ ಒರಗಿಸಿ,
ನಿನ್ನ ಆ ಹಾಲ್ಗೆನ್ನೆಯನು ಕೋಮಲ ಕರಗಳಿಂದ ಸ್ಪರ್ಷಿಸಿ,
ಈ ಮನದಿ ಅದೇನೋ ಕಸಿ-ವಿಸಿ….

ಮರುಕ್ಷಣದ ಆ ನಿನ್ನ ಬಿಗಿದಪ್ಪುಗೆಯ ಬಾಹುಬಂಧನವು,
ಹಣೆಯ ಮೇಲಿಟ್ಟ  ಚುಂಬನವು,
ನಾ ಮರೆಯಲು ಸಾಧ್ಯವೇ ಆ ಸಿಹಿ ಕ್ಷಣವು,
ಆದರೆ ಕನಸಾಗಿತ್ತು ಎಲ್ಲವೂ-ಕೊಂಚ ಈ ಮನಕೆ ಬೇಸರದ ನೋವು…

ಒಮ್ಮೆ ಕನಸಿನಲ್ಲಿ ಕಂಡ ನನ್ನ ಹೃದಯದ ಸಾಹುಕಾರ ,
ನಿಜ ಬದುಕಿನಲ್ಲಿ ಬಂದು ಕನಸು ನನಸು ಮಾಡಿರೆ ಈ ಬದುಕೇ ಬಂಗಾರವಿಲ್ಲದಿದ್ದರೂ – ನೋಡಲು ಬಲು ಶೃಂಗಾರ..


Leave a Reply

Back To Top