ರತ್ನಾ ಪಟ್ಟರ್ಧನ್ ಕಥೆ-ಬದಲಾದ ಪಾತ್ರಗಳು

ಕಥಾಸಂಗಾತಿ

ಬದಲಾದ ಪಾತ್ರಗಳು

ರತ್ನಾ ಪಟ್ಟರ್ಧನ್

“ಅಪ್ಪ… ಹೋಗಬೇಡ…” “ಅಪ್ಪ… ಹೋಗಬೇಡ” ಎನ್ನುವ ಮಾತುಗಳು ಕಿವಿಗೆ ಅಪ್ಪಳಿಸುತ್ತಿದೆ. ಇಂದು ಅವಳು ಏಳುವ ಮೊದಲು ನಾನು ಹೊರಡ ಬೇಕು ಎಂದುಕೊಂಡು ಕಿಟ್ ಬ್ಯಾಗ್ ಹಿಡಿದೆ. ಆದರೆ ಮುಂಚಿನ ದಿನದಂತೆಯೇ ಹಿಂದಿನಿಂದ ಬಂದು ನನ್ನ ಕಾಲನ್ನು ಭದ್ರವಾಗಿ ಹಿಡಿದಳು.

ಇಂದೂ ಅಪ್ಪ… ಹೋಗಬೇಡ. ಅಪ್ಪ ಹೋಗ ಬೇಡ… ಎನ್ನುತ್ತಾ ಆ ಪುಟ್ಟ ಕೈಗಳು ನನ್ನ ಕಾಲನ್ನು ಹಿಡಿದೇ ಬಿಟ್ಟಿತು.

ಇದು ಯಾವ ಜನ್ಮದ ಅನುಬಂಧ! ಆ ಮಗುವಿಗೆ, ಅವಳಪ್ಪನ ವಯಸ್ಸಿನ ನಾನು ಅವಳ ಅಪ್ಪನ ಹಾಗೆ ಕಂಡೆನೊ ಅಥವಾ ಮನದ ಉಮ್ಮಳ ತಡೆಯಲಾಗದ ಆ ಪುಟ್ಟ ಹೃದಯ ತನ್ನ ಭಾವನೆಯನ್ನು ಹೀಗೆ ವ್ಯಕ್ತಪಡಿಸುತ್ತಿದೆಯೊ. ದುಃಖ ತಾಳಲಾಗದೆ ಇಂದೂ “ಇಲ್ಲ ಪುಟ್ಟ. ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಅವಳನ್ನು ಬರಸೆಳೆದು ಅಪ್ಪಿದೆ.

ನನ್ನ ಜೀವದ ಗೆಳೆಯ ತ್ರಿವಿಕ್ರಮ. ಶ್ರೀಮಂತ ಗೆಳೆಯನ ಒಡನಾಟ ನನಗೆ ತುಂಬಾ ಇಷ್ಟವಾದುದು. ನಮ್ಮ ಗೆಳೆತನದಲ್ಲಿ ಶ್ರೀಮಂತಿಕೆಗಿಂತ ಬೇರೊಂದು ಬಂಧನವಿದೆ. ಅವನು ನನ್ನ ಅತ್ತೆಯ ಮಗ. ನಮ್ಮಿಬ್ಬರದೂ ಒಂದೆ ವಯಸ್ಸು. ಇಬ್ಬರಿಗೂ ಸುಂದರ ಸಂಸಾರವಿದೆ. ಅವನಿಗೆ ನಾಲ್ಕು ವರ್ಷಗಳ ಕುಶಲ ಮತ್ತು ಎಂಟು ತಿಂಗಳ ಕೇಶವ ಆದರೆ ನನಗೆ ಎಂಟು ವರ್ಷದ ವಿನೋದ.

ನಾನು ಗೆಳೆಯನಿಂದ ಐವತ್ತು ಮೈಲಿ ದೂರದ ಹಳ್ಳಿಯಲ್ಲಿದ್ದರೂ ತಿಂಗಳು / ಎರಡು ತಿಂಗಳಿಗೆ ಒಮ್ಮೆ ಸೇರುತ್ತೇವೆ. ಕೂಡಿ ನಲಿಯುತ್ತೇವೆ. ಕೆಲವೊಮ್ಮೆ ಅವನು ಸಂಸಾರದೊಡನೆ ನನ್ನ ಮನೆಗೆ ಬರುವುದಿದೆ. ಕೆಲವೊಮ್ಮೆ ನಾನೂ ನನ್ನ ಸಂಸಾರದೊಡನೆ ಅವನ ಮನೆಗೆ ಹೊರಡುವುಡಿದೆ. ಅದು ಮನೆ ಎನ್ನುವುದಕ್ಕಿಂತ ಅರಮನೆ ಎನ್ನಬಹುದು. ತೋಟದ ಮಧ್ಯೆ ಇರುವ ಆ ಅರಮನೆಯ ಏಕೈಕ ವಾರಸುದಾರ ನನ್ನ ತ್ರಿವಿಕ್ರಮ.

ಆದರೆ ಈ ಆರು ತಿಂಗಳಿಂದ ತ್ರಿವಿಕ್ರಮ ಯಾವುದೊ ಚಿಂತೆಯ ಸುಳಿಯಲ್ಲಿ ಇದ್ದ ಹಾಗೆ ಕಂಡ. ಕೇಳಿದರೆ ಅವನಿಂದ ಹಾರಿಕೆಯ ಉತ್ತರ ಬರುತ್ತಿತ್ತು.

ನಂತರ ಅವನ ಚಿಂತೆಗೆ ಅವನಿಂದ ಬಂದ ಉತ್ತರ ಮಾತ್ರ ಯಾರೂ ಊಹಿಸದು. ತೋಟಕ್ಕೆ ಹಾಕುವ ಔಷಧಿ ಕುಡಿದು ನಮಗೆ ಉತ್ತರ ಕೊಟ್ಟಿದ್ದ. ನನಗೆ ಸುದ್ದಿ ಸಿಕ್ಕಾಗ ವಿಚಲಿತನಾದೆ. ನಿಂತ ಕಾಲಲ್ಲೇ ಧಾವಿಸಿ ಬಂದೆ. ಇಲ್ಲಿ ಎಲ್ಲಾ ಮುಗಿದು ಹೋಗಿತ್ತು. ಆಸ್ಪತ್ರೆಯಿಂದ ಹೆಣಬಿಡಿಸಿಕೊಂಡು ಬಂದು ಸುಡುವುದಷ್ಟೇ ಬಾಕಿ.

ಅವನ ದಹನ ಮಾಡುವವರು ಯಾರು? ಪುಟ್ಟ ಮಕ್ಕಳನ್ನು ಹೆತ್ತ ಆ ಒಡಲ ಸಂಕಟ ಹೇಳತೀರದು. ಇನ್ನೂ ಚಿಕ್ಕ ವಯಸ್ಸು. ಮದುವೆಯಾಗುವ ವಯಸ್ಸಿನಲ್ಲಿ ನಾಲ್ಕು ವರ್ಷಗಳ ಕುಶಲ, ಎಂಟು ತಿಂಗಳ ಕೇಶವ ಅವಳ ಜೊತೆಯಲ್ಲಿ. ಜೊತೆಗೆ ತ್ರಿವಿಕ್ರಮನ ತಾಯಿ ಅರವತ್ತು ವರ್ಷದವರು. ಇವರಲ್ಲಿ ಯಾರಿಗೆ ಯಾರು ಸಮಾಧಾನ ಮಾಡುವವರು?

ತ್ರಿವಿಕ್ರಮ ಹೀಗೇಕೆ ಮಾಡಿದ ಎನ್ನಲು ಉತ್ತರ ಸಿಕ್ಕಿದ್ದು ಅವನ ಕೋಣೆಯಲ್ಲಿ ಸಿಕ್ಕ ವೈದ್ಯಕೀಯ ದಾಖಲೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವರದಿಯ ಪ್ರಕಾರ ಅವನಿಗೆ ಶ್ವಾಸಕೋಶದ ಕ್ಯಾನ್ಸರ್. ಹೌದು… ಅವನು ವಿಪರೀತ ಸಿಗರೇಟ್ ಸೇದುತ್ತಿದ್ದ. ಅವನ ಕುಟುಂಬದ ವೈದ್ಯರೂ ಕೂಡ ಇದರ ಬಗೆಗೆ ಎಚ್ಚರಿಕೆ ಕೊಟ್ಟಿದ್ದರು. ಆಗುವ ಅವಘಡಕ್ಕೆ ವಿಧಿ ಎಂಬ ಹೊಣೆ ಹೊರೆಸುವುದಷ್ಟೆ ದುರ್ಬಲ ಮನುಷ್ಯರ ಕೆಲಸ.

ಇಂದಿಗೆ ತ್ರಿವಿಕ್ರಮ ಹೋಗಿ ಹದಿನೈದು ದಿನಗಳು ಕಳೆದಿವೆ. ಎರಡು ದಿನಗಳಿಂದ ಇದೇ ಆಗಿದೆ. ನಾನು ಹೊರಡುವಾಗ ಆ ಪುಟ್ಟ ಹೆಜ್ಜೆಗಳು ಹಿಂದಿನಿಂದ ಬಂದು ಕಾಲುಗಳನ್ನು ತಬ್ಬುವಾಗ ಹೊರಡುವುದಾದರೂ ಹೇಗೆ?

ಇಂದು ಹದಿನಾರನೆಯ ದಿನ. ಇನ್ನೂ ಬೆಳಕು ಹರಿಯುವ ಮೊದಲೇ ಅಲ್ಲಿಂದ ಹೊರಟೆ. ಈ ಹೊಸ ಕೊಂಡಿಯಿಂದ ನನಗೆ ಮುಕ್ತಿ ಬೇಕಿತ್ತು.

ಕತ್ತಲೆಯ ಮುಂಜಾವಿನಲ್ಲೇ ಎರಡು ತೋಟಗಳು, ಹೊಳೆ ದಾಟಿ ಬಸ್ಟ್ಯಾಂಡ್ ಗೆ ಬಂದೆ. ಇನ್ನೂ ಬಸ್ಸು ಬರಲು ಎರಡು ಗಂಟೆಗಳು ಬಾಕಿ ಇತ್ತು.

ಅಲ್ಲೇ ಒಂದು ಕಲ್ಲಿನ ಮೇಲೆ ಕುಳಿತೆ.

ಯೋಚನೆ ಮುತ್ತಿಗೆ ಹಾಕಿತು. ಇದು ಯಾವ ಬಂಧನ ನನ್ನನ್ನು ಕಟ್ಟಿಹಾಕುತ್ತಿರುವುದು? ಆ ಪುಟ್ಟ ಹೃದಯದಲ್ಲಿ ಅದೆಂತಹ ತಳಮಳ ನೆಲೆಸಿರಬಹುದು. ಬಿರುಗಾಳಿ ಎಬ್ಬಿಸುವ ಭಾವನೆಗಳಿಗೆ ಸ್ಪಂದಿಸಲು ಅವಳ ಸುತ್ತಲೂ ಯಾರೂ ಇಲ್ಲ. ಅವಳ ಅಮ್ಮ ಗಂಡನನ್ನು ಕಳೆದುಕೊಂಡ ಶೋಕತಪ್ತಳು. ಅಜ್ಜಿಯ ಉಡಿಯಲ್ಲಿ ಸಮಾಧಾನ ಪಟ್ಟುಕೊಳ್ಳಲು ಹೋದರೆ ಅವರೂ ಪುತ್ರ ಶೋಕದಿಂದ ಬಳಲಿ ಕಣ್ಣೀರು ಹಾಕುವವರು. ತಮ್ಮನ ಬಳಿಗೆ ಹೋದರೆ ಅವನಿನ್ನೂ ಪ್ರಪಂಚವನ್ನು ಸರಿಯಾಗಿ ನೋಡಲೂ ಆಗದವನು.

ಆ ಪುಟ್ಟ ಕಂದನಿಗೆ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳು ತಿಳಿಯುತ್ತಿದೆ. ಆದರೆ ಅದನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ಇನ್ನೂ ಚಿಕ್ಕವಳು. ಅವಳ ಮನದ ಉಮ್ಮಳವನ್ನು ನನ್ನ ಕಾಲುಗಳನ್ನು ಹಿಡಿದು, ಅಪ್ಪ… ಹೋಗಬೇಡ ಎನ್ನುತ್ತಾ ತನ್ನ ವ್ಯಾಕುಲತೆಯಿಂದ ವ್ಯಕ್ತಪಡಿಸುತ್ತಿದ್ದಾಳೆ. ಈಗ ಅವಳ ಹತ್ತಿರ ಇದ್ದ ನಾನೂ ಹೀಗೆ ಬಂದೆ. ಇಂದಿನಿಂದ ಯಾರು ಅವಳ ಕಣ್ಣು ಒರೆಸುವವರು? ಯಾರು ಸಾಂತ್ವನ ಮಾಡುವವರು. ಛೇ… ನಾನು ತಪ್ಪು ಮಾಡಿದೆ. ಅವಳಿಗೆ ಮನದ ಭಾವನೆ ವ್ಯಕ್ತ ಪಡಿಸಲು ಆಧಾರವಾಗಿ ನಾನೊಬ್ಬನಿದ್ದೆ. ನಾನೂ ಹೀಗೆ ಕಳ್ಳನಂತೆ ಹೊರಟು ಬರಬಾರದಿತ್ತು ಎನ್ನಿಸಿತು.

ಹಿಂದಿರುಗಿ ಹೋಗಲು ಎದ್ದೆ. ಇನ್ನೇನು ಹೆಜ್ಜೆ ಕಿತ್ತಿಡಬೇಕು ಎನ್ನುವುದರಲ್ಲಿ ಪೊಂ.. ಪೊಂ… ಎನ್ನುತ್ತಾ ಬೆಳಗಿನ ಮೊದಲ ಶಂಕರ್ ಬಸ್ ನನ್ನ ಹತ್ತಿರ ಬಂದು ನಿಂತಿತು. ಗಟ್ಟಿ ಮನಸ್ಸು ಮಾಡಿ ಬಸ್ ಹತ್ತಿದೆ. ಬೆಳಗಿನ ಕುಳಿರ್ಗಾಳಿ ಬಸ್ಸಿನ ಕಿಟಕಿಯಿಂದ ತೂರಿ ಬಂದಾಗ ಅಪರಾಧಿ ಭಾವ ನನ್ನನ್ನು ಆವರಿಸಿತು

***

ಈಗ ನನ್ನ ನಲುಮೆಯ ಉಷಾ ಮನದ ಪರದೆಯ ಮೇಲೆ ಮೂಡುತ್ತಾಳೆ. ಇಪ್ಪತ್ತು ವರ್ಷಗಳ ಹಿಂದೆ ನನ್ನೊಬ್ಬನನ್ನೇ ಬಿಟ್ಟು ಹೋಗಿದ್ದಾಳೆ. ಅವಳು ನನಗೆ ಮಲಗಿದಲ್ಲೇ ಜಂತಿಯ ಎಡೆಯಿಂದ ನಸು ನಗುತ್ತಾ ನಾನು ಮಾಡುವ ಕೆಲಸ ಕುಶಲ ಮಾಡುತ್ತಿದ್ದಾಳೆ. ನಿಮ್ಮದೇನಿದ್ದರೂ ಈಗ ಅವಳ ಮಗುವಾಗಿ ಇರುವುದು ಎನ್ನುವಳೇನೊ ಎಂದ ಹಾಗೆ ಭ್ರಮಿಸುತ್ತೇನೆ.

ಅಪ್ಪ… ಮೈಯ್ಯಲ್ಲಿ ಹುಷಾರಿಲ್ಲವೆ ಎನ್ನುತ್ತಾ ನಲವತ್ತು ವರ್ಷಗಳ ಮೇಲೆ ಅದೇ ಪುಟ್ಟ ಹೆಜ್ಜೆಗಳ ಒಡತಿ ನನ್ನ ಬಳಿ ಬಂದು ಮೈ ಮುಟ್ಟಿದಳು. ಮೈ ಕಾದಿತ್ತು. ಜ್ವರಕ್ಕೆ ಬಿಸಿ ಕಷಾಯ ಮಾಡಿ ನನಗೆ ಕುಡಿಸಿದಳು. ನನ್ನ ಡಯಪರ್ ಬದಲಿಸಿದಳು ಆ ನನ್ನ ಮೊಮ್ಮಕ್ಕಳ ತಾಯಿ. ಸ್ನಾನ, ತಿಂಡಿ, ಊಟವನ್ನು ತಾಯಿಯ ಹಾಗೆ ಪ್ರೀತಿಯಿಂದ ಮಾಡಿಸುತ್ತಾಳೆ. ಮೂತ್ರ, ಬಹಿರ್ದೆಸೆಯನ್ನು ಯಾವ ಕಳಂಕವೂ ಇಲ್ಲದ ನಿರ್ಮಲ ಮನಸ್ಸಿನಿಂದ ತೊಡೆದು ಹಾಕುತ್ತಾಳೆ.

ಅಂದು ಅವಳು ನನ್ನನ್ನು ಅವಳ ಮನದ ಉಮ್ಮಳವನ್ನು ಹೇಳಿಕೊಳ್ಳಲು ‘ಅಪ್ಪ…’ ಎಂದಳು. ಇಂದು ಆ ಪುಟ್ಟ ಹೆಜ್ಜೆಯ ಒಡತಿಗೆ ನಾನು ‘ಅಮ್ಮ’ ಎನ್ನುತ್ತೇನೆ.

ಸಂಬಂಧಗಳನ್ನು ಹೊಸೆಯುವ ಏಕ ಸೂತ್ರವೆಂದರೆ ಪ್ರೀತಿ, ವಿಶ್ವಾಸ, ನಂಬಿಕೆ. ಆದರೆ ಈ ‘ಅಮ್ಮ’ ನನಗೆ ಅಂತಃಕರಣದ ಮೂರ್ತರೂಪ.

ಅಂದು ಅವಳ ಭಾವನೆಗೆ ನಾನೆಷ್ಟು ಸಾಂತ್ವನ ಕೊಟ್ಟೆನೊ ತಿಳಿಯದು. ಆದರೆ ಈ ದಿನ ನನಗೆ ಸಂಪೂರ್ಣವಾಗಿ ಅವಳು ತಾಯಿಯಂತೆ ಆರೈಕೆ ಮಾಡುತ್ತಿದ್ದಾಳೆ. ನನ್ನ ಬೆಳೆದ ಮೊಮ್ಮಕ್ಕಳ ಸಾನ್ನಿಧ್ಯದಲ್ಲಿ ಅವಳಿಗೆ ನಾನು ಪುಟ್ಟ ಮಗುವಾಗಿದ್ದೇನೆ.


ರತ್ನಾ ಪಟ್ಟರ್ಧನ್

Leave a Reply

Back To Top