ಉಷಾಜ್ಯೋತಿ, ಗಜಲ್

ಕಾವ್ಯಸಂಗಾತಿ

ಗಜಲ್

ಉಷಾಜ್ಯೋತಿ

ಹೇಗೆ ಹೇಳಲಿ ಮನದ ತಳಮಳ ಕೇಳಲೊಲ್ಲನು ಇನಿಯನು
ಬೇಗ ತಿಳಿಸುವೆ ಎದೆಯ ಕಳವಳ ತಿಳಿಯಲೊಲ್ಲನು ಇನಿಯನು

ಹಗಲು ಇರುಳನು ಒಂದುಗೂಡಿಸಿ ಕನಸನೊಂದನು ಹೊಸೆದೆನು
ಒಲವ ಗಾನವ ಹಾಡಿದಾಗಲೂ ಅರಿಯಲೊಲ್ಲನು ಇನಿಯನು

ಬೆಳ್ಳಿ ಚಂದಿರ ಬೆಳಕು ಚೆಲ್ಲುತ ಮೆಲ್ಲನೆ ಕರೆದನಲ್ಲವೆ ನಮ್ಮನು
ಬಳಿಗೆ ಕುಣಿಯುತ ಬಂದರೂ ಹಟ ಬಿಡಲೊಲ್ಲನು ಇನಿಯನು

ಮುನಿಸು ತೋರುತ ಮನವ ಕಾಡುತ ದೂರದಲಿ ನಿಂತನು
ಚೆಲುವ ಕಂಗಳಿನ ಮೌನ ಕಾವ್ಯವ ಓದಲೊಲ್ಲನು ಇನಿಯನು

ಉಷೆಯ ಮಾನಸ ಸರೋವರದಲಿ ಈಜಾಡುವ ಜಾಣನು
ವಿರಹದುರಿಯಲಿ ಬೆಂದರೂ ಬಳಿಗೆ ಬಾರಲೊಲ್ಲನು ಇನಿಯನು


Leave a Reply

Back To Top