ಅಂಕಣ ಸಂಗಾತಿ
ಗಜಲ್ ಲೋಕ
ಹುಳಿಯಾರ್ ಷಬ್ಬೀರ್ ರವರ ಗಜಲ್ ಗರಿ..
ದೋಸ್ತೊ…. ನಮಸ್ಕಾರ್…
ಗುಂಡಾಗಿರುವ ಈ ಭೂಮಿಯಲ್ಲಿ ಪಂಚಾಂಗವೂ ಗುಂಡಾಗಿದೆ, ಏನಂತೀರಿ ; ಅದಕ್ಕೆ ಅಲ್ಲವೇ ‘ಗುರುವಾರ’ ಮತ್ತೆ ಮತ್ತೆ ಬರುತ್ತಿದೆ! ಗುರುವಾರ ಹತ್ತಿರವಾಗುತಿದ್ದಂತೆ ಗಜಲ್ ಗುಲ್ಶನ್ ನ ಮಹೆಕ್ ನನ್ನನ್ನು ಆವರಿಸಿಬಿಡುತ್ತದೆ. ಅದರ ಪ್ರತಿಫಲವಾಗಿ ಇಂದು ಮತ್ತೊಮ್ಮೆ ಗಜಲ್ ಲೋಕದ ಗುಲಾಬ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ. ಗುಲಾಬಿಯನ್ನು ಪ್ರೀತಿಸದ ಅರಸಿಕರುಂಟೆ ಜಗದಲ್ಲಿ, ಇಲ್ಲ ಎನ್ನುವ ವಿಶ್ವಾಸದೊಂದಿಗೆ….!!
“ಪ್ರೇಮಿಗಳು ಅಂತಿಮವಾಗಿ ಎಲ್ಲೋ ಭೇಟಿಯಾಗುವುದಿಲ್ಲ.
ಅವರು ಎಲ್ಲಾ ಸಮಯದಲ್ಲೂ ಪರಸ್ಪರ ಜೊತೆಯಲ್ಲೆ ಇರುತ್ತಾರೆ”
–ರೂಮಿ
‘ಕಾಲ ಹಳಸಿದೆ’ ಎನ್ನುವ ಸವಕಲು ನಾಣ್ಯ ಚಲಾವಣೆಯಲ್ಲಿರುವ ಕಾಲಘಟ್ಟದಲ್ಲಿ ನಾವು ಉಸಿರಾಡುತಿದ್ದೇವೆ. ‘ಕಾಲ ಕೆಟ್ಟು ಹೋಗಿದೆ’ ಎಂದು ಉಸುರುವ ಧ್ವನಿಯಲ್ಲಿ ಸಾಮಾಜಿಕ ಕಳಕಳಿಯೂ ಇದೆ, ಸಿನಿಕತನವೂ ಇದೆ; ಜೊತೆಗೆ ಬಾಯಿ ಚಪಲವೂ ಇದೆ! ಆಡಿದ, ಆಡುವ ಮಾತುಗಳು ಕ್ರಿಯೆಯ ಹೊರತು ಜೀವಂತಿಕೆಯನ್ನು ಉಳಿಸಿಕೊಳ್ಳಲಾರವು. ಇದು ಸಾಧ್ಯವಾಗಬೇಕಾದರೆ ಮೌಲ್ಯಗಳು ಜಾಹಿರಾತಿನ ಪರಿಧಿಯಿಂದ ಹೊರ ಬರುವ ತುರ್ತು ಇದೆ. ಮನಸ್ಸಿನ ನೆಮ್ಮದಿ ಹೆಚ್ಚಿಸುವ, ಭಾವನೆಗಳನ್ನು ತಣಿಸುವ ಓದು- ಬರಹದ ಅವಶ್ಯಕತೆ ಇದೆ. ಬರಹ ವಿವೇಕದ ಕಣ್ಣು ತೆರೆಯಿಸಬೇಕಾದರೆ, ಅಂತರಂಗ ಬಹಿರಂಗ ಪರಿಶುದ್ಧಗೊಳಿಸಿ ಕಾಲ, ದೇಶದ ಎಲ್ಲೆ ಮೀರಿ ನಿಲ್ಲಬೇಕಾದರೆ ಜೀವನಾನುಭವದ ಪಕ್ವತೆ, ಸ್ಥಿತಪ್ರಜ್ಞೆಯ ಅನಾವರಣ, ಸಾರ್ವತ್ರಿಕ ಭಾವಗಳ ಬಿತ್ತನೆ ಹಾಗೂ ಇಸಂಗಳ ಮೀರಿದ ಜೀವನ ಶ್ರದ್ಧೆಯ ಓದಿನ ಹರವು ಬೇಕಾಗುತ್ತದೆ. ಆವಾಗ ಸಾಹಿತ್ಯ ಬದುಕಿನ ಅರ್ಥವಂತಿಕೆ ಹೆಚ್ಚಿಸಲು, ಬದುಕಿನಲ್ಲಿ ಶ್ರದ್ಧೆ ಮೂಡಿಸಲು, ಜನರನ್ನು ಸುಸಂಸ್ಕೃತರನ್ನಾಗಿ ಮಾಡಲು ಸಾಧ್ಯ. ಈ ನೆಲೆಯಲ್ಲಿ ಗಮನಿಸಿದಾಗ ರಾಷ್ಟ್ರ ಪ್ರೇಮ, ನಾಡ ಪ್ರೇಮ ಹುಟ್ಟಿಸದ, ಗುರು-ಹಿರಿಯರ ಬಗ್ಗೆ ಭಕ್ತಿ, ಮಕ್ಕಳ ಬಗ್ಗೆ ಪ್ರೀತಿ ಮತ್ತು ಮಹಿಳೆಯರ ಬಗ್ಗೆ ಗೌರವ ಮೂಡಿಸದ ಬರಹಕ್ಕೆ ಯಾವ ಮಹತ್ವವೂ ಇರುವುದಿಲ್ಲ ಎಂಬುದು ಮನವರಿಕೆಯಾಗುತ್ತದೆ. ಅಂತೆಯೇ ಪುಸ್ತಕಗಳ ಜೊತೆಗಿನ ನಮ್ಮ ಸ್ನೇಹ ಜೀವನವನ್ನು ಸಾರ್ಥಕಗೊಳಿಸುತ್ತದೆ ಎನ್ನಬಹುದು. ಪುಸ್ತಕ ಸಂಸ್ಕೃತಿ ಮನುಕುಲದಲ್ಲಿ ಯಾವತ್ತೂ ‘ವಿಕೃತಿ’ಯನ್ನು ಬೆಳೆಸದು. ಕೃತಿಗಳು ನಮಗೆ ಯಾವ ಕಾಲಕ್ಕೂ ಮೋಸ, ವಂಚನೆ, ದ್ರೋಹ ಮಾಡಲಾರವು, ನಮ್ಮ ಮನಸ್ಸಿಗೆ ನೋವು, ಹಿಂಸೆಯನ್ನು ನೀಡಲಾರವು. ಈ ಹಿನ್ನೆಲೆಯಲ್ಲಿ ಭಾಷೆಯ ತೊಟ್ಟಿಲಲ್ಲಿ ಬೆಳೆಯುತ್ತಿರುವ ಪ್ರತಿ ಸಾಹಿತ್ಯ ಪ್ರಕಾರಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ಆಶಾಕಿರಣಗಳಾಗಿವೆ. ಇಂಥಹ ಹೊಂಗಿರಣದಲ್ಲಿ ಉರ್ದು ಅದಬ್ ನ ಕೋಹಿನೂರ್ ಗಜಲ್ ಗೆ ವಿಶೇಷವಾದ ಸ್ಥಾನ ಮಾನವಿದೆ. ಅಲ್ಲಿಯ ಅಶಅರ್ ನ ಭಾವಗಳೊಂದಿಗೆ, ಸನ್ನಿವೇಶ -ಸಂದರ್ಭಗಳೊಂದಿಗೆ, ಅಲ್ಲಿ ಚಿತ್ರಿತವಾದ ಪ್ರೇಮಲೋಕದೊಂದಿಗೆ, ನದಿ- ಸರೋವರಗಳೊಂದಿಗೆ ಮತ್ತು ಅಗಣಿತ ಪ್ರಾಣಿ- ಪಕ್ಷಿ, ಗಿಡ- ಮರಗಳೊಂದಿಗೆ ಸಂವಾದಿಸುತ್ತ, ಮಾತನಾಡುತ್ತ ನಮ್ಮ ಬದುಕಿನ ಅರ್ಥವಂತಿಕೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಗಜಲ್ ಎಂಬುದೊಂದು ಜೀವನದೃಷ್ಟಿಯಾಗಿದೆ. ಈ ದಿಸೆಯಲ್ಲಿ ಕನ್ನಡ ಗಜಲ್ ಮೆಹಫಿಲ್ ನಲ್ಲಿ, ಅಸಂಖ್ಯಾತ ಸುಖನವರ್ ಇದ್ದು ಸಹೃದಯ ಓದುಗರಿಗೆ ಗಜಲ್ ನ ರಸದೌತಣವನ್ನು ಉಣಬಡಿಸುತಿದ್ದಾರೆ. ಅವರುಗಳಲ್ಲಿ ಶ್ರೀ ಹುಳಿಯಾರ್ ಷಬ್ಬೀರ್ ಅವರೂ ಸಹ ಒಬ್ಬರು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ನಲ್ಲಿ ಹುಳಿಯಾರ್ ಷಬ್ಬೀರ್ ಅವರು ಮೋದಿನ್ ಸಾಬ್ ಮತ್ತು ಜಮೀಲಾಬಿಯ ಜೇಷ್ಠ ಪುತ್ರರಾಗಿ ೧೯೭೬ ರ ಜೂನ್ ೨೨ರಂದು ಜನಿಸಿದ್ದಾರೆ. ಇವರು ತಮ್ಮ ಎಂಟು ವರ್ಷದ ಬಾಲ್ಯಾವಸ್ಥೆಯಲ್ಲಿಯೆ ತಂದೆಯನ್ನು ಕಳೆದುಕೊಂಡು ತಾಯಿ ಜಮೀಲಾಬಿಯ ಸ್ವಾಭಿಮಾನಿ ಕೂಸಾಗಿ ಬೆಳೆದು ಇಂದು ಇತರರಿಗೆ ಮಾದರಿಯಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಕನ್ನಡ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ.ಪದವಿಯನ್ನೂ ಪಡೆದಿರುವ ಶ್ರೀಯುತರು ಇಂದು ಹುಳಿಯಾರ್ ನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಮಾರು ೨೨ ವರ್ಷಗಳ ಸಂತೃಪ್ತ ಸೇವೆಯ ಅನುಭವದೊಂದಿಗೆ ಮಕ್ಕಳ ನೆಚ್ಚಿನ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತಿದ್ದಾರೆ. ರಂಗಭೂಮಿಯ ಅವಿನಾಭಾವ ನಂಟನ್ನು ಹೊಂದಿರುವ ಇವರು ಅನೇಕ ನಾಟಕಗಳಲ್ಲಿ ಹಾಗೂ ಬೀದಿ ನಾಟಕಗಳಲ್ಲಿ ಅಭಿನಯಿಸಿ ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಉಂಟು ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರೌಢಾವಸ್ಥೆಯಿಂದಲೂ ಕಲೆ, ಸಾಹಿತ್ಯ ಹಾಗೂ ಸಂಘಟನೆ ಬಗ್ಗೆ ಉತ್ಸುಕರಾಗಿದ್ದ ಷಬ್ಬೀರ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮೌಲ್ಯಿಕ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ‘ನವಿಲು ಗರಿ’, ಗಜಲ್ ಸಂಕಲನ ‘ತನ’ ಕವನ ಸಂಕಲನ ಹಾಗೂ ‘ಸುನೇರಿ’, ಪ್ರೀತಿಯ ಹೊನ್ನುಡಿಗಳ ಸಂಕಲನಗಳು ಮುಖ್ಯವಾಗಿವೆ. ‘ಗುಜರಿ’ ಎನ್ನುವ ಕವನ ಸಂಕಲನ, ‘ಜಗಲಿ ಕಟ್ಟೆ’ ಎನ್ನುವ ಹೈಕು ಸಂಕಲನ ಹಾಗೂ ‘ಬೆಕ್ನಡ್ಡ’ ಎಂಬ ನ್ಯಾನೋ ಕಥಾ ಸಂಕಲನಗಳು ಅಚ್ಚಿನಲ್ಲಿರುವುದು ಇವರ ಸಾಹಿತ್ಯ ಪ್ರೀತಿಯನ್ನು ಪ್ರತಿನಿಧಿಸುತ್ತದೆ.
ಹುಳಿಯಾರ್ ಷಬ್ಬೀರ್ ರವರು ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದು, ಇವರ ಬರಹದ ಹಲವು ಪ್ರಕಾರಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ, ಗೌರವಿಸಿ ಸತ್ಕರಿಸಿವೆ. ಇವರ ‘ನವಿಲುಗರಿ’ ಗಜಲ್ ಸಂಕಲನಕ್ಕೆ ಉತ್ತಮ ಪುಸ್ತಕ ಪ್ರಶಸ್ತಿ ದೊರಕಿದೆ. ಇದರೊಂದಿಗೆ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ರಾಜ್ಯ ಪ್ರಶಸ್ತಿ, ಸಿಂಚನ ಉತ್ತಮ ಕಾವ್ಯ ಪ್ರಶಸ್ತಿ, ಪ್ರಜಾ ರತ್ನ ರಾಜ್ಯ ಪ್ರಶಸ್ತಿ,… ಮುಂತಾದವುಗಳು ಇವರ ವ್ಯಕ್ತಿತ್ವಕ್ಕೆ ಗರಿಯನ್ನು ಮೂಡಿಸಿವೆ.
‘ಪ್ರೀತಿ’ ಎನ್ನುವುದು ಭಾವಲೋಕದ ಚಿಂಗಾರಿ. ಇದು ಯಾವಾಗಲೂ ತಾಳ್ಮೆ ಮತ್ತು ದಯೆಯಿಂದ ಕೂಡಿದ್ದು, ಎಂದಿಗೂ ಅಸೂಯೆ, ಜಂಭ ಪಡುವುದಿಲ್ಲ. ಅಸಭ್ಯ ಅಥವಾ ಸ್ವಾರ್ಥದಿಂದ ದೂರವಿದ್ದು ಅಪರಾಧಕ್ಕೆ ಮಣೆ ಹಾಕುವುದಿಲ್ಲ. ಇದು ಯಾವಾಗಲೂ ಕ್ಷಮಿಸಲು, ನಂಬಲು, ಭರವಸೆ ನೀಡಲು ಮತ್ತು ಏನೇ ಬಂದರೂ ಸಹಿಸಿಕೊಳ್ಳಲು ಸಿದ್ಧವಾಗಿರುತ್ತದೆ. ಇದು ರಸಿಕರಿಗೆ ಹಲವಾರು ವಿಷಯಗಳನ್ನು ಅನುಭವಿಸುವಂತೆ ಮಾಡುತ್ತದೆ. ಇಂಥಹ ಪ್ರೀತಿಯ ಮಳೆಬಿಲ್ಲಿನಲ್ಲಿ ರೂಪ ಪಡೆದಿರುವ ಗಜಲ್ ಅನಾದಿಕಾಲದಿಂದಲೂ ಮನುಕುಲಕ್ಕೆ ಪ್ರೀತಿಯನ್ನು ಉಣಬಡಿಸುತ್ತಿದೆ. ಪ್ರೀತಿಯ ವಿವಿಧ ಆಯಾಮಗಳಾದ ಪ್ರೇಮ, ಪ್ರಣಯ, ಕನವರಿಕೆ, ಮಿಲನ, ವಿರಹ, ಭಗ್ನ ಹೃದಯ,
ಮೋಸ…ಎಲ್ಲವು ಓದುಗರ ಅನುಭವದೊಂದಿಗೆ ಮೇಳೈಸುವ ಕಾರ್ಯವನ್ನು ಗಜಲ್ ಮಧುಬನ ಮಾಡುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಹುಳಿಯಾರ್ ಷಬ್ಬೀರ್ ರವರ ಗಜಲ್ ಗಳಲ್ಲಿ ಪ್ರೇಮ ನಿವೇದನೆ, ಹಂಬಲ, ವಿಷಾದ, ಆಕ್ರೋಶ, ಹತಾಶೆ, ನೋವು, ಭೂಮಿತಾಯಿ, ಅವ್ವ, ವ್ಯಕ್ತಿ-ವ್ಯಕ್ತಿತ್ವ ಪರಿಚಯ, ಧಾರ್ಮಿಕ ಸಾಮರಸ್ಯ ಹಾಗೂ ವೈಚಾರಿಕ ಪ್ರಜ್ಞೆ… ಹೇರಳವಾಗಿ ಕಾಣುತ್ತೇವೆ.
ಬದುಕು ಹಲವು ತಲ್ಲಣಗಳ ಗೋದಾಮು. ಬದುಕಿನ ಅನೇಕ ಆಯಾಮಗಳಲ್ಲಿ ತಲ್ಲಣಗಳೆ ಮನುಷ್ಯನ ಜೀವನವನ್ನು ನಿಯಂತ್ರಿಸುತ್ತಿರುತ್ತವೆ. ಒಂದು ಪರಿಹಾರ ಆಯ್ತು ಎನ್ನುವಷ್ಟರಲ್ಲಿ ಮತ್ತೊಂದು ಬಾಳನ್ನು ಆವರಿಸಿರುತ್ತದೆ. ಇಲ್ಲಿ ಗಜಲ್ ಗೋ ಷಬ್ಬೀರ್ ಅವರು ‘ಗುಜರಿತನ’ ಎನ್ನುವ ರದೀಫ್ ಬಳಸಿಕೊಂಡು ಬದುಕಿನ ತಲ್ಲಣಗಳ ಮೇಲೆ ಕ್ಷ-ಕಿರಣ ಬೀರಿದ್ದಾರೆ. ಜಿಂದಗಿಯ ಕವಲೊಡೆದ ಹಾದಿಯಲ್ಲಿ ನಾವು ಆಯ್ಕೆ ಮಾಡಿಕೊಂಡ, ಅನುಸರಿಸುತ್ತಿರುವ ಮೌಲ್ಯಗಳೆ ಎಷ್ಟೋ ಬಾರಿ ಬದುಕಿನ ದಾರಿಯಲ್ಲಿ ಅವಘಡಗಳಿಗೆ ಕಾರಣವಾಗುವುದನ್ನು ತುಂಬಾ ಸೂಕ್ಷ್ಮವಾಗಿ ಹೇಳುತ್ತ, ಮನುಷ್ಯನ ಎಡಬಿಡಂಗಿತನ, ಸಾಮಾಜಿಕ ವ್ಯವಸ್ಥೆಯ ದ್ವಂದ್ವಗಳನ್ನು ಓದುಗರ ಎದುರು ಬಿಚ್ಚಿ ಇಟ್ಟಿದ್ದಾರೆ.
“ಕೇಳ ಹೇಳತೇನ ಬದುಕಿನ ತಲ್ಲಣಗಳ ಗುಜರಿತನ
ಅಂಟು ಹಾಕಿಕೊಂಡು ಬೆಂಬಿಡದ ಆದರ್ಶಗಳ ಗುಜರಿತನ”
ಪ್ರೀತಿ… ಪ್ರತಿ ಹೃದಯದ ಸ್ಥಾಯಿ ಭಾವ. ಮನುಷ್ಯನ ಉಸಿರಾಟ ನಿಂತರೆ ಸಾವು ಸಂಭವಿಸುವುದು ಹೇಗೆ ನಿಶ್ಚಯವೋ ಹಾಗೆ ಬಾಳಿನಲ್ಲಿ ಪ್ರೀತಿ ಇಲ್ಲದಿದ್ದರೆ ಬದುಕು ಸೂತಕದ ಮನೆಯಾಗುತ್ತದೆ, ಮನುಷ್ಯ ಜೀವಂತ ಶವವಾಗುತ್ತಾನೆ. ಮರಣ ಮನುಷ್ಯನಿಗೆ ಮುಕ್ತಿ ನೀಡಿದರೆ ನಡೆದಾಡುವ ಹೆಣದ ಪುಟ್ಟ ಉಸಿರುಗಟ್ಟಿಸುತ್ತದೆ. ಈ ದಿಸೆಯಲ್ಲಿ ಪ್ರತಿ ಶಾಯರ್ ನ ಶಾಹಿ ಪ್ರೇಮಲೋಕದ ಜನ್ನತ್ ಅನ್ನು ಚಿತ್ರಿಸುತ್ತಿರುತ್ತದೆ. ಇಲ್ಲಿ ಸುಖನವರ್ ಹುಳಿಯಾರ್ ಷಬ್ಬೀರ್ ಅವರು ಮನುಷ್ಯನ ಮನದಲ್ಲಿ ಸುಪ್ತದೀಪ್ತಿಯಾಗಿರುವ ಪ್ರೀತಿಯನ್ನು ಅದೆಷ್ಟು ದಿನಗಳ ಕಾಲ ಮುಚ್ಚಿಡಲು ಸಾಧ್ಯ ಎಂದು ಜಿಜ್ಞಾಸೆ ಮಾಡುತ್ತ ಭಾವನೆಯ ಕನ್ನಡಿಯಲ್ಲಿ ಅನುರಾಗದ ಅನುಬಂಧವನ್ನು ಗುರುತಿಸಿದ್ದಾರೆ. ಇನ್ನೂ ಮುಂದುವರೆದು ಪ್ರೇಮಕಾವ್ಯದ ಮುನ್ನುಡಿಯಲ್ಲಿ ಪ್ರೇಮಿಗಳ ಭೂತ-ಭವಿಷ್ಯತ್ತಿನ ಸಹಯೋಗವನ್ನು ದಾಖಲಿಸಿದ್ದಾರೆ.
“ಮನದಲ್ಲಿ ಮುಚ್ಚಿಟ್ಟ ಭಾವನೆಯ ಕನ್ನಡಿ ನೀನು
ನಿನ್ನ ನೆನಪಿನ ಕಾವ್ಯದ ಮುನ್ನುಡಿ ನಾನು”
ಅರಬ್ ನ ಮರುಭೂಮಿ ಇರಾನ್ ನಲ್ಲಿ ಮೊಳಕೆಯೊಡೆದು ಉರ್ದುವಿನಲ್ಲಿ ಫಲ ನೀಡಿದ ಗಜಲ್ ಇಂದು ವಿಶ್ವವ್ಯಾಪಿಯಾಗಿ ಆವರಿಸಿರುವುದು ಅದರ ಗಟ್ಟಿತನವನ್ನು ಪ್ರತಿಧ್ವನಿಸುತ್ತದೆ. ಇಂತಹ ಗಜಲ್ ನಮ್ಮ ಕಸ್ತೂರಿ ಕನ್ನಡದಲ್ಲೂ ಮನೆಮಾತಾಗುತ್ತಿರುವುದು ಎಲ್ಲಿಲ್ಲದ ಖುಷಿಯ ಸಂಗತಿಯಾಗಿದೆ. ಗಜಲ್ ಗೋ ಶ್ರೀ ಹುಳಿಯಾರ್ ಷಬ್ಬೀರ್ ರವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ, ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.
“ಒಳ್ಳೆಯ ಮನುಷ್ಯ ಯಾರನ್ನೂ ದೂರುವುದಿಲ್ಲ
ಅವನು ದೋಷಗಳ
ಶಮ್ಸ್-ಐ ತಬ್ರಿಝಿ ನ್ನು ನೋಡುವುದಿಲ್ಲ”
–
ಹೂಬನದಲ್ಲಿ ಸುತ್ತಾಡಿತಿದ್ದರೆ ಕಾಲುಗಳೂ ದಣಿಯವು, ಮನವೂ ತಣಿಯದು!! ಈ ಗಜಲ್ ಜನ್ನತ್ ಅಂದರೇನೆ ಹಾಗೆ, ಇಂಗದ ದಾಹ, ಸಾಕೆನಿಸದ ಮೋಹ. ಆದರೂ….ಬೇಲಿ ಹಾಕುವ ಕಾಲದ ಮುಂದಿರುವ ಮುಸಾಫಿರ್ ನಾನು. ಇಂದು ಹೋಗಿ, ಮತ್ತೆ ಮುಂದಿನ ಗುರುವಾರ ತಮ್ಮ ಪ್ರೀತಿಯನ್ನರಸುತ ಬರುವೆ.. ಹೋಗಿ ಬರುವೆ, ಬಾಯ್.. ಟೇಕ್ ಕೇರ್ ದೋಸ್ತೊ.
ರತ್ನರಾಯಮಲ್ಲ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಸಹಜ ಸುಂದರ ಭಾವನೆಗಳು. ಅದ್ಭುತ ಓದಿನ ರುಚಿಯನ್ನು ಮನಸಾರೆ ಸವಿದಂತಾಯ್ತು.