ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಅಕ್ಷರಲೋಕದ ಅವಲೋಕನ

ಕಾದಂಬರಿ :  ಯಮಲೋಕದಲ್ಲಿ ವೈತರಣೀ ನದಿ

ಲೇಖಕರು  :  ಬಿ ಆರ್ ಚಂದ್ರಶೇಖರ ಬೇದೂರು

ಪ್ರಕಾಶಕರು  : ಕೃತಿ ಪ್ರಕಾಶನ 

ಮೊದಲ ಮುದ್ರಣ :  ೨೦೧೮

ಲೇಖಕ ಬಿ.ಆರ್.  ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು.  ಕಾನೂನು ಪದವೀಧರರು ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು.   ಹದಿನಾರನೇ ವಯಸ್ಸಿನಲ್ಲೇ “ಛಿದ್ರ”  ಎಂಬ ಕಾದಂಬರಿ ರಚಿಸಿದರು.  6  ಕನ್ನಡ ಕಾದಂಬರಿಗಳು  ಹಾಗೂ “ಎ ಬ್ರಿಲಿಯಂಟ್ ಶಾಡೋ”  ಎಂಬ ಇಂಗ್ಲಿಷ್ ಕಾದಂಬರಿ ರಚಿಸಿದ್ದಾರೆ.  ವಾಸ್ತವಿಕ ಜಗತ್ತಿನ ಆಗುಹೋಗುಗಳ ವಿಷಯ ಎತ್ತಿಕೊಂಡು ಅಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ . “ಯಮ ಮಾರ್ಗದಲ್ಲಿ ವೈತರಣೀ ನದಿ ” “ನೈಮಿಷಾರಣ್ಯ”  “ಅಜ್ಞಾತ” ಅವರ ಪ್ರಮುಖ ಕಾದಂಬರಿಗಳು . 

ವೈತರಣಿ ಹೆಸರೇ ಭಯ ಹುಟ್ಟಿಸುವಂಥದ್ದು . ಮನುಷ್ಯ ಸಾವಿನ ನಂತರ ಸೂಕ್ಷ್ಮ ಶರೀರಿಯಾಗಿ ಯಮ ಲೋಕಕ್ಕೆ ಪಯಣ ಬೆಳೆಸುವ  ಸಂದರ್ಭದಲ್ಲಿ ಈ ನದಿಯನ್ನು ದಾಟಲೇ ಬೇಕಾಗುತ್ತದೆ ಎಂಬುದು ಹಿಂದೂ ಧರ್ಮದ ನಂಬಿಕೆ.  ಈ ನಂಬಿಕೆಯ ಎಳೆಯನ್ನೇ ಆಧಾರವಾಗಿಟ್ಟುಕೊಂಡು ವೈತರಣಿಯ ಮೂಲಕ ಪಾಪಿ ಜೀವಿಯೊಬ್ಬನ ಯಮಲೋಕದ ಯಾತ್ರೆಯ ವಿವರವನ್ನು ಕಟ್ಟಿಕೊಡುವ ಕಾದಂಬರಿ . ಲೇಖಕರೇ ಹೇಳಿದಂತೆ” ಈ ಕಾದಂಬರಿ ಕನಸಿನ ಚೌಕಟ್ಟಿನೊಳಗೆ ರಚಿತವಾಗಿ ಆಧ್ಯಾತ್ಮಪುರಾಣವಿಜ್ಞಾನ_ವಾಸ್ತವ ಹಾಗೂ ಕಲ್ಪನೆಯನ್ನು ಒಳಗೊಂಡಿವೆ”. ಲೇಖಕರು ಚಿಕ್ಕವರಿದ್ದಾಗ ಅವರ ತಾತ ತಮ್ಮ ಅನುಭವದ ವ್ಯಾಪ್ತಿಗೆ ಬಂದ ಚೌಡಿ ಹೇಳಿದ ಕಥೆಯನ್ನು ತಮಗೆ ಹೇಳಿದ ಹಾಗೆ ನಿರೂಪಿಸಿದ್ದಾರೆ.  ಆ ಚೌಡಿ ಅದೇ ಗ್ರಾಮದ ಪುಟ್ಟಪ್ಪ ಎನ್ನುವವನ ಹೆಂಡತಿ ಕಮಲಮ್ಮ . ಅರುವತ್ತು ವರ್ಷದ ಪುಟ್ಟಪ್ಪನಿಗೆ ಹತ್ತು ವರ್ಷದ ಕಮಲಮ್ಮ ಜೋಡಿ ಅದೂ ಅವನು ವಿಕೃತ ಕಾಮಿಯಾಗಿದ್ದು ಆತ ಊರಿನ ಅನೇಕ ಹೆಣ್ಣುಗಳ ಮಾನಹರಣ ಮತ್ತೆ ಇನ್ನೆಷ್ಟೋ ಹೆಂಗಸರ ಜೊತೆಗೆ ಸಂಬಂಧ ಹೊಂದಿದವನು . ಗರ್ಭಿಣಿ ಹೆಂಡತಿ ಕಮಲಾಳನ್ನು ಮಾಂತ್ರಿಕನ ನೆರವಿನಿಂದ ಕೊಲೆ ಮಾಡಿಸಿದಾಗ ಇವಳು ಪ್ರೇತಾತ್ಮವಾಗುತ್ತಾಳೆ . ನಂತರ ಅದೇ ಊರಿನಲ್ಲಿ ನೆಲೆಸಿ ಗಂಡನನ್ನು ಕೊಲೆ ಮಾಡಿಸಿ ಸೇಡು ತೀರಿಸಿಕೊಳ್ಳುತ್ತಾಳೆ .

ಪ್ರೇತರೂಪಿ ಪುಟ್ಟಪ್ಪ ಯಮಲೋಕಕ್ಕೆ ಪಯಣಿಸುವಾಗ ಪಡುವ ಕಷ್ಟ ನೋಡಿ ಸಂತೋಷಪಡಲು ಯಮಲೋಕಕ್ಕೆ ಹಿಂಬಾಲಿಸಿ ಹೋದಾಗ ಯಮದೂತರಿಂದ ಶಪಿತಳಾಗಿ 2 ಶತಮಾನಗಳ ಕಾಲ ಪ್ರೇತ ರೂಪದಲ್ಲಿರಬೇಕಾಗುತ್ತದೆ.  ಲೇಖಕರ ತಾತ ವಿಶ್ವನಾಥಯ್ಯನವರಿಗೆ ಅವಳು ಬಣ್ಣಿಸುವ ಯಮಲೋಕ ವೈತರಣೀ ನದಿ ಇವುಗಳ ಬಣ್ಣನೆಯೇ ಈ ಕಾದಂಬರಿಯ ಕಥಾವಸ್ತು . ಮನುಷ್ಯಸ್ವಭಾವಗಳ ಸಹಜ ನಿರೂಪಣೆ ಸರಾಗವಾಗಿ ಸಾಗುತ್ತದೆ.  ಪುಟ್ಟಪ್ಪನು ನಡೆಸಿದ ಕುಕೃತ್ಯಗಳ ಬಣ್ಣನೆ, ಅವನ ಕರ್ಮಗಳ ಫಲವನ್ನು ತಾನೇ ಅನುಭವಿಸುವಾಗಿನ ವೇದನೆ ಕಣ್ಣಿಗೆ ಕಟ್ಟುವಂತೆ ನಿರೂಪಿತವಾಗಿದೆ.  ಮತ್ತೆಲ್ಲಾ ವಿವರಗಳನ್ನು ಹೇಳಿದರೆ ಕಾದಂಬರಿ ಓದುವ ಕುತೂಹಲಕ್ಕೆ ತಣ್ಣೀರೆರಚಿದಂತಾಗುತ್ತದೆ . ನೀವೇ ಅದನ್ನು ಓದಿ. 

ಮನುಷ್ಯ ಅಷ್ಟು ಕ್ರೂರವಾಗಿರಲು ಸಾಧ್ಯವೇ ಎನಿಸುವಂತಹ ವಿಕೃತಕಾಮಿ ಪುಟ್ಟಪ್ಪನ ವ್ಯಕ್ತಿತ್ವದ ಭೀಭತ್ಸ ಎನಿಸುತ್ತದೆ ಅವನ ಪ್ರೇಯಸಿ ಹಾಲಿ ಅವನಿಂದ ಕೊಲೆಯಾಗಿ ಮಾನಹರಣ ವಾಗಿ ನಾಶವಾದ ಅದೆಷ್ಟೋ ಹೆಂಗಳೆಯರು ಕಡೆಗೆ ಅವನ ಹೆಂಡತಿ ಚೌಡಿ ಯಾದ ಕಮಲಮ್ಮ ಇವರೆಲ್ಲಾ ವ್ಯವಸ್ಥೆಗೆ ಸಿಕ್ಕಿದ ಬಲಿಪಶುಗಳಾಗುತ್ತಾರೆ ಅಮಾನವೀಯವಾಗಿ ವರ್ತಿಸಿ ಈ ಲೋಕದಲ್ಲಿ     ಏನೊಂದೂ ಕಷ್ಟ ಅನುಭವಿಸದ ಪುಟ್ಟಪ್ಪ ಸತ್ತ ನಂತರ ಏನೆಲ್ಲಾ ಅನುಭವಿಸುವುದನ್ನು ಇಲ್ಲಿ ಕಾಣಬಹುದು ಇಲ್ಲಿ ನನಗೆ ಡಿವಿಜಿಯವರ ಒಂದು ಕಗ್ಗ ನೆನಪಿಗೆ ಬರುತ್ತದೆ .

ಪುಣ್ಯ ಪಾಪ ಋಣಾನುಬಂಧ ವಾಸನೆಗಳಿವು

ಜನ್ಮಾಂತರದ ಕರ್ಮಶೇಷದಂಶಗಳು 

ಯೆಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು

ಸನ್ನಿಹಿತ ದೈವಿಕದೆ _ ಮಂಕುತಿಮ್ಮ ॥೧೫೨॥

ದೈವ ಈ ಜನ್ಮದ್ದಷ್ಟೇ ಅಲ್ಲ ಜನ್ಮ ಜನ್ಮಾಂತರದ ಕರ್ಮ ಫಲಗಳನ್ನು ಲೆಕ್ಕವಿಟ್ಟಿರುತ್ತವೆ . ಒಂದನ್ನೂ ಬಿಡದ ಹಾಗೆ ನಾವು ಅನುಭವಿಸುವಂತೆ ಮಾಡುತ್ತದೆ . ಹಾಗೆ ಕರ್ಮಸಿದ್ಧಾಂತವನ್ನು ನಂಬಿದರೆ , ನಂಬುತ್ತಾ ಈ ಜನ್ಮದಲ್ಲಿ ಒಳ್ಳೆಯ ಕಾರ್ಯಗಳನ್ನೇ ಮಾಡಲಿ ಎಂಬ ಆಲೋಚನೆಯೂ ಇರಬಹುದು.  ಆದರೂ ಈ ಎಲ್ಲಾ ನಂಬಿಕೆಗಳು ನಮ್ಮ ಜೀವನದಲ್ಲಿ ಕರ್ಮ ಮತ್ತು ಧರ್ಮವನ್ನು ಸಮತೋಲನಗೊಳಿಸುವ ಮಹತ್ವವನ್ನು ತಿಳಿಸುತ್ತವೆ ಎಂಬುದು ಗಮನೀಯವಾದ ಅಂಶ. 

ಗರುಡ ಪುರಾಣ ಮನೆಯಲ್ಲಿ ಯಾರಾದರೂ ಸತ್ತಾಗ ಹತ್ತು ದಿನದಲ್ಲಿ ಓದಿಸುವ ಗ್ರಂಥ.  ಈ ಆತ್ಮದ ಯಮಲೋಕದ ಪಯಣ ಅದನ್ನು ಸುಲಭಗೊಳಿಸುವ ಮಾರ್ಗಗಳ ಬಗ್ಗೆ ಅಷ್ಟೆ ಅಲ್ಲದೆ ಯಾವ ಕರ್ಮಗಳಿಗೆ ಏನು ಫಲ ಎಂದೂ ವಿವರಿಸುತ್ತದೆ.  ಇದರ ಪ್ರಮುಖ ಅಂಶಗಳ ಸುತ್ತಲೇ ಇಡೀ ಕಾದಂಬರಿ ಸಾಗುತ್ತದೆ.  ಪುಟ್ಟಪ್ಪನ ಮಗ ನಾರಣಪ್ಪನ ಧರ್ಮ_ಕರ್ಮ ಯೋಚನೆ,  ತನ್ನ ಜೀವನದ ಬುಡವನ್ನೇ ಅಲ್ಲಾಡಿಸುವಂತಹ ತನ್ನ ತಂದೆಯ ಅದೊಂದು ಪಾತಕದ ಬಗ್ಗೆ ತಿಳಿದಾಗಿನ ಅವನ ಚಿಂತನ ಮಂಥನ ವಿವೇಚನೆಗಳು ಪ್ರಬುದ್ಧ ಮಟ್ಟದ್ದು.  ಬೆಳೆಯುವ ಪರಿಸರದ ಸಂಸ್ಕಾರ ಬೆಳವಣಿಗೆಯ ಮೇಲೆ ಬೀರುವ ಪ್ರಭಾವಕ್ಕೆ ಸಾಕ್ಷಿಯಾಗುತ್ತದೆ ಅವನ ಪಾತ್ರ  .ಹಾಗೆಯೇ ಅವನ ಮಗ ಓದುವ  “ಹುಟ್ಟಿನ ರಹಸ್ಯ” ಹಾಗೂ “ಸಾವು” ಪುಸ್ತಕಗಳ ಬಗೆಗಿನ ಪ್ರಸ್ತಾಪ ಆಗಿನ  ಅವನ ಮನಃಸ್ಥಿತಿಯ ವಿಡಂಬನೆ ಅನ್ನಿಸುವುದರಲ್ಲಿ ಅತಿಶಯವಿಲ್ಲ . ಹಾಗೆಯೇ  ಕಾಗೆ ನಮ್ಮ ಸಂಸ್ಕೃತಿಯಲ್ಲಿ ಅಷ್ಟೇ ಅಲ್ಲದೆ ಬೇರೆ ಧರ್ಮ ಸಂಸ್ಕೃತಿಗಳಲ್ಲೂ, ಸಾವು ಹಾಗೂ ಸಾವಿನ ಆಚೆಗಿನ ಪ್ರಪಂಚವನ್ನು ಪ್ರತಿನಿಧಿಸುವುದು,  ಹಿರಿಯರ ರೂಪ ಎಂದು ಭಾವಿಸುವುದರ ಬಗ್ಗೆಯೂ ಜಿಜ್ಞಾಸೆ ನಡೆಯುತ್ತದೆ. ಸಶರೀರನಾಗಿ ಬ್ರಹ್ಮಲೋಕಕ್ಕೆ ಹೋಗುವ ಹಾಗೆ ಅವನಿಗೆ ಬೀಳುವ ಕನಸು 

ಅವನ ಆಧ್ಯಾತ್ಮಿಕ ಚಿಂತನೆಯ ಉನ್ನತ ಸ್ತರ ವನ್ನು ತೋರಿಸುತ್ತದೆ.  ಅಪರಕ್ರಿಯೆ ಮಾಡಿದ ಗುಂಡಾ ಜೋಯಿಸರ ಪಾತ್ರವು ಹಾಗೆಯೇ . ತಮ್ಮ ಗುರುಗಳ ಅಣತಿಯಂತೆ ಗರುಡಪುರಾಣ ಓದಿಸಿದರೆ ಸದ್ಗತಿ ಪಡೆಯುತ್ತಾರೆ ಎಂದು ಎಲ್ಲರಿಗೂ  ಸಾರಿದರೂ ಅದೊಂದರಿಂದಲೇ ಸಾಧ್ಯವಿಲ್ಲ ಎಂಬ ಅವರ ವೈಚಾರಿಕ ಪ್ರಜ್ಞೆ ಮೆಚ್ಚುಗೆಗೆ ಅರ್ಹ.  ಬರೀ ಜೀವನೋಪಾಯಯಕ್ಕಾಗಿ ಬ್ರಾಹ್ಮಣಾರ್ಥ ಅನ್ನದೆ ವಿಷಯದ ಬಗೆಗಿನ ಅವರ ಕೂಲಂಕಷ ದೃಷ್ಟಿಕೋನ,  ನಂಬಿಕೆ ಹಾಗೂ ವಿಮರ್ಶಾತ್ಮಕ ಗುಣವನ್ನು ಲೇಖಕರು ಚೆನ್ನಾಗಿ ಚಿತ್ರಿಸಿದ್ದಾರೆ . 

ಇನ್ನು ಲೇಖನದ ಜೀವಾಳವೇ ವೈತರಣೀ ನದಿ . ಒಂದು ತೊಟ್ಟೂ ನೀರಿರದ,  ಬರೀ ರಕ್ತ ಮಾಂಸ ಮಜ್ಜೆ ಕೀವು ಮೂಳೆಗಳಿಂದ ತುಂಬಿದ, ಯೋಜನಗಳವರೆಗೆ ವಿಸ್ತಾರವಾಗಿರುವ ಈ ನದಿಯಲ್ಲಿ ಕ್ರೂರ ಜಂತುಗಳು ವಿಷದ ಹಾವುಗಳು ಇರುತ್ತವೆಂಬ ಪ್ರತೀತಿ.  ಇದನ್ನು ದಾಟುವುದು ಸುಲಭ ಸಾಧ್ಯ ಮಾಡುವುದು ಒಳ್ಳೆಯ ಕಾರ್ಯಗಳ ಪುಣ್ಯ,  ಕರ್ಮಗಳನ್ನು ಮಾಡುವಾಗ ಕೊಡುವ ದಾನ ಪಿಂಡಪ್ರಧಾನಗಳು.  ಕಥೆಯ ಕಡೆಯಲ್ಲಿ ವಿಜ್ಞಾನ ಕಲ್ಪನೆ ಮೇಳೈಸಿದ ಒಂದು ಪ್ರಸಂಗ.  ಯಮ ಗ್ರಹದಿಂದ ವೈತರಣಿಯನ್ನು ಭೂಲೋಕಕ್ಕೆ ಹರಿಸಿದಾಗ ಹಿಮಾಲಯ ಹಾಗೂ ಶಿವನನ್ನು ಮಾತ್ರ ಮುಟ್ಟಲಾಗದೆ ನಿಂತುಬಿಡುತ್ತದೆ . ಕಡೆಗೆ ಯಮ ಗ್ರಹದ ವಿಜ್ಞಾನಿಗಳು ಶಿವನ ಮೊರೆ ಹೊಕ್ಕು ಅವನ ಸಲಹೆಯಂತೆ ವೈತರಣಿಯನ್ನು ಕಪ್ಪುಕುಳಿಯ ಕಡೆಗೆ ತಿರುಗಿಸುತ್ತಾರೆ ತುಂಬಾ ಸ್ವಾರಸ್ಯಕರ  ಅನ್ನಿಸಿತು . 

ಚಿಕ್ಕವಯಸ್ಸಿನಲ್ಲಿ ಗರುಡಪುರಾಣ ಕೇಳಿದ್ದು.   ಏನೋ ಒಂದು ಕುತೂಹಲ ಪುಸ್ತಕ ಓದಲು ಪ್ರೇರೇಪಿಸಿತು.  ರೋಚಕವಾಗಿ ಸಾಗುತ್ತ ಬರಿಯ ವಿವರಣೆ ಎನ್ನಿಸದೆ ಕುತೂಹಲ ಉಳಿಸುತ್ತಾ ಜತೆಗೆ ಚಿಂತನೆಗೆ ಹಚ್ಚುತ್ತಾ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋದ ಕಾದಂಬರಿ.  ಮಾಮೂಲಿ ಕಥೆಗಳಿಗಿಂತ ಭಿನ್ನವಾದ ಕಥಾ ವಸ್ತುವನ್ನು ಬಿಗಿಯಾದ ಚೌಕಟ್ಟಿನಲ್ಲಿ ಹಿಡಿದಿಟ್ಟ ರೀತಿ ತುಂಬಾ ಮನಸೆಳೆಯುತ್ತವೆ  ಇಂತಹ ಕಾದಂಬರಿಗಳ ಬರವಣಿಗೆಗೆ ಅಧ್ಯಯನ ತುಂಬಾ ಮುಖ್ಯ . ವಿಷಯಗಳನ್ನು ಸಂಗ್ರಹಿಸಿ ವ್ಯವಸ್ಥಿತ ರೀತಿಯಲ್ಲಿ ಕಥೆಯ ಹಂದರಕ್ಕೆ ಕಲ್ಪನೆಯ ಕುಸುರಿ ತೊಡಿಸಿರುವುದು ನಿಜಕ್ಕೂ ಶ್ಲಾಘನೀಯ. ಕತೆಯ ಅಂತ್ಯ ಮಾತ್ರ ಅಂತ್ಯ ಅನ್ನಿಸದೆ ಬೇರೊಂದರ ಆರಂಭಕ್ಕೆ ಮುನ್ನುಡಿ ಅನ್ನು ಭಾವ ತಂದಿತು.   ಒಂದು ಒಳ್ಳೆಯ ಕಾದಂಬರಿ ಓದಿಗೆ ಸಿಕ್ಕಿತೆಂಬ ಓದುಗನ ಸಂತೃಪ್ತ ಭಾವ . ಓದಿ ಮುಗಿದು ಎಷ್ಟೋ ದಿನವಾದರೂ ತಲೆಯಲ್ಲಿ ಇದೇ ವಿಷಯದ ಬಗ್ಗೆ ಗುಂಗಿ ಹುಳ ಕೊರೆಯುತ್ತಿದ್ದುದು ಲೇಖಕರ ಗೆಲುವು ಎನ್ನಬಹುದೆ? 

ಕಾದಂಬರಿಯ ಪ್ರತಿ ಬೇಕೆನ್ನುವವರು ಲೇಖಕರ ಈ ಚರವಾಣಿಯ ನ್ನು ಸಂಪರ್ಕಿಸಿ . 


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top