ಅಂಕಣ ಸಂಗಾತಿ

ವಿಜಯಶ್ರಿ ಹಾಲಾಡಿಯವರ ಅಂಕಣ

ನೆಲಸಂಪಿಗೆ

ಕಾಡಿನೊಳಗೆ ಕಳೆದುಹೋದ ದಾರಿ

ಕರಾವಳಿ, ಮಲೆನಾಡಿನ ಕಾಡುಗಳು ಸ್ಥಳೀಯ ಜನರ ಬದುಕಿನ ಪ್ರಮುಖ ಅಂಗವೇ ಹೌದು. ವರ್ತಮಾನದ ದಿನಗಳಲ್ಲಿ ಈ ಆತ್ಮೀಯ ಸಂಬಂಧ ದೂರವಾಗಿ ಮರಗಿಡಗಳನ್ನು ಕಡಿದು ಒಟ್ಟಿ ದುಡ್ಡು ಮಾಡಿಕೊಳ್ಳುವ ಹುನ್ನಾರ ಮಾತ್ರ ಕಾಣುತ್ತಿದೆ. ಕುವೆಂಪು, ಕಾರಂತರಂತಹ ಹಿರಿಯ ಬರಹಗಾರರ ಕಾದಂಬರಿಗಳಲ್ಲಿ ಕಾಡು ಮತ್ತು ಮನುಷ್ಯನ ಅವಿನಾಭಾವ ಸಂಬಂಧ ಸಹಜವಾಗಿಯೇ ಮೂಡಿದೆ. ಅಂದಿನ ಜನಜೀವನದಿಂದ ಕಾಡನ್ನು ಬೇರ್ಪಡಿಸಿ ನೋಡಲು ಸಾಧ್ಯವೇ ಇಲ್ಲ.

      ನನ್ನ ಹಿರಿಯ ಪ್ರಾಥಮಿಕ ಶಾಲೆಯ ದಿನಗಳವರೆಗಿನ ಬಾಲ್ಯಕ್ಕೆ ಬೇರೆಯದೇ ಒಂದು ಆಯಾಮವಿದೆ. ಆಮೇಲೆ ಹುಡುಗಿ, ದೊಡ್ಡವಳು ಮುಂತಾದ ಸೂಕ್ಷ್ಮ ಸಂಕೀರ್ಣ ಒತ್ತಡಗಳು ಹೊರಗಿನಿಂದಲೂ ಒಳಗಿನಿಂದಲೂ ಕಾಡಿ ಪರಿಸ್ಥಿತಿ ಬದಲಾಯಿತು. ಹಿರಿಯ ಪ್ರಾಥಮಿಕ ಶಾಲೆಯ ದಿನಗಳಲ್ಲಿ ಮನೆ ಸುತ್ತಲಿನ ನನ್ನದೇ ಆಸುಪಾಸಿನ ಪ್ರಾಯದ ಮಕ್ಕಳೊಂದಿಗೆ ಆಡಿದ, ತಿರುಗಾಡಿದ ದಿನಗಳು ಅತ್ಯಮೂಲ್ಯ. ಯಕ್ಷಗಾನ, ಸ್ಕೂಲ್‌ಡೇ ಮುಂತಾಗಿ ರಾತ್ರಿಯಲ್ಲಿ ನಡೆಯುವ ಕಾರ‍್ಯಕ್ರಮಗಳಿಗೂ ಸಂಭ್ರಮ, ಉಲ್ಲಾಸದಿಂದ ನಾವೆಲ್ಲ ಆಗಾಗ ಹೋಗುತ್ತಿದ್ದೆವು. ಅಂದಿನ ಉತ್ಸಾಹವನ್ನು ಬಿಡಿಸಿ ಹೇಳಲು ಈಗ ಪದಗಳು ಸಿಕ್ಕಲಿಕ್ಕಿಲ್ಲ. ಒಂದು ಸ್ಕೂಲ್‌ಡೇಗೆ ಹೋಗುವುದೆಂದರೆ ಜೀವಮಾನದ ಎಲ್ಲ ಖುಷಿಯೂ ತುಂಬಿ ತುಳುಕಿದಂತೆ!

ಅಂತಹ ದಿನಗಳಲ್ಲಿ ಹತ್ತಿರದ ಊರಾದ ಹೈಕಾಡಿ ಎಂಬಲ್ಲಿಗೆ ಶಾಲಾ ವಾರ್ಷಿಕೋತ್ಸವಕ್ಕೆ ಹೊರಟೆವು. ಅಕ್ಕಪಕ್ಕದ ಮನೆಯ ಸುಮಾರು ಹತ್ತು ಮಕ್ಕಳು ಅಂದು ಒಟ್ಟುಗೂಡಿದ್ದೆವು. ನನಗಿಂತ ದೊಡ್ಡ ವಯಸ್ಸಿನವರೂ ಜೊತೆಯಲ್ಲಿ ಇದ್ದಿದ್ದರಿಂದ ಮನೆಯ ಹಿರಿಯರೂ ಒಪ್ಪಿಗೆಯಿತ್ತಿದ್ದರು. ಆದರೆ ನಾವು ಹೋಗುವ ದಾರಿ ಸೀದ ದಾರಿಯಲ್ಲ. ಉದ್ದಾನುದ್ದ ಬಯಲು ಗದ್ದೆಗಳನ್ನು ದಾಟಿ ‘ಹರಿನ್‌ಗುಡ್ಡೆ’ ಎಂಬ ದೊಡ್ಡಗುಡ್ಡದಲ್ಲಿ; ಅದರಲ್ಲಿನ ದಟ್ಟ ಕಾಡುಗಳಲ್ಲಿ ಹೊಕ್ಕು ಸುಮಾರು ನಾಲ್ಕೈದು ಮೈಲಿ ನಡೆದುಹೋಗಬೇಕಿತ್ತು. ಆಗೆಲ್ಲ ಇಡೀ ರಾತ್ರಿ ‘ನಾಟಕ’ ಅಂದರೆ ವಾರ್ಷಿಕೋತ್ಸವ ನಡೆಯುತ್ತಿತ್ತು. ಸಭಾ ಕಾರ‍್ಯಕ್ರಮ, ಶಾಲೆಯ ಮಕ್ಕಳ ಡ್ಯಾನ್ಸ್, ಹಾಡು, ಭಾಷಣ, ನಾಟಕ ಮುಂತಾದುವೆಲ್ಲ ಆದ ಬಳಿಕ ಹಳೆ ವಿದ್ಯಾರ್ಥಿಗಳ ದೊಡ್ಡ ನಾಟಕಗಳಿರುತ್ತಿದ್ದವು. ಕಾರ‍್ಯಕ್ರಮದ ಮುಖ್ಯ ಆಕರ್ಷಣೆ ಇದೇ ಆಗಿತ್ತು. ಮನೋರಂಜನೆಗಳೇ ವಿರಳವಾಗಿದ್ದ ಆ ಕಾಲದಲ್ಲಿಇಂತಹ ಸಂದರ್ಭಗಳಿಗಾಗಿಜನರು ವರ್ಷಪೂರ್ತಿಕಾಯುತ್ತಿದ್ದರು. ಆ ಭಾಗದಲ್ಲಿಅತ್ಯುತ್ತಮವಾಗಿ ನಟಿಸುವಕಲಾವಿದರೂಇದ್ದರು. ಹಾಲಂಬಿ ಸಹೋದರ ಬಳಗದವರ ನಟನೆ ಈಗಲೂ ನನ್ನಕಣ್ಣ ಮುಂದಿದೆ.

      ಆವತ್ತು ಸಂಜೆ ಸುಮಾರು ಆರುಗಂಟೆಯ ಹೊತ್ತಿಗೆ ಅವಸರದಲ್ಲಿ ಊಟ ಮಾಡಿ ನಾವೆಲ್ಲ ಹೊರಟೆವು. ಭೂಮಿಗೆ ರಾತ್ರಿಯಿಳಿಯುತ್ತಿದ್ದ ಹೊತ್ತು… ದೊಡ್ಡ ಬಯಲಿನಲ್ಲಿ ನಡೆದುಹೋಗಿ ಹರಿನ್‌ಗುಡ್ಡೆಯ ಮೆಟ್ಟಿಲು ಹತ್ತಿ ಕಾಡಿನೊಳಗೆ ಪ್ರವೇಶಿಸುವಷ್ಟರಲ್ಲಿ ಕತ್ತಲಾಗಿತ್ತು. ಮಾಮೂಲಿಯಾಗಿ ನಡೆದು ಅಭ್ಯಾಸವಿಲ್ಲದಿದ್ದ ಅಪರಿಚಿತ ಜಾಗವದು. ನನಗಂತೂ ದಾರಿಯೂ ತಿಳಿದಿರಲಿಲ್ಲ. ಹಿರಿಯ ಮಕ್ಕಳ ಮಾರ್ಗದರ್ಶನದಲ್ಲಿ ಎಲ್ಲರೂ ದಾರಿ ಕ್ರಮಿಸಿದೆವು. ‘ನಾಟಕ’ ನಡೆಯುತ್ತಿದ್ದ ಶಾಲೆಯನ್ನು ತಲುಪಿದಾಗ ಅಲ್ಲಾಗಲೇ ಕಾರ‍್ಯಕ್ರಮ ಶುರುವಾಗಿತ್ತು. ವಿದ್ಯುತ್ ದೀಪಗಳಿಂದ ಬೆಳಗುತ್ತಿದ್ದ ವಾತಾವರಣವನ್ನು ನಾವೆಲ್ಲ ಮಂತ್ರಮುಗ್ಧರಾಗಿ ಕಣ್ತುಂಬಿಕೊಂಡೆವು. ಜಾಗ ಹಿಡಿದು ನೆಲದಲ್ಲಿ ಕುಳಿತು ಕಾರ‍್ಯಕ್ರಮವನ್ನು ನೋಡಿ ಆಸ್ವಾದಿಸಿದೆವು. ಇನ್ನೇನು ಬೆಳಗಿನ ಜಾವ ಪಾದವೂರುತ್ತದೆ ಎನ್ನುವಾಗಲೇ ನಾವು ಅಲ್ಲಿಂದ ಹೊರಟು ಮನೆ ಸೇರಬೇಕಿತ್ತು. ಬಹುಶಃ ಆ ದಿನವೂ ಶಾಲೆಗೆ ಹೋಗಬೇಕೆನಿಸುತ್ತದೆ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಕಡುರಾತ್ರಿಯಲ್ಲೇ ಮನೆ ಕಡೆ ಹೊರಟೆವು.

        ಹರಿನ್‌ಗುಡ್ಡೆ ಎನ್ನುವುದು ದೊಡ್ಡದಾದ ಗುಡ್ಡವೇ ಆದರೂ ಅದರ ಒಂದು ಭಾಗದಲ್ಲಿ ದಟ್ಟ ಕಾಡಿತ್ತು. ಆ ಕಾಲದಲ್ಲಿ ಹುಲಿ, ಚಿರತೆ, ಕಾಳಿಂಗಸರ್ಪ ಮುಂತಾದ ದೊಡ್ಡ ದೊಡ್ಡ ಪ್ರಾಣಿಗಳೆಲ್ಲ ಅಲ್ಲಿ ಓಡಾಡಿಕೊಂಡಿವೆ ಎಂದು ಜನರು ಹೇಳುತ್ತಿದ್ದರು. ನಾವು ಬೆಳಗಿನ ಜಾವದ ಮೂರೂವರೆ ನಾಲ್ಕರ ಸುಮಾರಿಗೆ ಬ್ಯಾಟರಿ ಹಿಡಿದು ಆ ದಟ್ಟಕಾಡಿನಲ್ಲಿ ದಾರಿ ಅರಸುತ್ತ ವಾಪಸ್ ಬರುವಾಗ ನಮ್ಮೂರಿನ ಕಡೆ ಹೋಗುವ ಕಾಲುಹಾದಿ ತಪ್ಪಿಹೋಯಿತು. ನನ್ನಂತಾ ಸಣ್ಣವರಿಗೆ ದಾರಿ ಗೊತ್ತೇ ಇಲ್ಲ; ಹಿರಿಯ ಮಕ್ಕಳು ತಿಳಿದಿದ್ದೂ ಏನೂ ತೋಚದೆ ನಿಂತುಬಿಟ್ಟರು. ಕಾಡಿನಿಂದ ಹೊರಬರುವದಾರಿ ಎಷ್ಟು ಹುಡುಕಿದರೂ ಸಿಗಲಿಲ್ಲ.

  ಎಲ್ಲರಿಗೂ ಭಯ ಶುರುವಾಯಿತು. ನಾಟಕಗಳ ಕುರಿತು ಮಾತಾಡುತ್ತಿದ್ದ ಬಾಯಿಗಳು ಮೂಕವಾದವು. ದಿಕ್ಕು ದಿಕ್ಕಿಗೆ ಬ್ಯಾಟರಿ ಹಿಡಿದು ನಡೆದುಹೋದರೂ ಸರಿಯಾದ ದಾರಿ ಸಿಗಲೇ ಇಲ್ಲ. ಆಗ ನಮಗೆಲ್ಲ “ಕಾಡಿನಲ್ಲಿ ಬಳ್ಳಿಯೊಂದಿರುತ್ತದೆ. ಅದನ್ನು ಮುಟ್ಟಿದರೆ ಮತ್ತೆ ಊರಿನ ದಾರಿಯೇ ಸಿಗದೆ ಮನುಷ್ಯ ಕಳೆದೇ ಹೋಗುತ್ತಾನೆ” ಎಂಬ ಹಿರಿಯರ ಮಾತು ನೆನಪಾಯಿತು. ಹೋ, ನಾವಿನ್ನು ಮನೆಗೆ ಮರಳುವುದೇ ಇಲ್ಲ ಎಂಬ ನೋವಿನ ಭಾವ ತುಂಬಿಕೊಂಡು ಅಳತೊಡಗಿದೆವು. ಹತ್ತು ಜನರ ತಲೆಯಲ್ಲೂ ಹತ್ತುರೀತಿಯ ಭೀಕರ ಕಲ್ಪನೆಗಳು. ಕಾಡಲ್ಲೇ ಕಳೆದುಹೋಗಿ, ಊಟ ನೀರಿಲ್ಲದೆ ಒಣಗಿ ಕೃಶವಾಗಿ… ಕೊನೆಗೆ! ಅಬ್ಬಾ! ನಮ್ಮಜೀವನವೇ ಮುಗಿದುಹೋಯಿತೆಂದು ಮಾತಾಡಿಕೊಂಡೆವು.

   ಹೀಗೆ ಕನಿಷ್ಠ ಮೂರುಗಂಟೆಯಾದರೂ ಆ ದಟ್ಟಕಾಡಿನಲ್ಲಿ ಅಲೆದೆವು. ಅಷ್ಟರಲ್ಲಾಗಲೇ ನಮ್ಮಆತ್ಮವಿಶ್ವಾಸ ಕುಂದಿತು. ಭಯದಿಂದ ಕೈಕಾಲು ಥಂಡಿಯಾಗಿದ್ದವು. ಯಾವ ಕ್ಷಣದಲ್ಲಿ ಯಾವ ಕ್ರೂರ ಪ್ರಾಣಿ ನಮ್ಮ ಮೇಲೆರಗುತ್ತದೋ, ಯಾವ ಹಾವು ಕಚ್ಚುತ್ತದೋ… ಹೀಗೆ ವಿಧ ವಿಧವಾದ ಜೀವಭಯ! ಕೊನೆಗೆ ದಿಕ್ಕು ತೋಚದೆಒಂದೆಡೆ ಸ್ತಬ್ಧವಾಗಿ ನಿಂತೆವು. ಸಾಕಷ್ಟು ಆಯಾಸವೂ ಆಗಿತ್ತು. ಮನೆಯವರನ್ನೆಲ್ಲ ನೆನೆದುಕೊಂಡು ಇನ್ನು ನಾವು ಅವರನ್ನೆಲ್ಲ ನೋಡಲಿಕ್ಕೇ ಇಲ್ಲವೇನೋ ಎಂದು ಒಬ್ಬೊಬ್ಬರಾಗಿ ಗೋಳಾಡತೊಡಗಿದೆವು.

    ಆದರೆ ಬೆಳಗು ಎಂಬುದೊಂದು ಇತ್ತಲ್ಲ… ಅದು ಬಂದೇ ಬಂತು. ಸ್ವಲ್ಪ ಸ್ವಲ್ಪವೇ ಸೂರ‍್ಯನ ಬೆಳಕು ಕಾಡಿನ ಮರಗಿಡಗಳ ಮೇಲೆ ಬಿದ್ದಿತು. ಪಕ್ಷಿಗಳ ಚಟುವಟಿಕೆ ಜಾಸ್ತಿಯಾಯಿತು. ಅಂತಹ ಸಂದರ್ಭದಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಮತ್ತೆ ದಾರಿಗಾಗಿ ಹುಡುಕತೊಡಗಿದಾಗ ಅಚಾನಕ್ ನಮ್ಮಲ್ಲಿ ಹಿರಿಯ ಮಕ್ಕಳಲ್ಲಿ ಒಬ್ಬರಿಗೆ ದಾರಿ ಸಿಕ್ಕೇಬಿಟ್ಟಿತು. ಮುಂದೆ ಮುಂದೆ ಹೋದಾಗ ಅದೇ ನಮ್ಮೂರಿನ ದಾರಿ ಎಂದು ಖಾತ್ರಿಯಾಯಿತು. ಆ ಹೊತ್ತಿನಲ್ಲಿ ನಮ್ಮೆಲ್ಲರ ಎದೆಯೊಳಗೆ ಎಂತಹ ಸಂತಸ ತುಂಬಿಕೊಂಡಿತೆಂದರೆ ಸತ್ತವರು ಮರಳಿ ಎದ್ದು ಬಂದಂತೆ… ಹೊಸ ಬದುಕು ದೊರಕಿದಂತೆ. ಬೇಗ ಬೇಗ ಓಡುತ್ತ ಮತ್ತೆಲ್ಲಿ ನಮ್ಮನ್ನು ಹಿಡಿದುಕೊಳ್ಳುತ್ತದೋ ಎಂಬಂತೆ ಆ ದಟ್ಟಕಾಡಿನಿಂದ ಬಿಡಿಸಿಕೊಂಡು ಬೆಳೇರಾದ ಜಾಗಕ್ಕೆ ಬಂದೆವು. ಹರಿನ್‌ಗುಡ್ಡೆಯ ಮೆಟ್ಟಿಲುಕಲ್ಲು ಸಿಕ್ಕಿತು. ಹಾರಿ ಹಾರಿ ಇಳಿಯುತ್ತ  ಸತ್ತೆವೋ ಕೆಟ್ಟವೋ ಎಂಬಂತೆ ಓಡೋಡುತ್ತ ದೂರ ದಾರಿ ತುಳಿದು ಅವರವರ ಮನೆ ಸೇರಿಕೊಂಡೆವು. ಮನೆಯಲ್ಲಿ ಈ ವಿಷಯ ಹೇಳುವುದು ಬೇಡ ಎಂದು ಮಾತಾಡಿಕೊಂಡಿದ್ದರೂ ಇಷ್ಟು ತಡ ಏಕಾಯಿತೆಂದು ಪ್ರಶ್ನಿಸಿದಾಗ ಸತ್ಯ ಹೊರಬರಲೇಬೇಕಾಯಿತು. ವಿಷಯ ಕೇಳಿ ಅಮ್ಮಮ್ಮ, ಅಮ್ಮನಿಗೆ ಮಾತೇ ಹೊರಡಲಿಲ್ಲ. ತುಂಬಾ ಬಯ್ಯುತ್ತಾರೆಂದು ನಾವು ನಿರೀಕ್ಷಿಸಿದ್ದಕ್ಕೆ ವ್ಯತಿರಿಕ್ತವಾಗಿ ಅವರು “ಸದ್ಯ ಬದುಕಿ ಬಂದಿರಲ್ಲಾ” ಎನ್ನುತ್ತಾ ಕಣ್ಣೊರೆಸಿಕೊಂಡರು. “ಇನ್ನು ಮೇಲೆ ಹೀಗೆ ನೀವು ನೀವೇ ಹೋಗಬಾರದು” ಎಂದು ತಾಕೀತು ಮಾಡಿ ಬಯ್ಯದೆ ಬಿಟ್ಟರು. ಸದ್ಯ ಬಚಾವಾದೆವು ಎಂಬ ನಿಟ್ಟುಸಿರು ಹೊರಬಂದು ನಿರಾಳವಾದರೂ ಅಲ್ಲೇ ಇದ್ದ ದಾರಿ ನಮಗ್ಯಾಕೆ ಆ ಕ್ಷಣದಲ್ಲಿ ಸಿಗಲಿಲ್ಲ; ನಮ್ಮೆಲ್ಲರ ತಲೆಗೆ ಯಾವ ಮಂಕು ಕವಿದುಕೊಂಡಿತ್ತು ಎಂದು ಯೋಚಿಸುತ್ತಲೇ ಕುಳಿತೆವು.

ಇಷ್ಟು ವರ್ಷಗಳ ನಂತರ ಈಗಲೂ ನನ್ನದು ಇದೇ ಪ್ರಶ್ನೆ…

ಅಲ್ಲೇ ಇದ್ದ ದಾರಿ ಆವತ್ತು ಹೇಗೆ ನಮ್ಮಿಂದ ತಪ್ಪಿಸಿಕೊಂಡಿತ್ತು ಎಂದು!  ಉತ್ತರ ಸಿಕ್ಕಿಲ್ಲ.


ವಿಜಯಶ್ರೀ ಹಾಲಾಡಿ

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

One thought on “

  1. ನಿಜ.
    ದಾರಿ ಇದ್ದಲ್ಲಿಯೇ ಇರುತ್ತದೆ.ಆದರೆ ” ಕವಿದ ಕತ್ತಲೆ”ಯಿಂದಾಗಿ ಕೆಲವು ಸಲ ಸಿಗದೇ ಹೋಗುತ್ತದೆ.ಆದರೆ ಇದು ತಾತ್ಪೂರ್ತಿಕ ಸ್ಥಿತಿ.ಏಕೆಂದರೆ ಬೆಳಕು/ಬೆಳಗು ಎಂಬುದೊಂದು ಇದ್ದೇ ಇರುತ್ತದಲ್ಲವೇ.ಮತ್ತೆ ಎಲ್ಲಾ ತೀರ ಮೊದಲಿನಂತೆಯೇ ಆಗದಿದ್ದರೂ ಒಂದು ಹಂತದ ಸಮಸ್ಥಿತಿ ಬಂದೇ ಬರುತ್ತದೆ…
    ಇಂದು ಅದರಿಂದ ಏನೂ ಆಗದೆಂದು ಅಂದುಕೊಂಡಾಗಲೂ ‘ಅದು’ ನಮ್ಮ ಜೊತೆಗೆ ಉಳಿದೇ ಬಿಟ್ಟಿರುತ್ತದೆ ನೋಡಿ,ಸ್ಮೃತಿಯಲ್ಲಿ…!

Leave a Reply

Back To Top