ಕಾವ್ಯ ಸಂಗಾತಿ
ಸ್ಮಿತಾರಾಘವೇಂದ್ರ ಎರಡು ಕವಿತೆಗಳು
ಕವಿತೆ-ಒಂದು
ಕಣ್ಮುಚ್ಚಿ ಧ್ಯಾನಿಸು
ಕೂಡಿಟ್ಟ ಕನಸುಗಳಿಗೆಲ್ಲ
ರೆಕ್ಕೆ ಬಲಿತರೆ ಕಷ್ಟ.
ಭ್ರಮೆ ಕಣೇ ನಿನಗೆ
ಕನಸುಗಳೆಲ್ಲ
ಗಗನವನ್ನೇ ಚುಂಬಿಸಬೇಕು
ಅನ್ನುವುದು.
ರೆಪ್ಪೆಯೊಳಗೆ
ಅಡಗಿಸಿಕೊಂಡ
ನಕ್ಷತ್ರಗಳ ನೋಡ ಬೇಕೆಂದರೆ
ನಿನ್ನ ನೀ ನೋಡಿಕೊಳ್ಳಬೇಕು
ಹುಚ್ಚಿ.
ಹಾರಲು ಬಿಡುವ
ಬೆಳಕುಗಳಿಗೆ
ಬಾಲಂಗೋಚಿ ಯಾಕೇ
ಬಿಟ್ಟು ಬಿಡು
ಪತನವಾದದ್ದೂ ಕಾಣದಂತೆ.
*************
ಕವಿತೆ-ಎರಡು
ವಿಷಾದಗಳೆಲ್ಲ
ನನ್ನನ್ನೇ ಬಳಸುತ್ತವೆ
ಅಂದುಕೊಂಡಿದ್ದೀಯ
ಹಾಗೇನೂ ಇಲ್ಲ
ಪ್ರೇಮದ ಹುಡಿ ಬೀರು
ಅವೂ ಕಂಗೊಳಿಸುತ್ತವೆ.
ಮರಭೂಮಿಯಲ್ಲಿ
ನೀರಿಲ್ಲ ಅನ್ನುವೆಯಲ್ಲ
ನೋಡಿಲ್ಲ ನೀನು
ಕಳ್ಳಿಗಿಡ ಬಣ್ಣ ತುಂಬಿಕೊಂಡಿದ್ದು.
ಪ್ರೇಮವೇ ಬದುಕಿನ ಎಲ್ಲವೂ
ಬಿಡು, ಆ ಮಾತು.
ಅದರಾಚೆ ಒಂದು ಜಗತ್ತು
ಮನುಷ್ಯನ ಹೊರತಾಗಿ
ಬೆಳಗುವುದ ನೋಡು.
ಪಟ್ಟಾಗಿ ಕುಳಿತು ಬಿಡಿಸುವ ಚಿತ್ರ
ಚೂರೂ ಕದಲಬಾರದು
ಬೆರಳದ್ದಿ ಸಿಂಪಿಸು
ಬಿದ್ದ ಹನಿಯೆಲ್ಲ
ಮೈದಳೆಯುವವು
ಪರಿತಪಿಸುವುದು ಪ್ರೀತಿಗಾಗಿಯೇನೆ?
ನೀನೇ ಪ್ರೀತಿಯಾಗಿಬಿಡು
ಬದುಕು ಬದಲಾವಣೆಯ
ಬೆರಗು.
ಸ್ಮಿತಾ ರಾಘವೇಂದ್ರ
ಚಂದದ ಭಾವಾಭಿವ್ಯಕ್ತಿ. .ನೈಸ್
Thanku ♥️