ಅಂಕಣ ಸಂಗಾತಿ
ಪ್ರಸ್ತುತ
ಹೂವು ಮತ್ತು ನಾವು
ಪ್ರತಿಸಲ ಕಸಿಮಾಡಿದ ಹೂವಿನ ಸಸಿ ತಂದಾಗಲೂ ನನಗೆ ಪ್ರನಾಳ ಶಿಶುವನ್ನು ನೋಡಿದಂತೆಯೇ ಅನಿಸುತ್ತದೆ . ಯಾವುದೋ ಕಾಂಡ ,ಯಾವುದೋ ಬೇರು ಹೊಸ ಹೂವು .ಅದನ್ನು ನೆಲದಲ್ಲಿ ನಾಟಿಸುವಾಗ ಮತ್ತೊಂದು ಭಾವ .ತವರಿನಿಂದ ಗಂಡನಮನೆ ಸೇರುವ ಹೊಸ ವಧುವಿನಂತೆ .ಹೂವಿನಗಿಡ ತಂದು ತಮ್ಮಅಂಗಳದಲ್ಲಿ ಬೆಳೆಸುವವರೆಲ್ಲ ಗಂಡನ ಮನೆಯವರೆ .ಆ ಗಿಡಕ್ಕೆ ಕಾಲಕಾಲಕ್ಕೆ ನೀರು ಗೊಬ್ಬರ ಪೂರೈಕೆ .ರೋಗ ಕೀಟಬಾಧೆಯಾದಾಗ ಆರೈಕೆ ಮಾಡುವಾಗ ಒಂದು ಮನೆಯಿಂದ ತನ್ನವರನ್ನೆಲ್ಲ ಬಿಟ್ಟು ಬಂದು ಇನ್ನೊಂದು ಮನೆಯ ಸದಸ್ಯೆಯಾಗಿ ಮನೆಜನಕ್ಕೆ ವಾತಾವರಣಕ್ಕೆ ಹೊಂದಿಕೊಂಡು ಆ ಮನೆಯ ವಂಶೋಧ್ಧಾರ ಮಾಡುತ್ತಾ ಅದೇ ಮನೆಗೆ ಶ್ರಮಿಸಿ, ಚಿಂತಿಸಿ, ಸವೆದು ಅದೇ ಮನೆಯಲ್ಲೇ ಕೊನೆಯುಸಿರೆಳೆವ ಕರುಣಾಮಯಿ ಹೆಣ್ಣು ನೆನಪಾಗುತ್ತಾಳೆ .
ಯಾರೋ ಬೆಳೆದ ಅಥವಾ ಕಸಿ ಮಾಡಿದ ಹೂವಿನಗಿಡ ತಂದವರ ಮನೆಯ ಮುಂದಿನ ಮಣ್ಣಿನಲ್ಲಿ ಬೇರುಬಿಟ್ಟು ಚಿಗುರಿ ಹೂವು ಕಾಯಿ ಹಣ್ಣು ಬಿಟ್ಟು ಬೀಜ ಕೊಟ್ಟು ಸಂತಾನಭಿರುದ್ಧಿಗೆ ಕಾರಣವಾಗುತ್ತದೆ ಹೆಣ್ಣಿನಂತೆ . ಗಮನಿಸಿದರೆ ಗೊತ್ತಾಗುತ್ತದೆ ,ಬಹುತೇಕ ಗಿಡಗಳಿಗೆ ನಮ್ಮಮಾತು , ಪ್ರೀತಿ ಅರ್ಥವಾಗುತ್ತದೆ. ಒಮ್ಮೆಹೀಗಾಯಿತು . ಒಂದು ಪೇರಲಗಿಡ ನೆಟ್ಟು ಕೆಲವು ತಿಂಗಳ ನಂತರ ಇನ್ನೊಂದು ಪೇರಲಗಿಡ ನೆಟ್ಟೆವು , ಆಮೇಲೆ ನೆಟ್ಟ ಪೇರಲಹೂವು ಕಾಯಿ ಬಿಡಲಾರಂಭಿಸಿತು. ಒಂದಿನ ನಾನು ಮೊದಲು ನೆಟ್ಟ ಗಿಡದ ಹತ್ತಿರ ನಿಂತು “ನೋಡು ಆಮೇಲೆ ನೆಟ್ಟ ಗಿಡ ಕಾಯಿ ಬಿಡಲು ಶುರುವಾಗಿದೆ ನಿನಗಿನ್ನು ಮಣ್ಣಿಗೆ ಹೊಂದಿಕೊಳ್ಳಲಾಗುತಿಲ್ಲ ನೀನು ಯವಾಗ ಹೂ ಬಿಡುವುದು ?” ಎಂದೆ ಅಷ್ಟೇ . ಒಂದು ವಾರದಲ್ಲಿ ಆ ಗಿಡ ಹೂ ಬಿಡಲು ಶುರುವಾಯಿತು ನಮಗೆಲ್ಲ ಅಚ್ಚರಿ . ಕೆಲವು ಗಿಡಗಳಿರುತ್ತವೆ . ಹಠಮಾರಿ ಮಕ್ಕಳಂತೆ ಎಷ್ಟು ಬೈದರೂ ಏನು ಹೇಳಿದರೂ ಕೇಳುವುದಿಲ್ಲ. ಚಿಗುರಲು ಹೂ ಬಿಡಲು ಹಠ ಮಾಡುತ್ತವೆ ಬಿಗುಮಾನ ತೋರುತ್ತವೆ .ಶ್ರೀಮಂತ ಕುಟುಂಬದ ಕನ್ಯೆಯಂತೆ .
ಸುಮ್ಮನೆ ಪುಟ್ಟ ಗಿಡಗಳನ್ನು ನೋಡುತ್ತಿದ್ದರೆ ಮಕ್ಕಳನ್ನು ನೋಡಿದಂತೆ ಆನಂದವಾಗುತ್ತದೆ. ಕಂದು ಚಿಗುರಿನ ಮಾವಿನಗಿಡ , ಕೆಂಪು ಚಿಗುರಿನ ಗುಲಾಬಿ, ಸುಮ್ಮನೆ ದಿನಕ್ಕೊಂದು ತರಹ ಸುಳಿಯಿಂದ ಹೊರಬರುವ ಬಾಳೆಎಲೆ, ಗಾಳಿಗೆ ನರ್ತಿಸಿದಂತೆ ತಲೆದೂಗುವ ಎಲೆಗಳು ಮಕ್ಕಳು ಚಪ್ಪಾಳೆ ತಟ್ಟಿ ನಗುತ್ತ ಕುಣಿದಂತೆ ಖುಷಿ ಕೊಡುತ್ತವೆ.
ಮೂರು ವರುಷದ ತೆಂಗು ಪುಟ್ಟಪುಟ್ಟ ಕಾಯಿಬಿಟ್ಟಾಗ ನಮ್ಮನೆ ಮಗಳಿಗೆ ಮಕ್ಕಳಾದಂತೆನಿಸಿ ಸೀಮಂತ ಮಾಡಿ ಹರ್ಷಿಸಿದೆವು.
ಪ್ರತಿದಿನ ಪೂಜೆಗೆ ಹೂ ಬಿಡಿಸುವಾಗಲೂ ಪ್ರೊ ,ಎನ್ ಎಸ್ ಲಕ್ಷ್ಮಿನಾರಾಯಣಭಟ್ಟಅವರ “ಒಂದೊಂದು ಹೂವಿಗು ಒಂದೊಂದು ಬಣ್ಣ”… ಎನ್ನವ ಸುಂದರ ಸಾಲು ನೆನಪಾಗುತ್ತದೆ. ಹದಿನೈದಕ್ಕಿತಲೂ ಹೆಚ್ಚು ಬಣ್ಣದ ಹೂಗಳಿವೆ ನಮ್ಮ ಸಂಭ್ರಮದ ಹೂದೋಟದಲ್ಲಿ ಅವುಗಳನ್ನು ದಿನಾಲು ಭೇಟಿಯಾಗಲು ಹಿಂಡುಹಿಂಡಾಗಿ ಬರುವಬಾಯ್ ಫ್ರೆಂಡ್ಸ್ , {ದುಂಬಿ , ಚಿಟ್ಟೆಗಳು} ಅವುಗಳ ಮಾತು, ಮುತ್ತು ಓಹ್ ! ನೋಡುತ್ತಿದ್ದರೆ ಮಾನವ ಜೀವಿಯ ಗುಟ್ಟಿನ ಪ್ರಣಯದ ಅನಾವರಣ. ಹೂವು ದುಂಬಿಗಳ ಮೌನ ಪ್ರೀತಿ ಎಷ್ಟು ಚೆಂದ ! .
ಒಬ್ಬೊಬ್ಬರೂ ಒಂದೊಂದು ತರಹ ಇರುವಂತೆ ಒಂದೊಂದು ಗಿಡದ ಎಲೆಯೂ ಒಂದೊಂದು ತರಹ. ಪ್ರಕೃತಿಯ ಈ ವಿಭಿನ್ನವೈಚಿತ್ರೈಗಳು ದಂಗು ಬಡಿಸುತ್ತವೆ. ಗದಗನಲ್ಲಿ ನಮ್ಮ ಬೀಗರಮನೆ ಮುಂದೆ ಗಿಡ ನೆಡಲು ಜಾಗವಿಲ್ಲದ ಕಾರಣ ಮನೆ ಟೆರೆಸ್ ಮೇಲೆ ಬಣ್ಣದ ಹೂಗಳ, ತರತರಹದ ಶೋಪ್ಲ್ಯಾಂಟ್ಸ್ಗಳ ಕುಂಡಗಳನ್ನು ನೋಡುತ್ತಿದ್ದರೆ ಒಳಗೆ ಬರಲು ಮನಸೇ ಬರುವುದಿಲ್ಲ . ಖಾನಾವಳಿಯ ಬಿಡುವಿಲ್ಲದ ಕೆಲಸದ ನಡುವೆ ಆ ಗಿಡಗಳನ್ನು ನೋಡಿಕೊಳುವುದು ನೋಡಿದರೆ ಅನೇಕ ಮಕ್ಕಳನ್ನ ದತ್ತು ತೆಗೆದುಕ0ಡು ಪ್ರೀತಿಯಿಂದ ನೋಡಿಕೊಳ್ಳುತಿರುವಂತೆ ಅನಿಸುತ್ತೆ ಅವರ ಸಸ್ಯ ಪ್ರೇಮ.
ಹೀಗೆಪ್ರಕೃತಿಯಚಲನೆ ,ಬೆಳವಣಿಗೆ, ಬದಲಾವಣೆಗಳಿಗೆ ಒಂಚೂರು ನಮ್ಮನ್ನು ತೆರೆದುಕೊಂಡರೆ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಪ್ರಕೃತಿ ಉಚಿತವಾಗಿ ಮೂಕಭಾಷೆಯಲ್ಲಿ ಹೇಳಿಕೊಡುವ ಪಾಠ ಕಲಿಯಲು ನಾವು ತಯಾರಿದ್ದರೆ ಅದೇ ಧ್ಯಾನ, ಆನಂದ ಇದಕೆಲ್ಲ ಒಂಚೂರು ಸಮಯ ಕೊಡಲು ಖಂಡಿತ ಸಾಧ್ಯ . ಪ್ರಯತ್ನಿಸಿ ಇಂದೇ .
——————————————————————————-
ನಿಂಗಮ್ಮಭಾವಿಕಟ್ಟಿ
ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.
Chennagide nimma baraha