
ಅಂಕಣ ಸಂಗಾತಿ
ಮಧು ವಸ್ತ್ರದ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮುಂಬಯಿ ಮಹಾನಗರದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿ
ದಹಿಹಂಡಿ ಆಚರಣೆ.

ಭಾಗ..೧
ಮುಂಬಯಿ ಮಹಾನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ದಹಿಹಂಡಿ ಆಚರಣೆ.

ಅಪರಿಮಿತ ಕನಸುಗಳ ಬಿತ್ತುವ ಆಶಾವಾದಿ ಪರಿಶ್ರಮಿಗಳಿಗೆ ಅನಿರೀಕ್ಷಿತ ನನಸುಗಳ ನೀಡುವ ಮಾಯಾನಗರಿ ಈ ಮುಂಬಯಿ..ಇಲ್ಲಿಯ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಹಬ್ಬ ಹರಿದಿನಗಳು,ವಿವಿಧ ,ವಿಭಿನ್ನ, ಸಂಪ್ರದಾಯಗಳು ಅವಿಭಾಜ್ಯ ಅಂಗಗಳಾಗಿವೆ..ಇವು ನಮ್ಮ ಧಾರ್ಮಿಕ ನಂಬಿಕೆಗಳನ್ನು ಮತ್ತು ಸಾಮೂಹಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ..ಶ್ರಾವಣ ಮಾಸದ ಅಷ್ಟಮಿಯಂದು ಆಚರಿಸುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವು ತನ್ನದೇ ಆದ ವಿಶೇಷ ವಿಶಿಷ್ಟ ಸ್ಥಾನಮಾನಗಳನ್ನು ಹೊಂದಿದ್ದು, ಸಮಾಜದ ಯುವ ಪೀಳಿಗೆಯನ್ನು ಒಂದುಗೂಡಿಸಿ ಉತ್ಸಾಹ, ಸಂತಸ, ಸಂಭ್ರಮಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದೆ.. ಗೋಕುಳಾಷ್ಟಮಿ ಎಂದೂ ಕರೆಯಲ್ಪಡುವ ಈ ಹಬ್ಬವನ್ನು ನಗರದ ಮಠ ಮಂದಿರಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಭಗವಾನ್ ಶ್ರೀಕೃಷ್ಣನ ಜೀವನಕಥೆಗಳನ್ನು ಒಳಗೊಂಡ ನೃತ್ಯ ನಾಟಕಗಳನ್ನು ನಗರದ ಪ್ರತಿಷ್ಠಿತ ರಂಗಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ. ಶ್ರೀಕೃಷ್ಣನ ಬಾಲಲೀಲೆಗಳನ್ನು, ಬಿಂಬಿಸುವ ಈ ಆಕರ್ಷಕ ಕಲಾ ಪ್ರದರ್ಶನಗಳು ಮಕ್ಕಳಿಗೆ, ಯುವಪೀಳಿಗೆಗೆ ಹಬ್ಬದ ನಿಜ ಅರ್ಥವನ್ನು ತಿಳಿಸಲು ಸಹಕಾರಿಯಾಗಿವೆ.
ಶ್ರಾವಣ ಮಾಸದ ಅಷ್ಟಮಿಯಂದು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಹಬ್ಬದ ಆರಂಭವಾಗುತ್ತದೆ.ಮನೆ, ಮಠ ಮಂದಿರಗಳನ್ನು ಹೂ,ತೋರಣ, ರಂಗೋಲಿ, ವರ್ಣಮಯ ಲೈಟುಗಳೊಂದಿಗೆ ಸುಂದರವಾಗಿ ಅಲಂಕರಿಸುತ್ತಾರೆ..

ಬಾಲಕೃಷ್ಣನ ಪುಟ್ಟ ಮೂರ್ತಿಯನ್ನು ಚಂದದ ಅಲಂಕೃತ ತೊಟ್ಟಿಲಿನಲ್ಲಿ ಇರಿಸಿ ಜೋಗುಳ ಹಾಡುತ್ತಾ ತೂಗುತ್ತಾರೆ..ಬಾಲಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಬಣ್ಣದ ರಂಗೋಲಿಯಿಂದ ರಚಿಸಿ, ಅಲಂಕರಿಸಿ ಪೂಜಿಸುತ್ತಾರೆ..ಕನ್ಹಯ್ಯಾಲಾಲ್ ಕೀ ಜೈ.. ಕಿಷನ್ ಕನ್ಹಯ್ಯಾ ಕೀ ಜೈ..ಎಂಬ ಉದ್ಘೋಷದೊಂದಿಗೆ ಹಾಡುತ್ತಾ ಸಂಭ್ರಮಿಸುತ್ತಾರೆ..ಬಹಳಷ್ಟು ಜನರ ಮನೆಗಳಲ್ಲಿಯೂ ಇದೇ ಆಚರಣೆ ನಡೆಯುತ್ತದೆ..ಈ ತೊಟ್ಟಿಲು ತೂಗುವಿಕೆ ನವಜಾತ ಶಿಶುವಿನ ಆದರಣೆಯ ಸಂಕೇತ ಮಾತ್ರವಲ್ಲ, ನಮ್ಮೆಲ್ಲರ ಆಂತರ್ಯದಲ್ಲಿ ಅಡಗಿರುವ ಬಾಲಭಾವವನ್ನು ಮೆರೆಯುವ ರೂಪವೂ ಹೌದು ಎಂಬ ನಂಬಿಕೆ ಇವರದು..ಕೀರ್ತನೆ, ಭಜನೆಗಳೊಂದೆಗೆ ವಿಶೇಷ ಪೂಜೆಗಳನ್ನು ಮಾಡಿ ಐವತ್ತಾರು ಬಗೆಯ ತಿಂಡಿ ತಿನಿಸುಗಳ ನೈವೇದ್ಯವನ್ನು ಅರ್ಪಿಸುತ್ತಾರೆ..ಇದಕ್ಕೆ ಛಪ್ಪನ್ ಭೋಗ್ ಎನ್ನುತ್ತಾರೆ, ಭಗವಾನ್ ಶ್ರೀ ಕೃಷ್ಣನಿಗೆ ಇಷ್ಟೆಲ್ಲ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಅರ್ಪಿಸಿದರೂ ಸಹ, ಮಹಾರಾಷ್ಟ್ರದ “ಗೋಪಾಳ ಕಾಲ” ಎಂಬ ಹೆಸರಿನ ಅತ್ಯಂತ ಸರಳ ರೀತಿಯಿಂದ ತಯಾರಿಸಲ್ಪಡುವ ತಿನಿಸು ಪ್ರಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತದೆ..ಭತ್ತದ ಅರಳು,ಅವಲಕ್ಕಿ,
ಬೆಣ್ಣೆ, ಮೊಸರು, ಹಾಲು, ದಾಳಿಂಬೆ ಬೀಜ, ಉಪ್ಪು, ಇತ್ಯಾದಿಗಳನ್ನು ಬಳಸಿ ತಯಾರಿಸುವ ಈ ‘ಗೋಪಾಳಕಾಲ” ಶ್ರೀಕೃಷ್ಣನ ಅತ್ಯಂತ ಪ್ರಿಯವಾದ ತಿನಿಸು ಎಂದು ನಂಬಲಾಗುತ್ತದೆ..ಇದನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆಲ್ಲ ಹಂಚಲಾಗುತ್ತದೆ.

ಕೃಷ್ಣನ ಗೊಲ್ಲ ಗೆಳೆಯರೆಲ್ಲ ತಮ್ಮ ತಮ್ಮ ಮನೆಗಳಿಂದ ಕದ್ದು ತಂದ ವಿವಿಧ ವಸ್ತುಗಳೆಲ್ಲವನ್ನೂ ಒಂದು ಗಡಿಗೆಯಲ್ಲಿ ಹಾಕಿ, ಗೋಪಿಕೆಯರ ಮನೆಗಳಿಂದ ಕದ್ದು ತಂದ ಹಾಲು, ಮೊಸರು, ಬೆಣ್ಣೆಗಳನ್ನು ಅದಕ್ಕೆ ಸೇರಿಸಿ ಕೃಷ್ಣ ತಾನೇ ತನ್ನ ಕೈಯಾರೆ ಈ ತಿನಿಸನ್ನು ತಯಾರಿಸಿ ಎಲ್ಲ ಗೆಳೆಯರಿಗೆ ಹಂಚಿ ಇದನ್ನು ತಿನ್ನುತ್ತಿದ್ದ ಎಂಬ ನಂಬಿಕೆ ಇಲ್ಲಿದೆ..ಈ ಗೋಪಾಳ ಕಾಲ, ಅನನ್ಯ ಸ್ನೇಹ, ಮುಗ್ಧತೆ, ಸೌಹಾರ್ದತೆಗಳ ಸುಂದರ ಸಂಗಮವಾಗಿದ್ದು, ಒಗ್ಗಟ್ಟು ಹಾಗೂ ಭಾವನಾತ್ಮಕ ಸಂಬಂಧಗಳ ಪ್ರತೀಕವಾಗಿದೆ ಎನ್ನಬಹುದು..
ಈ ಹಬ್ಬದ ಸಂಧರ್ಭದಲ್ಲಿ ತಾಯಂದಿರು ತಮ್ಮ ಮನೆಯಲ್ಲಿನ ಚಿಕ್ಕ ಮಕ್ಕಳಿಗೆ ಶ್ರೀಕೃಷ್ಣ, ರಾಧೆಯರ ವೇಷದಲ್ಲಿ ಅಲಂಕರಿಸಿ ಆನಂದಿಸುತ್ತಾರೆ..ಶಾಲೆಗಳಲ್ಲಿ ರಾಧೆ,ಕೃಷ್ಣ ವೇಷಭೂಷಣದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನಿತ್ತು ಪ್ರೋತ್ಸಾಹ ಕೊಡಲಾಗುತ್ತದೆ..ನಮ್ಮ ಹಿಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ, ಚಿಕ್ಕ ಮಕ್ಕಳಲ್ಲಿ ನಮ್ಮ ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸುವ ಈ ಎಲ್ಲ ಕಾರ್ಯಗಳು ನಿಜಕ್ಕೂ ಅತ್ಯಂತ ಶ್ಲಾಘನೀಯವಾಗಿವೆ..
*****
ಭಾಗ-2

ಮಹಾರಾಷ್ಟ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ ಮರುದಿನ ದಹಿಹಂಡಿ ಉತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ..ಬಹುಶಃ ಭಾರತದ ಮತ್ತಾವುದೇ ರಾಜ್ಯದಲ್ಲಿ ಇಲ್ಲದ ಈ ದಹಿಹಂಡಿ ಉತ್ಸವವನ್ನು ಮುಂಬಯಿ ಮಹಾನಗರದಲ್ಲಿ ಭಾರೀ ಸಂಭ್ರಮದಿಂದ ಆಚರಿಸುತ್ತಾರೆ..
ಶ್ರೀಕೃಷ್ಣನ ಬಾಲ್ಯದ ಆಟೋಟಗಳನ್ನು, ಗೆಳೆಯರ ಒಡನಾಟಗಳನ್ನು ಸ್ಮರಿಸುವ ಈ ಉತ್ಸವವು ಇಂದಿನ ಹೆಚ್ಚು ಹೆಚ್ಚು ನವಯುವಕರನ್ನು ತನ್ನೆಡೆಗೆ ಆಕರ್ಷಿಸಿ, ಸಕಾರಾತ್ಮಕತೆಯ ಭಾವವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಜೊತೆಗೆ ಇಲ್ಲಿಯ ಸರ್ಕಾರ, ಸಂಘ ಸಂಸ್ಥೆಗಳು, ವ್ಯಾಪಾರಿಗಳು, ಜನ ನಾಯಕರೆಲ್ಲರೂ ನವಪೀಳಿಗೆಗೆ ಬೆಂಬಲಿಸಿ, ಪ್ರೋತ್ಸಾಹಿಸಿ ತರಬೇತಿ ನೀಡಲು ಮುಂದೆ ಬರುತ್ತಾರೆ. ಹಬ್ಬಕ್ಕಿಂತ ೩-೪ ತಿಂಗಳು ಮೊದಲಿನಿಂದಲೇ ವಿವಿಧ ಯುವ ಮಂಡಳಿ, ಗರಡಿ ಮನೆಗಳ ಯುವಕರು ತರಬೇತಿ, ಅಭ್ಯಾಸಗಳನ್ನು ಆರಂಭಿಸುತ್ತಾರೆ. ಶಾಲೆ ಕಾಲೇಜು,ಕಾರ್ಖಾನೆ,ವ್ಯಾಪಾರ
ಕಛೇರಿಗಳಲ್ಲಿನ ತಮ್ಮ ನಿತ್ಯದ ಕರ್ತವ್ಯಗಳನ್ನು ಮುಗಿಸಿ ರಾತ್ರಿ ಹತ್ತರ ನಂತರ ಒಂದೆಡೆ ಸೇರಿ ಮಾನವ ಪಿರಮಿಡ್ ರಚನೆಯ ಅಭ್ಯಾಸದಲ್ಲಿ (ಪ್ರಾಕ್ಟೀಸ್) ತೊಡಗುತ್ತಾರೆ..
ಪಿರಮಿಡ್ ಹತ್ತುವಾಗ ಕೆಳಗೆ ಬಿದ್ದರೂ ಪೆಟ್ಟಾಗಬಾರದೆಂಬ ಉದ್ದೇಶದಿಂದ ಹಲವಾರು ಗುಂಪಿನ ಯುವಕರು ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಪ್ರಾಕ್ಟೀಸ್ ಮಾಡುತ್ತಾರೆ.

ನಗರದ ದೊಡ್ಡ ದೊಡ್ಡ ಗ್ರೌಂಡ್ ಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ವಠಾರದ ಆವರಣಗಳಲ್ಲಿ ಚಿಕ್ಕ, ದೊಡ್ಡ, ಅತಿ ದೊಡ್ಡ ದಹಿಹಂಡಿ ಉತ್ಸವಗಳನ್ನು ಆಯೋಜಿಸಲಾಗುತ್ತದೆ..
ಸಾಧಾರಣ ೧೫ ರಿಂದ ೨೦ ಅಡಿಗಳ ಎತ್ತರದಲ್ಲಿ ಬಲವಾದ ಹಗ್ಗದಿಂದ ಮಣ್ಣಿನ ಮಡಕೆಯನ್ನು ಕಟ್ಟಿ ತೂಗಿ ಇಡಲಾಗುತ್ತದೆ, ಹಾಲು,ಮೊಸರು, ಬೆಣ್ಣೆಗಳಿಂದ ತುಂಬಿದ ಈ ಅಲಂಕೃತ ಗಡಿಗೆಯನ್ನು ಒಡೆಯಲು ೫೦-೬೦ ಯುವಕರ ಗುಂಪುಗಳು ಸಜ್ಜಾಗಿ ನಿಲ್ಲುತ್ತಾರೆ..ಹಂತ ಹಂತವಾಗಿ ಪಿರಮಿಡ್ ರಚಿಸುತ್ತ, ಸಮತೋಲನವನ್ನು ಕಾಯುತ್ತ ಮೇಲೇರಿ ಮೊಸರು ಗಡಿಗೆಯನ್ನು ಒಡೆಯುತ್ತಾರೆ..ಒಂದೇ ಬಾರಿಗೆ ಯಶಸ್ವಿಯಾಗದಿದ್ದರೆ ಮತ್ತೊಂದು ಅವಕಾಶವನ್ನು ನೀಡಲಾಗುತ್ತದೆ.
ಪ್ರಮುಖ ಹಂತವಾದ ಅಡಿಪಾಯದಲ್ಲಿ ದೈಹಿಕವಾಗಿ ಬಲಿಷ್ಠರಾದ ಯುವಕರು ನಿಲ್ಲುತ್ತಾರೆ..ಇವರ ಭುಜದ ಮೇಲಿನಿಂದ ಮಧ್ಯಮ ದೈಹಿಕ ಶಕ್ತಿಯ ಯುವಕರು ಹತ್ತಿ ನಿಲ್ಲುತ್ತಾರೆ.ಮತ್ತಷ್ಟು ಯುವಕರು ಇವರ ಭುಜದ ಮೇಲೇರುತ್ತಾರೆ.
ಎಲ್ಲಕ್ಕಿಂತ ಮೇಲಿನ ಹಂತಕ್ಕಾಗಿ ೮-೧೦ ವಯಸ್ಸಿನ ಕೃಷ್ಣನ ವೇಷಧಾರಿ ಬಾಲಕನನ್ನು ಆರಿಸಿರುತ್ತಾರೆ..ಇವನು ಸರಸರನೆ ಮೇಲೇರಿ ತುತ್ತತುದಿಯಲ್ಲಿ ಕಟ್ಟಿ ಇಟ್ಟ ಗಡಿಗೆಯನ್ನು ತನ್ನ ತಲೆಯಿಂದ ಅಥವಾ ತೆಂಗಿನಕಾಯಿಯಿಂದ ಒಡೆಯುತ್ತಾನೆ..ಹೀಗೆಯೇ ೮-೯ ಹಂತಗಳ ಪಿರಮಿಡ್ ಅನ್ನು ರಚಿಸುತ್ತಾರೆ.ಈ ಸಮಯದಲ್ಲಿ ಅಲ್ಲಿ ನೆರೆದ ಜನರ ಸಂಭ್ರಮ, ಕೂಗಾಟ, ಹಾಡು, ಕುಣಿತಗಳು ತಾರಕಕ್ಕೇರಿರುತ್ತವೆ..
ಯಶಸ್ವಿಯಾಗಿ ಗಡಿಗೆಯನ್ನು ಒಡೆದ ಗುಂಪಿಗೆ ಆಯೋಜಕರಿಂದ ಸಾಕಷ್ಟು ಬಹುಮಾನಗಳು ಸಿಗುತ್ತವೆ.
ಒಂದು ಗುಂಪಿಗೆ ಗಡಿಗೆ ಒಡೆಯಲಾಗದಿದ್ದರೆ ಮತ್ತೊಂದು, ಮಗದೊಂದು ಗುಂಪಿನ ಯುವಕರು ಪ್ರಯತ್ನಿಸುತ್ತಾರೆ..ಬೆಳಗಿನಿಂದ ಸಂಜೆಯವರೆಗೆ ಟ್ರಕ್ ಗಳಲ್ಲಿ ಈ ಗುಂಪಿನ ಯುವಕರು, ಗೋವಿಂದಾ ಆಲಾ ರೇ..ಆಲಾ..
ಎಂದು ಹಾಡುತ್ತ, ಕುಣಿಯುತ್ತ, ಪೂರ್ಣ ಮುಂಬಯಿನ ಗಲ್ಲಿ ಗಲ್ಲಿಗಳಲ್ಲಿ ತಿರುಗುತ್ತಾರೆ. ಹಳೆ ಮುಂಬಯಿನ ಕೆಲವು ಭಾಗಗಳಲ್ಲಿ ಅತ್ಯಂತ ಎತ್ತರದಲ್ಲಿ ಗಡಿಗೆ ಕಟ್ಟಿ ರೂ ೨೫ ಲಕ್ಷಗಳವರೆಗೆ ಬಹುಮಾನ ಇಟ್ಟಿರುತ್ತಾರೆ..ನಡುವಿನ ವಿರಾಮ ಸಮಯದಲ್ಲಿ ಸಂಗೀತ, ಸಾಂಪ್ರದಾಯಿಕ ಲಾವಣಿ ನೃತ್ಯಗಳನ್ನು ಏರ್ಪಡಿಸುತ್ತಾರೆ.ಮರಾಠಿ ಚಿತ್ರರಂಗದ ಸುಪ್ರಸಿದ್ಧ ನಟ ನಟಿಯರು ಉತ್ಸಾಹದಿಂದ ಇದರಲ್ಲಿ ಭಾಗವಹಿಸುವುದೊಂದು ದೊಡ್ಡ ಆಕರ್ಷಣೆ..

ಪ್ರತಿ ವರ್ಷ ಒಂದೊಂದು ಹಂತವನ್ನು ಹೆಚ್ಚಿಸುವ ಗುರಿ ಈ ಯುವಕರದು..ಈ ಪಿರಮಿಡ್ ರಚನೆ ನಿಜಕ್ಕೂ ಅತ್ಯಂತ ಕಠಿಣವಾಗಿದೆ.. ಉತ್ತಮ ದೇಹಬಲ, ಸಕಾರಾತ್ಮಕ ಕ್ರೀಡಾ ಮನೋಭಾವ, ನಿಯಮಿತ ವ್ಯಾಯಾಮ, ಆತ್ಮವಿಶ್ವಾಸ, ಮಹತ್ವದ್ದಾಗಿದೆ..ಇಷ್ಟಲ್ಲದೆ ಒಗ್ಗಟ್ಟು, ಪರಸ್ಪರ ನಂಬಿಕೆ ವಿಶ್ವಾಸಗಳ ಸಮನ್ವಯ, ಸಾಮರ್ಥ್ಯ ಪ್ರದರ್ಶನ ಎಲ್ಲವೂ ಮುಖ್ಯವಾಗಿವೆ..
ಈ ಪಿರಮಿಡ್ ಕಟ್ಟುವಾಗ ಮೇಲಿಂದ ಬೀಳುವವರನ್ನ ನೆಲ ಮುಟ್ಟದಂತೆ, ಪೆಟ್ಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತ ಗುಂಪು ಬೇರೆ ಇರುತ್ತದೆ..
ಬಿದ್ದವರಿಗೆ ಪ್ರಥಮೋಪಚಾರ, ಡಾಕ್ಟರ್ ಗಳ ವ್ಯವಸ್ಥೆಯನ್ನೂ ಮಾಡಿರುತ್ತಾರೆ.
ಮಹಾರಾಷ್ಟ್ರದ ಈ ವಿಶೇಷ ಉತ್ಸವವನ್ನು ರಾಜ್ಯದ ಪ್ರತಿ ಶಾಲೆ, ಕಾಲೇಜುಗಳಲ್ಲಿ, ಸೊಸೈಟಿಯ ಆವರಣದಲ್ಲಿ ಆಚರಿಸಲಾಗುತ್ತದೆ..
ಹಲವಾರು ಹಿರಿಯ ಪೀಳಿಗೆಯ ಸಂಘ ಸಂಸ್ಥೆಗಳು ತಮ್ಮೀ ಸಾಂಪ್ರದಾಯಿಕ ಉತ್ಸವವನ್ನು ಇನ್ನೂ ಬೆಳೆಸುವ ಪ್ರಯತ್ನದಲ್ಲಿರುವುದನ್ನು ನೋಡಿದರೆ ಈ ಜನರಿಗೆ ತಮ್ಮ ಸಂಸ್ಕೃತಿಯ ಮೇಲೆ ಅವರಿಗಿರುವ ಪ್ರೀತಿ, ಆದರ,
ಅಭಿಮಾನಗಳ ಅರಿವಾಗುತ್ತದೆ..
ದಹಿಹಂಡಿ ಉತ್ಸವದ ಸಂದರ್ಭದಲ್ಲಿ ಮುಂಬಯಿ ಪೋಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ..ಬಿಸಿಲು,ಮಳೆಗಳ ಪರಿವೆ ಇಲ್ಲದೆ,ಹಗಲಿರುಳೆನ್ನದೆ ಭದ್ರತಾ ವ್ಯವಸ್ಥೆ, ವಾಹನ ಸಂಚಾರ ನಿಯಂತ್ರಣ, ಜಾತೀಯತೆ ಹೆಸರಿನಲ್ಲಿ ನಿರ್ಮಾಣವಾಗಬಹುದಾದ ಬಿಕ್ಕಟ್ಟಿನ ಪರಿಸ್ಥಿತಿಗಳ ನಿರ್ವಹಣೆ, ಮಹಿಳಾ, ಮಕ್ಕಳ ಸುರಕ್ಷೆ, ಹತ್ತು ಹಲವು ಕಾನೂನು ಬಾಹಿರ ಅಪರಾಧಗಳ ನಿಯಂತ್ರಣ, ಹಲವು ವಿಧದಲ್ಲಿ ಮಾರ್ಗದರ್ಶನ ಹೀಗೆ ಹತ್ತಾರು ರೀತಿಯಲ್ಲಿ ಮುಂಬಯಿ ಪೋಲೀಸರು ದಕ್ಷತೆಯಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ..ದಹಿಹಂಡಿ ಹಬ್ಬದ ದಿನ ಬೆಳಗಿನ ಜಾವ ೪ ಕ್ಕೆ ಆರಂಭವಾಗುವ ಪೋಲಿಸ್ ಬಂದೋಬಸ್ತ್ ಡ್ಯೂಟಿ ರಾತ್ರಿ ಹನ್ನೆರಡಾದರೂ ಮುಗಿಯುವುದಿಲ್ಲ..
ಈ ಕರ್ತವ್ಯನಿಷ್ಠ ಪರಿಶ್ರಮಿ ಮುಂಬಯಿ ಪೋಲೀಸರಿಗೊಂದು ದೊಡ್ಡ ಸಲಾಂ..
ಮಧು ವಸ್ತ್ರದ
ಮುಂಬಯಿ..
