
ಧಾರಾವಾಹಿ77
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಹಿರಿಯ ಮಗಳಿಗೆ ವರಾನ್ವೇಷಣೆ

ತಿಂಗಳಿಗೊಮ್ಮೆ ಸಂಬಳ ಪಡೆಯಲು ಸುಮತಿ ಎಸ್ಟೇಟಿನ ಮುಖ್ಯ ಕಚೇರಿಗೆ ಹೋಗುತ್ತಿದ್ದಳು. ಹಾಗೆಯೇ ಈ ಬಾರಿಯೂ ಹೋದಾಗ…” ಏನು ಸುಮತಿ? ಶಾಲೆಯ ಅವಧಿಯಲ್ಲಿ ನೀವು ನಿದ್ರೆ ಮಾಡುತ್ತಾ ಇದ್ದಿರಂತೆ! ನಿಮಗಾಗಿ ಶಾಲೆಯನ್ನು ಪ್ರಾರಂಭಿಸಿ ಮಾಲೀಕರು ಸಂಬಳ ಕೊಡುತ್ತಿರುವುದು ನಿದ್ರೆ ಮಾಡಲು ಅಲ್ಲ….ಸರಿಯಾಗಿ ಶಾಲೆ ನಡೆಸಿ ಸಂಬಳ ಪಡೆಯಿರಿ”…. ಎಂದು ಮ್ಯಾನೇಜರ್ ಹೇಳಿದಾಗ ಸುಮತಿಯ ಮನಸ್ಸಿಗೆ ಬಹಳ ನೋವಾಯಿತು. ತಾನು ನಿದ್ರೆ ಮಾಡಿದ್ದು ಶಾಲೆಯ ಅವಧಿಯಲ್ಲಿ ಅಲ್ಲ ಎನ್ನುವುದು ಅವಳಿಗೆ ತಿಳಿದಿತ್ತು ಆದರೂ ಮರು ಮಾತನಾಡದೇ ಬರಿ… “ಹೂಂ”…ಎಂದಷ್ಟೇ ಹೇಳಿ ಸಂಬಳವನ್ನು ಪಡೆದು ಮನೆಗೆ ಹೋದಳು. ತನ್ನ ಅಸಹಾಯಕ ಪರಿಸ್ಥಿತಿಯನ್ನು ನೆನೆದು ಅತ್ತುಬಿಟ್ಟಳು. ತಾನೇನಾದರೂ ಎದುರು ಮಾತನಾಡಿದರೆ ಎಲ್ಲಿ ತನ್ನ ಕೆಲಸ ಕೈ ಬಿಟ್ಟು ಹೋಗುವುದೋ ಎನ್ನುವ ಭಯದಿಂದಾಗಿ ಅವಳು ಮೌನವಾಗಿ ಇದ್ದುಬಿಟ್ಟಳು. ಫಿಸಿಷಿಯನ್ ಸೂಚಿಸಿದ ಸಮಯ ಬಂದಿತ್ತು. ಅವರು ಬರೆದುಕೊಟ್ಟ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡಿದ್ದಳು. ಹಾಗಾಗಿ ಅವರು ಕೊಟ್ಟ ಸ್ಟ್ರಿಪ್ ಮೂಲಕ ಮೂತ್ರ ಪರೀಕ್ಷೆ ಮನೆಯಲ್ಲಿಯೇ ಮಾಡಿ ಮೂತ್ರದಲ್ಲಿ ಸಕ್ಕರೆಯ ಅಂಶ ಸ್ವಲ್ಪ ತಗ್ಗಿರುವುದನ್ನು ಮನವರಿಕೆ ಮಾಡಿಕೊಂಡು ಸಕಲೇಶಪುರದ ಆಸ್ಪತ್ರೆಗೆ ಹೋದಳು. ಅಲ್ಲಿನ ಪ್ರಯೋಗಾಲಯದಲ್ಲಿ ರಕ್ತ ಹಾಗೂ ಮೂತ್ರದ ಮಾದರಿಯ ಪರೀಕ್ಷೆಗಳನ್ನು ಮಾಡಿಸಿ ಅದರ ಫಲಿತಾಂಶವನ್ನು ಪಡೆದು ಅಷ್ಟುದ್ದದ ಸರತಿಯಲ್ಲಿ ನಿಂತು ಫಿಸಿಷಿಯನ್ ರನ್ನು ಭೇಟಿ ಮಾಡಿದಳು. ಈ ಬಾರಿ ಸಕ್ಕರೆಯ ಅಂಶ ಬಹಳಮಟ್ಟಿಗೆ ತಗ್ಗಿರುವುದನ್ನು ಅರಿತ ವೈದ್ಯರು….” ಸುಮತಿ ನೀವಿನ್ನು ದಂತ ವೈದ್ಯರ ಬಳಿಗೆ ಹೋಗಿ ನಿಶ್ಚಿಂತೆಯಿಂದ ಹಲ್ಲಿಗೆ ಚಿಕಿತ್ಸೆ ಪಡೆಯಬಹುದು”….ಎಂದರು.
“ಆದರೆ ನಾನು ಸೂಚಿಸಿದಂತೆ ಆಹಾರಕ್ರಮ ಅನುಸರಿಸಿ ಮಾತ್ರೆಗಳನ್ನು ತೆಗೆದುಕೊಳ್ಳಲೇಬೇಕು….ಏಕೆಂದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೇ ಹೊರತು ಸಂಪೂರ್ಣವಾಗಿ ಅದರಿಂದ ಗುಣಮುಖರಾಗಲು ಸಾಧ್ಯವಿಲ್ಲ”….ಎಂದು ನೆನಪಿಸಿದರು….”ಸರಿ ಸರ್ ನೀವು ಹೇಳಿದಂತೆ ಪಾಲಿಸುತ್ತೇನೆ”…ಎಂದು ಹೇಳುತ್ತಾ ಅಲ್ಲಿಂದ ದಂತವೈದ್ಯರಲ್ಲಿಗೆ ಹೋದಳು. ಅವರು ವೈದ್ಯರ ಶಿಫಾರಸ್ಸು ಹಾಗೂ ಪ್ರಯೋಗಾಲಯದ ವರದಿಗಳನ್ನು ಓದಿ ಹಲ್ಲಿನ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಪ್ರತೀ ಹದಿನೈದು ದಿನಗಳಿಗೊಮ್ಮೆ ಎರಡೆರಡು ಹಲ್ಲುಗಳಂತೆ ಕಿತ್ತರು. ಆದರೆ ಆರೋಗ್ಯಕರ ಹಲ್ಲುಗಳನ್ನು ಕೂಡಾ ಕೀಳದಿದ್ದರೆ ಕೃತಕ ದಂತಪಂಕ್ತಿಗಳನ್ನು ಜೋಡಿಸುವುದು ಕಷ್ಟಕರವಾಗುತ್ತಿತ್ತು. ಹೀಗೆಯೇ ಬಿಟ್ಟರೆ ಆಹಾರವನ್ನು ಸೇವಿಸುವುದು ಕೂಡಾ ಕಷ್ಟವಾಗುತ್ತಿತ್ತು. ಹಾಗಾಗಿ…”ಸುಮತಿ ನಿಮ್ಮ ಆರೋಗ್ಯಕರ ಹಲ್ಲುಗಳನ್ನು ಕಿತ್ತು ತೆಗೆಯದೇ ಬೇರೆ ದಾರಿಯಿಲ್ಲ….ಕೃತಕ ದಂತಪಂಕ್ತಿಯನ್ನು ಜೋಡಿಸಿ ಕೊಡಬೇಕೆಂದರೆ ಹೀಗೆ ಮಾಡುವುದು ಅನಿವಾರ್ಯ. ಆದರೆ ಹಾಗೆ ಮಾಡುವುದರಿಂದ ನಿಮ್ಮ ಕಣ್ಣಿಗೆ ತೊಂದರೆ ಆಗಬಹುದು ದೃಷ್ಟಿ ಸ್ವಲ್ಪ ಮಂಜಾಗಬಹುದು ಎಂದರು”…. ಏನೇ ಆದರೂ ಈಗ ಏನೂ ಮಾಡುವ ಹಾಗೆ ಇರಲಿಲ್ಲ. ಆಹಾರವನ್ನು ಜಗಿದು ತಿನ್ನಬೇಕಾದ ದವಡೆಹಲ್ಲುಗಳೇ ಸಂಪೂರ್ಣವಾಗಿ ಇಲ್ಲದಂತಾಗಿತ್ತು. ಹಾಗಾಗಿ ದಂತ ವೈದ್ಯರು ಹೇಳಿದಂತೆ ಆರೋಗ್ಯವಂತ ಹಲ್ಲುಗಳನ್ನು ತೆಗೆಸುವ ನಿರ್ಧಾರಕ್ಕೆ ಬಂದಳು. ಅವಳ ತೀರ್ಮಾನವನ್ನು ಅರಿತ ವೈದ್ಯರು ಎಲ್ಲಾ ಹಲ್ಲುಗಳನ್ನು ಕಿತ್ತರು. ಕೆಲವು ದಿನಗಳ ನಂತರ ದಂತಪಂಕ್ತಿಯನ್ನು ಜೋಡಣೆ ಮಾಡಲೆಂದು ಅಳತೆ ತೆಗೆದು ಹೊಸ ದಂತ ಪಂಕ್ತಿಯ ಸೆಟ್ ಒಂದನ್ನು ತಯಾರು ಮಾಡಿಸಿ ಕೊಟ್ಟರು. ಹಲ್ಲುಗಳನ್ನೆಲ್ಲಾ ತೆಗೆಸಿದ ನಂತರ ಪೂರ್ತಿ ಬೊಚ್ಚು ಬಾಯಿಯಾಗಿ ವಯಸ್ಸಾದಂತೆ ಕಾಣುತ್ತಿದ್ದಳು ಸುಮತಿ. ಆದರೂ ಅದನ್ನು ತನಗೆ ವರವೆಂಬಂತೆ ಸ್ವೀಕರಿಸಿದಳು.
ಏಕೆಂದರೆ ತನ್ನನ್ನು ನುಂಗುವಂತೆ ನೋಡುತ್ತಿದ್ದ ಕಾಮುಕರ ದೃಷ್ಟಿಯಿಂದ ತಾನು ಪಾರಾಗಬಹುದು. ತನಗೆ ವಯಸ್ಸಾಗಿದೆ ಎಂದು ಯಾರೂ ತನ್ನ ಕಡೆಗೆ ಆಕರ್ಷಿತರಾಗುವುದಿಲ್ಲ ಎಂಬುದು ಅವಳ ವಿಚಾರವಾಗಿತ್ತು. ತನಗೆ ಪತಿ ಇಲ್ಲದ್ದನ್ನು ತಿಳಿದು ಹಲವರು ಉಪದ್ರವ ನೀಡುತ್ತಿದ್ದರು. ಇದರಿಂದ ಬೇಸತ್ತ ಸುಮತಿಗೆ ಇದೊಂದು ವರವಾಗಿ ಪರಿಣಮಿಸಿದ್ದು ಸುಳ್ಳಲ್ಲ. ಮಧುಮೇಹದ ಏರುಪೇರುಗಳು ದೇಹದಲ್ಲಿ ಆಗಾಗ ಆಗುತ್ತಿತ್ತು. ಕೆಲವೊಮ್ಮೆ ಎಲ್ಲವೂ ಸರಿಯಿದ್ದಂತೆ ಕಂಡರೂ ಮಧುಮೇಹ ಉಲ್ಬಣಗೊಳ್ಳುತ್ತಿತ್ತು. ಆಯಾಸದಿಂದ ಹೈರಾಣಗುತ್ತಿದ್ದಳು.
ಇದರ ನಡುವೆ ತನ್ನ ಹಿರಿಯ ಮಗಳ ವಿವಾಹವನ್ನು ಮಾಡಲು ತೀರ್ಮಾನಿಸಿದಳು. ಹದಿಹರೆಯಕ್ಕೆ ಬಂದ ಮಗಳನ್ನು ಎಷ್ಟು ದಿನವೆಂದು ನಾನು ಕಾಪಾಡಿಕೊಂಡು ನೋಡಿಕೊಳ್ಳಲು ಸಾಧ್ಯ? ಕಾಲೇಜ್ ಗೆ ಕಳುಹಿಸಿ ಅವಳ ವಿಧ್ಯಾಭ್ಯಾಸ ಮುಂದುವರೆಸಲು ಸುಮತಿಗೆ ಸಾಧ್ಯವಿರಲಿಲ್ಲ. ಹಾಗಾಗಿ ವರಾನ್ವೇಷಣೆಗೆ ತೊಡಗಿದಳು. ಒಬ್ಬ ಉತ್ತಮ ವರನು ದೊರೆತ. ಹತ್ತಿರದ ಬಂಧು ಮಿತ್ರರನ್ನು ಆಮಂತ್ರಿಸಿ ಅವರ ಸಮ್ಮುಖದಲ್ಲಿ ಸರಳವಾಗಿ ಹಿರಿಯ ಮಗಳ ಮದುವೆಯನ್ನು ಮಾಡಿದಳು. ಈಗ ಸುಮತಿ ಮತ್ತು ಕಿರಿಯ ಮಗಳು ಇಬ್ಬರೇ. ನಡುವೆ ಶಾಲೆಯ ರಜೆ ಅವಧಿಯಲ್ಲಿ ಅನಾಥಾಶ್ರಮದಲ್ಲಿ ಬಿಟ್ಟಿದ್ದ ಇಬ್ಬರು ಮಕ್ಕಳು ಮನೆಗೆ ಬರುತ್ತಿದ್ದರು. ಅವರು ಮನೆಗೆ ಬಂದಾಗ ಸುಮತಿಗೆ ಸಂಭ್ರಮ. ಮಕ್ಕಳಿಗೆ ತನ್ನಿಂದ ಸಾಧ್ಯವಾದಷ್ಟು ರುಚಿಕರ ತಿಂಡಿಗಳನ್ನು ಮಾಡಿ ತಿನಿಸುತ್ತಿದ್ದಳು. ತನಗೆ ಮಧುಮೇಹ ಇರುವುದರಿಂದ ಆಹಾರ ಕ್ರಮವನ್ನು ಅನುಸರಿಸಬೇಕಿತ್ತು. ಸೊಪ್ಪು ತರಕಾರಿಗಳನ್ನು ಮನೆಯ ಹಿತ್ತಲಲ್ಲಿಯೇ ಬೆಳೆಯುತ್ತಿದ್ದರಿಂದ ಉತ್ತಮ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಳು. ಆದರೂ ಅವಳಿಗೆ ಗೋಧಿ ಮತ್ತು ರಾಗಿಯ ಆಹಾರ ಪದಾರ್ಥಗಳು ಹೊಂದುತ್ತಿರಲಿಲ್ಲ. ಹಾಗಾಗಿ ಹೆಚ್ಚಾಗಿ ಅನ್ನವನ್ನೇ ಬಸಿದು ತಿನ್ನುತ್ತಿದ್ದಳು.
ನಡುವೆ ಎಂದಾದರೂ ಗೋಧಿ ಹಾಗೂ ರಾಗಿಯ ಆಹಾರವನ್ನು ತಿಂದರೆ ಹೊಟ್ಟೆಗೆ ತೊಂದರೆಯಾಗುತ್ತಿತ್ತು. ಆದರೂ ಗೋಧಿ ಸ್ವಲ್ಪ ಹೊಂದಿಕೆ ಆಗುತ್ತಿದ್ದ ಕಾರಣ ಚಪಾತಿ ಮಾಡಿ ತರಕಾರಿ ಪಲ್ಯದೊಂದಿಗೆ ತಿನ್ನುತ್ತಿದ್ದಳು. ಹೀಗಾಗಿ ಅವಳ ರಕ್ತ ಹಾಗೂ ಮೂತ್ರದಲ್ಲಿ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಮಾತ್ರೆಗಳನ್ನು ತೆಗೆದುಕೊಂಡರೂ ಅಂತಹ ಪರಿಣಾಮಕಾರಿಯಾಗಿ ಇರುತ್ತಿರಲಿಲ್ಲ. ಹಾಗಾಗಿ ವೈದ್ಯರು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಲು ಹೇಳಿದರು. ಇನ್ಸುಲಿನ್ ಚುಚ್ಚುಮದ್ದಿನ ಬೆಲೆ ಅಧಿಕವಾಗಿದ್ದರಿಂದ ಅದನ್ನು ಅವಳು ಖರೀದಿ ಮಾಡುವಂತೆ ಇರಲಿಲ್ಲ. ಆಗ ವಿಧಿ ಇಲ್ಲದೆ ಮಾಲೀಕರನ್ನು ಭೇಟಿ ಮಾಡಿ ತನ್ನ ಸಂಕಷ್ಟವನ್ನು ಹೇಳಿಕೊಂಡಳು. ಅವರು ಅದರ ಬಗ್ಗೆ ಆಲೋಚನೆ ಮಾಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ ಅವರ ಮಗ ಸುಮತಿಯು ಶಾಲೆ ನಡೆಸುತ್ತಿದ್ದ ತೋಟದ ಬಂಗಲೆಯಲ್ಲಿ ಉಳಿದುಕೊಳ್ಳಲು ಆಗಾಗ ಬರುತ್ತಿದ್ದರು. ಕಾರ್ ಶೆಡ್ ನಲ್ಲಿ ಸುಮತಿ ನಡೆಸುತ್ತಿದ್ದ ಶಾಲೆಯ ಬಗ್ಗೆ ತಿಳಿದುಕೊಂಡರು.
ಅಪ್ಪ ತೆಗೆದುಕೊಂಡ ತೀರ್ಮಾನದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಕೆಲವೊಮ್ಮೆ ಸುಮತಿ ಮಕ್ಕಳಿಗೆ ಪಾಠ ಮಾಡುವುದನ್ನು ಗಮನಿಸುತ್ತಿದ್ದರು. ತಮ್ಮ ತೋಟದ ಕೂಲಿ ಕಾರ್ಮಿಕರ ಮಕ್ಕಳು ಅಕ್ಷರಭ್ಯಾಸ ಮಾಡುತ್ತಿರುವುದನ್ನು ತಿಳಿದು ಸಂತೋಷಗೊಂಡರು. ಅಲ್ಲಿ ಅಕ್ಷರ ಅಭ್ಯಾಸ ಮಾಡಿದ ಮಕ್ಕಳನ್ನು ಅದೇ ಊರಿನ ಗ್ರಾಮ ಪಂಚಾಯಿತಿಗೆ ಸೇರಿದ ಪ್ರಾಥಮಿಕ ಶಾಲೆಗೆ ಸೇರಿಸಿಕೊಳ್ಳುವಂತೆ ತೋಟದ ಮಾಲೀಕರು ಮನವಿ ಮಾಡಿದ್ದರು. ಅದು ಸರ್ಕಾರಿ ಶಾಲೆ ಆದಕಾರಣ ಮಕ್ಕಳನ್ನು ಅಲ್ಲಿಗೆ ದಾಖಲಾತಿ ಮಾಡಿಕೊಳ್ಳುತ್ತಿದ್ದರು. ಈ ಎಲ್ಲಾ ಮಕ್ಕಳ ಜೊತೆಗೆ ತನ್ನ ಕಿರಿಯ ಮಗಳನ್ನೂ ಅದೇ ಶಾಲೆಗೆ ಸೇರಿಸಿದಳು ಸುಮತಿ. ಆ ಶಾಲೆಯಲ್ಲಿ ಅವಳ ಮಗಳ ವಿದ್ಯಾಭ್ಯಾಸ ಪ್ರಾರಂಭವಾಯಿತು.
