ಅಂಕಣ ಸಂಗಾತಿ
ಸಿನಿ ಸಂಗಾತಿ
ಸಿನಿಮಾ -ಆಕ್ಟ್ 1978
ಬಸಿರ ಒಡಲಿನ ಆಕ್ರಂದನ…
ಅದೊಂದು ಸರ್ಕಾರಿ ಕಚೇರಿ. ಒಳಗೆ ಹೊರಗೆ ಉದ್ವಿಗ್ನ ಸ್ಥಿತಿ. ಹೊರಗೆ ಕಮಾಂಡೋಗಳು, ಪೊಲೀಸರು ಇದ್ದಾರೆ. ಇನ್ಸ್ಪೆಕ್ಟರ್ ಮುಂದೇನು ಎಂದು ಯೋಚಿಸಿದರೆ, ಕಮಾಂಡೋಗಳು ಕಚೇರಿಯನ್ನು ಸುತ್ತುವರೆದು ಒಳಗಿನವರ ಮೇಲೆ ದಾಳಿ ಮಾಡಲು ಬಂದೂಕಿನ ಗುರಿ ಹಿಡಿದು ನಿಂತಿದ್ದಾರೆ. ಮಾಧ್ಯಮದವರು ನೇರ ಪ್ರಸಾರದಲ್ಲಿ ಇದನ್ನೆಲ್ಲ ತೋರಿಸುತ್ತ, ನಾ ಮುಂದು ತಾ ಮುಂದು ಎಂದು ವರದಿ ಮಾಡುತ್ತಿದ್ದಾರೆ.
ಹಾಗಿದ್ದರೆ ನಡೆದಿರುವುದು ಏನು? ಇಲ್ಲಿ ಸರ್ಕಾರಿ ಕಚೇರಿಯ ಹೈಜಾಕ್ ಆಗಿದೆ. ಹೈಜಾಕ್ ಮಾಡಿರುವವರು ನಕ್ಸಲರೇ? ದೊಡ್ಡ ಭಯೋತ್ಪಾದಕರೆ?!.. ಅಲ್ಲವೇ ಅಲ್ಲ!!
ಒಳಗೆ ಈಗಲೋ ಆಗಲೋ ಹೊರಬರಲು ತವಕರಿಸುತ್ತಿರುವ ಕಂದನನ್ನು ಹೊಟ್ಟೆಯಲ್ಲಿ ಹೊತ್ತು ಸೊಂಟಕ್ಕೊಂದು ಬಾಂಬ್ ತೊಟ್ಟು, ಕೈಯಲ್ಲಿ ಪಿಸ್ತೂಲು ಹಿಡಿದಾಕೆ ಈ ಕೃತ್ಯದ ರೂವಾರಿಯಾದರೆ, ಕೃಷ ಶರೀರದ ವಯಸ್ಸಾದ ಮತ್ತೊಬ್ಬ ಮುದುಕ ಅವಳಿಗೆ ಈ ಕೃತ್ಯಕ್ಕಾಗಿ ಸಾಥ್ ನೀಡುವವ.
ದೊಡ್ಡ ದೊಡ್ಡ ದಾಗಿ ಕಣ್ಣುಗಳನ್ನು ಬಿಡುತ್ತಾ, ರೌದ್ರ ರೂಪ ತಾಳಿ ಅಬ್ಬರಿಸುತ್ತ ರೌಡಿಗಳನ್ನು ಚಂಡಾಡುವ ನಾಯಕಿಯರನ್ನು ನಾವು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಆಕ್ಟ್ 1978 ಸಿನಿಮಾದ ನಾಯಕಿ ಗೀತಾಳದ್ದು ಭಿನ್ನ ವ್ಯಕ್ತಿತ್ವ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ರೆಬೆಲ್ ನಾಯಕಿ ಇವಳು. ಹೆಣ್ಣೊಬ್ಬಳು ಸಮಾಜದ ವ್ಯವಸ್ಥೆಯ ಭಾಗವಾಗಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಈ ಸಿನಿಮಾದ ತಿರುಳು. ಈ ಹೋರಾಟಕ್ಕಾಗಿ ಅವಳು ಆರಿಸಿಕೊಂಡಿರುವ ಮಾರ್ಗವು ವಿಭಿನ್ನ.
ಇಡೀ ಸಿನಿಮಾ ಒಂದು ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ರೋಚಕ ಕಥನ. ತನ್ನ ರೈತ ತಂದೆಯ ಸಾವಿನ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ನಿತ್ಯವೂ ಅಲೆದಾಡಿ ರೋಸಿ ಹೋಗುವ ನಾಯಕಿ ತನ್ನಂತೆ ಪರಿಹಾರಕ್ಕಾಗಿ ಹೈರಾಣಾದ ಮುದುಕರೊಬ್ಬರ ಜೊತೆಗೂಡಿ ಸರ್ಕಾರಿ ಕಚೇರಿ ಹೈಜಾಕ್ ಮಾಡುತ್ತಾಳೆ. ಅಲ್ಲಿರುವ ನೌಕರರನ್ನು ಸೆರೆ ಹಿಡಿಯುತ್ತಾಳೆ. ಇಡಿ ಚಿತ್ರದ ಜೀವಾಳವಾದ ಈಕೆ ಎಲ್ಲರಲ್ಲಿ ಉದ್ವೇಗ ಉಂಟು ಮಾಡಿ ಕೆಲಸ ಸಾಧಿಸುವಳೆ ? ಎಂಬ ಪ್ರಶ್ನೆಗೆ ಇದು ಸಾಧ್ಯ , ಇದೇ ಸರಿ ಎಂಬಂತೆ ಉತ್ತರ ನೀಡಿದ್ದಾರೆ ನಿರ್ದೇಶಕ ಮನ್ಸೋರೆಯವರು. ಸಿನಿಮಾ ಪರಿಹಾರ ಕಂಡುಕೊಳ್ಳುವ ಅಗತ್ಯದ ಕುರಿತು ತನ್ನದೇ ದಾರಿಯನ್ನು ಹುಡುಕಿದೆ. ನಾಯಕಿ ಹಿಡಿಯುವ ಹಿಂಸಾತ್ಮಕ ದಾರಿ ಸರಿಯೇ ಎಂದು ಅನಿಸಿದರೆ ಅವಳು ಮಾಡುತ್ತಿರುವುದೇ ಸರಿ. ಅವಳಿಗೆ ಖಂಡಿತವಾಗಿ ನ್ಯಾಯ ಸಿಗಲೇಬೇಕು. ಅವಳ ನೋವು ನಮ್ಮ ನೋವು .ಅವಳ ಗೆಲುವು ನಮ್ಮ ಗೆಲುವು. ಅವಳ ಹೋರಾಟ ನಮ್ಮದೇ ಎಂಬಂತೆ ನೋಡುಗರ ಮನದಲ್ಲಿ ತೀವ್ರತೆ ಉಂಟಾಗುವುದರಲ್ಲಿ ನಿರ್ದೇಶಕರ ಪ್ರಯತ್ನವಿದೆ. ಇದು ನಿರ್ದೇಶಕರ ಶಕ್ತಿ ಕೂಡ. ಹಿಂಸೆಯ ಪ್ರಾರಂಭಕ್ಕೆ ಮಾನವೀಯತೆಯ ತಿರುವು ನೀಡಿ ಅಂತ್ಯ ಕಾಣಿಸಿರುವುದು ನಿರ್ದೇಶಕರ ತಾತ್ವಿಕ ಗೆಲುವು.
ಚಿತ್ರದ ಆರಂಭದಲ್ಲಿ ಕಚೇರಿಯ ಹೊರಗೆ ಬೆಳ್ಳಿ ಬಣ್ಣ ಬಳೆದುಕೊಂಡು ಗಾಂಧಿ ವೇಷಧಾರಿ ಕುಳಿತಿದ್ದಾನೆ .
ತನ್ನ ನ್ಯಾಯದ ಹೋರಾಟದಲ್ಲಿ 317 ದಿನಗಳನ್ನು ಮೌನವಾಗಿ ಬೋರ್ಡ್ ಹಿಡಿದು ಕಳೆದಿದ್ದಾನೆ. ಅವನ ಬೋರ್ಡ್ ತಲೆಕೆಳಗಾಗುತ್ತದೆ. ಪೊಲೀಸರಿಂದ ಅವನ ಎತ್ತಂಗಡಿ ಆಗುತ್ತದೆ. ಅವನ ಪ್ರವೇಶ ಮತ್ತೆ ಚಿತ್ರ ಮುಗಿಯುವಾಗ ಆಗುತ್ತದೆ. ಇದು ಹಿಂಸೆ ಹಾಗೂ ಅಹಿಂಸೆಗಳ ಮುಖಾಮುಖಿಯಂತೆ ಭಾಸವಾಗುತ್ತದೆ.
ಪ್ರಾರಂಭದ ಮತ್ತೊಂದು ದೃಶ್ಯದಲ್ಲಿ ಮನೆ ಬಿಟ್ಟು ಹೊರಡುವ ಗೀತಾ ತನ್ನ ಪತಿಯ ಫೋಟೋಗೆ ನಮಸ್ಕರಿಸಿ, ಅಡ್ಡ ಬರುವ ಸೊಳ್ಳೆಯನ್ನು ಸೊಳ್ಳೆ ಬ್ಯಾಟಿನಲ್ಲಿ ಹೊಡೆದು ಸಾಯಿಸುವುದು, ಅವಳ ಮುಂದಿನ ಕಾರ್ಯಾಚರಣೆಗೆ ಸಿದ್ಧತೆ ಎನಿಸುವಂತೆ ಬೆಂಬಿತವಾಗಿದೆ.
ನೇರ ಪ್ರಸಾರದಲ್ಲಿರುವ ಟಿವಿವಾಹಿನಿಯ ನಿರೂಪಕಿ
ಬಾಯಿಗೆ ಬಂದಂತೆ ಅರಚುತ್ತ ಗೀತಾಳನ್ನು, ಭಯೋತ್ಪಾದಕಳೆಂದು, ನಕ್ಸಲ್ ಎಂದು ಆರೋಪಿಸುತ್ತಾ ಇರುವವಳನ್ನು ಒಳಗೆ ಕರೆಸಿಕೊಂಡು ಗೀತಾ ತನ್ನ ನಿಜ ಸ್ಥಿತಿಯ ಅರಿವು ಮೂಡಿಸುತ್ತಾಳೆ. ಅವಳ ಸ್ಥಿತಿಯನ್ನು ನೋಡಿ ಇಡೀ ರಾಜ್ಯದ ಜನತೆಗೆ ಬೇಜಾರಾಗುತ್ತದೆ. ಗೀತಾಳ ಮೇಲೆ ಅನುಕಂಪದ ಅಲೆಯೇ ಏಳುತ್ತದೆ.
ನಾಯಕಿಯ ಕಚೇರಿ ಅಲೆದಾಟದ ಬವಣೆಯನ್ನು, ಅವಳ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯಲ್ಲಿ, ಅವಳು ಉಡುವ ಬಟ್ಟೆಗಳ ಬದಲಾವಣೆಯಲ್ಲಿ ಸೂಚ್ಯವಾಗಿ ತೋರಿಸಿರುವುದು ವಿಶೇಷವೆನಿಸುತ್ತದೆ.
ನೌಕರರೆಲ್ಲ ತಾವು ತೆಗೆದುಕೊಳ್ಳುವ ಲಂಚ ಮನೆ ಕಟ್ಟಲೆಂದು, ಮದುವೆ ಮಾಡಲೆಂದು ನೀಡುವ ಸಮಜಾಯಿಶಗಳಿಗೆ ಗೀತಾಳ ವ್ಯಂಗ್ಯ ನಗು ಉತ್ತರವಾಗುವುದು ರೋಚಕ.
ನಿಟ್ಟುಸಿರುಗಳನ್ನು ಬಿಡುತ್ತಾ, ತುಂಬು ಬಸುರಿಯ ಪಾತ್ರದಲ್ಲಿ ಯಜ್ಞಾ ಶೆಟ್ಟಿ, ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ನಿಲ್ಲುವುದು, ಕೂರುವುದು ಓಡಾಡುವುದು ಎಲ್ಲದರಲ್ಲಿಯೂ ಧ್ವನಿಯ ಏರಿತಗಳಲ್ಲಿಯೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಕಚೇರಿಯ ಶೌಚಾಲಯಕ್ಕೆ ತೆರಳಿ ತನ್ನ ಹೊಟ್ಟೆಯಲ್ಲಿರುವ ಮಗುವಿನೊಂದಿಗೆ ಮಾತನಾಡುವ, ಹೊಟ್ಟೆ ಸವರುತ್ತಾ ಸಮಾಧಾನ ಪಡಿಸುವ ದೃಶ್ಯ ಬಹಳ ಚೆನ್ನಾಗಿ ಚಿತ್ರಿತವಾಗಿದೆ. ಮರುಗಳಿಗೆ ಹೆರಿಗೆ ನೋವಿನ ಆಕ್ರಂದನ!!!!, ಎಂಥವರ ಕರುಳನ್ನು ಚುರ್
ಎನಿಸದಿರದು. ಅಂತಿಮ ದೃಶ್ಯಗಳಲ್ಲಿ ಅವರ ಅಭಿನಯ ಕಣ್ಣಲ್ಲಿ ನೀರು ಬರಿಸುತ್ತದೆ.
ಮಡುಗಟ್ಟಿದ ತನ್ನ ನೋವನ್ನು ಕಣ್ಣುಗಳಲ್ಲಿ, ಮುಖದ ಗೆರೆಗಳಲ್ಲಿ ತೋರಿಸುವ ಮುದುಕರಾಗಿ ಬಿ .ಸುರೇಶರ ಅಭಿನಯ ಗಮನೀಯ. ಚಿತ್ರದುದ್ದಕ್ಕೂ ಒಂದು ಮಾತನ್ನೂ ಆಡದೆ ಗೀತಾಳೊಂದಿಗೆ ಕೈಜೋಡಿಸಿ ಎಲ್ಲರ ಮೆಚ್ಚುಗೆ ಪಡೆಯುತ್ತಾರೆ .ಅನುಕಂಪ ಗಿಟ್ಟಿಸುತ್ತಾರೆ.
ಇದೊಂದು ಬಹುತಾರಾಗಣದ ಸಿನಿಮಾ. ಘಟಾನುಘಟಿಗಳ ಮಿಲನ. ಗೃಹ ಮಂತ್ರಿಯಾಗಿ ಅಚ್ಯುತ್ ರಾವ್, ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದ ಪ್ರಮೋದ್ ಶೆಟ್ಟಿ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಕಮಾಂಡೋ ಪಾತ್ರದಲ್ಲಿ ಸಂಚಾರಿ ವಿಜಯ್ ಇದ್ದಾರೆ .ಶ್ರುತಿ, ಅವಿನಾಶ್, ಸುಧಾ ಬೆಳವಾಡಿ, ದತ್ತಣ್ಣ, ಶೋಭರಾಜ್ ಇವರೆಲ್ಲ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಜಯಂತ್ ಕಾಯ್ಕಿಣಿ ಬರೆದ ಒಂದು ಗೀತೆ ಶ್ರಮಿಕ ವರ್ಗದವರ ಪರಿಚಯ ಮಾಡಿಸುತ್ತದೆ. ಕಥೆಯ ಅವಕಾಶದಲ್ಲಿ ಸತ್ಯ ಹೆಗಡೆಯವರ ಛಾಯಾಗ್ರಹಣ ಅದ್ಭುತವಾಗಿದೆ. ಚಿತ್ರಕ್ಕೆ ಬಕೇಶ್ ರೋನಾಡರ ಹಿನ್ನೆಲೆ ಸಂಗೀತದ ಜೊತೆಗಾರಿಕೆ ಇದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಿನಿಮಾಗಳು ಹಲವಾರು ಬಂದಿವೆ. ಆದರೆ ಈ ಸಿನಿಮಾವನ್ನು ಅಚ್ಚುಕಟ್ಟಾದ ನಿರೂಪಣೆಯಿಂದ ಮನಸೂರಗೊಳ್ಳುವಂತೆ ಮಾಡಿದ್ದಾರೆ ಮನ್ಸೂರೆಯವರು. ಅಚ್ಚುಕಟ್ಟಾಗಿ ಕಥೆ ಬರೆದ ಟೀ ಕೆ ದಯಾನಂದ್ ಹಾಗೂ ವಿಕ್ಟರ್ ಮಲ್ಲಣ್ಣ ಚಿತ್ರವನ್ನು ಮತ್ತಷ್ಟು ಚೊಕ್ಕವಾಗಿಸಿದ್ದಾರೆ.
ಭ್ರಷ್ಟಾಚಾರ ಲಂಚಗುಳಿತನವನ್ನು ಕಸಗುಡಿಸಿದಂತೆ ಗುಡಿಸಿ ಸ್ವಚ್ಛಗೊಳಿಸಬೇಕೆಂದು ಕಚೇರಿಯ ಸ್ವಚ್ಛ ಮಾಡುವ ನೌಕರರ ಬಾಯಲ್ಲಿ ಹೇಳಿಸಿರುವುದು ಇಂದಿನ ಅಗತ್ಯವಾಗಿದೆ.
೪೦ ಪರ್ಸೆಂಟ್ ಕಮಿಷನ್, ಪೊಲೀಸ್ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳು ಹೊರ ಬರುತ್ತಿರುವ ಇಂದಿನ ದಿನಗಳಲ್ಲಿ ಜನಸಾಮಾನ್ಯರ ಅಸಹಾಯಕತೆಯನ್ನು ಪ್ರತಿಬಿಂಬಿಸುತ್ತದೆ ಈ ಚಿತ್ರ.
ಎರಡು ವರ್ಷಗಳ ಹಿಂದೆ ಕೊರೋನ ಕಾಲಘಟ್ಟದಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ.
ಅಚ್ಚುಕಟ್ಟಾದ ನಿರ್ವಹಣೆಯಿಂದ ನಿರ್ದೇಶನದಿಂದ ವಿಭಿನ್ನ ಕಥೆಯಿಂದ ಇದು ಒಂದು ಉತ್ತಮ ಚಿತ್ರವೆನಿಸಿದೆ. ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿದ್ದು, ಆಗ ನೋಡಲು ಸಾಧ್ಯವಾಗದವರು ಖಂಡಿತ ಒಮ್ಮೆ ನೋಡಲೇಬೇಕಾದ ಚಿತ್ರವಿದು.
ಕುಸುಮಾ ಮಂಜುನಾಥ