ಅಂಕಣ ಸಂಗಾತಿ

ಕಾವ್ಯದರ್ಪಣ

ಆನಂದ ಬಸವ

ಬದುಕು ಮಾಯೆಯ ಮಾಟ

 ಮಾತು ನೊರೆ ತೆರೆಯಾಟ

 ಜೀವ ಮಾನವ ಕುಂಭ ಗುಂಬ ಮುನ್ನೀರು

 ಕರುಣೋದಯದ ಕೂಡ

 ಅರುಣೋದಯವು ಇರಲು

  ಎದೆಯ ತುಂಬುತ್ತಲಿದೆ

 ಹೊಚ್ಚ ಹೊನ್ನೀರು

            – ಅಂಬಿಕಾತನದತ್ತ

              (.ರಾ. ಬೇಂದ್ರೆ)

ಕಾವ್ಯ ಪ್ರವೇಶಿಕೆಯ ಮುನ್ನ

ಬದುಕು ಈ ಮಾಯೆಯ ಮಾಟ ಎಂಬ ವರಕವಿ ಬೇಂದ್ರೆಯವರ ಮಾತು ಅಕ್ಷರಶಃ ಸತ್ಯ. ಇಲ್ಲಿ ಬೇಂದ್ರೆಯವರು ಈ ಪ್ರಪಂಚವು ದೇವರ ಲೀಲೆ ಹಾಗೂ ನಮ್ಮ ಬದುಕು ದೇವರ ಸೃಷ್ಟಿ ಎಂದಿದ್ದಾರೆ. ಈ ಮಾತು ಮನುಷ್ಯನಿಗೆ ಪಾಠವಾಗಬೇಕು. ಈ ಮಾಯ ನಗರಿಯಲ್ಲಿ ಬದುಕು ನಶಿಸುವ ಮುನ್ನ ಸಮಾಜಮುಖಿಯಾಗಿ ಜೀವ ಪರ ಕಾಳಜಿ ತೋರುತ್ತಾ ಸಾರ್ಥಕ ಪಡಿಸಿಕೊಳ್ಳಬೇಕು. ಈ ಮಾನವ ಜನ್ಮದಲ್ಲಿ ಇದೆಲ್ಲ ಸಾಧ್ಯವಾಗಬೇಕಾದರೆ ನೈತಿಕ ಮೌಲ್ಯಗಳನ್ನು ನಮ್ಮೊಳಗೆ ಅಂತರ್ಗತ ಮಾಡಿಕೊಳ್ಳಬೇಕು. ಆಗ ನಮ್ಮಲ್ಲಿರುವ ನಕಾರಾತ್ಮಕ ಗುಣಗಳು ಅಳಿದು ಸಕಾರಾತ್ಮಕ ಮನೋಭಾವ ಬೆಳೆದು ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಇದರಿಂದ ನಾವು ವೈಯಕ್ತಿಕವಾಗಿ ಉತ್ತಮರಾಗುವ ಜೊತೆಗೆ ಸಮಾಜದ ಹಿತವನ್ನು ಬಯಸುತ್ತೇವೆ.

ಒಂದು ಹೂವಿನ ಸುವಾಸನೆ

ಗಾಳಿ ಬೀಸುವ ದಿಕ್ಕಲ್ಲಿ ಮಾತ್ರ ಚಲಿಸುತ್ತದೆ ಆದರೆ

 ಒಬ್ಬ ಒಳ್ಳೆಯ ವ್ಯಕ್ತಿಯ ಗುಣಗಾನ

 ಎಲ್ಲ ದಿಕ್ಕುಗಳಲ್ಲೂ ಪಸರಿಸುತ್ತದೆ ಎಂಬ ಚಾಣಕ್ಯ ವಾಣಿಯು ಮನುಷ್ಯ ಸದ್ಗುಣಗಳ ಗಣಿಯಾಗಿ ಬದುಕಬೇಕೆಂಬ ಸಂದೇಶ ನೀಡುತ್ತದೆ.

 ಉತ್ತಮ ಸಂಸ್ಕಾರವಂತರಾಗಿ ನಮ್ಮ ಸಂಸ್ಕೃತಿಯ ಕಳಶಗಳಾಗಿ ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು. ನಮ್ಮ ನಡೆ-ನುಡಿಗಳು ಇತರರಿಗೆ ಆದರ್ಶಪ್ರಾಯವಾಗಿರಬೇಕು.

ಕವಿ ಪರಿಚಯ

ಆನಂದ ಬಸವ ಕಾವ್ಯನಾಮದಿಂದ ಸಾಹಿತ್ಯ ರಚಿಸುತ್ತಿರುವ ಬಸವರಾಜ ಹಿರೇಮಣಿಯವರು ಬೆಳಗಾವಿ ಜಿಲ್ಲೆಯ ಸಂಕೇಶ್ವರದವರು. ಇವರು ತನ್ನ ತಾಯಿಯ ತವರೂರು ಹುಕ್ಕೇರಿಯ ಅವರಗೋಳ ಊರಿನಲ್ಲಿ ಬೆಳೆದರು.

ಡಿಪ್ಲೋಮೋ ಇನ್ ಡ್ರಾಯಿಂಗ್ ಮುಗಿಸಿರುವ ಇವರು ಬೆಂಗಳೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಪಾರವಾದ ಆಧ್ಯಾತ್ಮಿಕ ಚಿಂತನೆಯನ್ನು ಹೊಂದಿರುವ ಇವರು ಕಥೆ ಕವನ ಹಾಗೂ ವಚನಗಳನ್ನು ಬರೆಯುವುದರಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದು ವೃತ್ತಿ ಬದುಕಿನ ಜೊತೆ ಜೊತೆಗೆ ತಮ್ಮ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಸಾಗುತ್ತಿದ್ದಾರೆ.

ಕಾವ್ಯದ ಆಶಯ

 ಬದುಕಿನ ಮಾಯಾಲೋಕದಲ್ಲಿ ಮನುಷ್ಯನ ಹೊಣೆಗಾರಿಕೆ ಮತ್ತು ಅವನ ನಡೆ ನುಡಿಯ ಕುರಿತು ಬೆಳಕು ಚೆಲ್ಲುವುದು ಕವಿತೆಯ ಆಶಯವಾಗಿದೆ. ಸುಳ್ಳಿನ ಮೂಟೆ ಸುಟ್ಟು, ಸತ್ಯದ ಅರಿವೆ ತೊಟ್ಟು ನಡೆಯಲು ಪ್ರಯತ್ನಿಸಿದವರಿಗೆ

ಅಯೋಗ್ಯರು ಹೇಗೆಲ್ಲಾ ಹಿಂಸಿಸುತ್ತಾರೆ ಎಂಬುದರ ಅರಿನ್ನು ಈ ಕವಿತೆಯ ಮೂಲಕ ಕಟ್ಟಿಕೊಡುವುದು ಕವಿಯ ಮನದಾಸೆಯಾಗಿದೆ.

ಬುದ್ಧಿವಂತರ ಮೇಲೆ ಹಗೆ ಸಾಧಿಸುವ ಅಜ್ಞಾನಿಗಳಿಗೆ ಜ್ಞಾನದ ದೇವಿಗೆ ಹಚ್ಚಬೇಕಾದ ಅನಿವಾರ್ಯತೆ ಹಾಗೂ ಅನ್ಯಾಯದ ದಾರಿಯಲ್ಲಿ ಸಾಗುವ ನ್ಯಾಯವಂತರನ್ನು ಮೂಲಗುಂಪಾಗಿಸುವವರ ವಿರುದ್ಧ ಕವಿಯ ಮನದಿಂಗಿತ ಈ ಕವಿತೆಯಲ್ಲಿ ವ್ಯಕ್ತವಾಗಿದೆ.

ಮಾನವ ಮಸಣ ಸೇರುವ ಮುನ್ನ ಬದುಕಿನ ಮೌಲ್ಯವರಿತು ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಉಳ್ಳವರು ಇಲ್ಲದವರಿಗೆ ಸಹಾಯ ಮಾಡದಿದ್ದರೂ ಅವಮಾನ ಮಾಡಿ ಅವರ ಸ್ವಾಭಿಮಾನಕ್ಕೆ ಕಿಚ್ಚು ಹಚ್ಚಬಾರದು ಎನ್ನುವ ಮಹಾದಾಶೆಯ ಈ ಕವಿತೆಯ ದಾಗಿದೆ. ಒಟ್ಟಿನಲ್ಲಿ ಈ ಕವಿತೆಯು ಮನುಜ ಹುಟ್ಟಿನಿಂದ ಸಾವಿನವರೆಗೂ ಹೇಗೆಲ್ಲ ನಡೆದುಕೊಳ್ಳಬೇಕು, ಆತನ ಸಾಮಾಜಿಕ ಹೊಣೆಗಾರಿಕೆಯೇನು ಎಂಬುದನ್ನು ಓದುಗರ ಮುಂದೆ ಎಳೆ ಎಳೆಯಾಗಿ ತೆರೆದಿಡುವ ಜೊತೆಗೆ ಅವರ ಲೋಪದೋಷಗಳನ್ನು ಸರಿಪಡಿಸಿಕೊಂಡು ಸರಿ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತವೆ.

ಕವಿತೆಯ ಶೀರ್ಷಿಕೆ

ಕವಿತೆಯ ವಿಶ್ಲೇಷಣೆ

ಇದು ತಿಳಿದು ನೋಡಿದರೆ ಇಲ್ಲಿ

ಬದುಕು ಒಂದು ಮಾಯಾಟ..

ಅರಿತು ಬಾಳಲು ಬಂಧು ಬಂಧನದಲ್ಲಿ

ನೊಂದು ಹೇಳಲಾಗದ ವಿಧಿ ಆಟ…!!

ಜೀವನ ಎಂಬುದು ಒಂದು ಮಾಯೆ ಯಾವಾಗ ಏನು ಸಂಭವಿಸುತ್ತದೆ ಎಂದು ಯಾರಿಂದಲೂ ಊಹಿಸಲಸಾಧ್ಯ. ಈ ಕ್ಷಣ ಆನಂದ ಸಾಗರದಲ್ಲಿ ಮುಳುಗಿ ತೊರೆಯಾಗಿ ಹರಿಯುತ್ತೇವೆ.ಮತ್ತೊಂದು ನಿಮಿಷದಲ್ಲಿ ಜೀವನದಲ್ಲಿ ಹೊಸ ತಿರುವು ಸೃಷ್ಟಿಯಾಗಬಹುದು. ಆ ಖುಷಿ ಒಮ್ಮೆಲೇ ಹರುಷದ ಕಡಲು ಶೋಖಸಾಗರವಾಗಬಹುದು ಹಾಗಾಗಿ ಕವಿಯು ಬದುಕು ಮಾಯೆಯ ಆಟ ಎಂದಿದ್ದಾರೆ.

ಹಾಗೆಂದು ಯಾವ ಕ್ರಿಯೆಗೂ ಸ್ಪಂದಿಸದೆ ಇರಲಾಗದು. ನೋವಿರಲಿ, ನಲಿವಿರಲಿ,ಸುಖವಿರಲಿ ಎಲ್ಲವನ್ನು ಬೇವು ಬೆಲ್ಲದಂತೆ ಜೊತೆಯಾಗಿ ಸ್ವೀಕರಿಸಿ ಮುನ್ನಡೆಯಬೇಕು ಆಗಲೇ ಮನುಷ್ಯನ ಬದುಕಿಗೊಂದು ಅರ್ಥ ಸಿಗುತ್ತದೆ. ಕೌಟುಂಬಿಕ ಸುಖ ಸಂತೋಷಗಳನ್ನು ಅನುಭವಿಸುತ್ತಾ, ಎಲ್ಲರೊಳಗೂ ಉತ್ತಮವಾದ ಒಡನಾಟದಿಂದ ಬಾಳುತ್ತಿದ್ದೇವೆ. ಆದರೆ ವಿಧಿಯಾಟ ಬಲ್ಲವರಾರು ಈ ಸಂಬಂಧಗಳನ್ನು ಕಸಿದುಕೊಂಡು ಹೃದಯವನ್ನು ಚೂರಿಯಿಂದ ಇರಿದು ಘಾಸಿ ಮಾಡಿ ಮಾನಸಿಕವಾಗಿ ಕುಗ್ಗಿಸುತ್ತದೆ. ನಮಗೆ ಆ ವಿಧಿ ಮೆರೆವ ಅಟ್ಟಹಾಸ ಮೆಟ್ಟಿ ನಿಲ್ಲುವ ಶಕ್ತಿ ಇಲ್ಲ.ಈ  ಮಾಯೆ ಎಂಬ ಬದುಕಿನಲ್ಲಿ ವಿಧಿಯಾಟದ ಗೊಂಬೆಗಳು ನಾವು ಎಂಬ ಭಾವ ಕವಿಯದಾಗಿದೆ.

ಸತ್ಯದ ದಾರಿಯೊಳು ಸುತ್ತಲು ಕಿಚ್ಚ

ಹಚ್ಚಿದ ಬೆಂಕಿಗೆ ಭಾವನೆಗಳ ಪರದಾಟ..

ನೋವಿನ ಮನಕೆ ನಿತ್ಯವು ಸಂಕಟ

ಸುಳ್ಳಿನ ಮಾತಿಗೆ ಸದಾ ಸಕ್ಕರೆ ಪಾನಕ..!!

ಇಲ್ಲಿ ಕವಿಯು ಸತ್ಯ ಮತ್ತು ಮಿಥ್ಯಗಳ ನಡುವಿನ ದೊಂಬರಾಟ ಕುರಿತು ತಮ್ಮ ಮನದಾಳವನ್ನು ತೆರೆದಿಡುತ್ತಾರೆ. ಸತ್ಯವೆಂಬುದು ಸದಾ ಪ್ರಜ್ವಲಿಸುವ ದೀಪ್ತಿಯಂತೆ ನಿತ್ಯ ನಂದಾದೀಪವಾಗಿ ಉರಿಯುತ್ತಿರಬೇಕು. ಸತ್ಯ ಮಾರ್ಗದಲ್ಲಿ ನಮ್ಮ ಮಹನೀಯರನೇಕರು ನಡೆದು ಅದರ ಮಹಿಮೆಯನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ.

ಸತ್ಯದ ದಾರಿ ಸರಳವಲ್ಲ. ಆ ಪಥದಲ್ಲಿ ಚಲಿಸುವುದು ಅತಿ ದೊಡ್ಡ ಸಾಹಸಗಾಥೆ. ನಾವು ಸತ್ಯದ ದಾರಿಯಲ್ಲಿ ನಡೆಯಲು ಸಿದ್ದರಿದ್ದರು ನಮ್ಮನ್ನು ಹಿಂದೆಳೆದು ದಾರಿ ತಪ್ಪಿಸುವ ಬಹಳಷ್ಟು ಮಂದಿ ಇದ್ದಾರೆ. ಕಾರಣ ಸತ್ಯವೆಂಬುದು ಎಲ್ಲರಿಗೂ ಅಪ್ರಿಯವಾದ ಬಿಸಿ ತುಪ್ಪ. ಅದನ್ನು ನುಂಗಲು ಹಿಂದೂ ಮುಂದು ನೋಡುವ ಜೊತೆಗೆ ಆ ಮಾರ್ಗ ಆಯ್ಕೆ ಮಾಡಿಕೊಂಡವರಿಗೂ  ಕೊಡುವ ಪಡಿಪಾಟಲು ಅಷ್ಟಿಷ್ಟಲ್ಲ. ಅವರ ಭಾವನೆಗಳ ಮೇಲೆ ದಾಳಿ ಮಾಡಿ ಪರಿತಪಿಸುವಂತೆ ಮಾಡುತ್ತಾರೆ. ಇವರೂ ಸತ್ಯ ಪಾಲಿಸುವುದಿಲ್ಲ. ಇತರರನ್ನು ಪಾಲಿಸಲು ಬಿಡುವುದಿಲ್ಲ. ಇದನ್ನು ಕವಿಗಳಲ್ಲಿ ಸುತ್ತಲು‌ ಕಿಚ್ಚು ಹಚ್ಚಿದ ಬೆಂಕಿಗೆ ಭಾವನೆಗಳ ಪರದಾಟ ಎಂದಿರುವುದು, ಜನರ ಚುಚ್ಚು ಮಾತುಗಳು ಸತ್ಯಸಂದರ ಮನಸ್ಸಿಗೆ ನೋವನ್ನು ಉಂಟು ಮಾಡಿ ನಿತ್ಯ ಸಂಕಟ ಪಡುವಂತೆ ಮಾಡುತ್ತವೆ. ಸತ್ಯ ಸುಳ್ಳುಗಳ ಹೋರಾಟದಲ್ಲಿ ಸತ್ಯಕ್ಕೆ ಜಯ ಸಿಗಲೆಂದು ಕವಿ ಆಶಿಸುತ್ತಾರೆ.

ಆದರೆ ಸುಳ್ಳು ಎಲ್ಲರಿಗೂ ಸಕ್ಕರೆ ಪಾಕದಂತೆ ಸಿಹಿಯಾಗಿರುತ್ತದೆ. ಎನ್ನುವ ಕವಿ ಸುಳ್ಳಿನ ಮಾರ್ಗ ಅನುಸರಿಸುವುದು ಸರಳ. ಅದರಿಂದಲೇ ಬಹುತೇಕರನ್ನು ಸುಳ್ಳು ಸುಲಭವಾಗಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತದೆ ಎಂದು ಕವಿಯು ಬಹಳ ನೋವಿನಿಂದ ನಡೆಯುತ್ತಾರೆ.

ಬುದ್ದಿ ಜೀವಿಯ ಮೇಲೆ ಯುದ್ಧ ಸಾರಿ

ಸಿದ್ಧಿ ಇಲ್ಲದ ಸಾವಿರಾರು ಜನ ಸೇರಿ

ಜ್ಞಾನದ ನುಡಿಗೆ ಅಜ್ಞಾನದ ಕುಸುರಿ

ಹಾಕಿ, ಶ್ರೇಷ್ಠ, ಕನಿಷ್ಟತೆ ಪರಿ ತೋರಿ..!!

ಇಲ್ಲಿ ಕವಿಯು ಜ್ಞಾನಿಗಳು ಮತ್ತು ಜ್ಞಾನಿಗಳ ನಡುವಿನ ವ್ಯತ್ಯಾಸಗಳನ್ನು ತೆರೆದಿಡುತ್ತಾರೆ. ಬುದ್ಧಿವಂತರನ್ನು ಜನರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅವರು ಹೇಳಿದ್ದನ್ನು ಪರಾಮರ್ಶಿಸುವುದಿಲ್ಲ. ಅದರೊಳಗೆ ಸತ್ಯವಿಹುದೆಂದು ಅರಿಯುತರು ಅದನ್ನು ಜಗಕ್ಕೆ ತೋರ್ಪಡಿಸದೆ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಜನರಿಗೆ ಮಂಕುಬೂದಿ ಎರಚಿ ಅವರ ತೇಜೋವಧೆ ಮಾಡುವ ಕುರಿತು ಕವಿಯ ಆಕ್ರೋಶ ಭಾವವನ್ನು ಇಲ್ಲಿ ಕಾಣಬಹುದು.

ತಮ್ಮಿಂದ ಸಾರಿಸಲಾಗುವುದನ್ನು ಇತರರು ಸಾಧಿಸಿದರೆ ಅದನ್ನ ಸಹಿಸದ ಗಾಂಪರ ಗುಂಪು ಜ್ಞಾನಿಗಳ ತಿಳುವಳಿಕೆಯನ್ನು, ಮಾರ್ಗದರ್ಶನವನ್ನು ಅವಹೇಳನ ಮಾಡಿ ತಮ್ಮ ಅಲ್ಪಜ್ಞಾನವನ್ನು ಜನತೆಯಲ್ಲಿ ಬಿತ್ತಿ, ಅವರ ದಾರಿ ತಪ್ಪಿಸುತ್ತ ಅವರ ಮುಂದೆ ಪ್ರಭುದ್ಧರಂತೆ ಮುಖವಾಡ ಹೊದ್ದು ಜನರನ್ನು ಯಾಮಾರಿಸುವ ಕುರಿತು ಕವಿಯ ಲೇಖನಿ ಕೆಂಡ ಕಾರಿದೆ.

ತಿಳಿದವರು‌ ಮತ್ತು ಜ್ಞಾನಿಗಳು ಹೇಳಿದ್ದನ್ನು ಇವರು ಜನರಿಗೆ ನೇರವಾಗಿ ತಲುಪಿಸದೆ ಸ್ವಾರ್ಥ ಲಾಲಸೆಗಳಿಗೆ ಇದನ್ನು ತಮ್ಮ ಇಚ್ಛಾನುಸಾರ ಬಳಸಿಕೊಂಡು, ಜ್ಞಾನದ ನುಡಿಗಳಿಗೆ ಅಜ್ಞಾನದ ಕುಸುರಿ  ಹೆಣೆದು ಜನರನ್ನು ತಪ್ಪು ದಾರಿಗೆ‌ ಎಳೆಯುವರು ಎಂದು ಕವಿಯು ತಮ್ಮ ಹತಾಶೆ ಭಾವವನ್ನು ಈ ಸಾಲುಗಳ ಮೂಲಕ ವ್ಯಕ್ತಪಡಿಸುತ್ತಾರೆ.

ಶ್ರೇಷ್ಠರು ಎಲೆಮರೆಕಾಯಿಯಂತೆ ತಮ್ಮ ಪಾಡಿಗೆ ತಾವಿದ್ದರು ಅರ್ಧ ತುಂಬಿದ ಕೊಡ ಶಬ್ದ ಮಾಡುತ್ತಾ ತಾವೇ ಶ್ರೇಷ್ಠರೆಂದು ಜಂಬ ಕೊಚ್ಚಿಕೊಳ್ಳುತ್ತಾ, ನಿಜವಾದ ಶ್ರೇಷ್ಠರನ್ನು ಮೂಲೆಗುಂಪಾಗಿಸಿ ಅವರನ್ನು ತುಚ್ಚವಾಗಿ ಕಾಣುತ್ತಾರೆ ಎಂದು ಕವಿಯು ಇವರ ನಿಕೃಷ್ಟ ಭಾವವನ್ನ ತೆರೆದಿರುತ್ತಾರೆ.

ನ್ಯಾಯ ,ನೀತಿ ಪರ ಬುದ್ಧಿ ಹೇಳಿದರೆ

ಇದ್ದದ್ಜು ,ಇಲ್ಲದು ಸುತ್ತಿ ಕಟ್ಟಿ..

ಹೊತ್ತು ಬಂದಾಗ ಎತ್ತಿ ತೋರಿಸುತ್ತಾರೆ,

ಮಾತು ಮೃತ್ಯು ಮಾಡಿ ಪ್ರೀತಿ ಸಾಯಿಸುತ್ತಾರೆ..!!

ಇಲ್ಲಿ ಕವಿಯು ಅಲ್ಪ ಬುದ್ಧಿಯ ಜನರ ಕುರಿತು ಚರ್ಚಿಸುತ್ತಾರೆ. ನ್ಯಾಯ ನೀತಿಗಳ ಮೌಲ್ಯ ಅರಿಯದಷ್ಟು ಜನರನ್ನು ಅನೀತಿಗಳ ಸಂಕೋಲೆಯೊಳಗೆ ಬಂಧಿಸಿ ಅವರಿಗೆ ಕೆಟ್ಟದ್ದನ್ನು ಬೋಧಿಸುತ್ತಾ ಸರಿ ತಪ್ಪುಗಳ ಬಗ್ಗೆ ಚಿಂತಿಸಿದಂತೆ, ಅವರನ್ನು ಸುಳ್ಳುಗಳ ಕಂತೆಯಿಂದ ಬಂಧಿಸುತ್ತಾರೆ. ಯಾರಾದರೂ ನ್ಯಾಯ ನೀತಿ ಪರವಾಗಿ ನಿಂತು ಹೋರಾಡಿದರೆ ಅಥವಾ ಅಥವಾ ಪಾಲಿಸುವಂತೆ ಬೋಧಿಸಿದರೆ ಇಲ್ಲ ಸಲ್ಲದ ಕಥೆ ಕಟ್ಟಿ ಜನರಲ್ಲಿ ಅವರ ಬಗ್ಗೆ ಅನುಮಾನ ಸೃಷ್ಟಿಸುತ್ತಾರೆ.

ಎನ್ನುತ್ತಾರೆ ಕವಿಯು. ನ್ಯಾಯದ ಪರ ನಿಂತವರನ್ನು ಸಮಯ ಕಾದು ಮೋಸದ ಸುಳಿಯೊಳಗೆ ಸಿಲುಕಿಸಿ ಜನರ ಮುಂದೆ ಅವರನ್ನು ತಪ್ಪಿತಸ್ಥರನ್ನಾಗಿ ಮಾಡುತ್ತಾರೆ. ಅವರನ್ನು ಚುಚ್ಚು ಮಾತುಗಳಿಂದ ಅವರ ಹೃದಯ ಘಾಸಿಗೊಳಿಸುತ್ತಾರೆ ಎನ್ನುವ ಕವಿಯು ಮಾತನ್ನು ಮೃತ್ಯು ಮಾಡಿ ಪ್ರೀತಿ ಸಾಯಿಸುತ್ತಾರೆ  ಬದುಕಿಗೆ ಭರವಸೆ ತುಂಬಿ ಬದುಕಿಸುವ ಶಕ್ತಿ ಎಷ್ಟಿದೆಯೋ ಮಾತಿನಿಂದ ಚುಚ್ಚಿ ಸಾಯಿಸುವ ಶಕ್ತಿಯು ಕೂಡ ಅಷ್ಟೇ ಇದೆ ಎಂಬುದನ್ನು ತಮ್ಮ ಬರಹದ ಮೂಲಕ ವ್ಯಕ್ತಪಡಿಸಿದ್ದಾರೆ.

ಆಸ್ತಿ ,ಅಂತಸ್ತಿನ ದರ್ಪಣ ಮಾಡಿ

ಮುಗ್ದತೆ ಮನಕೆ ಅಸಹನೀಯ ಕೊಟ್ಟು

ನಾ ಶ್ರೇಷ್ಠ, ನೀ ಕನಿಷ್ಠ  ಕೀಳ್ಹಿರಿಮೆ ತೋರಿ

ಸಾವಿನ ಮನೆಯೊಳು ಸಂತಸ ಪಡುವರು..!!

ಜನರಲ್ಲಿ ಮೌಲ್ಯಗಳಿಗೆ ಬೆಲೆಯು ಕಡಿಮೆಯಾಗುತ್ತಿರುವುದನ್ನು ಕುರಿತು ಕವಿಯು ಮನದಾಳದ ನೋವು ಈ ಕವಿತೆಯ ಸಾಲುಗಳಲ್ಲಿ ಬಿಂಬಿತವಾಗಿದೆ. ಜನರು ಹಣ ಐಶ್ವರ್ಯ ಆಸ್ತಿ ಅಂತಸ್ತುಗಳಿಗೆ ಮಾರುಹೋಗಿ ಮಾನವೀಯತೆಯನ್ನು ಮಣ್ಣು ಪಾಲು ಮಾಡಿ ಬದುಕುತ್ತಿರುವ ಬಗ್ಗೆ ಕವಿಯು ಚಾಟಿ ಬೀಸಿದ್ದಾರೆ.

ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಈ ಅಲೌಕಿಕ ಜಗತ್ತಿನಲ್ಲಿನ ಸಂಪತ್ತು ಶಾಶ್ವತವಾದದ್ದು. ಕಾಲಚಕ್ರದ ತಿರುಗುವಿಕೆಯಲ್ಲಿ ಇಂದು ಒಬ್ಬರ ಬಳಿ ಇದ್ದ ಅಷ್ಟೈಶ್ವರ್ಯಗಳು ನಾಳೆ ಮತ್ತೊಬ್ಬರ ಬಳಿ ಸೇರಬಹುದು. ಹಾಗಾಗಿ ಅದಕ್ಕೆ ಹೆಚ್ಚು ಮೌಲ್ಯ ನೀಡದೇ ಬದುಕಬೇಕೆಂದು ಕವಿಯು ಆಶಿಸುತ್ತಾರೆ. ಆಸ್ತಿ ಅಂತಸ್ತಿನಿಂದ ಇತರರನ್ನು ಅಳೆಯುತ್ತಾ, ಅವರನ್ನು ಕೀಳಾಗಿ ಕಾಣುವ ಜನರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಮುಗ್ಧ ಜನರಿಗೆ ಹೀಯಾಳಿಸಿ ಅವರ ಮನಕ್ಕೆ ನೋವು ಕೊಟ್ಟು ಸಂಭ್ರಮಿಸುವ ಜನರ ಬಗ್ಗೆ ತಿರಸ್ಕಾರ ತೋರುವರು.

“ಒಬ್ಬ ವ್ಯಕ್ತಿಯ ಗೌರವ ಅವನ ಗುಣಗಳ ಮೇಲೆ ನಿರ್ಧಾರಿತವಾಗುತ್ತದೆಯೇ ಹೊರತು ಅವನಿಗಿರುವ ಎತ್ತರ ಸ್ಥಾನಮಾನ ಸಿರಿವಂತಿಕೆ ಮೇಲಲ್ಲ”ಎಂದು ಚಾಣಕ್ಯ ಹೇಳಿರುವುದನ್ನು ನಾವು ಮರೆಯುವಂತಿಲ್ಲ.

ಇಲ್ಲಿ ಯಾರೂ ಮೇಲಲ್ಲ. ಯಾರೂ ಕೀಳಲ್ಲ. ಸೃಷ್ಟಿಯ ಕ್ರಿಯೆಯಲ್ಲಿ ಸರ್ವರೂ ಸಮಾನರು‌ ಕೇವಲ ಭೌತಿಕ ಸೌಲಭ್ಯಗಳನ್ನು ಮುಖ್ಯವಾಗಿಸಿಕೊಂಡು, ಅದರಲ್ಲಿರುವ ಸರ್ವ ಗುಣಗಳನ್ನು ನಿರ್ಲಕ್ಷಿಸಿ, ಉಳ್ಳವರು ಶ್ರೇಷ್ಠರು ಇಲ್ಲದವರು ಕನಿಷ್ಠರು ಎಂಬ ಸ್ವಭಾವ ಮೆರೆಯುತ್ತಾ ಸಾವಿನ ಮನೆಯಲ್ಲೂ ಕೂಡ ಅಂತಸ್ತಿನ ದರ್ಪದಿಂದ ಸಂಭ್ರಮಿಸುವವರ ವಿರುದ್ಧ ಕವಿ ಮನಸ್ಸು ಕ್ರೋದಗೊಳ್ಳುತ್ತದೆ.

ಸಾವು ಬರುವಾಗ ನೋವಿನ ವೇದನೆ

ಪ್ರಾಣದ ಉಳಿವಿಗೆ ಹಲವು ಸಂವೇದನೆ..

ಆತ್ಮವು ಕಳಿಚುವಾಗ ದೇಹ ಚಿಂತನೆ

ಬಿಟ್ಟು ಸಾಗು ನೀ ಕ್ಷಣಿಕ ಕಲ್ಪನೆ..!!

ಹುಟ್ಟು ಮತ್ತು ಸಾವು ಯಾರ ಕೈಯಲ್ಲೂ ಇಲ್ಲ. ಸಾವು ಯಾವಾಗ ಸಂಭವಿಸುತ್ತದೆ ಎಂದು ಊಹಿಸಲು ಅಸಾಧ್ಯ. ಆದರೂ ಈ ಸಾವು ಎಂಬುದು ಮನುಷ್ಯನನ್ನು ಬಹುವಾಗಿ ಕಾಡುವ ಒಂದು ಕ್ರಿಯೆ, ಮಾನವರು ಬಹುಶ ಸಾವಿಗೆ ಹೆದರುವಷ್ಟು ಬೇರೆ ಯಾವುದಕ್ಕೂ ಹೆದರಲಾರರು. ಕಾರಣ ನಮಗೆ ನಮ್ಮ ಪ್ರಾಣದ ಮೇಲಿನ ವ್ಯಾಮೋಹ.

ಮರಣ ಸಹಜವೆಂದು ಗೊತ್ತಿದ್ದರೂ ನಾವು ಹೆದರುವುದಿಲ್ಲ. ನಮ್ಮ ಇಚ್ಛಾನುಸಾರ ಬದುಕುತ್ತೇವೆ. ನಾವು ಅಳಿದ ಮೇಲು ನಮ್ಮ ‌ಹೆಸರು ಧರೆಯಲಿ ಉಳಿಯುವಂತೆ ಏನನ್ನಾದರು ಸಾಧಿಸುವ ಮನಸ್ಸು ಮಾಡುವುದಿಲ್ಲ. ಆದರೆ ಅಂತ್ಯ ಕಾಲದಲ್ಲಿ ನಮಗೆ ಜ್ಞಾನೋದಯವಾಗುತ್ತದೆ. ಆಗ ಸಾಧಿಸಲು ಏನು ಉಳಿದಿರುವುದಿಲ್ಲ. ನಾವು ಕ್ರಮಿಸಬೇಕಾದ ದಾರಿಯನ್ನ ಕ್ರಮಿಸಿದ್ದು ಆಗಿರುತ್ತದೆ. ಹಾಗಾಗಿ ಕಾಲ ಸರಿವ ಮುನ್ನ ಎಚ್ಚೆತ್ತುಕೊಳ್ಳಬೇಕು.

ನಮ್ಮ ಸಂಬಂಧಿಕರು, ಕುಟುಂಬ, ಬಂಧು ಬಾಂಧವರು, ಹಿತೈಷಿಗಳು, ಸ್ನೇಹಿತರು ಎಲ್ಲರೂ ನಮ್ಮನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆತ್ಮ ದೇಹವನ್ನು ತ್ಯಜಿಸುವಾಗ ದೇಹದ ಬಗ್ಗೆ ಚಿಂತಿಸುತ್ತೇವೆ. ದೇಹದೊಳಗೆ ಆತ್ಮವಿದ್ದಾಗ ಅದರ ಬೆಲೆ ತಿಳಿಯುವುದಿಲ್ಲ ಎನ್ನುವ ಕವಿಯು ಕ್ಷಣಿಕವಾದ ಬಾಳಿನ ಬಗ್ಗೆ ಚಿಂತಿಸದಿರೆಂದು ಮನುಷ್ಯನಿಗೆ ಕಿವಿ ಮಾತು ಹೇಳುತ್ತಾರೆ.

ಅಕ್ಷರ ಮಾಂತ್ರಿಕ ಆನಂದಬಸವ

ಪದ ನೋಡಿ ಹದವಾಗು ತಾಂತ್ರಿಕ ಜೀವನ

ಅಂವನಾಟಕ್ಕೆ ನಮ್ಮಗಳ ಪಾತ್ರ

ದೃಶಕ್ಕೆ ಅಭಿನಯ ನೀಡಿ ಸರಿದ್ಹೋಗು ಆಪ್ತ ಮಿತ್ರ..

ಆನಂದಬಸವ.

ಆ ದೈವದ ಲೀಲೆ ಬಲ್ಲವರಾರು ಅವನು ಆಡಿಸಿದಂತೆ ಆಡುವ ಸೂತ್ರದ ಗೊಂಬೆಗಳು ನಾವು ಎನ್ನುವ ಕವಿಯು ಈ ಅಕ್ಷರ ಮಾಂತ್ರಿಕ ಆನಂದ ಬಸವನ ತಾಳಕ್ಕೆ ತಕ್ಕಂತೆ ನಾವು ಅಭಿನಯಿಸಬೇಕು. ಎಲ್ಲರ ಪಾತ್ರಗಳನ್ನು ಅವನೇ ನಿರ್ಧರಿಸಿ ಅದಕ್ಕೆ ತಕ್ಕಂತೆ ಅಭಿನಯಿಸಬೇಕಾದ ಕೆಲಸವನ್ನು ನಮಗೆ ನೀಡಿದ್ದಾನೆ. ಅವನು ನಿರ್ಧರಿಸಿದಂತೆ ನಾವು ಬದುಕಬೇಕು ಆ ಪಾತ್ರ ಮುಗಿಸಬೇಕು ಎಂಬ ಆಧ್ಯಾತ್ಮಿಕ ಸಿದ್ಧಾಂತವನ್ನು ಕವಿ ಮಂಡಿಸುತ್ತಾರೆ.

ನಾವು ಈ ಜೀವನದಲ್ಲಿ ಒಳ್ಳೆಯದನ್ನು ಕಲಿಯುತ್ತಾ, ಪಾಲಿಸುತ್ತಾ, ಹದವಾಗುತ್ತಾ ಹೋಗಬೇಕು ಎನ್ನುವ ಕವಿಯು ದಿನದಿಂದ ದಿನಕ್ಕೆ ನಾವು ಬೌದ್ಧಿಕವಾಗಿ, ಭಾವನಾತ್ಮಕವಾಗಿ ಪಕ್ವವಾಗುತ್ತಾ ಸಾಗಬೇಕೆಂಬ ಸಂದೇಶವನ್ನು ಕವಿತೆಯ ಮೂಲಕ ಸಾರಿದ್ದಾರೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಕವಿಯ ಭಾವ ಕೋಶದಿಂದ ತೊರೆಯಾಗಿ ಹರಿದ ಕವಿತೆಯು ಆಧ್ಯಾತ್ಮಿಕ ಮತ್ತು ತಾತ್ವಿಕ ಸ್ಪರ್ಶವನ್ನು ಒಳಗೊಂಡಿದೆ. ಜೀವಪರ ಮತ್ತು ಜೀವನ್ಮುಖಿ ನಿಲುವನ್ನು ಹೊಂದಿದ್ದು ಮಾನವನ ಗುಣಗಳನ್ನು ಓದುಗರ ಮುಂದೆ ಬಗೆ ಬಗೆಯಾಗಿ ಚಿತ್ರಿಸುತ್ತಾ‌ ಅದರ ಆಗು ಹೋಗುಗಳ ಬಗ್ಗೆ ಚಿಂತಿಸುವಂತೆ ಮಾಡಿದ್ದಾರೆ.

ಮನುಷ್ಯನ ನಡೆ ನುಡಿಗಳು ಒಳಗೊಂದು ಹೊರಗೊಂದು ಇದ್ದು ಒಂದಕ್ಕೊಂದು ತಾಳೆಯಾಗದೆ ಇರುವುದಕ್ಕೆ ಬ್ರಮ ನಿರಸನಗೊಂಡ ಕವಿಯು ಜನರ ನಡುವೆ ಏಕತೆ ಮತ್ತು ಮಧುರ ಭಾವ ಮೂಡದಿರಲು ಇವೆಲ್ಲ ಕಾರಣವಾಗುತ್ತವೆ ಎಂಬುದನ್ನು ತಮ್ಮ ಕವಿತೆಯ ಮೂಲಕ ಪ್ರತಿಪಾದಿಸಿದ್ದಾರೆ.

ಇಂದಿನ ದಿನಮಾನಕ್ಕೆ ಸೂಕ್ಷ್ಮವಾಗಿ ಹೊಂದುವಂತೆ ವಾಸ್ತವದ ಕಟು ಸತ್ಯಗಳನ್ನು, ನೈಜವಾದ ಅಂಶಗಳನ್ನು ತೆರೆದಿರುತ್ತಾರೆ. ಚೆನ್ನಾಗಿರುವ ಮರಕ್ಕೆ ಕೊಡಲಿ ಪೆಟ್ಟು ಬೀಳುವಂತೆ, ಸಜ್ಜನರಿಗೆ ಸನ್ಮಾರ್ಗಿಗಳಿಗೆ ಕಷ್ಟಗಳನ್ನು ಹೇಗೆ ನೀಡುತ್ತಾರೆ ಎಂಬುದನ್ನು ಈ ಕವಿತೆಯ ಮೂಲಕ ಬಿಂಬಿಸುತ್ತಾ ಸಾಗಿದ್ದಾರೆ.

ಜೀವನದಲ್ಲಿ ಯಾವುದು ಮುಖ್ಯ ಯಾವುದು ಅಮುಖ್ಯವೆಂಬುದರ ಅರಿವನ್ನು ಮೂಡಿಸಲು ಹೊರಟ ಇವರ ಶ್ರಮ ಶ್ಲಾಘನೀಯ. ಹುಟ್ಟಿನಿಂದ ಸಾವಿನವರೆಗೂ ಬರುವ ಕಾಲಾವಧಿಯಲ್ಲಿ ಧನಾತ್ಮಕವಾಗಿ ಚಿಂತಿಸುತ್ತಾ, ಋಣಾತ್ಮಕ ಭಾವ ತೊರೆದು, ಸಕಾರಾತ್ಮಕ ಕೆಲಸಗಳನ್ನು ಮಾಡಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಕವಿತೆಯ ಸಾಲುಗಳು ಜನ್ಮ ತಾಳಿವೆ.

ನಾವು ಸಮಾಜ ಜೀವಿಯಾಗಿರುವುದರಿಂದ ನಮ್ಮಲ್ಲಿ ಸಾಮರಸ್ಯದ, ಹೊಂದಾಣಿಕೆಯ, ಸಹಕಾರದ ಗುಣಗಳು ಪ್ರಾಮಾಣಿಕವಾಗಿ ಅಂತರ್ಗತವಾಗಿರಬೇಕು. ಅದರ ಹೊರತಾಗಿ ಟೊಳ್ಳು ನಾಟಕ ಮಾಡುತ್ತಾ ಪ್ರಾಣಿಗಳಿಗಿಂತ ಕೀಳಾಗಿ ಬದುಕಬಾರದೆಂಬ ಅರಿವು ಮೂಡಿಸುತ್ತದೆ.

ನಮ್ಮ ಕೈಯಲ್ಲಿ ನಮ್ಮ ಆಯಸ್ಸು ಇರುವಾಗಲೇ ಸಾಧಿಸಬೇಕು. ಅದು ತೆರೆಯ ಮರೆಗೆ ಸರಿಯುವಾಗ ಅಯ್ಯೋ ಏನು ಸಾಧಿಸಲಾಗಲಿಲ್ಲ ಎಂದು ಕೊರಗುವುದು ಮೂರ್ಖತನವೆಂಬ ಜಾಗೃತಿಯನ್ನು ಕವಿತೆ ಹೊತ್ತು ತಂದಿದೆ.

ಸಂಕುಚಿತ ಮನೋಭಾವವನ್ನು ತೊರೆದು ವಿಶಾಲವಾದ, ವೈಚಾರಿಕವಾದ, ಚಿಂತನಾಶೀಲ ಯೋಚನೆಗಳ ಮೂಲಕ ಸಮಾಜಕ್ಕೆ ಉಪಯುಕ್ತವಾದ ವ್ಯಕ್ತಿಯಾಗಿ ಬದುಕುವಂತೆ ಮಾನವೀಯ ಮೌಲ್ಯಗಳ ಬುನಾದಿಗಳನ್ನು ಸ್ಥಾಪಿಸುವಂತೆ ಜನರಿಗೆ ಆಗ್ರಹಿಸುತ್ತಾರೆ.

ಒಟ್ಟಾರೆ ಈ ಕವಿತೆಯಲ್ಲಿ ಕವಿಯು ಸ್ವಾಸ್ಥ್ಯ ಸಮಾಜದ ಕನಸಿನ ಅಂತರದನಿಯನ್ನು ಗುರುತಿಸಬಹುದು. ಸರಳ ಸುಂದರವಾಗಿ ಸಹಜ ಅಭಿವ್ಯಕ್ತಿಯಲ್ಲಿ ಮೂಡಿಬಂದಿರುವ ಕವಿತೆ ಸಾಮಾಜಿಕ ಬದಲಾವಣೆಯನ್ನು ಬಯಸುತ್ತದೆ.


ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

2 thoughts on “

  1. ಅದ್ಭುತ ಕವನಕ್ಕೆ ಅತ್ಯದ್ಭುತ ವಿವರಣೆ. ಕವಿ ಮತ್ತು ವಿಮರ್ಶಕ ಈರ್ವರಿಗೂ ಕೋಟಿ ನಮನಗಳು.

    1. ಶರಣು ತುಂಬು ಹೃದಯದ ಧನ್ಯವಾದಗಳು ಗುರುಗಳೆ..

Leave a Reply

Back To Top