ಹೀಗೊಂದು ದೃಷ್ಟಿ

ಸಣ್ಣಕಥೆ

ನಾಗರತ್ನ ಎಂ ಜಿ. ರವರು ಬರೆದ ಸಣ್ಣ ಕಥೆ

ಹೀಗೊಂದು ದೃಷ್ಟಿ

ಐದು ವರ್ಷದ ಮಗಳು ಭರಣಿ  ಶಾಲೆಯ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡಿ ಎಲ್ಲರಿಂದ ಭೇಷ್ ಅನ್ನಿಸಿಕೊಂಡು ಬಹುಮಾನ ಕೈಯಲ್ಲಿ ಹಿಡಿದು ಕುಣಿಯುತ್ತ ತಮ್ಮೊಂದಿಗೆ ಮನೆಗೆ ಬಂದಾಗ ಆರತಿಗೆ ಸ್ವರ್ಗಕ್ಕೆ ಮೂರೇ ಗೇಣು. ಉತ್ಸಾಹದಲ್ಲಿ ಒಂದು ವಾರದ ಹಿಂದೆ ತಾನೆ ಹಳ್ಳಿಯಿಂದ ಬಂದಿದ್ದ ಮುತ್ತಜ್ಜಿ ಸಾಕಮ್ಮಜ್ಜಿಗೆ   “ಬಿಗ್ ಅಜ್ಜಿ ಏನ್ ಗೊತ್ತಾ?” ಎಂದು ಶಾಲೆಯ ಕಾರ್ಯಕ್ರಮದ ವರದಿ ಒಪ್ಪಿಸಿದ್ದೇ ಒಪ್ಪಿಸಿದ್ದು. ಮತ್ತೆ ಮತ್ತೆ ಡಾನ್ಸ್ ಮಾಡಿ ಮನೆಯಲ್ಲಿ ಗೆಜ್ಜೆ ಶಬ್ದ ತುಂಬಿಸಿ ಕಡೆಗೆ  ಉಸ್ಸಪ್ಪ ಎನ್ನುತ್ತಾ ಕೂತಳು.

ತಿಂಗಳ ಹಿಂದೆ ಸಾಕಮ್ಮಜ್ಜಿ ಹಳ್ಳಿಯಿಂದ ಬಂದಾಗ “ಇವರ್ಯಾರು..ಅನ್ನುವ ಮುಗ್ಧ ಪ್ರಶ್ನೆಗೆ ಆರತಿ ‘ಇವ್ರು ನಮ್ಮಜ್ಜಿ’ ಅಂದಾಗ

ಅಯ್ಯೋ ನಮ್ಮಜ್ಜಿ ಜಾನಕೀ ಅಜ್ಜಿ ಅಲ್ವಾ ಅವಳ ಅಮ್ಮಮ್ಮನ್ನು ನೆನೆಸಿಕೊಂಡು ಹೇಳಿದಾಗ ಆರತಿ

ಇವ್ರು ಅವರಿಗಿಂತ ದೊಡ್ಡಜ್ಜಿ ಎಂದು ಸಮಜಾಯಿಷಿ  ಕೊಟ್ಟಿದ್ದಳು.

‘ಒಹ್ ಬಿಗ್ ಅಜ್ಜೀನ’ ಎನ್ನುತ್ತಾ ಭರಣಿ ಅವರನ್ನು ಹಾಗೆ ಕರೆಯುತ್ತಿದ್ದಳು.

ಈಗ ಕುಣಿದು ಕುಣಿದು ಸುಸ್ತಾಗಿ ನಂತರ ಊಟ ಸೇರದೇ ತಿಂದದ್ದೆಲ್ಲ ಕಕ್ಕಿ  ಏದುಸಿರು ಬಿಡುತ್ತಾ ಕೂತಾಗ ಆರತಿಗೆ ದಿಕ್ಕೇ ತೋಚಲಿಲ್ಲ. ಗಂಡನತ್ತ ನೋಡುತ್ತಾ “ರೀ ಡಾಕ್ಟರ್ ಹತ್ರ ಹೋಗೋಣ” ಅಂದಾಗ ಗೂನು ಬೆನ್ನಿನ ಸಾಕಮ್ಮಜಿ ಕೋಲು ಕುಟ್ಟುತ್ತಾ ಬಂದು “ಯೇ ಡಾಕ್ಟರ್ ಬೇಡ ಮಣ್ಣು ಬೇಡ ಆ ಕೂಸ್ಗೆ ದೃಷ್ಟಿ ಆಗಿದೆ ಒಂದಷ್ಟು ದೃಷ್ಟಿ ತೆಗೆದು ಹಾಕು ಬೆಳಿಗ್ಗೆ ಎಲ್ಲ ಸರಿಯಾಗುತ್ತೆ” ಅಂದರು.

ಆದ್ರೆ ಅಜ್ಜಿ ದೃಷ್ಟಿ ತೆಗೆಯೋದು ಹೇಗೆ ನಂಗೆ….. ಎನ್ನುತ್ತಾ ರಾಗ ಎಳೆದಾಗ.. “ಅಯ್ಯೋ ಅದ್ಯಾವ ಬ್ರಹ್ಮ ವಿದ್ಯೆ ತೊಗೊಂಡ್ಬಾ ಇಲ್ಲಿ ಹಂಚಿ ಕಡ್ಡಿ ಪೊರಕೆ ನಾನು ತೆಗಿತೀನಿ” ಅನ್ನುತ್ತಾ ಅಲ್ಲೇ ಕೂತರು. “ಕಡ್ಡಿ ಪೊರಕೆ ಎಲ್ಲಿಂದ ತರೋದಜ್ಜಿ ಇಲ್ಲಿ use ಮಾಡೋದು ಬೊಂಬಾಯಿ ಪೊರಕೆ ಮತ್ತೆ ಅದನ್ನು ಹಚ್ಚಿಟ್ರೆ ಇಲ್ಲಿ ಗೋಡೆ ಎಲ್ಲ ಕಪ್ಪಾಗುತ್ತೆ…”

“ಕರ್ಮ ಹೋಗ್ಲಿ ಅಕ್ಕ ಪಕ್ಕ ಎಲ್ಲಾದ್ರೂ ಸಗಣಿ ಇದ್ರೆ ತೊಗೊಂಡು ಬಾ ಸಗಣಿ ನೀರು ಮಾಡಿಕೊಡು.. ಒಂದು ಲೋಟದಲ್ಲಿ ಮೆಣಸಿನಕಾಯಿ ಉಪ್ಪು ಮೂರು ಚೂರು ಬಿಳಿ ಬಟ್ಟೆ ಹಾಕಿ ಹೊತ್ತಿಸಿ ನೀವಾಳಿಸಿ ಸಗಣಿ ನೀರಲ್ಲಿ ಬೋರಲು ಹಾಕಿದ್ರೆ ದೃಷ್ಟಿ ಆಗಿರೋದು ಎಲ್ಲ ಕೊಚ್ಕೊಂಡು ಹೋಗುತ್ತೆ ಹು ನಡಿ ಬೇಗ..”

ಒಳ್ಳೆ ಧರ್ಮ ಸಂಕಟ ಬಂತಲ್ಲ… “ಅಜ್ಜಿ ಇದು ಬೆಂಗಳೂರು ನಾವು ಇರೋದು ಅಪಾರ್ಟ್ಮೆಂಟ್ ಸಗಣಿ ಎಲ್ಲಿ ಬರುತ್ತೆ ಇಲ್ಲಿ..? ಮುಖ ಕಿವುಚಿದಳು ಆರತಿ

“ಏನು ಊರೂ ಏನ್ ಕಥೇನೋ ಮಕ್ಲಿಗೆ ದೃಷ್ಟಿ ತೆಗೆಯೋ ಅಭ್ಯಾಸಾನೆ ಇಲ್ವಾ ಇಲ್ಲಿ ಯಾರಿಗೂ..??ಕೆಮ್ಮಿದ್ದಕ್ಕೆ ಸೀನಿದ್ದಕ್ಕೆ ಎಲ್ಲದಕ್ಕೂ ಡಾಕ್ಟ್ರೇ ನಾ..ಚು ಚು ಏನ್ ಕಾಲ ಬಂತಪ್ಪ.. ಈಗೇನು ಮಾಡೋದು?ಪೇಚಾಡುತ್ತಾ ಅಜ್ಜಿ.. “ಸರಿ ಹೋಗ್ಲಿ ಇನ್ನೊಂದ್ ಸುಲಭವಾಗಿ ಇರೋ ಉಪಾಯ ಇದೆ ಉಪ್ಪು ಮೆಣಸಿನಕಾಯಿ ನೀವಾಳಿಸಿ ಒಲೆಗೆ ಹಾಕಣ” ಅಂದಾಗ “ಅಜ್ಜಿ ಅದು ಆಗಲ್ಲ ಗ್ಯಾಸ್ ಸ್ಟವ್ ಮೇಲೆ ಮೆಣಸಿನಕಾಯಿ ಹಾಕಿದ್ರೆ ಮನೆಯೆಲ್ಲಾ ಘಾಟಾಗುತ್ತೆ” ಮತ್ತೆ ಕೈ ಚೆಲ್ಲಿದಳು ಆರತಿ

ಸರಿ ಮಾರಾಯ್ತಿ ಒಂದು ಹಿಡಿ ಉಪ್ಪಾದ್ರೂ ಕೊಡು ಹೋಗ್ಲಿ ಅದ್ನೇ ನೀವಾಳ್ಸ್ತೀನಿ ಅದಾದ್ರೂ ಇದ್ಯಾ ಇಲ್ವಾ..?ಗೊಣಗಿದರು ಅಜ್ಜಿ

ಹು ಕೊಟ್ಟೆ ಕೊಟ್ಟೆ ಅನ್ನುತ್ತಾ ಆರತಿ ಒಂದು ಹಿಡಿ ಹರಳು ಉಪ್ಪನ್ನು ತಂದು ಕೊಟ್ಟಳು

ಎಲ್ಲಿ ಕರಿ ಮಗುನ…

ಸುಸ್ತಾಗಿ ತೂಕಡಿಸುತ್ತಿದ್ದ ಭರಣಿಯನ್ನು ಕರೆದು ತೊಡೆಯ ಮೇಲೆ ಕೂರಿಸಿಕೊಂಡಲು ಆರತಿ.

ಎಡ ಕೈ ಮುಷ್ಟಿಯಲ್ಲಿ ಉಪ್ಪಿರಿಸಿ ಬಲದಿಂದ ಎಡಕ್ಕೆ ನಿವಾಳಿಸುತ್ತ  “ಹಾದಿ ಕಣ್ಣು ಬೀದಿ ಕಣ್ಣು.. ಕಾಗೆ ಕಣ್ಣು ಗೂಬೆ ಕಣ್ಣು..ನಾಯಿ ಕಣ್ಣು ನರಿ ಕಣ್ಣು.. ರಂಡೆರ್ ಕಣ್ಣು ಮುಂಡೇರು ಕಣ್ಣು.. ಸುಡುಗಾಡು ಕಣ್ಣು ಶುಂಠಿ ಕಣ್ಣು ಕಲ್ಲಪ್ಪ ಕರಗಿಹೋಗ್ಲಿ ಛಿ ಪೋ.. ಛಿ ಪೋ.. ಛಿ ಪೋ ” ಎಂದು ರಾಗವಾಗಿ ಪ್ರವರ ಹಾಡಿ ಥು ಅಂತ ಮೂರು ಸಲ ಅನ್ನು ಎನ್ನುತ್ತಾ ಮರಿ ಮಗಳಿಗೆ ಹೇಳಿ…

ಅವಳು ಥು ಥು ಥು ಅಂದ ಮೇಲೆ ಎಲ್ಲಿ ಒಂದು ಬಟ್ಟಲಲ್ಲಿ ನೀರು ಕೊಡು ಎನ್ನುತ್ತಾ ಆ ನೀರಲ್ಲಿ ಉಪ್ಪನ್ನು ಹಾಕಿದರು ಇದು ಕರಗಿದ ಮೇಲೆ ಗಿಡಕ್ಕೆ ಹಾಕು ಅದಾದ್ರೂ ಇದ್ಯಾ ಇಲ್ಲಿ ಅಥವಾ…ಎಂದರು ಗುರ್ ಎನ್ನುತ್ತಾ

ಇಲ್ಲೇ ಕೆಳಗಡೆ ಗಾರ್ಡನ್ ಇದೆ ಅಜ್ಜಿ ಹಾಕ್ತೀನಿ ಅನ್ನುತ್ತಾ ಆರತಿ ಬಟ್ಟಲು ತೆಗೆದಿಟ್ಟಳು

ಇರು ಇನ್ನು ಮುಗಿದಿಲ್ಲ ನಿನ್ನ ಸೆರಗು ಕೊಡು

ಸೆರಗಾ…. ರಾಗ ಎಳೆದಳು ಕುರ್ತಾ ಹಾಕಿದ್ದ ಆರತಿ

ಅಯ್ಯೋ ಸರಿ ನಿನಗೆಲ್ಲಿದೆ ಸೆರಗು ಎನ್ನುತ್ತಾ ಸೊಂಟಕ್ಕೆ ಸಿಕ್ಕಿಸಿದ್ದ ತಮ್ಮ ಸರಗನ್ನೇ ತೆಗೆದು ಮೂರು ಸಲ ಮುಖದಿಂದ ಇಳಿ ತೆಗೆದರು “ಹು ಈಗ ನಿನ್ನ ಕೂದಲಲ್ಲಿ ಮೂರು ಸಲ ಇಳಿ ತೆಗಿ” ಅನ್ನುತ್ತಾ

ಅವಳು ಅದೂ…. ಎಂದು ಬಾಯಿ ಬಿಡುವ ಮುನ್ನವೇ…ಸರಿ ಸರಿ ನಿನ್ನ ತುಂಡು ಕೂದ್ಲಲ್ಲಿ ಅದೂ ಆಗಲ್ಲ ಬಿಡು ಎಂದು ಪೂರಾ ಬಿಳಿಯಾಗಿದ್ದರು ಉದ್ದಕ್ಕಿದ್ದ ತಮ್ಮ ಜಡೆಯಿಂದಲೇ ಮೂರು ಬಾರಿ ಮುಖದಿಂದ ಇಳಿ ತೆಗೆದು ಸರಿ ನೆಟಿಗೆ ತೆಗಿತೀಯ ಅದು ನನಗಾಗಲ್ಲ ನನ್ ಕೈಯಲ್ಲಿ ನೆಟಿಕೆ ತೆಗೆಯೋ ಶಕ್ತಿ ಇಲ್ಲ ಎನ್ನುತ್ತಾ ಸುಕ್ಕು ಗಟ್ಟಿದ ಕೈಯನ್ನು ಆಡಿಸಿದರು. “ಹು ಅದು ಮಾಡ್ತೀನಿ” ಎನ್ನುತ್ತಾ ಆರತಿ ಮಗಳ ಕೆನ್ನೆ ಮುಟ್ಟಿ ನೆಟಿಕೆ ತೆಗೆದಳು. ಪಟ ಪಟ ಎನ್ನುತ್ತಾ ನೆಟಿಕೆ ಬಂದಾಗ ನೋಡಿದ್ಯಾ ಎಷ್ಟು ದೃಷ್ಟಿ ಆಗಿದೆ ಎಂದರು ಅಜ್ಜಿ… ಹು ಹೌದು ಎಂದು

ತೂಕಡಿಸುತ್ತಿದ್ದ ಮಗಳನ್ನು ಮಲಗಿಸಿ ಬಂದು ಅಜ್ಜಿ ಡಾಕ್ಟ್ರು ಬೇಡ್ವಾ ಅನುಮಾನದಿಂದ ಮತ್ತೆ ರಾಗ ಎಳೆದಾಗ

“ಸುಮ್ನೆ ಮಲ್ಕೋ ಹೋಗು ಪೆದ್ದಮ್ಮ ಏನು ಆಗಲ್ಲ” ಎನ್ನುತ್ತಾ ನಿರಾಳವಾಗಿ ಹಾಸಿಗೆಯತ್ತ ನಡೆದರು.

ಪತಿಯತ್ತ ನೋಡಿ ಒಮ್ಮೆ ನಿಡುಸುಯ್ದು ತಾನು ಮಲಗಲು ಹೊರಟ ಆರತಿ

ಕದಲದೆ ಒಳ್ಳೆ ನಿದ್ರೆ ಮಾಡುತ್ತಿದ್ದ ಭರಣಿಯ ಮೇಲೆ ಕೈ ಹಾಕಿ ತಾನು ನಿದ್ರೆಗೆ ಜಾರಿದಳು

ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಹಸಿವು ಎಂದ ಭರಣಿಗೆ ಹಾಲು ಕೊಟ್ಟು how are you putta ಎಂದಾಗ

I am ಫೈನ್ ಎಂದು ಜಿಗಿಯುತ್ತ “ಬಿಗ್ ಅಜ್ಜಿ ಎಲ್ಲಿ “ಎಂದು  ಅವರ ಕೋಣೆಗೆ ಹೋದಾಗ

ನೆಮ್ಮದಿಯ ಉಸಿರು ಬಿಟ್ಟು ಆರತಿ

ಅಜ್ಜಿ ನೋಡಿ ಮಗು ಹುಷಾರಾಗಿದೆ ಎಂದಳು ಸಂಭ್ರಮದಿಂದ… “ಮತ್ತೇನು ಎಂಭತ್ತು ವರ್ಷ ನಾವು ಹಾಗೆ ಸುಮ್ನೆ ಮಕ್ಳನ್ನ ಸಾಕಿದ್ವಿ ಅನ್ಕೊಂಡಿಯ “ಎಂದು ವಿಜಯದ ನಗೆ ಬೀರಿದರು ಸಾಕಮ್ಮಜ್ಜಿ.

Wow this ದೃಷ್ಟಿ is ಗ್ರೇಟ್ ಎಂದು ಕೊಳ್ಳುತ್ತಾ ಅದೇನೇನೋ ಹೇಳಿದ್ರಲ್ಲ…ಅದನ್ನೆಲ್ಲ

ಅಜ್ಜಿ ಹತ್ರ  ಕೇಳಿ ಬರೆಸಿಟ್ಕೋ ಬೇಕು use ಆಗುತ್ತೆ ಎಂದುಕೊಳ್ಳುತ್ತಾ ಅಡಿಗೆ ಮನೆ ಕಡೆ ಹೆಜ್ಜೆ ಹಾಕಿದಳು ಆರತಿ..


 ನಾಗರತ್ನ ಎಂ ಜಿ

Leave a Reply

Back To Top