“ಸ್ನೇಹದ ಮಧುಶಾಲೆ

ಪುಸ್ತಕ ಸಂಗಾತಿ

“ಸ್ನೇಹದ ಮಧುಶಾಲೆ

‘ಗೆಳೆತನದಸವಿಯೊಳಗೆಹೊಸತನದಕಲಿಕೆ…”

“ಬೆಹರ್ ಆಧಾರಿತ ಗಜಲ್‍ಗಳನ್ನು ನಿಜಕ್ಕೂ ಎಲ್ಲರೂ ಬರೆಯಲಾರಂಭಿಸಿದರೆ ಗಜಲ್ ಲೋಕದ ಜೊಳ್ಳುಗಳು ಗಾಳಿಯಲ್ಲಿ ತೂರಿ ಹೋಗಿ ಕೇವಲ ಗಟ್ಟಿ ಕಾಳುಗಳು ಉಳಿದುಕೊಳ್ಳಬಹುದು” ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ‘ಸ್ನೇಹದ ಮಧುಶಾಲೆ’ ಸಂಕಲನದ ಬಗ್ಗೆ ಪ್ರಸ್ತಾಪಿಸುತ್ತ ಗಜಲ್‌ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

      ಹಿಂದಿನ ವರ್ಷ ಶಿರಸಿಯ ಎಂ ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನ ನಮ್ಮ ಬ್ಯಾಚಿನ ಎಲ್ಲರೂ ಸೇರುವುದೆಂದು ನಿರ್ಧರಿಸಿ ಒಂದೆಡೆ ಸೇರಿದ್ದೆವು. ಸುಮಾರು ಇಪ್ಪತ್ತು ವರ್ಷಗಳ ನಂತರದ ಪುನರ್ಮಿಲನ ಅದು. ಕೆಲವರಷ್ಟೇ ಸಂಪರ್ಕದಲ್ಲಿದ್ದು ಹೆಚ್ಚಿನವರನ್ನು ಇಪ್ಪತ್ತು ವರ್ಷಗಳ ನಂತರ ಮೊದಲ ಸಲ ಭೇಟಿಯಾಗುತ್ತಿದ್ದೆವು. ಸಂಪರ್ಕದಲ್ಲಿದ್ದವರಲ್ಲಿಯೂ ಕೂಡ ಕೆಲವರ ಜೊತೆ ಮಾತನಾಡಿದ್ದು ಫೋನ್ ಹಾಗೂ ವ್ಯಾಟ್ಸ್ ಆಪ್‍ಗಳಲ್ಲಿ ಮಾತ್ರ. ಹೀಗಾಗಿ ಇದೊಂ ದು ತರಹದ ರೋಮಾಂಚಕ ಅನುಭವ. ಸ್ನೇಹಿತರನ್ನು ಭೇಟಿಯಾಗುವ ಒಬ್ಬರನ್ನೊಬ್ಬರು ನೋಡುವ ಖುಷಿ. ಒಂದಿಡೀ ದಿನ ಹೊರ ಪ್ರಪಂಚದ ಸಂಕಟಗಳನ್ನು, ಸಂಸಾರದ ಜಂಜಾಟಗಳನ್ನು ಮರೆತು ಹಾಯಾಗಿ ಕಳೆದದ್ದು ಇಂದಿಗೂ ಸವಿ ನೆನಪು.

     ಸ್ನೇಹ ಎನ್ನುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಮೂಲ್ಯವಾದದ್ದು. ಸ್ನೇಹಿತರಿಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟು ನಮ್ಮ ಜೀವನದಲ್ಲಿ ಸ್ನೇಹಿತರು ಹಾಸುಹೊಕ್ಕಾಗಿದ್ದಾರೆ. ಅಂತಹುದ್ದೊಂದು ಸ್ನೇಹದ ದ್ಯೋತಕವಾಗಿ ನಮ್ಮೆದುರಿಗೆ ‘ಸ್ನೇಹದ ಮಧುಶಾಲೆ’ ಗಜಲ್ ಸಂಕಲನವಿದೆ. ಸಂಕಲನದ ವೈಶಿಷ್ಟ್ಯಗಳೇ ಹಲವಾರಿದ್ದರೂ ನನಗೆ ಇಷ್ಟವಾದ ಮುಖ್ಯ ಕಾರಣವೆಂದರೆ ಇದು ಸ್ನೇಹಿತರ ಕೊಡುಗೆ. 1996ರ ಹತ್ತನೆ ತರಗತಿಯ ಸಹಪಾಠಿಗಳೆಲ್ಲ ಸೇರಿ ತಮ್ಮ ಸ್ನೇಹಿತ ಕವಿ, ಗಜಲ್ ಗೋ ಡಾ. ಮಲ್ಲಿನಾಥ ತಳವಾರರವರ ಸಂಕಲನವನ್ನು ಪ್ರಕಟಿಸಿದ್ದಾರೆ. ಆತ್ಮೀಯ ಸ್ನೇಹಿತರೆನ್ನಿಸಿಕೊಂಡವನೂ ಮತ್ತೊಬ್ಬ ಸ್ನೇಹಿತನ ಏಳ್ಗೆಯನ್ನು ಸಹಿಸಲಾಗದ ಈ ಕಾಲದಲ್ಲಿ ಅದೆಷ್ಟೋ ವರ್ಷಗಳ ಹಿಂದಿನ ಸ್ನೇಹವನ್ನು ನೆನಪಿನಲ್ಲಿ ಇಟ್ಟುಕೊಂಡು ಅದೇ ಬಾಲ್ಯದ ಪ್ರೀತಿಯನ್ನು ಎದೆಯಲ್ಲಿ ತುಂಬಿಕೊಂಡು ಸ್ನೇಹಿತ ಮುಂದುವರಿಯಲಿ ಎಂದು ಆಶಿಸುವುದು ಒಬ್ಬರನ್ನು ದ್ವೇಷಿಸುವ ಈ ಕಾಲದಲ್ಲಿ ನಿಜಕ್ಕೂ ಅಚ್ಚರಿ ಹುಟ್ಟಿಸುವ ಆದರೆ ಅಷ್ಟೇ ಅಪೇಕ್ಷಣಿಯವಾದ ಕೆಲಸ. ಇಂತಹ ಅದೃಷ್ಟ ಎಷ್ಟು ಜನರಿಗೆ ಸಿಗಲು ಸಾಧ್ಯ? ಈ ಕಾರಣದಿಂದಾಗಿಯೆ ಗಜಲ್‍ಗಳನ್ನು ಓದುವ ಮೊದಲೇ ಸಂಕಲನ ಇಷ್ಟವಾಗುತ್ತದೆ.

       ಡಾ. ಮಲ್ಲಿನಾಥ ತಳವಾರರು ಸತತ ಗಜಲ್ ಅಭ್ಯಾಸಿಗಳು. ಏನೋ ಓದಿದೆ, ಬರೆದೆ ಎನ್ನುವ ಗಾಳಿಯಲ್ಲಿ ತೇಲಿಸುವಂತೆ ಬರೆಯುವರಲ್ಲ. ಬರೆದದ್ದಕ್ಕೆ ಒಂದು ತೂಕ ಇರಬೇಕು ಎಂದು ಭಾವಿಸುವವರು. ಹೀಗಾಗಿ ಅವರ ಗಜಲ್‍ಗಳಿಗೆ ಕನ್ನಡ ಗಜಲ್ ಸಾಹಿತ್ಯದ ಲೋಕದಲ್ಲಿ ಒಂದು ಮಹತ್ವವಿದೆ. ಕನ್ನಡದಲ್ಲಿ ಗಜಲ್ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಜವಾಬ್ಧಾರಿಯುತವಾಗಿ ಹಾಗೂ ಅಷ್ಟೇ ಧೃಢತೆಯಿಂದ ಮಾತನಾಡಬಲ್ಲ ಬೆರಳೆಣಿಕೆಯ ಗಜಲ್ ಗೋಗಳಲ್ಲಿ ಡಾ. ಮಲ್ಲಿನಾಥ ತಳವಾರರು ಮುಂಚೂಣಿಯಲ್ಲಿದ್ದಾರೆ. ಇಲ್ಲಿಯವರೆಗೆ ಪ್ರಕಟಗೊಂಡ ಅವರ ಗಜಲ್ ಸಂಕಲನಗಳಲ್ಲಿ ಒಂದೊಂದು ಸಂಕಲನದಲ್ಲಿ ಒಂದೊಂದು ಮಾಹಿತಿಯನ್ನು ಅಧ್ಯಯನಪೂರ್ವಕವಾಗಿ ನೀಡಿದ್ದಾರೆ. ತಮ್ಮ ‘ಮಲ್ಲಿಗೆ ಸಿಂಚನ’ ಎಂಬ ಸಂಕಲನದಲ್ಲಿ ಗಜಲ್‍ನ ಪಾರಿಭಾಷಿಕ ಪದಗಳ ಬಗ್ಗೆ ತಿಳಿಸಿಕೊಟ್ಟಿದ್ದರೆ ‘ಗಾಲಿಬ್ ಸ್ಮೃತಿ’ ಸಂಕಲನದಲ್ಲಿ ಗಜಲ್‍ನ ಪೂರ್ಣ ಪ್ರಮಾಣದ ಪರಿಚಯವನ್ನು ಹಾಗೂ ಗಜಲ್‍ನ ಪ್ರಕಾರಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಂಕಲನದಲ್ಲಿ ಬೆಹರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಡಾ. ಮಲ್ಲಿನಾಥ ತಳವಾರರ ಸಂಕಲನಗಳಲ್ಲಿ ಅವರು ಬರೆದಿರುವ ಈ ಸಂಗತಿಗಳನ್ನು ಓದಿದರೆ ಸಾಕು, ಗಜಲ್ ಬರೆಯದವರಿಗೂ ಗಜಲ್ ಬರೆದೇನು ಎಂಬ ಆತ್ಮವಿಶ್ವಾಸವನ್ನು ತುಂಬುವಷ್ಟು ಸಮೃದ್ಧ ಮಾಹಿತಿಯಿದೆ. ಹೀಗೆ ಮಾಗಿತಿಗಳನ್ನು ನೀಡಲು ಅವರು ಅದೆಷ್ಟು ಅಧ್ಯಯನ ಮಾಡಿರಬಹುದು ಎಂಬ ಅಂದಾಜು ಇಲ್ಲಿ ದೊರಕುತ್ತದೆ. ಅದಕ್ಕೆ ತಕ್ಕಂತೆ ಇಲ್ಲಿಯೂ ಕೂಡ ಕೆಲವು ಗಜಲ್‍ಗಳು ಬೆಹರ್ ಆಧಾರಿತವಾಗಿವೆ. ಗಜಲ್ ಬರೆಯುವವರಿಗೆ ಅದರಲ್ಲೂ ಛಂದೋಬದ್ಧವಾಗಿ ಗಜಲ್ ಬರೆಯಬೇಕೆನ್ನುವವರಿಗೆ ಈ ಬೆಹರ್ ಆಧಾರದಲ್ಲಿ ಬರೆಯುವುದು ಅದೆಷ್ಟು ಕಷ್ಟ ಎಂಬುದರ ಅರಿವಿದೆ. ಬೆಹರ್‌ನ ಮಾತು ಬಿಡಿ, ಗಜಲ್‍ನ ಎಲ್ಲ ಶೇರ್‌ಗಳು ಅಂದರೆ ಪ್ರತಿಯೊಂದು ಮಿಸ್ರಾಗಳು ಸಮ ಮಾತ್ರಾಗಣದಲ್ಲಿರಬೇಕು ಎಂದು ನಿಯಮ ಮಾಡಿಕೊಂಡರೆ ಅದನ್ನು ಆಚರಣೆಗೆ ತರುವುದೂ ಎಷ್ಟು ಕಷ್ಟಸಾಧ್ಯ ಎಂದು ಹಾಗೆ ಬರೆದವರಿಗಷ್ಟೇ ಗೊತ್ತಾಗುತ್ತದೆ. ಕಾಫಿಯಾ, ರವೀಶ ಇಟ್ಟುಕೊಂಡು ನಿಯಮವಿಲ್ಲದೆ ಬರೆದ ಕಾಫಿಯಾನಾಗಳು ಹಾಗೂ ರಧೀಫ್ ಇಟ್ಟುಕೊಂಡು ಬರೆದರೂ ಶಿಸ್ತುಬದ್ಧ ಜೋಡಣೆಯಿಲ್ಲದ ಶೇರ್‌ಗಳು ಮೂಡಿ ಬರುತ್ತವೆ. ಇನ್ನು ಕೆಲವರು ಅದನ್ನೂ ಮಾಡುವುದಿಲ್ಲ. ಕೇವಲ ಅಂತ್ಯ ಪ್ರಾಸವನ್ನಿಟ್ಟುಕೊಂಡು ಭಾವಗೀತೆಗಳನ್ನು ಬರೆದು ಗಜಲ್ ಎಂದುಬಿಡುತ್ತಿದ್ದಾರೆ. ಇನ್ನು ಕೆಲವು ಹಿರಿಯರೂ ಕೂಡ ಕಾಫಿಯಾ, ರವೀಶ್‍ಗಳ ನಿಯಮಗಳನ್ನು ಅನುಸರಿಸದೆ ಕೇವಲ ರಧೀಫ್ ಇಟ್ಟುಕೊಂಡು ಮುರಿದು ಕಟ್ಟುವ ದೊಡ್ಡದೊಡ್ಡ ಮಾತುಗಳನ್ನಾಡುತ್ತಿದ್ದಾರೆ. ಬಹುಶಃ ಡಾ. ಮಲ್ಲಿನಾಥ ತಳವಾರರವರ ಎಲ್ಲ ಸಂಕಲನಗಳಲ್ಲಿರುವ ಮಾಹಿತಿಯನ್ನು ಅಧ್ಯಯನ ಮಾಡಿದರೆ ಎಲ್ಲರಿಗೂ ಗಜಲ್ ಏನು ಮತ್ತು ಹೇಗೆ ಬರೆಯಬೇಕು ಎನ್ನುವ ಮಾಹಿತಿ ಮತ್ತು ಮುರಿದು ಕಟ್ಟುವುದಾದರೆ ಮೊದಲು ಒಂದು ಸುಸಬಂದ್ಧವಾದ ಕಟ್ಟುವಿಕೆಯ ಅಗತ್ಯ ಇರಬೇಕಾಗಿರುವುದನ್ನು ಅರಿತುಕೊಳ್ಳಬಹುದು.

ಉಸಿರಾಟವು ಮರೆತೋಗಿದೆ ಮಿತಭಾಷಿಣಿ

ಅನುಬಂಧವು ಕಳೆದೋಗಿದೆ ಮಿತಭಾಷಿಣಿ

ಈ ಶೇರ್‌ನ್ನು ತೆಗೆದುಕೊಂಡರೆ ಇದು 11211/11211/11211 ಈ ಬೆಹರ್‌ನ ಆಧಾರದ ಮೇಲೆ ಬರೆಯಲ್ಪಟ್ಟಿದೆ. ಇದು ಥೇಟ್ ಕನ್ನಡದ ಛಂದಸ್ಸು, ರಗಳೆ, ಕಂದಪದ್ಯ ಅಥವಾ ಸಾಂಗತ್ಯಗಳನ್ನು ಬರೆದ ಹಾಗೆ. ಹೇಗೆ ಭಾಮಿನಿ ಷಟ್ಪಡಿಯಲ್ಲಿ ಹದಿನಾಲ್ಕು ಮಾತ್ರೆಗಳಿರುವ ಸಾಲನ್ನು 3-4 ಮಾತ್ರೆಗಳ ಆಧಾರದ ಮೇಲೆ ವಿಂಗಡಿಸುತ್ತೇವೆಯೋ ಹಾಗೆ. ಅಥವಾ ಅದಕ್ಕಿಂತ ಹೆಚ್ಚಾಗಿ ರಗಳೆಗಳಲ್ಲಿ ಹೇಗೆ ಮಾತ್ರಾಗಣಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೋ ಹಾಗೆ. ಇಲ್ಲಿ ಆರು ಮಾತ್ರೆಗಳ ಮೂರು ಗಣಗಳಿವೆ. ಹಾಗೂ ಆರು ಮಾತ್ರೆಗಳು ನಿರ್ದಿಷ್ಟವಾಗಿ 11211 ರಂತೆ ಜೋಡಿಸಲ್ಪಟ್ಟಿರಬೇಕು ಎಂಬುದು ಈ ಬೆಹರ್‌ನ ನಿಯಮ. ಅದಕ್ಕೆ ತಕ್ಕಂತೆ ನಾಲ್ಕನೆ ಗಜಲ್ ಗಜಲ್‍ನ ರೂಪ ಗುಣ ಇತ್ಯಾದಿಗಳ ಪರಿಚಯ ಮಾಡಿಕೊಡುವುದನ್ನು ಗಮನಿಸಬಹುದು. ಇದು ಸೆಹ್ ಗಜಲ್ ಆಗಿದ್ದು ಗಜಲ್ ನಿಯಮಗಳ ಪ್ರಕಾರ ಹದಿನೇಳನೆಯ ಶೇರ್‌ಗೆ ತಖಲ್ಲೂಸ್ ಇಟ್ಟು ಮುಂದಿನ ಶೇರ್‌ನ್ನು ಪುನಃ ಮತ್ಲಾದಂತೆ ಪ್ರಾರಂಭಿಸಬೇಕು. ಒಂದು ಗಜಲ್‍ನಲ್ಲಿ ಗರಿಷ್ಟ ಹದಿನೇಳು ಶೇರ್‌ಗಳವರೆಗೆ ಅವಕಾಶವಿದ್ದು ಅದೇ ಗಜಲ್‍ನ್ನು ಮುಂದುವರಿಸಬೇಕಾದ ಅನಿವಾರ್ಯತೆ ಇದ್ದಲ್ಲಿ ಎಂಬ ಕಾರಣಕ್ಕಾಗಿ ಇಂತಹುದ್ದೊಂದು ನಿಯಮ ಮಾಡಿಕೊಳ್ಳಲಾಗಿದೆ. ಈಗೀಗ ಕೆಲವರು ಐದನೇ ಶೇರ್‌ಗೆ ಅಥವಾ ಹತ್ತನೆ ಶೇರ್‌ಗೆ ತಖಲ್ಲೂಸ್ ಇಡುತ್ತಿದ್ದು ಡಾ ತಳವಾರ್ ಕೂಡ ಐದನೆ ಶೇರ್‌ಗೆ ತಖಲ್ಲೂಸ್ ಇಟ್ಟು ಪುನ್ ಮತ್ಲಾದಿಂದ ಪ್ರಾರಂಭಿಸಿದ್ದು ಇದೊಂದು ಪ್ರಯೋಗಾತ್ಮಕ ಗಜಲ್ ತರಹ ಓದುಗರ ಎದುರಿಗಿಟ್ಟಿದ್ದಾರೆ.

      “ಸ್ನೇಹದ ಮಧುಶಾಲೆ” ಹಲವಾರು ಪ್ರಯೋಗಗಳನ್ನು ಒಂದೆಡೆ ಮಾಡಿ ಓದುಗರಿಗೆ ಪರಿಚಯಿಸುವ ಕೆಲಸ ಮಾಡುತ್ತದೆ. ಈ ಕಾರಣಕ್ಕಾಗಿಯೆ ಈ ಸಂಕಲನದ ತಕ್ಕಡಿಯಲ್ಲಿ ಸ್ನೇಹದ ಮಾಪನ ಒಂದು ಕಡೆಯಿದ್ದರೆ ಗಜಲ್‍ನ ತೂಕ ಇನ್ನೊಂದು ಕಡೆಯಿದೆ. ಇಲ್ಲಿರುವ ಗಜಲ್‍ಗಳ ವಜನು ಬೇರೆಯೆ ತೆರನಾದದ್ದು. ಹತ್ತಾರು ಸುಂದರವಾದ ಹಾಗೂ ಅಷ್ಟೇ ಪರಿಮಳ ಸೂಸುವ ಹೂಗಳನ್ನು ಜೊತೆಗೆ ಸೇರಿಸಿ ಮಾಲೆ ಕಟ್ಟಿದರೆ ಹೇಗಿರುತ್ತದೆಯೋ ಹಾಗೆ ಈ ಸಂಕಲನದಲ್ಲಿರುವ ಗಜಲ್‍ಗಳು. ಅದಕ್ಕೆ ಸಂಕಲನ ವಸ್ತು ವೈವಿಧ್ಯಗಳೇ ಸಾಕ್ಷಿ. ಹಾಗೆ ನೋಡಿದರೆ ಗಜಲ್ ಪ್ರೇಮಕ್ಕೆ, ವಿರಹಕ್ಕೆ ಅಥವಾ ನವಿರು ಭಾವಕ್ಕೆ ಸೂಕ್ತ ಎಂದು ನಾವು ಪರಿಗಣಿಸುತ್ತೇವೆಯಾದರೂ ಈ ಸಂಕಲನದಲ್ಲಿ ಸೂರ್ಯನ ಅಡಿಯಲ್ಲಿ ಬರುವ ಎಲ್ಲ ವಿಷಯಗಳನ್ನೂ ಕಾಣಬಹುದು. ಪ್ರೇಮ ನಿವೇದನೆ ಹಾಗೂ ವಿರಹ ಸಂಕಲನದ ಸ್ಥಾಯಿಭಾವ ಎನ್ನುವುದರಲ್ಲಿ ಎರಡು ಮಾತಿಲ್ಲ. ಮದಿರೆ ಮತ್ತು ನಶೆ ಇಲ್ಲಿ ಹಾಸುಹೊಕ್ಕಾಗಿದೆ ಎನ್ನುವುದಕ್ಕೆ ಯಾವ ಅನುಮಾನವೂ ಬೇಡ. ಆದರೆ ಹೇಳಬೇಕಾದ ವಿಷಯಗಳನ್ನು ಹೇಳಲು ಗಜಲ್ ಗೋ ಹಿಂದೆ ಮುಂದೆ ನೋಡುವುದಿಲ್ಲ. ಕಠಿಣವಾಗಿ ಹೇಳಬೇಕಾದ ಸಂದರ್ಭಗಳಲ್ಲಿ ಕಾಠಿಣ್ಯ ತೋರದಿದ್ದರೆ ಅದು ನಾವು ಸಮಾಜಕ್ಕೆ ಮಾಡುತ್ತಿರುವ ಅಪಮಾನ ಅಷ್ಟೇ ಅಲ್ಲ ನಮಗೆ ನಾವೇ ಮಾಡಿಕೊಳ್ಳುತ್ತಿರುವ ದ್ರೋಹ ಎಂಬುದನ್ನು ಮರೆಯುವಂತಿಲ್ಲ ಎಂಬುದು ಡಾ. ಮಲ್ಲಿನಾಥ ತಳವಾರರಿಗೆ ಸುಸ್ಪಷ್ಟವಿದೆ.

ತಲೆಗೂದಲು ಬೆಳ್ಳಗಾದ ಮಾತ್ರಕ್ಕೆ ಬುದ್ಧಿ ಬರದು

ಕಿರಿಯರ ಪ್ರತಿಭೆಯನ್ನು ತುಳಿಯುತಿರುವರು

ಎನ್ನುತ್ತ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಒಂದು ಶೇರ್‌ನಲ್ಲಿ ಹಿಡಿದಿಟ್ಟಿದ್ದಾರೆ. ಹಿರಿಯರಿರುತ್ತಾರೆ. ಆದರೆ ಅವರಿಗೆ ಕಿರಿಯರ ಸಾಧನೆಗಳನ್ನು ಕಂಡರೆ ಅದೇನೋ ಹೊಟ್ಟೆಕಿಚ್ಚು. ತಾವೀಗ ಏನೂ ಮಾಡಲಾಗದ ನಿಷ್ಕ್ರಿಯತೆಗೆ ತಲುಪಿದ್ದರೂ ಎಲ್ಲರೂ ತಮ್ಮ ಕುರಿತೇ ಮಾತನಾಡಬೇಕು, ತಮ್ಮದೇ ಗುಣಗಾನ ಮಾಡಬೇಕೆಂಬ ಹಪಹಪಿಕೆ. ಹೀಗಾಗಿ ಸಾಧಿಸುತ್ತಿರುವ ಕಿರಿಯರೆಡೆಗೆಂದು ತಣ್ಣನೆಯ ಕ್ರೌರ್ಯವನ್ನು ಮನದಲ್ಲಿ ತುಂಬಿಟ್ಟುಕೊಂಡಿದ್ದಾರೆ. ಇಂಥವರ ಕುರಿತಾಗಿ ಡಾ ಮಲ್ಲಿನಾಥರು ಹೇಳುತ್ತಿರುವ ಶೇರ್ ಪ್ರಸ್ತುತತೆಗೆ ಹಿಡಿದ ಕನ್ನಡಿಯಂತಿದೆ.

    ಸಮಾಜ ಇರುವುದೇ ಹೀಗೆ ಇಲ್ಲಿ ಜಾತಿ ಧರ್ಮದ ಅವಿವೇಕಗಳು ತಾಂಡವವಾಡುತ್ತಿವೆ. ಯಾವುದೇ ಪ್ರಯೋಜನಕ್ಕೆ ಬಾರದ ಧರ್ಮ ಧರ್ಮಗಳ ನಡುವಣ ಹೊಡೆದಾಟಗಳು ತಾರಕಕ್ಕೇರಿವೆ. ಜಾತಿ ವೈಶಮ್ಯಗಳು ಹೆಚ್ಚಿ ಸಮಾಜದ ಸ್ಥಿತಿಯನ್ನು ಬಿಗಡಾಯಿಸಿವೆ. ಆತ್ಮೀಯನೆನಿಸಿಕೊಂಡವನೂ ಅರಿಯದಂತೆ ಕೇಡು ಬಗೆದಿರುತ್ತಾನೆ. ತನ್ನವನು ಎಂದು ಪ್ರೀತಿಸಿದವನೂ ತನ್ನ ಸ್ವಾರ್ಥ ಸಾಧನೆಗಾಗಿ ಪ್ರೀತಿಯನ್ನು ದೂರಮಾಡಿಕೊಂಡು ದೊಡ್ಡ ವ್ಯಕ್ತಿಯಾದೆ ಎಂದು ಭ್ರಮಿಸುತ್ತಾನೆ.

ಬೆನ್ನಿಗೆ ಚೂರಿ ಹಾಕುವವರೆ ಹೆಚ್ಚು ಜಗದಲ್ಲಿ

ರಕ್ತಕ್ಕೆ ಆಣೆಕಟ್ಟು ಕಟ್ಟುವವರು ಇರದಿರಲಿ

ಎನ್ನುತ್ತಾರೆ ಗಜಲ್‍ಕಾರರು. ಬೆನ್ನಿಗೆ ಚೂರಿ ಹಾಕಿ ತಾವು ಗೆದ್ದೆವೆಂದು ಹೆಮ್ಮೆ ಪಡುವಾಗ ತಾವು ನೈತಿಕವಾಗಿ ಸೋತದ್ದು ಕಣ್ಣಿಗೆ ಕಾಣುವುದೇ ಇಲ್ಲ. ಹರಿಯುತ್ತಿರುವ ನಮ್ಮದೆ ರಕ್ತವನ್ನು ಒಟ್ಟುಗೂಡಿಸಿಕೊಂಡು ತಮ್ಮ ಬೆಳವಣಿಗೆಯ ಹಾದಿಯಲ್ಲಿ ಓಕುಳಿಯಾಡುತ್ತಾರೆ. ತಂದೆ ಮಗ, ತಾಯಿ ಮಗಳು, ಅಣ್ಣ ತಮ್ಮ ಅಕ್ಕ ತಂಗಿ ಹೀಗೆ ನಮ್ಮವರನ್ನೇ ನಂಬಲಾಗದ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಯಾರು ಯಾವ ಕ್ಷಣದಲ್ಲಿ ಯಾವ ರೂಪ ಧರಿಸಿ ರಕ್ತ ಹೀರುವ ಹೆಬ್ಬುಲಿಗಳಾಗುತ್ತಾರೋ ಹೇಳಲಾಗದು. ಕೆಲವರು ಹೆಬ್ಬುಲಿಗಳಂತೆ ಧೈರ್ಯವಾಗಿ ದಾಳಿ ನಡೆಸುವವರೂ ಅಲ್ಲ. ಕಚ್ಚಿದ್ದು ಅರಿವಾಗದಂತೆ ಜಿಗಣೆಯಾಗಿ ರಕ್ತ ಹೀರುತ್ತಾರೆ ಎನ್ನುವ ನೋವಿನ ಧ್ವನಿ ಇಲ್ಲಿದೆ.

ಆದರೆ ಇಂತಹ ಸ್ಥಿತಿಯಲ್ಲೂ ಸಮಾಜವನ್ನು ಸಮಸ್ಥಿತಿಗೆ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಮನೆಯಲ್ಲಿ ಹೇಗೆ ಪ್ರತಿದಿನ ಗುಡಿಸಿದರೂ ಕಸ ಬೀಳುತ್ತ ಇರುತ್ತದೆಯೋ ಹಾಗೆ ಸಮಾಜದಲ್ಲಿ ಪ್ರತಿದಿನವೂ ಶೇಖರಣೆಯಾಗುವ ತ್ಯಾಜ್ಯವನ್ನು ಗುಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ.

ಕಸಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನು

ಸುಂದರ ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು

ಆದರೆ ಗಜಲ್ ಗೋ ಅವರಿಗೆ ಬುದ್ಧಿ ಮಾತು ಹೇಳುತ್ತಿದ್ದಾರೆ. ಸಮಾಜ ಎಂದೂ ಸ್ವಚ್ಛವಾಗದ ಕಸದ ಡಬ್ಬಿ ಇದ್ದಂತೆ. ಗುಡಿಸಿದಷ್ಟೂ ಕಸವನ್ನು ತಂದು ಸುರಿಯುತ್ತಲೇ ಇರುತ್ತಾರೆ. ಹೀಗಾಗಿ ಗುಡಿಸುವ, ಸ್ವಚ್ಛ ಮಾಡುವ ಹುಚ್ಚು ಭ್ರಮೆಗೆ ಸಿಲುಕಿ ಕಸಬರಿಗೆ ಆಗಬೇಡ ಎನ್ನುತ್ತಾರೆ. ಸಂಪ್ರದಾಯಗಳ ಪ್ರಕಾರ ಕಸಬರಿಗೆಯನ್ನು ಲಕ್ಷ್ಮಿದೇವಿ ಎಂದೂ ಹೇಳುವುದುಂಟು. ಆದರೆ ಮನೆಯಲ್ಲೆ ಸ್ವಚ್ಛ ಮಾಡಿದ ನಂತರ ಆ ಕಸಬರಿಗೆಯನ್ನು ಯಾರೂ ಪೂಜಿಸುವುದಿಲ್ಲ. ಬದಲಾಗಿ ಯಾರೂ ಕಾಣದಂತಹ ಒಂದು ಮೂಲೆಯಲ್ಲಿಟ್ಟು ಬಿಡುತ್ತಾರೆ. ಈ ಕಸಬರಿಗೆ ಸಮಾಜದ ಕೆಳವರ್ಗದವರ ದ್ಯೋತಕವೂ ಆಗಿದೆ. ನಮ್ಮ ಊರಿನ ಕೊಳೆಯನ್ನು ಸ್ವಚ್ಛ ಮಾಡಲು ನೇಮಕಗೊಳ್ಳುವ ಪೌರ ಕಾರ್ಮಿಕರು ಸಾಮಾನ್ಯವಾಗಿ ದಲಿತರು ಹಾಗೂ ಕೆಳವರ್ಗದವರು.ಅವರು ಬೀದಿಯನ್ನು ಗುಡಿಸಿ, ರಸ್ತೆ ಬದಿಗೆ ನಾವೇ ಎಸೆದಿರುವ ಪ್ಲಾಸ್ಟಿಕ್, ಕಸ, ತ್ಯಾಜ್ಯ, ಕೊನೆಗೆ ಪ್ರಾಣಿಗಳ ಮಲ ಮುಂತಾದವುಳನ್ನು ಸ್ವಚ್ಛ ಮಾಡಿ ಹೋದಾಗ ಖುಷಿ ಪಡುತ್ತೇವೆ. ಆದರೆ ಎಂದಾದರೂ ಅವರನ್ನು ಕರೆದು ಊಟ ನೀಡಿದ್ದೇವೆಯೇ? ಹೋಗಲಿ, ಕೊನೆಯ ಪಕ್ಷ ಅವರ ಜೊತೆ ನಗುನಗುತ್ತ ಮಾತನಾಡಿದ್ದೇವೆಯೆ? ಅವರ ಹೆಸರು ಕೇಳಿದ್ದೇವೆಯೇ? ಯಾವುದೂ ಬೇಡ, ಅವರೊಂದಿಗೆ ಒಂದು ನಗುವನ್ನಾದರೂ ವಿನಿಮಯ ಮಾಡಿಕೊಂಡಿದ್ದೇವೆಯೇ? ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ನಮಗಿಲ್ಲ. ಏಕೆಂದರೆ ಸಮಾಜದ ಹೊಲಸಿನ ಸೃಷ್ಠಿಕರ್ತರು ನಾವು. ಅದನ್ನು ಸ್ವಚ್ಛ ಮಾಡುತ್ತಿರುವವರು ಅವರು. ಹಾಳು ಮಾಡುವವರಿಗಿಂತ ಸುಸ್ಥಿತಿಯಲ್ಲಿ ಇಡುವವರು ಶ್ರೇಷ್ಠರು ಎಂದು ನಮ್ಮ ಸಂಪ್ರದಾಯ ಹೇಳುತ್ತದೆ. ಆದರೂ ಆ ಸ್ವಚ್ಛ ಮಾಡುವವರನ್ನು ನಾವು ಕೀಳಾಗಿಯೇ ಕಾಣುತ್ತೇವೆ.

ಬಂಗಲೆಯಲ್ಲಿ ಸಾಧನೆಯು ವಿಶ್ರಾಂತಿ ಪಡೆಯುತಿದೆ

ಸುಂದರ ಗುಡಿಸಿಲಿನಲ್ಲಿಯೇ ಪವಾಡ ಜರುಗುವುದು

ಇಷ್ಟಾಗಿಯೂ ನಮ್ಮಲ್ಲಿ ಗುಡಿಸಲಿನಲ್ಲಿದ್ದು ಸಾಧನೆ ಮಾಡಿದವರ ಸಂಖ್ಯೆಯೇನೂ ಕಡಿಮೆಯಿಲ್ಲ. ಬಂಗಲೆಗಳಲ್ಲಿ ಸೋಮಾರಿತನ ಹಾಸಿ ಹೊದ್ದುಕೊಂಡು ಬಿದ್ದಿದೆ. ಆದರೆ ಗುಡಿಸಿಲು ಚಟುವಟಿಕೆಯಿಂದ ಕೂಡಿರುತ್ತದೆ. ಬೆಳಿಗ್ಗೆ ಏಳುತ್ತಲೇ ಅಂದಿನ ತಿಂಡಿಗೇನು ಎಂದು ಪ್ರಶ್ನಿಸಿಕೊಳ್ಳುತ್ತ ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದವರೆಗೂ ಹೋರಾಟ ಮಾಡುತ್ತಲೇ ದಕ್ಕಿಸಿಕೊಳ್ಳಬೇಕಾದ ಅನಿವಾರ್ಯತೆ ಗುಡಿಸಲಿನವರಲ್ಲಿದೆ. ಹೀಗಾಗಿ ಅಲ್ಲಿ ಜೀವಚೈತನ್ಯ ತುಂಬಿದೆ. ಕುಳಿತಲ್ಲಿಗೆ ಊಟ ತಿಂಡಿ ಸರಬರಾಜಾಗುವ ಬಂಗಲೆಗಳಲ್ಲಿ ಯಾವ ಚಟುವಟಿಕೆಗಳೂ ಇಲ್ಲ. ಇದ್ದರೂ ಅಲ್ಲಿಯೂ ಅದು ಗುಡಿಸಿಲಿನಿಂದ ಬಂದವರ ಓಡಾಟ ಅಷ್ಟೇ. ಹೀಗಾಗಿ ಬಂಗಲೆಯವರಿಗೆ ದುಡಿಮೆಯ ಮಹತ್ವದ ಅರಿವಿಲ್ಲ. ಆಹಾರದ ಶ್ರೇಷ್ಠತೆಯ ಕಡೆಗೆ ಗಮನವಿಲ್ಲ. ಜೀವಪ್ರೇಮವಿಲ್ಲ. ಜೀವಪ್ರೇಮ, ಜೀವನ ಪ್ರೀತಿ ಇರುವೆಡೆಯಲ್ಲಿ ಮಾತ್ರ ಅದ್ಭುತ ಪವಾಡಗಳು ಜರಗುತ್ತವೆ ಎಂಬುದನ್ನು ಮಾರ್ಮಿಕವಾಗಿ ಇಲ್ಲಿ ಗಜಲ್ ಗೋ ಹೇಳಿದ್ದಾರೆ.

      ಗಜಲ್ ಎಂದರೆ ಅದು ಮೂಲತಃ ಪ್ರೇಮದ ಪರಿಭಾಷೆ. ಹೀಗಾಗಿ ಯಾವುದೇ ಗಜಲ್ ಸಂಕಲನ ತೆಗೆದುಕೊಂಡರೂ ಅದರ ಸ್ಥಾಯಿಭಾವ ಪ್ರೇಮ ಹಾಗೂ ವಿರಹ. ಈ ಸಂಕಲನದಲ್ಲಿಯೂ ಪ್ರೇಮ ಹಾಗೂ ವಿರಹಕ್ಕೆ ಸಂಬಂಧಪಟ್ಟ ಹತ್ತಾರು ಗಜಲ್‍ಗಳಿವೆ. ಪ್ರೇಮ ವಿರಹಗಳು ಹೇಗೆ ಗಜಲ್‍ನ ಜೀವವೋ ಅಂತೆಯೆ ಮದಿರೆ ಕೂಡ ಗಜಲ್‍ನ ಜೀವಾಳ.

ಮಸ್ತಕದ ಕೀಲಿ ಕೈ ಹೊತ್ತಿಗೆಯ ರಾಶಿಯಲ್ಲಿ ಕಳೆದು ಹೋಗಿದೆ ಗಾಲಿಬ್

ಮಧುಬಟ್ಟಲು ನನ್ನ ಕೈಯ್ಯಲ್ಲಿ ಇದ್ದರೆ ನಾನು ಪುಸ್ತಕವನ್ನೆ ಓದುತ್ತಿರಲಿಲ್ಲ

ಓದು ಬರಹ ಎಷ್ಟಿದ್ದರೇನು ಮದಿರೆ ಕೈಯ್ಯಲ್ಲಿದ್ದರೆ ಮತ್ತೇನೂ ಬೇಡ ಎಂಬುದು ಗಜಲ್ ಪ್ರಿಯರ ಅನಿಸಿಕೆ. ಗಜಲ್‍ನಲ್ಲಿ ಸುರೆಗೆ, ನಶೆಗೆ ಹಾಗೂ ಮೈಖಾನಾಕ್ಕೆ ವಿಶೇಷವಾದ ಸ್ಥಾನವಿದೆ. ಮೈಖಾನಾದಲ್ಲಿ ಮದಿರೆ ನೀಡುವ ಸಾಕಿ ಎಂದರೆ ಎಲ್ಲರ ಅಚ್ಚುಮೆಚ್ಚು. ಜಪಾನಿನಲ್ಲಿ ನಿರ್ದಿಷ್ಟವಾಗಿ ಹೋಗುವ ಮದಿರಾಲಯಗಳಲ್ಲಿ ಆಯಾ ಗ್ರಾಹಕರಿಗೆ ಆಯಾ ಸಾಕಿ ಎಂದು ನಿರ್ದಿಷ್ಟಪಡಿಸಿಕೊಳ್ಳಲಾಗಿರುತ್ತದೆ ಎಂದು ಎಲ್ಲೋ ಓದಿದ ನೆನಪು. ಹಾಗೆ ನಿದಿಷ್ಟಪಡಿಸಲಾದ ಸಾಕಿ ಆ ಗ್ರಾಹಕನ ಎಲ್ಲ ಕಷ್ಟಗಳನ್ನು ಹಂಚಿಕೊಳ್ಳುವ ನೋವಿಗೆ ಕಿವಿಯಾಗುವ, ಖುಷಿಗೆ ಸ್ಪಂದಿಸುವ ಆತ್ಮಸಖ. ಮೈಖಾನಾದಲ್ಲಿ ಹುಟ್ಟಿಕೊಳ್ಳುವ ಹಾಗೂ ಹಾಡಿಕೊಳ್ಳುವ ಗಜಲ್‍ಗಳೆಲ್ಲವೂಸಾಕಿಯನ್ನು ಉದ್ದೇಶಿಸಿ ಹೇಳಿರುವಂತಹುದ್ದೇ. ಇಲ್ಲಿ ಕೂಡ ಗಜಲ್‍ಕಾರ ಕೈಯಲ್ಲಿ ಮದಿರೆಯಿದ್ದರೆ ಪುಸ್ತಕ ಓದುವ ಹಂಗೇಕೆ ಎಂದು ಪ್ರಶ್ನಿಸುತ್ತಾರೆ.

     ಈ ಸಂಕಲನದಲ್ಲಿ ತರಹಿ ಗಜಲ್‍ಗಳಿವೆ. ಯಾರಾದರೂ ಒಬ್ಬ ಗಜಲ್ ಗೋನ ಒಂದು ಶೇರ್ ಅಥವಾ ಮಿಸ್ರಾ ಇಷ್ಟವಾದಲ್ಲಿ ಆ ಮಿಸ್ರಾ ಅಥವಾ ಶೇರ್‌ನ್ನು ಬಳಸಿಕೊಂಡು ಅದರ ಬೆಹರ್ ಅಥವಾ ಲಯಕ್ಕೆ ಏಲ್ಲೂ ಚ್ಯುತಿ ಬರದ ರೀತಿಯಲ್ಲಿ ಗಜ್‍ನ್ನು ಮುಂದುವರಿಸುವ ಗಜಲ್‍ನ್ನು ತರಹಿ ಗಜಲ್ ಎಂದು ಕರೆಯಲಾಗುತ್ತದೆ. ಹಾಗೆಯೆ ಜುಲ್ ಕಾಫಿಯಾ ಗಜಲ್‍ಗಳಿವೆ. ಅಂದರೆ ಒಂದೇ ಗಜಲ್‍ನಲ್ಲಿ ಎರಡು ಕಾಫಿಯಾಗಳು ನಿಯಮದ ಪ್ರಕಾರ ಬಂದಿದ್ದರೆ ಅದನ್ನು ಜುಲ್ ಕಾಫಿಯಾ ಎನ್ನುತ್ತಾರೆ. ಇನ್ನೂ ಕೆಲವು ಗಜಲ್‍ಗಳು ವೃತ್ತಕ್ಕೆ ಬದ್ಧವಾಗಿವೆ. ಉರ್ದು ಗಜಲ್‍ಗಳಲ್ಲಿ ಬರುವ ಮುತ್‍ಫಾಯಿಲುನ್ ವೃತ್ತವನ್ನು ಒಂದು ಗಜಲ್‍ನಲ್ಲಿ ಬಳಸಲಾಗಿದೆ. ಇನ್ನೊಂದು ಗಜಲ್‍ನ್ನು ಫಾಯಿಲ್‍ತುನ್ ವೃತ್ತದ ಆಧಾರದ ಮೇಲೆ ರಚಿಸಲಾಗಿದ್ದು ಅಧ್ಯಯನಿಗಳಿಗೆ ಮಹತ್ವದ ಆಧಾರವನ್ನು ಹಾಗೂ ಅಧ್ಯಯನಕ್ಕೆ ವಸ್ತುವನ್ನು ಒದಗಿಸುತ್ತದೆ. ಸ್ವರ ಕಾಫಿಯಾ ಹಾಗೂ ತೃತೀಯ ಅನುಪ್ರಾಸ ಬಳಸಿದ ಗಜಲ್‍ಗಳನ್ನೂ ಈ ಸಂಕಲನದಲ್ಲಿ ಕಾಣಬಹುದು. ಒಂದು ಆಳವಾದ ಅಧ್ಯಯನಕ್ಕೆ ಮಾತ್ರ ಒದಗುವ ವಿಷಯಗಳು ಇವು. ಈ ಸಂಕಲನ ನಮಗೆ ಅಧ್ಯಯನದ ಮಹತ್ವವನ್ನು ಹೇಳುವ ಹಾಗೂ ಅಧ್ಯಯನ ಇಲ್ಲದೇ ಬೇಕಾಬಿಟ್ಟಿ ಗಜಲ್ ರಚನೆಯಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ವಿವೇಚನೆಯನ್ನು ನೀಡುವ ಎಚ್ಚರಿಕೆಯ ಗಂಟೆಯಾಗಿ ನಮ್ಮೆದುರಿಗಿದೆ.

ಕೊನೆಯದಾಗಿ ಈ ಸಂಕಲನದ ಈ ಶೇರ್ ಗಮನಿಸಿ.

ನಿನ್ನ ತುಂಬಿದ ಕದಪುಗಳು ನನ್ನ ಮನವನು ಕಂಗೆಡಿಸುತಿವೆ

ನಿನ್ನ ಮಿಂಚಿನ ನಯನಗಳು ನನ್ನ ಮನವನು ಕಂಗೆಡಿಸುತಿವೆ

ಎನ್ನುವ ಗಜಲ್‍ನ ಈ ಶೇರ್‌ನ್ನು ತೆಗೆದುಕೊಂಡರೆ ಇದು 21/211/11111/21/1111/211111 ಮಾತ್ರೆಗಳ ಆಧಾರದಂತೆ ಬರೆಯಲ್ಪಟ್ಟಿದೆ. ಎರಡು ಸಾಲುಗಳನ್ನು ಇಂತಹ ಮಾತ್ರೆಗಳ ಆಧಾರದಲ್ಲಿ ಬರೆಯಲು ಪ್ರಯತ್ನಿಸಿದರೆ ಸಾಕು, ತಲೆ ಕೆಟ್ಟುಹೋಗಿ ಗಜಲ್ ಸಹವಾಸ ಬೇಡವೇ ಬೇಡ ಎಂದೆನಿಸಿಬಿಡುತ್ತದೆ. ಇಂತಹ ಬೆಹರ್ ಆಧಾರಿತ ಗಜಲ್‍ಗಳನ್ನು ನಿಜಕ್ಕೂ ಎಲ್ಲರೂ ಬರೆಯಲಾರಂಭಿಸಿದರೆ ಗಜಲ್ ಲೋಕದ ಜೊಳ್ಳುಗಳು ಗಾಳಿಯಲ್ಲಿ ತೂರಿ ಹೋಗಿ ಕೇವಲ ಗಟ್ಟಿ ಕಾಳುಗಳು ಉಳಿದುಕೊಳ್ಳಬಹುದು ಎಂಬ ಆಶಯ ನನ್ನದು.


ಶ್ರೀದೇವಿ ಕೆರೆಮನೆ.

Leave a Reply

Back To Top