ಅಮಾವಾಸ್ಯೆಯ ದಿನ!

ಕಾವ್ಯ ಸಂಗಾತಿ

ಅಮಾವಾಸ್ಯೆಯ ದಿನ!

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಈ ದಿನ ಅಮಾವಾಸ್ಯೆ
ಕಗ್ಗಪ್ಪು ಭ್ರೂಣ ಗರ್ಭದಲಿ ಹೊತ್ತು
ತನ್ನದೇ ತದ್ರೂಪು ಅಚ್ಚ ಕಪ್ಪು ಹೆತ್ತು
ಧರೆಗಿಳಿಸಿದಂಥ ಕರಿ ಕತ್ತಲೆ ರಾತ್ರಿ

ನಿಜ ಅಪ್ಪಟ ಕಪ್ಪು ನಿಶೆಯೆ
ಅಮಾವಾಸ್ಯೆ
ಹಾಗಂತ ಹಗಲಿಗೇಕೆ
ಬೆಳಕ ನುಂಗಿ ಜೀರ್ಣಿಸಿಕೊಂಡ
ಈ ಹೊದಿಕೆ
ಹೊದಿಸಿದಂಥ ನಂಬಿಕೆ?

ಹೌದು ಅದೆಂಥ ನಂಬಿಕೆಗು
ದ್ರೋಹ ಬಗೆಯರು ಕಿಂಚಿತ್ತು
ನಮ್ಮ ಜನ ಅಂಥ ನಿಯತ್ತು!
ಆಸ್ಪತ್ರೆ ಕ್ಲಿನಿಕ್ಕುಗಳೂ ಸಹ ಅಂದು
ಖಾಲಿಖಾಲಿ!
ತುರ್ತು ಚಿಕಿತ್ಸೆಗೆ ಮಾತ್ರ ಹಾಜರಿ
ರಾಹು ಗುಳಿಕ ಮುಂತಾಗಿ
ಘಳಿಗೆಗಳಿಗೆ ಕವಡೆ ಹರಡಿ ನೋಡಿ!
ಶಸ್ತ್ರ ಚಿಕಿತ್ಸೆಗಳಿಗಂತು ಕಂಡರಿಯದ ಕ್ಷಾಮ!
ಹಾಗಂತ ಕೆಲ ವೈದ್ಯ ವೇದಿಗಳು ಸಹ
ಹೊರತಲ್ಲ ನಂಬಿಕೆ ಎಂಬ ಪಾಶಕ್ಕೆ!

ದಿನದಿನ ಹರಿವ ವಾಹನ ಪ್ರವಾಹ
ಹೊತ್ತು ಮೆರೆವ ರಸ್ತೆಗಳಿಗೆ
ತಿಂಗಳ ಬಿಡುವು ಅಮಾವಾಸ್ಯೆಗೆ
ಜನದಟ್ಟನೆಗು ರಜೆ…
ಎಲ್ಲ ಅಲ್ಲಲ್ಲೆ ಸುಮ್ಮನೆ ಕೂತ ಹಾಗೆ!

ಬಹುಷಃ ಪ್ರಕೃತಿಯ ಮುಟ್ಟಿನ ದಿನ
ಅಮಾವಾಸ್ಯೆ
ಮತ್ತು ಮಾತೆಗಂದು ಕಣ್ಣು ಮುಚ್ಟಿ
ತಾನೊಬ್ಬಳೆ ಮೂಲೆ ಸೇರುವ
ಸಮಯಾಚಾರ…!
ಹುಣ್ಣಿಮೆಯಂದು ಮತ್ತೆ
ಹಣೆಯಮೇಲೆ ಚಂದ್ರ ಕುಂಕುಮ
ಮೆರೆವ ಬೆಳಕ ಸಂಭ್ರಮ…!


2 thoughts on “ಅಮಾವಾಸ್ಯೆಯ ದಿನ!

  1. ಪ್ರಕೃತಿಯ ಮುಟ್ಟಿನ ದಿನ ಅಮಾವಾಸ್ಯೆ-
    ಎಂಥ ಕಲ್ಪನೆ!

Leave a Reply

Back To Top