ಗಜಲ್.

ಕಾವ್ಯ ಸಂಗಾತಿ

ಗಜಲ್.

ದಸ್ತಗೀರಸಾಬ್ ದಿನ್ನಿ

ನೂರಾರು ಹೊಂಗನಸುಗಳನು ನೀನು ತುಳಿಯುತ್ತ ಹೋದೆ
ಕನಸುಗಳನು ಮೆಲ್ಲನೆ ಮೈದಡವಿ ನಾನು ಅರಳಿಸುತ್ತ ಹೋದೆ

ಕೆನ್ನೆಗುಂಟ ಇಳಿವ ಕಂಬನಿಗಳನು ನೀನು ಲೆಕ್ಕಿಸಲೇ ಇಲ್ಲ
ಪರಿಚಿತ ನೋವಲ್ಲೂ ನಾನು ಖುಷಿಯನು ಹೆಚ್ಚಿಸುತ್ತ ಹೋದೆ
 
ಎಲೆಬಳ್ಳಿ ಚಿಟ್ಟೆಗಳ ಮೇಲೆ ನೀನು ಶತಪಥ ತಿರುಗಿದಿ
ಪ್ರೀತಿ ಹೂ ಬೀಜಗಳನು ನಾನು ಬಿತ್ತುತ್ತ ಹೋದೆ

ಬಿಡಿಸಿದ ಒಲುಮೆಯ ಚಿತ್ರಗಳನು ನೀನು ಹರಿದು ಹಾಕಿದಿ
ಭಾವಕ್ಕೆ ಬಣ್ಣ ಬಳಿದು ನಾನು ಜೀವ ತುಂಬುತ್ತ ಹೋದೆ

ಬೆಳದಿಂಗಳ ಮಧುರ ಗೀತೆಗೆ ನೀನು ದನಿಯಾಗಲೇ ಇಲ್ಲ
ಚೆಲುವಿನ ಜೀವರಾಗವನು ನಾನು ಹಾಡುತ್ತ ಹೋದೆ

ಬದುಕನು ಶಿಶಿರದ ಮರದಂತೆ ನೀನು ಬೋಳಾಗಿಸಿದಿ
ಇಬ್ಬನಿ ಚೆಲ್ಲಿ ವಸಂತನಾಗಿ ನಾನು ಹಸಿರು ಹಬ್ಬಿಸುತ್ತ ಹೋದೆ. 


One thought on “ಗಜಲ್.

Leave a Reply

Back To Top