ಅಂಕಣ ಸಂಗಾತಿ

ಚಾಂದಿನಿ

ನನ್ನ ಅಕೌಂಟೂ ಹ್ಯಾಕಾಗಿದೆ

ನನ್ನ ಅಕೌಂಟೂ ಹ್ಯಾಕಾಗಿದೆ; ನನಗೆ ಸಾಕಾಗಿದೆ!

ಸಾಮಾನ್ಯಕೆ ಮುಸ್ಸಂಜೆಯ ಹೊತ್ತಿಗೆ ದೇವರ ಸ್ತೋತ್ರ ಓದುವ ಅಭ್ಯಾಸ ನಂದು. ಕಳೆದ ವಾರದಲ್ಲಿ ಒಂದು ದಿನ ಇದೇ ಕೈಂಕರ್ಯದಲ್ಲಿ ತೊಡಗಿದ್ದೆ, ಮೊಬೈಲ್ ದೂರ ಇರಿಸಿ. ಆ ದಿನ ಏಕಾದಶಿ ಇದ್ದುದರಿಂದ ಸ್ವಲ್ಪ ಹೆಚ್ಚೇ ಹೊತ್ತು ದೇವರ ಎದುರು ಕುಳಿತಿದ್ದೆ. ಸಮಾರು ಎಂಟೂವರೆ ಹೊತ್ತಿಗೆ ಮೊಬೈಲ್ ಟಿಂಗ್ ಟಂಗ್ ಟುಂಗ್ ಅಂತ ಸದ್ದು ಮಾಡಲಾರಂಭಿಸಿತು. ಗಾಳಿಗೆ ಮಾವಿನಣ್ಣು ಉದುರುವಂತೆ ಮೇಸೇಜ್‌ಗಳು ಉದುರಲಾರಂಭವಾಯಿತು. ಎಂತ ಕತೆ ಇದು ಅನ್ನುತ್ತಾ ಎದ್ದು ಮೊಬೈಲ್ ತೆಗೆದು ನೋಡಿದರೆ ನನ್ನ ಫೇಸ್ಬುಕ್ ಮೇಸೇಂಜರ್ ತುಂಬಾ ಮೇಸೇಜ್‌ಗಳು ತುಂಬಿ ತುಳುಕುತ್ತಿದ್ದವು.

ಇದೆಂತ ಅಕ್ಕಾ, ಇದೆಂತ ಮೇಡಂ, ಇದೆಂತ ಮಾರಾಯ್ತೀ, ಈ ಲಿಂಕ್ ಓಪನ್ ಆಗ್ತಿಲ್ಲ, ಇಲ್ಲಿ ನೆಟ್ ಸ್ಲೋ ಇದೆ, ಇದು ಯಾವ ವಿಡಿಯೋ, ಯಾರ ವಿಡಿಯೋ ಹೀಗೆ ತರಾವರಿ ಪ್ರಶ್ನೆಗಳು ಮೆಸೇಂಜರ್ ತುಂಬ. ಈ ಮಧ್ಯೆ ನೀವು ಅದೆಂತ ಕಳುಹಿಸಿದ್ದು, ಅದು ಓಪನ್ ಆಗ್ತಿಲ್ಲಾಂತ ಕಾಲ್‌ಗಳು ಬರಲಾರಂಭಿಸಿದವು. ನನ್ನ ಯಾವುದೇ ಕೈವಾಡ ಇಲ್ಲದೆ, ಅನಿರೀಕ್ಷಿತವಾಗಿ ಇಷ್ಟೆಲ್ಲ ಮೇಸೇಜುಗಳು, ಕಾಲ್‍ಗಳು ನನ್ನ ಕೈಕಾಲು ಬಿದ್ದು ಹೋಗುವಂತೆ ಮಾಡಿದವು. ನನ್ನ ಪಾಡಿಗೆ ವಿಷ್ಣುಸಹಸ್ರನಾಮ ಓದುತ್ತಿದ್ದ ನಾನು ಯಾರಿಗೂ ಏನೂ ಕಳುಹಿಸಿಲ್ಲವಲ್ಲ, ಇದೇನಾಯ್ತು ಅಂತ ತಲೆಬಿಸಿಯಾಗಿ ಸ್ವಲ್ಪ ಬೆವರೊಡೆದಂತಾಯಿತು. ಮತ್ತೂ ಗೊತ್ತಾಗದೆ ತಪ್ಪಿ ಏನಾದರೂ ಒತ್ತಿದ್ದೇನಾ ಅಂತ ಕಣ್ಣಿಗೆ ಕನ್ನಡಕ ಏರಿಸಿ ಹುಡುಕಿದೆ. ನೋಡಿದರೆ ಅದೊಂದು ಲಿಂಕ್ ನನ್ನ ಮೆಸೇಂಜರ್‌‍ನಿಂದ ಸೆಂಡ್ ಆಗಿದೆ. ಅದು ಸಾದಾಸೀದ ಲಿಂಕ್ ಅಲ್ಲ. ಅದನ್ನು ಯಾರೋ ಫಟಿಂಗರು ಕ್ರಿಯೇಟ್ ಮಾಡಿರುವುದು. ಮತ್ತು ಅದರಲ್ಲಿ “ಇದರಲ್ಲಿ ಇರುವುದು ನೀವಾ” ಎಂಬ ಪ್ರಶ್ನೆ ಇಂಗ್ಲೀಷಿನಲ್ಲಿ ಇತ್ತು. ಇದೊಂದು ಫೇಕ್ ಲಿಂಕ್ ಆಗಿದ್ದು, ಇತರರ ಅಕೌಂಟ್ ಹ್ಯಾಕ್ ಮಾಡುವ ಉದ್ದೇಶದಿಂದ ಯಾರೋ ದುಷ್ಕರ್ಮಿಗಳು ಹುಟ್ಟುಹಾಕಿರುವ ಲಿಂಕ್ ಅದು.

ವಿಷಯ ಇಷ್ಟೇ. ಕಳೆದ ವಾರದಲ್ಲಿ ನನಗೆ ಚೆನ್ನಾಗಿ ಪರಿಚಿತಳಿರುವ ಸ್ನೇಹಿತೆ ಆಶಾ ಗೌರಿಯ ಮೇಸೇಂಜರ್‌ನಿಂದ ನನಗೆ ಈ ಲಿಂಕ್ ಬಂದಿತ್ತು. ಇದು ಯಾವ ವಿಡಿಯೋ ಅನ್ನುತ್ತಾ ನಾನು ಅದನ್ನು ಓಪನ್ ಮಾಡಲು ಪ್ರಯತ್ನಿಸಿದೆ. ಅದು ಆಶಾಳ ಮೆಸೇಜು ಆಗಿದ್ದ ಕಾರಣ. ನಾವು ಕಾಲೇಜು ಸಮಯದಲ್ಲಿ ಜೊತೆಯಲ್ಲಿದ್ದವರು. ಎನ್ನೆಸ್ಸೆಸ್, ಟ್ರೆಕ್ಕಿಂಗ್ ಅದು-ಇದು ಅಂತ ಜೊತೆಗೆ ಓಡಾಡಿಕೊಂಡಿದ್ದವರು. ಆಕೆ ಒಬ್ಬ ಬಹಳ ಒಳ್ಳೆಯ ಕವಯತ್ರಿ. ಪಿಯುಸಿಯಲ್ಲಿಯೇ ಅವಳ ಕವನ ಸಂಕಲನ ಬಿಡುಗಡೆ ಆಗಿತ್ತು. ಇಂತಿಪ್ಪ ಆಶಾ ಈ ಹಿಂದೆ ಯಾವುದೋ ಒಂದು ನಮ್ಮ ಕಾಲೇಜು ಸಮಯದ ಫೋಟೋ ಕಳುಹಿಸಿ ಸವಿ ನೆನಪು ಮರುಕಳಿಸುವಂತೆ ಮಾಡಿದ್ದಳು. ಅದಲ್ಲದೆ ಅವಳದ್ದು ‘ಅಕ್ಷಯಪಾತ್ರೆ ಅಡುಗೆಮನೆ’ ಎಂಬ ಯೂಟ್ಯೂಬ್ ಚಾನೆಲ್ ಸಹ ಇದೆ. ನಾವು ಆಗೀಗ ಫೋನಲ್ಲಿ ಮಾತಾಡಿಕೊಳ್ಳುತ್ತಿರುತ್ತೇವೆ. ಹೀಗೆಲ್ಲ ಇರುವಾಗ ಆಕೆ ಹಳೆಯ ಫೋಟೋ ಏನಾದರೂ ಕಳುಹಿಸಿರಬಹುದೆಂದು ನನಗೆ ನಾನೇ ಊಹೆ ಮಾಡಿಕೊಂಡು ಅವಳು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಓಪನ್ ಮಾಡಲು ಹೋದೆ. ಅದು ಮತ್ತೆ ಫೇಸ್‌ಬುಕ್‌ಗೆ ಲಾಗಿನ್ ಆಗಲು ಹೇಳಿತು. ನಾನು ಮಂಗ ಆಗಿದ್ದು ಇಲ್ಲಿಯೇ. ಬಹುಶಃ ನನ್ನ ಲಾಗಿನ್ ಕ್ರೆಡೆನ್ಶಿಯಲ್ಸ್ ಹಾಕಿರಬೇಕು. ನನಗೆ ಸರಿಯಾಗಿ ನೆನಪಾಗುತ್ತಿಲ್ಲ.

ಇಷ್ಟೆಲ್ಲ ಆಗುವ ವೇಳೆಗೆ ಸ್ವಲ್ಪ ಡೌಟಾಯಿತು. ಆಶಾಳಿಗೇ ವಾಟ್ಸಾಪ್ ಮಾಡಿ, ಆ ಲಿಂಕಲ್ಲಿ ಯಾರೂ ಇಲ್ಲ, ಅದು ಒಂದು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳುತ್ತೆ ಅಂದೆ. ಪಾಪ, ಅವಳಿಗೆ ನನ್ನಂತೆ ಹಲವು ಜನ ಮೆಸೇಜೂ, ಕಾಲೂ ಮಾಡಿದ್ದರು. ಇದರಿಂದ ಹೈರಾಣಾಗಿದ್ದ ಆಕೆ, “ಅದು ನಾನಲ್ಲ ಕಳುಹಿಸಿದ್ದು, ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗೀದೇಂತ” ಹೇಳಿದ್ಲು. ನನ್ನ ಮೆಸೇಂಜರ್‌ನಿಂದ ಮೆಸೇಜ್ ಹೋಗಿ ಎಲ್ಲರಿಗೂ ತೊಂದರೆ ಆಯ್ತು ಅಂತ ಬೇಸರಿಸಿಕೊಂಡಳು. ಅಯ್ಯೋ ನಿನಗೆ ಗೊತ್ತಿಲ್ಲದೆ ಆದದಲ್ವೇ, ನಿಂದೇನು ತಪ್ಪಿಲ್ಲ ಅಂತ ಸಮಾಧಾನಿಸಿದೆ. ಮರುದಿನ ಅವಳ ಫೇಸ್ಪುಕ್ ಗೋಡೆಯಲ್ಲಿ ಒಂದು ಡಿಸ್‌ಕ್ಲೇಮರ್ ಹಾಕಿ ಅಕೌಂಟ್ ಹ್ಯಾಕ್ ಆಗಿದೆ ಅಂತ ಹೇಳಿಕೊಂಡಳು.

ಇದಾಗಿ ಎರಡೇ ದಿವಸದಲ್ಲಿ ನನ್ನ ಮೆಸೇಂಜರ್‌ನಿಂದ ನನ್ನ ಸ್ನೇಹಿತರ ಪಟ್ಟಿಯಲ್ಲಿರುವ ಹಲವು ಸ್ನೇಹಿತರಿಗೆ It’s you in the video? ಎಂಬ ಪ್ರಶ್ನೆಯೊಂದಿಗೆ ಆ ‘ಕಲ್‌ಪ್ರಿಟ್ ಲಿಂಕ್’ ಇರುವ ಮೆಸೇಜ್ ಸೆಂಡ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಪಳಗದವರು ಮತ್ತು ನಾನು ಇದು ಆಶಾಳ ಮೆಸೇಜು ಎಂದು ಓಪನ್ ಮಾಡಲು ಹೋದಂತೆ, ನನ್ನ ಅಗ್ದಿ ಸ್ನೇಹಿತರು ಇದು ಚಂದ್ರಳ ಮೆಸೇಜು ಎಂದು ಓಪನ್ ಮಾಡಲು ಪ್ರಯತ್ನಿಸಿದರು. ಇನ್ನು ಕೆಲವರಿಗೆ ಬೇರೋಂದು ಆಪ್ ಡೌನ್‌ಲೋಡ್ ಮಾಡಲು ಹೇಳಿದಾಗ, ಪಾಸ್‌ವರ್ಡ್ ನಮೂದಿಸಲು ಹೇಳಿದಾಗ ಏನೋ ಸಂಶಯ ಬಂದು ಸುಮ್ಮನಾಗಿದ್ದಾರೆ. ಮತ್ತೆ ಕೆಲವರಿಗೆ ಅದರ ಅಪಿಯರೆನ್ಸಲ್ಲೇ ಫೇಕ್ ಅಂತ ಗೊತ್ತಾಗಿ ಸುಮ್ಮನಾದರು. ಆದರೆ ಎಷ್ಟು ಜನಕ್ಕೇ ಅಂತ ಸಮಜಾಯಿಷಿ ನೀಡಲು ಸಾಧ್ಯ. ‘ನೀವಲ್ಲದೆ, ನೀವು ಕಳುಹಿಸದಿದ್ದರೆ ನಿಮ್ಮ ಮೆಸೇಂಜರಿನಿಂದ ಹೇಗೆ ಬರಲು ಸಾಧ್ಯ’ ಅಂತ ಕೆಲವರು ವಾದಕ್ಕೆ ಚರ್ಚೆಗೆ ನಿಂತರು. ಮತ್ತೆ ಕೆಲವರು ಸ್ಕ್ರೀನ್ ಶಾಟ್ ತೆಗೆದು ನನ್ನ ವಾಲಲ್ಲಿ ಪೋಸ್ಟ್ ಮಾಡಿದರು. ಈ ಮಧ್ಯೆ ಅಕೌಂಟ್ ಹ್ಯಾಕ್ ಆಗಿದೇಂತ ತಿಳಿದು ಆದಷ್ಟು ಬೇಗ ಪಾಸ್ವರ್ಡ್ ಚೇಂಜ್ ಮಾಡುವ ದಾವಂತ!

ಹ್ಯಾಕ್ ಆಗೋಯ್ತಲ್ಲಾ ಛೇ…. ಅನ್ನುತ್ತಾ, ಈ ವಿಷದಲ್ಲಿ ನನ್ನ ಸೀನಿಯರ್ ಮತ್ತು ಅನುಭವಿಯೂ ಆಗಿರುವ ಆಶಾ ಬಳಿ ಓಡಿದೆ. ಓಡಿದೆ ಅಂದರೆ ಫೋನ್ ಮಾಡಿದೆ. ನನ್ನ ಅಕೌಂಟೂ ಹ್ಯಾಕಾಗಿದೆ ಏನು ಮಾಡುವುದೂಂತ ಸಲಹೆ ಕೇಳಿದೆ. ಕೂಡ್ಲೆ ಪಾಸ್‌ವರ್ಡ್ ಚೇಂಜ್ ಮಾಡಿ ಟು-ಫ್ಯಾಕ್ಟರ್ ಅಥೆಂಟಿಕೇಶನ್ (two-factor authentication (TFA) ಸೆಟ್ ಮಾಡು ಅಂದಳು. ಇಷ್ಟರಲ್ಲಿ ಈ ವಿಷಯದ ಅರಿವಿರುವ ಸ್ನೇಹಿತ ವರ್ಗದ ಹಲವರು ಮೆಸೇಜ್ ಮಾಡಿ ನಿನ್ನ ಅಕೌಂಟ್ ಹ್ಯಾಕಾಗಿದೆ, ತಕ್ಷಣ ಪಾಸ್ವರ್ಡ್ ಬದಲಿಸಿ ಲಾಗೌಟ್ ಮಾಡು ಅಂದರು. ನಾನು ಹಾಗೇ ಲಾಗ ಹಾಕಿದೆ. ನನಗೆ ಸಾಧ್ಯವಿರುವಷ್ಟು ಮಂದಿಗೆ ಮೆಸೇಜ್ ಮಾಡಿ ಆ ಲಿಂಕ್ ಓಪನ್ ಮಾಡದಿರಿ, ಹೀಗೀಗೆ ಹ್ಯಾಕ್ ಆಗಿದೆ ಎಂಬುದಾಗಿ ವಿವರಿಸಿದೆ.

ಏನಿದು ಈ ಲಿಂಕ್, ಇದು ಎಂತಾ ಸ್ಕ್ಯಾಮ್ ಅಂತ ಗೂಗಲಿಸಿದೆ. ಅಲ್ಲಿ ಸಿಕ್ಕ ಮಾಹಿತಿ ಪ್ರಕಾರ ಇದು ಇಂದು ನಿನ್ನೆಯದಲ್ಲ. ಸುಮಾರು ಎರಡ್ಮೂರು ವರ್ಷದಿಂದ ನಡೀತಾ ಇದೆ. ಇತರರ ಮೆಸೇಂಜರ್ ಮೂಲಕ ನಮಗೆ ಬಂದ ಲಿಂಕ್ ಓಪನ್ ಮಾಡಲು ಪ್ರಯತ್ನಿಸುವಾಗ ಫೇಸ್‌ಬುಕ್ ಲಾಗಿನ್ ಪುಟ ಇರುವಂತದೇ ನಕಲಿ ಪುಟ ಓಪನ್ ಆಗುತ್ತದೆ, ಮತ್ತು ಅಲ್ಲಿ ನಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಹಾಕಲು ಹೇಳುತ್ತದೆ. ನಾವು ಸೋಲುವುದು ಇಲ್ಲಿಯೇ. ನಮ್ಮ ಪಾಸ್ವರ್ಡ್ ಹಾಕಿ ಲಾಗಿನ್ ಆಗಲು ಪ್ರಯತ್ನಿಸುವಾಗ ಅವರು ನಮ್ಮ ಪಾಸ್ವರ್ಡ್ ಕದಿಯುತ್ತಾರೆ. ಇದನ್ನು ಖದೀಮ ಕೆಲಸ ಮಾಡುವ ಇತರರಿಗೆ ನೀಡುತ್ತಾರೆ. ಇದಕ್ಕಾಗೇ ಆ ಲಿಂಕ್ ಮೂಲಕ ನಕಲಿ ಪುಟ ತೆರೆದು ಅಲ್ಲಿ ನಮ್ಮ ಪಾಸ್ವರ್ಡ್ ಹಾಕುವಂತೆ ಪ್ರಚೋದಿಸಲಾಗುತ್ತದೆ. ಈ ಪಾಸ್ವರ್ಡ್ ಮೂಲಕ ನಮ್ಮ ಅಕೌಂಟ್‌ಗೆ ಅವರು ಪ್ರವೇಶ ಮಾಡಬಹುದು. ನಮ್ಮ ಡೇಟಾ ತೆಗೆಯಬಹುದು. ನಮ್ಮ ಮೇಸೇಂಜರ್‌ನಿಂದ ಮೆಸೇಜ್ ಕಳುಹಿಸಬಹುದು. ಹೀಗೆ ಮೆಸೇಜ್ ಕಳುಹಿಸಿ ಇತರರು ಲಾಗಿನ್ ಮಾಡಲು ಪ್ರಯತ್ನಿಸುವಾಗ ಅವರ ಪಾಸ್ವರ್ಡ್ ತೆಗೆಯುತ್ತಾರೆ. ಹೀಗೇ ಇದು ಹರಡುತ್ತದೆ ಮಾತ್ರವಲ್ಲ ಇದರಿಂದ ನಮ್ಮ ಸೀಕ್ರೆಟ್ ಡೇಟಾ ಪತ್ತೆಮಾಡಲು ಸಾಧ್ಯವಂತೆ.

ಒಂದೊಮ್ಮೆ ನಿಮಗೂ ಇಂತಾ ಲಿಂಕ್ ಬಂದು ನೀವೂ ಏನಾದರೂ ಅದನ್ನು ಕ್ಲಿಕ್ ಮಾಡಿದ್ದರೆ, ಅಥವಾ ನಿಮ್ಮ ಅಕೌಂಟ್ ಹ್ಯಾಕ್ ಆಗಿದ್ದರೆ, ಕೂಡಲೇ ಪಾಸ್ವರ್ಡ್ ಬದಲಿಸಿ. ಮತ್ತು ನೀವು ಫೇಸ್ಬುಕ್, ಮೆಸೇಂಜರ್ ಬಳಸುವ ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೇಟ್ ಹೀಗೆ ಎಲ್ಲಾ ಡಿವೈಸ್‌ಗಳಿಂದ ಲಾಗ್‌ಔಟ್ ಆಗಿ. ಫೇಸ್ಬುಕ್ಕ್ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿ ಟು-ಫ್ಯಾಕ್ಟರ್ ಅಥೆಂಟಿಕೇಶನ್ (TFA) ಆ್ಯಕ್ಟಿವೇಟ್ ಮಾಡಿ. ಹೀಗೆ ಮಾಡಿದಲ್ಲಿ ನಿಮ್ಮ ಅಕೌಂಟ್‌ಗೆ ಲಾಗಿನ್ ಆಗುವ ಮೊದಲು ಒಂದು ಸೀಕ್ರೇಟ್ ಕೋಡ್ ಬರುತ್ತದೆ ಮತ್ತು ಆ ಕೋಡ್ ಹಾಕಿಯೇ ಲಾಗಿನ್ ಮಾಡಬೇಕು. ಈ ಕೋಡ್ ನಿಮಗೇ ಬರುತ್ತದೆ ಮತ್ತು ನಿಮಗೆ ಮಾತ್ರ ತಿಳಿದಿರುವುದರಿಂದ ಇತರರಿಗೆ ಲಾಗಿನ್ ಮಾಡಲು ಸಾಧ್ಯ ಆಗುವುದಿಲ್ಲ. ಫೇಸ್ಬುಕ್ ಬಳಸದೇ ಇರುವ ವೇಳೆಗೆ ಲಾಗೌಟ್ ಆಗಿರಿ. ಬೇಕಾದಾಗ ಲಾಗಿನ್ ಮಾಡಿಕೊಳ್ಳಿ.

ಯಾವುದಕ್ಕೂ ಸಂಶಯ ಇರುವ ಯಾವುದೇ ಲಿಂಕ್ ಮಟ್ಟದೇ ಇರುವುದೇ ಬೆಟರ್. ನೀಲಿ ಬಣ್ಣದ ಲಿಂಕ್ ಕ್ಲಿಕ್ ಮಾಡಲು, ಓಪನ್ ಮಾಡಲು ಹೋಗಲೇ ಬಾರದು ಅಂತ ನನಗೆ ನನ್ನ ಸ್ನೇಹಿತರು ಬುದ್ಧಿ ಹೇಳಿದ್ದಾರೆ. ಅಕೌಂಟ್ ಹ್ಯಾಕ್ ಮಾಡುವುದು, ಇತರರ ಫೇಕ್ ಅಕೌಂಟ್ ಓಪನ್ ಮಾಡಿ ಮೆಸೇಂಜರ್‌ಗೆ ಬಂದು ಹಣ ಕೇಳುವುದು ಇಂತದೆಲ್ಲ ಆದರೆ, ನಾವು ಆ ಮೆಸೇಂಜರಲ್ಲೇ ಉತ್ತರಿಸುವ ಬದಲು ಇತರ ಮಾರ್ಗಗಳನ್ನು ಬಳಸಿ, ಅಂದರೆ ವಾಟ್ಸಾಪ್ ಅಥವಾ ಫೋನ್ ಮಾಡಿ ಮಾತಾಡಿ ಸಂಶಯ ಪರಿಹರಿಸಿ ಸ್ಪಷ್ಟಪಡಿಸಿಕೊಳ್ಳುವುದು ಉತ್ತಮ. ನೀವೇನೇ ಹೇಳಿ ಈ ಹ್ಯಾಕರ್‌ಗಳ ದೆಸೆಯಿಂದಾಗಿ, ನನ್ನ ಅಕೌಂಟ್ ಹ್ಯಾಕಾಯಿತು; ನಂಗೆ ಸಾಕಾಗಿ ಹೋಯಿತು ಎಂಬಂತಾಯಿತು.


ಚಂದ್ರಾವತಿ‌ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

One thought on “

  1. ಉಪಯುಕ್ತ ಲೇಖನ. ಧನ್ಯವಾದಗಳು.

Leave a Reply

Back To Top