ಅಕಾಲಿಕ‌ ಮಳೆಗೊಂದು ಬೆಚ್ಚಗಿನ ಪದ್ಯ

ಕಾವ್ಯ ಸಂಗಾತಿ

ದೀಪಾ ಗೋನಾಳರವರ ಹೊಸ ಕವಿತೆ

ಅಕಾಲಿಕ‌ ಮಳೆಗೊಂದು ಬೆಚ್ಚಗಿನ ಪದ್ಯ

ಅವನು ;
ಹೇ ಹುಡುಗಿ
ಇಲ್ಲಿ ನಿನ್ನಂತದೆ ಹಠಮಾರಿ
ಮಳೆ
ಎದೆಕತ್ತು ಬೆನ್ನು
ಎಲ್ಲ ಕಡೆ ಚಳಿಸುತ್ತಿದೆ
ಒಂದು ಪತ್ರವಾದರೂ
ಬರೆಯಬಾರದಾ ಬೆಚ್ಚಗಿರಲು.

ಅವಳು;
ಮುಚ್ಚಿದ ಲಕೋಟೆಯಲ್ಲಿ
ಬಚ್ಚಿಟ್ಟು ಕಳಿಸುವೆ,
ಯಾರೂ ಇಲ್ಲದ ಹೊತ್ತು
ಬಿಚ್ಚಿ ನೋಡು,
ಲೊಚ್ಚ ಎಂದು ತುಟಿ ಮೇಲೆ
ಚಿಟ್ಟೆಯೊಂದು ಪಟ್ಟನೆ ಕಡಿದು
ಹಾರಿದಂತಾದರೆ ಒಂದುಚಣ
ಹಾಗೆ ಕಣ್ಮುಚ್ಚು-

-ಎದ್ದಾಗ ಎದೆ ಮೇಲೆ ಮೂಗುತಿಯ
ಅಚ್ಚು
ಅಲ್ಲಲ್ಲಿ ಹಲ್ಕಚ್ಚು-
-ಬಿದ್ದು ಹಸಿರಾಗಿದ್ದರೆ ಚೂರು
ಅರಿಷಿಣ ಹಚ್ಚು,
ಬನಿಯನ್ ಇಲ್ಲದೆ
ಓಡಾಡದಂತೆ ಮಾಡಿದಳೆಂದು
ಒಳೊಳಗೆ ಮುನಿಸಗೈಬೇಡ
ಸ್ವಲ್ಪ ಸಹಿಸು,
ಎಳೆ ಹುಡುಗಿ,
ಎಳೆದು ಮತ್ತೆ ಮತ್ತೆ ತೋಳಿಗಾನಿಕೊಂಡರೆ
ಸಿಡುಕಬೇಡ- ಸಹಕರಿಸು,
ಮುಟ್ಟಿದ ಕೂಡಲೆ ದೂಡಕಬೇಡ
ಮೆಲ್ಲನೆ ಅನುನಯಿಸು,
ಸ್ಪರ್ಷ ಹೂ ಮುಟ್ಟಿದಂತಿರಲಿ,
ದನಿ‌ ಪಿಸುಗುಟ್ಟುವಂತಿರಲಿ
ಹೆಸರು ಕರೆಯುವಾಗ
ಉಸಿರು ಕತ್ತು ತಾಕುತಿರಲಿ,
ಇನ್ನೂ ಹತ್ತಿರ ಬೇಕೆನಿಸಿದರೆ
ಒಂದಿಂಚು ಜಾಗ ನಡುವೆ‌ ಉಳಿಸು,
ನಾನೇ‌ ಎಳೆಯಬೇಕೆಂದು
ರೋಮಾಂಚನ‌ ಕಾಯ್ದಿರಿಸು

ರಾತ್ರಿ ಹೊತ್ತು
ಎಚ್ಚರಿರಬೇಕು ಗತ್ತು
ಮತ್ತು ಮುತ್ತು-
-ನೀ‌ ಕೇಳುತ್ತಿರಬೇಕು
ನಾನು ದೂಡುತ್ತಿರಬೇಕು
ರಾತ್ರಿ ಕಳೆದು ಬೆಳಗಾದಾಗ
ಎಲ್ಲಿ?ಯಾವಾಗ?
ಏನಾಯ್ತು?
ಲೆಕ್ಕಕ್ಕೆ ಸಿಗದಂತಿರಬೇಕು

ಈ‌ ಲಕೋಟೆ ಒಡೆವಾಗ
ನಾ ಹಚ್ಚಿದ ಎಂಜಲು ನಿನ್ನ
ಬೆರಳಿಗೆ
ಮೆತ್ತಿರಲಿ
ಬೆವರಲಿ ನಿನ್ನೂಸಿರು,
ಅಕ್ಷರಗಳ‌ ಬಿಸಿ ತಾಗಿ..

——————————–

3 thoughts on “ಅಕಾಲಿಕ‌ ಮಳೆಗೊಂದು ಬೆಚ್ಚಗಿನ ಪದ್ಯ

Leave a Reply

Back To Top