ಅಂಕಣ ಸಂಗಾತಿ

ಗಜಲ್ ಲೋಕ

ಭಾಗ್ಯವತಿ ಕೆಂಭಾವಿಯವರ

ಒಲವಿನ ಗಜಲ್ ಬಟ್ಟಲು..

.

ನನ್ನೆಲ್ಲ ಗಜಲ್ ಪ್ರೇಮಿಗಳಿಗೆ ನಮಸ್ಕಾರ… ಎಂದಿನಂತೆ ಇಂದೂ ಕೂಡ ನಾಡಿನ ಪ್ರಮುಖ ಗಜಲ್ ಗೋ ಒಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಹಾಜರಾಗಿದ್ದೇನೆ. ತಾವು ಅವರ ಪರಿಚಯ, ಅಶಅರ್ ಓದಲು ಕಾತುರರಾಗಿದ್ದೀರಿ ಅಲ್ಲವೇ.. ತಮ್ಮ ಕಾತುರಕ್ಕೆ ನಾನು ಬೇಲಿಯಾಕಲಾರೆ.. ಇಗೋ ಇಲ್ಲಿದೆ ಅವರ ಪರಿಚಯ ಮತ್ತು ಅವರ ಅಶಅರ್.. ನೀವುಂಟು, ಅವರುಂಟು.. ನಾನೇಕೆ ಮಧ್ಯೆ, ಅಲ್ಲವೇ…!!

ಚಿಂತನೆಯ ಮಾಡಿದೆವು ಹಗಲಿರುಳು ಎಡೆಬಿಡದೆ

ಜಗದ ಮಾಟವದು ಒಂದಿನಿತು ತಿಳಿಯದಿದೆ

ಮಿರ್ಜಾ ರುಸ್ವಾ

         ಜೀವ ಸಂಕುಲಕ್ಕೆ ಆಶ್ರಯ ನೀಡಿದ ಇಡೀ ಭೂಮಂಡಲವೆಲ್ಲ ಒಂದೇ ಕುಟುಂಬವೆ. ಆದರೆ ಮನುಷ್ಯನ ಬೌದ್ಧಿಕತೆ ಹೆಚ್ಚಿದಂತೆಲ್ಲ ಪ್ರತ್ಯೇಕತೆ ಪಸರಿಸುತ್ತ ಬಂದಿದೆ. ಅದರ ಫಲವೇ ಇಷ್ಟೊಂದು ದೇಶ, ಭಾಷೆ, ಸಂಸ್ಕೃತಿ ಹಾಗೂ ವಿಚಾರಧಾರೆಗಳ ತಾಕಲಾಟ. ಆದಾಗ್ಯೂ ಉತ್ತಮವಾದುದು ಎಲ್ಲಿಂದಲೇ ಬರಲಿ, ಅದನ್ನು ಪ್ರೀತಿಸಬೇಕು; ಸ್ವಾಗತಿಸಬೇಕು ಎಂಬುದು ಭಾರತದ ಸಂಸ್ಕೃತಿಯೂ ಹೌದು, ಕರ್ನಾಟಕದ ಸಂಸ್ಕೃತಿಯೂ ಹೌದು. ನಮ್ಮ ಭಾಷೆ, ಉಡುಗೆ-ತೊಡುಗೆ, ಆಚಾರ-ವಿಚಾರ, ನಡೆ-ನುಡಿ… ಎಲ್ಲದರ ಮೇಲೆ ಪಾಶ್ಚಾತ್ಯ ಮತ್ತು ಪೂರ್ವಾತ್ಯ ರಾಷ್ಟ್ರಗಳ ಪ್ರಭಾವವಿರುವುದನ್ನು ಅಲ್ಲಗಳೆಯಲಾಗದು. ಇದರಿಂದ ಕೆಲವೊಮ್ಮೆ ನಮ್ಮ ‘ಅಸ್ಮಿತೆ’ ಸಹ ಅಲುಗಾಡಿದುಂಟು! ಅದೇನೇ ಇರಲಿ, ಸಾಹಿತ್ಯ-ಸಂಗೀತ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಾಷೆ-ಗಡಿ-ಸೀಮೆಯ ಹಂಗಿರುವುದಿಲ್ಲ. ಇಡೀ ಪರಪಂಚವೇ ಇದರ ಸ್ಥಾಯಿ ಸ್ಥಳ. ಪ್ರಾಚೀನ ಪರಂಪರೆಯಿಂದ ಅರ್ವಾಚೀನ ಪರಂಪರೆಯ ಸಾರಸ್ವತ ಲೋಕವನ್ನು ಗಮನಿಸಿದರೆ ಇದರ ವಸ್ತುಸ್ಥಿತಿ ಅರಿವಾಗಬಲ್ಲದು. ನಾವು ಭುವನೇಶ್ವರಿಯ ಹೃದಯ ವೈಶಾಲ್ಯತೆ ಗುರುತಿಸುವುದಾದರೆ ವಿಶ್ವದೆಲ್ಲೆಡೆಯಿಂದ ನಮ್ಮ ನಾಡಿನಲ್ಲಿ ಇಂದು ಹತ್ತು ಹಲವಾರು ಸಾಹಿತ್ಯ ಪ್ರಕಾರಗಳು ಆಶ್ರಯ ಪಡೆದು, ಇಲ್ಲಿಯವೆ ಎನ್ನುಷ್ಟರಮಟ್ಟಿಗೆ ಕನ್ನಡಿಗರ ಎದೆಗೂಡಿನಲ್ಲಿ ನೆಲೆ ನಿಂತಿವೆ. ಅವುಗಳಲ್ಲಿ ಇಂದು ಬರಹಗಾರರ ಡೈ ಹಾರ್ಟ್ ಫೇವರೇಟ್ ಎಂದರೆ ‘ಗಜಲ್’. ಇದು ಭಾವಪ್ರಧಾನವಾಗಿದ್ದು, ಒಂದು ಸಂಸ್ಕೃತಿಯ ಕೊಡು ಕೊಳ್ಳುವಿಕೆಯ ಕಾರಣದಿಂದಾಗಿ ದೇಶಗಳ ಎಲ್ಲೆಯನ್ನು ದಾಟಿ ಬಂದಿದೆ. ಇಂಥಹ ‘ಗಜಲ್’ ಮದರಂಗಿಯನ್ನು ಪ್ರೀತಿಸುತ್ತ ಪೋಷಿಸುತ್ತಿರುವವರಲ್ಲಿ ಶ್ರೀಮತಿ ಭಾಗ್ಯವತಿ ಕೆಂಭಾವಿಯವರೂ ಒಬ್ಬರು.

          ಶ್ರೀಮತಿ ಭಾಗ್ಯವತಿ ಕೆಂಭಾವಿಯವರು ಶ್ರೀ ಅಮರೇಶ್ವರ ಮುದ್ಗಲ್ ಮತ್ತು ವೀರಮ್ಮ ಎಂಬ ಕಾಯಕ ಜೀವಿಗಳ ಮಗಳಾಗಿ ಜನಿಸಿದರು. ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಮುದ್ದಿನ ಮಗಳಾಗಿ ಬೆಳೆದರು.  ತಮ್ಮ ಹುಟ್ಟೂರು ಯಾದಗಿರಿಯಲ್ಲಿಯೆ ಶಿಕ್ಷಣವನ್ನು ಆರಂಭಿಸಿ, ಎಂ.ಎ ಸ್ನಾತಕೋತ್ತರ, ಬಿ.ಎಡ್ ಪದವಿಯನ್ನು ಮುಗಿಸಿ ; ಪ್ರಸ್ತುತವಾಗಿ ಯಾದಗಿರ ಜಿಲ್ಲೆಯ ಸರಕಾರಿ ಪ್ರೌಢಶಾಲೆ, ಹೆಡಗಿಮದ್ರದಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ “ಬಸವೋತ್ತರ ಯುಗದ ವಚನಕಾರರ ವಚನೇತರ ಸಾಹಿತ್ಯ” ಎಂಬ ವಿಷಯ ಕುರಿತು ಸಂಶೋಧನೆಯನ್ನು ಮಾಡುತಿದ್ದಾರೆ.

      ತಮ್ಮ ಶಾಲಾ ದಿನಗಳಿಂದಲೇ ಸಾಹಿತ್ಯ ರಚನೆ ಕುರಿತು ಆಸಕ್ತಿ ಹೊಂದಿದ್ದ ಶ್ರೀಯುತರು ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅಂದರೆ ಕವನ, ವಚನ, ಗಜಲ್, ಚುಟುಕು, ಗದ್ಯ ಬರಹ… ಮುಂತಾದವುಗಳಲ್ಲಿ ಕೃಷಿ ಮಾಡಿದ್ದಾರೆ, ನಿರಂತರವಾಗಿ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ನಡೆದ ಅ.ಭಾ.ಕ.ಸಾ ಸಮ್ಮೇಳನದಲ್ಲಿ ಇವರ ಪ್ರಥಮ ಕವನ ಸಂಕಲನ – “ಸಿರಿಸೊಡರು” ಲೋಕಾರ್ಪಣೆ ಆಗಿದೆ. ಗಜಲ್ ಸೆಳೆತಕ್ಕೆ ಸಿಲುಕಿ ಕಳೆದ ೨೦೨೦ರ ಜನೆವರಿಯಲ್ಲಿ “ಒಲವಿನ ಮಧುಬಟ್ಟಲು” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ಮತ್ತೊಂದು ಗದ್ಯಕೃತಿ ಮುದ್ರಣ ಹಂತದಲ್ಲಿದೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಹತ್ತು ಹಲವು ಅಭಿನಂದನ ಗ್ರಂಥಗಳಿಗೆ ಇವರು ಮೌಲ್ಯಿಕ ಲೇಖನಗಳನ್ನೂ ಬರೆದಿದ್ದಾರೆ.

       ಸಾಹಿತ್ಯದ ಜೊತೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಯಾದಗಿರಿ ಜಿಲ್ಲೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಿಳಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಎರಡನೆ ಅವಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿ ಕಲಬುರಗಿ ಕೇಂದ್ರದಲ್ಲಿ ಇವರ ಕವನ ವಾಚನ, ಲಘು ಭಾಷಣ , ಪುಸ್ತಕ ಪರಿಚಯದಂತಹ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಜಿಲ್ಲಾ ಹಂತದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ಸ್ಥಾನದ ಗೌರವವೂ ಇವರಿಗೆ ಸಂದಿದೆ. ತಮ್ಮ ವೃತ್ತಿಯನ್ನು ತುಂಬಾ ಪ್ರೀತಿಸುವ ಇವರು ಮಕ್ಕಳ ನೆಚ್ಚಿನ ಶಿಕ್ಷಕಿಯಾಗಿ ಪಾಲಕರ ಹಾಗೂ ಪೋಷಕರ ಹೃದಯವನ್ನು ಗೆದ್ದಿದ್ದಾರೆ. ಅದಕ್ಕೆ ಇವರ ಸಾಧನೆಯ ಕುರುಹು ಎಂದರೆ ೨೦೧೮ ರಲ್ಲಿ ಲಭಿಸಿದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯ ಗರಿ. ಇದರೊಂದಿಗೆ ಇವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳು ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಪಂ.ಪುಟ್ಟರಾಜ ಸೇವಾ ಸಮಿತಿಯ ೨೦೨೦ನೇ ವರ್ಷದ ಶ್ರೇಷ್ಠ ಕೃತಿ ರತ್ನ ಪ್ರಶಸ್ತಿ, ಕರುನಾಡ ಸೇವಾ ಸಾಧಕಿ ಪ್ರಶಸ್ತಿ… ಮುಂತಾದವುಗಳು.

       ಭಾವನೆಗಳನ್ನು ವ್ಯಕ್ತಪಡಿಸಲು ‘ಮಾತು’ ತುಂಬಾ ಮುಖ್ಯ. ಆದರೆ ಎಷ್ಟೋ ಸಲ ಆ ಮಾತೇ ಭಾವನೆಯನ್ನು ಕೊಲ್ಲುತ್ತದೆ. ಅಂದರೆ ಭಾವನೆ ಭಾಷೆಯ ಮೌತಾಜ್ ಅಲ್ಲ. ಮೌನವೇ ಭಾವನೆಗಳ ತವರೂರು. ಈ ಮೌನದ ಛಾಯೆಯನ್ನು ಮಾತಿನಲ್ಲಿ ಹಿಡಿದಿಡುವ ಕಾವ್ಯ ಪ್ರಕಾರವೇ ‘ಗಜಲ್’. ಭಾವ ಸಂಗಮದಲ್ಲಿ ಅರಳಿದ ಭಾವನೆಗಳ ಅಂತಃಸತ್ವವೆ ಇದರ ಉಸಿರು. ಭಾವ ಕೆನೆಗಟ್ಟಿ, ಅದು ಬಂಧುರಗೊಂಡಾಗಲೆ ಓದುಗನ, ಕೇಳುಗನ; ಸಹೃದಯಿಯ ಹೃದಯವನ್ನು ಗೆಲ್ಲುತ್ತದೆ. ಈ ನೆಲೆಯಲ್ಲಿ ಗಜಲ್ ಗೋ ಅವರು ವ್ಯಕ್ತಿಯ ವಿವಿಧ ಅನೂಹ್ಯ ಭಾವಗಳಾದ ಸ್ನೇಹ-ಪ್ರೀತಿ-ಪ್ರೇಮಗಳ ಆಂತರಿಕ ತುಡಿತ, ಪ್ರಣಯ-ವಿರಹದ ಕಾವು, ಜೀವನದ ಅಸ್ಥಿರತೆ-ಯಾಂತ್ರಿಕತೆ-ನಾಟಕೀಯತೆ, ಸಾಮಾಜಿಕ ಜೀವನದ ಬಯಕೆ, ಭಕ್ತಿಭಾವ-ದೈವಿಕತೆ-ಆಧ್ಯಾತ್ಮಿಕ ಚಿಂತನೆ, ವ್ಯಕ್ತಿ ಚಿತ್ರಣ, ಪ್ರಕೃತಿ, ಸ್ತ್ರೀ ಸಂವೇದನೆ, ವೈಚಾರಿಕ ವಿವೇಚನೆ.. ಹೀಗೆ ಮುಂತಾದ ಹತ್ತು ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಗಜಲ್ ಗಳನ್ನು ರಚಿಸಿದ್ದಾರೆ.

ಆಮಂತ್ರಣದ ಊಟಕೆ ಬಂದವರು ತುಂಬಿದ ತಟ್ಟೆಯಲಿ ಕೈ ತೊಳೆದರು

ತುತ್ತು ಅನ್ನಕ್ಕೆ ಅಂಗಲಾಚಿ ಸಾಯುವರು ನಿತ್ಯವೂ ನೋಡುತಿರುವೆನು ಸಾಕಿ

ಈ ಮೇಲಿನ ಷೇರ್ ಇಂದಿನ ಜಾಗತೀಕರಣ ಭೋಗ ಜೀವನವನ್ನು ಬಿಂಬಿಸುತ್ತ, ಆರ್ಥಿಕ ಅಸಮಾನತೆಯತ್ತ ಬೆರಳು ಮಾಡಿ ; ಅದರಿಂದುಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ನಮ್ಮ ಗಮನವನ್ನು ಸೆಳೆಯುತ್ತದೆ. ಮದುವೆ -ಮುಂಜಿಯಂತಹ ಅನ್ನದ ಕಾರ್ಯಕ್ರಮಗಳು ಹಸಿದವರಿಗಿಂತ ಹೊಟ್ಟೆ ತುಂಬಿದವರಿಗೆನೆ ಊಟ ಬಡಿಸುತ್ತಿವೆ. ನಿರೀಕ್ಷೆಯಂತೆ ಆ ಒಡಲುಗಳು ದೇವರಿಗಿಡುವ ನೈವೇದ್ಯದಂತೆ ಕೆಲ ತುತ್ತುಗಳನ್ನು ಬಳಸಿಕೊಂಡು ಕಸವಾಗಿ ಪರಿವರ್ತಿಸುವವು!  ಈ ಷೇರ್ ನ ಮಿಸ್ರಾ -ಎ-ಸಾನಿ, ಮಿಸ್ರಾ-ಎ-ಊಲಾದ ಇಂಪ್ಯಾಕ್ಟ್ ಆಗಿ ಮೆದು ಮನಸುಗಳನ್ನು ತಲ್ಲಣಿಸುತ್ತಿರುವಂತಿದೆ. ಇಲ್ಲಿ ಗಜಲ್ ಗೋ ಅವರು ಹಸಿದವರಿಗೆ ಅನ್ನ ನೀಡಬೇಕು ಎಂಬ ಸಾತ್ವಿಕ ವಿಚಾರವನ್ನು ತಮ್ಮ ಷೇರ್ ಮುಖಾಂತರ ಅರುಹಿದ್ದಾರೆ.

       ನಮ್ಮ ನಾಡು ಪುರಾಣ ಪುರುಷರಿಂದ, ಸಾಧು-ಸಂತ-ಪಕೀರರಿಂದ, ಮೇಧಾವಿ-ಚಿಂತಕ-ದಾರ್ಶನಿಕರಿಂದ ಕಂಗೊಳಿಸಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.‌ ಆ ಪರಂಪರೆಯಲ್ಲಿ ತಮ್ಮ ಯುವಪೀಳಿಗೆ ಮುಂದುವರಿಯಲೆಂದು ಹಿರಿಯರು ಅವರ ಕಥೆಗಳನ್ನು ಹೇಳುತ್ತಾ ಬಂದಿದ್ದಾರೆ. ಆದರೆ ನಮಗೆ ಕಥೆ ಕೇಳುವಲ್ಲಿ ಇರುವ ಆಸಕ್ತಿ, ಅಭಿರುಚಿ, ಮನೋರಂಜನೆ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಇಲ್ಲ. ಸತ್ಯ ಹರಿಶ್ಚಂದ್ರನ ನಾಡಿನಲ್ಲಿಂದು ಆ ಹರಿಶ್ಚಂದ್ರನ ಸವತಿಯ ಮಕ್ಕಳದೆ ಪಾರುಪತ್ಯ! ಅಂತೆಯೇ ಗಜಲ್ ಗೋ ಅವರು ತಮ್ಮ ಗಜಲ್ ಒಂದರ ಷೇರ್ ನಲ್ಲಿ ಈ ರೀತಿ ಹೇಳಿದ್ದಾರೆ.

ನಿಮಿಷಕ್ಕೊಂದು ನಾಲಿಗೆ ಹುಟ್ಟುತ್ತಿದೆ ಜಗದಲಿ

ಸತ್ಯ ಹರಿಶ್ಚಂದ್ರನಾಗಲು ಹೊರಟಿದ್ದು ನನ್ನದೇ ತಪ್ಪು

ಇಂದಿನ ಸಮಾಜದ ಚಿತ್ರಣವನ್ನು ಈ ಮೇಲಿನ ಷೇರ್ ಕಟ್ಟಿಕೊಡುತ್ತದೆ. ನಾಲಿಗೆಗಳು ಹೇಗೆ ಬಣ್ಣ ಬದಲಾಯಿಸುತ್ತ ಸಾಗುತ್ತಿವೆ ಎಂಬುದನ್ನು ಹೇಳುತ್ತ, ಬೆತ್ತಲೆ ಪರಪಂಚದಲ್ಲಿ ಬಟ್ಟೆ ತೊಟ್ಟವನೆ ಹುಚ್ಚ ಎಂಬ ವಿಷಾದದ ಛಾಯೆಯೂ ಇದರಲ್ಲಿದೆ. ಮೌಲ್ಯವರ್ಧಿತ ದಾರಿ ನಡೆಯುವ ಕಾಲುಗಳಿಗೆ ಮುಳ್ಳುಗಳ ಹಾಸಿಗೆಯನ್ನು ಹಾಸುತ್ತಿರುವುದು ನಿಜಕ್ಕೂ ಖೇದಕರ!

       ಕಂಬನಿಯ ಕಡಲಲ್ಲಿ ದೋಣಿ ಹಾಯಿಸುವ ಕೆಲಸವನ್ನು ‘ಗಜಲ್’ ಯಶಸ್ವಿಯಾಗಿ ಮಾಡುತ್ತ ಬಂದಿದೆ, ಬರುತ್ತಿದೆ. ಇಂಥಹ ‘ಗಜಲ್’ ಗಳು ಕದಡಿದ ಮನಸ್ಸುಗಳನ್ನು ಶಾಂತಗೊಳಿಸಬೇಕಾಗಿದೆ. ಈ ದಿಸೆಯಲ್ಲಿ ಶ್ರೀಮತಿ ಕೆಂಭಾವಿಯವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಸಂಕಲನಗಳು ಮೂಡಿಬರಲಿ, ಅವುಗಳು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

ನೀರಿನ ಮೇಲೆ ದ್ವೇಷವಿದ್ದರೆ ಹೇಳು ದಾಹ ಏನು ಮಾಡಬೇಕು 

ವರ್ತಮಾನ ಬೆತ್ತಲೆಯಾಗಿದ್ದರೆ ಇತಿಹಾಸ ಏನು ಮಾಡಬೇಕು

ಡಾ. ಹನುಮಂತ ನಾಯಡು

       ಗಜಲ್ ಉದ್ಯಾನವನದ ವಿಹಾರ ತಮ್ಮ ಮನಸ್ಸಿಗೆ ಮುದ ನೀಡುತ್ತಿದೆ ಅಲ್ಲವೇ.. ಆದರೂ ಏನೂ ಮಾಡೋದು, ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ? ಹಾಗಾಗಿ ಇಂದು ನಾನು ನನ್ನ ಈ ಬರಹಕ್ಕೆ ಅಲ್ಪ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ತಮಗೆ ಕಾಯಿಸದೆ ಬೇಗ ತಮ್ಮ ಮುಂದೆ ಹಾಜರಾಗುವೆ ಎಂದು ಪ್ರಮಾಣ ಮಾಡುತ್ತ; ಇಲ್ಲಿಂದ ನಿರ್ಗಮಿಸುತ್ತೇನೆ. ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

Leave a Reply

Back To Top