ಪುಟ್ಟಿಯೂ ಹಾರುತ್ತಿದ್ದಳು…

ಪುಸ್ತಕ ಸಂಗಾತಿ

ಪುಟ್ಟಿಯೂ ಹಾರುತ್ತಿದ್ದಳು…

ಪುಟ್ಟಿಯೂ ಹಾರುತ್ತಿದ್ದಳು… …

ಮಕ್ಕಳ ಕಥಾ ಸಂಕಲನ

ತಮ್ಮಣ್ಣಾ ಬೀಗಾರ

ಪ್ರಕಾಶಕರು: ಪ್ರೇಮ ಪ್ರಕಾಶನ ಮೈಸೂರು.

ಮೊ: ೯೮೮೬೦೨೬೦೮೫

ಬೆಲೆ: ೧೦೦/ , ಪುಟಗಳು : ೧೧೬

ಮೊದಲ ಮುದ್ರಣ : ೨೦೨೧

“ಪುಟ್ಟಿಯೂ ಹಾರುತ್ತಿದ್ದಳು…” ತಮ್ಮಣ್ಣ ಬೀಗಾರ ರ ಮಕ್ಕಳ ಕಥಾ ಸಂಕಲನ.

       ಮಕ್ಕಳ ಸಾಹಿತ್ಯಕ್ಕೆ ಅಮೂಲ್ಯವಾದ ಕಾಣಿಕೆ ನೀಡುತ್ತಿರುವ ಪ್ರಮುಖ ಲೇಖಕರ ಸಾಲಿನಲ್ಲಿ ನಿಲ್ಲಬಲ್ಲವರು ಶ್ರೀ ತಮ್ಮಣ್ಣ ಬೀಗಾರ ಅವರು. ಮಕ್ಕಳಿಗೆ ಮುದ ನೀಡುವ ಕಥೆ, ಕಾದಂಬರಿ, ಲಲಿತ ಪ್ರಬಂಧ, ಶಿಶು ಪ್ರಾಸ, ಕವನ ಸಂಕಲನಗಳನ್ನು ಪ್ರಕಟಿಸಿ ಮಕ್ಕಳಿಗೆ ಮತ್ತೊಂದು ಲೋಕವನ್ನೇ ತೆರೆದಿಟ್ಟಿದ್ದಾರೆ. ಮಕ್ಕಳು ನಲಿದು, ಕುಣಿದು, ಕಲ್ಪನಾಲೋಕದಲ್ಲಿ ವಿಹರಿಸುವಂತ ಹಲವಾರು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕಾಣ್ಕೆಯಾಗಿ ನೀಡಿದ್ದಾರೆ. ಹಿರಿಯರಾದ ತಮ್ಮಣ್ಣ ಬೀಗಾರ ಅವರ ಇತ್ತೀಚಿನ ಮಕ್ಕಳ ಕಥಾ ಸಂಕಲನ ‘ಪುಟ್ಟಿಯೂ ಹಾರುತ್ತಿದ್ದಳು…..’.

   ಇಲ್ಲಿಯ ಎಲ್ಲ ಕಥೆಗಳೂ ಮಕ್ಕಳಿಗೆ ಇಷ್ಟವಾಗುತ್ತವೆ. ಹದಿನೈದು ಕಥೆಗಳು ವಿಭಿನ್ನ ಕಥಾವಸ್ತವಿನೊಂದಿಗೆ ಸರಳ ಭಾಷೆಯಲ್ಲಿ ರಚನೆಯಾಗಿವೆ. “ಚಿನ್ನಪ್ಪ ಸರ್” ಕಥೆ ನೀತಿಯುಕ್ತ ನೈಜತೆಯುಳ್ಳ ಕಥೆಯಾಗಿದೆ. ಶಾಲೆ ಕಲಿಯೋ ವಯಸ್ಸಿನಲ್ಲಿ ಶಾಲೆ ಕಲಿಯದೆ, ಶಿಕ್ಷಕರು ಮತ್ತು ಹಿರಿಯರ ಮಾತನ್ನು ಕೇಳದೆ, ಶಾಲೆಬಿಟ್ಟ ಹುಡುಗನ ಕಥೆ ಇದಾಗಿದೆ. ಬೇರೆ ಯಾವುದೇ ಉದ್ಯೋಗಕ್ಕಾಗಿ ಏಳನೇ ತರಗತಿ ಪ್ರಮಾಣಪತ್ರಕ್ಕಾಗಿ ಬರುವ ವ್ಯಕ್ತಿಯ ಚಿತ್ರಣವಿದೆ. ಕಥೆಯಲ್ಲಿ ಬರುವ ಚಿನ್ನಪ್ಪ ಸರ್ ಕಾಳಜಿ ಕಣ್ಣಿಗೆ ಕಟ್ಟುವಂತಿದೆ. ಮನೆ ಬಾಗಿಲಿಗೆ ಬಂದು ಶಾಲೆಗೆ ಕರೆಯುವ ಶಿಕ್ಷಕರಿಗೇ ಎದುರಾಡುವ ಜಗ್ಗುವಿನಂತ ಮಕ್ಕಳು ನಮ್ಮ ಸಮಾಜದಲ್ಲಿ ಈಗಲೂ ಇದ್ದಾರೆ. ಸಮಸ್ಯೆಗಳನ್ನು ಮರೆತು ಕಲಿಸುವ ನಿಸ್ವಾರ್ಥ ಸೇವಾ ಮನೋಭಾವದ ಶಿಕ್ಷಕರು ನಮ್ಮ ದೇಶದ ಆಸ್ತಿ. ಹೀಗೆ ಕಥೆ ಶಿಕ್ಷಣದ ಮಹತ್ವವನ್ನು ಎತ್ತಿ ತೋರಿಸಿದೆ. ಮಕ್ಕಳು ತಮ್ಮ ನಡತೆಯನ್ನು ತಿದ್ದಿಕೊಳ್ಳಲು ಸಹಕಾರಿಯಾಗಿದೆ.

“ಇರುವೆ ಮನೆಗಳಲ್ಲಿ” ಸಂಕಲನದ ಮತ್ತೊಂದು ಕಥೆ. ಇರುವೆಗಳಿಲ್ಲದ ಜಾಗವೇ ಇಲ್ಲ. ಸಿಹಿ ಇದ್ದಲ್ಲೆಲ್ಲಾ ಇದ್ದೇ ಇರುತ್ತವೆ. ಮಲೆನಾಡಿನ ತುಂಬೆಲ್ಲಾ ಮಳೆಗಾಲದಲ್ಲಿಯೂ ಇರುವೆಗಳು ಮನೆ ಕಟ್ಟುವ ರೀತಿ ನಮಗೆ ಮಾದರಿ. ಅವುಗಳ ಶಿಸ್ತು,ಸತತ ಪ್ರಯತ್ನ , ಮನೆ ಕಟ್ಟುವ ರೀತಿ ಮಕ್ಕಳಲ್ಲಿ ಕುತೂಹಲದಿಂದ ಓದುವಂತೆ ಮಾಡುತ್ತದೆ. ಇರುವೆಗಳು ತಮ್ಮೊಳಗೆ ನಡೆಸುವ ಸಂಭಾಷಣೆ ಮನೋಜ್ಞವಾಗಿದೆ. ಪರೋಪಕಾರಿಯಾದ  ಇರುವೆಗೆ ವಿಷವುಣಿಸುವ ಮಾನವರನ್ನು ಈ ಕಥೆ ಅಣಕಿಸುತ್ತದೆ.

“ಪುಟ್ಟಿಯೂ ಹಾರುತ್ತಿದ್ದಳು….” ಈ ಸಂಕಲನದ ಶಿರ್ಷಿಕೆಯಾಗಿರುವ ಕಥೆ.  ಬೆಳಿಗ್ಗೆ ಬೇಗನೇ ಎದ್ದರೆ ಸೂರ್ಯೋದಯದ ಸೊಬಗು, ಹಕ್ಕಿಗಳ ಚಿಲಿಪಿಲಿ ಕಲರವ, ಹೂ ದಳಗಳ ಮೇಲೆ ಮುತ್ತುಗಳಂತೆ ಕಾಣುವ ಮಂಜಿನ ಹನಿಗಳು ಎಲ್ಲವೂ ಸುಂದರ. ಈ ಕಥೆಯಲ್ಲಿ ಲೇಖಕರು ಪುಟ್ಟಿಯ ಮೂಲಕ ಮಕ್ಕಳಿಗೆ ಪ್ರಕೃತಿಯಲ್ಲಿ ಜೀವವೈವಿಧ್ಯತೆ, ಪ್ರಕೃತಿ ಸೌಂದರ್ಯದ ಸವಿಯನ್ನು ಉಣಬಡಿಸಿದ್ದಾರೆ. ಓದುವ ಮಕ್ಕಳೂ ಬೇಗನೆ ಎದ್ದರೆ ಇಂತಹ ಸೌಂದರ್ಯವನ್ನು ಸವಿಯಬಹುದು. ಕಥೆಯ ಕೊನೆಯಲ್ಲಿ ಚಿಟ್ಟೆ ಜೇಡರ ಬಲೆಯಿಂದ ತಪ್ಪಿಸಿಕೊಂಡು ಹಾರುತ್ತಿದ್ದಂತೆ ಪುಟ್ಟಿಯೂ ಖುಷಿಯಿಂದ ಅದರೊಂದಿಗೆ ಹಾರಿದಳು. ಬಹಳ ಚೆಂದದ ಕಥೆ ಇದು.

“ಹಕ್ಕಿ, ಪುಟ್ಟಿ ಮತ್ತು ಮರ”. ಮಕ್ಕಳಿಗೆ ಹಕ್ಕಿ ,ಚಿಟ್ಟೆ, ಪ್ರಾಣಿಗಳೆಂದರೆ ತುಂಬಾ ಇಷ್ಟ. ಇಲ್ಲಿ ಪುಟ್ಟಿ ಟಿ.ವಿಯಲ್ಲಿ ಕಾರ್ಟೂನ್ ಒಂದರಲ್ಲಿ ನೋಡಿದ ಹಕ್ಕಿಯೇ ತನ್ನ ಕಣ್ಣೆದುರಿನ ಮರದ ಮೇಲೆ ಬಂದಾಗ ಅವಳಿಗಾದ ಆನಂದ ಹೇಳತೀರದು. “ನಾನೂ ಹಕ್ಕಿ ಆಗಿದ್ದರೆ ಅವುಗಳ ಸಂಗಡ ಇರಬಹುದಿತ್ತು. ಮರದಿಂದ ಮರಕ್ಕೆ, ಆಕಾಶಕ್ಕೆ, ಮೋಡಕ್ಕೆ , ಚಂದ್ರನ ಊರಿಗೆ ……..” ಹೀಗೆ ಏನೇನೋ ಆಲೋಚನೆ. ಮತ್ತೊಂದು ಕ್ಷಣ ಒಂದು ವೇಳೆ ನಾನು ಮರವೇ ಆಗಿದ್ದರೆ ….. ಮೈತುಂಬಾ ಹಕ್ಕಿಗಳು ಕುಳಿತಂತೆ ಅನಿಸಿ ಕಚಗುಳಿ ಇಟ್ಟಂತಾಗಿ ಮೈ ಅಲುಗಿಸಿ ನಗೆಯಾಡಿದಳು. ಇಂತಹ ಚೆಂದದ ಅನುಭವ ಅನುಭವಿಸಿದ ಪುಟ್ಟಿಗೆ ಶಾಕ್ ಆಗಿತ್ತು. ಒಂದು ದಿನ  ಮರದ ಕೊಂಬೆಗಳನ್ನೆಲ್ಲ ವಿದ್ಯುತ್ ತಂತಿಗೆ ತಾಗುತ್ತವೆಂದು ಕಡಿದು ಹಾಕಿದ್ದರು. ಪುಟ್ಟಿಗೆ ಆ ಹಕ್ಕಿಯದೇ ಚಿಂತೆ. ಗೂಡು ಕಟ್ಟಿದ್ದ ಹಕ್ಕಿ ಮರಿಗಳೊಂದಿಗೆ ಎಲ್ಲಿಗೆ ಹೋಯಿತೆಂಬುದೇ ದಿಗಿಲಾಗಿತ್ತು. ಆದರೆ ದೊಡ್ಡವರಿಗೆ ಅದು ಪ್ರಶ್ನೆಯೇ ಅಲ್ಲ. ಏನೂ ಆಗಿಲ್ಲವೆನ್ನುವಂತೆ ಸರಳ ಉತ್ತರ ಅವರದಾಗಿತ್ತು. ಎಲ್ಲಕ್ಕಿಂತ ಪರಿಸರ ಮುಖ್ಯವಾಗಬೇಕೆಂಬುದು ಲೇಖಕರ ಕಾಳಜಿಯಾಗಿದೆ.

 “ ನನಗೆ ಇದೆಲ್ಲಾ ಗೊತ್ತಾದದ್ದು…..”   ಮಲೆನಾಡಿನ ಒಂಟಿ ಮನೆಯ ಪುಟ್ಟಿ ಹೇಗೆ ಕಾಲಕಳೆಯುತ್ತಾಳೆ ಅಂತ ನಮಗೂ ಕುತೂಹಲ ಇರುತ್ತಲ್ವಾ? ಪುಟ್ಟಿಯೂ ತೋಟದ ಮನೆಯಲ್ಲಿ ಮಾಡುವ ಬಿಡುವಿಲ್ಲದ ಕೆಲಸ ಮತ್ತು ಅವಳು ಪರಿಸರದ ಜೊತೆ ಕಾಲ ಕಳೆಯುವುದನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಸರಳವಾಗಿ ಓದಿಸಿಕೊಂಡು ಹೋಗುವಂತದ್ದು.

“ತಿಳಿಯುತ್ತಿಲ”್ಲ ಕಥೆಯು ನಮ್ಮ ಅಕ್ಕಪಕ್ಕದ ಮನೆಯವರ ಸ್ವಭಾವವವನ್ನು ರಸಮಯವಾಗಿ ತೆರೆದಿಡುತ್ತದೆ. , ಓದುತ್ತಾ ಹೋದಂತೆ ನಮ್ಮ ಪಕ್ಕದ ಮನೆಯವರ ಅಥವಾ ಊರಿನವರು ಇಂಥದೇ ಸ್ವಭಾವ ಹೊಂದಿದ್ದಾರೆನಿಸುತ್ತದೆ. ನೈಜ ಘಟನೆಯನ್ನು ಕಥೆಯಾಗಿಸುವ ತಂತ್ರಗಾರಿಕೆ ತಮ್ಮಣ್ಣ ಬೀಗಾರವರು ಸಿದ್ಧಹಸ್ತರು. ಮಕ್ಕಳು ಅದನ್ನು ಆಸ್ವಾದಿಸಿ ಆನಂದಿಸಬಲ್ಲರು. ಈ ಕಥೆಯಲ್ಲಿರುವ ಪಕ್ಕದ ಮನೆಯ ಅಂಕಲ್ ಕಲ್ಲು ತರಹದ ಮನುಷ್ಯ. ತಾನು ಬೆಳೆಸಿದ ತೆಂಗಿನ ಮರಗಳ ಗರಿ, ಕಾಯಿ ಬೇರೆಯವರ ಜಾಗದಲ್ಲಿ ಬಿದ್ದು ಅವರು ಬೆಳೆಸಿದ ಹೂವು, ತರಕಾರಿ ಸಸ್ಯಗಳು ಮುರಿದು ಹೋಗುವ ಅರಿವಿಲ್ಲ. ನಮ್ಮ ಗಿಡದ ಮಾವಿನ ಕಾಯಿ ಬಿದ್ದು ಅಂಕಲ್ ತಲೆಗೆ ನೋವಾಗದಿದ್ದರೂ ಬೆಟ್ಟಾನೆ ಬಿದ್ದೋರ ತರ ಆಡೋದು ಮಕ್ಕಳಿಗೆ ಖುಷಿ ನೀಡೋದರ ಜೊತೆಗೆ ವರ್ತನೆ ಹೇಗಿರಬೇಕೆಂಬುದನ್ನು ತಿಳಿಸುವಂತಹ ಕಥೆಯಾಗಿದೆ.

“ಅಜ್ಜಿಕೆರೆ ಬದಿಯಲ್ಲಿ” ಕಥೆಯು ನಮ್ಮ ಜೀವನಕ್ಕೆ  ಬೇಕಾಗಿರುವ ಈಜುವುದು, ಮರಹತ್ತುವ ಕಲೆಗಳನ್ನು ಬಾಲ್ಯದಲ್ಲಿಯೇ ಕಲಿಯಬೇಕೆಂಬುದನ್ನು ತಿಳಿಸುತ್ತದೆ. ಇಲ್ಲವಾದರೆ ಜೀವನ ಪರ್ಯಂತ ಅಂಜುತ್ತಲೇ ಬದುಕಬೇಕಾಗುತ್ತದೆ. ಬಹಳ ಸರಳ ಶೈಲಿಯ, ಇಷ್ಟವಾಗುವ ಕಥೆಯಾಗಿದೆ.

ಹೀಗೊಬ್ಬ ಅಜ್ಜ, ಹಕ್ಕಿಮರಿ, ನಾನು ಮತ್ತು ಜ್ಯೂಪಿಟರ್, ಆಡಲು ಬಿಟ್ಟಾಗ ಎಲ್ಲ ಕಥೆಗಳೂ ಒಂದೊಂದು ಅನುಭವ, ಆನಂದವನ್ನು ನಮ್ಮ ಮಕ್ಕಳಿಗೆ ನೀಡಬಲ್ಲ ಕಥೆಗಳಾಗಿವೆ. ಮಕ್ಕಳಿಗೆ ಓದಲು ನೀಡಬೇಕಾದದ್ದು ದೊಡ್ಡವರಾದ ನಮ್ಮ ಕರ್ತವ್ಯವಾಗಿದೆ. ದೊಡ್ಡವರೂ ಓದಿ ಮಕ್ಕಳಿಗೆ ಕಥೆ ರೂಪದಲ್ಲಾದರೂ ಹೇಳಿ. ಮಕ್ಕಳ ಕಲ್ಪನಾ ಲೋಕ, ಹೃದಯ ವೈಶಾಲ್ಯತೆ, ಮಾನವೀಯತೆ, ಪ್ರಾಮಾಣಿಕತೆ ಮುಂತಾದ ಗುಣಗಳನ್ನು ಬೆಳೆಸಲು ಇಂತಹ ಕಥಾ ಸಂಕಲನಗಳು ಸಹಾಯಕಾರಿಯಾಗಬಲ್ಲವು. ಕಲಾವಿದ ಸಂತೋಷ ಸಸಿಹಿತ್ಲು ಅವರು ರಚಿಸಿದ ಸುಂದರ ಮುಖಪುಟ ಮಕ್ಕಳನ್ನು ಪುಸ್ತಕದೆಡೆಗೆ ಆಕರ್ಷಿಸುತ್ತದೆ. ಪ್ರತಿ ಕಥೆಗೆ ಒಪ್ಪುವ ಸುಂದರ ಚಿತ್ರಗಳನ್ನು ಸತೀಶ್ ಬಾಬು ಅವರು ರಚಿಸಿದ್ದಾರೆ. ಪ್ರೇಮ ಪ್ರಕಾಶನ ಮೈಸೂರು ಇವರು ಪ್ರಕಾಶನ ಮಾಡಿದ್ದಾರೆ. ಚೊಕ್ಕದಾದ ಮುದ್ರಣದೊಂದಿಗೆ ಮಕ್ಕಳಿಗೆ ಮುದ ನೀಡುವ ಕೃತಿ ಇದಾಗಿದೆ.  ತಮ್ಮಣ್ಣ ಬೀಗಾರ ಅವರ ಉತ್ತಮ ಕೃತಿಗಳಲ್ಲಿ ಇದು ಒಂದಾಗಿದೆ. ಅವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಮಕ್ಕಳಿಗೆ ದೊರೆಯಲಿ ಎಂದು ಆಶಿಸುತ್ತೇನೆ.

 

ಪುಟ್ಟಿಯೂ ಹಾರುತ್ತಿದ್ದಳು… …

ಮಕ್ಕಳ ಕಥಾ ಸಂಕಲನ

ತಮ್ಮಣ್ಣಾ ಬೀಗಾರ

ಪ್ರಕಾಶಕರು: ಪ್ರೇಮ ಪ್ರಕಾಶನ ಮೈಸೂರು.

ಮೊ: ೯೮೮೬೦೨೬೦೮೫

ಬೆಲೆ: ೧೦೦/ , ಪುಟಗಳು : ೧೧೬

ಮೊದಲ ಮುದ್ರಣ : ೨೦೨೧


ನಾಗರಾಜ ಹುಡೇದ.

One thought on “ಪುಟ್ಟಿಯೂ ಹಾರುತ್ತಿದ್ದಳು…

Leave a Reply

Back To Top