ಅಂಕಣ ಸಂಗಾತಿ

ನೆನಪಿನದೋಣಿಯಲಿ

ನಮ್ಮನೆಯ ಅವರೆ ಮೇಳ 

magadi avarekai: ಕ್ಷೀಣಿಸಿದ ಮಾಗಡಿ ಅವರೆ ಘಮಲು; ಸಂತೆಯಲ್ಲಿ ಹುಣಸೂರು, ಹಾಸನ ಅವರೆ  ಪಾರಮ್ಯ! - less demand for magadi avarekai | Vijaya Karnataka

ಸವಿ ಬಾಯಿಗೊಪ್ಪುವುದು ಮತ ಮನಸಿಗೊಪ್ಪುವುದು  

ಅವರವರ ಶುಚಿ ರುಚಿಗಳವರವರ ದಾರಿ  ಬವರವೇತಕಿಲ್ಲಿ ಶಿವಗುಡಿಯ ಮಾರ್ಗದಲಿ ವಿವಿಧ ಮನ ವಿವಿಧ ಮತ ಮರುಳ ಮುನಿಯ

ಡಿವಿಜಿ ಯವರು ಹೇಳಿದಂತೆ ಬಾಯಿಗೆ ರುಚಿ ಹತ್ತುವುದು ಅವರವರ ಅಭಿರುಚಿಗೆ ತಕ್ಕಂತೆ. ಅಲ್ಲದೆ ಗಾದೆಯೇ ಇದೆ “ಊಟ ತನ್ನಿಷ್ಟ ನೋಟ ಪರರಿಷ್ಟ”  ಅಂತ .ದಾಸರು ಹೇಳಿಬಿಟ್ಟಿದ್ದಾರೆ “ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ”. ಹಾಗಂತ ಹೊಟ್ಟೆಗೆ ಮೋಸ ಮಾಡದೆ ಮನಸ್ಸಿಗೆ ಖುಷಿ ಬಾಯಿಗೆ ರುಚಿಯಾಗುವಂತೆ ತಿನ್ನುವುದು ಬದುಕಿನ ರಸಿಕತೆಯ ದ್ಯೋತಕ;  ಜೀವನಕಲೆಯ ವಿಧಾನ. ಅಷ್ಟಲ್ಲದೆ ಈಗ ಆಹಾರ ಉದ್ಯಮ ಏನೆಲ್ಲಾ ಎತ್ತರಕ್ಕೆ ಏರಿರುವುದು ಸಾಮಾನ್ಯ ವಿಷಯವಂತೂ ಅಲ್ಲ .

ಬಾಲ್ಯ ಅಂದರೆ ಆಟಪಾಟಗಳ ಜೊತೆ ಊಟ ಅವಿಭಾಜ್ಯ ಅಂಗ.  ನಾವು ಚಿಕ್ಕಂದಿನಲ್ಲಿ ಚಪ್ಪರಿಸಿದ ತಿಂಡಿಗಳೇ ಈಗಲೂ ನಮಗೆ ಅತ್ಯಂತ ಪ್ರಿಯವಾಗುವುದು .ಸಾಂಪ್ರದಾಯಿಕ ಅಡುಗೆ ತಿಂಡಿ ಸೇವಿಸಿ ಬೆಳೆದ ನಮಗೆ ಮಾಡಲೂ ತಿನ್ನಲೂ ಅದೇ ಸೊಗ ಅದುವೇ ಜಗ.

ದೀಪಾವಳಿ ಕಳೆದು ಚುಮುಚುಮು ಚಳಿ ಕಾಲಿರಿಸುತ್ತಿದ್ದಂತೆ ಶುರು ಅವರೆಕಾಯಿಯ ಕಾಲ.  ನಾನು ಹೇಳುತ್ತಿರುವುದು ನಲ್ವತ್ತು ನಲ್ವತ್ತೈದು ವರ್ಷಗಳ ಹಿಂದಿನ ಮಾತು .ಈಗ ಬಿಡಿ ಯಾವುದಕ್ಕೂ ಸೀಸನ್ ಇಲ್ಲ.  ಇಡೀ ವರ್ಷ ಎಲ್ಲ ಸಿಗುತ್ತವೆ. ಹಳೆ ಮೈಸೂರು ಪ್ರಾಂತ್ಯ ಎಂದು ಕರೆಸಿಕೊಳ್ಳುವ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಕೋಲಾರ ತುಮಕೂರು ಜಿಲ್ಲೆಗಳಲ್ಲಿ ನವೆಂಬರ್ ಮಧ್ಯದಿಂದ ಸಂಕ್ರಾಂತಿಯ ವರೆಗಿನ 3ತಿಂಗಳು ಬರೀ ಅವರೆಯದೇ ಗಮಗಮ ಸೊಗಡು .ರಾಶಿ ರಾಶಿ ಬೀದಿಯಲ್ಲಿ ಸುರುವಿಕೊಂಡು ಮಾರುವ ಸಮಯ. ರಸ್ತೆಯೆಲ್ಲಾ ಅವರೆಯ ಪರಿಮಳ ಮಯ.  ಈ ಕಾಲದಲ್ಲಿ ಅವರೇಯೊಂದಿಗೆ ಹೊಂದುವ ತರಕಾರಿ ಬಿಟ್ಟರೆ ಬೇರೇನೂ ರುಚಿಸಲ್ಲ; ಬೇಳೆಯಂತೂ ಒಳಗೆ ಇಳಿಯುವುದಿಲ್ಲ. ತಿಂಡಿ ಅಡಿಗೆ ಎಲ್ಲದರಲ್ಲೂ ಅವರೆಯ ವಿಧವಿಧ ರೂಪಗಳೇ . ಮೂರೂ ಹೊತ್ತು ಅವರೇಕಾಯಿ ಉಪಯೋಗಿಸುತ್ತಿದ್ದುದು ನಮ್ಮ ಮನೆಯಲ್ಲಷ್ಟೇ ಅಲ್ಲ ಆಗಲೂ ಈಗಲೂ ಸುಮಾರು ಜನರಿಗೆ ಅವರೇ ಎಂದರೆ ಅಚ್ಚುಮೆಚ್ಚು. ನಾನಂತೂ ಈಗಲೂ ನಮ್ಮ ಅಮ್ಮನ ಪದ್ದತಿಯೇ….. ಗ್ಯಾಸ್ಟ್ರಿಕ್  ಆಗಲ್ವಾ ಅಂತ ಕೆಲವರ ಪ್ರಶ್ನೆ. ಜೀರಿಗೆ ಮೆಣಸು ಇಂಗು ಶುಂಠಿ (ಈಗೀಗ ಕೆಲವಕ್ಕೆ ಬೆಳ್ಳುಳ್ಳಿ) ಜೊತೆ ಉಪಯೋಗಿಸುವುದರಿಂದ ಸಮಸ್ಯೆ ಆಗಿಲ್ಲ .    

ಅವರೆ ಕಾಳು ಸೀಸನ್ ಮುಗಿಯುವ ಮುನ್ನ | ಅವಧಿ । AVADHI

ಆಗೆಲ್ಲಾ ಕೆಜಿಗಳ ಲೆಕ್ಕವಿಲ್ಲ ಹಳ್ಳಿಗಳ ಕಡೆಯಿಂದ ಮೂಟೆ ಅಥವಾ ಗೂಡೆಗಳಲ್ಲಿ ಹೊತ್ತು ತರುತ್ತಿದ್ದರು. ಚಿಕ್ಕ ಚಿಕ್ಕ ಗೂಡೆಗಳ ಅಳತೆಯಲ್ಲಿ ಮಾರಾಟ . ರಾತ್ರಿ ಅದನ್ನು ಮಧ್ಯೆ ಹಾಕಿಕೊಂಡು ನಾವು ಐದೂ ಜನರು ಸುತ್ತಾ ಕೂರುತ್ತಿದ್ದವು ಒಬ್ಬೊಬ್ಬರ  ಬಳಿ ಒಂದೊಂದು ಬಟ್ಟಲು. ಬಿಡಿಸಿದ ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅಮ್ಮ ಆಮೇಲೆ ಗಾತ್ರಾನುಸಾರ ವಿಂಗಡಣೆ ಮಾಡುತ್ತಿದ್ದರು .ಪುಟ್ಟಪುಟ್ಟ ಪೀಚು ಕಾಳುಗಳನ್ನು ಗಳು ಸಂಗ್ರಹಿಸಿ ಕೋಡುಬಳೆ ಮಾಡಲು ಮತ್ತೂ ಜಾಸ್ತಿ ಇದ್ದರೆ ನಿಂಬೆಹಣ್ಣಿನ ಚಿತ್ರಾನ್ನಕ್ಕೆ .ಅದಕ್ಕಿಂತ ಸ್ವಲ್ಪ ಬಲಿತ ಕಾಳುಗಳ ಅಕ್ಕಿರೊಟ್ಟಿಗೆ (ಆಹಾ ಈಗಲೇ ತಿನ್ನಬೇಕೆನಿಸುತ್ತಿದೆ).ಅದರ ಮುಂದಿನ ಸೈಜಿನ ಕಾಳುಗಳು ಉಪ್ಪಿಟ್ಟು ಉಸಲಿ ಸಾರು ಬಾತುಗಳಿಗೆ ಹಾಕಲು .ಅದಕ್ಕಿಂತ ದಪ್ಪ ಕಾಳುಗಳು ಹುಳಿಗೆ.  ಪೂರ್ತ ಬಲಿತ ಬಿಳಿಯ ಬಣ್ಣದ ಕಾಳುಗಳನ್ನು ನೀರಿನಲ್ಲಿ ನೆನೆಹಾಕಿ ಹಿಸುಕಿಸಿ ಹಿತಕಬೇಳೆ ಮಾಡಲು. ಫ್ರಿಜ್ಜು ಇರದ ಆ ಕಾಲದಲ್ಲೂ ಡಬ್ಬಿಗಳಲ್ಲಿ ಇಟ್ಟು 2_ 3 ದಿನ ಉಪಯೋಗಿಸುತ್ತಿದ್ದೆವು. ಕಡೆಗೆ ಹಿಸುಕಿದ ಕಾಳು ಉಪಯೋಗ. ಅದರ ಮೇಲೋಗರ ತೊವ್ವೆಗಳು ತುಂಬಾ ರುಚಿ .ಮತ್ತೂ ಉಳಿದವನ್ನು ಕರಿಯುವುದು 

ಖಾರ ಅವಲಕ್ಕಿ ಮಾಡುವುದು ಮತ್ತು ಒಣಗಿಸಿಟ್ಟು ವರ್ಷವಿಡೀ ಉಪಯೋಗಿಸುವುದೋ ಮಾಡುತ್ತಿದ್ದುದು.  

ಹೀಗೆ ಬಿಡಿಸಲು ಕುಳಿತಾಗ ಅಣ್ಣ ನಮಗೆ ಎಷ್ಟೋ ಕತೆ ಹೇಳುತ್ತಿದ್ದರು. ಕನ್ನಡ ಇಂಗ್ಲಿಷ್ ವರ್ಲ್ಡ್ ಬಿಲ್ಡಿಂಗ್ ಮಾಡಿಸುತ್ತಿದ್ದರು. ಅಂತ್ಯಾಕ್ಷರಿ ಈ ಎಲ್ಲವುಗಳ ಮಧ್ಯೆ ಬಿಡಿಸುವ ಕಷ್ಟವೇ ತಿಳಿಯುತ್ತಿರಲಿಲ್ಲ.  ಹಿದುಕುವುದು ಸಾಮಾನ್ಯ ಬೆಳಗಿನ ಕಾಫಿಯ ನಂತರ. ಇಲ್ಲಿ ಮತ್ತೊಂದು ವಿಶೇಷವೆಂದರೆ ಕಾಫಿ ಟೀ ನಮ್ಮ ಮನೆಯಲ್ಲಿ ಮಕ್ಕಳಿಗೆ ಕೊಡುತ್ತಿರಲಿಲ್ಲ . ಅವರೆ ಬಿಡಿಸುವ ಸಮಯದಲ್ಲಿ ಮಾತ್ರ ಒಂತೊಟ್ಟು ಕೊಡ್ತಿದ್ದಿದು ಅದೂ 1 ಆಕರ್ಷಣೆ . ನೆಂದ ಕಾಳುಗಳನ್ನು ತೆಗೆದು ಮತ್ತೆ ಹಂಡೆಯ ಬಿಸಿನೀರು ಹಾಕಿ ತರುತ್ತಿದ್ದರು . ಆ ಚಳಿಗೆ ಅದೆಷ್ಟು ಹಿತ ಕೊಡುತ್ತಿತ್ತು.  ಮತ್ತೆ ಬೆಳಗಿನ ಆ ಚಳಿಯಲ್ಲಿ ಕೂತು ಹಿದುಕುವ ಕೆಲಸವಾಗಲಿ ಅವರೆಕಾಯಿ ಬಿಡಿಸುವ ಕೆಲಸವಾಗಲೀ ನಮಗೆ ಹೊರೆ ಹಿಂಸೆ ಎಂದು ಯಾವತ್ತೂ ಅನಿಸಿಯೇ ಇರಲಿಲ್ಲ. ಬಂದ ನೆಂಟರೂ ಸಹ ಕೈಜೋಡಿಸಿ ಹರಟೆ ನಗೆಚಾಟಿಕೆ ಗಳಲ್ಲಿ ಕಣ್ಣುಮುಚ್ಚಿ ತೆಗೆಯುವುದರಲ್ಲಿ ಕೆಲಸ ಮುಗಿದು ಹೋಗುತ್ತಿತ್ತು. ಪ್ರಾಯಶಃ ಫ್ಯಾಮಿಲಿ ಕ್ವಾಲಿಟಿ ಟೈಮ್ ಎನ್ನುವ ಇತ್ತೀಚಿನ ದಿನಗಳ ಪರಿಕಲ್ಪನೆ ಈ ರೀತಿಯಲ್ಲಿ ಆಗ ಕುಟುಂಬಗಳಲ್ಲಿ ನಡೆಯುತ್ತಿತ್ತೇನೋ.  ಎಲ್ಲರೂ ಕೂಡಿ ಎಲ್ಲ ಕೆಲಸಗಳಲ್ಲೂ ಭಾಗವಹಿಸುವ ಅಂದಿನ ದಿನಗಳ ಖುಷಿಯೇ ಬೇರೆ . ಈಗ ಯಾರೂ ಬಿಡಿಸಲು ಕೈಜೋಡಿಸದೆ ಅವರೆಕಾಯಿ ತರಲಿಕ್ಕೆ ಬೇಜಾರು ಎಂದು ಅಲವತ್ತುಕೊಳ್ಳುವ ಬಿಡಿಸಿದ ಕಾಳು ಹಿದುಕಿದ ಕಾಳನ್ನೇ ಖರೀದಿಸಿ ತರುವವರನ್ನು ನೋಡಿದಾಗ ಖೇದವಾಗುತ್ತದೆ . ಮುಂಚೆಯೆಲ್ಲಾ ಬೆಂಗಳೂರಿನಲ್ಲಿ ಹಿದುಕಿದ್ದ ಕಾಳು ಸಿಗುತ್ತದೆ ಎಂದರೆ ಕಣ್ಣರಳಿಸಿ ಅಚ್ಚರಿಯಿಂದ ನೋಡುವಂತಾಗುತ್ತಿತ್ತು. ಈಗ ಎಲ್ಲ ಊರುಗಳಲ್ಲೂ ಅದು ಸಾಮಾನ್ಯವಾಗಿ ಬಿಟ್ಟಿದೆ. ಈಗ ಸಮಯ ತುಂಬಾ ತುಟ್ಟಿಯಾಗಿಬಿಟ್ಟಿದೆಯಲ್ಲಾ!  ಹಾಗಾಗಿ ಕಾಲಾಯ ತಸ್ಮೈ ನಮಃ .ನಾವು ಈಗ ಕೂತು ಅವರೆಕಾಯಿ ಬಿಡಿಸುವಾಗ ಹರಟೆ ಹೊಡೆಯುತ್ತಾ ಟಿವಿ ನೋಡುತ್ತಾ ಬಿಡಿಸುವುದು ಹಿದುಕುವುದು ಮಾಡುತ್ತೇವೆ . ಬಿಡಿಸುವಾಗಲೇ ೩_ ೪ ಬಟ್ಟಲುಗಳನ್ನು ಇಟ್ಟು ಗಾತ್ರಾನುಸಾರ ಆಗಲೇ ವಿಂಗಡಿಸಿ ಇಟ್ಟುಬಿಡುತ್ತೇನೆ . 

ಅವರೆ ಬೆಳೆಯಿಂದ ಅಧಿಕ ಲಾಭ ಗಳಿಸಿದ ರೈತ | Prajavani

ಮೊದಲೇ ಹೇಳಿದ ಹಾಗೆ ಪೀಚು ಕಾಳು ಸಂಗ್ರಹ ಜಾಸ್ತಿಯಾದಾಗ ಕೋಡುಬಳೆ; ಕಾಳು ತುಂಬ ಉಳಿದಾಗ ಚಕ್ಕಲಿ; ಹಿದಕವರೆ ಕರಿಯುವುದು ಎಲ್ಲಾ ತರಹದ ತಿಂಡಿಗಳು ಅಂದರೆ ರೊಟ್ಟಿ ಉಪ್ಪಿಟ್ಟು ಪೊಂಗಲ್ ಬಿಸಿಬೇಳೆ ಭಾತು ತರಕಾರಿ ಬಾತ್ ವಾಂಗಿಬಾತ್ ಇಡ್ಲಿ ಮಸಾಲೆ ದೋಸೆ ಉಳಿದ ಹುಳಿ ಹಿಟ್ಟಿಗೆ ಕಾಳು ಸೇರಿಸಿ ಮಾಡುವ ದೋಸೆ ಪಡ್ಡು ಅಕ್ಕಿಕಡುಬು ಕಾಳುನುಚ್ಚಿನುಂಡೆ ಕಾಳುಅಕ್ಕಿಯುಸಲಿ  ಬರೀ ಕಾಳಿನ ಉಸುಲಿ ಸರ್ವಂ ಅವರೆಕಾಳು ಮಯಂ . ಅವರೆಕಾಳು ಆಂಬೊಡೆಯಂತೂ ನೆನೆಸಿದಾಗಲೆಲ್ಲಾ….. ಖುಷಿಪಟ್ಟು ಅಸ್ವಾದಿಸಿ ತಿನ್ನುವ ವಯಸ್ಸೂ ಮನಸ್ಸೂ ಸಮಯವೂ ಆಗ ಧಾರಾಳವಾಗಿತ್ತು. ಅವರೆಕಾಳು ಸಾರು ಆಲ್ಮೋಸ್ಟ್ ದಿನಾ… ಹಿದಕಬೇಳೆ ಅವರೆಕಾಳು ಹುಳಿಗಳಿಗೆ ಎಣ್ಣೆ ಜತೆಗೆ ಪಕ್ಕದಲ್ಲಿ ಸಣ್ಣ ಬಟ್ಟಲಿನಲ್ಲಿ ಹಾಲಿಂಗು ಹಾಕಿ ನೀರು ಕರಗಿಸಲು ಇಟ್ಟು ಅದನ್ನು ಮೇಲೆ ಹಾಕಿಕೊಂಡು ಕಲಸಿಕೊಳ್ಳುವ ವಾಡಿಕ.  ಆಗೆಲ್ಲಾ ಪುಡಿ ಇಂಗು ವಾಡಿಕೆಯಲ್ಲಿ ಇಲ್ಲದಿದ್ದುದರಿಂದ ಆ ರೂಢಿ ಬಂದಿರಬಹುದು.  

ಆರಿದ ಉಪ್ಪಿಟ್ಟಿನ ಪಿಡಚೆ, ಹುಳಿ ಮೇಲೋಗರಗಳ ಕೈತುತ್ತು ರಾತ್ರಿ ಯ ಪ್ರೋಗ್ರಾಂ. ಹೀಗೆ ವಾಯುಭಾರ ಕುಸಿತ ದಿನಗಳಲ್ಲಂತೂ ಬೆಚ್ಚಗೆ ಒಳಗೆ ಕುಳಿತು ತರಹತರಹದ ತಿನಿಸನ್ನು ಸವಿಯುತ್ತಾ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು .

ಬೆಂಗಳೂರಿನ ಬಸವನಗುಡಿಯಲ್ಲಿ ಅವರೆ ಮೇಳ ನಡೆಯುತ್ತದೆ . ನನಗೆ 1ಬಾರಿಯೂ ಭೇಟಿ ಕೊಡಲು ಆಗಿಲ್ಲ . ಆದರೆ ಅವರೇ ಅಂದರೆ ಮಾತ್ರ ಮೈಯೆಲ್ಲಾ ಕಣ್ಣು.  ಆ ಸೀಸನ್ ನಲ್ಲಿ ಉಪಯೋಗಿಸುತ್ತಲೇ ಇರುತ್ತೇವೆ.  

ಚೆನ್ನೈನಿಂದ ಬಂದು ಮೈಸೂರಿನಲ್ಲಿ ನೆಲೆಸಿರುವ ನನ್ನ ಗೆಳತಿಯೊಬ್ಬಳು ಹಾಸ್ಯಮಾಡುತ್ತಿದ್ದಳು. ಈ ಕಾಲದಲ್ಲಿ  ಹಾಲು ಸಹ ಅವರೇ ವಾಸನೆ ಅಂತ. ಏಕೆಂದರೆ ಅವರೇ ಸಿಪ್ಪೆ ಹಸುಗಳಿಗೆ ತುಂಬಾ ಇಷ್ಟ ತಾನೇ ದಿನಾ ಅದನ್ನೇ ತಿಂದು ಹಾಲೂ ಅದೇ ವಾಸನೆ ಬರುತ್ತೆ ಅಂತಿದ್ದಳು.  ಉತ್ಪ್ರೇಕ್ಷಾಲಂಕಾರಕ್ಕೆ 1ಉದಾಹರಣೆ ಬಿಡಿ . 

ಅವರೆಕಾಯಿ ಕಾಲ ಬಂದಾಗಲೆಲ್ಲ ಬಾಲ್ಯದ ಆ ಚಿತ್ರಗಳೇ ನೆನಪಿಗೆ ಬರುತ್ತೆ . ಬಂದ ನೆಂಟರಿಗೆಲ್ಲ ಅವರೆಯ ಬಗೆಬಗೆ ಮಾಡಿ ತಿನ್ನಿಸುವ ಕಾತರ, ಡಬ್ಬಿಗಳಲ್ಲಿ ಶೇಖರಿಸಿಡುತ್ತಿದ್ದ ಹಿದಕವರೆ:  ಅಕ್ಕಪಕ್ಕದ ಮನೆಗಳಿಗೆ ಕಡ್ಡಾಯವಾಗಿ ಕೊಡುತ್ತಿದ್ದ ಪಾಲು, ಮಾಡಿದ ತಕ್ಷಣ ಕೊಡುತ್ತಿದ್ದುದು . ಅಷ್ಟಲ್ಲದೆ ರಜೆಯ ದಿನಗಳಾದರೆ ಅಂಗಳದಲ್ಲಿ ಕೂತು ಅಮ್ಮ ಮತ್ತು ಅವರ ಗೆಳತಿಯರು ಹಾಗೂ ನಮ್ಮ ಹುಡುಗರ ಪಟಾಲಂ  4ಗಂಟೆಯ ಇಳಿಬಿಸಿಲಿನಲ್ಲಿ ಎಲ್ಲರ ಮನೆಯ ಗೂಡೆಗಳ ಕಾಯಿ ಬಿಡಿಸುವುದು ಅಥವಾ ಕಾಳು ಹಿದುಕುವುದು. ಜತೆಗೆ ಕುತೂಹಲದಿಂದ ದೊಡ್ಡವರ ಮಾತಿಗೆ ಕಿವಿಯಾಗುವುದು ನೆನೆಸಿಕೊಂಡರೆ ಅಂದಿನ ಸೌಹಾರ್ದ ಸಹಕಾರ ಚಿಕ್ಕ ಪುಟ್ಟದರಲ್ಲೇ ಖುಷಿ ಕಾಣುವ ಮನಸ್ಸನ್ನು ಬಾಲ್ಯದೊಂದಿಗೆ ಕಳೆದುಕೊಂಡು ಬಿಟ್ಟೆವೇನೋ ಅಂತನ್ನಿಸುತ್ತದೆ.  

ಅಮ್ಮನಿಗೆ ಅದು ಇಷ್ಟ ಅಣ್ಣನಿಗೆ ಇದು ಇಷ್ಟ ಹೀಗೆ ಮಾಡಿದರೆ ಅವರಿಗೆ ಪ್ರಿಯವಾಗಿತ್ತಿತ್ತು ಎಂದೆಲ್ಲ ಮರೆಯಾದವರ ನೆನಪುಗಳ ಮಳೆಯಲ್ಲಿ ಮತ್ತೆಮತ್ತೆ ನೆನೆಯುವಂತಾಗುತ್ತದೆ.  ನಾನು ಚಿಕ್ಕಬಳ್ಳಾಪುರದಲ್ಲಿದ್ದಾಗ ಒಮ್ೆ ಅವರೆಯ ಕಸಲದಲ್ಲಿ ನಮ್ಮ ತಂದೆ ಬಂದಿದ್ದರು. ಕುಕ್ಕರಿಗೆ ಒಗ್ಗರಣೆ ಹಾಕಿ ಕಾಳು ಉಪ್ಪು ಹಾಕಿ ಬೇಯಲು ಇಡುವ ಅಭ್ಯಾಸ. ಹಾಗೆಯೇ ಮಾತಿನ ಭರದಲ್ಲಿ ಕಾಳು ಹಾಕದೆ ಬರೀ ಕುಕ್ಕರ್ ಕೂಗಿಸಿದ್ದೆ. ಮುಂದೆ ಅದನ್ನೇ ನೆನೆಸಿ ಯಾವಾಗಲೂ ಅಣ್ಣ ರೇಗಿಸುತ್ತಿದ್ದರು.  ಕಾಳುಪ್ಪಿಟ್ಟು ಮಾಡುವಾಗಲೆಲ್ಲಾ ಅಂದಿನ ದಿನದ ನೆನಪು ಬಂದೇ ಬರುತ್ತದೆ.  

ಯಾರುಳಿದರೂ ಯಾರಳಿದರೂ ನೆನಪುಗಳಷ್ಟೆ ಶಾಶ್ವತ ಅಲ್ಲವಾ? “ಸವಿ ನೆನಪುಗಳು ಬೇಕು ಸವಿಯಲೀ ನೆನಪು”.  ಮತ್ತೆ ಅವರೆಯ ಕಾಲ ಬರುತ್ತಿದೆ. ನೆನಪಿನ ಹೊಳೆಯಲ್ಲಿ ಮಿಂದೇಳುವ ಸಮಯ ತರುತ್ತಿದೆ . 


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು
.

Leave a Reply

Back To Top