ಕಳ್ಳಿಹೂಗಳು ಪುಸ್ತಕ ಅವಲೋಕನ

ಪುಸ್ತಕ ಸಂಗಾತಿ

ಕಳ್ಳಿಹೂಗಳು ಪುಸ್ತಕ ಅವಲೋಕನ

ಶ್ರೀ ಧನಪಾಲ ನಾಗರಾಜಪ್ಪನವರ ೧೫ನೇ ಕೃತಿಯಾಗಿ ʼಕಳ್ಳಿ ಹೂಗಳುʼ ಎಂಬ ಸ್ವರಚಿತ ಅಬಾಬಿಗಳ ಸಂಕಲನ ಪ್ರಕಟವಾಗಿರುವುದು ಸಂತೋಷದ ಸಂಗತಿ. ಇವರು ತೆಲುಗಿನ ಶೇಕ್‌ ಕರೀಮುಲ್ಲಾರು ಆವಿಷ್ಕರಿಸಿದ ಅಬಾಬಿ ಸಾಹಿತ್ಯ ಪ್ರಕಾರವನ್ನು ಕನ್ನಡದಲ್ಲಿ ಯಶಸ್ವಿಯಾಗಿ ಪ್ರಯೋಗಕ್ಕೆ ತಂದಿದ್ದಾರೆ.

ಅಬಾಬಿಗಳು ಸರ್ವಜ್ಞನ ವಚನಗಳು, ತೆಲುಗಿನ ವೇಮನರ ಪದ್ಯಗಳಂತೆ ಸಣ್ಣ ಸಣ್ಣ ಬಿಡಿ ಪದ್ಯಗಳಾಗಿದ್ದು, ವಿಚಾರ, ವಿಚಾರ ತೀಕ್ಷ್ಣತೆ ಮತ್ತು ಉತ್ತಮ ಸಾಹಿತ್ಯಗುಣ ಇವುಗಳಲ್ಲಿದೆ. ಕರೀಮುಲ್ಲಾರ ಅಬಾಬಿಗಳು ʼಸಮಸ್ತ ಶೋಷಿತರ ಪರ ನಿಲ್ಲುತ್ತವೆʼ ಎಂಬ  ಮಾತಿಗೆ ಯಾವ ಅಪವಾದವೂ ಇಲ್ಲದಂತೆ ಇಲ್ಲಿನ ಅಭಾಬಿಗಳ ರಚನೆಯಾಗಿವೆ.

ಅಬಾಬಿ ಎಂದರೆ

ಸಣ್ಣ ಸಾಲು, ತೀಕ್ಷ್ಣ ವಿಚಾರ

ಆತ್ಮಾವಲೋಕನ, ಸಂದೇಶ, ವಿಡಂಬನೆ, ವಿವರಣೆ

ವರುಣ

ಅಬಾಬಿಗಳು ಆಧುನಿಕ ವಚನಗಳು

 ಪ್ರಸ್ತುತ ಅಬಾಬಿಗಳ ಸಂಕಲನದಲ್ಲಿ ಸುಮಾರು ೨೦೬ ಅಬಾಬಿಗಳಿದ್ದು, ವಿವಿಧ ಸಂಧರ್ಭದಲ್ಲಿ ಉಂಟಾದ ಯೋಚನೆ, ಹೊಳೆದ ಹೊಳಹು, ಕಾಡಿದ ನೆನಪು ಇತ್ಯಾದಿಗಳನ್ನು ಧನು ಎಂಬ ಕಾವ್ಯನಾಮದಲ್ಲಿ  ಕವಿಗಳು ದಾಖಲಿಸಿದ್ದಾರೆ. ಜ್ಞಾನ ಅನುಭವ ಮತ್ತು ಸಂವೇದನೆಗಳ ಸಮಿಶ್ರಣದಿಂದ ಇಲ್ಲಿನ ಅಬಾಬಿಗಳು ಪಕ್ವವಾಗಿವೆ.

ಹಲವು ಕಡೆ ಪ್ರಚಲಿತ ಗಾದೆಗಳನ್ನು ಬಳಸಿಕೊಂಡಿರುವುದು ಅಬಾಬಿಗಳಿಗೆ ಒಂದು ಗಹನತೆಯನ್ನು ತಂದುಕೊಟ್ಟಿದೆ. ಜೊತೆಗೆ ಒಂದಷ್ಟು ಹೊಸ ಗಾದೆಯ ರೂಪದ ವಾಕ್ಯಗಳನ್ನು ಸೃಷ್ಠಿಸಿರುವುದು ಈ ಕೃತಿಯ ಮತ್ತೊಂದು ವಿಶೇಷ. ಬದುಕು ಮೂರು ದಿನ ಸಂತೆ, ಮುಖ ನೋಡಿ ಮಣೆ ಹಾಕಬೇಡ, ಅಂಗೈಯಲ್ಲಿನ ಹುಣ್ಣಿಗೆ ಕನ್ನಡಿ ಬೇರೆ ಬೇಕೆ? ತಾಳಿದವನು ಬಾಳಿಯಾನು, ಇಂತಹ ಪ್ರಚಲಿತ ಗಾದೆಗಳನ್ನು ಸೂಕ್ತವಾಗಿ ಮತ್ತು ಅರ್ಥಪೂರ್ಣವಾಗಿ ಬಳಸಿರುವುದರ ಜೊತೆಗೆ ನಂಟುಗಳೇ ನೋಯಿಸುವ ಗಂಟುಗಳು, ವಿನೀತರಿಗೆ ವಿಜಯ ಒಲಿಯುವುದು, ಗಾಳಿಮಾತಿಗೆ ಕಿವುಡನಾಗು, ವಿಶ್ವಾಸವೊಂದು ವಜ್ರಾಯುಧ, ಭವ ಸಾಗರ ಕಷ್ಟ ನಷ್ಟಗಳ ಆಗರ, ಅಹಂಕಾರದಿಂದ ಬದುಕು ಅಂಧಕಾರ, ರೂಪಗಳು ಹಲವು ಜೀವ ಒಂದೆ ಮುಂತಾದ ಹೊಸ ಗಾದೆಯ ರೂಪದ ಸಾಲುಗಳನ್ನು ಕಟ್ಟಲಾಗಿದೆ.

ಕೃತಿಯಲ್ಲಿ ಸಂದೇಶ, ಆತ್ಮಾವಲೋಕನ ವಿಡಂಬನೆ, ವಿಷಯ – ವಿಶ್ಲೇಷಣೆ ಎಲ್ಲವೂ ಸಮವಾಗಿ ಸೇರಿರುವುದರೊಂದಿಗೆ ಸಮಕಾಲೀನ ಸಮಸ್ಯೆ, ವಿದ್ಯಮಾನಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜೀವನ ಎಂದರೇನು ಎಂಬುದು ಒಂದು ಆದಿಮ ಪ್ರಶ್ನೆ, ಈ ಪ್ರಶ್ನೆಗೆ ಉತ್ತರವಾಗಿ

ನೋವನು ಕಳೆದು

ನಲಿವನ್ನು ಭಾಗಿಸಿ

ಪ್ರೀತಿಯನ್ನು ಕೂಡಿಸು

ಧನು

ಇಷ್ಟೇ ಬದುಕು

ಎಂಬ ಸರಳವಾದ ಬದುಕಿನ ಸೂತ್ರವನ್ನು ಈ ಅಬಾಬಿ ನಮ್ಮ ಮುಂದಿಡುತ್ತದೆ. ಮುಂದಿನ ಮತ್ತೊಂದು ಪದ್ಯದಲ್ಲಿ ಸಾಧನೆ ಮತ್ತು ಸಾರ್ಥಕತೆ ಎಂಬೆರಡು ಪದಗಳನ್ನು ಬಹಳ ಅರ್ಥಪೂರ್ಣವಾಗಿ ಬಳಸಿಕೊಂಡು ಸಾಧನೆಗಿಂತಲೂ ಸಾರ್ಥಕತೆ ಮುಖ್ಯ, ಮನುಷ್ಯನಾಗಿ ಹುಟ್ಟಿದವನು ಮನುಷ್ಯನಾಗಿಯೇ ಬದುಕಿ ಮನುಷ್ಯನಾಗಿಯೇ ಸಾಯುವುದು ಸಾರ್ಥಕತೆ ಎಂದು ಹೇಳುವರು.

 ಪ್ರಶಸ್ತಿ, ಸನ್ಮಾನ ಇತ್ಯಾದಿಗಳನ್ನೇ ಸಾಧನೆ ಎಂದು ಭಾವಿಸಿ ಮನುಷ್ಯತ್ವವನ್ನೇ ಮರೆಯುತ್ತಿರುವ ಪ್ರಸ್ತುತ ಸಮಾಜದ ಪರಿಸ್ಥಿತಿಯನ್ನು ವಿಡಂಬಿಸುವ ಮತ್ತು ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಸಂದೇಶ ಈ ಅಬಾಬಿಯಲ್ಲಿದೆ.

ಹುಟ್ಟಿದಾಗ

ಎಲ್ಲರೂ ಮನುಷ್ಟರೇ

ಮನುಷ್ಯರಾಗಿ ಬದುಕಿ ಸತ್ತರದೇ ಸಾರ್ಥಕತೆ

ಧನು

ಸಾಧನೆಗಿಂತ ಸಾರ್ಥಕತೆ ಮುಖ್ಯ

ಮುಂದಿನ ಮತ್ತೊಂದು ಅಬಾಬಿಯಲ್ಲಿ ಓದದೇ ಬರೆಯುವ, ಬರೆದವರನ್ನು ಓದಿ ಪ್ರೋತ್ಸಾಹಿಸದ ವ್ಯಕ್ತಿತ್ವಗಳನ್ನು ಕುರಿತು ಬರಹಗಾರನು ಖಂಡಿತವಾಗಿ ಓದುಗನಾಗಿಯೇ ಇರಬೇಕು, ಓದದೇ ಬರೆಯುವ ಬರವಣಿಗೆಯು ಜ್ಞಾನ ಅನುಭವ ಮತ್ತು ಸಂವೇದನೆಯ ಕೊರತೆಯಿಂದಾಗಿ ಸತ್ವಹೀನವಾಗುವುದರಿಂದ ಬರಹಗಾರನು ಓದಿನ ಮೂಲಕ ಸತ್ವಯುತ ಬರಹಗಾರನಾಗುವುದರೊಂದಿಗೆ ಇತರೆ ಬರಹಗಾರರನ್ನು ಓದಿ ಪ್ರೋತ್ಸಾಹಿಸಬೇಕು ಎಂಬುದನ್ನು ಮುಂದಿನ ಅಬಾಬಿ ವಿವರಿಸುತ್ತದೆ.

ರುಚಿಯಾದ ಅಡುಗೆಯೇ ಉಣ್ಣದವರು

ಸ್ವಾದಿಷ್ಟವಾದ ಅಡುಗೆ ಮಾಡಬಲ್ಲರೆ?

ಓದುಗರೆಲ್ಲರೂ ಬರಹಗಾರರಾಗಬೇಕಿಲ್ಲ

ಧನು

ಬರಹಗಾರರೆಲ್ಲರೂ ಓದುಗರಾಗಿರಲೇಬೇಕು.

ಧರ್ಮ, ಜಾತಿ ಇತ್ಯಾದಿಗಳ ಹೆಸರಿನಲ್ಲಿ ಹೊಡೆದಾಡುತ್ತಿರುವ ಪ್ರಸ್ತುತ ಸಂಧರ್ಭಕ್ಕೆ ಪೂರಕವಾಗಿ ಧರ್ಮ ಎಂದರೇನು ಎಂಬುದಕ್ಕೆ ಪ್ರೀತಿಯೊಂದೇ ಜೀವಂತ ಧರ್ಮ, ಮಾನವನಾಗಿ ಬದುಕುವುದೇ ನಿಜವಾದ ಧರ್ಮ ಎನ್ನುವ ಸಂದೇಶಗಳನ್ನು ಮುಂದಿನ ಅಬಾಬಿಗಳ ಮೂಲಕ ನೀಡಲಾಗಿದೆ.

ಎಲ್ಲರೂ….

ಮೊದಲು ಮನುಷ್ಟರು

ನಂತರವೇ ಹಿಂದೂ, ಕ್ರೈಸ್ತ, ಮುಸ್ಲಿಂ..

ಧನು

ಬದುಕೇ ದಿಟವಾದ ಧರ್ಮ

ದ್ವೇಷಿಸುವವರು ದ್ವೇಷಿಸಲಿ

ದುಷ್ಟರ ಗೊಡವೆ ನಮಗೇಕೆ?

ಪ್ರೀತಿಸುವುದನ್ನು ನಿಲ್ಲಿಸಬೇಡ

ಧನು

ಪ್ರೀತಿಯೊಂದೇ ಜೀವಂತ ಧರ್ಮ

ಇಂತಹ ಹತ್ತುಹಲವು ಮೌಲ್ಯಯುಕ್ತ ಅಬಾಬಿಗಳನ್ನು ಈ ಕೃತಿ ಒಳಗೊಂಡಿದೆ, ಮುಖ್ಯವಾಗಿ ಗಾಳಿ ಮಾತುಗಳಿಗೆ ಕಿವುಡನಾಗು, ಗೆಲ್ಲುವುದಷ್ಟೇ ಅಲ್ಲ ಸೋಲುವುದನ್ನೂ ಕಲಿ, ಮನದ ಶುಚಿಯ ವಿಷಯವೇನು ಧನು…. ಅಹಂ ಬಿಟ್ಟು ಅವಲೋಕನ ಮಾಡು, ಶ್ರೇಷ್ಠತ್ವದ ವ್ಯಸನ ಬದುಕಿಗೆ ಮಾರಕ, ಸೋಲನ್ನು ಕೂಡ ಸಂಭ್ರಮಿಸು, ಇಂತಹಾ ಮೌಲಿಕ ಸಂದೇಶಗಳ ಜೊತೆಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು, ಬಡವನ ನೋವು, ನೈತಿಕತೆಯ ಕುಸಿತ, ಅಧರ್ಮದ ಮೇಲುಗೈ, ಮಾಧ್ಯಮ ಮತ್ತು ರಾಜಕಾರಣಿಗಳ ಹೊಣೆಗೇಡಿತನ ಮುಂತಾದವುಗಳ ವಿಮರ್ಶೆ, ವಿಡಂಬನೆ ಇತ್ಯಾದಿಗಳಿಂದ ತುಂಬಿರುವ ಕೃತಿಯನ್ನು ಸಹೃದಯರು ಓದಿ ಆಸ್ವಾದಿಸಬೇಕೆಂದು ವಿನಂತಿಸುವೆ. ನಮಸ್ಕಾರಗಳು.

ಪ್ರತಿಗಳಿಗಾಗಿ ಸಂಪರ್ಕಿಸಿ : ಶ್ರೀ ಧನಪಾಲ ನಾಗರಾಜಪ್ಪ – 7892546523/6362567802


           ವರುಣ್‌ ರಾಜ್‌ ಜಿ

One thought on “ಕಳ್ಳಿಹೂಗಳು ಪುಸ್ತಕ ಅವಲೋಕನ

Leave a Reply

Back To Top