ಅಂಕಣ ಬರಹ

ಗಜಲ್ ಲೋಕ

ವಾಣಿಯವರ ಗಜಲ್ ನಾದ ಲಹರಿ ಆಲಿಸುತ್ತ..

.

ನಮಸ್ಕಾರ… ಎಂದಿನಂತೆ ಇಂದೂ ಸಹ ಮತ್ತೊಬ್ಬ ಗಜಲ್ ಗೋ ಅವರ ಪರಿಚಯದೊಂದಿಗೆ ನಿಮ್ಮ ಹೃದಯದ ಕದ ತಟ್ಟಲು ಬಂದಿರುವೆ. ಅಂತರಂಗದ ಕಂಗಳಿಂದ ಓದಿ, ಮನದ ಭಾಗ್ ಬನ್ ದಲ್ಲಿ ಗಜಲ್ ಕೃಷಿ ಮಾಡುವಿರೆಂಬ ವಿಶ್ವಾಸದಿ ಮುನ್ನುಗ್ಗುತಿರುವೆ.

ಮಣ್ಣು, ನೀರು, ಗಾಳಿ ತುಂಬಿದ ಮನೆಯಲ್ಲಿ ನನ್ನೆದೆ ಪಾಳು ಬಿದ್ದಿದೆ

ಒಳಗೆ ಬಾ, ನನ್ನೊಲವೆ ಅಥವಾ ಹೊರಹೋಗುತ್ತೇನೆ ದಾರಿ ಬಿಡು

                            –ಜಲಾಲುದ್ದೀನ್ ರೂಮಿ

      ಉಸಿರಿರುವ ಎಲ್ಲ ಜೀವಿಗಳಿಗೂ ‘ಮನಸ್ಸು’ ಇರುತ್ತದೆ. ಆ ಮನಸ್ಸೆಂಬುದು ಅಸಂಖ್ಯಾತ ಭಾವನೆಗಳ ಸಂಗಮ. ಅದು ಯಾವಾಗಲೂ ಪಾದರಸದಂತೆ ಕ್ರಿಯಾಶೀಲವಾಗಿರುತ್ತದೆ. ಕೆಲವೊಮ್ಮೆ ಆ ಕ್ರಿಯಾಶೀಲತೆ ಧನಾತ್ಮಕವಾಗಿಯೂ, ಋಣಾತ್ಮಕವಾಗಿಯೂ ಚಲಿಸುವುದುಂಟು. ಇಂತಹ ಸದಾ ಚಲನಶೀಲ ಮನಸ್ಸನ್ನು ಒಂದೆಡೆ ಹಿಡಿದು ನಿಲ್ಲಿಸುವುದು ಪ್ರತಿಯೊಬ್ಬರಿಗೂ ಸವಾಲಿನ ಕೆಲಸವೆ. ಈ ಸವಾಲಿಗೆ ಕಲೆ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪೂರಕ ವಾತಾವರಣವನ್ನು ನಿರ್ಮಿಸಿವೆ, ನಿರ್ಮಿಸುತ್ತಿವೆ. ಇವುಗಳಲ್ಲಿ ಸಾಹಿತ್ಯದ ಪಾತ್ರ ಅವಿಸ್ಮರಣೀಯ!! ಇದು ಬರಹ ಮತ್ತು ಸಹೃದಯ ಓದುಗ ಎಂಬ ಪರಸ್ಪರ ಸಮಾನಾಂತರ ರೇಖೆಗಳನ್ನು ಹೊಂದಿದೆ. ಬರಹಗಾರನಿಗೆ ಭಾವಗಳನ್ನು ಹೊರ ಹಾಕಿದ ಅನುಭವವಾದರೆ, ಸಹೃದಯ ಓದುಗರಿಗೆ ಕದಡಿದ ಮನಸನ್ನು ತಿಳಿಗೊಳಿಸಿದ ಫೀಲ್ ಆಗುತ್ತದೆ. ಈ ದಿಸೆಯಲ್ಲಿ ಅಕ್ಷರ ಲೋಕ ಎಲ್ಲ ಭಾವಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಪೋಷಿಸುತ್ತಿದೆ, ಸಂತೈಸುತ್ತಿದೆ ; ಬೆನ್ನು ತಟ್ಟುತ್ತಿದೆ. ಇದು ದೇಶಾತೀತವಾಗಿ, ಭಾಷಾತೀತವಾಗಿ ಮನಸುಗಳನ್ನು ಬೆಸೆಯುವ ಆಹ್ಲಾದಕರ ಸೇತುವೆಯಾಗಿದೆ. ಈ ಕಾರಣಕ್ಕಾಗಿಯೇ ಅರಬ್, ಪರ್ಷಿಯನ್, ಉರ್ದು ಭಾಷೆಗಳನ್ನು ದಾಟಿಕೊಂಡು ಕನ್ನಡದಲ್ಲಿ ಕನ್ನಡತಿಯಾಗಿ ‘ಗಜಲ್’ ಕನ್ನಡಿಗರನ್ನು ಆವರಿಸಿದೆ. ಈ ಲೋಕವು ಬೆಳದಿಂಗಳ ಹಾಲಿನಿಂದ ತುಂಬಿದ ಒಂದು ಬಿಂದಿಗೆಯಾದರೆ, ಗಜಲ್ ಅದರ ಅಪ್ಪಟ ಬೆಣ್ಣೆ ರೂಪವೆ ಚಂದಿರ! ಈ ಹಿನ್ನೆಲೆಯಲ್ಲಿ ಗಜಲ್ ಎಂದರೆ ‘ಬೆಳದಿಂಗಳ ಬಾಲೆ’. ಈ ದಿಸೆಯಲ್ಲಿ ನಾವು ಯೋಚಿಸಿದಾಗ ಒಂದು ಪರಿಪೂರ್ಣ ಗಜಲ್ ರೂಪುಗೊಳ್ಳಲು ಅಸಂಖ್ಯಾತ ಅರೆಬರೆ ಅಶಅರ್ ನಮ್ಮ ಲೇಖನಿಯ ತುದಿಯಿಂದ ಮುಕ್ತಗೊಂಡಿರಬೇಕು. ಹೀಗಾಗಿಯೇ ಗಜಲ್ ಎಂದರೆ ಕೇವಲ ಶಬ್ದಗಳ ಮಾಲೆಯಲ್ಲ, ಅದೊಂದು ಮೌನ ಜ್ಯೋತಿ. ಬದುಕನ್ನು ಆವರಿಸಿಕೊಂಡಿರುವ ಉತ್ಕಟ ಪ್ರೇಮದ ಛಾಯೆ. ಹಗಲು-ರಾತ್ರಿ ಋತುಮಾನಗಳ ಸಹವಾಸ ತೊರೆದು ಪ್ರೇಮದಲ್ಲಿ ಲೀನವಾಗುವುದೆ ಗಜಲ್. ಇಂತಹ ಗಜಲ್ ಲೋಕದಲ್ಲಿ “ಸಂತನೊಳಗಿನ ಧ್ಯಾನ”ವನ್ನು ಪರಿಚಯಿಸಿದ ಗಜಲ್ ಗೋ ವಾಣಿ ಭಂಡಾರಿ ಅವರೂ ಒಬ್ಬರು.

       ಮಳೆ ಕಾನಿನ ಸಸ್ಯ ಸೊಬಗಿನ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಲ್ಲಿ ಶ್ರೀಮತಿ ರತ್ನ ಭಂಡಾರಿ ಹಾಗೂ ಶ್ರೀ ವೆಂಕಟಪ್ಪ ಭಂಡಾರಿ ದಂಪತಿಗಳ ಮುದ್ದಿನ ಮಗುವಾಗಿ ಜನಿಸಿದ ವಾಣಿ ಭಂಡಾರಿ ಅವರು ಬಾಲ್ಯದಿಂದಲೇ ಸಂಗೀತ ಮತ್ತು ಸಾಹಿತ್ಯದ ಕಡೆ ಒಲುವನ್ನು ಹೊಂದಿದ್ದರು. ಇದಕ್ಕೆ ಕಾರಣ ಅವರ ಮನೆಯ ವಾತಾವರಣದಲ್ಲಿ ನಿತ್ಯವೂ ನಡೆಯುತ್ತಿದ್ದ ಸಾಹಿತ್ಯ, ಸಂಗೀತ, ನೃತ್ಯದ ಕಲರವ! ಜ್ಯೋತಿಷ್ಯ ಜ್ಞಾನವನ್ನೂ ಹೊಂದಿರುವ ವಾಣಿ ಭಂಡಾರಿಯವರು ಎಂ.ಎ.(ಕನ್ನಡ) ಸ್ನಾತಕೋತ್ತರ ಪದವಿಯನ್ನು ಪೂರೈಸಿ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಡಿಎಕ್ಸ್ ಎನ್ ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ. ಕಲೆ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಶ್ರೀಯುತರು ಉತ್ತಮ ಗಾಯಕರೂ ಹೌದು. ಮೀನಾಕ್ಷಿ ಹೆಬ್ಬಾರ್ ಅವರ ಶಿಷ್ಯರಾದ ಇವರು ಪ್ರಸ್ತುತದಲ್ಲಿ ದಮಯಂತಿ ಅವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ! ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕವನ, ಶಾಯರಿ, ಗಜಲ್ ವಾಚನ ಮಾಡಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದು “ಸಂತನೊಳಗಿನ ಧ್ಯಾನ’ ಎನ್ನುವ ಗಜಲ್ ಸಂಕಲನ ಪ್ರಕಟಿಸಿರುವ ಇವರು ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಜೊತೆಗೆ ಉತ್ತಮ ವಿಮರ್ಶಕರೂ ಹೌದು. ಇವರಿಗೆ ಹೈದರಾಬಾದ್ ನಮ್ಮೂರ್ ಪೌಂಡೇಶನ್ ಬಹುಮುಖ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮದಲ್ಲಿ ಮತ್ತು ಕ.ಸ.ಇ.ಯ ಸಹ್ಯಾದ್ರಿ ಉತ್ಸವ ಕಾರ್ಯಕ್ರಮದಲ್ಲಿ ಕಾವ್ಯ ವಾಚನಕ್ಕೆ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.

         ಯೋಗಿಯಾಗಬೇಕು ಜಗದೊಳಗೆ, ಶಾಂತಿಯ ಆಲೆಮನೆ ನಿರ್ಮಿಸಲು. ಇಂತಹ ಯೋಗಿಗಳು ಮಾತ್ರ ಧ್ಯಾನಸ್ಥ ಸ್ಥಿತಿಯಲ್ಲಿ ಗಜಲ್ ಕನ್ಯೆಯನ್ನು ವರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಚಿಂತನೆಗೈದಾಗ ಪ್ರತಿ ಎದೆಯಲೂ ಒಂದು ಹಣತೆಯಿದೆ, ಗಜಲ್ ಹಣತೆಯಿದೆ. ಹೊತ್ತಿ ಬೆಳಗಲು ಸದಾ ಕಾಯುತ್ತಿರುತ್ತದೆ. ಇದರ ಅರಿವಾದಾಗ ಮಾತ್ರ ಗಜಲ್ ಗೋ ಅವರಿಂದ ಆಪ್ತ ಗಜಲ್ ಗಳು ಲೋಕದೊಂದಿಗೆ ಅನುಸಂಧಾನ ಮಾಡಲು ಸಿದ್ಧವಾಗುತ್ತವೆ. ಗಜಲ್ ಗೆ ಕಾಯುತ್ತಾ ಕೂಡಲಾಗದು, ಬರುತ್ತದೆ ಅದು ತನಗಿಷ್ಟವಾದಾಗ. ಈ ಮಾದರಿಯ ಹಲವು ಗಜಲ್ ಗಳನ್ನು ಬರೆದಿರುವ ಗಜಲ್ ಗೋ ಅವರ ಗಜಲ್ ಗಳಲ್ಲಿ ಸಾಮಾಜಿಕ ಚಿಂತನೆ, ನೋವಿನ ಅಲೆಮಾರಿತನ, ಮನಸುಗಳ ಪಿಸುಮಾತು, ಸಂತನ ಸಾತ್ವಿಕತೆ, ಆಸೆ-ನಿರಾಸೆಗಳ ಸಂಗಮ, ವ್ಯವಸ್ಥೆಯ ಇಬ್ಬಂದಿತನ, ಪ್ರೇಮಿಗಳ ವಾಯುವಿಹಾರ… ಎಲ್ಲವೂ ಮುಪ್ಪರಿಗೊಂಡಿವೆ.

ಸಂತೆಯ ಸರಕಾಗಿ ಹೋದಾಗ ಅವಳು ಬೆತ್ತಲಾಗಿದ್ದು ಅರಿವಿಗೆ ಬರಲಿಲ್ಲ

ಅರಿವೆ ಇಲ್ಲದ ಕಾಯಕ್ಕೆ ಸಂತೆಯಲ್ಲಿ ಚಿಂತೆ ಮಾಡುವ ಪುರುಸೊತ್ತು ಇರಲಿಲ್ಲ

ನಾವಿಂದು ಇಪ್ಪತ್ತೊಂದನೆಯ ಶತಮಾನದಲ್ಲಿ ಬಾಳುತಿದ್ದೇವೆ, ವೈಜ್ಞಾನಿಕ ಯುಗದಲ್ಲಿ ಜೀವಿಸುತಿದ್ದೇವೆ ಎಂದೆಲ್ಲ ನಮ್ಮ ಬೆನ್ನನ್ನು ನಾವು ಎಷ್ಟೇ ಚಪ್ಪರಿಸಿಕೊಂಡರೂ ಲಿಂಗ ತಾರತಮ್ಯ ಎನ್ನುವ ವಿಷಾನೀಲ ಇಡೀ ಮನುಕುಲವನ್ನೆ ಆವರಿಸಿದೆ. ಸೂಫಿಗಳು, ಶರಣರು, ಸಂತರು, ಚಿಂತಕರು, ದಾರ್ಶನಿಕರು…. ಯಾರೆಲ್ಲ ಬಂದು ಹೋದರೂ ಹೆಣ್ಣಿನ ಬಗ್ಗೆ ಇರುವ ಮೂಲಭೂತ ಮನೋಸ್ಥಿತಿ ಬದಲಾಗಿಲ್ಲ ಎನ್ನುವ ಕಠೋರ ಸಂದೇಶವನ್ನು ಈ ಮೇಲಿನ ಷೇರ್ ಪ್ರತಿಧ್ವನಿಸುತ್ತಿದೆ. ಹೆಣ್ಣಿಗೂ ಒಂದು ಮನಸ್ಸಿದೆ, ಅವಳಿಗೂ ಒಂದು ಕನಸ್ಸಿದೆ ; ಅವಳಿಗೂ ಅವಳದೇ ಆದ ಅಸ್ಮಿತೆ ಇದೆಯೆಂಬುದು ಪುರುಷ ಪ್ರಧಾನ ಸಮಾಜಕ್ಕೆ ಅರಿವೇ ಆಗಿಲ್ಲ. ಹೆಣ್ಣು ಇರುವುದೆ ಸರಕಿನಂತೆ, ಹೇಗೆ ಬೇಕೋ ಹಾಗೆ ; ಯಾವಾಗ ಬೇಕೋ ಆವಾಗ ಬಳಸಿಕೊಂಡು ಬೀಸಾಡಬಹುದು ಎಂಬುದನ್ನೇ ತನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದೆ. ಈ ಅಸಮಾನತೆಯನ್ನು ವಾಣಿ ಭಂಡಾರಿ ಅವರು ತಮ್ಮ ಗಜಲ್ ನಲ್ಲಿ ಸೆರೆ ಹಿಡಿದಿದ್ದಾರೆ.

         ಮಾತನ್ನು ಅಡಗಿಸಬಹುದು, ಆದರೆ ಮೌನವನ್ನಲ್ಲ. ಆ ಮೌನವೇ ಮೋಡವಾಗಿ ಮಾತಿನ ಮಳೆಗೆ ಕಾರಣವಾಗುತ್ತದೆ. ಪುರಾತನ ಕಾಲದಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಸದ್ದಿಲ್ಲದೆ ಸಾಗುತ್ತಿದೆ. ಮತ್ತೊಂದೆಡೆ ಅಭಿವ್ಯಕ್ತಿಯ ಮುಸುಕಿನಲ್ಲಿ ಗುದುಮುರುಗಿ ನಡೆಯುತ್ತಿದೆ. ಸಾಕ್ರಟೀಸ್ ನನ್ನು ಕೊಂದ ಮನುಕುಲದ ಉತ್ತರಾಧಿಕಾರಿಗಳು ನಾವು. ಅಲ್ಲಿಂದ ಇಲ್ಲಿಯವರೆಗೆ ಅಸಂಖ್ಯಾತರ ಧ್ವನಿಯ ಸದ್ದನ್ನು ಅಡಗಿಸಲಾಗಿದೆ, ಕತ್ತನ್ನು ಕೊಯ್ಯಲಾಗಿದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ವಾಣಿ ಅವರ ಈ ಒಂದು ಷೇರ್ ಬೌದ್ಧಿಕ ವಲಯದ ಅಧಃಪತನವನ್ನು ಸಾರುತ್ತಿದೆ.

ಕವಿಯನ್ನು ಕೊಂದವರ ಕಂಡಿದ್ದೇನೆ ಆದರೆ ಕಾವ್ಯ ಸಾಯಲಿಲ್ಲ

ಕಾವ್ಯ ಭಾವವನ್ನು ಅರ್ಥೈಸದವರ ಕಂಡಿದ್ದೇನೆ ಆದರೆ ಭಾವ ಬಿತ್ತಲಾಗಲಿಲ್ಲ

ಕಾವ್ಯ, ಕವಿಯಿಂದ ಹುಟ್ಪಿದೆಯಾದರು ಬರೆಯುವತನಕ ಮಾತ್ರ ಅವನದಾಗಿರುತ್ತದೆ. ಬರೆದಾದ ಮೇಲೆ ಅದು ಸಹೃದಯ ಓದುಗರ ಸ್ವತ್ತಾಗಿ ಉಳಿಯುತ್ತದೆ. ಅದು ಸಾಂದರ್ಭಿಕವಾಗಿ ಸಮಾಜವನ್ನು ಕುಟುಕುತ್ತದೆ. ಆ ಕುಟುಟಕವ ಪ್ರಕ್ರಿಯೆ ಬದಲಾವಣೆ ಬಯಸದ ಮೂಲಭೂತವಾದವಾದಿಗಳಿಗೆ ಸಹಿಸಿಕೊಳ್ಳಲು ಕಷ್ಟವಾದಾಗ ಆ ಧ್ವನಿಯನ್ನು ದಮನ ಮಾಡಲು ಹಾತೊರೆಯುತ್ತಾರೆ. ಆದರೆ ಮೂರ್ತರೂಪದ ಕವಿಗೆ ಕೊನೆಯಿದೆಯೆ ಹೊರತು ಅಮೂರ್ತ ರೂಪದ ವಿಚಾರಗಳಿಗೆ ಅಂತ್ಯವೆಂಬುದೆ ಇಲ್ಲ ಎಂಬುದನ್ನು ವಾಣಿ ಭಂಡಾರಿ ಅವರು ‌ಈ

 ಮೇಲಿನ ಷೇರ್ ಮೂಲಕ ಮನದಟ್ಟಾಗುವಂತೆ ಅರುಹಿದ್ದಾರೆ.

      ಶ್ರೀಮತಿ ವಾಣಿ ಭಂಡಾರಿ ಅವರು ಕೇವಲ ಪ್ರೀತಿ, ಪ್ರೇಮ, ಪ್ರಣಯ, ವಿರಹದ ಭಾವನೆಗಳಿಗೆ ಜೋತು ಬೀಳದೆ ಸಂಬಂಧಗಳ ನೆಲೆಯಲ್ಲಿ ಮನಸ್ಸಿನ ತೊಳಲಾಟದ ಚಿತ್ರಣವನ್ನು ವಾಸ್ತವದ ನೆಲೆಯಲ್ಲಿ ಚಿತ್ರಿಸಿದ್ದಾರೆ. ಸ್ತ್ರೀ ಸಂವೇದನೆ, ಪ್ರಸ್ತುತ ಸಮಾಜದ ವಿಡಂಬನೆ, ಧರ್ಮದ ಸೂಕ್ಷ್ಮ ಚೆಹರೆಗಳು, ಆಧ್ಯಾತ್ಮಿಕ ಬೆಳಕು… ಎಲ್ಲವನ್ನೂ ತಮ್ಮ ಅಶಅರ್ ಮೂಲಕ ಸಮಾಜದ ಪರ್ಯಟನೆಯನ್ನು ಮಾಡಿದ್ದಾರೆ. ಇವರಿಂದ ಗಜಲ್ ಹೂದೋಟ ಮತ್ತಷ್ಟು ಮೊಗೆದಷ್ಟೂ ಹಚ್ಚ ಹಸುರಾಗಿರಲಿ ಎಂದು ಶುಭ ಕೋರುತ್ತೇನೆ.

ಕಣ್ಣೀರಲಿ ಪಡೆದದ್ದನ್ನ ಹಾಡಾಗಿ ಮರಳಿಸಿದೆ

ನನ್ನ ಮಾತು ಸಹ ಜಗದ ಜನರ ಧ್ವನಿ ಕೆರಳಿಸಬಹುದು

                             –ಸಾಹಿರ್ ಲುಧಿಯಾನ್ವಿ

ಹೊತ್ತಾಯಿತು, ಕರೆ ಕೇಳಿಸುತ್ತಿಲ್ಲವೆ. ಹೋಗಬೇಕಿದೆ. ಮತ್ತೆ ಮುಂದಿನ ವಾರ ಮತ್ತೊಬ್ಬ ಗಜಲ್ ಗೋ ಅವರ ಪರಿಚಯದೊಂದಿಗೆ ನಿಮ್ಮ ಮುಂದೆ ಬರುತ್ತೇನೆ.‌ಅಲ್ಲಿಯವರೆಗೆ ಬಾಯ್, ಬಾಯ್.. ಧನ್ಯವಾದಗಳು.


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

Leave a Reply

Back To Top