ಕಥಾ ಸಂಗಾತಿ

ಅತೃಪ್ತಿ

ಜಹಾನ್ ಆರಾ ಕೊಳೂರು

 ಸಕಿನಾ ರಿಜ್ವಾನ್‌ನನ್ನು ಮದುವೆಯಾಗಿ ಒಂಬತ್ತು ವರ್ಷವಾಗಿದ್ದರೂ ಸಕಿನಾ ಏಕಾಂಗಿ ಜೀವನ ನಡೆಸುತ್ತಿದ್ದಳು. ರಿಜ್ವಾನ್ ಮತ್ತು ಸಕಿನಾನ ನಡುವೆ ಸಂಬಂಧ ಕೂಡಿ ಬಂದಿರಲಿಲ್ಲವಂತೆ. ಅದೇನು ಕಾರಣವೋ ಏನೋ… ತವರು ಮನೆಯನ್ನು ಮರೆತು ರಿಜ್ವಾನನನ್ನು ನಂಬಿ ಬಂದಿದ್ದ ಸಕಿನಾಳನ್ನು ಬಿಟ್ಟು ಅವನು ಸೌದಿ ಅರೇಬಿಯಾಕ್ಕೆ ವಲಸೆ ಹೋಗಿದ್ದನು. ಅಲ್ಲೇ ಬೇರೆ ಮದುವೆಯಾದ ಅನ್ನೋದು ಸುದ್ದಿ. ಇಲ್ಲಿ ಅತ್ತೆ ಮನೆಯಲ್ಲಿಯೂ ಅವಳಿಗೆ ಸ್ಥಾನವಿಲ್ಲದೆ ಕೊರಳಿಗೆ ಕರಿಮಣಿ ಬಿಗಿದುಕೊಂಡು ದೂರದ ಊರಿನಲ್ಲಿ ಒಂಟಿ ಬದುಕು ಪ್ರಾರಂಭಿಸಿದಳು. ಅನೇಕ ಕಷ್ಟಗಳನ್ನು, ಚುಚ್ಚು ಮಾತುಗಳನ್ನು, ಕಾಮುಕ ಕಣ್ಣುಗಳನ್ನು, ಖಿನ್ನತೆಗಳನ್ನು ಒಬ್ಬಳೆ ಅನುಭವಿಸತೊಡಗಿದಳು. ಆದರೂ ಸಕಿನಾಳಲ್ಲಿದ್ದ ಆತ್ಮವಿಶ್ವಾಸ ಅವಳ ಬದುಕಿನ ಛಲ ಬಿಡದಂತೆ ಕಾವಲುಗಾರನಂತೆ ಇತ್ತು. ಇವಳು ಚಿಕ್ಕಂದಿನಿಂದನೂ ಪ್ರತಿಭಾವಂತ ಹೆಣ್ಣು. ತೀರಾ ಹಠವಾದಿಯೂ ಅನ್ನಬಹುದು. ಹಾಗಂತ ಮತ್ತೊಬ್ಬರಿಗೆ ಎಂದು ನೋವುಂಟು ಮಾಡಿದವಳಲ್ಲ. ತನ್ನ ಆಸೆ… ಗುರಿ… ಉದ್ದೇಶಕ್ಕಾಗಿಯೇ ಅವಳ ಹಠ. ಅದರಲ್ಲಿ ಚಿತ್ರಕಲೆ ಎಂದರೆ ಅವಳಿಗೆ ಪ್ರಾಣ. ಬಣ್ಣಗಳ ಜತೆಯಲಿ ಬೆರೆತ ತನ್ನ ಕನಸುಗಳಿಗೆ ಜೀವ ತುಂಬುತ್ತಿದ್ದಳು. ಒಮ್ಮ್ಮೊಮ್ಮೆ ಅವಳ ಪೋಟ್ರೇಟ್ ಕ್ಯಾನ್ವಾಸ್ ಮೇಲೂ ಮೂಡಿ ಕಲ್ಪನಾ ಲೋಕದಲಿ ಜನರನ್ನು ಮುಳುಗಿಸಿ ಬಿಡುತ್ತಿತ್ತು. ಅವಳ ಬಾಲ್ಯ ಮೀರಿದ್ದರೂ ಓಣಿಯ ಮಕ್ಕಳೊಡನೆ ಕೂಡಿದರೆ ಮಕ್ಕಳಿಗಿಂತ ಕಡಿಮೆ ವಯಸ್ಸು ಅವಳಿಗಾಗಿರುತ್ತಿತ್ತು.  ಆ ಕಾರಣದಿಂದಲೇ ಸಕಿನಾ ಮಕ್ಕಳಿಗಂತೂ ಅಚ್ಚು ಮೆಚ್ಚಿನವಳು, ಅಷ್ಟೆ ಏಕೆ ಒಂದೇ ಒಂದು ಬಾರಿ ಇವಳೊಡನೆ ಅಪರಿಚಿತರು ಮಾತಾಡಿದರೆ ಮತ್ತು ಮತ್ತೂ  ಮಾತಾಡಬೇಕು ಎಂಬ ಹಂಬಲವಂತೂ ಸಾಮಾನ್ಯ. ತನ್ನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕೆಂಬ ಬುತ್ತಿ ಕಟ್ಟಿಕೊಂಡಿದ್ದ ಅವಳ ಕನಸು ನಿತ್ಯ ಕಣ್ಣಲ್ಲೇ ಕರಗಿ ಹೋಗುತ್ತಿತ್ತು. ರಿಜ್ವಾನ್ ಆಗೊಮ್ಮೆ ಈಗೊಮ್ಮೆ ಸಕಿನಾಳಿಗೆ ಫೋನ್ ಮಾಡಿ ಅವಳ ಉತ್ಸಾಹವನ್ನು ಕಿತ್ತು ಮತ್ತೆ ಮತ್ತೆ ಅವಳಲ್ಲಿ ಖಿನ್ನತೆಯ ಬೀಜ ಬಿತ್ತುತ್ತಿದ್ದ. ದ್ವೇಷದ ಅನ್ನ ತಿನ್ನುವಂತೆ ಯಾವಾಗಲೂ ವಿಷವನ್ನೇ ಕಾರುತ್ತಿದ್ದ. ಆದರೂ ಇವಳಲ್ಲಿ ಏನೋ ದೂರದ ಆಸೆ, ಓಯಸಿಸ್ ಕನಸು. ಮುಂದೆ ತನ್ನ ರಿಜ್ವಾನ್ ನನ್ನನ್ನು ಪ್ರೀತಿಸುತ್ತಾನೆ, ನಾವು ಜೊತೆಯಾಗಿ ಎಲ್ಲರಂತೆ ಪ್ರೀತಿಯಿಂದ ಜೀವನ ಮಾಡುತ್ತೇವೆೆ ಎಂಬ ಹುಚ್ಚು ಆಸೆ.  ಅಂದ ಹಾಗೆ ಸಕಿನಾಳನ್ನು ರೂಪಿಸಿದ ಭಗವಂತ ಅವಳಿಗೆ ಯಾವುದನ್ನೂ ಕಡಿಮೆ ಮಾಡಿಲ್ಲ. ಬೇರೆ ಹೆಂಗಳೆಯರು ಅಸೂಯೆ ಪಡುವಷ್ಟು ಸೌಂದರ್ಯವಿದೆ, ಜಾಣ್ಮೆ ಇದೆ, ಕಪಟವಿಲ್ಲದ ನಿರ್ಮಲ ಮನಸ್ಸಿದೆ, ಬದುಕುವ ಕೌಶಲ್ಯವಿದೆ, ಮಾಣಿಕ್ಯದಂತಹ ಮಾತುಗಳಿವೆ, ಅವಳ ತುಟಿಯಂಚಿನಲ್ಲಿ ಮಿನುಗುವ ಆ ಒಂದು ನಗು ಎಂತವರ ಬೇಸರವನ್ನು ಮರೆಸುವ ಆದಮ್ಯ ಶಕ್ತಿ ಹೊಂದಿರುತ್ತದೆ. ಆದಾಗ್ಯೂ ರಿಜ್ವಾನನಿಗೆ ಏಕೆ ಕಾಣುತ್ತಿಲ್ಲ ಎಂಬುದೆ ಯಕ್ಷಪ್ರಶ್ನೆ. ಅವಳು ಬಿಡಿಸಿದ ಚಿತ್ರಕ್ಕೆ ಸಾವಿರಾರು ಪ್ರಶಂಸೆಗಳು ಬಂದರೆ ರಿಜ್ವಾನ್ ಮಾತ್ರ ಆ ಚಿತ್ರದ ಹಾಳೆಯನ್ನೇ ಹರಿದು ಹಾಕುವ ಮನಸ್ಸು ಹೊಂದಿದ್ದ. ಕೆಲವರಿಗೆ ಕಣ್ಣಿದ್ದರೂ ಕುರುಡರು ಎಂಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲವೆಂಬಂತಿತ್ತು. ವರದ ಬಿಡಿಸುವ ಪ್ರತಿಯೊಂದು ಚಿತ್ರಕಲೆಯಲ್ಲಿಯೂ ಕಲೆಗಾರನ ಜಾಣ್ಮೆಯನ್ನು, ತಂತ್ರಾಗಾರಿಕೆಯನ್ನು ಹಾಗೂ ಬಣ್ಣಗಳ ಸಂಯೋಜನೆಯನ್ನು ಮನಸ್ಸಿಟ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಖಿನಾ ಎಲ್ಲರಂತೆ ನಿಧಾನವಾಗಿ ವರದನ ಚಿತ್ರ ರಚನೆಗಳನ್ನು ಪ್ರೀತಿಸತೊಡಗಿದಳು. ಅವನು ರವಿವರ್ಮನ ಶಿಷ್ಯನಂತೆ ಪೋಟ್ರೇಟ್‌ಗಳಲ್ಲಿ ಮೇಲುಗೈ. ಗಂಟೆಗಟ್ಟಲೆ ಅದರ ಬಗ್ಗೆ ಮಾತು. ಹಸಿಮಣ್ಣಿನ ನೆಲದ ಮೇಲೆ ರಿಜ್ವಾನನ ಪ್ರೀತಿಗಾಗಿ ಕಾದು ಕುಳಿತಿದ್ದ ಸಕಿನಾಳ ಮನಸ್ಸಿನ ಮೇಲೆ ‘ವರದ’ನ ರಚನೆಗಳು ತನಗೆ ಅರಿವಿಲ್ಲದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದವು. ಸಕಿನಾಳಿಗೆ ವರದನ ನೇರ ಪರಿಚಯವಿಲ್ಲದಿದ್ದರೂ ಅವನ ಕುಂಚದ ಬಣ್ಣಗಳಲ್ಲಿ ಅವಳು ಒಂದು ಬಣ್ಣದಂತೆ ಎಂದು ಅನುಭವಿಸತೊಡಗಿದಳು.

ಅಂದು ಬೆಳಗಾವಿಯ ಚಿತ್ರಕಲಾ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಬಂದಿದ್ದ ವರದನಿಗೆ ಈಗಾಗಲೆ ಸಕಿನಾಳ ಫೇಸ್‌ಬುಕ್ ಪರಿಚಯವಾಗಿತ್ತು. ಯಾವಾಗಲೂ ನಗುಮುಖದಲ್ಲಿಯೇ ಆತ್ಮೀಯವಾಗಿ ಮಾತಿಗೆ ಇಳಿಯುವ ಸಕಿನಾಳನ್ನು ತಾನಾಗಿಯೇ ಬಂದು ಮಾತನಾಡಿಸಿದ. ಇವಳ ಕಣ್ಣುಗಳಲ್ಲಿ ಎಲ್ಲಾ ಕನಸುಗಳು ಕತ್ತಲೆ ಕಳೆದು ಹೋಗಿ ಮನಸ್ಸು ಒಂಟಿತನದ ಜಾಲದಲ್ಲಿ ಸಿಲುಕಿ ನೀರಿಲ್ಲದ ಮೀನಿನಂತೆ ಒದ್ದಾಡುತ್ತಿದ್ದರೂ, ಅವಳ ಮುಖ ಕಡಲಿನ ಸೌಂದರ್ಯದಿಂದ ಒಮ್ಮೊಮ್ಮೆ ಶಾಂತ ಗಂಭೀರ.. ಹಲವು ಬಾರಿ ನಗುವ ಅಲೆಗಳ ಅಲೆದಾಟ ಸುಳಿಯುತ್ತಿತ್ತು.

ವರದನ ಬಗ್ಗೆ ಅಷ್ಟಾಗಿ ಅವಳಿಗೆ ಗೊತ್ತಿರಲಿಲ್ಲ. ಆದರೆ ಒಬ್ಬ ಉತ್ತಮ ಕಲಾವಿದ ಎಂಬ ಪರಿಚಯ ಅಷ್ಟೇ. ಅವನ ರಚನೆಗಳನ್ನು ಮಾತ್ರ ಭೇಟಿಯಾಗಿದ್ದಳು. ಮೊದಲ ಭೇಟಿಯಲ್ಲೇ ವರದನ ಹೃದಯದಲ್ಲಿ ಇದ್ದ ಸಿಂಹಾಸನಕ್ಕೆ ಸಕಿನಾ ಕಲ್ಪನೆಯಾದಳು. ಇವರ ಈ ಅನಿರೀಕ್ಷಿತ ಭೇಟಿ ಅಂದೇ ಮುಗಿಯಲಿಲ್ಲ.

ಫೇಸ್‌ಬುಕ್‌ನಲ್ಲಿ ಆವಾಗಿವಾಗ ಚರ್ಚೆಯಲ್ಲಿ ಭಾಗಿಗಳಾಗುತ್ತಿದ್ದರು. ಅವರ ಪರಿಚಯ ಫೇಸ್‌ಬುಕ್‌ನಿಂದ ಇಳಿದು ವಾಟ್ಸಾಪ್ ಗೆ ಬಂತು. ಪರಿಚಯ ಸ್ನೇಹವಾಯಿತು, ಸಂದೇಶಗಳು ಕರೆಗಳಾದವು, ಕರೆಗಳು ದೃಶ್ಯ ಕರೆಗಳಾಗಿ ಬದಲಾದವು. ಒಬ್ಬರಿಗೊಬ್ಬರ ಹತ್ತಿರವಾಗಿ ಮಾತಾಡುವುದು ನಿತ್ಯ ಅಭ್ಯಾಸವಾಗಿ ಹೋಯಿತು. ದಿನದ ಅತೀ ಹೆಚ್ಚು ಕಾಲ ಅವರು ಮಾನಸಿಕವಾಗಿ ಜೊತೆಯಾಗಿಯೇ ಇರುತ್ತಿದ್ದರು. ಚಿತ್ರಕಲೆಯ ಬಗ್ಗೆ ಸುಧೀರ್ಘ ಚರ್ಚೆಗಳು ಕತೆ, ಕವನಗಳ ಬಗ್ಗೆ ಸ್ವಲ್ಪ ಹರಟೆ, ಕಾಳಜಿ, ಪ್ರೀತಿ ಎಲ್ಲಾ ಫೋನ್‌ನಲ್ಲಿ ನಡೆಯಲು ಪ್ರಾರಂಭವಾಯಿತು. ಪೋಟ್ರೇಟ್ ನ ಪ್ರಯೋಗಗಳಿಗಾಗಿ ಕಾಡುಮೇಡು ಊರೂರು ಸುತ್ತುವ ಹವ್ಯಾಸವೂ ಆಗಿಬಿಟ್ಟಿತ್ತು.  ಸಕಿನಾನೇ ಪೋಟ್ರೇಟ್ ಮಾಡಿ ನನ್ನ ಆಸೆ ಬಯಕೆಗಳನ್ನು ಕುತೂಹಲಗಳನ್ನು ಬಿಂಬಿಸುತ್ತಾ ತನ್ನ ಅಭ್ಯಾಸ ಮುಂದುವರಿಸಿದಾಗಲೆಲ್ಲ ವರದಾ ಅವಳಿಗೆ ರವಿವರ್ಮನ ಕಲಾ ಪ್ರಕಾರದ ಬಗ್ಗೆ ಲೆಕ್ಚರ್ ನೀಡಿದರೂ ಅವಳು ಹೂಂ ಎಂದು ತನ್ನದೇ ಪ್ರಯೋಗಗಳಲ್ಲಿ ಮುಂದುವರಿಯುತ್ತಿದ್ದಳು.ಗೆಳೆಯರ ಸಹವಾಸದಿಂದ ಕಾವ್ಯದ ಪ್ರೀತಿ ಹಚ್ಚಿಕೊಂಡಿದ್ದ ವರದ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದ. ಒಂದೆರಡು ಕವನಗಳನ್ನು ಬರೆದಿದ್ದ. ಚಿತ್ರಕಲೆಯಷ್ಟೇ ಅವನ ಕವನಗಳು ವರ್ಣರಂಜಿತ ಕನಸುಗಳ ಝಲಕುಗಳೇ ಆಗಿದ್ದವು. ಪ್ರೀತಿಯ ಆಗಸದಲ್ಲಿ ಎರಡೂ ರೆಕ್ಕೆಗಳನ್ನು ಬಿಚ್ಚಿ ಹಾರಲು ಕಲಿತ ಅವನು ಪ್ರೀತಿಯಲ್ಲಿ ‘ಸಖಿ’ ಎಂದು ಅವಳನ್ನು ಕರೆಯತೊಡಗಿದ. ‘ಸಖಿ’ ಎಂದರೆ ಸಕಿನಾಳ ಮನದಲ್ಲಿ ಏನೋ ಕಚಗುಳಿ. ಸಮುದ್ರದ ಅಲೆಗಳ ಚಂದಿರನ ಮುಟ್ಟುವ ಬಯಕೆಯಂತೆ ಅವಳ ಕನಸುಗಳು. ಹೇಳಿಕೇಳಿ ಮೊದಲೆ ಸಕಿನಾ ಕಲ್ಪನಾ ವಿಹಾರಿ. ಆದರೆ ಅವಳ ಕಲ್ಪನೆಗಳಿಗೆ ಎಂದು ವಾಸ್ತವದ ಬೆಳಕು ಬಿದ್ದಿರಲಿಲ್ಲ. ವರದ ಹೆಚ್ಚು ವಾಸ್ತವದಲ್ಲಿ ಬದುಕಿದವನು. ನೋವು ಕಷ್ಟ, ಹಸಿವು, ತಿರಸ್ಕಾರ, ಅಸಹಾಯಕತೆ ಎಲ್ಲಾವನ್ನೂ ಒಂದೇ ತಟ್ಟೆಯಲಿ ತಿಂದವನು. ಪ್ರತಿಗಳಿಗೆಯೂ ಪ್ರೀತಿಗಾಗಿ ಹಪಹಪಿಸಿದವನು.

ಅಂದೊಂದು ದಿನ ಆ ಹುಚ್ಚ, ಈ ವಿರಹಿಗೆ ಒಂದು ಕವನ ಬರೆದು ಕಳುಹಿಸಿದ ಆ ಕವನ ಅವನ ಆಸೆ, ಆಕಾಂಕ್ಷೆ, ಕನಸು, ಪ್ರೀತಿಗಳ ಸಿಹಿ ಹೂರಣವಾಗಿತ್ತು. ಜೊತೆಗೆ ಪ್ರೀತಿಯ ಮನವಿ ಕೂಡ ಇತ್ತು. ಸಖಿ ಅವನ ಬಾಳ ಸಖಿಯಾಗಬಹುದಾದ ಬಯಕೆ ಇತ್ತು. ಸಖಿನಾಳ ಮನಸ್ಸಿನಲ್ಲಿಯೂ ವರದನ ಸಖಿ ಜನ್ಮ ತಾಳಿದ್ದಳು. ಅವನಿಗಾಗಿ ಇಲ್ಲೂ ಹೃದಯ ಮಿಡಿಯುತ್ತಿತ್ತು. ಸಕಿನಾ ವರದನ ಕ್ಯಾನ್ವಸ್‌ನ ಮೇಲೆ ಮೂಡಿಬರುವ ರೋಮಾಂಚನಕಾರಿ ಕಲೆಯಾಗುತ್ತ ಚಿತ್ರದಲ್ಲಿ ಚಿತ್ರವಾಗಿ ನಿಲ್ಲುತ್ತಿದ್ದಳು. ಸಖಿನಾಳ ಅನೇಕ ಚಿತ್ರಗಳಿಗೆ ಬಣ್ಣವಾಗಿ, ರೇಖೆಯಾಗಿ ಆರಂಭ-ಅಂತ್ಯದ ದಿಕ್ಕಾಗಿ ವರದ ಚಿತ್ರವನ್ನು ಇನ್ನೂ ಸುಂದರವಾಗಿಸುತ್ತಿದ್ದ. ಕಾಮನ ಬಿಲ್ಲಿನ ಮೇಲೆ ಜಿಗಿಜಿಗಿದು ಬರುವ ಅವರು ಒಬ್ಬರೊಬ್ಬರ ಆತ್ಮಸಖರಾಗುತ್ತ ಬೆಳೆದರು. ವರದಾನಿಗೆ ರಿಜ್ವಾನನ ವಿಷಯವೆಲ್ಲ ತಿಳಿದಿತ್ತು. ಜೊತೆಗೆ ಸಕಿನಾಳ ಮಾನಸಿಕ ಅನಾರೋಗ್ಯದ ಬಗ್ಗೆಯೂ ಅರಿವಿತ್ತು.

ಸಕಿನಾಳಲ್ಲಿಯ ತೀಕ್ಷ್ಣ ನೋಟ, ಚಿತ್ರ ಬಿಡಿಸುವ ಕೌಶಲ್ಯ ಮುಂದೊಂದು ದಿನ ರವಿವರ್ಮನನ್ನೆ ಮೀರಿಸುತ್ತಾಳೆ ಎಂಬ ದೃಢವಿಶ್ವಾಸ ವರದನದಾಗಿತ್ತು. ಏನೇ ಆಗಲಿ ಅವಳ ಸಮಯವನ್ನೆಲ್ಲ ಚಿತ್ರಕಲೆಗೆ ಮುಡುಪಾಗಿಸಿ ಅವಳಲ್ಲಿ ಚಿತ್ರಕಲೆಯ ಎಲ್ಲ ಕೌಶಲ್ಯಗಳು ಮೇಳೈಸಲಿ ಎಂಬ ಉದ್ದೇಶದಿಂದ ಅವಳನ್ನು ಚಿತ್ರ ರಚನೆಯತ್ತ ಮುನ್ನುಗ್ಗುವಂತೆ ಪ್ರೋತ್ಸಾಹಿಸುತ್ತಿದ್ದ. ಸಕಿನಾಳ ಚಿತ್ರಕ್ಕೆ ದೊಡ್ಡ ಹೆಸರು ಬರಬೇಕು, ಅವಳಿಗೆ ಸನ್ಮಾನಗಳಾಗಬೇಕು, ದೊಡ್ಡಕಲಾವಿದರು ಅವಳಿಗೆ ಕಿರೀಟ ತೊಡಿಸಬೇಕು, ಅದನ್ನು ನೋಡಿ ಎದುರಿನಲ್ಲಿಯಾಗಲಿ… ಮರೆಯಲ್ಲಾಗಲಿ ನಿಂತು ಚಪ್ಪಾಳೆ ತಟ್ಟಬೇಕು ಎಂಬುದು ಅದೇನೋ ವರದನಿಗೆ ಹುಚ್ಚು ಆಸೆ… ವರದ ಈಗಾಗಲೆ ಸಾವಿರಾರು ಚಿತ್ರಬಿಡಿಸಿ ರಾಜ್ಯದಲ್ಲಿಯೇ ಗುರುತಿಸಿಕೊಂಡಿದ್ದರೂ ಈಗವನಿಗೆ ಚಿತ್ರ ಜಗತ್ತು ಹೊಸದಾಗಿ ಗೋಚರಿಸುತ್ತಿದೆ. ತಾನು ಕುಂಚ ಹಿಡಿದು ಕುಳಿತರೆ ಇಂದೇ ಚಿತ್ರ ಬಿಡಿಸುತ್ತಿದದ್ದೆನೋ ಎಂಬ ಶೈಶವಾವಸ್ಥೆ ಅವನನ್ನು ಕಾಡುತ್ತಿದೆ. ಸಕಿನಾ ಒಂದೆ ಒಂದು ಮಾತು ಇಲ್ಲವೆ ಕಿರುನಗೆ ಬೀರಿದರೆ! ಅವಳ ತುಟಿಯಂಚಿನಲ್ಲಿನ ನಗೆ ಮರೆಯಾಗುವುದರೊಳಗೆ ಅವನ ಕುಂಚ ಚಿತ್ರರಚನೆ ಮುಗಿಸಿರುತ್ತದೆ, ಸಕಿನಾಳ ನಗೆಯಲ್ಲಿ ಅದೆಂತಹ ಶಕ್ತಿ ಎಂದು ತನ್ನಲ್ಲೆ ತಾನು ಹುಚ್ಚು ನಗೆ ಬೀರುತ್ತಿದ್ದ. ಒಟ್ಟಾರೆ ಸಖಿನಾಳ ಒಲವಿನ ಚಿತ್ರಕ್ಕೆ ಚೆಲುವಿನ ಚೌಕಟ್ಟು ಹೊಂದಿಸುವ ಹಂಬಲ ಅವನಿಗೆ. ಸಖಿನಾಳನ್ನು ಚಿತ್ರ ಜಗತ್ತಿಗೆ ಬೇಗ ಪರಿಚಯವಾಗಬೇಕು ಎಂಬ ಹಂಬಲದಿಂದ ತನ್ನ ಶಕ್ತಿ ಮೀರಿ ಅವಳಿಗೆ ಊರುಗೋಲಾಗಿ ನಿಂತ, ಎಲ್ಲದಕ್ಕೂ ಮಿಗಿಲಾಗಿ ಚಿತ್ರರಚನೆಗೆ ಆ ದೇವರೆ ಅವಳ ಕೈಗೆ ಶಕ್ತಿಕೊಟ್ಟಿದ್ದ ಎನ್ನಬಹುದು. ಇತ್ತೀಚೆಗಂತೂ ಯಾರಾದರು ಸಖಿನಾಳನ್ನು ಜರಿದರೆ ಅವನ ಮನಸ್ಸು ಕುದಿಯುತ್ತಿತ್ತು. ಯಾರಾದರು ಮಾತಿನ ಮಧ್ಯದಲ್ಲಿ ಸಖಿನಾ ಎಂದು ಉಚ್ಛರಿಸಿದರೆ ಆ ಹೆಸರಿನಲ್ಲಿಯೇ ಸಂತೃಪ್ತಿಪಡುತ್ತಿದ್ದ.

ಆದರೆ ಸಕಿನಾಳಿಗೆ ರಿಜ್ವಾನನ ನೆನಪು, ಸಮಾಜದ ರಾಕ್ಷಸನೋಟ, ಸಂಬಂಧಗಳು, ಮರ್ಯಾದೆ, ಜಾತಿ ಹೇಗೆ ಅನೇಕ ಕಟ್ಟುಪಾಡುಗಳಲ್ಲಿ ಬಂಧಿಯಾಗಿ ತನ್ನ ಆಸೆಗಳನ್ನು ದಮನ ಮಾಡಿ ಅವನಿಗೆ ನಿರಾಕರಿಸಿದಳು. ಸಕಿನಾಳ ನಿರಾಕರಣೆಯಿಂದ ನೀರಿನಿಂದ ತೆಗೆದು ಹಾಕಿದ ಮೀನಿನಂತೆ ವರದ ವಿಲವಿಲ ಒದ್ದಾಡಿದ್ದ. ತನ್ನ ಕುಂಚವೆ ಇನ್ನು ಮೂಲೆ ಸೇರುತ್ತದೆ, ಇಲ್ಲಿಯವರೆಗೆ ಬರೆದ ಚಿತ್ರಗಳೆ ಇತಿಹಾಸವಾಗುತ್ತವೆ, ಸಕಿನಾಳ ತುಟಿಯಂಚಿನ ನಗುವಿಲ್ಲದೆ ಇನ್ನೆಂದೂ ತನ್ನಿಂದ ಚಿತ್ರ ಬರೆಯಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ವರದಾ ಬರುತ್ತಾನೆ. ಈ ನಿರಾಕರಣೆ ಹೆಚ್ಚು ಹೊತ್ತು ಉಸಿರಾಡಲಿಲ್ಲ. ಅವರ ಪ್ರೀತಿಯ ಪರಿಮಳ ಅವರಿಬ್ಬರನ್ನೂ ಹತ್ತಿರ ತರುತ್ತಲೇ ಇತ್ತು. ಸಕಿನಾಳದು ಕೃತಕ ನಿರಾಕರಣೆ ಎಂದು ಅವನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು.

ಒಂದು ರಾತ್ರಿ ವರದ ಫೋನ್‌ನಲ್ಲಿ ತನ್ನ ಜೀವನದ ಎಲ್ಲಾ ಆಗು-ಹೋಗುಗಳನ್ನು ಬಿಚ್ಚಿಟ್ಟ. ಅವನ ಜೀವನದಲ್ಲಿ ಬಂದ ಕಷ್ಟದ ದಿನಗಳು ಆ ಹಿಂಸೆ, ಬಡತನ, ಅವನ ಸಾಮಾಜಿಕ ಯುದ್ಧ, ಅವನು ಇಷ್ಟಪಟ್ಟ ಹುಡುಗಿಯರು, ಅವನನ್ನು ಇಷ್ಟಪಟ್ಟ ಬೆಡಗಿಯರು, ತಂದೆಯ ಅಗಲಿಕೆ, ಸಂಬಂಧಿಕರ ತಿರಸ್ಕಾರ, ಸ್ನೇಹಿತರ ಸಹಕಾರ… ಹೀಗೆ ಸಂಪೂರ್ಣವಾಗಿ ಅವನು ಸಖಿನಾಳ ಮುಂದೆ ತನ್ನ ಅಂತರಾತ್ಮವನ್ನು ಬಿಚ್ಚಿಟ್ಟ. ಜೊತೆಯಲ್ಲಿ ಅವನಿಗೆ ಸಖಿನಾಳ ಮನದ ನೋವು ಅವನ ಮನಸ್ಸನ್ನು  ಘಾಸಿಗೊಳಿಸಿತ್ತು. ಅನೇಕ ವರ್ಷಗಳಿಂದ ಯಾರ ಮುಂದೆಯೂ ತನ್ನ ನೋವು ತೋಡಿರದ ಆ ಚೆಲುವೆ ಅಂದು ಅವನಲ್ಲಿ ನದಿಯಾಗಿ ಹರಿದಳು. ಮಾತಿಗೆ ಮಾತು ಮುಂದುವರೆದು ಅವರಲ್ಲಿ ಇದ್ದ ಅಂತರ ದೂರ ಸರಿದಿತ್ತು. ಸಖಿ ದುಃಖದ ಕಡಲಲ್ಲಿ ಮುಳುಗಿ ಮತ್ತೆ ದಡ ಸೇರಲು ವರದ ತೋಳಾಸರೆ ಕೇಳಿದಳು. ತನ್ನ ‘ಸಖಿ’ ಸ್ವಲ್ಪ ಕಾಲವಾದರೂ ನೆಮ್ಮದಿಯಿಂದ ತನ್ನ ತೋಳುಗಳ ಮೇಲೆ ಮಲಗಲಿ ಎಂದು ವರದ ತನ್ನ ಬಾಹುಗಳನ್ನು ಚಾಚಿದ್ದ. ಆಸೆಯಲ್ಲಿ ಇಬ್ಬರೂ ಕಲ್ಪನಾ ಲೋಕದ ಮೌನ ತರುಲತೆಯಾಗಿಬಿಟ್ಟರು. ಪ್ರೀತಿ ಅಲ್ಲಿ ಚಿಮ್ಮಿ ಹರಿದಿತ್ತು. ರಾತ್ರಿ ಚಂದಿರ ಮರೆಯಾಗಿ ಹಗಲು ಸೂರ್ಯ ಕಿರಣಗಳನ್ನು ಕಿಟಕಿಯಿಂದ ಪರದೆ ಸರಿಸಿ ಅವರ ಜೊತೆ ಮುಂಜಾನೆಯ ಸೂರ್ಯ ಮಾತಿಗಿಳಿದಾಗಲೇ ಅವರಿಗೆ ತಮ್ಮ ತಮ್ಮ ಕೆಲಸಕ್ಕೆ ಹೋಗುವ ನೆನಪಾಯಿತು. ಪುಣ್ಯಕ್ಕೆ ಬ್ಯಾಟರಿ ಲೋ ಸಮಸ್ಯೆ ಬಂದು ದೂರ ಆಗಲಿಲ್ಲ. ಇಬ್ಬರಲ್ಲಿಯೂ ಜೊತೆಯಲ್ಲಿ ಕತ್ತಲಲ್ಲಿ ಬೆಳಕಾದ ಸುಂದರ ಅನುಭವ. ಇಷ್ಟೆಲ್ಲಾ ಆದರೂ ಅವರಿಬ್ಬರೂ ತಮ್ಮ ಗಡಿಯಲ್ಲಿ ನಿಂತ ನಿರಾಶ್ರಿತರೇ ಆಗಿದ್ದರು ಎಂಬುದು ವಿಷಾದ.

ಸಕಿನಾ ಸಂಸ್ಕಾರದ ಸುಖ ಉಂಡವಳು. ಅವಳ ರಸಿಕತನ ಚಿತ್ರಗಳಲ್ಲಿ ಇಣುಕುತ್ತಿತ್ತು. ವರದ ಯೌವ್ವನದ ಕೊಳದಲ್ಲಿ ಒಂಟಿಯಾಗಿ ಈಜುತ್ತಿರುವ ಹಂಸ. ಹೀಗೆ ಒಂದು ದಿನ ಭೇಟಿಯಾಗುವ ಮನಸ್ಸು ಮಾಡಿದರು.

ಸಕಿನಾಳ ಮನೆಗೆ ವರದ ಬಂದ. ಆತ್ಮೀಯವಾಗಿ ಅವಳನ್ನು ಸ್ವಾಗತಿಸಿದ ಸಕಿನಾ ಅಡುಗೆ ಮಾಡಿ ಬಹಳ ಲವಲವಿಕೆಯಲ್ಲಿ ಅವನ ಜೊತೆ ಸಮಯ ಕಳೆಯಬೇಕೆಂದು ನಿಶ್ಚಯಿಸಿದಂತೆ ಇದ್ದಳು. ವರದನ ಮನಸ್ಸಿನ ಅಲೆಗಳು ಉಕ್ಕಿ ಉಕ್ಕಿ ಆರ್ಭಟಿಸುತ್ತಿದ್ದವು ಸಕಿನಾಳ ಸೌಂದರ್ಯ ಅವಳ ಮಾತಿನಂತೆ ಅವನಿಗೆ ಬಲು ಕಾಡತೊಡಗಿತು. ಸಕಿನಾಳಿಗೆ ವರದ ತನ್ನನ್ನು ಪ್ರೀತಿಸುವ ವಿಷಯ ತಿಳಿದೇ ಇತ್ತು. ಆದರೆ ನಾನು ನಿರಾಕರಿಸಿದ್ದೇನೆ ಎಂಬ ಸುಳ್ಳಿನ ಒಣಮುಳ್ಳು ಆಗೀಗಾ ಚುಚ್ಚುತ್ತಿತ್ತು. ಒಂದು ಮುತ್ತು ಕೊಡಲು ಅನುಮತಿ ನಿರೀಕ್ಷಿಸುವ ನಿಷ್ಠಾವಂತ ಪ್ರೇಮಿ ಅವನು. ಅಲ್ಲಿ ಮಾತಿಗೆ ವಿರಾಮ ಸಿಕ್ಕಿತು. ಕಣ್ಣು ಮನಸ್ಸಿಗೆ ಕೆಲಸ ಹೆಚ್ಚಾಗಿತ್ತು ಮೌನದಲ್ಲೇ ಅವನಿಗೆ ಒಪ್ಪಿದ ಅವಳಲ್ಲಿ ಪ್ರೀತಿಯ ಬಣ್ಣಗಳು ಹಿತವಾಗಿ ಕರಗುತ್ತಿದ್ದವು. ತನ್ನ ಪ್ರೀತಿಯಲಿ ಒಂದುಗೂಡಿಸಿ ಅವಳ ಮುಖವನ್ನು ಬೊಗಸೆಯಲ್ಲಿ ಹಿಡಿದು ಕೆನ್ನೆಯ ಮೇಲೆ ಅಧರಗಳ ಒತ್ತಿದ. ಮುಚ್ಚಿದ ಕಣ್ಣು ತೆರೆಯುವಷ್ಟರಲ್ಲಿಯೇ ರಿಜ್ವಾನನ ರುದ್ರರೂಪ ಅವಳ ಒಳ ಮನಸ್ಸಿನಲ್ಲಿ ಮೂಡಿ ಹೆದರಿ ನೀರಾದಳು.

ಅವಳನ್ನು ನೋಡಿದ ವರದನಲ್ಲಿ ತಾನು ತಪ್ಪು ಮಾಡಿದೆ ಎಂಬ ಭಾವದ ಬಲಗಳು ಬಡಿಯತೊಡಗಿದವು. ಮೌನ ಆ ಹೊತ್ತಿಗೆ ಮನೆ ಮಾಡಿತು. ಸಕಿನಾಳ ಮನಸ್ಸಿನಲ್ಲಿ ಅನೇಕ ಸೈನಿಕರು ಸೇರಿಕೊಂಡು ಯುದ್ಧ ಪ್ರಾರಂಭಿಸಿದವು. ವರದನ ಪ್ರೀತಿಯೇ ಗೆಲ್ಲುವ ಸಂಭವನೀಯತೆಗಳು ಹೆಚ್ಚಾಗಿದ್ದವು. ಅವನ ಆಸರೆಯಿಲ್ಲದೇ ಒಂಟಿತನದ ಕಡಲಿನಲ್ಲಿ ಮುಳಗಿ ಸಾಯುವ ಬದಲು ಇವನ ಕುಂಚದ ಬಣ್ಣವಾಗಿ ಸುಂದರ ನದಿ ಸಾಗರ ಸಂಗಮ ಚಿತ್ರವಾಗುವ ಆಸೆ ಅವಳಲ್ಲಿ ಮೂಡಿತು. ವರದನ ಚುಂಬನ ಶಕ್ತಿಯಾಯಿತು. ‘ಸಖಿ’ ನನ್ನನ್ನು ದೂರ ಮಾಡಿದರೆ ಎಂಬ ಆಲೋಚನೆಯಲ್ಲಿ ಕಣ್ಣು ಮುಚ್ಚಿ ಲೆಕ್ಕಾಚಾರ ಮಾಡುತ್ತಿದ್ದ. ಅವನ ಸಖಿ ಅವನ ಸಮೀಪ ಬಂದಳು ಅಲೆಗಳಿಗೆ ಹೆದರದ ಬಂಡೆಯಂತೆ ಅವನು ಮಲಗಿರುವೆನೆಂದು ‘ಸಖಿ’ ತನ್ನನ್ನೇ ಅವನಿಗೆ ಅರ್ಪಿಸಿದ ರೀತಿಯಲ್ಲಿ ಮೆಲ್ಲನೆ ಬಂದು ಗಲ್ಲದ ಮುತ್ತಾದಳು. ಮತ್ತು ಏರಿಸಿ ಮತ್ತೆ ದೂರ ನಿಂತಳು. ಅವಳ ಮುತ್ತು ಕೂಡ ಅವನ ಕಲ್ಪನೆಯಲ್ಲಿ ಇದ್ದ ಹಾಗೆ. ಸಮಯ ಮೀರಿತ್ತು. ವರದ ಮನೆಯಿಂದ ಒಲ್ಲದ ಮನಸ್ಸಿನಿಂದ ಹೊರಟ. ಬಸ್ಸಿನಲ್ಲಿ ಕುಳಿತು ‘ಥಾಂಕ್ಯೂ’ ಎಂದು ಮೆಸ್ಸೇಜ್ ಮಾಡಿದ. ಸಕಿನಾಳ ಕಳ್ಳತನ ಸಿಕ್ಕಿಬಿದ್ದಿತು. ಆ ಒಂದು ಮುತ್ತಿನಿಂದ ಎಲ್ಲ ಪರದೆಗಳು ಸರಿದು ಹೋದವು. ಮುಂಬಂದ ದಿನಗಳಲ್ಲಿ ಸಖಿ ಮತ್ತು ವರದ ಆಕಾಶ ಸಮುದ್ರದಲ್ಲಿ ಲೀನವಾದಂತೆ ಪರಸ್ಪರ ಬೆರೆತು, ಕಳೆದು ಮುಗಿಸಿ ತೇಲುತ್ತಿದ್ದರು. ಕಡಲಿನ ಒಡಲಿನ ಕಂಪನದ ಭಯದಂತೆ ಸಖಿನಾ ರಿಜ್ವಾನನನ್ನು ನೆನೆದು ವರದನ ಪ್ರೀತಿಯನ್ನು ಶಾಶ್ವವತವಾಗಿ ಉಳಿಸಿಕೊಳ್ಳಲಾಗದೇ ಒಳಗೊಳಗೆ ಸೋಲುತ್ತಿದ್ದಳು. ತನ್ನ ಹೆಣ್ತನಕ್ಕೆ ಒಮ್ಮೊಮ್ಮೆ ಹಿಡಿ ಶಾಪ ಹಾಕುತ್ತಾ ತಾನು ಗಂಡು ಆಗಿದ್ದರೆ ಅಥವಾ ಒಂದೇ ಧರ್ಮವಾಗಿದ್ದರೆ ಯಾವ ಧರ್ಮವೂ ತಾನು ವರದ ಶಾಶ್ವತವಾಗಿ ಸೇರಲು ಅಡ್ಡಿಯಾಗುತ್ತಿರಲಿಲ್ಲ. ‘ದೂರದ ಮಾವನ ಮಗ ಮೊನ್ನೆ ಮೊನ್ನೆ ಹಿಂದು ಹುಡುಗಿಯನ್ನು ಮತ್ತು ಅವರ ಪ್ರೀತಿಯ ಕುರುಹು ಆಗಿದ್ದ ಮಗುವನ್ನು ಮನೆಗೆ ಕರೆದುಕೊಂಡು ಬಂದಾಗ ಮಾವ ಏನು ಮಾಡದೆ ಸೊಸೆಯನ್ನು ಮೊಮ್ಮಗನನ್ನೂ ಮನೆ ತುಂಬಿಸಿಕೊಂಡರು. ಅದೇ ಈಗ ನಾನು ವರದನನ್ನು ಮರು ಮದುವೆಯಾಗುತ್ತೀನಿ ಎಂದರೆ ನನ್ನನ್ನು ಉಳಿಸಿಯಾರೆ. ಊರಿಗೆ ಊರೇ ಹೊತ್ತಿ ಉರಿಯುತ್ತೆ. ವರದನ ಜೀವಕ್ಕೆ ಕುತ್ತು ತಂದು ಬಿಡುತ್ತಾರೆ ಅಷ್ಟೇ. ನನಗೆ? ನನಗೆ ಏನು ಹಾಗೆಯೇ ಬಿಟ್ಟಾರೇ ಇವರು ಜೀವಂತ ಸಮಾಧಿಯೇ’ ಎಂದು ಮನಮನದಲ್ಲಿಯೇ ತನ್ನ ನಿಸ್ಸಾಹಯಕತೆಗೆ ಮರುಗುತ್ತ ಪ್ರತಿ ರಾತ್ರಿ ನಿದ್ರೆ ಮಾತ್ರೆಗಳಿಗೆ ಶರಣಾಗಿದ್ದಳು. ವರದ ಏನು ಸುಮ್ನೆ ಪ್ರೀತಿಯ ಕಿನಾರೆಯಲ್ಲಿ ಕುಳಿತು ಸೂರ್ಯಕಿರಣಗಳ ಸ್ನಾನ ಮಾಡುತ್ತಿದ್ದನಾ, ಅವನದೂ ಅದೇ ಪಾಡು ಸುಡುವ ಮರುಭೂಮಿಯಲ್ಲಿ ಪ್ರಯಾಣ’. ಒಮ್ಮೊಮ್ಮೆ ಕತ್ತಿಯ ಮೇಲೆ ನಡಿಗೆ ಮೇಲಿಂದ ಮೇಲೆ ಮದುವೆಯ ಪ್ರಸ್ತಾಪ. ‘ಸಖಿ’ಯನ್ನು ಬಿಟ್ಟಿರದ ಮನಸ್ಸು ಇಂತಹ ನೂರು ಒಳ ಒತ್ತಡಗಳಲ್ಲಿಯೂ ಅವರು ದೂರವಾಗುವ ಮಾತು ಬರುತ್ತಿರಲಿಲ್ಲ. ಅವಳು ತನ್ನ ಸರ್ವಸ್ವವೂ ಅವನಿಗೆ ಅರ್ಪಿಸಿ ಅವನಲ್ಲಿ ಕರಗುತ್ತಿದ್ದಳು. ಯಾರ ಮುಂದೆಯೂ ನಗದ ಅವಳ ತುಟಿಗಳು ಅವನ ಎದುರು ಅರಳುತ್ತಿದ್ದವು. ಪ್ರೀತಿಯ ಕಾಳಜಿಯ ಹರಿಸುತ್ತಿದ್ದಳು. ದುಃಖದಲ್ಲಿ ಕುಸಿದು ಬಿದ್ದಾಗ ‘ನಾನು ಮತ್ತೆ ಮತ್ತೆ ನಿನ್ ಕಣ್ಣಲ್ಲಿ ನೀರ್ ನೋಡ್ತಿರೋ ಪಾಪಿ .ಒರಸೋಕೂ ಆಗದೇ ಸಾವರಿಸೋಕು ಆಗದ ನತದೃಷ್ಟ’ ಎಂದು ವರದ ತನ್ನನ್ನು ತಾನೆ ದೂಷಿಸಿಕೊಂಡು ಸಖಿನಾಳಿಗೆ ಕಷ್ಟ ಸಹಿಸುವ ಸಹನೆ ಕೊಡು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದ. ಸಖಿನಾ ಮುಂದೊಂದು ದಿನ ಜಗತ್ತು ಬೆಳಗುವ ಕಲಾವಿದೆಯಾಗುತ್ತಾಳೆ, ಅವಳ ಕಷ್ಟಗಳೆಲ್ಲ ಮೋಡದಂತೆ ಕರಗಿ ಹನಿಯಾಗಿ ಸಾಗರ ಸೇರುತ್ತವೆ, ಸಂತಸದ ದಿನಗಳು ಮುಂದೆ ಹವಳದ ನದಿಯಾಗಿ ಹರಿಯುತ್ತಿವೆ ಎಂದೆಲ್ಲ ವಿಶ್ವಾಸ ಅವನದಾಗಿತ್ತು. ಆ ಕಾರಣದಿಂದಲೆ ಸಖಿನಾಳ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದ ಆದರೆ ‘ಸಖಿ’ಗೆ ವರದನ ಮರುಕ ಸಹಿಸದೇ ಮತ್ತೇ ನಗುವಿನ ಮುತ್ತು ಹವಳಗಳ ಧರಿಸಿ ನಿಲ್ಲುತ್ತಿದ್ದಳು. ರಾತ್ರಿಯಲ್ಲಿ ನಿದ್ರೆ ಬಾರದೇ ‘ವರದ ಏನೋ ಬೇಜಾರ ಕಣೋ ಮಾತನಾಡು… ನೀನು ಮಾತನಾಡುತ್ತಿದ್ದರೆ ನಾ ಎಲ್ಲಾ ಮರತಂತೆಯಾಗುತ್ತದೆ’ ಎಂದು ತಡರಾತ್ರಿಯವರೆಗೆ ಫೋನ್‌ನಲ್ಲಿ ಮಗ್ನರಾಗಿರುತ್ತಿದ್ದಳು. ಅವಳಿಗೆ ಊಟ ಬೇಡವಾಗಿತ್ತು, ನಿದ್ರೆ ಬೇಡವಾಗಿತ್ತು. ವರದ ಅಷ್ಟೇ ಬೇಕಿತ್ತು.ಒಮ್ಮೆ ಮನದಲ್ಲಿ ಮೂಡಿದ ರಿಜ್ವಾನನ ಭಯ ಖಿನ್ನತೆಯ ಮಬ್ಬಿನಲ್ಲಿ ತುಸು ಹೆಚ್ಚೇ ಮಾತ್ರೆ ನುಂಗಿ ಮಲಗಿಬಿಟ್ಟಳು. ಮುಂಜಾನೆ ಸೂರ್ಯ ಕಿರಣಗಳ ಜೊತೆಗೆ ರಿಂಗಿಸುವ ವರದನ ಫೋನ್ ಅಭ್ಯಾಸದಂತೆ ಬಂದಿತ್ತು. ಉತ್ತರಿಸಲಿಲ್ಲ ೦೮ ಕ್ಕೆ ಒಮ್ಮೆ ಟಿಫಿನ್ ಏನು ಅಂತ ಕೇಳೋ ಗಂಟೆ ಬರುತ್ತಿತ್ತು ಅದಕ್ಕೂ ಉತ್ತರವಿಲ್ಲ. ಆಫೀಸ್‌ನಲ್ಲಿ ಅವರ ಬ್ಯುಸಿಯಾಗಂತೂ ಫೋನ್‌ನೂ ಇಲ್ಲ, ಮತ್ತೆ ಮೆಸ್ಸೇಜ್ ಇಲ್ಲ. ಸಂಜೆ ರಾತ್ರಿ ನಿರಂತರ ಅವನ ಪ್ರಯಾಣ. ಆದರೆ ಅವಳು ಉತ್ತರವೇ ಇಲ್ಲ. ಏನೋ ಕೆಲಸ ಇರಬೇಕು ಎಂದು ಆಯಾಸಗೊಂಡ ದೇಹ ವಿಶ್ರಾಂತಿ ಬಯಸಿದರೆ  ಕಣ್ಣುಗಳಿಗೆ ನಿದ್ರೆ ಬೇಕಾಗಿರಲಿಲ್ಲ.ಮನಸ್ಸು ಅವಳನ್ನೆ ಕನವರಿಸುತ್ತಿತ್ತು. ರಿಜ್ವಾನ್ ಊರಿಗೆ ಬಂದಿರಬಹುದೇ, ರಿಜ್ವಾನನ ಕೊರಳಾಸರೆಯಲ್ಲಿ ನನ್ನನ್ನು ಮರೆತಿರಬಹುದೆ, ಮರೆಯಲಿ ಬಿಡು ಒಟ್ಟಾರೆ ಸಖಿನಾಳ ಕಣ್ಣಂಚಿನಲಿ ನೀರು ಬರಬಾರದು ಎಂಬ ಆಸೆಯಿಂದ ಮುದುಡಿಕೊಂಡು ಮಲಗಿದ. ಆದಾಗ್ಯೂ ನಿದ್ರೆ ಇಲ್ಲ ‘ಅವನಿಗೆ ನನ್ನ ಬಗ್ಗೆ ತಿಳಿದೇ ಹೋಗಿರಬಹುದು? ಇಲ್ಲ ಇಲ್ಲ ಅವನು ಬಹಳ ದೂರದ ದೇಶದಲ್ಲಿ ಇರುವವನು ಅದೂ ಅಲ್ಲ ಕಾರಣ, ಮತ್ತೆ ಯಾಕೆ ಸಖಿ ನನ್ನ ಫೋನ್‌ಗೆ ಉತ್ತರಿಸಲಿಲ್ಲ ಎಂದು ಮೆದುಳಿನಲ್ಲಿ ನರಗಳು ಬಲೆ ಹೆಣೆದುಕೊಂಡಂತೆ ತೊಡಕಾಗಿದ್ದವು. 

‘ನನ್ನಿಂದ ಅವಳ ಬಾಳಲ್ಲಿ ಏನಾದರೂ ಸಮಸ್ಯೆಯಾದರೆ ನಾ ನನ್ನನ್ನು ಎಂದೂ ಕ್ಷಮಿಸೊಲ್ಲ. ಮಾತನಾಡುವೆ… ಇಲ್ಲ ಅಂದರೆ ಊರಿಗಾದರೂ ಹೋಗಿ ಬರುವೆ’ ಎಂದು ನಿರ್ಧರಿಸಿ ಅವಳಿಗೆಂದೇ ಬಿಡಿಸಿದ ‘ಶಾಂತ ಕಡಲಿನಲ್ಲಿ ಸೂರ್ಯ ಮುಳುಗುವ’ ಚಿತ್ರವನ್ನು ತೆಗೆದು ಇಟ್ಟು ಮಲಗಿದ.

ಮುಂಜಾನೆ ಮತ್ತೆ ಫೋನ್ ಆಟ ಒಮ್ಮೆ ರಿಂಗಣವಾಯಿತು ಆದರೆ ಉತ್ತರವಿಲ್ಲ. ನಂತರ ಫೋನ್ ಆಫ್ ವರದನಿಗೆ ತಾಳ್ಮೆ ಮೀರಿತು. ಮಳೆಗಾಲದ ಮುಂಜಾನೆಯ ಚಳಿಯಲ್ಲಿ ವರದ ಸಖಿಯ ಮನೆಯ ದಾರಿ ಹಿಡಿದ. ಮೆಲ್ಲಗೆ ಜಿನುಗುವ ಮಳೆಯಲ್ಲಿಯೇ ಅವನು ಗುರಿ ತಲುಪಿದ. ತನ್ನ ಪೇಂಟಿಂಗ್ ಕಟ್ಟಿದ ನ್ಯೂಸ್ ಪೇಪರ್ ಸ್ವಲ್ಪ ಒದ್ದೆಯಾಗಿತ್ತು. ಅದನ್ನು ಗಮನಿಸದ ವರದ ಸಖಿಗೆ ಸರ್ಪ್ರೈಸ್ ಕೊಡಲು ಮನೆಯ ಬಾಗಿಲ ಬಳಿ ಬಂದಾಗ ನೆರೆಹೊರೆಯವರ ಪಿಸುಮಾತುಗಳ ಲಾಲಿ ಹಾಡಿನಲ್ಲಿ ಸಖಿ ಶವವಾಗಿ ಮಲಗಿದ್ದಳು. ಸಖಿನಾಳ ಮೇಲೆ, ಅವಳ ಕೌಶಲ್ಯದ ಮೇಲೆ ಇಟ್ಟಿದ್ದ ವಿಶ್ವಾಸ ಮರದ ಮೇಲಿನ ಗೂಡಿನಲ್ಲಿ ಜೀಕಿ ವ್ಯರ್ಥವಾಗಿ ಮಣ್ಣಿನಲ್ಲಿ ಸೋರುವಂತಾಗಿತ್ತು. ಸಖೀನಾಳ ಮೇಲೆ ಅವನಿಗೆ ಕರುಣೆ ಮೂಡಲಿಲ್ಲ. ಬದಲಿಗೆ ಸಖಿನಾ ಸಾರಸ್ವತ ಲೋಕಕ್ಕೆ, ತಂದೆ ತಾಯಿಗೆ, ತನ್ನನ್ನು ಪ್ರೀತಿಸುತ್ತಿದ್ದ ಮಕ್ಕಳಿಗೆ ಬಗೆದ ದ್ರೋಹ ಎಂದೆ ಬಗೆದ. ಕಲಾ ಮಾತೆ ತನ್ನ ಕರಗಳಿಗೆ ಎಷ್ಟೆಲ್ಲ ಶಕ್ತಿ ತುಂಬಿದ್ದರೂ ಅದನ್ನೆಲ್ಲ ತನ್ನ ಕೈಯಾರೆ ಹಿಸುಕಿ ಹಾಕಿದ ರಾಕ್ಷಸಿ ಎಂದೆಲ್ಲ ನೋವು ಪಟ್ಟುಕೊಂಡ. ಮಧ್ಯದಲ್ಲಿ ಬಂದ ಕ್ರೂರಿ ರಿಜ್ವಾನನಿಗೆ ತನ್ನ ಸಾವು ಒಲವಿನ ಉಡುಗೊರೆಯಾಗಿ ನೀಡಿದ ಸಖಿನಾಳಿಗೆ ತನಗೆ ಎದೆ ಹಾಲು ಉಣಿಸಿ ಬೆಳೆಸಿದ ಅಮ್ಮ, ನನ್ನ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಬೀಗುವ ತಂದೆಯ ಮುಖವನ್ನು ತನ್ನ ಕಣ್ಮುಂದೆ ತೆಗೆದುಕೊಳ್ಳದ ಹೇಡಿ ಎಂದು ಹುಚ್ಚನಂತೆ ವರ್ತಿಸಿದ. ಸತ್ತ ಸಖಿನಾಳಿಗೆ ಅಲ್ಲಿ ಅಳುವವರೆ ಇಲ್ಲ, ಆಗಷ್ಟೇ ಭಾರತಕ್ಕೆ ಬಂದಿಳಿದ ರಿಜ್ವಾನ ಕಣ್ಣಲ್ಲಿ ಕೃತಕ ಕಂಬನಿ ತುಂಬಿಕೊಂಡಿದ್ದರೂ ಮತ್ತೊಂದು ಮದುವೆಯ ಆಸೆ ಅವನಲ್ಲಿ ಮೂಡಿತ್ತು. ಶಾರದೆಯ ಅವತಾರದಂತೆ ಉಳಿದವರೆಲ್ಲರಿಗೂ ಕಂಡ ಸಖಿನಾ ರಿಜ್ವಾನನ ಕಣ್ಣುಗಳು ಮಾತ್ರ ದ್ವೇಷಿಸುತ್ತಿದ್ದವು. ಅದರ ಜೊತೆಗೆ ಸತ್ತ ಹೆಣದ ಸುತ್ತಲು ನಿಂತಿದ್ದ ಜನರೆಲ್ಲ “ಯಾವ ತಪ್ಪು ಮಾಡಿದ್ದಾಳೆ, ಮುಖ ತೋರಿಸದೆ ಕಣ್ಮರೆಯಾಗಿದ್ದಾಳೆ, ಅದೆಂತಹ ಚಿತ್ರ ರಚಿಸುತ್ತಿದ್ದಳೋ ಏನೋ… ಎಂದು ಬಿರುನುಡಿ ಮಾತಾಡುತ್ತಿದ್ದರೆ, ಅದನ್ನೆಲ್ಲ ಬಿಟ್ಟು ಹೇಡಿಯಂತೆ ಹೀಗೆ ಹೊರಟೋದದ್ದು ಏಕೆ? ಎಂಬ ಪ್ರಶ್ನೆಗೆ ಅಲ್ಲಿ ಯಾರಲ್ಲೂ ಉತ್ತರ ಇದ್ದಿಲ್ಲ. ಮಗಳ ಮುಖ ನೋಡಲು ದೂರದಿಂದ ಬಂದ ಅಪ್ಪ, ಅಮ್ಮ ಈ ದೃಶ್ಯ ನೋಡುವುದಕ್ಕಾಗಿಯೇ ಆ ಮಗಳನ್ನು ಓದಿಸಿದೆವಾ? ಅವಳಿಗೆ ನಾನು ಚಿತ್ರ ಬರೆಯುವ ಪಾಠ ಹೇಳಿಕೊಟ್ಟೆನಾ ಎಂದು ಎದೆ ಬಡೆದುಕೊಂಡು ಅಳುತ್ತಿದ್ದುದು ಮೂಲೆಯಲ್ಲಿ ನಿಂತಿದ್ದ ವರದನಿಗೆ ಮಾತ್ರ ಕೇಳುತ್ತಿತ್ತು.

ಮಗಳು ಹುಟ್ಟದಿದ್ದರೂ ನಾವೆಷ್ಟು ಸುಖಿಗಳಾಗಿರುತ್ತಿದ್ದೆವು ಅಪ್ಪ ಅಳುತ್ತಿದ್ದರೆ, ಅಮ್ಮನ ಕಣ್ಣಲ್ಲಿ ನೀರೆ ಇಲ್ಲ…! ಯಾಕೆಂದರೆ ದೂರದ ಪ್ರಯಾಣದಲ್ಲಿ ಬರುವಾಗಲೇ ಅಮ್ಮನ ಕಣ್ಣುಗಳು ಒಣಗಿ ಹೋಗಿದ್ದರೆ ದೇಹ ಜೀವಂತ ಶವದಂತಾಗಿತ್ತು.

ಬದುಕಿನ ಒಂದನೇ ಅಧ್ಯಾಯ ಮುಗಿತು ಎಂದು ಭಾವಿಸಿದ ವರದಾ. ಅವನ ಕಣ್ಮುಂದೆ ಸಖಿನಾಳ ತುಟಿಯ ತುಂಟ ನಗು, ಆ ಪ್ರೋತ್ಸಾಹದ ಮಾತು, ಮನಸ್ಸಿಗೆ ಹಿತ ನೀಡುವ ಜಗಳ ಬಂತು. ಅವಳ ನಗುವಿನ ಜೊತೆಯಲ್ಲಿ ಬದುಕಲು ಸಾಧ್ಯ. ಎಂದವನೇ ತನ್ನ ಕುಂಚದ ಬಣ್ಣಗಳಲ್ಲಿ ತನ್ನ ಸಖಿಯನ್ನೇ ಪೋಟ್ರೇಟ್ ಮಾಡುತ್ತ ಪೌಲ್ ಸೆಝನ್ನ್ನನ್ನು ಧ್ಯಾನದಲ್ಲಿ ಮುಳುಗಿ ಬಿಟ್ಟ.


4 thoughts on “

  1. ಒಂದೇ ಓದಿಗೆ ಮನ ಮುಟ್ಟಿದ ಕಥೆ. ಕಥಾ ನಾಯಕಿಯ ಮಾನಸಿಕ ತೊಳಲಾಟ ಧರ್ಮವನ್ನು ಮೀರಿ ಬದುಕು ಕಟ್ಟಿಕೊಳ್ಳುತ್ತಾಳೆಂಬ ಓದುಗನ ನಿರೀಕ್ಷೆ ಕಥಾ ತಿರುವಿನಲ್ಲಿ ಅಂತ್ಯವಾಗುತ್ತದೆ. ಸಮಾಜ ಧರ್ಮವನ್ನು ಮೀರಿ ಬದುಕು ಕಟ್ಟಿಕೊಳ್ಳಲು ಬಿಡುವುದಿಲ್ಲ ಎಂದು ಅನಿಸುತ್ತದೆ. ವಿದ್ಯೆಯಿಂದಾದರೂ ಮಾನವನ ಈ ಚೌಕಟ್ಟಿನೊಳಗಿನ ಬದುಕು ಹೊರ ಬರಬೇಕು. ಬಿಟ್ಟ ಗಂಡನ ಕುರಿತಾದ ಸಖೀನಾಳ‌ ಯೋಚನೆ ಹೆಣ್ಮನಸಿಗೆ ಸಾಕ್ಷಿಯಂತಾದರೂ ಅಂತಹ ನೀಚ, ಪ್ರೇಮವಿಲ್ಲದ ಗಂಡಸಿಗಾಗಿ ಹಾತೊರೆಯುವುದು ವ್ಯರ್ಥ ಪ್ರಯತ್ನ. ಕಥಾಂತ್ಯ ಸುಖಾಂತ್ಯಗೊಂಡು ವರದನೊಂದಿಗೆ ಸಖೀನಾ ಬಂಧಿಯಾಗಿದ್ದರೆ ಎಷ್ಟು ಚೆಂದ ಇರುತ್ತಿತ್ತು ಎಂದು ಓದುಗನಿಗೆ ಅನ್ನಿಸದೇ ಇರದು. … ಕಥಾ ನಿರೂಪಣೆ ಚೆನ್ನಾಗಿದೆ…. ಹೆಣ್ಣು ಬದಲಾಗಬೇಕೆಂಬ ಸಂದೇಶವನ್ನು ಕೊಟ್ಟಿದ್ದಾರೆ.. ಧೈರ್ಯ ಮಾಡದಿದ್ದರೆ ಈ ರೀತಿ ಬಲಿಯಾಗಬೇಕಾಗುತ್ತದೆ ಎಂಬುದು ಸಾಬೀತು ಮಾಡಿದ್ದಾರೆ… ಅಭಿನಂದನೆಗಳು ತಂಗಿ… ಶುಭವಾಗಲಿ..

  2. ಇನ್ನೊಂದು ಬಿಟ್ಟಿದ್ದೆ ಕಥೆಯ ಶೀರ್ಷಿಕೆಗೆ ತಕ್ಕಂತೆ ಅತೃಪ್ತಿ ಮನಸು, ದೇಹವನ್ನು ತ್ಯಜಿಸಿದರೂ ನೆಮ್ಮದಿ ಕಾಣುವುದಿಲ್ಲ. .. ಸಖೀನಾಳ ಅತೃಪ್ತಿ ಮನಸು ತೃಪ್ತಿ ಸಿಗುವ ವರದನ ಮನಸಲ್ಲಿ ಲೀನವಾಗಿದೆ… ಆದರೆ.. ಅನುಭವಿಸಲು ಬೇಕಾದ ಕಾಯದಿಂದ ದೂರವಾಗಿದೆ.. ಇದೇ ವಿಧಿ…. ಮತ್ತೆ ಮತ್ತೆ‌ ಕಾಡುವ ಕಥೆ…

  3. ಬಹಳ ಕೂತೂಹಲ ಮೂಡಿಸುವಂತಹ ಕಥೆ ಆದ್ರೆ ಲಾಸ್ಟ್ ಘಟನೆ ಯಾಕೋ ಮಾನಸಿಕವಾಗಿ ನೋವುಂಟು ಮಾಡಿತ್ತು… ಈ ಜಂಜಾಟ ಬದುಕಿನ ಸುಳಿಯಲ್ಲಿ ಸಿಕ್ಕು ನರಳಾಡಿದ ಸಖೀನಾಳ ಮನಸ್ಸಿನ ಮಾತು ಮೌನವಾಗಿ ಮಂಕಾಯಿತ್ತು, ಇವಳನ್ನೇ ತುಂಬಾ ಹಚ್ಚಿಕೊಂಡಿದ್ದ ವರದ ಇವಳಿಲ್ಲದೇ ನೆಮ್ಮದಿಯಿಂದ ಬದುಕೋಕೆ ಹಾಗದೆ ಏಕಾಂಗಿಯಾಗಿ ತನ್ನಲ್ಲಿ ಉಳಿದ ಅವಳ ಬಗ್ಗೆಗಿನ ಯಕ್ಷ ಪ್ರಶ್ನೆಗಳಿಗೆ ಉತ್ತರಿಸಲು ಹಾಗದೆ ನರಳಾಡುತ್ತಿರಬಹುದು?
    ಈ ಕಥೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮೇಲೆ ವಾಸ್ತವ ಸಂಗಾತಿಯಲ್ಲಿ ಈತರಹದ ನಾನು ಕೇಳಿದ ಒಂದು ಘಟನೆ ಕಣ್ಮುಂದೆ ಬಂತು… ಇಂಥಹಾ ಸಮಸ್ಯೆಗಳಿಗೆ ನಾವು ಯಾವ ರೀತಿಯಲ್ಲಿ ಕನ್ನಡಿ ಹಿಡಿಯಬೇಕು ಎಂಬುದು ತಿಳಿಯುತ್ತಿಲ್ಲ… ಮೌನ ಒಂದೇ ಉಳಿದಿದೆ ಇದೆಲ್ಲದಕ್ಕೂ ಉತ್ತರ.
    – ಲಕ್ಷ್ಮಣ್ ಗೊಲ್ಲರ್ ✍️ ಕೊಪ್ಪಳ

Leave a Reply

Back To Top