ಅಂಕಣ ಸಂಗಾತಿ

ನೆನಪಿನದೋಣಿಯಲಿ

ಓದುವ ಗೀಳು 

.

ಸಂಗೀತ ಕಲೆ

ಯೊಂದು ಸಾಹಿತ್ಯ ಕಲೆಯೊಂದು ಅಂಗಾಂಗ ಭಾವ ರೂಪಣದ ಕಲೆಯೊಂದು 

ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ 

ಮಂಗಳೋನ್ನತಕಲೆಯಮಂಕುತಿಮ್ಮ 

ಬದುಕೆಂಬ ಬದುಕಿನಲ್ಲಿ ಕೆಲವೊಂದು ಹವ್ಯಾಸಗಳು ಬೇಕೇಬೇಕು. ದೈನಂದಿನ ಏಕತಾನತೆಯಿಂದ ಬ್ರೇಕ್ ಕೊಡುವ, ಮನಕ್ಕೆ ಮುದ ನೀಡುವ ಹವ್ಯಾಸಗಳು ಟಾನಿಕ್ ಗಳಂತೆ ಚೇತೋಹಾರಿ. ಸಂಗೀತ ಸಾಹಿತ್ಯ ನಾಟ್ಯ ಮೊದಲಾದ ಕಲೆಗಳ ಸಂಗಮವಾಗಲಿ .ಆಗ ಜೀವನ ಕಲೆ ಮಂಗಳಕರವಾಗುವುದೆಂದು ತಿಂಮ ಗುರುವಿನ ಅಂಬೋಣ . ಸಂಗೀತ ಕಲಿಯಲು ಗುರುಗಳು ಹತ್ತಿರವಿರಲಿಲ್ಲ. ನಾಟ್ಯ ಕಲಿಸಲು ಅಪ್ಪ ಅಮ್ಮನ ಒಮ್ಮತದ ನಿರಾಕರಣೆ.  ಇಬ್ಬರೂ ಒಪ್ಪಿ ಹರಸಿ ಬೆಳೆಸಿದ ತಾವೇ ಮಾದರಿಯಾಗಿ ಕಲಿಸಿದ ಹವ್ಯಾಸ ಓದು. ಅದರಲ್ಲೂ ಕನ್ನಡ ಸಾಹಿತ್ಯ ಓದು. 

ಈ ಓದೋದು ಅಂದ್ರೆ ಹವ್ಯಾಸ ಅನ್ನುವುದಕ್ಕಿಂತ ಹುಚ್ಚು ಅಂತಾನೆ ಆಗಿ ಇದೇ ದಿಕ್ಕಿನಲ್ಲಿ ಸಾಗಿ ಬಂದು ಬಿಟ್ಟಿತು . ಮೊದಲ ಓದು ನೆನಪಿರುವುದು ಅಂದರೆ ಭಾರತ ಭಾರತಿ ಪುಸ್ತಕ ಸಂಪದ .ಅಂಗೈಯಗಲದ ಹೊಳೆಯುವ ರಕ್ಷಾ ಪುಟದ ಪುಸ್ತಕ ಈಗಲೂ ನೋಡಿದಾಗಲೆಲ್ಲಾ ಬಾಲ್ಯ ನೆನಪಿಸುವ ಪುಸ್ತಕಗಳು. ಒಬ್ಬರೇ ಎಲ್ಲಾ ಮ್ಯಾಗ್ಸೈನ್ಸ್ ತರಿಸಲು ಕಷ್ಟ ಅಂತ   ಅಂತ ಅಪ್ಪನ ಗೆಳೆಯರು ಒಬ್ಬೊಬ್ಬರು ಒಂದೊಂದು ನಿಯತಕಾಲಿಕ ಖರೀದಿಸಿ ಅವರು ಓದಿಯಾದ ನಂತರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಮೊದಮೊದಲು ಕಾಮಿಕ್ಸ್ ಮಜನೂ ರಾಮನ್ ಡಿಂಗ್ರಾ ಮೊದಲಾದವು ನಂತರ ಮಕ್ಕಳ ಪುಟ ಇದ್ದಿದ್ದು ಆಮೇಲೆ ಅರ್ಥವಾಗುತ್ತೋ ಬಿಡುತ್ತೋ ಎಲ್ಲಾ ಲೇಖನ ಓದಲು ಆರಂಭಿಸಿದೆ . ಪ್ರಜಾಮತದ ದಾಂಪತ್ಯ ಸಮಾಲೋಚನೆ ಗುಪ್ತ ಸಮಾಲೋಚನೆ ಓದಬಾರದು ಎಂಬ ತಾಕೀತು. .ಹಿರಿಯರ ಅಣತಿ ಮೀರುವ ಆಸಕ್ತಿ ಧೈರ್ಯ ಎರಡೂ ಇರಲಿಲ್ಲ. ಬಾಲಮಿತ್ರ ಚಂದಮಾಮ ತುಂಬಾ ಜನಪ್ರಿಯವಾಗಿದ್ದವು ಆಗ. ಬೊಂಬೆಮನೆ ಎಂಬ ಪತ್ರಿಕೆಯೂ ಬರುತ್ತಿತ್ತು. ಅದರ ಸಮಾರಂಭ ಬೆಂಗಳೂರಲ್ಲಿ ನಡೆದಾಗ ಚಿಕ್ಕಪ್ಪ ನಮ್ಮನ್ನು ಕರೆದುಕೊಂಡು ಹೋದ ನೆನಪು. ಈಗ ಯೋಚಿಸಿದರೆ ಅನಿಸುತ್ತದೆ ಈ ಚೈಲ್ಡ್ ಎಗೋ ಇಷ್ಟು ವರ್ಕೌಟ್ ಆಗಿತ್ತಲ್ಲ ಆಗ ಅಂತ. “ನೋಡು ಎಷ್ಟು ಚಿಕ್ಕ ಹುಡುಗಿ  ಎಲ್ಲಾ ಪುಸ್ತಕ ಓದ್ತಾಳೆ” ಅನ್ನೋ ಹೊಗಳಿಕೆ ಕೇಳಿ ಕೇಳಿ ಇನ್ನೂ ಹೆಚ್ಚು ಹೆಚ್ಚು ಓದಲಿಕ್ಕೆ ಆರಂಭಿಸಿದೆನಾ ಅನ್ನೋ ಪ್ರಶ್ನೆ ಈಗ ಹುಟ್ಟತ್ತೆ .ಅದೆಲ್ಲಾ ಆಗ ಅರ್ಥವಾಗುವ ವಯಸ್ಸಲ್ಲ . ಆದರೆ ಸ್ವಲ್ಪ ಅರ್ಥವಾಗುವ ಅಷ್ಟು ಹೊತ್ತಿಗೆ ಪುಸ್ತಕ ಓದು ಉಸಿರಾಟದಷ್ಟೇ ಅನಿವಾರ್ಯ ಅಭ್ಯಾಸವಾಗಿಬಿಟ್ಟಿತ್ತು. ಆಟವನ್ನು ಬಿಟ್ಟು ಕೊಟ್ಟರೂ ಸರಿ ಓದುವ ಅವಕಾಶ ಮಾತ್ರ ಬಿಡುತ್ತಿರಲಿಲ್ಲ. ಅಮ್ಮ ಅಣ್ಣ ಯಾರ ಮನೆಗೆ ಕರೆದೊಯ್ದರೂ ಕೈಗೆ ಸಿಕ್ಕ ಪುಸ್ತಕ ಹಿಡಿದರೆ “ಹೋಗು ಮಕ್ಕಳ ಜತೆ ಆಡು” ಅಂಥಾ ಬೈಸಿಕೊಳ್ಳೋದು ಇದ್ದೇ ಇರುತ್ತಿತ್ತು ಆದರೂ ಪುಸ್ತಕಗಳ ಆಕರ್ಷಣೆ ಬಿಡುತ್ತಿರಲಿಲ್ಲ ಕಾದಂಬರಿ ಮೊದಲು ಓದಿದ್ದು ನಾಗರಹಾವು 2ಹೆಣ್ಣು 1ಗಂಡು ಸರ್ಪಮತ್ಸರ ಇವು ಮೂರೂಬೇರೆ ಬೇರೆ ಪುಸ್ತಕಗಳಿದ್ದ ತರಾಸು ಕಾದಂಬರಿ. ಅಪ್ಪ ಅಮ್ಮ ಓದುತ್ತಿದ್ದರು .ನಾನು ತಂಗಿ ಚಿಕ್ಕವರು ಹರಿದು ಹಾಕಬಾರದೆಂದು ಅಟ್ಟದ ಮೇಲೆ ಇಟ್ಟರೆ ಮಂಚದ ಮೇಲೆ ಹತ್ತಿ  ಎಟುಕಿಸಿಕೊಂಡು ತೊಗೊಂಡು ಓದುತ್ತಿದ್ದೆ . ಆದರೆ ನಮ್ಮ ಮನೆಯಲ್ಲಿ ಕಥೆ ಪುಸ್ತಕ ಓದಲು ಎಂದೂ ನಿರ್ಬಂಧ ಇರಲಿಲ್ಲ. ಶಾಲಾಕಾಲೇಜು ಪುಸ್ತಕ ಓದಿದ ಮೇಲೆ ಎಷ್ಟು ಓದಿದ್ರೂ ಸಹ ಬೈತಿರಲಿಲ್ಲ. ಹಾಗಾಗಿ ಪುಸ್ತಕ ಪ್ರಪಂಚದ ಪರ್ಯಟನೆ ಸುಗಮವಾಗಿತ್ತು .

ಇನ್ನೂ ಹೈಸ್ಕೂಲು ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳ ಲೈಬ್ರೆರಿಯಲ್ಲಿ ಪಠ್ಯ ಪುಸ್ತಕಗಳನ್ನು ತೆಗೆದುಕೊಂಡು ಬಂದು ಓದಿದ್ದಕ್ಕಿಂತ ಕಾದಂಬರಿಗಳನ್ನು ತಂದು ಓದಿದ್ದೇ ಹೆಚ್ಚು. ನಮ್ಮ ಆಸಕ್ತಿಯನ್ನು ಗೌರವಿಸಿ ನಮ್ಮ ವಿಷಯಗಳಿಗೆ ಸಂಬಂಧವಿಲ್ಲದಿದ್ದರೂ ಬೇರೆ ಬೇರೆ ಸಾಹಿತ್ಯದ ಪುಸ್ತಕಗಳನ್ನು ಕೊಡುತ್ತಿದ್ದ ಗ್ರಂಥಪಾಲಕರನ್ನು ಇಲ್ಲಿ ನೆನೆಯಲೇಬೇಕು . 

ರಜೆಯಲ್ಲಿ ಚಿಕ್ಕಪ್ಪನ ಮನೆಗೆ ಬೆಂಗಳೂರಿಗೆ ಹೋದರೆ ಅಲ್ಲಿ ಚಾಮರಾಜಪೇಟೆಯ ಮಕ್ಕಳ ಕೂಟದ ಲೈಬ್ರರಿಗೆ ಕರೆದುಕೊಂಡು ಹೋಗುತ್ತಿದ್ದರು . ಪಾಪಚ್ಚಿ ಪತ್ರಿಕೆ ಮೈಸೂರಿನಲ್ಲಿ ಸಿಕ್ತಿರಲಿಲ್ಲ  . ಅದು ಮತ್ತು ಧಾರಾವಾಹಿಗಳನ್ನು ಬೈಂಡ್ ಮಾಡಿದ ಪುಸ್ತಕಗಳು ನಮಗೆ ರಸಕವಳ. ಅಲ್ಲಿ ಅಜ್ಜಿ ಬೀದಿಯಲ್ಲಿ ಆಟ ಆಡಲು ಬಿಡುತ್ತಿರಲಿಲ್ಲ .ಬೆಳಿಗ್ಗೆ ಕೆಲವು ಒಳಾಂಗಣ ಆಟ ಆಡುತ್ತಿದ್ದೆವು. ಮಧ್ಯಾಹ್ನ ದೊಡ್ಡವರು ಮಲಗಿರುವಾಗ ಗಲಾಟೆ ಮಾಡದಿರಲು ನಾವೆಲ್ಲ ಪುಸ್ತಕದ ಸ್ನೇಹ ಬೆಳೆಸುತ್ತಿದ್ದೆವು.  ನನ್ನಿಬ್ಬರು ತಂಗಿಯರು ಚಿಕ್ಕಪ್ಪನ ಮಕ್ಕಳು ಇಬ್ಬರು ತಮ್ಮಂದಿರು ಹಾಗೂ ಅತ್ತೆಯ ಮಗಳು ಹಿಂದಿನ ಕೋಣೆ ಸೇರಿ ಪುಸ್ತಕ ಹಿಡಿದರೆ ಸಾಕು ಮನೆಯಲ್ಲಿ ಮಕ್ಕಳಿದ್ದರಾ ಅನ್ನೋ ಅನುಮಾನ ತರುತ್ತಿತ್ತು. ಅಜ್ಜಿ ಮಾತ್ರ ನನ್ನನ್ನೇ ಬೈತಿದ್ದು “ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ” ಅಂತ .ಬರೀ ಓದುವುದಕ್ಕೆ ಮಾತ್ರ ಅಲ್ಲ  ತಿನ್ನುವಾಗಲೂ ಎಡಗೈಯಲ್ಲಿ ಪುಸ್ತಕ ಹಿಡಿದು ಓದುವ ಅಭ್ಯಾಸಕ್ಕೆ . ಪಂಕ್ತಿಯಲ್ಲಿ ಬೇರೆಯವರ ಜತೆ ಕೂರದೆ ಒಬ್ಬರೇ ಊಟಕ್ಕೆ ಕೂತಾಗಲೆಲ್ಲ ಎಡಗೈಲಿ ಪುಸ್ತಕವಿಲ್ಲದಿದ್ದರೆ ತಿಂದನ್ನ ಒಳಗೆ ಇಳಿಯಲ್ಲ .ಇದೊಂದು ದೌರ್ಬಲ್ಯವೋ ದುರಭ್ಯಾಸವೂ ಜನ್ಮಕ್ಕೆ ಅಂಟಿದ ಬಿಟ್ಟಿದೆ. ಸೋದರತ್ತೆಯ ಮನೆಯಲ್ಲಿಯೂ ಚಂದಮಾಮ ಬೈಂಡ್ ಮಾಡಿಸಿದ ಪುಸ್ತಕಗಳಿದ್ದವು. ತ್ರಿವಳಿ ರಾಜಕುಮಾರ ರಾಜಕುಮಾರಿಯರ ಕಥೆಯಂತೂ ಬಾಯಿಗೆ ಬರುವಷ್ಟು ಸಲ ಓದಿಯಾಗುತ್ತಿತ್ತು . 

ಅಂದಿನ ಮಧ್ಯಮವರ್ಗದ ಸಂಸಾರ ನಿರ್ವಹಣೆಯಲ್ಲಿ ಪುಸ್ತಕ ಕೊಂಡು ಓದಲು ಸಾಧ್ಯವಿರಲಿಲ್ಲ.  ಆದರೆ ಲೈಬ್ರರಿಗಳ ಉಪಯೋಗ ತುಂಬಾ ಆಗಿತ್ತು. ಕೇಂದ್ರ ಗ್ರಂಥಾಲಯದಿಂದ ವಾರಕ್ಕೊಮ್ಮೆ ನಮ್ಮ ಬಡಾವಣೆಗೆ ಸಂಚಾರಿ ಗ್ರಂಥಾಲಯ ವಾಹನ ಬರುತ್ತಿತ್ತು. ನಮ್ಮವೆರಡು ಕಾರ್ಡಿನ ಪುಸ್ತಕವಲ್ಲವೆ ಅಕ್ಕಪಕ್ಕದ ಮನೆಯವರ ಗೆಳತಿಯರ ಪುಸ್ತಕಗಳನ್ನು ಓದಿ ಮುಗಿಸಿಯಾಗುತ್ತಿತ್ತು.  ಸಮಯದ ಅಭಾವ ಇರದಿದ್ದರಿಂದ ಕೆಲವೊಮ್ಮೆ ಕೆಲವು ಪುಸ್ತಕಗಳ ಎರಡು ಮೂರನೆಯ ಓದುಗಳೂ ಆಗುತ್ತಿತ್ತು . ಪಕ್ಕದ ಮನೆ ಹುಡುಗನ ಬಿಎ ಪಠ್ಯಪುಸ್ತಕಗಳು ನನ್ನ ಓದಿನ ಆಹಾರ. ಗಂಗವ್ವ ಗಂಗಾಮಾಯಿ ಡಕಾಯಿತರ ರಾಜಾ ಮಾನಸಿಂಗನ ಕಥೆಗಳು ಇವೆಲ್ಲ ಹಾಗೇ ಓದಿದ್ದು. ಅಪ್ಪನ ಕಚೇರಿಯಲ್ಲಿ ಹೊಸದಾಗಿ ಲೈಬ್ರರಿ ಆರಂಭವಾಗಿ ಬಹಳಷ್ಟು ಹೊಸ ಪುಸ್ತಕಗಳು ಓದ ಸಿಕ್ಕಿದ್ದವು.  ತರಾಸು ಭೈರಪ್ಪ ಕಾರಂತರ ಪುಸ್ತಕಗಳ ಪರಿಚಯವಾಗಿದ್ದೂ ಆಗಲೇ. ಖಾಸಗಿ ಲೈಬ್ರರಿಗಳು ರಚನಾ ಲೈಬ್ರರಿ ಕುಸುಮಾ ಲೈಬ್ರರಿ ಅಂತ ಇದ್ದವು . ಆಗ ಇಪ್ಪತ್ತೈದು ಪೈಸೆ ದಿನಕ್ಕೆ ಬಾಡಿಗೆ. ಮೂವರು ಗೆಳತಿಯರು ಸುಮಾರು 3 ಕಿಲೋಮೀಟರ್ ನಡೆದೇ ಹೋಗಿ ಪುಸ್ತಕ ತರುತ್ತಿದ್ದೆವು. ನಿದ್ದೆಗೆಟ್ಟಾದರೂ 3 ಪುಸ್ತಕ ಓದಿ ಮುಗಿಸುತ್ತಿದ್ದೆ. ಸಾಯಿಸುತೆ ಉಷಾ ನವರತ್ನರಾಮ್ ಎಚ್ ಜಿ ರಾಧಾದೇವಿ ಎಂ ಕೆ ಇಂದಿರಾ ಕಾಕೋಳು ಸರೋಜಾರಾವ್ ಈಚನೂರು ಶಾಂತಾ ಜಯಲಕ್ಷ್ಮಿ ಇವರೆಲ್ಲ ನನ್ನ ಓದಿಗೆ ಆದ ಒದಗಿದವರು. 

 ಈ ಮಧ್ಯೆ ಆಗ ಇದ್ದ 1 ಸಂಗತಿ ಹೇಳಲೇಬೇಕು.  ನಾಗರಾಜ ಅಂತ ಒಬ್ಬ ನಿರುದ್ಯೋಗಿ ಯುವಕ. ಮನೆಮನೆಗಳಿಗೆ ತಂದು ನಿಯತಕಾಲಿಕೆಗಳನ್ನು ಕೊಡುತ್ತಿದ್ದ ಬಾಡಿಗೆಗೆ . ನಿಯತಕಾಲಿಕೆ ಇಲ್ಲದಾಗ ಕಾದಂಬರಿಗಳು.  ನಮ್ಮ ಬಕಾಸುರನ ಓದಿನ ಹಸಿವು ತಣಿಸಿದ ಮಹಾನುಭಾವ ಆತ. ತಿಂಗಳಿಗೆ ಹತ್ತು ರೂ. ಮೆಂಬರ್ ಶಿಪ್ . ಆಗಲೂ ಪಕ್ಕದ ಮನೆಯವರ ಪುಸ್ತಕಕ್ಕೆ ನನ್ನ ಪಾಲು. 

ನನ್ನ ತಂದೆಯ ಗೆಳೆಯರೊಬ್ಬರು ಊದುಬತ್ತಿ ಫ್ಯಾಕ್ಟರಿ ನಡೆಸುತ್ತಿದ್ದರು . ಅಲ್ಲಿಗೆ ಟ್ಯೂಬ್ ಮಾಡಲು ಹಳೆ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಹೊಸತಾಗಿ ತಂದ ದಿವಸ ಅಲ್ಲಿಗೆ ವಿಸಿಟ್. ಓದಬಹುದು ಅನಿಸಿದ್ದನ್ನು ತಂದು ಓದಿ ವಾಪಸ್ಸು.  ಪದಬಂಧದ ಹುಚ್ಚು ಇದ್ದ ನಮ್ಮ ತಂದೆ ಪ್ರತಿದಿನದ ಪ್ರಜಾವಾಣಿಯಲ್ಲದೆ ಭಾನುವಾರ ಕನ್ನಡಪ್ರಭ ಸಂಯುಕ್ತಕರ್ನಾಟಕ ಗಳನ್ನು ತರಿಸುತ್ತಿದ್ದರು ಪುರವಣಿಯ ಪ್ರತಿಯೊಂದು ಲೇಖನ ಓದುತ್ತಿದ್ದುದನ್ನು ನನಗೆ ನೆನೆಸಿಕೊಂಡರೆ ಈಗಲೂ ಖುಷಿ ಆಗತ್ತೆ . 

ಇನ್ನು ಜೀವ ವಿಮಾ ನಿಗಮಕ್ಕೆ ಸೇರಿದ ಮೊದಲ ಬಾರಿ ಚಿಕ್ಕಬಳ್ಳಾಪುರಕ್ಕೆ ಹೋದಾಗ ಅಲ್ಲಿನ ಕ್ರೀಡಾ ಮತ್ತು ಮನೋರಂಜನಾ ವಿಭಾಗದಲ್ಲಿ ಎಲ್ಲಾ ಕನ್ನಡ ನಿಯತಕಾಲಿಕಗಳು ತರಿಸುತ್ತಿದ್ದುದು ತಿಳಿದಾಗ ಎಷ್ಟು ಸಂತೋಷವಾಯಿತೆಂದರೆ ಲಾಟರಿ ಹೊಡೆದಂತೆ . ಇದು ಎಲ್ಲ ಶಾಖೆಗಳಲ್ಲೂ ಈಗಲೂ ನಡೆಯುತ್ತಿರುವ ಅಭ್ಯಾಸ . ಬೀರುವಿನ ತುಂಬ ಅದರಲ್ಲಿ ಅರ್ಧ ಕನ್ನಡ ಪುಸ್ತಕಗಳನ್ನು ಅಲ್ಲಿದ್ದ 1ವರ್ಷ 3ತಿಂಗಳಲ್ಲಿ ಓದಿ ಮುಗಿಸಿದ್ದೆ.  ನನ್ನ ಓದಿನ ಆಸಕ್ತಿ ಕಂಡು ಅಂದು ನನ್ನ ನಿರ್ವಹಣೆಗೆ ಬಂದ ನಿಯತಕಾಲಿಕೆಗಳ ವಿತರಣೆ ಜವಾಬ್ದಾರಿ ಮೂವತ್ತ ಮೂರು ವರ್ಷಗಳ ನಂತರವೂ ಹತ್ತು ಶಾಖೆ ಬದಲಿಸಿದರು ನನ್ನ ಕೈತಪ್ಪಿಲ್ಲ. ಇದಂತೂ ತುಂಬಾನೇ ಹೆಮ್ಮೆಯ ಸಂಗತಿ 

ನಮ್ಮ ಮೈಸೂರಿನ ವಿಭಾಗೀಯ ಕಚೇರಿ ಆಗತಾನೆ ಆರಂಭವಾಗಿದ್ದರಿಂದ ಮೊಟ್ಟಮೊದಲು ಗ್ರಂಥಾಲಯ ಶುರುಮಾಡುವ ಹಾಗೂ ವರ್ಷವರ್ಷ ಪುಸ್ತಕಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಿದ್ದೆ.  ಆಂಗ್ಲ ಸಾಹಿತ್ಯದ ಉತ್ಕೃಷ್ಟ ಕೃತಿಗಳ ಪರಿಚಯವಾಗಿದ್ದು ಆಗಲೇ. 

ನಮ್ಮ ತಂದೆ ನಿವೃತ್ತರಾದ ನಂತರ ಸ್ವಂತ ಪುಸ್ತಕ ಕೊಳ್ಳಲು ಆರಂಭಿಸಿದರು.  ಮತ್ತೆ ಗ್ರಂಥಾಲಯದಲ್ಲಿ 3 ಪುಸ್ತಕ ಎರವಲು ತರುವ, ಜತೆಗೆ ಹತ್ತಿರವಿರುವ ಖಾಸಗಿ  ಗ್ರಂಥಾಲಯದ ಸದಸ್ಯತ್ವ ಹೀಗೆ ಸಾಗಿದೆ ನನ್ನ ಓದು .

ಈಗ 3 ವರ್ಷದಿಂದ ಬರವಣಿಗೆ ಆರಂಭಿಸಿದ ಮೇಲೆ ಸ್ವಲ್ಪ ಓದು ಕುಂಠಿತವಾಗಿದೆ.  ಈಗೆರಡು ವರ್ಷಗಳಿಂದ ನನ್ನದೇ ಆದ 1ಸಣ್ಣ ಸಂಗ್ರಹವು 

ಆರಂಭವಾಗಿ ಒಂದಿಷ್ಟು ಪುಸ್ತಕಗಳ ಸಂಚಯನವಾಗಿವೆ . 

ಬೇರೆ ಮನರಂಜನೆಗಳು ಅಷ್ಟಾಗಿ ಇರದಿದ್ದರಿಂದ ನಮ್ಮ ವಯೋಮಾನದವರಿಗೆ ಓದಿನ ಅಭಿರುಚಿ ಹೆಚ್ಚಲು ಕಾರಣವಾಯಿತೇ ಎಂಬ ಪ್ರಶ್ನೆ ಈಗಿನ ತಲೆಮಾರಿನವರನ್ನು ಕಂಡಾಗ ಕಾಡುತ್ತದೆ.  ಓದುವ ಹವ್ಯಾಸ ಈಗಿನವರಲ್ಲಿ ಸ್ವಲ್ಪ ಕಡಿಮೆಯೇ …..

ಈಚೀಚೆಗೆ ಕಿಂಡಲ್, ಇ ಬುಕ್, ಮೈ ಲ್ಯಾಂಗ್  ಮುಂತಾದ ಆ್ಯಪ್ ಗಳಲ್ಲಿ ಡಿಜಿಟಲ್ ಓದು ಸಾಧ್ಯವಿದ್ದರೂ ನನಗಂತೂ ಕೈಯಲ್ಲಿ ಪುಸ್ತಕ ಹಿಡಿದು ಓದುವುದು ಹೆಚ್ಚು ಪ್ರಿಯ . ಹಳೆಯ ಅಭ್ಯಾಸ ಸುಟ್ಟರೂ ಹೋಗುವುದಿಲ್ಲ  ನೋಡಿ.

ಪುಸ್ತಕಗಳು ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ನಮ್ಮ ಜಮಾನಾದ ಕಥೆಯಿದು.  ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಹಂಚಿಕೊಳ್ಳೋಣವೆನಿಸಿತು. ನೆನಪಿನ ದೋಣಿಯಲ್ಲಿ ಪುಸ್ತಕದ ಪಾತ್ರ ಬಹು ಮಹತ್ತರ.  ಬೋರಾಗಿದ್ದರೆ ದಯವಿಟ್ಟು ಕ್ಷಮಿಸಿ .

ಪುಸ್ತಕಗಳು ಓದುವ ಸಂಸ್ಕೃತಿ ಸದಾ ಹಸಿರಾಗಿರಲಿ ಎಂಬ ಹರಕೆ ಹಾರೈಕೆ. ಉಸಿರಿರುವವರೆಗೂ ಓದನ್ನು ಮುಂದುವರಿಸುವ ಸೌಭಾಗ್ಯವೊಂದು ದೇವ ಕರುಣಿಸಲಿ ಎಂಬುದೊಂದೇ ಬೇಡಿಕೆ .


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು
.

Leave a Reply

Back To Top