ಅಂಕಣ ಸಂಗಾತಿ

ಗಜಲ್ ಲೋಕ

ಶ್ರೀದೇವಿಯವರ ಗಜಲ್ ಸಿರಿ ಸಂಪತ್ತು

ಹಲೋ….

ಏನು ಮಾಡ್ತಾ ಇದ್ದೀರಾ, ಏನು ಓದುತ್ತಾ ಇದ್ದೀರಾ …? ಇಂದು ತಮ್ಮ ಮನವನ್ನು ತಣಿಸಿದ, ತಣಿಸುತ್ತಿರುವ ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಶುಭ ಮುಂಜಾವು.. ಭುವನೇಶ್ವರಿಯ ಮಕ್ಕಳಾದ ಕನ್ನಡದ ಮನಸುಗಳಿಗೆ ನಮಸ್ಕಾರಗಳು…. 

ಸ್ವರ್ಗದ ವಾಸ್ತವತೆ ನಮಗೆ ತಿಳಿದಿದೆ ಆದರೆ

ಹೃದಯವನ್ನು ಸಂತೋಷವಾಗಿಟ್ಟುಕೊಳ್ಳಲು ಇದೊಂದು ಒಳ್ಳೆಯ ಆಲೋಚನೆಗಾಲಿಬ್‘”

                                    –ಮಿರ್ಜಾ ಗಾಲಿಬ್

        ಮನುಷ್ಯ ಭಾವನೆಗಳ ಗೊಂಚಲು. ಆ ಭಾವನೆಗಳ ತಾಯಿಬೇರು ಪ್ರೀತಿ! ಇದೊಂದು ಅನುಪಮವಾದ ಅನುಭಾವ. ಈ ಅನುಭಾವದ ಪ್ರಸಾದ ಹಂಚುತ್ತಿರುವ ಆಲಯವೆಂದರೆ ಅದು ನೊಂದ-ಬೆಂದ-ಸ್ಥಿತಪ್ರಜ್ಞ ಮನಸುಗಳ ಕುಲುಮೆಯಲ್ಲಿ ಪಕ್ವಗೊಂಡ ಸಾರಸ್ವತ ಜಗತ್ತು. ಈ ಪರಪಂಚ ಮನುಕುಲದ ಅಂತರಂಗ ಹಾಗೂ ಬಹಿರಂಗಗಳೆರಡರ ದರ್ಪಣದ ಜೊತೆ ಜೊತೆಗೆ ಮನುಷ್ಯನ ಕೃತ್ಯಗಳನ್ನು ಸಾಣೆ ಹಿಡಿಯುವ ಸೂಕ್ಷ್ಮ ಕೆಲಸವನ್ನೂ ಮಾಡುತ್ತಿದೆ. ಈ ನೆಲೆಯಲ್ಲಿ ಬರಹ ಭಾವನೆಗಳ ತವರೂರು. ‘ಬರಹ ಸಂಭ್ರಮಿಸುವ ಪಲ್ಲಕ್ಕಿಯಲ್ಲ, ಸಂತೈಸುವ ತೊಟ್ಟಿಲು.’ ಅನಾಥ ಹೃದಯಗಳಿಗೂ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಜೋಗುಳ ಹಾಡುತ್ತ ಬಂದಿದೆ. ಈ ಮಾತು ಎಲ್ಲ ಭಾಷೆಯ ಅಕ್ಷರದವ್ವನಿಗೂ ಅನ್ವಯಿಸುತ್ತದೆ. ಮರಭೂಮಿಯ ಕಾವು, ಆತಿಥ್ಯದ ವಿನಯದಲ್ಲಿ ಅರಳಿದ ಗಜಲ್ ಹೃದಯವಂತಿಕೆಯ ಕುರುಹಾಗಿ ಇಡೀ ಮನುಕುಲವನ್ನೆ ವ್ಯಾಪಿಸಿದೆ. ಕಳೆದ ೨-೩ ವಸಂತಗಳಲ್ಲಿ ‘ಗಜಲ್’ ಪೈರು ಹುಲುಸಾಗಿ ಬೆಳೆಯುತ್ತಿದೆ. ಆ ‘ಗಜಲ್’ ಕೃಷಿಕಾರರಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆಯವರೂ ಒಬ್ಬರು.

       ಉತ್ತರ ಕನ್ನಡ ಜಿಲ್ಲೆಯ ಹಿರೇಗುತ್ತಿಯಲ್ಲಿ ಜನಿಸಿರುವ ಶ್ರೀದೇವಿ ಕೆರೆಮನೆಯವರು ಶಿರಸಿಯ ಜಾನ್ಮನೆ ಎಂಬಲ್ಲಿ ಪ್ರಾಥಮಿಕ ಶಿಕ್ಷಣ, ಸಂಪಖಂಡ ಎನ್ನುವಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿ, ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಕುಮಟಾದಲ್ಲಿ ಬಿ.ಇಡಿ ಪದವಿಯನ್ನು ಮುಗಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶ್ರೀಯುತರು ಕಳೆದ17 ವರ್ಷಗಳಿಂದ ಸಿ ಬರ್ಡ್ ನಿರಾಶ್ರಿತರ ಕಾಲೋನಿಗಳಲ್ಲಿ ಇಂಗ್ಲೀಷ ಭಾಷಾ ಶಿಕ್ಷಕಿಯಾಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.‌ ಪ್ರಸ್ತುತವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸರಕಾರಿ ಪ್ರೌಢಶಾಲೆ (ಪುನರ್ವಸತಿ) ಯಲ್ಲಿ ಆಂಗ್ಲ ಭಾಷೆಯ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ೫೦ ಕ್ಕೂ ಹೆಚ್ಚು ತರಬೇತಿಯನ್ನು ಜಿಲ್ಲಾ ಹಾಗೂ ತಾಲೂಕಾ ಹಂತದಲ್ಲಿ ನೀಡಿದ್ದಾರೆ. ಬೋಧನೆಯ ಜೊತೆ ಜೊತೆಗೆ ತಮ್ಮನ್ನು ಬರಹದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಪ್ರಬಂಧ, ಅಂಕಣ ಬರಹ ಹಾಗೂ ಗಜಲ್ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರ ಕೃತಿಗಳ ಪರಿಚಯದತ್ತ ಹೆಜ್ಜೆ ಹಾಕೋಣ ಬನ್ನಿ..!!

ಪ್ರಕಟಣೆಗಳು-

ಕವನ ಸಂಕಲನಗಳು : ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟದ ಕಾಲಲ್ಲಿ, ಬೈಟೂ ಚಹಾ ಕವನಗಳು,  ಮೈ ಮುಚ್ಚಲೊಂದು ತುಂಡು ಬಟ್ಟೆ… ಕೆರೆಮನೆಯವರು ಹಲವಾರು ವಾರ ಪತ್ರಿಕೆ, ಮಾಸ ಪತ್ರಿಕೆಗಳಿಗೆ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವಂತಹ ಅಂಕಣ ಬರಹಗಳನ್ನು ಬರೆದಿದ್ದಾರೆ. ಆ ಎಲ್ಲ ಬಿಡಿ ಬಿಡಿ ಅಂಕಣ ಬರಹಗಳನ್ನು ಒಂದೆಡೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ಪ್ರೀತಿ ಎಂದರೆ ಇದೇನಾ?,’ ‘ಹೆಣ್ತನದ ಆಚೆ-ಈಚೆ’, ಉರಿವ ಉಡಿ’, ‘ಮನದಾಳದ ಮಾತು,’ ‘ವರ್ತಮಾನದ ಉಯ್ಯಾಲೆ,’ … ಮುಂತಾದವುಗಳು.

ಕಥಾಸಂಕಲನಗಳು : ಬಿಕ್ಕೆ ಹಣ್ಣು, ಚಿತ್ತ ಚಿತ್ತಾರ.. ಇವುಗಳೊಂದಿಗೆ “ಅಂಗೈಯೊಳಗಿನ ಬೆಳಕು” ವಿಮರ್ಶಾ ಸಂಕಲನವಾದರೆ, “ಗೂಡು ಕಟ್ಟುವ ಸಂಭ್ರಮದಲ್ಲಿ” ಪ್ರಬಂಧ ಬರಹಗಳ ಸಂಕಲನವಾಗಿದೆ.

ಗಜಲ್ ಸಂಕಲನಗಳು : ‘ಅಲೆಯೊಳಗಿನ ಮೌನ’, ‘ನನ್ನ ದನಿಗೆ ನಿನ್ನ ದನಿಯು’, (ಇದೊಂದು ಗಜಲ್ ಜುಗಲ್ ಸಂಕಲನ)

        ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಪಾದರಸದಂತೆ ಕ್ರಿಯಾಶೀಲರಾಗಿರುವ ಕೆರೆಮನೆ ಅವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳೊಂದಿಗೆ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಶ್ರೀ ವಿಜಯ ಪ್ರಶಸ್ತಿ, ಸಾರಾ ಅಬೂಬಕರ್ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಯುವ ಗೃಂಥ ಪುರಸ್ಕಾರ, ಸಿಂಗಾಪುರ ಕಥಾ ಪ್ರಶಸ್ತಿ , ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಅಮ್ಮ ಪ್ರಶಸ್ತಿ… ಪ್ರಮುಖವಾಗಿವೆ.‌

        ಕಾವ್ಯದ ಸಿಂಡರೇಲಾ ಎಂದರೆ ಅದು ‘ಗಜಲ್’ ಪ್ರಕಾರ. ಗಜಲ್ ಎನ್ನುವುದು ಸಾಮಾನ್ಯನ ಯೋಗ. ಈ ಹಿನ್ನೆಲೆಯಲ್ಲಿ ಗಜಲ್ ರಚನೆಗೆ ಗಜಲ್ ಗೋ ಪ್ರೀತಿ ಪೂರ್ಣ ಹೃದಯವನ್ನು ಹೊಂದಿರುವುದು ಮುಖ್ಯ. ಗಜಲ್ ಗೋ ಸವಿನುಡಿಯ ಸಿರಿಗುಡಿ ಕಟ್ಟುವ ಶಿಲ್ಪಿ. ಗಜಲ್ ಜನತೆಯ ಎದೆ ತಣಿಸುವುದರ ಜೊತೆಗೆ ಅವರ ಬಾಳಿಗೆ ಊರುಗೋಲಾಗುತ್ತದೆ, ಊರುಗೋಲಾಗಬೇಕು. ಕೆಲವೊಮ್ಮೆ ಗಜಲ್ ಸವಿಯಾಗಿರುವಂತೆ ಕಂಡರೂ ಪೊಡವಿಯನ್ನೆಲ್ಲ ತಲ್ಲಣಿಸುವ ಸಿಡಿಲಿನ ಮಿಂಚಾಗಿಯೂ ಕಂಗೊಳಿಸುತ್ತದೆ. ಗಜಲ್ ಎಂದರೆ ಸೊನ್ನೆಯಲ್ಲಿ ಸ್ವರ್ಗವನ್ನೂ, ಶೂನ್ಯದಲ್ಲಿ ಪೂರ್ಣತ್ವವನ್ನೂ ಸೃಜಿಸಿ ನಿಲ್ಲುವ ಹೃದಯಗಳ ಮಿಡಿತ. ಈ ನೆಲೆಯಲ್ಲಿ ಗಜಲ್ ಭವ್ಯವೂ ಹೌದು ; ದಿವ್ಯವೂ ಹೌದು!! ಕೆರೆಮನೆ ಅವರ ಗಜಲ್ ಗಳಲ್ಲಿ ಈ ಎಲ್ಲ ಅಂಶಗಳು ಒಳಗೊಂಡಿವೆ. ಬದುಕಿನ ಎಲ್ಲ ಮಗ್ಗುಲುಗಳು ಇಲ್ಲಿ ಸಾಕ್ಷಾತ್ಕಾರಗೊಂಡಿವೆ.

ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ

ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ”

ಈ ಮೇಲಿನ ಷೇರ್ ಮಾತು ಮತ್ತು ಮೌನಗಳ ವಿವಿಧ ಆಯಾಮಗಳನ್ನು ಪರಿಚಯಿಸುತ್ತಿದೆ. “ಭಾಷೆಯೆಂಬ ಜ್ಯೋತಿ ಬೆಳಗದೆ ಹೋದರೆ ಇಡೀ ಮನುಕುಲವೇ ಕತ್ತಲಲ್ಲಿ ಮುಳುಗಿರುತಿತ್ತು” ಎಂಬ ದಂಡಿಯ ಹೇಳಿಕೆ ಭಾಷೆಯ, ಮಾತಿನ ಮಹತ್ವವನ್ನು ಸಾರುತ್ತದೆ. ಅಬಾಲವೃದ್ಧರಾದಿಯಾಗಿ ಎಲ್ಲರ ನಡುವೆ ಸಂಬಂಧದ ಕೊಂಡಿ ಬೆಸೆಯುವುದು, ಸಂಬಂಧದ ಕೊಂಡಿ ಕಳಚುವುದು ‘ಮಾತು’ ಎನ್ನುವ ಅಸ್ತ್ರವೇ! ಈ ದಿಸೆಯಲ್ಲಿ ಮಾತು ನಮ್ಮ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಅದರ ಬಳಕೆಯ ಮೇಲೆ ಅವಲಂಬಿಸಿರುತ್ತದೆ. ಭಾವ ತೀವ್ರತೆ ಬಾಯಿಯನ್ನು ಹೇಗ್ಹೇಗೋ ಹರಿಯಬಿಟ್ಟಾಗ ಕತ್ತಿಗಿಂತಲೂ ಮೊನಚಾಗಿ ಎದುರಿರುವ ವ್ಯಕ್ತಿಯನ್ನು ಘಾಸಿ ಮಾಡುತ್ತದೆ. ಸೌಜನ್ಯ, ದಾಕ್ಷಿಣ್ಯ, ಪರರ ಮನೋಧರ್ಮ ಸಹಿಷ್ಣುತೆ, ಶಿಷ್ಟಾಚಾರ ಪಾಲನೆ ಎಲ್ಲವನ್ನೂ ಭಾವತೀವ್ರತೆ ತಿಂದು ಹಾಕಿಬಿಡುತ್ತದೆ ಎಂಬುದು ಕೆರೆಮನೆಯವರ ಅಂಬೋಣವಾಗಿದೆ. ಭಾವ ಮಾತಾಗುವ ಮೊದಲು ತುಸು ಶಿಷ್ಟಾಚಾರದ ಹಿತನುಡಿಗೆ ಕಿವಿಕೊಡುವ ತಾಳ್ಮೆ ಅಗತ್ಯ ಎಂಬುದು ಮನವರಿಕೆಯಾಗುತ್ತದೆ. ಇದರಂತೆಯೇ ಮೌನಕ್ಕೂ ಅಗಾಧವಾದ ಶಕ್ತಿಯಿದೆ. ಇದರಲ್ಲಿ ಶಾಂತಿಯೂ ಇದೆ, ಕ್ರಾಂತಿಯೂ ಇದೆ. ಕಡಿಮೆ ಮಾತನಾಡಿದರೆ ನಾವು ಹಲವಾರು ಸಮಸ್ಯೆಗಳಿಂದ ಮುಕ್ತರಾಗಬಹುದು. ಆದರೆ ಎಷ್ಟೊ ಸಲ ಮೌವವೇ ಎದುರಿಗಿರುವ ವ್ಯಕ್ತಿಯನ್ನು ಕೊಲ್ಲುವ ಅಸ್ತ್ರವೂ ಆಗುತ್ತದೆ ಎಂಬುದನ್ನು ಗಜಲ್ ಗೋ ಅವರು ತುಂಬಾ ಸೂಕ್ಷ್ಮವಾಗಿ ಇಲ್ಲಿ ದಾಖಲಿಸಿದ್ದಾರೆ.

      ಬರವಣಿಗೆಗೆ ಒಂದು ಅದ್ಭುತ ಶಕ್ತಿಯಿದೆ. ಅಂತೆಯೇ ಆಲ್ಫ್ರೆಡೋ ಕಾಂಡೆಯವರು ಹೇಳಿದ ಈ ಮಾತು ಅಕ್ಷರಶಃ ಸತ್ಯವಾಗಿದೆ. “ಬರಹಗಾರನಾಗುವುದು ಜೀವನವನ್ನು ಸಾವಿನಿಂದ ಕದಿಯುವುದು”. ಈ ನೆಲೆಯಲ್ಲಿ ಗಮನಿಸಿದಾಗ ಬರವಣಿಗೆ ನಮ್ಮ ಆತ್ಮಸಂಗಾತಿಯೇ ಹೌದು. ನಮ್ಮ ನೋವಿಗೆ ಮಿಡಿಯುತ್ತದೆ, ಕಂಬನಿಯನ್ನು ಒರೆಸುತ್ತದೆ, ಧೈರ್ಯ ತುಂಬುತ್ತದೆ, ಆತ್ಮವಿಶ್ವಾಸದಿಂದ ಬಾಳಲು ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಗೋ ಶ್ರೀದೇವಿ ಕೆರೆಮನೆ ಅವರು ತಮ್ಮ ಈ ಒಂದು ಷೇರ್ ನಲ್ಲಿ ಬರವಣಿಗೆಯ ಹಿಂದಿನ ಬೆಳಕನ್ನು ಓದುಗರ ಮನದ ಮಂದೆ ಪ್ರಕಟಿಸಿದ್ದಾರೆ.

ಕಣ್ಣಂಚಿಂದ ಜಾರಿದ ಹನಿಯ ಹಿಡಿದಿಡಲಾಗದೆ ಬರೆಯುತಿದ್ದೇನೆ

ಎದೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆ ಆರದಿರಲೆಂದು ಬರೆಯುತ್ತಿದ್ದೇನೆ

ಕಂಗಳಿಂದ ಜಾರಿದ ಕಂಬನಿ ಕೆನ್ನೆಯನ್ನು ತೇವಗೊಳಿಸುತ್ತದೆ ಅವನಿಗೆ ಚುಂಬಿಸುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ಆ ನೋವಿನ ಛಾಯೆಯಾಗಿಯೆ ಬರವಣಿಗೆ ರೂಪ ಪಡೆದಿರುವುದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಬಳಕೆಯಾದ ‘ಹಣತೆ’ ಈ ಷೇರ್ ನ ಧ್ವನಿಯಾಗಿದೆ. ಅದನ್ನು ಮನೋಮಂದಿರದಲ್ಲಿ ಆರದಂತೆ ಕಾಪಿಡುವುದೆ ಈ ಬರವಣಿಗೆ, ಈ ಸಾಹಿತ್ಯ ಎನ್ನಬಹುದು.

          ನಾವು ಉಸಿರಾಡುತ್ತಿರುವ ಜಗತ್ತಿನಲ್ಲಿ ಕರುಣೆ ಹಾಗೂ ಕ್ಷಮೆ ಮಾನವತ್ವದ ಬಹುದೊಡ್ಡ ಆಧಾರ ಸ್ಥಂಭಗಳು. ಈ ಕರುಣೆ ಹಾಗೂ ಕ್ಷಮೆಯನ್ನು ಮರೆತವರು ಮಾನವನೆಂಬ ಮುಖವಾಡದ ನೆರಳಿನಲ್ಲಿ ಜೀವಿಸಬೇಕಾಗುತ್ತದೆ. ಕರುಣೆ ಹಾಗೂ ಕ್ಷಮೆಯನ್ನು ಮರೆತ ಸಮಾಜಕ್ಕೆ ಶಾಂತಿಯನ್ನು ಹುಡುಕಿದರೂ ಸಿಗಲಾರದು.‌ ಈ ಹಿನ್ನೆಲೆಯಲ್ಲಿ ‘ಗಜಲ್’ ಮಧುಬಟ್ಟಲು ಕರುಣಾರಸದಿಂದಲೆ ತುಂಬಿದೆ. ನೋವಿಗೂ ನೋವಾಗದಂತೆ ಅಪ್ಪಿ ಮುದ್ದಿಸುವ ಜೀವ ಚೈತನ್ಯ ಇದಕ್ಕಿದೆ. ಈ ಕಾರಣಕ್ಕಾಗಿಯೇ ಇಂದು ಗಜಲ್ ಜನಸಾಮಾನ್ಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಈ ದಿಸೆಯಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆ ಅವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಗಳು ಉದಯಿಸಲಿ ಎಂದು ಆಶಿಸುತ್ತ, ಶುಭ ಕೋರುತ್ತೇನೆ.

“ಹಗೆತನವಾದರೂ ಸರಿ ಮನಸನ್ನು ನೋಯಿಸಲು ಬಾ

ಬಾ ಮತ್ತೊಮ್ಮೆ ನನ್ನನ್ನು ತೊರೆದು ಹೋಗಲು ಬಾ

                              –ಅಹಮದ್ ಫರಾಜ್

ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ತಮ್ಮ ಕುತೂಹಲ ತಣಿಸುವ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುವೆ. ಅಲ್ಲಿಯವರೆಗೂ ತುಂಬು ಹೃದಯದ ಧನ್ಯವಾದಗಳು…


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top