ಲೇಖನ
ಬೆವರು
ಗೋವಿಂದ್ ಎಂಬ ನನ್ನ ಸ್ನೇಹಿತ ಬಹಳ ಹಿಂದೆ ಬ್ಯಾಡ್ಮಿಂಟನ್ ಆಟಕ್ಕೆ ಬರುತ್ತಿದ್ದ. ಅದೊಂದು ಒಳಾಂಗಣ ಅಂಕಣ. ಹಾಗಾಗಿ ಸ್ವಲ್ಪ ಹೊತ್ತಿನ ಆಟಕ್ಕೇ ಬೆವರುವುದು ಹೆಚ್ಚು. ಆದರೆ ಈ ಸ್ನೇಹಿತ ಆಟಕ್ಕೆ ಬರುವ ಸಮಯಕ್ಕೇ ಒಳ್ಳೇ ಮಳೆಯಲ್ಲಿ ತೋಯ್ದ ಹಾಗೆ ಬೆವೆತು, ಬಂದ ಕೂಡಲೇ ತನ್ನ ಟೀ ಷರಟು ಬದಲಾಯಿಸಿಕೊಂಡೇ ಆಟ ಆಡುತ್ತಿದ್ದ. ಇನ್ನೊಬ್ಬ ಎಷ್ಟೇ ಆಡಿದರೂ ಸಹ ಬೆವರು ಹನಿಗಳನ್ನು ಎಣಿಸುವಷ್ಟು ಕಡಿಮೆ ಬೆವರುತ್ತಿದ್ದ. ಕೆಲವು ಮನೆಗಳಲ್ಲಿ ಗಂಡ ಚಳಿಯಲ್ಲೂ ಸೆಕೆ ತಾಳದೆ ಪಂಖ ಚಾಲನೆ ಮಾಡಿದರೆ, ಹೆಂಡತಿ ತದ್ವಿರುದ್ದ. ಅಥವ ಅದರಲ್ಲೂ ಅದಲು ಬದಲು. ಇದೆಲ್ಲದಕ್ಕೂ ಕಾರಣ ‘ಬೆವರಾಯಣ!’
ಬೆವರು ಎಂಬುದೊಂದು ನಮ್ಮ ದೇಹದ ಪ್ರಕೃತಿದತ್ತ ಸಾಮಾನ್ಯ ದೈಹಿಕ ಕ್ರಿಯೆ. ಅದರಿಂದ ಶರೀರದ ಉಷ್ಣತೆಯ ನಿಯಂತ್ರಣ ಆಗುತ್ತದೆ. ಬೆವರುಗ್ರಂಥಿಗಳಿಂದ ಬಿಡುಗಡೆಯಾಗುವ ಲವಣಮಿಶ್ರಿತ ದ್ರವವೇ ಬೆವರು ಅಥವ ಸ್ವೇದ. ಹಾಗಾದರೆ ಈ ಬೆವರಿಗೆ ಕಾರಣ ಅಂತ ಇರಬೇಕಲ್ಲ, ಅಲ್ಲವೇ? ದೇಹದ ಶಾಖದಲ್ಲಿ ಬದಲಾವಣೆ ಆಗುವುದರಿಂದ ಅಥವ ಹೊರಗಿನ ಉಷ್ಣತೆಯಲ್ಲಿ ಪರಿವರ್ತನೆಯಾದರೆ ಅಥವ ನಮ್ಮ ಭಾವನಾತ್ಮಕ ಉದ್ವೇಗಗಳೇ ಮುಂತಾಗಿ ಬೆವರು ಹರಿಯುವುದಕ್ಕೆ ಕಾರಣ. ನಮ್ಮ ಅಂಗೈಗಳು, ಪಾದದ ಕೆಳಗಿನ ಅಂಗಾಲುಗಳು, ಕಂಕುಳುಗಳು ಹಾಗೂ ಮುಖ (ಹೆಚ್ಚಾಗಿ ಹಣೆ) ಬೆವರು ಸುರಿಯುವ ದೇಹದ ಅತ್ಯಂತ ಪ್ರಮುಖ ಭಾಗಗಳು. ಒಂದು ಸಾಧಾರಣ ಅಳತೆಯಷ್ಟು ಬೆವರು ನಮ್ಮ ದೈಹಿಕ ದೈನಂದಿನ ಕ್ರಿಯೆಗೆ ಬಹಳ ಅವಶ್ಯಕ. ಹಾಗಂತ ಅತೀ ಹೆಚ್ಚಾಗಿ ಅಥವ ಅತೀ ಕಡಿಮೆ ಬೆವರುವುದೂ ಒಳ್ಳೆಯದಲ್ಲ. ಬೆವರೇ ಇಲ್ಲದಿರುವಿಕೆ ಅಥವ ಅತೀ ಕಡಿಮೆಯಾಗುವಿಕೆಯಿಂದಲೂ ಸಹ ದೇಹದ ಉಷ್ಣ ಹೆಚ್ಚಾಗಿ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆಯೇ ಅತಿಯಾಗಿ ಸದಾ ಬೆವರುವುದೂ ಸಹ ದೈಹಿಕವಾಗಿ ಅಲ್ಲದಿದ್ದರೂ, ಅದರಿಂದಲೇ ಒಂದು ಥರ ಹಿಂಸೆ ಅನುಭವಿಸಿ ಮನಸ್ಸಿನ ಸ್ಥಿತ ಆರೋಗ್ಯಕ್ಕೂ ತೊಂದರೆಯಾಗಬಹುದು.
ನಮ್ಮ ದೇಹದಲ್ಲಿ ಅಂದಾಜು ಮೂವತ್ತು ಲಕ್ಷದವರೆಗೆ ಬೆವರು ಗ್ರಂಥಿಗಳಿವೆಯಂತೆ. ಅವುಗಳಲ್ಲೂ ಎರಡು ವಿಧದ ಗ್ರಂಥಿಗಳಿವೆ. ಒಂದು ರೀತಿಯ ಗ್ರಂಥಿಗಳು ಹಗುರ ಹಾಗೂ ವಾಸನಾರಹಿತ ಬೆವರಿಗೆ ಕಾರಣವಾಗಿ, ನಮ್ಮ ದೇಹದ ಎಲ್ಲ ಭಾಗಗಳಲ್ಲೂ ಹರಡಿರುತ್ತವೆ; ಇನ್ನೊಂದು ಥರದ ಗ್ರಂಥಿಗಳು ನೆತ್ತಿ, ಕಂಕುಳು ಮತ್ತು ತೊಡೆಸಂಧಿಯ ಕೇಶದ ಚೀಲಗಳಲ್ಲಿ (ಹೇರ್ ಫಾಲಿಕಲ್) ಕೇಂದ್ರೀಕರಿಸಿರುತ್ತವೆ ಮತ್ತು ಈ ಗ್ರಂಥಿಗಳು ಕೊಬ್ಬು ಮಿಶ್ರಣದಿಂದ ತೂಕವಾದ ಹಾಗೂ ಭಿನ್ನ ಭಿನ್ನ ವಾಸನೆಗಳಿಂದ ಕೂಡಿರುತ್ತವೆ. ಈ ಎರಡೂ ರೀತಿಯ ಗ್ರಂಥಿಗಳನ್ನು ತಾಂತ್ರಿಕ ಭಾಷೆಯಲ್ಲಿ ಎಕ್ರೀನ್ ಮತ್ತು ಎಪೋಕ್ರೀನ್ ಗ್ಲ್ಯಾಂಡ್ಸ್ ಎಂದು ಕರೆಯುತ್ತಾರೆ. ದೈಹಿಕ ವಾಸನೆಗೆ ಕಾರಣವೆಂದರೆ, ಈ ಗ್ರಂಥಿಗಳ ಬೆವರು ಚೂರು ಚೂರಾಗಿ ಒಡೆದುಹೋಗಿ, ಚರ್ಮದ ಬ್ಯಾಕ್ಟೀರಿಯಗಳೊಡನೆ ಬೆರೆತಾಗ ಈ ವಾಸನೆಗಳು ಉತ್ಪತ್ತಿಯಾಗುವುದು.
ನಮ್ಮ ಪ್ರಜ್ಞಾವಸ್ಥೆಯ ಹಿಡಿತದಲ್ಲಿ ಇಲ್ಲದ, ಸ್ವನಿಯಂತ್ರಿತ ನರಮಂಡಲ ವ್ಯವಸ್ಥೆಯ ಅಂಕೆಯಲ್ಲಿ ಬೆವರು ಗ್ರಂಥಿಗಳು ಕೆಲಸ ಮಾಡುತ್ತವೆ. ಬಾಹ್ಯ ಹವಾಮಾನದ ಉಷ್ಣತೆ ಹೆಚ್ಚಾದಾಗ ಅಥವ ವ್ಯಾಯಾಮ ಮಾಡುವುದರಿಂದ ಅಥವ ಜ್ವರದಿಂದ ಈ ಗ್ರಂಥಿಗಳು ತಮ್ಮ ಕೊಳವೆಗಳ ಮೂಲಕ ಬೆವರನ್ನು ಹೊರಹಾಕುತ್ತವೆ. ಆ ಬೆವರಿಂದ ದೇಹದ ಮೇಲ್ಮೈ ತೇವವಾಗಿ, ಅದು ಆವಿಯಾಗುವುದರಿಂದ ನಮ್ಮ ಶರೀರವು ಥಣ್ಣಗಾಗುತ್ತದೆ. ಸಾಮಾನ್ಯವಾಗಿ ಬೆವರಿನಲ್ಲಿ ಕೇವಲ ಶೇಕಡ ಒಂದರಷ್ಟು ಉಪ್ಪು ಮತ್ತು ಕೊಬ್ಬು ಇರುವುವು. ಉಳಿದದ್ದೆಲ್ಲ ನೀರು.
ನಮ್ಮ ದೈನಂದಿನ ಬದುಕಿನಲ್ಲಿ ಬೆವರುವುದು ಅತ್ಯಂತ ಸಾಮಾನ್ಯ ಕ್ರಿಯೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅದು ಉದ್ದೀಪನಗೊಂಡು ಹೆಚ್ಚಾಗುತ್ತದೆ:
— ನಮ್ಮ ಬಾಹ್ಯ ಸನ್ನಿವೇಶನದಲ್ಲಿ ಉಷ್ಣ ಹೆಚ್ಚಾಗುವುದು ಅತ್ಯಂತ ಮುಖ್ಯ ಕಾರಣ.
— ಮಾನಸಿಕ ಉದ್ವೇಗ ಉಲ್ಬಣ ಆಗುವಂಥ ಸಂದರ್ಭಗಳಾದ ಕೋಪ, ಭಯ, ದುಗುಡ, ಮಾನಸಿಕ ಒತ್ತಡ ಹಾಗೂ ಮುಜುಗರ ಮುಂತಾದ ಭಾವನಾತ್ಮಕ ಪರಿಸ್ಥಿತಿಗಳು.
— ಕೆಲ ಆಹಾರಗಳ ರುಚಿ ಅಥವ ಆಸ್ವಾದನಾ ಸಂಬಂಧದಿಂದ ಕೂಡ ಬೆವರು ಹೆಚ್ಚುತ್ತದೆ. ಉದಾಹರಣೆಗೆ, ಖಾರ ಅಥವ ತೀಕ್ಷ್ಣ ರುಚಿಗಳ ಪದಾರ್ಥ; ಸೋಡ, ಕಾಫಿ, ಟೀ ಮತ್ತು ಮದ್ಯಪಾನಗಳು.
— ಕೆಲವು ರೋಗಗಳ ಔಷಧಗಳೂ ಕೂಡ ಬೆವರು ಸುರಿಸುತ್ತವೆ: ಅರ್ಬುದ (ಕ್ಯಾನ್ಸರ್), ನೋವು ಮತ್ತು ಜ್ವರದ ಗುಳಿಗೆಗಳು, ಸೋಂಕುಗಳು, ಸಕ್ಕರೆಯ ಮಟ್ಟ ಕಮ್ಮಿ ಮಾಡುವ ಮಾತ್ರೆ ಅಥವ ಇನ್ಸುಲಿನ್ ಇಂಜಕ್ಷನ್ ಮತ್ತು ಇತರೆ ನೋವು ನಿವಾರಕಗಳು.
— ಹೆಂಗಸರಲ್ಲಿ ಮುಟ್ಟು ನಿಂತುಹೋದ ಕಾಲದಲ್ಲಿ (ಮೆನೋಪಾಸ್) ಬೆವರುವುದು ಚುರುಕಾಗುತ್ತದೆ. ಆಗ ಅವರಲ್ಲಿ ರಾತ್ರಿ ಬೆವರುವಿಕೆ ಉಂಟಾಗುತ್ತದೆ. ಮತ್ತು ಸುಮ್ಮ ಸುಮ್ಮನೆ ಬಿಸಿಬಿಸಿ ಆಗುವಿಕೆ (ಹಾಟ್ ಫ್ಲ್ಯಾಷಸ್) ಆಗಿ, ಅಂಥ ಸಮಯ ಕೂಡ ಬೆವರು ಹೆಚ್ಚಾಗುತ್ತದೆ.
ಇನ್ನು ಈ ಪರಿಸ್ಥಿತಿಯಲ್ಲಿ ಏನೆಲ್ಲ ನಾವು ಮಾಡಬಹುದು ನೋಡೋಣ:
* ಬೆವರಿನ ಬಟ್ಟೆಗಳನ್ನು ಆಗಾಗ ಬದಲಾಯಿಸುವುದರಿಂದ ಬ್ಯಾಕ್ಟೀರಿಯ ಮತ್ತು ಈಸ್ಟ್ (ಬುರುಗು) ಮುಂತಾದ ಸೋಂಕು ಗಳನ್ನು ತಡೆಯಬಹುದು.
* ಬೆವರು ಉತ್ಪತ್ತಿ ಮಾಡುವಂತಹ ಆಹಾರ ಪದಾರ್ಥಗಳನ್ನು ನಮ್ಮ ದೈನಂದಿನ ಊಟ ತಿಂಡಿಗಳಲ್ಲಿ ತಿನ್ನದೇ ಇರುವುದರಿಂದಲೂ ಸಹ ಬೆವರನ್ನು ತಗ್ಗಿಸಬಹುದು.
* ಬೆವೆತಾಗಲೆಲ್ಲ ಸಾಕಷ್ಟು ನೀರು ಕುಡಿಯಬೇಕು.
* ಕಂಕುಳುಗಳಿಗೆ ದುರ್ಗಂಧ ಹೋಗಲಾಡಿಸುವ ಸುಗಂಧದ್ರವ್ಯ ಪೂಸುವುದರಿಂದ ಸಹ ಬೆವರು ಹತೋಟಿಗೆ ಬರುವುದು.
ಕೊನೆಯಲ್ಲಿ:-ಪ್ರಾಣಿಗಳೂ ಸಹ ಬೆವರುತ್ತವೋ ಹೇಗೆ, ಎಂಬ ನಮ್ಮ ಕುತೂಹಲಕ್ಕೆ ಉತ್ತರ, ಹೌದು. ಕೆಲವು ಪ್ರಾಣಿಗಳೂ ನಮ್ಮ ಹಾಗೆ ಬೆವರುವುದುಂಟು.
— ಕುದುರೆ, ಕೋತಿ, ಹಿಪ್ಪೋಗಳೇ ಮುಂತಾಗಿ ಬೆವರುವುದುಂಟು. ಈ ಜಗತ್ತಿನಲ್ಲಿ ಕುದುರೆ ಹಾಗೂ ಹಿಪ್ಪೋಗಳ ಬೆವರು ಒಂದು ರೀತಿಯಲ್ಲಿ ಸಾಮಾನ್ಯವಾದ ಬೆವರಲ್ಲವಂತೆ. ನಾಯಿ, ಬೆಕ್ಕು ಮುಂತಾದ ಚರ್ಮದಮೇಲೆ ತುಪ್ಪಳ ಇರುವ ಪ್ರಾಣಿಗಳು, ತಮ್ಮ ಪಂಜಗಳಲ್ಲಿ ಬೆವರುವುದಂತೆ.
— ಇನ್ನು ಕೀಟಗಳಲ್ಲಿ ಚರ್ಮಗ್ರಂಥಿ ಎಂಬ ಬೆವರುವಿರೋಧಿ ಗ್ರಂಥಿಗಳು ಇದ್ದು, ಅವುಗಳ ಮೂಲಕ, ವೈಜ್ಞಾನಿಕ ಪರಿಭಾಷೆಯ ‘ಸಿಮೆಂಟ್’ ಎಂಬುದನ್ನು ಉತ್ಪತ್ತಿ ಮಾಡುತ್ತವಂತೆ. ಅದನ್ನು ತಮ್ಮ ಹೊರಪೊರೆಯ ಉದ್ದಗಲಕ್ಕೂ ಹಚ್ಚಿಕೊಂಡು ನೀರು ನಾಶವಾಗದ ಹಾಗೆ ಮಾಡಿಕೊಳ್ಳುತ್ತವಂತೆ.
ಇದು ಸಂಕ್ಷಿಪ್ತ ಬೆವರ ಕಥೆ.
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಬೆವರಿನ ಬಗ್ಗೆ ಉತ್ತಮ ವೈಜ್ಞಾನಿಕ ಲೇಖನವಿದು. ಬಹಳ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ. ಅಭಿನಂದನೆಗಳು