ಸರಣಿ ಬರಹ

ಅಂಬೇಡ್ಕರ್ ಓದು

ಭಾಗ-6

ಜಾತಿಯತೆಯ ಕರಾ‌ಳ ಸ್ಪರ್ಶ

ಪುಸ್ತಕಗಳೆಂದರೆ ಅಂಬೇಡ್ಕರರಿಗೆ ಅದಮ್ಯ ಪ್ರೀತಿ, ನ್ಯೂಯಾರ್ಕ ನಗರದಲ್ಲಿನ ಪುಸ್ತಕ ಅಂಗಡಿಗಳಿಗೆ ಭೇಟಿಕೊಟ್ಟು ಸಾವಿರಾರು ಪುಸ್ತಕಗಳನ್ನು ಖರಿದಿಸಿ ಮುಂಬಯಿಗೆ ಕಳುಹಿಸಿ ಕೊಡುತ್ತಾರೆ. ಅಮೇರಿಕಾದ ನಿಗ್ರೋ ಜನರಿಗೆ ಸ್ವಾತಂತ್ರ್ಯ ಕಲ್ಪಿಸಿದ 14ನೇ ತಿದ್ದುಪಡಿ ಅಂಬೇಡ್ಕರರ ಮೇಲೆ ಅಗಾದ ಪ್ರಭಾವ ಬಿರಿತ್ತು. ಭೂಕರ .ಟಿ. ವಾಸಿಂಗ್ಟನ್ ರವರು 1915ರಲ್ಲಿ ನಿಧನರಾದಾಗ ಅಂಬೇಡ್ಕರರು ಅಮೇರಿಕಾದಲ್ಲಿಯೇ ಇದ್ದರು. ಅವರು ನಿಗ್ರೋ ಜನರಿಗೆ ಸ್ವಾತಂತ್ರ್ಯ, ಶಿಕ್ಷಣ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಅಂಬೇಡ್ಕರರಿಗೆ ಭಾರತದಲ್ಲಿನ ಕೋಟಿ ಕೋಟಿ ಅಸ್ಪೃಶ್ಯ ಜನರಿಗೆ ಶಿಕ್ಷಣ, ಉದ್ಯೋಗ ಕಲ್ಪಸಿ ಗುಲಾಮಗಿರಿಯಿಂದ ಹೊರತರಲು ಭೂಕರ .ಟಿ. ವಾಸಿಂಗ್ಟನ್ ರವರ ಕಾರ್ಯಸಾಧನೆ ಪ್ರೇರಣೆ ನೀಡಿತು.

ಅಮೇರಿಕಾದಲ್ಲಿನ ವಿದ್ಯಾಭ್ಯಾಸ ಪೂರ್ಣಗೊಂಡಿದ್ದರಿಂದ ಇಂಗ್ಲೇಂಡಿಗೆ ಹೋಗಿ ಅರ್ಥಶಾಸ್ತ್ರದಲ್ಲಿ ಡಿ.ಎಸ್.ಸಿ ಮತ್ತು ಕಾನೂನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯಬೇಕೆಂಬ ಮಹದಾಸೆ ಅಂಬೇಡ್ಕರರಿಗೆ ಬಲವಾಗಿತ್ತು. ಇಂಗ್ಲೇಂಡ್ ಅಂದು ಜಗತ್ಪ್ರಸಿದ್ದ ವಿದ್ಯಾಕೇಂದ್ರ. ಬರೋಡಾ ಮಹಾರಾಜರಿಗೆ ಪತ್ರ ಬರೆದು ಮನವಲಿಸಿ ವಿದ್ಯಾಭ್ಯಾಸ ಮುಂದುವರೆಸಲು ಅನುಮತಿ ಪಡೆದು 1916ರ ಜೂನ್ ಕೊನೆ ವಾರದಲ್ಲಿ ಇಂಗ್ಲೇಂಡಿಗೆ ಬಂದಿಳಿಯುತ್ತಾರೆ. ಅಮೇರಿಕಾದಲ್ಲಿ ಬ್ರಿಟಿಷರ ವಿರುದ್ದ ಹೋರಾಟ ಮಾಡುತ್ತಿರುವ ಗದ್ದಾರ ಸಂಘಟನೆಯ ಸದಸ್ಯನಾಗಿರಬೇಕೆಂದು, ಸಂಶಯಪಟ್ಟು ಅಂಬೇಡ್ಕರರನ್ನು ತಪಾಸಣೆಗೆ ಒಳಪಡಿಸಿದಾಗ ಅಂಬೇಡ್ಕರರು ಸೆಲಿಗ್ಮನ್ ರವರು ಕೊಟ್ಟಿದ್ದ ಪತ್ರವನ್ನು ತೋರಿಸುತ್ತಾ ತಾನು ಅರ್ಥಶಾಸ್ತ್ರ ಮತ್ತು ಕಾನೂನು ವ್ಯಾಸಂಗ ಮಾಡಲು ಬಂದಿರುವುದಾಗಿ ತಿಳಿಸಿ ಹಡಗು ಬಂದರಿನಿಂದ ಹೊರಡುತ್ತಾರೆ. ಅಂಬೇಡ್ಕರ್ ಅವರು ಈಗಾಗಲೇ ಎಂ.ಎ ಮತ್ತು ಪಿ.ಎಚ್.ಡಿ ಪದವಿ ಪಡೆದಿದ್ದರಿಂದ ನೇರವಾಗಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯಲು ಅನುಮತಿ ದೊರೆಯುತ್ತದೆ. ಇದರಿಂದ ನೇರವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಹಾವಿದ್ಯಾಲಯದಲ್ಲಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯುತ್ತಾರೆ. ಇದಲ್ಲದೆ ಗ್ರೆಸ್ ಇನ್ ಎಂಬಲ್ಲಿ ಕಾನೂನು ಪದವಿಗೆ ಹೆಸರು ನೋಂದಾಯಿಸುತ್ತಾರೆ. ಏಕಕಾಲದಲ್ಲಿ ಎರಡು ಪದವಿಗಳ ಅಧ್ಯಯನದಲ್ಲಿ ತೊಡಗುವರು. ಅರ್ಥಶಾಸ್ತ್ರದಲ್ಲಿ “ರೂಪಾಯಿ ಸಮಸ್ಯೆ” ಕುರಿತು ಮಹಾ ಪ್ರಬಂಧ ಬರೆಯಲು ಆಯ್ಕೆ ಮಾಡಿಕೊಳ್ಳುವರು. ಪ್ರೋಫೆಸರ್ ಎಡ್ವಿನ್ ಕ್ಯಾನನ್ ರವರು ಮಾರ್ಗದರ್ಶಕರಾಗಿರುತ್ತಾರೆ. ಸೇಲಿಗ್ಮನ್ ರಂತೆ ಕ್ಯಾನನ್ ರವರು, ಅಂಬೇಡ್ಕರರಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗುವರು. ಆದರೆ ಶಿಷ್ಯವೇತನ ಅವಧಿ ಪೂರ್ಣಗೊಂಡಿದ್ದರಿಂದ ಭಾರತಕ್ಕೆ ಮರಳಿ ಬಂದು ಬರೋಡಾ ಸಂಸ್ಥಾನದಲ್ಲಿ ಒಪ್ಪಂದದಂತೆ ಹತ್ತು ವರ್ಷಗಳ ಸೇವೆ ಸಲ್ಲಿಸಬೇಕೆಂದು ಬರೋಡಾ ಸಂಸ್ಥಾನದ  ದಿವಾನರಿಂದ ಪತ್ರ ಬರುತ್ತದೆ. ಇದು ಅಂಬೇಡ್ಕರರಿಗೆ ಬಹಳ ನಿರಾಶೆಯನ್ನುಂಟು ಮಾಡಿತು. ಪ್ರೊ.ಎಡ್ವಿನ್ ಕ್ಯಾನನರು ವಿದ್ಯಾಭ್ಯಾಸ ಮುಂದುವರೆಸುವುದಾದಲ್ಲಿ ನಾಲ್ಕು ವರ್ಷ ಕಾಲಾವಧಿ ವಿಸ್ತರಿಸಿ ಕೊಡುವುದಾಗಿ ಅಂಬೇಡ್ಕರರಿಗೆ ಭರವಸೆ ನೀಡುವರು. ಪ್ರೊ.ಕ್ಯಾನನ್ ರ ಭರವಸೆಯ ಮಾತುಗಳನ್ನು ಕೇಳಿ ಸಮಾಧಾನ ಪಟ್ಟುಕೊಂಡು ಅವರಿಗೆ ವಂದಿಸಿ ಭಾರತಕ್ಕೆ ಹಿಂದಿರುಗುತ್ತಾರೆ.

ಇತ್ತ ಅಂಬೇಡ್ಕರರು ಪ್ರಯಾಣಿಸುತ್ತಿದ್ದ ಹಡಗು ಮುಳಿಗಿತೆಂದು ಸುದ್ದಿಯೊಂದು ಪಸರಿಸಿಬಿಟ್ಟಿತು, ಸುದ್ದಿ ತಿಳಿದು, ರಮಾಬಾಯಿ ಮತ್ತು ಕುಟುಂಬಸ್ತರು ದುಃಖದಿಂದ ಕಂಗಾಲಾಗುತ್ತಾರೆ. ಅಂಬೇಡ್ಕರರು ಲಂಡನದಲ್ಲಿದ್ದಾಗ ಎರಡು ಸಾವಿರ ಪುಸ್ತಕಗಳನ್ನು ಖರಿದಿಸಿ ಹಡಗೊಂದರ ಮೂಲಕ ಮುಂಬೈಯಿಗೆ ಕಳುಹಿಸಿಕೊಡುವರು. ಆಗ ಇನ್ನು ಪ್ರಥಮ ಮಹಾಯುದ್ದ ಮುಂದುವರೆದಿತ್ತು. ಮೆಡಿಟೇರಿಯನ್ ಸಮುದ್ರದಲ್ಲಿ ಆ ಹಡಗು ಜರ್ಮನಿಯ ಸಬ್ ಮೆರಿನ್ ಬಾಂಬ್ ದಾಳಿಯಿಂದ ಆ ಹಡಗು ಮುಳುಗುತ್ತದೆ. ಮುಳುಗಿದ ಹಡಗಿನಲ್ಲಿ ಅದೃಷ್ಟವಶಾತ್ ಅಂಬೇಡ್ಕರರು ಇರಲಿಲ್ಲ, ಅವರು ಕೈಸರ್-ಇ-ಹಿಂದ್ ಹಡಗಿನ ಮೂಲಕ ಪ್ರಯಾಣ ಬೆಳೆಸಿದ್ದರು. 1917ರ ಜುಲೈ ತಿಂಗಳಲ್ಲಿ ಮುಂಬೈಯಿಗೆ ಅಂಬೇಡ್ಕರರು ಸುರಕ್ಷಿತವಾಗಿ ಬಂದಿಳಿದಾಗ ಮನೆಯಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತು.

 ಹಡಗು ಮುಳುಗಿದ್ದರಿಂದ ಕಳುಹಿಸಿದ್ದ ಸುಮಾರು ಎರಡು ಸಾವಿರ ಪುಸ್ತಕಗಳು ಮುಳುಗಿ ಹೋದವು. ಪುಸ್ತಕಗಳಿಗೆ ವಿಮೆ ಮಾಡಿಸಿದ್ದರಿಂದ ಕಷ್ಟದಲ್ಲಿದ್ದ ಅಂಬೇಡ್ಕರರಿಗೆ ವಿಮೆ ಹಣ ಬರುತ್ತದೆ. ಆ ಹಣ ಅವರಿಗೆ ಬಹಳ ಉಪಯುಕ್ತವಾಗುವುದು. ಪತ್ನಿ ರಮಾಬಾಯಿಗೆ  ಖರ್ಚಿಗೆ ಅದರಲ್ಲಿ ಒಂದಿಷ್ಟು ಹಣಕೊಟ್ಟು ತಾವು ಒಂದಿಷ್ಟು ತೆಗೆದುಕೊಂಡು ಬರೋಡಾ ಸಂಸ್ಥಾನದಲ್ಲಿ ಸೇವೆ ಸಲ್ಲಿಸುವ ಕರಾರಿನಂತೆ ಕೆಲಸ ನಿರ್ವಹಿಸಲು ಬರೋಡಾಗೆ ಹೊಗುವರು. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಎಂ.ಎ, ಪಿ.ಎಚ್.ಡಿ, ಪಡೆದ ತನ್ನನ್ನು ಅಸ್ಪೃಶ್ಯನಂತೆ ನೋಡಿಕೊಳ್ಳದೆ ಗೌರವದಿಂದ ನೋಡಿ ಕೊಳ್ಳುತ್ತಾರೆ, ಕಛೇರಿ ಸಿಬ್ಬಂದಿ ಸ್ವಾಗತಿಸಲು ಸ್ಟೇಷನಗೆ ಬರುತ್ತಾರೆ ಅಂತಾ ನೀರಿಕ್ಷೇಯಲ್ಲಿ ಕಾಯುತ್ತಾ ನಿಂತಿದ್ದ ಅಂಬೇಡ್ಕರರಿಗೆ ಅಲ್ಲಿ ಸ್ವಾಗತಿಸಲು ಯಾರು ಬರುವುದಿಲ್ಲ. ಈ ದೇಶದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ಓದಿ ವಿದ್ಯಾವಂತನಾದರು, ಉನ್ನತ ಹುದ್ದೆ ಹೊಂದಿದ್ದರು ಮರ್ಯಾದೆ ಕೊಡುವುದಿಲ್ಲ. ಗೌರವ ಸಿಗುವುದಿಲ್ಲವೆಂಬ ಮನವರಿಕೆ ಅವರಲ್ಲಿ ಖಚಿತವಾಗಿತ್ತು. ಉಳಿದುಕೊಳ್ಳಲು ಮನೆಯೊಂದನ್ನು ಬಾಡಿಗೆಗಾಗಿ ಅಲ್ಲಿ ಇಲ್ಲಿ ವಿಚಾರಿಸಿದರು ಆದರೆ ಅಸ್ಪೃಶ್ಯನೆಂಬ ಕಾರಣಕ್ಕಾಗಿ ಮನೆಬಾಡಿಗೆ ಕೊಡಲು ಯಾರು ಮುಂದೆ ಬರುವುದಿಲ್ಲ. ಕೊನೆಗೆ  ಪಾರಸಿ ವಸತಿ ಗೃಹ ಒಂದರಲ್ಲಿ ಯಾರಾದರೂ ವಿಚಾರಿಸಿದಾಗ ಅಸ್ಪೃಶ್ಯ ಜಾತಿಯವನೆಂದು ಹೇಳದೆ ಪಾರಸಿ ಎಂದು ಹೇಳುವುದಾಗಿ ಹೇಳಿ ದಿನ ಒಂದಕ್ಕೆ ಊಟ ವಸತಿ ಸೇರಿ ಒಂದುವರೆ ರೂಪಾಯಿಗೆ ಬಾಡಿಗೆ ನಿರ್ಧರಿಸಿ  ತಾತ್ಪೂರರ್ತಿಕವಾಗಿ ಆ ವಸತಿ ಗೃಹದಲ್ಲಿ ಉಳಿದುಕೊಳ್ಳುವರು.

ವಸತಿ ಗೃಹದ ಮಹಡಿಯಲ್ಲಿನ ಕೋಣೆ ಅನುಪಯುಕ್ತ ವಸ್ತುಗಳಿಂದ ತುಂಬಿ ಹೊಗಿತ್ತು. ಅಲ್ಲಿಯೇ ಚಿಕ್ಕದಾದ ಸ್ಥಳದಲ್ಲಿ ವಾಸ, ಉಸ್ತುವಾರಿ ವ್ಯಕ್ತಿ, ಮುಂಜಾನೆ ಚಹ ತೆಗೆದುಕೊಂಡು ಬಂದರೆ ಒಂಬತ್ತುವರೆ ಗಂಟೆಗೆ ಉಪಹಾರ, ರಾತ್ರಿ ಅದೆ ಹೊತ್ತಿಗೆ ಊಟ ತಂದು ಕೊಟ್ಟರೆ ಮತ್ತೆ ಮೇಲೆ ಯಾರು ಬರುತ್ತಿರಲಿಲ್ಲ, ಹೀಗೆ  ಅಂಬೇಡ್ಕರ್ ರು ಏಕಾಂಗಿಯಾಗಿ ದಿನ ಕಳೆಯುವರು.

ಬರೋಡಾ ಮಹಾರಾಜರು, ಅಂಬೇಡ್ಕರರನ್ನು ಅಕೌಂಟಂಟ್ ಜನರಲ್ ರವರ ಕಛೇರಿಯಲ್ಲಿ ಪ್ರೋಬೇಷನರ್ ಅಧಿಕಾರಿಯನ್ನಾಗಿ ನೆಮಿಸಿಕೊಳ್ಳುವರು. ಕಛೇರಿಯಲ್ಲಿ ಸಿಪಾಯಿ ಕಡತಗಳನ್ನು ಅಂಬೇಡ್ಕರ್ರ ಕೈಗೆ ಕೊಡದೆ ಮೇಜಿನ ಮೇಲೆ ಎಸೆಯುತ್ತಿದ್ದ. ಕೆಳ ಜಾತಿಯವನೆಂದು ಅವರ ಹತ್ತಿರ ಬರುವುದು, ಕೆಲಸ ಮಾಡುವುದು ಮೈಲಿಗೆ ಎಂದು ಆತ ತಿಳಿಯುತ್ತಿದ್ದ. ಅಲ್ಲಿಯ ಕಾರಕೂನರು ಅಂಬೇಡ್ಕರರ ಜೊತೆ ಮಾತನಾಡುತ್ತಿರಲಿಲ್ಲ, ಕುಡಿಯಲು ನೀರು ಕೊಡುತ್ತಿರಲಿಲ್ಲ, ಬಾಯಾರಿಕೆಯಾಗಿ ನೀರು ತೆಗೆದುಕೊಳ್ಳಲು ಹೋದರೆ ಮೈಲಿಗೆಯಾಗುವುದೆಂದು ಮುಟ್ಟಿಸಿಕೊಡುತ್ತಿರಲಿಲ್ಲ. ಈ ಸಮಾಜದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ದೊಡ್ಡ ವಿದ್ಯಾವಂತನಾದರು, ಶುಚಿಯಾಗಿದ್ದರು ಅಸ್ಪೃಶ್ಯನಾಗಿಯೇ ಬದುಕುವಂತಾಗಿದೆ ಎಂದು ಅಂಬೇಡ್ಕರರು ನೊಂದುಕೊಳ್ಳುವರು. ಸಂಸ್ಥಾನದಲ್ಲಿ ಬಂಗಲೆ ಕಲ್ಪಿಸಲು ಅರ್ಜಿ ಹಾಕಿದ್ದರು. ಆದರೆ ದಿವಾನರು ಅರ್ಜಿಯನ್ನು ಕಸದಬುಟ್ಟಿಗೆ ಹಾಕಿದಂತೆ ಇಟ್ಟುಬಿಟ್ಟಿದ್ದರು. ಸದ್ಯಕ್ಕೆ ಹಾಳುಬಿದ್ದ ಕತ್ತಲೆ ಗವಿಯಂತಿದ್ದ ಪಾರಸಿ ವಸತಿ ಗೃಹವೇ ಲೇಸೆಂದು ದಿನಗಳನ್ನು ದುಡೂವರು.

            ಹನ್ನೊಂದನೆಯ ದಿನ ಅಂಬೇಡ್ಕರರು ಮುಂಜಾನೆ ತಿಂಡಿ ಮುಗಿಸಿ ಬಟ್ಟೆತೊಟ್ಟು ಕಛೇರಿಗೆ ಹೋಗಲು ತಯಾರಾಗುತ್ತಿದ್ದಾಗ ಗಟ್ಟಿಮುಟ್ಟಾದ ಸುಮಾರು ಹತ್ತು-ಹನ್ನೆರಡು ಪಾರ್ಶಿಗಳು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಂಬೇಡ್ಕರರು ಉಳಿದುಕೊಂಡಿದ್ದ ಮಹಡಿ ಮೇಲಿನ ಕೋಣೆಗೆ ಬಂದು ಸುತ್ತುವರೆದು ನಿಲ್ಲುತ್ತಾರೆ. ಅಂಬೇಡ್ಕರರಿಗೆ ಕ್ಷಣಕಾಲ ಏನು ತೋಚದಂತಾಗುತ್ತದೆ. ಆ ಪಾರ್ಸಿಗಳು ಯಾರು ನೀನು? ಇಲ್ಲಿಗೇಕೆ ಬಂದಿರುವೆ? ಪಾರ್ಸಿ  ಹೆಸರನ್ನಿಟ್ಟುಕೊಂಡು ಪಾರ್ಸಿಗಳ ವಸತಿ ಗೃಹದಲ್ಲಿ ಉಳಿದುಕೊಳ್ಳಲು ಎಷ್ಟು ಧೈರ್ಯ? ಪಾರ್ಸಿ ವಸತಿ ಗೃಹವನ್ನು ಅಪವಿತ್ರಗೊಳಿಸಿರುವಿರಿ ಎಂದು ಅಂಬೇಡ್ಕರರಿಗೆ ಪ್ರಶ್ನಿಸುತ್ತಾ ಗದರಿಸುವರು. ಪಾರ್ಸಿಗಳು ಮೈಮೇಲೆ ಧರಿಸುವ ಸದ್ರ ಮತ್ತು ಕಷ್ಠಿ ಅಂಬೇಡ್ಕರರು ಧರಿಸಿರುವುದಿಲ್ಲ ಹೀಗಾಗಿ ಸುಳ್ಳು ನಟನೆ ಮಾಡಿ ಪಾರ್ಸಿಯವನೆಂದು ಸಮರ್ಥಿಸಿಕೊಳ್ಳಲು ಹೋದರೆ ಆ ಪಾರ್ಸಿಗಳು ತನ್ನ ಮೇಲೆ ಮುಗಿಬೀಳಬಹುದು, ಜೀವಕ್ಕೆ ಅಪಾಯ ತಂದುಕೊಳ್ಳಬಾರದೆಂದು ಮೌನವಹಿಸುವರು. ಗುಂಪಿನಲ್ಲಿ ಒಬ್ಬನು  ವಸತಿ ಯಾವಾಗ ಖಾಲಿ ಮಾಡುವೆ  ಎಂದು ಕೇಳಿದಾಗ ಸಂಸ್ಥಾನದ ಮಂತ್ರಿಯವರಿಗೆ ಬಂಗಲೆ ಏರ್ಪಾಡು ಮಾಡಿಕೊಡಲು ಅರ್ಜಿಹಾಕಿದ್ದು ಇಷ್ಟರಲ್ಲಿ ಇತ್ಯರ್ಥವಾಗಬಹುದು ಒಂದು ವಾರದವರೆಗೆ ಇಲ್ಲಿರಲು ಅವಕಾಶ ಮಾಡಿಕೊಡಲು ಕೇಳಿಕೊಳ್ಳುವರು. ಪಾರ್ಸಿಗಳಿಗೆ ಅಂಬೇಡ್ಕರ್ರ ಬೇಡಿಕೆ ಆಲಿಸುವ ಸಂಯಮ ಅವರಲ್ಲಿರಲಿಲ್ಲ. ಸಂಜೆಯ ವೇಳೆಗೆ ವಸತಿಗೃಹ ಖಾಲಿ ಮಾಡಬೇಕು, ಯಾವುದಕ್ಕೂ ಇಲ್ಲಿಯೇ ಉಳಿದುಕೊಳ್ಳುವಂತಿಲ್ಲ ಹುಷಾರ್! ಎಂದು ಎಚ್ಚರಿಕೆ ನೀಡಿ ಅಲ್ಲಿಂದ ಅವರು ಕಾಲು ಕಿತ್ತುವರು. ಇನ್ನು ಎಲ್ಲಿ ಉಳಿದುಕೊಳ್ಳಬೇಕೆಂದು ಅಂಬೇಡ್ಕರರು ಚಿಂತೆಗೊಳಗಾಗುತ್ತಾರೆ. ಒಬ್ಬ ಹಿಂದೂ ಇನ್ನೊಬ್ಬ ಕ್ರಿಶ್ಚಿಯನ್ ಸ್ನೇಹಿತರಿದ್ದರು ಅವರಲ್ಲಿಗೆ ಹೋಗಿ ವಿಚಾರಿಸಿದಾಗ ಅಸ್ಪೃಶ್ಯನೆಂಬ ಕಾರಣಕ್ಕಾಗಿ ವಸತಿ ಕೊಡಲು ಇಚ್ಚಿಸದೆ ಇದ್ದುದ್ದರಿಂದ ಬೇರೆ ಸಬೂಬು ಹೇಳುವರು. ಆ ಸ್ನೇಹಿತರು ಇರಲು ಮನೆ ಕೊಡುವುದಿಲ್ಲವೆಂಬುವುದು ಅಂಬೇಡ್ಕರರಿಗೆ ಅರಿವಾಗುತ್ತದೆ. ಅಲ್ಲಿಂದ ಅವರು ಹೊರಬರುವರು ಆಗ ಸಂಜೆ ನಾಲ್ಕು ಗಂಟೆಯಾಗಿತ್ತು. ಮುಂಬಯಿಗೆ ರೈಲು ರಾತ್ರಿ 9 ಗಂಟೆಗೆ ಇತ್ತು. ಅಲ್ಲಿಯವರಗೆ ಕಾಲ ಕಳೆಯಲು ಕಾಂಟೋನಮೆಂಟ್ ಪ್ರದೇಶದಲ್ಲಿನ ಕಾಮಥಿ ಭಾಗ ಸಾರ್ವಜನಿಕ ಉಧ್ಯಾನದಲ್ಲಿ ಬಂದು ಕುಳಿತುಕೊಳ್ಳುವರು. ಸಂಸ್ಥಾದಲ್ಲಿ ಬಂಗಲೆ ಸಿಗುವುದು ಖಾತ್ರಿ ಇಲ್ಲ; ಇತ್ತ ಪಾರ್ಸಿ ವಸತಿ ಗೃಹದಲ್ಲಿ ಇರುವಂತಿಲ್ಲ. ಅಸ್ಪೃಶ್ಯ ಜಾತಿಯವನೆಂಬ ಕಾರಣಕ್ಕೆ ಬೇರೆ ಯಾರು ಮನೆ ಬಾಡಿಗೆ ನೀಡುತ್ತಿಲ್ಲ. ಸಂಸ್ಥಾನದಲ್ಲಿನ ಅಧಿಕಾರಿಹುದ್ದೆ ಬಿಟ್ಟು ಹೋಗಬೆಕಾದ ಸ್ಥಿತಿ ತಲುಪಿ ದುಃಖ ಉಮ್ಮಳಿಸಿ ಕಣ್ಣಲ್ಲಿ ನೀರು ಬರುವುದು. ಅಮೇರಿಕಾ ಮತ್ತು ಇಂಗ್ಲೇಂಡನಲ್ಲಿ ಕೆಲ ಗಣ್ಯರ ಪರಿಚಯವಿತ್ತು. ಉನ್ನತ ವ್ಯಾಸಂಗ ಪಡೆದಿದ್ದರಿಂದ ಅವರು ಇಚ್ಚಿಸಿದ್ದಲ್ಲಿ ಅಲ್ಲಿಯೇ ಉದ್ಯೋಗ ಸಿಗುವ ಅವಕಾಶವಿತ್ತು. ಆದರೆ ಬರೋಡಾ ಸಂಸ್ಥಾನದಲ್ಲಿ ಮಾತು ಕೊಟ್ಟಂತೆ ಶಿಷ್ಯ ವೇತನದ ಪ್ರತಿಯಾಗಿ ಕೆಲಸ ಮಾಡಲು ಬಂದರೆ, ಬರೋಡಾದಲ್ಲಿ ವಸತಿ ಗೃಹ ಸಿಗದೆ, ಪಾರ್ಸಿ ವಸತಿ ಗೃಹ ಖಾಲಿ ಮಾಡಿಸಿದ್ದರಿಂದ ದುಃಖಿತರಾಗಿ ಮುಂಬಯಿಗೆ ಮರಳಿ ಬಂದರು. ಅಸ್ಪೃಶ್ಯತೆಯಿಂದಾಗಿ ಅಧಿಕಾರಿ ಹುದ್ದೆಯ ಕೆಲಸವನ್ನು ಕಳೆದುಕೊಳ್ಳುವಂತಾಯಿತು.

                                                 (ಮುಂದುವರೆಯುವುದು)


                                               — ಸೋಮಲಿಂಗ  ಗೆಣ್ಣೂರ

One thought on “

  1. ಮಹಾನ್ ವ್ಯಕ್ತಿಯ ಜೀವನ ಸಂಘರ್ಷ ಚೆನ್ನಾಗಿ
    ಮುಂದಿಟ್ಟಿದ್ದಿರ,ಮುಂದಿನ ಕಂತಿನ ನಿರೀಕ್ಷೆ.
    ಮಾಲತಿಶ್ರೀನಿವಾಸನ್

Leave a Reply

Back To Top