ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—52
ಯಕ್ಷಗಾನದ ಸಿಹಿ-ಕಹಿ ನೆನಪುಗಳು
ಹವ್ಯಾಸಿ ಕಲಾವಿದನಾಗಿ ನಾನು ಯಕ್ಷಗಾನ ರಂಗದಲ್ಲಿ ತೊಡಗಿಕೊಂಡ ಬಳಿಕ ಕಾಲೇಜಿನ ಆಚೆಗೂ ನನ್ನ ಜೀವನಾನುಭವಗಳು ವಿಸ್ತಾರಗೊಂಡವು. ಪ್ರೇಕ್ಷಕರ ಅಭಿಮಾನ ಒಲವುಗಳು ಒಂದು ಕಡೆ ರೋಮಾಂಚನಗೊಳಿಸಿದರೆ ಸಂಘಟಕರ ಅಪೇಕ್ಷೆಯಂತೆ ನಡೆದುಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ ಅವರ ನಿಷ್ಠುರವನ್ನು, ವಿರೋಧವನ್ನು ಎದುರಿಸಬೇಕಾದ ಅನಿವಾರ್ಯ ಸನ್ನಿವೇಶಗಳೂ ಸೃಷ್ಟಿಯಾಗುತ್ತಿದ್ದವು. ಬೇರೆ ಬೇರೆ ಕೌಟುಂಬಿಕ ಪರಿಸರದಿಂದ ಬಂದ ಕಲಾವಿದರ ಆಲೋಚನೆ, ಸ್ವಭಾವಗಳಿಗೆ ಹೊಂದಿಕೊಳ್ಳುವುದು ಹಲವು ಬಾರಿ ಕಷ್ಟವೇ ಎನಿಸಿದರೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಎಲ್ಲವನ್ನೂ ಸಹ್ಯವಾಗಿಸಿಕೊಳ್ಳುವ ಅವಶ್ಯಕತೆಯಿರುತ್ತಿತ್ತು. ಜೊತೆಗೆ ನಾನೊಬ್ಬ ಕಾಲೇಜು ಉಪನ್ಯಾಸಕನಾದ್ದರಿಂದ ವೃತ್ತಿ ಗೌರವವನ್ನು ಕಾಪಾಡಿಕೊಳ್ಳಲೇಬೇಕಾದ ಗುರುತರವಾದ ಜವಬ್ದಾರಿಯೂ ನನ್ನ ಮೇಲಿತ್ತು. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಸಂಘಟಕರು ಸಂಘಟಿಸುವ ಕಾರ್ಯಕ್ರಮದಲ್ಲಿ ನಮಗೆ ಎಲ್ಲೆಡೆಯೂ ನಿರೀಕ್ಷಿತ ಮಟ್ಟದ ವ್ಯವಸ್ಥೆ ಇರುವ ಭರವಸೆಯೇನೂ ಇರುತ್ತಿರಲಿಲ್ಲ. ಎಲ್ಲೋ ಕುಳಿತು ಬಣ್ಣ ಬಳಿದುಕೊಳ್ಳುವ, ಎಂಥಹದೋ ನೆಲದಲ್ಲಿ ನಿದ್ದೆಗಾಗಿ ಒರಗಿಕೊಳ್ಳುವ, ಮೆಚ್ಚದ ಅಡಿಗೆಯನ್ನೂ ಹೇಗೋ ಉಂಡು ಹೊಟ್ಟೆತುಂಬಿಕೊಳ್ಳುವ ಸಂದರ್ಭಗಳು ಬಂದಾಗ ನನ್ನ ಉಪನ್ಯಾಸಕನೆಂಬ ಅಹಮಿಕೆಯನ್ನು ಬದಿಗಿಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆಗಳು ನನ್ನನ್ನು ಪರಿಪೂರ್ಣ ಮತ್ತು ಸಹನಶೀಲ ಮನುಷ್ಯನನ್ನಾಗಿ ರೂಪಿಸಲು ನೆರವಾದವು ಎಂದೇ ನನಗೆ ಅನಿಸುತ್ತದೆ. ಮತ್ತು ಅದೇ ಕಾರಣದಿಂದ ಎಲ್ಲರೊಡನೊಂದಾಗುವ ಸಂಯಮದ ಜೀವನ ಪಾಠ ನೀಡಿ ಯಕ್ಷಗಾನವೇ ನನ್ನನ್ನು ತಿದ್ದಿ ಪರಿಷ್ಕರಿಸಿದೆ ಎಂದು ನಂಬಿದ್ದೇನೆ. ಕಲೆಯೊಂದರ ಪ್ರಭಾವ ಮತ್ತು ಫಲಿತಾಂಶ ಅಂತಿಮವಾಗಿ ಇದೆ ಅಲ್ಲವೇ?
ಯಕ್ಷರಂಗಕ್ಕೆ ಸಂಬಂಧಿಸಿದಂತೆ
ಎರಡು ಮರೆಯಲಾಗದ ಸಿಹಿ-ಕಹಿ ಘಟನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು……..
೧೯೮೮-೯೦ ರ ಸಮಯ. ಅಂಕೋಲೆಯ ನಮ್ಮ ಹವ್ಯಾಸಿ ಯಕ್ಷಗಾನ ತಂಡವು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡಬೇಕಿತ್ತು. ಅಂದು ತುಂಬ ಹೆಸರು ಮಾಡಿದ, ಹಲವಾರು ವೃತ್ತಿಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಪಾತ್ರ ನಿರ್ವಹಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಪರಿಚಿತರಾದ ಅಗ್ಗರಗೋಣದ ಎಂ.ಎಂ. ನಾಯಕರು ನಮ್ಮ ತಂಡದ ನಾಯಕತ್ವ ಮತ್ತು ಪ್ರದರ್ಶನದ ಜವಾಬ್ದಾರಿ ವಹಿಸಿದ್ದರು. ಎಂ.ಎಂ.ನಾಯಕರು ವೃತ್ತಿಯಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲಾ ಶಿಕ್ಷಣ ತಪಾಸಣಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ಆದರೂ ಯಕ್ಷಗಾನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ಹವ್ಯಾಸಿ ಕಲಾವಿದರಾಗಿ ಮೇಲಿಂದ ಮೇಲೆ ಯಕ್ಷಗಾನ ಪ್ರದರ್ಶನ, ಸಂಘಟನೆ ಪಾತ್ರ ನಿರ್ವಹಣೆಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದರು. ಅವರ ದುಷ್ಟ ಬುದ್ಧಿ, ಕಂಸ, ಜರಾಸಂಧ ಮುಂತಾದ ಪಾತ್ರಗಳು ಬಹಳಷ್ಟು ಜನಮನ್ನಣೆ ಗಳಿಸಿದ್ದವು.
ಅಂದು ನಾವು ಹುಬ್ಬಳ್ಳಿಯಲ್ಲಿ ಪ್ರದರ್ಶನ ನೀಡಬೇಕಾದ ಪ್ರಸಂಗ “ಚಂದ್ರಹಾಸ ಚರಿತ್ರೆ”. ಅದರಲ್ಲಿ ಎಂ.ಎಂ. ನಾಯಕರ ದುಷ್ಟಬುದ್ಧಿ, ವಂದಿಗೆ ವಿಠೋಬ ನಾಯಕರ ಕುಳಿಂದ, ಗೋಕರ್ಣದ ಅನಂತ ಹಾವಗೋಡಿಯವರ ಮದನ, ನನ್ನದು ಚಂದ್ರಹಾಸ. ಮತ್ತಿತರ ಪಾತ್ರಗಳನ್ನು ತಂಡದ ವಿವಿಧ ಕಲಾವಿದರು ನಿರ್ವಹಿಸಬೇಕಿತ್ತು.
ಸಂಜೆಯ ಆರು ಗಂಟೆಗೆ ನಮ್ಮ ಪ್ರದರ್ಶನ ಆರಂಭವಾಗಬೇಕಿದ್ದುದರಿಂದ ನಾವು ಮಧ್ಯಾಹ್ನ ಹನ್ನೊಂದು ಗಂಟೆಗೆ ಅಂಕೋಲೆಯಿಂದ ಪ್ರಯಾಣ ಆರಂಭಿಸಿದೆವು.
ಒಂದು ಬಾಡಿಗೆ ಟೆಂಪೋ ಗೊತ್ತು ಮಾಡಿಕೊಂಡು ನಮ್ಮ ಯಕ್ಷಗಾನ ಪರಿಕರಗಳು ಇತ್ಯಾದಿ ಹೇರಿಕೊಂಡು ಹಿಮ್ಮೇಳ, ಮುಮ್ಮೇಳದ ಕಲಾವಿದರೆಲ್ಲ ಸೇರಿ ಟೆಂಪೋ ಭರ್ತಿಯಾಗಿತ್ತು. ಒಂದು ಒಂದುವರೆ ತಾಸಿನ ಪ್ರಯಾಣ ಮಾಡಿ ನಾವು ಅರಬೈಲ್ ಘಟ್ಟ ಹತ್ತಿಳಿದು ಯಲ್ಲಾಪುರ ನಗರ ಪ್ರವೇಶಕ್ಕೆ ಸನಿಹವಾಗಿದ್ದೆವು.
ಸ್ವಲ್ಪ ದೂರದಿಂದಲೇ ನಮಗೆ ದ್ವಿಚಕ್ರವಾಹನಗಳೂ ಸೇರಿದಂತೆ ಸಾಲುಗಟ್ಟಿ ನಿಂತ ಬೇರೆ ಬೇರೆ ವಾಹನಗಳು ಗೋಚರಿಸಿದವು. ವಿಚಾರಿಸಿದಾಗ, “ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ” ಎಂಬ ವರ್ತಮಾನ ತಿಳಿಯಿತು.
ನಮಗೆ ಸಮಯದ ಕಾಳಜಿ ತುಂಬ ಇದೆ. ನಾವು ಮುಂದಿನ ಎರಡು ಗಂಟೆಗಳ ಪ್ರಯಾಣ ಮಾಡಿ ಹುಬ್ಬಳ್ಳಿ ತಲುಪಬೇಕು. ಆ ಬಳಿಕ ವೇಷ ಇತ್ಯಾದಿ ಸಿದ್ಧಗೊಂಡು ಆರು ಗಂಟೆಗೆ ಪ್ರದರ್ಶನ ಆರಂಭವಾಗಬೇಕು!
ತಂಡದ ನಾಯಕರಾದ ಎಂ.ಎಂ.ನಾಯಕ ಮತ್ತಿತರ ಕಲಾವಿದರು ವಾಹನದಿಂದ ಇಳಿದು ಮುಂದೆ ಹೋಗಿ ಪೊಲೀಸು ಅಧಿಕಾರಿಗಳನ್ನು ಕಂಡು ನಮ್ಮ ಪರಿಸ್ಥಿತಿಯನ್ನು ನಿವೇದಿಸಿಕೊಂಡರು. ಆದರೂ ಸರತಿಯ ಸಾಲಿನಲ್ಲೇ ಬರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಆದೇಶಿಸಿ ಅವರನ್ನು ಹಿಂದೆ ಕಳುಹಿಸಿದರು. ಅವರ ಪರಿಶೀಲನೆಯ ನಿಧಾನ ಗತಿಯಿಂದ ತಂಡದ ಎಲ್ಲ ಕಲಾವಿದರಿಗೂ ಚಡಪಡಿಕೆ ಆರಂಭವಾಗಿತ್ತು. ತಾಸು ಕಳೆದ ಬಳಿಕ ನಮ್ಮ ವಾಹನದ ಬಳಿ ಬಂದ ಕಾನ್‌ಸ್ಟೇಬಲ್ ಓರ್ವ ನಮ್ಮ ವಾಹನವನ್ನು ಹತ್ತಿಳಿದು, ವಾಹನಕ್ಕೆ ಒಂದು ಸುತ್ತು ಬಂದು ಪರಿಶೀಲಿಸಿದಂತೆ ಮಾಡಿ ಮರಳಿ ಹೊರಟವನು ನಮ್ಮ ವಾಹನ “ಓವರ್ ಲೋಡ್” ಆಗಿದೆಯೆಂದೇ ದೂರು ಸಲ್ಲಿಸಿದನಂತೆ. ದಂಡ ಇತ್ಯಾದಿ ವಸೂಲಿ ಪ್ರಕ್ರಿಯೆಗಳು ಮುಗಿಯದೇ ನಮ್ಮನ್ನು ಸುಲಭವಾಗಿ ಬಿಡಲು ಸಾಧ್ಯವೇ ಇಲ್ಲವೆಂದು ಪೊಲೀಸು ಅಧಿಕಾರಿ ಇನ್ನಷ್ಟು ಉಪೇಕ್ಷೆ ಮಾಡಿ ಬೇರೆ ವಾಹನ ಪರೀಕ್ಷೆಯಲ್ಲಿ ತಲ್ಲೀನರಾದರು.
ಇನ್ನರ್ಧ ತಾಸು ವ್ಯರ್ಥ ಕಾಲ ಹರಣವಾಯಿತು. “ಇದು ಸುಲಭದಲ್ಲಿ ಬಗೆಹರಿಯುವ ಹಾಗೆ ಕಾಣುತ್ತಿಲ್ಲ” ಎಂದು ಕೊಳ್ಳುತ್ತ ಇದುವರೆಗೆ ವಾಹನದಿಂದ ಕೆಳಗಿಳಿಯದೇ ಕುಳಿತುಕೊಂಡಿದ್ದ ನಾನು ಮತ್ತು ಸಹ ಕಲಾವಿದರಿಬ್ಬರು ವಾಹನದಿಂದ ಇಳಿದು ರಸ್ತೆಗೆ ಬಂದೆವು.
ದೂರದಲ್ಲಿ ಪೊಲೀಸು ಅಧಿಕಾರಿ ತನ್ನ ಮೋಟಾರ್ ಬೈಕನ್ನು ಅಡ್ಡವಿಟ್ಟು ಅದರ ಮೇಲೆ ಕುಳಿತುಕೊಂಡು ಕಾನ್‌ಸ್ಟೇಬಲ್‌ಗಳಿಗೆ ಸೂಚನೆ ನೀಡುತ್ತಿರುವುದು ಕಾಣಿಸುತ್ತಿತ್ತು. ನಮ್ಮ ತಂಡದ ಪರವಾಗಿ ಅಹವಾಲು ಸಲ್ಲಿಸುತ್ತಿದ್ದ ಹಿರಿಯರೂ ಅಲ್ಲಿಯೇ ನಿಂತಿದ್ದರು. “ನೋಡುವಾ ಏನು ನಡಿತೀದೆ ಅಲ್ಲಿ” ಎಂಬ ಕುತೂಹಲದಿಂದ ನಾವೂ ನಾಲ್ಕು ಹೆಜ್ಜೆ ಮುಂದೆ ನಡೆದು ಅವರನ್ನು ಸಮೀಪಿಸಿದೆವು.
ಒಮ್ಮೆ ನಮ್ಮತ್ತ ನೋಡಿದ ಪೊಲೀಸು ಅಧಿಕಾರಿ ಕುತೂಹಲದಿಂದ ನಮ್ಮನ್ನು ಗಮನಿಸುತ್ತಲೇ ಚಂಗನೆ ತನ್ನ ಬೈಕ್ ಮೇಲಿಂದ ಕೆಳಗಿಳಿದು ನಿಂತವನು ನಮ್ಮತ್ತಲೇ ಧಾವಿಸಿ ಬರುತ್ತ ನೇರವಾಗಿ ನನ್ನ ಕೈಗಳನ್ನು ಹಿಡಿದುಕೊಂಡು “ಸರ್ ನೀವು?” ಎಂದು ಹಸನ್ಮುಖಿಯಾಗಿ ಉದ್ಘರಿಸಿದ! ನನ್ನನ್ನು ಸೇರಿ ನಮ್ಮ ಗುಂಪಿನ ಎಲ್ಲರಿಗೂ ಅತ್ಯಾಶ್ಚರ್ಯವಾಯಿತು. ಪೊಲೀಸು ಅಧಿಕಾರಿ ಯಾರೆಂದು ನನಗಿನ್ನೂ ಗುರುತೇ ಹತ್ತಿರಲಿಲ್ಲ! ಮೂಕ ವಿಸ್ಮಿತರಾಗಿದ್ದೆವಷ್ಟೇ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಆತನೇ ಮುಂದುವರಿದು “ಸರ್ ನಾನು ಸದಾನಂದ ನಾಯಕ…. ನಿಮ್ಮ ವಿದ್ಯಾರ್ಥಿ” ಎಂದು ಪರಿಚಯಿಸಿಕೊಂಡ ಕ್ಷಣದ ಸಂತೋಷವನ್ನು ಇಲ್ಲಿ ಶಬ್ಧಗಳಲ್ಲಿ ವರ್ಣಿಸಲು ಅಸಾಧ್ಯವೇ.
ಮುಂದಿನದನ್ನು ನಾನು ವಿವರಿಸಬೇಕಿಲ್ಲ. ನಮ್ಮ ತಂಡಕ್ಕೆ ಗೌರವಪೂರ್ಣ ವಿದಾಯ ಯಲ್ಲಾಪುರ ಪೊಲೀಸ್ ಇಲಾಖೆಯಿಂದ ದೊರೆಯಿತು. ನಮ್ಮ ಯಕ್ಷ ತಂಡದ ಸದಸ್ಯರೆಲ್ಲ ನನ್ನನ್ನು ಹೃತ್ಪೂರ್ವಕ ಅಭಿನಂದಿಸಿದರು. ಸಕಾಲದಲ್ಲಿ ನಾವು ಹುಬ್ಬಳ್ಳಿ ತಲುಪಿ ಸಮಯಕ್ಕೆ ಸರಿಯಾಗಿಯೇ ಪ್ರದರ್ಶನ ನೀಡಿ ಊರಿಗೆ ಮರಳಿದ್ದೆವು.
ನನಗೆ ಇಲ್ಲಿ ಬಹಳ ಮುಖ್ಯವಾಗಿ ಕಂಡದ್ದು ಸದಾನಂದ ನಾಯಕ ಎಂಬ ನನ್ನ ವಿದ್ಯಾರ್ಥಿಯ ಸೌಜನ್ಯಶೀಲತೆ. ನಾನು ಆತನಿಗೆ ಮಾಡಿದ ಪಾಠವೆಷ್ಟು? ಆತ ಬಿ.ಎಸ್.ಸಿ ಭಾಗ ಒಂದರ ಒಂದು ವರ್ಷ ಮಾತ್ರ. ಕನ್ನಡ ಓದಿದ ವಿದ್ಯಾರ್ಥಿ. ಅದರಲ್ಲೂ ವಾರದ ಮೂರು ತಾಸಿನ ಅವಧಿಯಲ್ಲಿ ನಾನು ಪಾಠ ಹೇಳಿದ್ದು ವಾರದ ಒಂದು ತಾಸು ಮಾತ್ರ. ಅಷ್ಟು ಅಲ್ಪಾವಧಿಯ ಪಾಠ ಕೇಳಿದ ಆತ ತನ್ನ ಹೃದಯದಲ್ಲಿ ಉಳಿಸಿಕೊಂಡಿದ್ದ ನನ್ನ ಕುರಿತಾದ ಗೌರವಾದರಗಳು ಬೆಲೆ ಕಟ್ಟಲಾಗದಷ್ಟು ಎಂಬುದು ನನಗೆ ಈ ಸನ್ನಿವೇಶದಲ್ಲಿ ಸ್ಪಷ್ಟವಾಯಿತು. ಶಿಕ್ಷಕ ವೃತ್ತಿಗೆ ಅಂತಿಮವಾಗಿ ಸಿಗುವ ಫಲವೆಂದರೆ ಎಲ್ಲೋ ಹೇಗೋ ಇರುವ ವಿದ್ಯಾರ್ಥಿಯೊಬ್ಬ ಅಭಿವ್ಯಕ್ತಿಸುವ ಗೌರವಾದರಗಳೇ ಅಲ್ಲವೇ?
ಮುಂದಿನ ದಿನಗಳಲ್ಲಿ ಕಾರವಾರದ ಕೊಂಕಣ ಮರಾಠಾ ಸಮುದಾಯದ ಇದೇ ಸದಾನಂದ ನಾಯಕ ಎಂಬ ಪೊಲೀಸು ಅಧಿಕಾರಿ ಅಂಕೋಲೆಯ ಗೋವಿಂದರಾಯ ನಾಯಕ ಮಾಸ್ತರರ ಹಿರಿಯ ಮಗಳು (ಡಾ. ಶ್ರೀದೇವಿ ತಿನೇಕರ ಅವರ ಹಿರಿಯ ಸಹೋದರಿ) ವೀಣಾ ಎಂಬುವವರ ಕೈ ಹಿಡಿದು ಸಮೃದ್ಧ ದಾಂಪತ್ಯ ಜೀವನ ನಡೆಸಿದರು. ಇಲಾಖೆಯಲ್ಲಿ ಎಸ್.ಪಿ ಹುದ್ದೆಯವರೆಗೆ ಪದೋನ್ನತಿ ಪಡೆದು ಈಗ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇದೇ ಕಾಲಾವಧಿಯಲ್ಲಿ ನಡೆದ ಒಂದು ನೋವಿನ ಕಥೆಯನ್ನೂ ಇಲ್ಲಿ ಪ್ರಸ್ತಾಪಿಸಬೇಕು.
ನನ್ನ ಪತ್ನಿ ನಿರ್ಮಲಾ ನನ್ನ ಎರಡನೆಯ ಮಗನಿಗೆ ಜನ್ಮ ನೀಡಿ (ಅಭಿಷೇಕ) ಬಾಣಂತಿಯ ಉಪಚಾರದ ಅವಧಿ ಮುಗಿಸಿಕೊಂಡು ತೌರಿಂದ ಅಂಕೋಲೆಗೆ ಮರಳಿದ್ದಳು. ಮಕ್ಕಳು ಬಾಣಂತಿ ಮನೆಗೆ ಬಂದರೆಂದು ಅಡಿಗೆ ಇತ್ಯಾದಿ ಸಹಾಯಕ್ಕಾಗಿ ನನ್ನ ತಾಯಿ ನಮ್ಮನೆಗೆ ಬಂದು ಉಳಿದುಕೊಂಡಿದ್ದಳು.
ಅದು ಯುಗಾದಿ ಹಬ್ಬದ ಮುನ್ನಾ ದಿನ. ಅಂಕೋಲೆಯ ಸಮೀಪದ ಹಾರವಾಡ ಎಂಬ ಹಳ್ಳಿಯಲ್ಲೊಂದು ಆಟ. ಹಾರವಾಡ ಗ್ರಾಮದಲ್ಲಿ ನನ್ನನ್ನು ತುಂಬಾ ಗೌರವಿಸುವ ಸಮಾಜದ ಹಿರಿಯರಾದ ಕಾನೂನು ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಥಾಕು ಹಾರವಾಡೇಕರ ಎಂಬುವರು. ಅವರ ಸಹೋದರ ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಜಿ.ಎಂ. ಹಾರವಾಡೇಕರ, ಮತ್ತವರ ಇಡಿಯ ಕುಟುಂಬ ನೆಲೆಸಿದೆ. ಅವರ ಒತ್ತಾಯದ ಮೇರೆಗೆ ಅಂದಿನ ಯಕ್ಷಗಾನ ಪ್ರಸಂಗದಲ್ಲಿ ನಾನೂ ಅತಿಥಿ ಕಲಾವಿದನಾಗಿ ಒಂದು ಪಾತ್ರವಹಿಸಲು ಒಪ್ಪಿಕೊಂಡೆ.
ಅಂದು ಥಾಕು ಹಾರವಾಡೇಕರ, ಜಿ.ಎಂ.ಹಾರವಾಡೇಕರ ಸಹಿತ ಊರಿನ ಹಲವು ಸಮಾಜ ಬಂಧುಗಳೇ ಪಾತ್ರ ನಿರ್ವಹಿಸಿದ್ದರು. ನನ್ನದು ಒಂದು ರಕ್ಕಸ ಪಾತ್ರ. ಮಧ್ಯರಾತ್ರಿಯ ಬಳಿಕವೇ ರಂಗ ಪ್ರವೇಶಿಸುವ ನನ್ನ ಪಾತ್ರ ಬೆಳಕು ಹರಿಯುವವರೆಗೆ ಮುಂದುವರಿಯಬೇಕಿತ್ತು. (ಅಪರೂಪದ ಕಥಾನಕವಾದ್ದರಿಂದ ಪ್ರಸಂಗ ಮತ್ತು ಪಾತ್ರದ ಹೆಸರು ಮರೆತಿದೆ ಕ್ಷಮಿಸಿ) ಸಾಧಾರಣವೆನ್ನಿಸುವ ಮಟ್ಟಿಗಷ್ಟೇ ನನ್ನ ಪಾತ್ರ ನಿರ್ವಹಣೆ ನನಗೆ ಸಾಧ್ಯವಾಗಿತ್ತು.
ಆಟ ಮುಗಿಸಿ ಹೊರಡುವುದಕ್ಕೆ ನನ್ನ ಸ್ವಂತ ವಾಹನವಿತ್ತು. ಈ ಮೊದಲಿನ ಎಜ್ಡಿ ಬೈಕ್‌ನ್ನು ಬದಲಾಯಿಸಿ ಕೆಲವೇ ತಿಂಗಳ ಹಿಂದೆ “ವೆಸ್ಪಾ ಎಲ್.ಎಂ.ಎಲ್” ಎಂಬ ಸ್ಕೂಟರ್‌ನ್ನು ಖರೀದಿಸಿದ್ದೆ.
ನನ್ನ ಜೊತೆಯಲ್ಲಿಯೇ ಆಟಕ್ಕೆ ಬಂದ ನನ್ನ ಆಪ್ತ ಗೆಳೆಯ ವಸಂತ ಲಕ್ಷ್ಮೇಶ್ವರ ಮತ್ತು ನಾನು ಅಂಕೋಲೆಯತ್ತ ಹೊರಟೆವು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ನಮ್ಮೂರಿನಿಂದ ಆಟ ನೋಡಲು ಬಂದಿದ್ದ ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಊರಿಗೆ ಮರಳಲು ಬಸ್ಸಿಗಾಗಿ ಕಾಯುತ್ತ ನಿಂತಿದ್ದ. ಅವನನ್ನು ಅಂಕೋಲೆಯವರೆಗೆ ಬಿಡುವ ಮನಸ್ಸಿನಿಂದ ಸ್ಕೂಟರ್ ಏರಿಸಿಕೊಂಡೆ.
ಮುಂದುವರೆದು ಅವರ್ಸಾ ಎಂಬ ಊರು ದಾಟಿ ಅಂದು ರಸ್ತೆಯ ಅಂಚಿಗೆ ಇರುವ ಗೌರಿ ಕೆರೆಯ ತಿರುವಿನಲ್ಲಿ ಆಕಸ್ಮಿಕವಾಗಿ ಲಾರಿಯೊಂದು ಎದುರಿಗೆ ಬಂದಿತು. ತಪ್ಪಿಸಿಕೊಳ್ಳಲು ಟಾರ್ ರಸ್ತೆಯಿಂದ ನನ್ನ ಸ್ಕೂಟರ್‌ನ್ನು ಕೆಳಗಿಳಿಸಿದೆ. ಕಚ್ಚಾರಸ್ತೆಯಲ್ಲಿ ಸಮತೋಲನ ತಪ್ಪಿದಂತಾದಾಗ ವಾಹನದ ಮೇಲಿದ್ದ ಇಬ್ಬರೂ ಜಿಗಿದು ಬಿಟ್ಟರು. ಸ್ಕೂಟರ್ ನಿಯಂತ್ರಣ ತಪ್ಪಿ ಟಾರ್ ರಸ್ತೆಯ ಮೇಲೆ ಬಿತ್ತಲ್ಲದೆ ನನ್ನನ್ನು ಕೊಂಚ ದೂರದವರೆಗೆ ಎಳೆದುಕೊಂಡು ಹೋಗಿತ್ತು.
ಅತ್ತಿತ್ತಲಿಂದ ಯಾರೋ ಬಂದು ನನ್ನನ್ನು ಹಿಡಿದೆತ್ತಿದರು. ಮಂಡಿಯ ಚಿಪ್ಪಿನಿಂದ ಕೊಂಚ ಕೆಳಗೆ ಚರ್ಮ ಹರಿದು ಹೋಗಿ ಒಂದು ಕಾಲಿನ ಎಲುಬು ಕಣ್ಣಿಗೆ ಕಾಣಿಸುತ್ತಿತ್ತು. ಅದೇ ಕಾಲಿನ ಪಾದದ ಮೇಲ್ಭಾಗದಲ್ಲಿಯೂ ಆಳವಾದ ಗಾಯವಾಗಿತ್ತು. ಟಾರು ರಸ್ತೆಗೆ ಬಿದ್ದ ಎಡಗೈ ಅರ್ಧಭಾಗದ ಚರ್ಮ ಸಂಪೂರ್ಣ ಸುಲಿದು ಕೆಂಪಾದ ಮಾಂಸಖಂಡಗಳು ಕಾಣಿಸುತ್ತಿದ್ದವು. ಮೈಮೇಲಿನ ಬಟ್ಟೆಗಳೆಲ್ಲ ಹರಿದು ಚಿಂದಿಯಾಗಿದ್ದವು.! ಹೊಸತೇ ಆಗಿದ್ದ ಸ್ಕೂಟರ್‌ನ ಮುಂಭಾಗ ನುಜ್ಜು ಗುಜ್ಜಾಗಿ ನಡೆಸಲೂ ಆಗದಂತೆ ವಿಕಾರಗೊಂಡಿತ್ತು. ಯಾರೋ ಪುಣ್ಯಾತ್ಮರು ತಮ್ಮ ವಾಹನದಲ್ಲಿ ಅಂಕೋಲೆಯ ಮಿಷನರಿ ಆಸ್ಪತ್ರೆಗೆ ನನ್ನನ್ನು ತಲುಪಿಸಿ ಉಪಕಾರ ಮಾಡಿದರು.
ಡಾ. ಅಬ್ರಾಹ್ಮಂ ಬಂದು ಪರೀಕ್ಷೆ ಮಾಡಿದ ಬಳಿಕ ಕೈ ಕಾಲುಗಳ ಎಲುಬು ಮುರಿದಿಲ್ಲವಾದರೂ ಆಗಿರುವ ಆಳವಾದ ಗಾಯಗಳ ಉಪಚಾರಕ್ಕೆ ದವಾಖಾನೆಗೆ ದಾಖಲಾಗುವಂತೆ ಸಲಹೆ ನೀಡಿದರು. ಆಗಲೂ ನಾನು ನಡೆದಾಡ ಬಲ್ಲೆನಾದ್ದರಿಂದ ಆಸ್ಪತ್ರೆಗೆ ದಾಖಲಾಗಲು ಒಪ್ಪದೆ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರ ಒಪ್ಪಿಗೆ ಪಡೆದೆ. ಗಾಯಕ್ಕೆ ಹೊಲಿಗೆ ಹಾಕಿಸಿಕೊಂಡು ಕೈ ತುಂಬ ಬ್ಯಾಂಡೇಜ್ ಸುತ್ತಿಕೊಂಡು ಔಷಧೋಪಚಾರ ಪಡೆದು ಮನೆಗೆ ಹೊರಟೆನಾದರೂ ಮೈಮೇಲಿನ ಬಟ್ಟೆಗಳೆಲ್ಲ ಹರಿದು ಹೋಗಿದ್ದವು.
ಆಕಸ್ಮಿಕದ ಸುದ್ದಿ ತಿಳಿದು ಆಸ್ಪತ್ರೆಗೆ ಬಂದ ಗೆಳೆಯ ಪುತ್ತು ಶೇಡಗೇರಿ ತನ್ನ ಅಂಗಿ-ಲುಂಗಿಗಳನ್ನು ತಂದು ನನಗೆ ತೊಡಿಸಿದ.
ಆಟೋ ಹಿಡಿದು ಮನೆಗೆ ಬಂದೆ. ಅವ್ವನೂ ಮನೆಯಲ್ಲಿಯೇ ಇದ್ದುದರಿಂದ ಅಂದಿನ ಯುಗಾದಿ ಅವಿಸ್ಮರಣೀಯ ಸಂಕಟದ ದಿನವಾಗಿಯೇ ಕಳೆದು ಹೋಯಿತು.
ಮುಂದಿನ ಮೂರು ತಿಂಗಳು ಅನಿವಾರ್ಯ ವಿಶ್ರಾಂತಿಯನ್ನು ಪಡೆಯಲೇ ಬೇಕಾಯಿತು. ಅಂದು ಕಮಲಾ ಮೆಡಿಕಲ್ ಸೆಂಟರಿನಲ್ಲಿ ಸಿಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಹೋದರಿ ಲಕ್ಷ್ಮೀ ನಾಯ್ಕ ಎಂಬುವವರು ನಿತ್ಯವೂ ಮನೆಗೆ ಬಂದು ಗಾಯಗಳಿಗೆ ಔಷಧ ಹಚ್ಚಿ ಬ್ಯಾಂಡೇಜ್ ಮಾಡಿ ಇಂಜೆಕ್ಷನ್, ಔಷಧಿ ನೀಡಿ ಎರಡು ತಿಂಗಳು ಉಪಚರಿಸಿದ ಬಳಿಕ ನಾನು ಚೇತರಿಸಿಕೊಂಡೆ. ಸಹೋದರಿಯ ಕಾಳಜಿಪೂರ್ವಕ ಸೇವೆಯನ್ನು ನೆನೆದರೆ ಈಗಲೂ ಹೃದಯ ತುಂಬಿ ಬರುತ್ತದೆ.
ಬೋಳೆಯ ಸುರೇಶ ನಾಯಕ ಎಂಬ ಮೆಕ್ಯಾನಿಕ್ ಒಬ್ಬರು ನನ್ನ ಮೇಲಿನ ಪ್ರೀತಿಯಿಂದ ಅಪಘಾತ ಸ್ಥಳದಿಂದ ನನ್ನ ಸ್ಕೂಟರ್‌ನ್ನು ಎತ್ತಿಕೊಂಡು ಒಯ್ದು ಮುಂದಿನ ಹದಿನೈದು ದಿನಗಳಲ್ಲಿ ಮೊದಲಿನಂತೆ ಅಣಿಗೊಳಿಸಿ ತಂದು ಮನೆಯ ಮುಂದೆ ನಿಲ್ಲಿಸಿದರು. ಅವರ ಕಾಳಜಿಪೂರ್ವಕವಾದ ಸ್ನೇಹದ ನೆನಪು ಕೂಡ ನನ್ನ ಹೃದಯದಲ್ಲಿನ್ನೂ ಹಸಿ ಹಸಿಯಾಗಿ ಉಳಿದಿದೆ.
ರಾಮಕೃಷ್ಣ ಗುಂದಿ
ಯಕ್ಷಗಾನದ ಪಾಠ ಕಾಲೇಜಿನಲ್ಲಿ ಪಾಠ ಮಾಡುವುದಕ್ಕೆ ಸಹಾಯವಾಗಿರಬೇಕು..
ಖಂಡಿತ…..
ಭಾಷೆಯ ಮೇಲೆ ನಿರ್ವಹಿಸುವುದು ಸಾಧ್ಯವಾಯಿತು
ಸದಾನಂದ ನಾಯಕರ ಪ್ರಸಂಗ ಓದುತ್ತಿದ್ದಂತೆ ಮೈ ಜುಂ ಅಂತು.
ತುಂಬಾ ಸಜ್ಜನರು….ಈಗಲೂ ಹಾಗೆಯೇ
ಹುಬ್ಬಳ್ಳಿ ಯಕ್ಷಗಾನಕ್ಕೆ ಕೈಕೊಡಿತ್ತಿರೋ ಎನ್ನುವ ಸಂಕಟ ಕಾಡಿತ್ತು. ಸುಖಾಂತ್ಯವಾದದ್ದು ಕಂಡು ಕುಶಿ ಆಯಿತು.ತಮ್ಮ ಆತ್ಮಕಥನಗಳು ಆಸಕ್ತಿಯಿಂದ ಓದಲು ಕುಶಿ ನೀಡುತ್ತವೆ.ಅಭಿನಂದನೆಗಳು ಸರ್
ಸದಾನಂದ ನಾಯಕರಂಥ ಶಿಷ್ಯರು, ತಮ್ಮಂಥ ಗುರುಗಳು ಬೆಳೆಸಿದ ಚಿಗುರುಗಳು ಸರ್. ಹುಬ್ಬಳ್ಳಿಯ ಯಕ್ಷಗಾನ ಘಟನೆ ಸುಖಾಂತ್ಯವಾಯಿತು .ಸಂತೋಷ.
ದುಃಖದ ಘಟನೆ ಸ್ಕೂಟರ್ ಅಫಘಾತ ನೋವುತಂದಿತು. ಜೊತೆಗೆ ಸಹನೆ, ಸೌಜನ್ಯ, ಸಹಾಯ ನೀಡಿದವರ ಬಗ್ಗೆ ಹೆಮ್ಮೆಎನಿಸಿತು.
ಧನ್ಯವಾದಗಳು